'ಜಾಣಸುದ್ದಿ'ಗೆ ಫಾಲಿಂಗ್ ವಾಲ್ಸ್ ಗೌರವ

ಜರ್ಮನಿಯ ಫಾಲಿಂಗ್ ವಾಲ್ಸ್ ಪ್ರತಿಷ್ಠಾನ ಪ್ರಕಟಿಸುವ ಪ್ರಮುಖ ವೈಜ್ಞಾನಿಕ ಬೆಳವಣಿಗೆಗಳ ಪಟ್ಟಿಯಲ್ಲಿ ಕನ್ನಡದ 'ಜಾಣಸುದ್ದಿ' ವಿಜ್ಞಾನ ಪಾಡ್‌ಕಾಸ್ಟ್ ಸರಣಿ ಸ್ಥಾನಪಡೆದಿದೆ

ಜರ್ಮನಿಯ ಫಾಲಿಂಗ್ ವಾಲ್ಸ್ ಪ್ರತಿಷ್ಠಾನ ಪ್ರಕಟಿಸುವ ಪ್ರಮುಖ ವೈಜ್ಞಾನಿಕ ಬೆಳವಣಿಗೆಗಳ (Falling Walls Science Breakthroughs of the Year) ಪಟ್ಟಿಯಲ್ಲಿ ಕನ್ನಡದ 'ಜಾಣಸುದ್ದಿ' ವಿಜ್ಞಾನ ಪಾಡ್‌ಕಾಸ್ಟ್ ಸರಣಿ ಸ್ಥಾನಪಡೆದಿದೆ. ಹಿರಿಯ ವಿಜ್ಞಾನ ಸಂವಹನಕಾರ ಶ್ರೀ ಕೊಳ್ಳೇಗಾಲ ಶರ್ಮ ಈ ಸರಣಿಯನ್ನು ನಡೆಸುತ್ತಿದ್ದಾರೆ.

ಜರ್ಮನಿಯಲ್ಲಿ ನಡೆಯುವ ಪ್ರತಿಷ್ಠಿತ ಫಾಲಿಂಗ್ ವಾಲ್ಸ್ ವಾರ್ಷಿಕ ಸಮ್ಮೇಳನದ ಅಂಗವಾಗಿ ಈ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಕೊರೊನಾವೈರಸ್ ಜಾಗತಿಕ ಸೋಂಕಿನ ಹಿನ್ನೆಲೆಯಲ್ಲಿ ಈ ವರ್ಷದ ಸಮ್ಮೇಳನವನ್ನು ನ.೧ರಿಂದ ೧೦ರವರೆಗೆ ಡಿಜಿಟಲ್ ರೂಪದಲ್ಲಿ ನಡೆಸಲಾಗುತ್ತಿದೆ. ಜರ್ಮನಿಯ ಬರ್ಲಿನ್ ಗೋಡೆಯನ್ನು ಕೆಡವಲಾಗಿದ್ದರ ನೆನಪಿನಲ್ಲಿ ನಡೆಯುವ ಈ ಸಮ್ಮೇಳನವು ವಿಜ್ಞಾನ ಪ್ರಸಾರಕ್ಕಿರುವ ಅಡ್ಡಗೋಡೆಗಳನ್ನು ನಿವಾರಿಸುವ ಉದ್ದೇಶ ಹೊಂದಿದೆ. ಈ ಸಮ್ಮೇಳನದ ಅಂಗವಾಗಿ ವರ್ಷದ ಪ್ರಮುಖ ವೈಜ್ಞಾನಿಕ ಬೆಳವಣಿಗೆಗಳ ಪಟ್ಟಿಯನ್ನು ಪ್ರಕಟಿಸಲಾಗಿದ್ದು ವಿಶ್ವದೆಲ್ಲೆಡೆಯ ಹಲವು ವಿಜ್ಞಾನಿಗಳು, ತಂತ್ರಜ್ಞರು, ವಿಜ್ಞಾನ ಸಂವಹನಕಾರರು ಅದರಲ್ಲಿ ಸ್ಥಾನ ಪಡೆದಿದ್ದಾರೆ. ಅಂತಿಮ ಸುತ್ತಿನ ಈ ಪಟ್ಟಿಯಿಂದ ೧೦ ವಿಜೇತರನ್ನು ಆಯ್ಕೆಮಾಡಿ ನವೆಂಬರ್ ೮ರಂದು ಪ್ರಕಟಿಸಲಾಗುವುದು.

ಕಳೆದ ನಾಲ್ಕು ವರ್ಷಗಳಿಂದ ವಿಜ್ಞಾನದ ವಿಷಯಗಳನ್ನು ಕೇಳುಗರಿಗೆ ತಲುಪಿಸುತ್ತಿರುವ 'ಜಾಣಸುದ್ದಿ' ಸಂಚಿಕೆಗಳು ಇದೀಗ ಪ್ರತಿದಿನವೂ ಪ್ರಕಟವಾಗುತ್ತಿದ್ದು, ಕನ್ನಡದಲ್ಲಿ ವಿಜ್ಞಾನ ಸಂವಹನಕ್ಕೆ ಹೊಸದೊಂದು ಆಯಾಮವನ್ನು ಕಟ್ಟಿಕೊಟ್ಟಿವೆ. ವಿಜ್ಞಾನ ಜಗತ್ತಿನ ಆಗುಹೋಗುಗಳನ್ನು ಈ ಸರಣಿಯ ಸಂಚಿಕೆಗಳು ಪ್ರತಿದಿನವೂ ಕೇಳುಗರಿಗೆ ಪರಿಚಯಿಸುತ್ತಿವೆ. ವಿವಿಧ ವಿಷಯಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಕತೆ ಮತ್ತು ಉದಾಹರಣೆಗಳ ನೆರವಿನಿಂದ ವಿವರಿಸುವ ಜೊತೆಗೆ, ಪ್ರತಿದಿನವೂ ಹೊಸ ವಿಷಯಗಳನ್ನು ತಿಳಿಸುತ್ತಿರುವುದು ವಿಶೇಷ. ಜಾಣ ಸುದ್ದಿಯ ಸಂಚಿಕೆಗಳನ್ನು ವಾಟ್ಸ್ ಆಪ್ ಮೂಲಕ ಮಾತ್ರವಲ್ಲದೆ ಆಂಕರ್, ಸ್ಪಾಟಿಫೈ, ಗೂಗಲ್ ಪಾಡ್‌ಕಾಸ್ಟ್, ರೇಡಿಯೋ ಪಬ್ಲಿಕ್ ಮತ್ತು ಬ್ರೇಕರ್ ಸೇವೆಗಳ ಮೂಲಕವೂ ಕೇಳಬಹುದು. ಹೆಚ್ಚಿನ ಮಾಹಿತಿಗೆ ಕರೆ/ಮೆಸೇಜು ಮಾಡಬಹುದಾದ ಸಂಖ್ಯೆ 9886640328.

ಈ ಸರಣಿಯನ್ನು ನಡೆಸುತ್ತಿರುವ ಹಿರಿಯ ವಿಜ್ಞಾನ ಸಂವಹನಕಾರ ಶ್ರೀ ಕೊಳ್ಳೇಗಾಲ ಶರ್ಮರಿಗೆ ವಿಜ್ಞಾನ ಸಂವಹನದಲ್ಲಿ ಹಲವು ದಶಕಗಳ ಅನುಭವವಿದೆ. ಮೈಸೂರಿನ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯದಿಂದ ಇತ್ತೀಚೆಗೆ ನಿವೃತ್ತರಾಗಿರುವ ಅವರು ಸಾವಿರಾರು ಜನಪ್ರಿಯ ವಿಜ್ಞಾನ ಲೇಖನ ಹಾಗೂ ಅಂಕಣ ಬರಹಗಳನ್ನು, ಹಲವು ಪುಸ್ತಕಗಳನ್ನು ರಚಿಸಿದ್ದಾರೆ. ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ದಾರ್ಶನಿಕ ಸಮೂಹದ ಪ್ರಶಸ್ತಿಗಳನ್ನು ಪಡೆದಿದ್ದಾರೆ.

'ಜಾಣಸುದ್ದಿ'ಗೆ ಫಾಲಿಂಗ್ ವಾಲ್ಸ್ ಗೌರವ
ಕನ್ನಡದ ಇಜ್ಞಾನ: ಜಾಲಲೋಕದಲ್ಲಿ ಕನ್ನಡದ ಧ್ವನಿ

Related Stories

No stories found.
logo
ಇಜ್ಞಾನ Ejnana
www.ejnana.com