ಮಕ್ಕಳಿಗೆ ನಾನು ಹೇಳಿದ್ದು ಸಾಸಿವೆಯಾದರೆ, ಅವರಿಂದ ಈ ಕೆಲದಿನಗಳಲ್ಲಿ ಕಲಿತದ್ದು ಬೆಟ್ಟದಷ್ಟು!
ಮಕ್ಕಳಿಗೆ ನಾನು ಹೇಳಿದ್ದು ಸಾಸಿವೆಯಾದರೆ, ಅವರಿಂದ ಈ ಕೆಲದಿನಗಳಲ್ಲಿ ಕಲಿತದ್ದು ಬೆಟ್ಟದಷ್ಟು!|Image by Prashant Sharma from Pixabay
ವೈವಿಧ್ಯ

ಮನೆಯೇ ಮೊದಲ ಪಾಠಶಾಲೆ; ಮಕ್ಕಳೇ ಮೊದಲ ಮೇಷ್ಟ್ರು!

ಮಕ್ಕಳಿಗೆ ದೊಡ್ಡವರು ಪಾಠ ಹೇಳಿಕೊಡುವುದು ಹಳೆಯ ವಿಷಯ. ಇಂದಿನ ತಂತ್ರಜ್ಞಾನದ ಬಗ್ಗೆ ಡಾ. ವಿ. ಎಸ್. ಕಿರಣ್ ತಮ್ಮ ಮಕ್ಕಳಿಂದಲೇ ಕಲಿಯಬೇಕಾಗಿ ಬಂದ ಕತೆ ಇಲ್ಲಿದೆ, ಓದಿ!

ಡಾ. ವಿ. ಎಸ್. ಕಿರಣ್

“ಇನ್ನು ಕೆಲದಿನಗಳು ಮನೆಯಿಂದಲೇ ಕೆಲಸ. ಮಕ್ಕಳಿಗೂ ರಜೆ. ಟ್ರಾಫಿಕ್ ನಲ್ಲಿ ಗಂಟೆಗಟ್ಟಲೆ ಕಳೆಯುವ ಜಂಜಾಟ ಇಲ್ಲ. ಸಾಕಷ್ಟು ಸಮಯ ಉಳಿಯುತ್ತದೆ. ಮಕ್ಕಳಿಗೆ ಪಾಠ ಹೇಳಿಕೊಡುತ್ತೇನೆ. ಕಲಿಯಲಿ” ಎನ್ನುವ ಒಣಜಂಭ ಗಾಳಿಗೋಪುರದಂತೆ ಕುಸಿದುಬಿದ್ದದ್ದು; “ನನಗೆ ಏನೇನೋ ಗೊತ್ತು; ನಾನು ಭಾರಿ ಬುದ್ಧಿವಂತ” ಎಂಬ ಭ್ರಮೆಗಳು ಕಳಚಿಬಿದ್ದದ್ದು ಕಳೆದ ಕೆಲವು ದಿನಗಳಲ್ಲಿ!

ಮೊದಲ ದಿನ ಕಾಲು ಚಾಚಿಕೊಂಡು ಟಿ.ವಿ. ನೋಡುತ್ತಿದ್ದ ಮಕ್ಕಳನ್ನು “ಟಿ.ವಿ. ನೋಡಿ ಸಮಯ ಹಾಳು ಮಾಡುವುದಕ್ಕಿಂತ ಪ್ರಯೋಜನವಾಗುವ ಏನನ್ನಾದರೂ ಕಲಿತುಕೊಳ್ಳಿ” ಎಂದು ಗದರಿದ್ದಾಯ್ತು. ನೋಡುತ್ತಿದ್ದನ್ನು ಅಲ್ಲಿಗೆ ನಿಲ್ಲಿಸಿ ನಿಧಾನವಾಗಿ ನನ್ನೆಡೆಗೆ ಬಂದ ಮಕ್ಕಳು “ಏನು ಕಲೀಬೇಕು?” ಎಂದರು. “ನಿಮ್ಮ ಶಾಲೆಯಲ್ಲಿ ಕಲಿಸದೆ ಇರುವುದನ್ನು ನಾನು ಹೇಳಿಕೊಡುತ್ತೇನೆ” ಎಂದು ಕಂಪ್ಯೂಟರ್ ಚಾಲೂ ಮಾಡಿದೆ. ಅವರು ನನ್ನ ಪಕ್ಕ ಕೂತರು. ವರ್ಡ್ ದಾಖಲೆ ತೆರೆದು ನನಗೆ ತಿಳಿದಿದ್ದ ಮೂರ್ನಾಲ್ಕು ಕೀಬೋರ್ಡ್ ಶಾರ್ಟ್-ಕಟ್ ಗಳನ್ನು ತೋರಿಸಿದೆ. ಮಕ್ಕಳು ನಿರ್ಭಾವುಕರಾಗಿ “ಆಮೇಲೆ” ಎಂದರು. ನನ್ನ ಉತ್ಸಾಹ ಜರ್ರನೆ ಇಳಿಯಿತು. ನನ್ನನ್ನು ಪಕ್ಕಕ್ಕೆ ಸರಿಯುವಂತೆ ಹೇಳಿ ಕಂಪ್ಯೂಟರ್ ಮುಂದೆ ಕೂತ ಮಗಳು ಒಂದು ಹಳೆಯ ವರ್ಡ್ ದಾಖಲೆಯನ್ನು ಕಾಪಿ ಮಾಡಿ ಅದನ್ನು ಬೇರೆಡೆ ಸೇವ್ ಮಾಡಿ ತೆರೆದಳು. ನೋಡನೋಡುತ್ತಿದ್ದಂತೆಯೇ ಸುಮಾರು ಇಪ್ಪತ್ತು ಬೇರೆ ಬೇರೆ ಕೀಬೋರ್ಡ್ ಶಾರ್ಟ್ ಕಟ್ ಗಳನ್ನು ಚಕಚಕನೆ ಮಾಡುತ್ತಾ ಅದರ ಕೆಲಸ ಹೇಳಿದಳು. ಮೌಸ್ ಮುಟ್ಟದೆಯೇ ಪುಟದ ವಿನ್ಯಾಸ ಬದಲಿಸುವ ದಾರಿ ಕಲಿಸಿದಳು. ಒಂದು ಎಕ್ಸೆಲ್-ಶೀಟ್ ತೆಗೆದು ಅದರಲ್ಲಿ ನನಗೆ ತಿಳಿದೇ ಇಲ್ಲದ ಕೆಲವು ವಿಷಯಗಳನ್ನು ಮಾಡಿ ತೋರಿದಳು. ನಾನು ಬಿಟ್ಟ ಬಾಯಿ ಬಿಟ್ಟಂತೆಯೇ ಕೂತಿದ್ದೆ. “ಎಂಟನೇ ಕ್ಲಾಸ್‌ಗೆ ಇದನ್ನೆಲ್ಲಾ ಹೇಳಿಕೊಡುತ್ತಾರಾ?” ಎಂದು ಅಚ್ಚರಿ ಮಿಶ್ರಿತ ದನಿಯಲ್ಲಿ ಕೇಳಿದೆ. “ಇದೆಲ್ಲಾ ಪಠ್ಯದಲ್ಲಿ ಇರಲ್ಲ. ನಾವೇ ಕಲೀತೀವಿ. ಇದರಲ್ಲಿ ಕೆಲವು ಮೂರನೇ ಕ್ಲಾಸ್ ಓದುವ ತಮ್ಮನಿಗೂ ಬರುತ್ತದೆ” ಎಂದಳು.

ಕಳೆದ ಕೆಲವು ದಿನಗಳಲ್ಲಿ ನಾನು ನನ್ನ ಮೊಬೈಲ್ ಬಗ್ಗೆ ಹಿಂದೆ ತಿಳಿಯದ ಎಷ್ಟೋ ಹೊಸ ವಿಷಯಗಳನ್ನು ತಿಳಿದಿದ್ದೇನೆ. ಉಪಯುಕ್ತವಾಗುವ ಸುಮಾರು ಆಪ್ ಗಳ ಬಗ್ಗೆ ಹೇಳಿಸಿಕೊಂಡು ಅವುಗಳ ಪ್ರಯೋಜನ ಪಡೆದಿದ್ದೇನೆ. ಹಿಂದೆ ಇಳಿಸಿಕೊಂಡಿದ್ದ ಕೆಲವು ಉಚಿತ ತಂತ್ರಾಂಶಗಳು ನನ್ನ ಮೊಬೈಲ್ ಅನ್ನು ಹೇಗೆ ನಿಧಾನ ಮಾಡುತ್ತಿದ್ದವು ಎಂದು ತಿಳಿದು ಅವುಗಳನ್ನು ನಿವಾರಿಸಿಕೊಂಡಿದ್ದೇನೆ. “ಈ ಮೊಬೈಲ್ ಭಾರಿ ಸ್ಲೋ” ಎಂದು ದೂಷಿಸುತ್ತಿದ್ದ ನನ್ನ ಮೊಬೈಲ್ ನ ಅಸಲೀ ವೇಗ ಕಂಡು ಚಕಿತನಾಗಿದ್ದೇನೆ. ಮೊಬೈಲ್ ಅನ್ನು ಸ್ಮಾರ್ಟ್ ಟಿ.ವಿ.ಗೆ ಹೇಗೆ ಸಂಪರ್ಕಿಸಬೇಕು ಎಂದು ಕಲಿತಿದ್ದೇನೆ. ಸ್ಮಾರ್ಟ್ ಟಿ.ವಿ.ಯ ವಾಹಿನಿಗಳಲ್ಲಿ ಹೊಸ ಸಿನೆಮಾ ಬಂದಾಗ ಅದನ್ನು ಪತ್ತೆ ಮಾಡುವ ತಂತ್ರ ತಿಳಿದಿದ್ದೇನೆ. ನಮ್ಮ ವೈ-ಫೈ ಹೆಸರನ್ನು ವೈರಸ್ ಎಂದು ಇಟ್ಟಮಾತ್ರಕ್ಕೆ ಯಾರೂ ಹೆದರುವುದಿಲ್ಲ ಎಂಬ ಮಹತ್ವದ ಸಂಗತಿ ಅರಿತಿದ್ದೇನೆ!

ಮಕ್ಕಳು ನನ್ನಿಂದ ಆಗಾಗ ಇತಿಹಾಸ, ಪುರಾಣದ ಕೆಲವು ಕತೆಗಳನ್ನು ಕೇಳಿ ತಿಳಿಯುತ್ತಾರೆ. ಅವರಿಗೆ ನಾನು ಹೇಳಿದ್ದು ಸಾಸಿವೆಯಾದರೆ, ಅವರಿಂದ ಈ ಕೆಲದಿನಗಳಲ್ಲಿ ಕಲಿತದ್ದು ಬೆಟ್ಟದಷ್ಟು! “ಮನೆಯೇ ಮೊದಲ ಪಾಠಶಾಲೆ; ಮಕ್ಕಳೇ ಮೊದಲ ಮೇಷ್ಟ್ರು” ಎಂಬುದು ನನ್ನ ಪಾಲಿನ ನವೀನ ಸತ್ಯ!

ಇಜ್ಞಾನ Ejnana
www.ejnana.com