ಮೈಕ್ರೋಸ್ಕೋಪ್ ಎನ್ನುವುದು ಗ್ರೀಕ್ ಭಾಷೆಯ ಹೆಸರು - ಮೈಕ್ರೋಸ್ ಎಂದರೆ ಚಿಕ್ಕದು, ಸ್ಕೋಪಿನ್ ಎಂದರೆ ನೋಡುವುದು!
ಮೈಕ್ರೋಸ್ಕೋಪ್ ಎನ್ನುವುದು ಗ್ರೀಕ್ ಭಾಷೆಯ ಹೆಸರು - ಮೈಕ್ರೋಸ್ ಎಂದರೆ ಚಿಕ್ಕದು, ಸ್ಕೋಪಿನ್ ಎಂದರೆ ನೋಡುವುದು!Image by Arek Socha from Pixabay

ಸೂಕ್ಷ್ಮದರ್ಶಕ ನಡೆದುಬಂದ ದಾರಿ

'ಸೂಕ್ಷ್ಮದರ್ಶಕದ ಸುತ್ತಮುತ್ತ' ಸರಣಿಯ ಮೊದಲ ಲೇಖನ

ಭೂಮಿಯ ಮೇಲೆ ಮನುಷ್ಯ ಕಾಣಿಸಿಕೊಂಡು ಮಾನವನ ವಿಕಾಸದ ಪ್ರಕ್ರಿಯೆ ನಡೆಯುತ್ತಾ ಬಂದಿತು. ಸುತ್ತಲಿನ ಪರಿಸರ, ಪರಿಸರದಲ್ಲಾದ ಬದಲಾವಣೆಗಳ ವೀಕ್ಷಣೆಗಳೂ ಮಾನವನಿಂದ ನಡೆದವು. ಈ ಹಂತದಲ್ಲಿಯೇ ಕೆಲವೊಂದು ಆಕಸ್ಮಿಕ ಘಟನೆಗಳೂ ನಡೆದವು. ಅಂಥವುಗಳಲ್ಲಿ ಒಂದು - ಗಾಜು ಉಂಟಾಗಿದ್ದು. ಗಾಜನ್ನು ಯಾವ ವಿಜ್ಞಾನಿಯೂ ಪ್ರಯೋಗ ಶಾಲೆಯಲ್ಲಿ ತಯಾರಿಸಿದ್ದಲ್ಲ. ಆಕಸ್ಮಿಕವಾಗಿ ನಿಸರ್ಗದಲ್ಲಿಯೇ ತಯಾರಾದದ್ದು. ಪರಿಸರದೆಡೆಗಿನ ವೀಕ್ಷಣೆಯ ದಿಕ್ಕು ನಿಧಾನಕ್ಕೆ ಬರಿಗಣ್ಣಿಗೆ ಕಾಣದ ವಸ್ತುಗಳ ಜಗತ್ತಿನೆಡೆಗೆ ತಿರುಗಿರಲು ಸಾಕು. ಬರಿಗಣ್ಣಿಗೆ ಕಾಣದ ವಸ್ತುಗಳ ಗಾತ್ರವನ್ನು ಹೆಚ್ಚಿಸಲು ಒಂದಿಷ್ಟು ಅನುಕೂಲಗಳು ಬೇಕಿದ್ದವು. ಇದಕ್ಕೆ ಎರಡು ಪ್ರಮುಖ ಸಂಗತಿಗಳ ಅವಶ್ಯಕತೆ ಇತ್ತು. ವಸ್ತುಗಳ ಗಾತ್ರ ದೊಡ್ಡದಾಗಿ ಕಾಣಲು ಅನುಕೂಲಿಸುವ ಗಾಜಿನ ಪ್ರಕಾರವೊಂದು ಬೇಕಿತ್ತು. ಬೆಳಕಿನ ಕಿರಣಗಳನ್ನು ಪ್ರತಿಫಲನಗೊಳಿಸುವ ಸಾಧನವೂ ಬೇಕಿತ್ತು. ಮನುಷ್ಯನ ಇಂದ್ರಿಯಗಳ ಇತಿಮಿತಿ ಅಷ್ಟರಲ್ಲಿ ಅರಿವಿಗೆ ಬಂದಿರಲೂ ಸಾಕು.

ಎರಡನೆಯ ಶತಮಾನದ ಸುಮಾರಿಗೆ ಇಟಲಿಯ ಖಗೋಳಶಾಸ್ತ್ರಜ್ಞ ಟಾಲೆಮಿ ಒಂದು ಮಹತ್ತರ ವಿದ್ಯಮಾನವನ್ನು ದಾಖಲಿಸಿದ್ದ. ನೀರು ತುಂಬಿದ ಕೊಳದಲ್ಲಿ ಇರಿಸಿದ ಕಟ್ಟಿಗೆಯ ಕೋಲೊಂದು ಬಾಗಿದಂತೆ ತೋರುತ್ತದೆ ಎಂಬುದು ಅವನ ವೀಕ್ಷಣಾ ದಾಖಲೆಯಾಗಿತ್ತು (ಟಾಲೆಮಿ ಕರ್ನಾಟಕದ ವಿಜಯಪುರ ಜಿಲ್ಲೆಗೂ ಭೇಟಿ ನೀಡಿದ್ದನಂತೆ!). ಈ ನಡುವೆ ಸಾಲ್ವಿನೊ ಡಿ ಅರ್ಮಟೊ ಎಂಬಾತ ಕಣ್ಣಿಗೆ ಧರಿಸಬಲ್ಲ ಗಾಜಿನ ಸಾಧನವೊಂದನ್ನು ತಯಾರಿಸಿದ್ದ. ಅದು ವಸ್ತುಗಳ ಗಾತ್ರವನ್ನು ಹೆಚ್ಚಿಸಬಲ್ಲದ್ದಾಗಿತ್ತು. ಹೀಗೆ ಸಾಲ್ವಿನೊ ತಯಾರಿಸಿದ್ದು ಪೀನಮಸೂರದ ತುಣಕೊಂದನ್ನು. ಅವನು ತಯಾರಿಸಿದ ಮಸೂರದ ತುಣುಕಿನಿಂದ ವಸ್ತು ಮಸೂರ ಮತ್ತು ನೇತ್ರ ಮಸೂರಗಳನ್ನು ತಯಾರಿಸಿ ವಸ್ತು ವರ್ಧನೆಗಾಗಿ ಬಳಸಿಕೊಂಡ. ಅವನು ಗರಿಷ್ಟ ಮಟ್ಟದಲ್ಲಿ ವರ್ಧಿಸಿದ್ದು ಒಂಭತ್ತು ಪಟ್ಟು ಮತ್ತು ಕನಿಷ್ಟ ಮಟ್ಟ ಮೂರು ಪಟ್ಟು.

ಇಷ್ಟೆಲ್ಲಾ ಆಗಿ ಹನ್ನೊಂದನೆಯ ಶತಮಾನದ ಸುಮಾರಿಗೆ ಅರಬ್ ಅಲ್ಹಝೆನ್ ಎಂಬಾತ ಗಾಜಿನ ಮಸೂರದ ಲಕ್ಷಣಗಳನ್ನು ಮತ್ತು ಉಪಯೋಗಗಳನ್ನು ವಿವರಿಸಿದ. ಇದಾಗಿ ಎರಡು ನೂರು ವರ್ಷಗಳ ಅನಂತರ ಇಂಗ್ಲಂಡದ ರೋಜರ್ ಬೇಕನ್ ಮಸೂರಗಳ ಬಳಕೆಯಲ್ಲಿ ಪಳಗಿದ.

ಕ್ರಿ.ಶ. ೧೬೦೮ರಲ್ಲಿ ದೂರದರ್ಶಕ, ಅಂದರೆ ಟೆಲಿಸ್ಕೋಪ್‌ನ ಆವಿಷ್ಕಾರವಾಯಿತು. ಹಾನ್ಸ್ ಲಿಪ್ಪರ್ಶೆ ಇದರ ರೂವಾರಿ. ಇದಾದ ಮುಂದಿನ ವರ್ಷ, ಕ್ರಿ.ಶ. ೧೬೦೯ರಲ್ಲಿ ಗೆಲಿಲಿಯೊ ತನ್ನದೇ ಆದ ಒಂದು ಟೆಲಿಸ್ಕೋಪ್ ತಯಾರಿಸಿಕೊಂಡು ಗಗನದೆಡೆಗೆ ದೃಷ್ಟಿ ನೆಟ್ಟ. ಮಸೂರಗಳ ಜೋಡಣೆಯನ್ನು ಅದಲು ಬದಲು ಮಾಡಿಕೊಂಡು ಅದನ್ನು ಸೂಕ್ಷ್ಮದರ್ಶಕವಾಗಿಯೂ ಮಾಡಿಕೊಂಡ.

ಆದರೆ ಇಷ್ಟರಲ್ಲಿಯೇ ಹಾನ್ಸ್ ಲಿಪ್ಪರ್ಶೆ ಮತ್ತು ಅವನ ಮಗ ಝಚಾರಿಯಸ್ ಜಾನ್ಸನ್ ಇಬ್ಬರೂ ಸೇರಿಕೊಂಡು ಮೈಕ್ರೋಸ್ಕೋಪ್ ಎಂಬ ಉಪಕರಣವನ್ನು ರೂಪಿಸಿ ಅದರ ರುವಾರಿಗಳೆನಿಸಿಕೊಂಡಿದ್ದರು. ಅವರು ತಯಾರಿಸಿದ ಮೈಕ್ರೋಸ್ಕೋಪ್‌ನಿಂದ ವಸ್ತುಗಳನ್ನು ೨೦ರಿಂದ ೩೦ ಪಟ್ಟು ದೊಡ್ಡದಾಗಿ ನೋಡುವುದು ಸಾಧ್ಯವಾಗುತ್ತಿತ್ತು.

ಕ್ರಿ.ಶ. ೧೬೨೫ರಲ್ಲಿ ಗೈವನ್ನಿ ಫ್ಯಾಬರ್ ಮೈಕ್ರೋಸ್ಕೋಪ್ ಎಂಬ ಪದವನ್ನು ರೂಢಿಯಲ್ಲಿ ತಂದ. ಇದು ಗ್ರೀಕ್ ಭಾಷೆಯ ಪದ. ಮೈಕ್ರೋಸ್ ಎಂದರೆ ಚಿಕ್ಕದು, ಸ್ಕೋಪಿನ್ ಎಂಬುದು ನೋಡುವುದು ಎಂಬರ್ಥವನ್ನು ಕೊಡುತ್ತವೆ.

ಕ್ರಿ.ಶ. ೧೬೫೫ರಲ್ಲಿ ರಾಬರ್ಟ್ ಹುಕ್ ಸಸ್ಯದ ತೊಗಟೆಯನ್ನು ವೀಕ್ಷಿಸಿದಾಗ ಅವನಿಗೆ ಚಿಕ್ಕ ಕೋಣೆಗಳ ರೀತಿಯ ರಚನೆಗಳು ಕಂಡು ಬಂದಿದ್ದರಿಂದ ಅವನು ಅವುಗಳನ್ನು 'ಸೆಲ್'ಗಳೆಂದು ಕರೆದ. ಸೆಲ್ ಎಂದರೆ ಕೋಣೆ ಎಂದರ್ಥ. ಅವುಗಳನ್ನು ನಾವು ಜೀವಕೋಶಗಳೆನ್ನುತ್ತೇವೆ ತಾನೆ? ಆದರೆ ವಾಸ್ತವವಾಗಿ ರಾಬರ್ಟ್ ಹುಕ್ ನೋಡಿದ ರಚನೆಗಳು ಜೀವಕೋಶಗಳಾಗಿರಲಿಲ್ಲ ಎಂಬುದನ್ನು ಗಮನಿಸಿ. ರಾಬರ್ಟ್ ಹುಕ್ ತನ್ನ ವೀಕ್ಷಣೆಗಳನ್ನು 'ಮೈಕ್ರೋಗ್ರಾಫಿಯಾ' ಹೆಸರಲ್ಲಿ ಹೊರತಂದ.

ಇದೆಲ್ಲ ಆದ ನಂತರದಲ್ಲಿ ಮೈಕ್ರೋಸ್ಕೋಪ್‌ನಿಂದ ನಿಜವಾದ ರೋಚಕ ಜಗತ್ತಿನ ದರ್ಶನ ಪ್ರಾರಂಭವಾಯಿತು... (ಮುಂದುವರೆಯುತ್ತದೆ)

Related Stories

No stories found.
logo
ಇಜ್ಞಾನ Ejnana
www.ejnana.com