ಸೂಕ್ಷ್ಮದರ್ಶನ ಕ್ಷೇತ್ರದ ಜನಕ ಆಂಟೋನಿ ಲ್ಯುವೆನ್‌ಹಾಕ್
ಸೂಕ್ಷ್ಮದರ್ಶನ ಕ್ಷೇತ್ರದ ಜನಕ ಆಂಟೋನಿ ಲ್ಯುವೆನ್‌ಹಾಕ್ |Public domain image from Wikimedia Commons
ವೈವಿಧ್ಯ

ಬರಿಗಣ್ಣಿಗೆ ಕಾಣದ ಜಗತ್ತನ್ನು ಬಟ್ಟೆ ವ್ಯಾಪಾರಿ ಕಂಡ!

'ಸೂಕ್ಷ್ಮದರ್ಶಕದ ಸುತ್ತಮುತ್ತ' ಸರಣಿಯ ಮುಂದುವರೆದ ಭಾಗ

ನಾರಾಯಣ ಬಾಬಾನಗರ

೧೭ನೇ ಶತಮಾನದ ಮಧ್ಯಭಾಗದಲ್ಲಿ, ಡಚ್ ಗಣರಾಜ್ಯದ ಆಂಟೋನಿ ಲ್ಯುವೆನ್‌ಹಾಕ್ ಎಂಬ ಯುವಕ ಬಟ್ಟೆ ಅಂಗಡಿಯನ್ನು ನಡೆಸುತ್ತಿದ್ದ. ವ್ಯಾಪಾರದ ಜೊತೆಗೆ ಮಸೂರ ತಯಾರಿಕೆಯ ಬಗ್ಗೆಯೂ ಆತ ಆಸಕ್ತಿ ಬೆಳೆಸಿಕೊಂಡಿದ್ದ. ನಿಧಾನಕ್ಕೆ ಆತ ವಿಶಿಷ್ಟವಾದ ಮಸೂರಗಳ ತಯಾರಿಕೆಯಲ್ಲಿ ಪಳಗಿದ.

ತಾನು ತಯಾರಿಸಿದ ಮಸೂರಗಳನ್ನು ಬಳಸಿ ಆತ ವಿಭಿನ್ನ ಬಿಂಬ ವರ್ಧಿತ ಸಾಮರ್ಥ್ಯವಿದ್ದ ಸೂಕ್ಷ್ಮದರ್ಶಕಗಳನ್ನು ತಯಾರಿಸಿದ. ತಾನು ತಯಾರಿಸಿದ ಯಂತ್ರಗಳನ್ನು ಬಳಸಿ ಬರಿಗಣ್ಣಿಗೆ ಕಾಣದ ಜಗತ್ತನ್ನು ಪ್ರವೇಶಿಸಿದ. ಅಲ್ಲಿಯವರೆಗೆ ಮನುಷ್ಯನಿಗೆ ಅಪರಿಚಿತವಾಗಿದ್ದ ಜಗತ್ತೊಂದು ಅನಾವರಣಗೊಂಡಿತು!

ಆಂಟೋನಿ ಲ್ಯುವೆನ್‌ಹಾಕ್ ಸೂಕ್ಷ್ಮದರ್ಶನ ಕ್ಷೇತ್ರದ (microscopy) ಜನಕ ಎನಿಸಿಕೊಂಡದ್ದು ಹೀಗೆ.

ಜೀವಕೋಶ, ಬ್ಯಾಕ್ಟೀರಿಯಮ್, ಸ್ಪರ್ಮಟೋಝೋವಾ ಮುಂತಾದ ಅನೇಕ ರಚನೆಗಳನ್ನು ಆತ ವೀಕ್ಷಿಸಿ ದಾಖಲಿಸಿಕೊಂಡ. ದಾಖಲಿಸಿದ್ದನ್ನು ರಾಯಲ್ ಸೊಸೈಟಿಗೆ ಕಳುಹಿಸಿದ. ಅವನಿಗೆ ಇಂಗ್ಲೀಷ್, ಲ್ಯಾಟಿನ್ ಭಾಷೆಗಳ ಪರಿಚಯ ಇಲ್ಲದ್ದರಿಂದ ತನಗೆ ಗೊತ್ತಿದ್ದ ಡಚ್ ಭಾಷೆಯಲ್ಲಿಯೇ ತಾನು ವೀಕ್ಷಿಸಿದ್ದ ಸಂಗತಿಗಳನ್ನು ಬರೆದು ಕಳುಹಿಸುತ್ತಿದ್ದ. ಅವನು ಯಾವುದೇ ಪುಸ್ತಕ ಬರೆಯದಿದ್ದರೂ ರಾಯಲ್ ಸೊಸೈಟಿಗೆ ಅವನು ಬರೆದ ಪತ್ರಗಳೇ ಅಪರೂಪದ ಮಾಹಿತಿಗಳನ್ನು ಕೊಡುವ ಕಣಜವಾಗಿತ್ತು. ಅಪರೂಪದ ಜೀವಿ ಪ್ರತಿಚಯಗಳನ್ನು (sample) ಸಂಗ್ರಹಿಸಿ ಅವುಗಳನ್ನೂ ಆತ ರಾಯಲ್ ಸೊಸೈಟಿಗೆ ಕಳುಹಿಸಿಕೊಡುತ್ತಿದ್ದ.

ಏಕಕೋಶದಿಂದ ಕೂಡಿದ ಜೀವಿಗಳ ಅಸ್ತಿತ್ವವೇ ಗೊತ್ತಿರದಿದ್ದ ಜಗತ್ತಿಗೆ ಅವುಗಳ ಇರುವಿಕೆಯನ್ನು ತೋರಿಸಿಕೊಟ್ಟಿದ್ದು ಆತನದೇ ಸಾಧನೆ. ಜೀವಿ ನಮೂನೆಗಳ ಸಮರ್ಪಕ ವೀಕ್ಷಣೆಯಲ್ಲಿ ಸಹಾಯಕವಾಗುವ ರಂಗಗಳನ್ನು (stain) ಮೊದಲ ಬಾರಿಗೆ ಬಳಸಿದ್ದೂ ಈತನೇ. ಸರಿಸುಮಾರು ೨೦೦ ಸೂಕ್ಷ್ಮದರ್ಶಕಗಳನ್ನು, ೫೦೦ ಮಸೂರಗಳನ್ನು, ೨೫ ಏಕಮಸೂರ ಸೂಕ್ಷ್ಮದರ್ಶಕಗಳನ್ನು ಆತ ತನ್ನ ಜೀವಿತಾವಧಿಯಲ್ಲಿ ತಯಾರಿಸಿದ್ದ.

ಈತನ ವೀಕ್ಷಣೆಯು ನೈಜತೆಯಿಂದ ಕೂಡಿದೆಯೇ ಎಂದು ರಾಯಲ್ ಸೊಸೈಟಿಯಲ್ಲೇ ಅಪಸ್ವರಗಳು ಕೇಳಿ ಬಂದವು. ಅದಕ್ಕಾಗಿ ತಂಡವೊಂದು ಆಂಟೋನಿ ಲ್ಯುವೆನ್‌ಹಾಕ್ ಮನೆಗೆ ಭೇಟಿ ನೀಡಿ ಪರೀಕ್ಷಿಸಿತು. ಇಲ್ಲಿಯವರೆಗೆ ರಾಯಲ್ ಸೊಸೈಟಿಗೆ ಅವನು ನೀಡಿದ್ದ ಮಾಹಿತಿಗಳು ನೈಜತೆಯಿಂದ ಕೂಡಿದ್ದು ಎಂದು ಈ ಭೇಟಿಯಿಂದ ದೃಢಪಟ್ಟಿತು.

ಇಷ್ಟಾದರೂ ಆಂಟೋನಿ ಲ್ಯುವೆನ್‌ಹಾಕ್‌ಗೆ ಭಯವೊಂದಿತ್ತು: ತಾನು ಮಾಡಿದ್ದನ್ನೆಲ್ಲ ಬೇರೆ ಯಾರಾದರೂ ಕದ್ದುಬಿಟ್ಟರೆ? ವೈಜ್ಞಾನಿಕ ಕ್ಷೇತ್ರದಲ್ಲಿ ತನ್ನ ಕೆಲಸವನ್ನು ಗುರುತಿಸದೇ ಹೋಗಿ ತನ್ನ ಹೆಸರೇ ಇಲ್ಲದಂತಾಗಬಹುದು ಎಂದು ಆತ ಹೆದರಿದ್ದ. ಹೀಗಾಗಿ ಮನೆಗೆ ಭೇಟಿ ಕೊಡುವವರ ಎದುರಿಗೆ ಆತ ಕಡಿಮೆ ಸಾಮರ್ಥ್ಯದ ಮಸೂರಗಳನ್ನಷ್ಟೇ ಪ್ರದರ್ಶಿಸುತ್ತಿದ್ದನಂತೆ.

ಆಂಟೋನಿ ಲ್ಯುವೆನ್‌ಹಾಕ್ ತಯಾರಿಸಿದ ಸೂಕ್ಷ್ಮದರ್ಶಕಗಳಲ್ಲಿ ಈಗ ಲಭ್ಯವಿರುವುದು ಕೇವಲ ಒಂಭತ್ತು ಮಾತ್ರ. ಆದರೆ ಆತ ಸೃಷ್ಟಿಸಿದ ಈ ಮಾಯಾಯಂತ್ರಗಳು ನಮಗೆ ಒಂದು ಹೊಸ ಜಗತ್ತನ್ನೇ ಪರಿಚಯಿಸಿದವು ಎನ್ನುವುದು ಮಾತ್ರ ನಿಜ!

ಇಜ್ಞಾನ Ejnana
www.ejnana.com