ಜೆಆರ್‌ಎಲ್ ನೂರರ ನೆನಪು: ವಿಜ್ಞಾನ ಸಾಹಿತ್ಯದ ಮಾರ್ಗ ಪ್ರವರ್ತಕ ಪ್ರೊ. ಜೆ.ಆರ್. ಲಕ್ಷ್ಮಣರಾವ್
ಪ್ರೊ. ಜೆ.ಆರ್. ಲಕ್ಷ್ಮಣರಾವ್ejnana.com

ಜೆಆರ್‌ಎಲ್ ನೂರರ ನೆನಪು: ವಿಜ್ಞಾನ ಸಾಹಿತ್ಯದ ಮಾರ್ಗ ಪ್ರವರ್ತಕ ಪ್ರೊ. ಜೆ.ಆರ್. ಲಕ್ಷ್ಮಣರಾವ್

ಬೆಳ್ಳಾವೆ ವೆಂಕಟನಾರಾಣಪ್ಪ, ಶಿವರಾಮ ಕಾರಂತ, ಆರ್.ಎಲ್. ನರಸಿಂಹಯ್ಯ ಇವರು ನಡೆಸಿದ ಮಾರ್ಗವನ್ನು ಸುಗಮಗೊಳಿಸಿದವರಲ್ಲಿ ಜೆ.ಆರ್.ಲಕ್ಷ್ಮಣರಾವ್, ಜಿ.ಟಿ. ನಾರಾಯಣರಾವ್ ಮತ್ತು ಅಡ್ಯನಡ್ಕ ಕೃಷ್ಣ ಭಟ್ ಇವರ ಪಾತ್ರ ದೊಡ್ಡದು.

ಇದು 1937ರ ಸಂಗತಿ. ಕುವೆಂಪು ಅವರು ತಾರುಣ್ಯದಲ್ಲಿದ್ದ ಘಟ್ಟ; 32ರ ಹರೆಯ. ಮೈಸೂರಿನಲ್ಲಿ ಇಂಟರ್ ಮೀಡಿಯೇಟ್ ಕಾಲೇಜಿನಲ್ಲಿ ಅವರು ರಾಘವಾಂಕನ ‘ಹರಿಶ್ಚಂದ್ರ ಕಾವ್ಯ’ವನ್ನು ಬೋಧಿಸುವ ಮೊದಲು ವಿಜ್ಞಾನ ವಿದ್ಯಾರ್ಥಿಗಳನ್ನು ಕುರಿತು ‘ನಿಮ್ಮಲ್ಲಿ ಬಹುಪಾಲು ಜನ ಗ್ರಿಗೊರಿ ಮತ್ತು ಹಾಡ್ಜಸ್ ಪುಸ್ತಕದಲ್ಲಿ ಏನಿದೆಯೋ ಅದೇ ವಿಜ್ಞಾನ ಎಂದು ತಿಳಿದಿರುವಿರಿ.

ಅದು ಸರಿಯಲ್ಲ, ಪಠ್ಯಕ್ರಮದಲ್ಲಿ ಎರಡೋ, ಮೂರೋ ವಿಜ್ಞಾನ ಶಾಖೆಗಳನ್ನು ನಿಮ್ಮ ವ್ಯಾಸಂಗಕ್ಕೆ ನಿಗದಿ ಮಾಡಬಹುದು ಅಷ್ಟೇ. ಇನ್ನೂ ಉನ್ನತ ವ್ಯಾಸಂಗ ಕೈಗೊಂಡಾಗ ನಿಮ್ಮ ವ್ಯಾಸಂಗ ಯಾವುದಾದರೂ ಒಂದು ವಿಜ್ಞಾನ ಶಾಖೆಗೆ ಸೀಮಿತವಾಗುತ್ತದೆ. ಆದರೆ ನಿಮ್ಮ ವ್ಯಾಸಂಗವನ್ನು ಆ ಒಂದು ಶಾಖೆಗೆ ಸೀಮಿತಗೊಳಿಸಿ ನೀವು ಕೂಪಕೂರ್ಮ ಗಳಾಗಬಾರದು.

ಇತರ ಶಾಖೆಗಳ ಪರಿಚಯವನ್ನು ಸ್ಥೂಲವಾಗಿಯಾದರೂ ಮಾಡಿಕೊಳ್ಳಬೇಕು. ವಿಜ್ಞಾನದ ವ್ಯಾಪ್ತಿಯನ್ನರಿತು, ವಿಜ್ಞಾನ ಮಾರ್ಗದ ಪರಿಚಯ ಮಾಡಿಕೊಂಡು ವೈಜ್ಞಾನಿಕ ದೃಷ್ಟಿಯನ್ನು ಮೈಗೂಡಿಸಿಕೊಳ್ಳುವುದು ಬಹುಮುಖ್ಯ. ತಜ್ಞರಲ್ಲದ ಸಾಮಾನ್ಯ ಓದುಗರಿಗಾಗಿಯೇ ರಚಿಸಿದ ಪುಸ್ತಕಗಳಿರುತ್ತವೆ.

ಅಂಥ ಪುಸ್ತಕಗಳನ್ನೋದುವುದರಿಂದ ಇತರ ವಿಜ್ಞಾನ ಶಾಖೆಗಳ ಪರಿಚಯ ಮಾಡಿಕೊಳ್ಳಬಹುದು’ ಎಂದು ಹೇಳಿ ಪ್ರಖ್ಯಾತ ಖಗೋಳ ವಿಜ್ಞಾನಿ ಸರ್ ಜೇಮ್ಸ್ ಜೀನ್ಸ್ ಬರೆದಿರುವ ‘ಮೀಸ್ಟೀರಿಯಸ್ ಯೂನಿವರ್ಸ್’ ಎಂಬ ಪುಸ್ತಕವನ್ನು ತೋರಿಸಿದರು. ‘ಇದು ತುಂಬಾ ಸ್ವಾರಸ್ಯಕರವಾಗಿದೆ. ನಮ್ಮಂಥಹವರು ಸಹ ಇದನ್ನು ಓದಿ ಅರ್ಥಮಾಡಿಕೊಳ್ಳಬಹುದು’ ಎಂದು ಒಳ್ಳೆಯ ಪೀಠಿಕೆಯನ್ನೇ ಹಾಕಿದರು.

ಕುವೆಂಪು ಮಾತುಗಳು ಯಾರ ಮೇಲೆ ಹೇಗೆ ಪ್ರಭಾವ ಬೀರಿದವೋ, ವಿದ್ಯಾರ್ಥಿ ಜೆ.ಆರ್. ಲಕ್ಷ್ಮಣರಾವ್ ಅವರಂತೂ ಆ ಮಾತುಗಳ ಮೋಡಿಗಂತೂ ಸಿಲುಕಿದರು.

ಹುಡುಗ ಸಂಜೆಯೇ ದೌಡಾಯಿಸಿ ಪುಸ್ತಕಕ್ಕಾಗಿ ತಡಕಾಡಿ ಪುಟ್ಟಪ್ಪನವರು ಹೇಳಿದ ಪುಸ್ತಕದ ಜೊತೆಗೆ ಸರ್ ಆರ್ಥರ್ ಎಡಿಂಗ್‌ಟನ್ ಬರೆದ ‘ಎಕ್ಸ್‌ಪ್ಯಾಂಡಿಂಗ್ ಯೂನಿವರ್ಸ್’, ಜೆ.ಡಬ್ಲ್ಯೂ.ಎನ್. ಸಲೀವಾನ್ ಬರೆದ ‘ಬೇಸಿಸ್ ಆಫ್ ಮಾಡ್ರನ್ ಸೈನ್ಸ್’, ಜೂಲಿಯನ್ ಹಕ್‌ಸ್ಲಿ ಬರೆದ ‘ಎಸ್ಸೇಸ್ ಇನ್ ಪಾಪ್ಯುಲರ್ ಸೈನ್ಸ್’ ಇವೆಲ್ಲವನ್ನೂ ಎರಡು ರೂಪಾಯಿಗೆ ಕೊಂಡರು.

ಲಕ್ಷ್ಮಣರಾವ್ ಈಗ ನೆನಪಿಸಿಕೊಳ್ಳುತ್ತಾರೆ ಮುಂದಿನ ಏಳೆಂಟು ವಾರಗಳಲ್ಲಿ ಎಲ್ಲ ಪುಸ್ತಕವನ್ನೂ ಓದಿ ಮುಗಿಸಿದೆ. ನನ್ನ ಪಾಲಿಗೆ ಒಂದು ಹೊಸ ಪ್ರಪಂಚದ ಬಾಗಿಲು ತೆಗೆದಂತಾಯಿತು ಎಂದು. ಇದರ ಜೊತೆಗೆ ಇನ್ನೊಂದು ಮಾತನ್ನೂ ಅವರು ಸೇರಿಸುತ್ತಾರೆ: ‘ವೈಜ್ಞಾನಿಕ ದೃಷ್ಟಿಯ ಹಿರಿಮೆಯ ಬಗ್ಗೆ ನನ್ನಲ್ಲಿ ಅರಿವು ಮೂಡಿಸಿದವರು ವಿಜ್ಞಾನದ ಅಧ್ಯಾಪಕರಲ್ಲ, ಕನ್ನಡದ ಮೇಷ್ಟರಾದ ಪುಟ್ಟಪ್ಪನವರು’.

ಲಕ್ಷ್ಮಣರಾವ್ ಅವರ ಬದುಕೆಲ್ಲವೂ ರಸಾಯನ ವಿಜ್ಞಾನದ ಬೋಧನೆ, ಬದುಕಿನ ರಸಗ್ರಹಣ, ಜನಪ್ರಿಯ ವಿಜ್ಞಾನ ಸಾಹಿತ್ಯ ರಚನೆ, ವಿಜ್ಞಾನ ಪತ್ರಿಕೆಗಳ ಸಂಪಾದನೆ, ನಿಘಂಟು ರಚನೆ, ಗೋಷ್ಠಿಗಳ ನಿರ್ವಹಣೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನಂತಹ ಸಂಸ್ಥೆಯ ಸ್ಥಾಪನೆ, ಜೊತೆಜೊತೆಗೆ ಮಾರ್ಕ್ಸ್‌ವಾದದಲ್ಲಿನ ಅಚಲ ನಂಬಿಕೆಯ ಪೋಷಣೆ– ಇವು ಒಂದೊಂದೂ ಅವರು ರೂಪಿಸಿಕೊಂಡ ಬದುಕಿನ ರಾಜಮಾರ್ಗಗಳು. ಜನಸಾಮಾನ್ಯರಿಗೆ ಎಂಥ ವಿಜ್ಞಾನ ಬೇಕು? ಎಂಬ ಮೂಲಭೂತ ಸವಾಲನ್ನೇ ಹಾಕಿಕೊಂಡು ಅವರೇ ಅದಕ್ಕೆ ಹಿನ್ನೆಲೆಯಾಗಿ ಸೊಗಸಾದ ಮಾತುಗಳನ್ನು ಆಡಿದ್ದಾರೆ:

‘‘ವಿಜ್ಞಾನದ ವಿಶೇಷ ಅಧ್ಯಯನ ಮಾಡಿದ ಬಹುಮಂದಿ ತಜ್ಞರಲ್ಲಿ ಒಂದು ಬಗೆಯ ಮಡಿವಂತಿಕೆ ಮನೆಮಾಡಿಕೊಂಡಿದೆ. ತಮ್ಮ ದಂತಗೋಪುರದಿಂದ ಹೊರಬಂದು ಜನಸಾಮಾನ್ಯರ ಮಟ್ಟಕ್ಕಿಳಿದು ವಿಜ್ಞಾನವನ್ನು ಕುರಿತು ಬರೆಯುವುದು, ಮಾತನಾಡುವುದು ಅವರಿಗೆ ಮೈಲಿಗೆ. ‘ಕಲೆಗಾಗಿ ಕಲೆ’, ‘ವಿಜ್ಞಾನಕ್ಕಾಗಿ ವಿಜ್ಞಾನ’ ಎಂಬ ಶುಷ್ಕ ಸಿದ್ಧಾಂತ ಅವರದು’’.

ಬುದ್ಧಿಯ ಬಡಿಗೆಯಿಂದ ಹೀಗೆ ಎಚ್ಚರಿಸುತ್ತ ಲಕ್ಷ್ಮಣರಾವ್ ಇನ್ನೊಂದು ಸತ್ಯವನ್ನು ಮನಗಾಣಿಸುತ್ತಾರೆ. ‘‘ತಮ್ಮ ಸಹಜವಾಗಿದ್ದ ವಿಶಾಲ ದೃಷ್ಟಿಯಿಂದ ಜನಸಾಮಾನ್ಯರನ್ನುದ್ದೇಶಿಸಿ ಬರೆಯಲು ಮುಂದೆ ಬಂದ ಐನ್‌ಸ್ಟೈನ್, ಮ್ಯಾಕ್ಸ್‌ಬಾರ್ನ್, ಹಕ್ಸ್ಲಿ, ಹಾಲ್ಡೇನ್, ಗೇಮೋ, ಮುಂತಾದವರ ನಿದರ್ಶನಗಳಿಂದಲೂ ಆ ಜನ ವಿಚಲಿತರಾಗಿಲ್ಲ’’

ಕನ್ನಡ ಸಾಹಿತ್ಯ ಪರಿಷತ್ತಿನ 'ವಿಜ್ಞಾನ-ತಂತ್ರಜ್ಞಾನ' ಸಂಪುಟ ಕುರಿತು ಪ್ರೊ. ಜೆಆರ್‌ಎಲ್ ಪತ್ರ
ಕನ್ನಡ ಸಾಹಿತ್ಯ ಪರಿಷತ್ತಿನ 'ವಿಜ್ಞಾನ-ತಂತ್ರಜ್ಞಾನ' ಸಂಪುಟ ಕುರಿತು ಪ್ರೊ. ಜೆಆರ್‌ಎಲ್ ಪತ್ರಡಾ. ಟಿ. ಆರ್. ಅನಂತರಾಮು

ಮಡಿವಂತಿಕೆ ಬಿಡಿ

ವಿಜ್ಞಾನದ ಚಿಂತನೆಗೆ ದೀಕ್ಷೆ ಕೊಟ್ಟ ಕುವೆಂಪು ಅವರು ‘ಗುಡಿ, ಚರ್ಚು, ಮಸೀದಿಗಳ ಬಿಟ್ಟು ಹೊರಬನ್ನಿ’ ಎಂದು ಕರೆಕೊಟ್ಟಂತೆ ಲಕ್ಷ್ಮಣರಾಯರು ‘ವಿಜ್ಞಾನದ ಮಡಿವಂತಿಕೆ ತೊರೆದು ಹೊರಬನ್ನಿ’ ಎಂದು ಸಂಶೋಧಕರನ್ನು ಕುರಿತು ಸಾತ್ವಿಕ ಕೋಪದ ಚಾಟಿ ಬೀಸಿದ್ದಾರೆ. ಜನರತ್ತ ವಿಜ್ಞಾನವನ್ನು ಕೊಂಡುಹೋಗಿ ಎಂದು ಸತತ ಹೇಳುತ್ತಲೇ ಬಂದಿದ್ದಾರೆ.

ಹಾಗೆ ಹೇಳುತ್ತ ಫಲಿತಾಂಶಕ್ಕಾಗಿ ಕಾದು ಕೂತವರಲ್ಲ. ‘ದೋಸೆಯಲ್ಲಿ ವಿಜ್ಞಾನವಿದೆ’ ಎಂದು ಕಿಣ್ವದ ಕ್ರಿಯೆ ಕುರಿತು ವಿವರಿಸಿದ್ದಾರೆ, ಗ್ರಹಗಳೇಕೆ ಹಿಮ್ಮುಖವಾಗಿ ಚಲಿಸುತ್ತವೆ ಎನ್ನುವುದನ್ನು ಶಾಲಾ ವಿದ್ಯಾರ್ಥಿಯೂ ಗ್ರಹಿಸುವಂತೆ ಸ್ಪಷ್ಟವಾಗಿ ಬರೆದಿದ್ದಾರೆ. ಅವರ ಲೇಖನಿಯಿಂದ ಕಳೆದ ಐವತ್ತು ವರ್ಷಗಳಲ್ಲಿ ಆದ ಅಕ್ಷರಸ್ಪರ್ಶ ಈ ಧಾಟಿಯದು. ಜನಪ್ರಿಯ ವಿಜ್ಞಾನ ಹೇಗಿರಬೇಕು ಎಂಬುದಕ್ಕೆ ಈ ಒಂದೊಂದೂ ಲೇಖನವೂ ಮಾದರಿಯಾಗಬಲ್ಲವು.

ಲಕ್ಷ್ಮಣರಾವ್ ಅವರಿಗೆ ಈಗ 94ರ ಹರೆಯ. ಅವರು ಈಗಲೂ ಅವಿಶ್ರಾಂತರು. ಆರ್ನಾನ್ಡ್ ಕೆಟಲ್ ಬರೆದ ‘ಕಾರ್ಲ್ ಮಾರ್ಕ್ಸ್’ ಕೃತಿಯನ್ನು ತಮ್ಮ 93ರ ಹರೆಯದಲ್ಲಿ ಕನ್ನಡಕ್ಕೆ ಅನುವಾದಿಸಿ ‘ಮುದ್ರಣ ಮುಗಿಯಿತೆ? ಈಗಾಗಲೇ ತಿಂಗಳಾಯಿತಲ್ಲ ಸ್ಕ್ರಿಪ್ಟ್ ಕಳಿಸಿ’ ಎಂದು ಪ್ರಕಾಶಕರನ್ನು ಪ್ರೀತಿಯಿಂದಲೇ ಎಚ್ಚರಿಸುತ್ತ ಕನ್ನಡಿಗರ ಕೈಗೆ ಮಾರ್ಕ್ಸ್ ಕುರಿತು ಅನನ್ಯ ಕೃತಿಯನ್ನು ಕೊಟ್ಟಿದ್ದಾರೆ. ಒಂದು ದಿನವೂ ಸಮಾನಧರ್ಮಿಗಳನ್ನು ಕಾಮ್ರೇಡ್ ಎಂದು ಕರೆಯದ ಈ ಮಾರ್ಕ್ಸ್‌ವಾದಿಗೆ ಆ ಗೀಳು ಹುಟ್ಟಿದ್ದು ಸೆಂಟ್ರಲ್ ಕಾಲೇಜಿನಲ್ಲಿ ಆನರ್ಸ್ ಅಧ್ಯಯನ ಮಾಡುವಾಗಲೇ.

ಹಿನ್ನೆಲೆಯ ಒಂದು ಎಳೆ

ಜೆ.ಆರ್.ಎಲ್. ಹುಟ್ಟಿದ್ದು ಆಗಿನ ಚಿತ್ರದುರ್ಗ ಜಿಲ್ಲೆಯ ಜಗಳೂರಿನಲ್ಲಿ (1921), ಶಾನುಭೋಗರ ಮನೆತನದಲ್ಲಿ. ಮಾಧ್ಯಮಿಕ ಶಾಲೆಯವರೆಗೂ ಶಿಕ್ಷಣ ಅಲ್ಲಿಯೇ. ಹೆಸರು ಜಗಳೂರಾದರೂ ಸಹಪಾಠಿಗಳೊಂದಿಗೆ ಎಂದೂ ಜಗಳವಾಡಿದವರಲ್ಲ. ಆದರೆ ಹೈಸ್ಕೂಲಿಗೆ ಚಿತ್ರದುರ್ಗಕ್ಕೆ ಬಂದಾಗ ಪೋಲಿ ಬಿದ್ದದ್ದೂ ಉಂಟು.

ಪರೀಕ್ಷೆಯಲ್ಲಿ ಡುಮ್ಕಿ ಹೊಡೆದದ್ದೂ ಉಂಟು. ಅವರ ‘ನೆನಪಿನ ಅಲೆಗಳು’ ಆತ್ಮಚರಿತ್ರೆಯಲ್ಲಿ ಇವೆಲ್ಲವನ್ನೂ ಮುಚ್ಚುಮರೆಯಿಲ್ಲದೆ ಬಿಚ್ಚಿದ್ದಾರೆ. ಮೈಸೂರಿನ ಇಂಟರ್ ಮೀಡಿಯೇಟ್ ಕಾಲೇಜು ದಾಟಿ ಬರುವ ಹೊತ್ತಿಗೆ ಒಂದು ಬಗೆಯ ಪ್ರೌಢಸ್ಥಿತಿ ತಲುಪಿದ್ದರು. ಸೆಂಟ್ರಲ್ ಕಾಲೇಜಿನಲ್ಲಿ ಆನರ್ಸ್ ಮಾಡಿದಾಗ ರಸಾಯನ ವಿಜ್ಞಾನದ ಜೊತೆಗೆ ಸೆಂಟ್ರಲ್ ಕಾಲೇಜಿಗೆ ಆಗಲೇ ಅಂಟುಕೊಂಡಿದ್ದ ಜಾತಿಭೂತದ ದರ್ಶನವೂ ಇವರಿಗಾಯಿತು.

ಆದರೆ ಇವೆಲ್ಲವನ್ನೂ ಮರೆಸುವ ಹಾಗೆ ಇವರಿಗೆ ದೊರೆತದ್ದು ವಿ.ಸೀ. ಅವರಂತಹ ಬೋಧಕರು. 1943ರಲ್ಲಿ ಎಂ.ಎಸ್ಸಿ. ಪರೀಕ್ಷೆ ಬರೆದಾಗಲೇ ತುಮಕೂರಿನ ಸರ್ಕಾರಿ ಕಾಲೇಜಿನಲ್ಲಿ ರಸಾಯನ ವಿಜ್ಞಾನದ ಅಧ್ಯಾಪಕರಾಗಿ ಕರೆಬಂತು. ಅಲ್ಲಿ ಅನರ್ಘ್ಯರತ್ನ ರಾಜರತ್ನಂ ಇವರಿಗೆ ದೊರೆತರು. ‘ನಾನು ರಾಜರತ್ನಂ ಗರಡಿಯಲ್ಲಿ ತಾಲೀಮು ಮಾಡಿದವನು’ ಎಂದು ಹೇಳುವಾಗ ಈಗಲೂ ಅವರ ಕಣ್ಣು ಅರಳುತ್ತವೆ. ಅಲ್ಲಿ ರಾಜರತ್ನಂ ಪ್ರಚಾರೋಪನ್ಯಾಸಗಳನ್ನು ಏರ್ಪಡಿಸಿದರು.

ಇವರ ಉಪನ್ಯಾಸನ ಕೃತಿರೂಪದಲ್ಲಿ (‘ಆಹಾರ’) ಹೊರಬರಲು ಕಾರಣರಾದರು. ಇದರಿಂದ ಪ್ರಚೋದನೆ ಪಡೆದು ‘ಪರಮಾಣು ಚರಿತೆ’ ಎಂಬ ಕೃತಿಯ ಕರಡನ್ನು ತಿದ್ದಿಕೊಡಿ ಎಂದಾಗ ರಾಜರತ್ನಂ ‘ಬೇಡ, ಒಟ್ಟಿಗೇ ಓದೋಣ. ಆಗ ನಿಮ್ಮ ಬರವಣಿಗೆಯಲ್ಲಿ ಆಗಿರುವ ದೋಷಗಳು ನಿಮ್ಮ ಗಮನ ಸೆಳೆಯುತ್ತವೆ’ ಎಂದು ಸ್ನೇಹದ ಹಸ್ತಚಾಚಿ ಇಡೀ ಕೃತಿಯನ್ನು ಓದಿದರು. ಮುಂದೆ ಆ ಕೃತಿಗೆ ಮದ್ರಾಸ್ ವಿಶ್ವವಿದ್ಯಾಲಯ, ದಕ್ಷಿಣ ಭಾರತದ ಪ್ರಾದೇಶಿಕ ಭಾಷೆಗಳಲ್ಲಿ ಬರೆದ ಕೃತಿಗಳಲ್ಲಿ ಇದು ಉತ್ತಮ ಎಂದು ಬಹುಮಾನ ನೀಡಿತು. ಅದನ್ನು ಅಚ್ಚುಹಾಕಿಸಲು ನೆರವಾದವರೂ ‘ಕನ್ನಡದ ರತ್ನ’.

1966ರಲ್ಲಿ ಮೈಸೂರು ವಿಶ್ವವಿದ್ಯಾಲಯ ನಿಘಂಟು ರಚನಾ ಸಮಿತಿ ರಚಿಸಿದಾಗ ವಿಜ್ಞಾನ ಶಬ್ದಗಳಿಗೆ ಅರ್ಥಕಟ್ಟುವ ಸಮರ್ಥ ತಜ್ಞನನ್ನು ಹುಡುಕುವಾಗ ಮೊದಲು ಪ್ರಸ್ತಾಪವಾದದ್ದೇ ಲಕ್ಷ್ಮಣರಾವ್ ಹೆಸರು. ಪು.ತಿ.ನ. ಅವರಂತಹ ಪ್ರಸಿದ್ಧ ಕವಿಗಳ ಪರಿಚಯವಾದದ್ದೂ ಅಲ್ಲೇ. ಸಾಂಪ್ರದಾಯಿಕ ವಿಚಾರಗಳು ಬಂದಾಗ ಪು.ತಿ.ನ ಅವರ ಪಟ್ಟುಗಳೇ ಬೇರೆ, ಲಕ್ಷ್ಮಣರಾವ್ ಅವರ ನಿಟ್ಟುಗಳೇ ಬೇರೆ.

‘ನೀವು ಎಷ್ಟು ವಿಜ್ಞಾನ ಅಭ್ಯಾಸ ಮಾಡಿದರೂ ಅಷ್ಟೇ, ಮಾರ್ಕ್ಸ್, ಲೆನಿನ್ ಓದಿದರೂ ಅಷ್ಟೇ ‘You are essentially an Indian’ ಎಂಬ ಪು.ತಿ.ನ. ವ್ಯಾಖ್ಯೆಗೆ ಲಕ್ಷ್ಮಣರಾವ್ ವಾದಿಸಲಿಲ್ಲ. ಆದರೆ ಒಪ್ಪಲೂ ಇಲ್ಲ. ಅಲ್ಲೇ ದೊರೆತ ಮತ್ತೊಬ್ಬ ಬೋಧಕ ಎಚ್.ಕೆ.ರಾಮಚಂದ್ರಮೂರ್ತಿ ಇಂಗ್ಲಿಷ್ ಸಾಹಿತ್ಯ ಬೋಧಿಸುವುದರಲ್ಲಿ ಬಹು ದೊಡ್ಡ ಪಂಡಿತ. ಇವರೊಡನೆ ಕೂಡಿ ಲಕ್ಷ್ಮಣರಾವ್ ಬರ್ಟೋಲ್ಡ್ ಬ್ರೆಖ್ಟ್‌ನ ಗೆಲಿಲಿಯೋ ನಾಟಕವನ್ನು ಸೊಗಸಾಗಿ ಅನುವಾದಿಸಿದರು.

ಪ್ರೊ. ಅಡ್ಯನಡ್ಕ ಕೃಷ್ಣಭಟ್, ಪ್ರೊ. ಜೆ‌ಆರ್‌ಎಲ್ ಹಾಗೂ ಪ್ರೊ. ಎಂ. ಎ. ಸೇತುರಾವ್
ಪ್ರೊ. ಅಡ್ಯನಡ್ಕ ಕೃಷ್ಣಭಟ್, ಪ್ರೊ. ಜೆ‌ಆರ್‌ಎಲ್ ಹಾಗೂ ಪ್ರೊ. ಎಂ. ಎ. ಸೇತುರಾವ್ಶ್ರೀ ಜೆ. ಎಲ್. ಅನಿಲ್ ಕುಮಾರ್

ಬಹುಶ್ರುತ ಪ್ರತಿಭೆ

ಲಕ್ಷ್ಮಣರಾವ್ ಬಹುಶ್ರುತ ವಿದ್ವಾಂಸರು. ಅವರ ಸಂಗೀತಾಸಕ್ತಿ ಎಷ್ಟಿತ್ತೆಂದರೆ ವೀಣೆ ದೊರೆಸ್ವಾಮಿ ಅಯ್ಯಂಗಾರ್ಯರು ಮೈಸೂರಿನ ಇವರ ಮನೆಗೇ ಬಂದು ವೀಣೆ ನುಡಿಸಿದ್ದನ್ನು, ಅದು ಕೊಟ್ಟ ಅವಿಸ್ಮರಣೀಯ ನೆನಪನ್ನು ತಮ್ಮ ‘ಆತ್ಮಕಥೆ’ಯಲ್ಲಿ ಸ್ವರಿಸಿಕೊಂಡಿದ್ದಾರೆ. ಜೆ.ಆರ್.ಎಲ್. ಅವರ ಮಡದಿ ಜೀವೂಬಾಯಿ ಲಕ್ಷ್ಮಣರಾವ್, ಅವರ ಜೀವನ ಮಾರ್ಗದಲ್ಲಿ ಸತತ ನೆರಳಾದವರು, ನೆರವಾದವರು.

ಲಕ್ಷ್ಮಣರಾವ್ ತಮ್ಮ ಸುದೀರ್ಘ ವಿಜ್ಞಾನದ ರಸಯಾತ್ರೆಯಲ್ಲಿ ಬರೆದ ಕೃತಿಗಳಲ್ಲಿ ಹಲವು ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿಯ ಬಹುಮಾನ ಪಡೆದಿವೆ. ‘ಗೆಲಿಲಿಯೋ’ ಕೃತಿಗೆ ಎನ್.ಸಿ.ಇ.ಆರ್.ಟಿ. ಪ್ರಶಸ್ತಿಯ ಜೊತೆಗೆ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯೂ ಬಂದಿದೆ. ಗೆಲಿಲಿಯೋ ನಾಟಕಕ್ಕೆ ‘ನಾಟಕ ಅಕಾಡೆಮಿ ಪ್ರಶಸ್ತಿ’ಯ ಜೊತೆಗೆ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯೂ ಬಂದಿದೆ.

‘ವಿಜ್ಞಾನ ವಿಚಾರ’, ‘ಆರ್ಕಿಮಿಡಿಸ್’ ಇವು ಅವರಿಗೆ ಪ್ರಶಸ್ತಿಯನ್ನು ತಂದುಕೊಟ್ಟಿವೆ. ‘ಮೇಘನಾದ’ ಸಹಾ ಕೃತಿ ಮತ್ತು ಚಕ್ರ ಪ್ರಬಂಧ ಸಂಕಲನವು ಇದೇ ಪ್ರಶಸ್ತಿಗೆ ಭಾಜನವಾಗಿವೆ. 1992ರಲ್ಲಿ ದೆಹಲಿಯ ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನಾ ಮಂಡಲಿ ನೀಡುವ ‘ವಿಜ್ಞಾನ ಸಂವಹನಕ್ಕಾಗಿ ರಾಷ್ಟ್ರ ಪ್ರಶಸ್ತಿ’ಗೂ ಅವರು ಭಾಜನರು. ಮೂಡಬಿದರೆಯ ಶಿವರಾಮ ಕಾರಂತ ಪ್ರತಿಷ್ಠಾನ 1977ರಲ್ಲಿ ‘ಕಾರಂತ ಪ್ರಶಸ್ತಿ’ಯನ್ನು ನೀಡಿ ಗೌರವಿಸಿದೆ.

ಲಕ್ಷ್ಮಣರಾವ್ ಅವರ ಬದುಕಿನಲ್ಲಿ ಸಾಧನೆಯ ಹಲವು ಹೆಗ್ಗುರುತುಗಳಿವೆ. 1969ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಪ್ರಸಿದ್ಧ ಪತ್ರಿಕೆ ‘ಪ್ರಬುದ್ಧ ಕರ್ಣಾಟಕ’ದ ಚಿನ್ನದ ಹಬ್ಬದಲ್ಲಿ ಹೊರತಂದ ಎರಡು ವಿಜ್ಞಾನ ಸಂಪುಟಗಳು ಕನ್ನಡದ ಮಟ್ಟಿಗೆ ಹೊಸ ಮಾರ್ಗ ತೋರಿಸಿದಂತಹವು.

ವಿಜ್ಞಾನದ ಇತಿಹಾಸವನ್ನು ಎರಡು ಮಹಾ ಸಂಪುಟಗಳಲ್ಲಿ ಹಿಡಿದಿಡುವ ಸಾಹಸವನ್ನು ಮಾಡಿದವರು ಜೆ.ಆರ್.ಲಕ್ಷ್ಮಣರಾವ್. ಅದೇ ವರ್ಷ ‘ಪ್ರಬುದ್ಧ ಕರ್ಣಾಟಕ’ ಎಂಬ ಜನನಿಯ ತನುಜಾತೆಯಾಗಿ ಜನಿಸಿದ ‘ವಿಜ್ಞಾನ ಕರ್ನಾಟಕ’ದ ಸಂಪಾದಕತ್ವವನ್ನು ಎಂಟು ವರ್ಷಗಳ ಕಾಲ ನಿರ್ವಹಿಸಿ ಪೆನ್ನು ಹಿಡಿಯದಿದ್ದ ಅಧ್ಯಾಪಕರನ್ನು ಲೇಖಕರಾಗಿ ಬೆಳೆಸಿದ ಕೀರ್ತಿ ಅವರದು. 1978ರಲ್ಲಿ ‘ಬಾಲವಿಜ್ಞಾನ’ ಎಂಬ ಪತ್ರಿಕೆಯ ಸಂಪಾದಕತ್ವ ಹೊತ್ತು ಅದಕ್ಕೊಂದು ಜೀವಂತಿಕೆ ಕೊಟ್ಟು ಬೆಳೆಸಿದರು. ಈಗಲೂ ಅದು ಸತತವಾಗಿ ಹೊರಬರುತ್ತಿದೆ.

ಕೇರಳ ಶಾಸ್ತ್ರ ಸಾಹಿತ್ಯ ಪರಿಷತ್ ರೀತಿಯಲ್ಲಿ ನಮ್ಮ ರಾಜ್ಯದಲ್ಲೂ ‘ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು’ ಸ್ಥಾಪಿಸಿ ವಿಜ್ಞಾನ ಪ್ರಕಟಣೆಗೆ, ಸಂವಹನೆಗೆ ಹೊಸ ವೇದಿಕೆಯೊಂದನ್ನು ಕಲ್ಪಿಸಿದರು (ಮತ್ತೊಬ್ಬ ಸಂಘಟನಕಾರ, ಬೋಧಕ ಮತ್ತು ಮಾರ್ಕ್ಸ್‌ವಾದಿ ಸಹಪಾಠಿ ಎಂ.ಎ.ಸೇತುರಾವ್ ಅವರೊಡಗೂಡಿ). ಕನ್ನಡದಲ್ಲಿ ವಿಜ್ಞಾನ ಬರವಣಿಗೆಗೆ ಅನುವಾಗುವಂತೆ ಮತ್ತೊಬ್ಬ ಪ್ರಸಿದ್ಧ ವಿಜ್ಞಾನ ಲೇಖಕ ಅಡ್ಯನಡ್ಕ ಕೃಷ್ಣಭಟ್ ಅವರ ಜೊತೆಗೂಡಿ ಲಕ್ಷ್ಮಣರಾವ್ ಅವರು ಪ್ರಕಟಿಸಿರುವ ‘ಇಂಗ್ಲಿಷ್-ಕನ್ನಡ ವಿಜ್ಞಾನ ಪದಕೋಶ’ ಈಗಾಗಲೇ ಅನೇಕ ಆವೃತ್ತಿಗಳನ್ನು ಕಂಡಿದೆ.

‘ಪರಮಾಣು ಚರಿತೆ’ ಬರೆದು ಪಾಪಮಾಡಿದೆ ಎಂದು ಪ್ರಾಯಶ್ಚಿತ್ತಾರ್ಥವಾಗಿ ‘ಬೈಜಿಕ ವಿದ್ಯುತ್’ ಎಂಬ ಕೃತಿ ಬರೆದು ತಮ್ಮ ದುಗುಡವನ್ನು ಕಳೆದುಕೊಂಡವರು ಜೆ.ಆರ್.ಎಲ್. ಬೆಳ್ಳಾವೆ ವೆಂಕಟನಾರಾಣಪ್ಪ, ಶಿವರಾಮ ಕಾರಂತ, ಆರ್.ಎಲ್. ನರಸಿಂಹಯ್ಯ ಇವರು ನಡೆಸಿದ ಮಾರ್ಗವನ್ನು ಸುಗಮಗೊಳಿಸಿದವರಲ್ಲಿ ಜೆ.ಆರ್.ಲಕ್ಷ್ಮಣರಾವ್, ಜಿ.ಟಿ. ನಾರಾಯಣರಾವ್ ಮತ್ತು ಅಡ್ಯನಡ್ಕ ಕೃಷ್ಣ ಭಟ್ ಇವರ ಪಾತ್ರ ದೊಡ್ಡದು.

ಇಂದಿನ ತಲೆಮಾರಿನ ಲೇಖಕರು ಇವರು ನಿರ್ಮಿಸಿದ ಹಾದಿಯಲ್ಲಿ ಹಾಯಾಗಿ ಗಮಿಸುತ್ತಿದ್ದಾರೆ. ಹೆದ್ದಾರಿಯಲ್ಲಿ ವೇಗವಾಗಿ ಓಡುವ ವಾಹನಗಳಂತೆ.

ಮೇ ೧೭, ೨೦೧೫ರ ಪ್ರಜಾವಾಣಿಯಲ್ಲಿ ಪ್ರಕಟವಾದ ಈ ಬರಹವನ್ನು ಲೇಖಕ ಡಾ. ಟಿ. ಆರ್. ಅನಂತರಾಮುರವರ ಅನುಮತಿಯೊಡನೆ ಇಲ್ಲಿ ಪ್ರಕಟಿಸಲಾಗಿದೆ. ಪ್ರೊ. ಜೆ‌ಆರ್‌ಎಲ್ ಅವರ ಚಿತ್ರಗಳನ್ನು ಒದಗಿಸಿದ ಶ್ರೀ ಜೆ. ಎಲ್. ಅನಿಲ್ ಕುಮಾರ್ ಅವರಿಗೆ, ಮತ್ತು ಪ್ರೊ. ಜೆಆರ್‌ಎಲ್‌ರ ಪತ್ರದ ಪ್ರತಿಯನ್ನು ನೀಡಿದ ಡಾ. ಅನಂತರಾಮುರವರಿಗೆ ನಮ್ಮ ಕೃತಜ್ಞತೆಗಳು.

ಪ್ರೊ. ಜೆ.ಆರ್. ಲಕ್ಷ್ಮಣರಾವ್
ಜೆಆರ್‌ಎಲ್ ನೂರರ ನೆನಪು: "ಆಗುತ್ತಿರುವ ಕೆಲಸದಲ್ಲಿ ಹೆಚ್ಚು ಜನ ಆಸಕ್ತರಾಗಬೇಕು"

Related Stories

No stories found.