ಭಾರತದ ತಂತ್ರಜ್ಞಾನ ಜಗತ್ತು ಸದಾ ಕ್ರಿಯಾಶೀಲವಾಗಿ ಕೆಲಸಮಾಡುತ್ತಿರುತ್ತದೆ
ಭಾರತದ ತಂತ್ರಜ್ಞಾನ ಜಗತ್ತು ಸದಾ ಕ್ರಿಯಾಶೀಲವಾಗಿ ಕೆಲಸಮಾಡುತ್ತಿರುತ್ತದೆImage by Pexels from Pixabay

ತಂತ್ರಜ್ಞಾನ ಜಗದಲ್ಲಿ ಭಾರತದ ಮುನ್ನಡೆ

ಭಾರತದ ತಂತ್ರಜ್ಞಾನ ಜಗತ್ತು ಸದಾ ಕ್ರಿಯಾಶೀಲವಾಗಿ ಕೆಲಸಮಾಡುತ್ತಿರುತ್ತದೆ. ಈ ಕ್ಷೇತ್ರದ ಇತ್ತೀಚಿನ ಸಾಧನೆಗಳ ಪೈಕಿ ಕೆಲವದರ ಪಕ್ಷಿನೋಟ ಇಲ್ಲಿದೆ.

ಭಾರತದ ತಂತ್ರಜ್ಞಾನ ಜಗತ್ತು ಸದಾ ಕ್ರಿಯಾಶೀಲವಾಗಿ ಕೆಲಸಮಾಡುತ್ತಿರುತ್ತದೆ. ಈ ಕ್ಷೇತ್ರದ ಇತ್ತೀಚಿನ ಸಾಧನೆಗಳ ಪೈಕಿ ಕೆಲವದರ ಪಕ್ಷಿನೋಟ ಇಲ್ಲಿದೆ. ಈ ಪಟ್ಟಿ ನಮ್ಮ ದೇಶದ ಎಲ್ಲ ಸಾಧನೆಗಳನ್ನೂ ಒಳಗೊಂಡಿಲ್ಲವಾದರೂ ಕಳೆದೊಂದು ವರ್ಷದಲ್ಲಿ ನಾವು ಸಾಗಿಬಂದಿರುವ ಹಾದಿಯ ಸ್ಥೂಲ ಪರಿಚಯವನ್ನಂತೂ ಮಾಡಿಕೊಡುತ್ತದೆ ಎನ್ನುವುದು ನಮ್ಮ ನಂಬಿಕೆ. ಓದಿ, ಇಂತಹವೇ ವಿಶಿಷ್ಟ ಸಾಧನೆಗಳು ನಿಮ್ಮ ಗಮನಕ್ಕೆ ಬಂದಿದ್ದರೆ ನಮ್ಮ ಫೇಸ್ಬುಕ್ ಪುಟದಲ್ಲಿ ಅವನ್ನು ನಮ್ಮೊಡನೆ ಹಂಚಿಕೊಳ್ಳಿ!

೩ಡಿ ಮುದ್ರಣದ ಮುನ್ನಡೆ

ನಮಗೆ ಬೇಕಾದ ವಸ್ತುಗಳನ್ನು ನಮ್ಮ ಮನೆಯಲ್ಲೇ "ಮುದ್ರಿಸಿಕೊಳ್ಳಲು" ನೆರವಾಗುವ ೩ಡಿ ಮುದ್ರಣ ತಂತ್ರಜ್ಞಾನ ಹಲವು ಹೊಸ ಸಾಧ್ಯತೆಗಳನ್ನು ಪರಿಚಯಿಸುತ್ತಿದೆ. ಮಾನವ ದೇಹದ ಭಾಗಗಳನ್ನು ೩ಡಿ ಮುದ್ರಣದ ಮೂಲಕ ರೂಪಿಸಿಕೊಳ್ಳುವುದು ಇಂತಹ ಸಾಧ್ಯತೆಗಳಲ್ಲೊಂದು. ಕಣ್ಣಾಲಿಯ ಮುಂಭಾಗದಲ್ಲಿರುವ 'ಕಾರ್ನಿಯ' ಎಂಬ ಪಾರದರ್ಶಕ ಪಟಲವನ್ನು (ಕಣ್ಣಿನ ಕರಿಗುಡ್ಡೆ) ಈ ತಂತ್ರಜ್ಞಾನದ ಮೂಲಕ ಮುದ್ರಿಸಿಕೊಳ್ಳುವ ಸಾಧ್ಯತೆಯನ್ನು ಭಾರತೀಯ ವಿಜ್ಞಾನಿಗಳು ತೋರಿಸಿಕೊಟ್ಟಿದ್ದಾರೆ. ಹೈದರಾಬಾದಿನ ಎಲ್ ವಿ ಪ್ರಸಾದ್ ಐ ಇನ್ಸ್‌ಟಿಟ್ಯೂಟ್, ಐಐಟಿ-ಹೈದರಾಬಾದ್ ಹಾಗೂ ಸಿಎಸ್‌ಐಆರ್-ಸಿಸಿಎಂಬಿಯ ತಜ್ಞರು ರೂಪಿಸಿದ ಕಾರ್ನಿಯವನ್ನು ಆಗಸ್ಟ್ ೨೦೨೨ರಲ್ಲಿ ಮೊಲವೊಂದರ ಕಣ್ಣಿಗೆ ಅಳವಡಿಸಲಾಗಿತ್ತು. ಈ ಸಾಧನೆ ಮುಂದಿನ ದಿನಗಳಲ್ಲಿ ಮನುಷ್ಯರಿಗೂ ಉಪಯುಕ್ತವಾಗಲಿದ್ದು, ಕಣ್ಣಿನ ತೊಂದರೆಗಳ ಚಿಕಿತ್ಸೆಯಲ್ಲಿ ಮಹತ್ವದ ಪಾತ್ರ ವಹಿಸುವ ನಿರೀಕ್ಷೆಯಿದೆ.

ವಿಸ್ತರಿಸುತ್ತಿರುವ ಬ್ಲಾಕ್‌ಚೈನ್ ವ್ಯಾಪ್ತಿ

ವಹಿವಾಟುಗಳ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿ, ವಂಚನೆ ತಡೆಯುವ ನಿಟ್ಟಿನಲ್ಲಿ ಮಹತ್ವದ ಸಾಧನೆ ಮಾಡಿರುವುದು ಬ್ಲಾಕ್‌ಚೈನ್ ತಂತ್ರಜ್ಞಾನದ ಹೆಗ್ಗಳಿಕೆ. ಮೊದಲು ಪ್ರಚಲಿತಕ್ಕೆ ಬಂದದ್ದು ಬಿಟ್‌ಕಾಯಿನ್‌ನಂತಹ ಕ್ರಿಪ್ಟೋಕರೆನ್ಸಿಗಳ ಜೊತೆಯಲ್ಲೇ ಆದರೂ ಇದೀಗ ಈ ತಂತ್ರಜ್ಞಾನವನ್ನು ಹಣಕಾಸು ವ್ಯವಹಾರಗಳಾಚೆಗೂ ಬಳಸಲಾಗುತ್ತಿದೆ. ಈ ಕ್ಷೇತ್ರದಲ್ಲೂ ಭಾರತವೂ ಗಮನಾರ್ಹ ಸಾಧನೆ ಮಾಡಿದೆ. ನಾವು ಬಳಸುವ ಆಹಾರ ಪದಾರ್ಥಗಳು ಎಲ್ಲಿಂದ ಬಂದಿವೆ, ಅವುಗಳನ್ನು ಯಾವಾಗ ಕಟಾವು ಮಾಡಲಾಗಿದೆ ಎನ್ನುವುದನ್ನೆಲ್ಲ ನಿಖರವಾಗಿ ತೋರಿಸುವ ಹಲವು ಪ್ರಯೋಗಗಳು ನಮ್ಮಲ್ಲಿ ಈಗಾಗಲೇ ನಡೆದಿವೆ. ಇಂತಹುದೇ ಪ್ರಯೋಗವೊಂದರ ಭಾಗವಾಗಿ ಜಾರ್ಖಂಡ್ ಸರಕಾರವು ರಾಜ್ಯದ ರೈತರಿಗೆ ಬಿತ್ತನೆ ಬೀಜಗಳ ವಿತರಣೆಯ ಕಾರ್ಯಕ್ರಮವನ್ನು ಪಾರದರ್ಶಕವಾಗಿ ನಡೆಸಲು ಹಾಗೂ ಇಡೀ ಪ್ರಕ್ರಿಯೆಯ ಮೇಲೆ ನಿಗಾವಹಿಸಲು ಬ್ಲಾಕ್‌ಚೈನ್ ತಂತ್ರಜ್ಞಾನ ಅಳವಡಿಸುವ ಮೂಲಕ ಗಮನಸೆಳೆದಿದೆ.

ಸ್ವಚ್ಛ ಇಂಧನದತ್ತ ಇನ್ನೊಂದು ಹೆಜ್ಜೆ

ಅನೇಕ ವರ್ಷಗಳಿಂದ ನಮ್ಮ ಕುತೂಹಲ ಕೆರಳಿಸಿರುವ ಇಂಧನದ ಪರ್ಯಾಯ ಮೂಲಗಳಲ್ಲಿ ಹೈಡ್ರೋಜನ್‌ಗೆ ಪ್ರಮುಖ ಸ್ಥಾನವಿದೆ. ಇಂಧನ ಕೋಶ, ಅಂದರೆ ಫ್ಯುಯೆಲ್ ಸೆಲ್‌ನಲ್ಲಿ ಹೈಡ್ರೋಜನ್ ಅನ್ನು ಇಂಧನವಾಗಿ ಬಳಸಿದಾಗ ಕೇವಲ ನೀರಾವಿ ಹಾಗೂ ಬೆಚ್ಚಗಿನ ಗಾಳಿ ಮಾತ್ರವೇ ತ್ಯಾಜ್ಯ ವಸ್ತುಗಳಾಗಿ ಹೊರಹೊಮ್ಮುತ್ತವೆ. ವಾಯುಮಾಲಿನ್ಯದ ಸಮಸ್ಯೆಯನ್ನು ಗಣನೀಯವಾಗಿ ಕಡಿಮೆಮಾಡುವ ಕಾರಣದಿಂದಲೇ ಹೈಡ್ರೋಜನ್ ಫ್ಯುಯೆಲ್ ಸೆಲ್‌ ವಾಹನಗಳ ಬಗ್ಗೆ ವಿಶ್ವದೆಲ್ಲೆಡೆ ಅಪಾರ ಆಸಕ್ತಿ ಸೃಷ್ಟಿಯಾಗಿದೆ. ಈ ತಂತ್ರವನ್ನು ಬಳಸುವ ಭಾರತದ ಮೊದಲ ಹೈಡ್ರೋಜನ್ ಫ್ಯುಯೆಲ್ ಸೆಲ್‌ ಬಸ್ಸನ್ನು ೨೦೨೨ರ ಆಗಸ್ಟ್ ತಿಂಗಳಿನಲ್ಲಿ ಪುಣೆಯಲ್ಲಿ ಅನಾವರಣಗೊಳಿಸಲಾಯಿತು. ಸಿಎಸ್‌ಐಆರ್ ಹಾಗೂ ಕೆಪಿಐಟಿ ಸಂಸ್ಥೆಗಳು ಜಂಟಿಯಾಗಿ ರೂಪಿಸಿರುವ ಈ ಬಸ್ಸು ಚಲಿಸಲು ಬೇಕಾದ ವಿದ್ಯುತ್ತನ್ನು ಅದರಲ್ಲಿರುವ ಹೈಡ್ರೋಜನ್ ಇಂಧನ ಕೋಶಗಳೇ ಉತ್ಪಾದಿಸುತ್ತವೆ ಎನ್ನುವುದು ವಿಶೇಷ.

ಬಾಹ್ಯಾಕಾಶದಲ್ಲೊಂದು ವಿಕ್ರಮ

ಭಾರತದ ನವೋದ್ಯಮಗಳು ನಾಲ್ಕೂವರೆ ಲಕ್ಷಕ್ಕೂ ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸಿವೆಯೆಂದು ಅಂಕಿ-ಅಂಶಗಳು ಹೇಳುತ್ತವೆ. ಈ ನವೋದ್ಯಮಗಳ ಕಾರ್ಯವ್ಯಾಪ್ತಿ ಪಕ್ಕದ ಬೀದಿಯ ಕಿರಾಣಿ ಅಂಗಡಿಯಿಂದ ಪ್ರಾರಂಭಿಸಿ ಅಂತರಿಕ್ಷದವರೆಗೂ ಹರಡಿಕೊಂಡಿರುವುದು ವಿಶೇಷ. ಸ್ಕೈರೂಟ್ ಏರೋಸ್ಪೇಸ್ ಎಂಬ ಸಂಸ್ಥೆ ರೂಪಿಸಿದ 'ವಿಕ್ರಮ್-ಎಸ್' ರಾಕೆಟ್ಟು ೨೦೨೨ರ ನವೆಂಬರ್ ತಿಂಗಳಿನಲ್ಲಿ ಬಾಹ್ಯಾಕಾಶಕ್ಕೆ ಚಿಮ್ಮುವ ಮೂಲಕ ಭಾರತದ ಮೊದಲ ಖಾಸಗಿ ರಾಕೆಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಪಿಕ್ಸೆಲ್ ಹಾಗೂ ಧ್ರುವ ಸ್ಪೇಸ್ ಎಂಬ ಇನ್ನೆರಡು ಭಾರತೀಯ ಸಂಸ್ಥೆಗಳು ನಿರ್ಮಿಸಿದ ಉಪಗ್ರಹಗಳನ್ನು ಇಸ್ರೋ ತನ್ನ ಪಿಎಸ್‌ಎಲ್‌ವಿ ರಾಕೆಟ್ ಮೂಲಕ ಅಂತರಿಕ್ಷಕ್ಕೆ ಸೇರಿಸಿದ್ದು ನವೋದ್ಯಮಗಳ ಪಾಲಿಗೆ ೨೦೨೨ರ ಇನ್ನೊಂದು ವಿಕ್ರಮ. ಅಗ್ನಿಕುಲ್ ಕಾಸ್ಮಾಸ್ ಎಂಬ ಇನ್ನೊಂದು ನವೋದ್ಯಮ ಶ್ರೀಹರಿಕೋಟದಲ್ಲಿ ಖಾಸಗಿ ರಾಕೆಟ್ ಉಡಾವಣಾ ಕೇಂದ್ರವನ್ನೇ ಸ್ಥಾಪಿಸಿಬಿಟ್ಟಿದೆ.

ಅಂತರಿಕ್ಷದಿಂದ ಅಂತರಜಾಲ

ಈಚಿನ ವರ್ಷಗಳಲ್ಲಿ ಅಂತರಜಾಲದ ವ್ಯಾಪ್ತಿ ಅಗಾಧವಾಗಿ ಬೆಳೆದಿದೆಯಾದರೂ ಅನೇಕ ಸ್ಥಳಗಳಲ್ಲಿ ಇಂದಿಗೂ ಅಂತರಜಾಲದ ಅನುಕೂಲಗಳು ದೊರಕುತ್ತಿಲ್ಲ. ಈ ಸಮಸ್ಯೆಯನ್ನು ದೂರಮಾಡುವ ಉದ್ದೇಶವಿಟ್ಟುಕೊಂಡಿರುವುದು ಉಪಗ್ರಹ ಅಂತರಜಾಲದ (ಸ್ಯಾಟಲೈಟ್ ಇಂಟರ್‌ನೆಟ್) ಪರಿಕಲ್ಪನೆ. ಕೇಬಲ್ಲುಗಳು ಅಥವಾ ಮೊಬೈಲ್ ಜಾಲದ ಬದಲು, ನೇರವಾಗಿ ಉಪಗ್ರಹಗಳ ಮೂಲಕವೇ ಅಂತರಜಾಲ ಸಂಪರ್ಕ ಕಲ್ಪಿಸಿಕೊಡುವುದು ಇದರ ಪರಿಕಲ್ಪನೆಯ ಉದ್ದೇಶ. ಇಂತಹ ವ್ಯವಸ್ಥೆಗಳನ್ನು ರೂಪಿಸುವ ಪ್ರಯತ್ನದಲ್ಲಿರುವ ದೇಶಗಳ ಸಾಲಿನಲ್ಲಿ ಭಾರತವೂ ಇದೆ. ಇಸ್ರೋ ಹಾಗೂ ಹ್ಯೂಸ್ ಕಮ್ಯೂನಿಕೇಶನ್ಸ್ ಸಂಸ್ಥೆಗಳ ಸಹಭಾಗಿತ್ವದಲ್ಲಿ ಭಾರತದ ಮೊತ್ತಮೊದಲ ಉಪಗ್ರಹ ಅಂತರಜಾಲ ಸೇವೆ ಈಗಾಗಲೇ ಪ್ರಾರಂಭವಾಗಿದ್ದು, ದೂರಸಂಪರ್ಕ ಜಾಲಗಳ ಸಂಪರ್ಕವಿಲ್ಲದ ಪ್ರದೇಶಗಳನ್ನೂ ಅಂತರಜಾಲದ ವ್ಯಾಪ್ತಿಯೊಳಗೆ ತರುವ ನಿಟ್ಟಿನಲ್ಲಿ ಇದೊಂದು ಪ್ರಮುಖ ಹೆಜ್ಜೆ ಎನ್ನಬಹುದು.

ತಂತ್ರಜ್ಞಾನದ ಮೂಲಸೌಕರ್ಯಕ್ಕೆ ಒತ್ತು

ಭಾರತದಲ್ಲೇ ರೂಪಿಸಲಾದ ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ), ಡಿಜಿಟಲ್ ಪಾವತಿಗಳನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ಅತ್ಯಂತ ಮಹತ್ವದ ಸಾಧನೆ. ಕ್ಷಿಪ್ರವಾಗಿ ಹಣ ವರ್ಗಾಯಿಸುವುದಷ್ಟೇ ಅಲ್ಲ, ಬ್ಯಾಂಕ್ ಖಾತೆಯ ವಿವರಗಳನ್ನು ಇತರರೊಡನೆ ಹಂಚಿಕೊಳ್ಳದೆಯೇ ವ್ಯವಹರಿಸುವುದನ್ನು ಸಾಧ್ಯವಾಗಿಸಿದ್ದೂ ಯುಪಿಐನ ಹೆಗ್ಗಳಿಕೆ. ಇಷ್ಟೇ ಮಹತ್ವದ ಸಾಧನೆ ಮಾಡಲಿವೆಯೆನ್ನಲಾದ ಎರಡು ಹೊಸ ವ್ಯವಸ್ಥೆಗಳನ್ನು ಇದೀಗ ರೂಪಿಸಲಾಗಿದೆ. ಈ ಪೈಕಿ ಅಕೌಂಟ್ ಅಗ್ರಿಗೇಟರ್ (ಎಎ) ಫ್ರೇಮ್‌ವರ್ಕ್, ಸಾಲ ಮತ್ತಿತರ ಹಣಕಾಸು ಉತ್ಪನ್ನಗಳನ್ನು ಪಡೆಯುವ ಪ್ರಕ್ರಿಯೆಯನ್ನು ಸುಲಭಗೊಳಿಸುವ ಉದ್ದೇಶ ಇಟ್ಟುಕೊಂಡಿದೆ. ಅದೇ ರೀತಿ, ಓಪನ್ ನೆಟ್ ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ (ಓಎನ್‌ಡಿಸಿ) ಎಂಬ ವ್ಯವಸ್ಥೆ ಇ-ಕಾಮರ್ಸ್ ಕ್ಷೇತ್ರಕ್ಕೆ ತೆರೆದುಕೊಳ್ಳುವ ಅವಕಾಶವನ್ನು ಸಣ್ಣ ಉದ್ಯಮಿಗಳಿಗೂ ನೀಡುವ ನಿರೀಕ್ಷೆಯಿದೆ.

ಹಲ್ಲಿನ ರಕ್ಷಣೆಗೆ ರೋಬಾಟ್ ನೆರವು

ರೋಬಾಟ್‌ಗಳನ್ನು ಕುರಿತ ನಮ್ಮ ಕುತೂಹಲ ಬಹಳ ಹಳೆಯದು. ವೈಜ್ಞಾನಿಕ ಕತೆಗಳಲ್ಲಿ, ಚಲನಚಿತ್ರಗಳಲ್ಲಿ ಕಾಣಿಸಿಕೊಂಡು ನಮ್ಮನ್ನು ಅಚ್ಚರಿಪಡಿಸುತ್ತಿದ್ದ ರೋಬಾಟುಗಳು ಇದೀಗ ಹೋಟಲು-ಆಸ್ಪತ್ರೆ ಮುಂತಾದೆಡೆಗಳಲ್ಲೂ ಕಾಣಿಸಿಕೊಳ್ಳುತ್ತಿವೆ, ಮನೆಯ ಕಸವನ್ನೂ ಗುಡಿಸುತ್ತವೆ. ಈ ಕ್ಷೇತ್ರದಲ್ಲಿ ಕೆಲಸಮಾಡುತ್ತಿರುವ ದೇಶಗಳಲ್ಲಿ ಭಾರತಕ್ಕೂ ಪ್ರಮುಖ ಸ್ಥಾನವಿದೆ. ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದ ನವೋದ್ಯಮವೊಂದು ಹಲ್ಲಿನ ಚಿಕಿತ್ಸೆಯಲ್ಲಿ ಬಳಕೆಯಾಗಬಲ್ಲ ಸೂಕ್ಷ್ಮ ರೋಬಾಟುಗಳನ್ನು ತಯಾರಿಸುವ ಮೂಲಕ ೨೦೨೨ರ ಮೇ ತಿಂಗಳಿನಲ್ಲಿ ವಿಜ್ಞಾನ ಜಗತ್ತಿನ ಗಮನ ಸೆಳೆದಿತ್ತು. ಹಲ್ಲಿನ ಸೋಂಕನ್ನು ನಿವಾರಿಸಲು ವ್ಯಾಪಕವಾಗಿ ಕೈಗೊಳ್ಳಲಾಗುಬ ರೂಟ್ ಕನಾಲ್ ಚಿಕಿತ್ಸೆಯ ಸಂದರ್ಭದಲ್ಲಿ ಸೋಂಕುಕಾರಕ ಬ್ಯಾಕ್ಟೀರಿಯಾಗಳನ್ನು ಪೂರ್ತಿಯಾಗಿ ನಿವಾರಿಸಲು ಈ ರೋಬಾಟುಗಳನ್ನು ಬಳಸಬಹುದು ಎನ್ನುವುದು ವಿಶೇಷ.

ಸೌರಶಕ್ತಿ ಫಲಕಗಳಿಗೆ ತಂತ್ರಜ್ಞಾನದ ಸ್ನಾನ

ಭವಿಷ್ಯದ ಶಕ್ತಿಮೂಲಗಳ ಸಾಲಿನಲ್ಲಿ ಸೌರಶಕ್ತಿಗೆ ಮಹತ್ವದ ಸ್ಥಾನವಿದೆ. ೨೦೨೨ರ ನವೆಂಬರ್ ಅಂತ್ಯದವರೆಗೆ ನಮ್ಮ ದೇಶದಲ್ಲಿ ಸ್ಥಾಪಿಸಲಾಗಿರುವ ಸೌರವಿದ್ಯುತ್ ಉತ್ಪಾದನಾ ಘಟಕಗಳ ಒಟ್ಟು ಸಾಮರ್ಥ್ಯ ೬೦ ಗಿಗಾವ್ಯಾಟ್‌ಗಳಿಗೂ ಹೆಚ್ಚು. ಸೌರವಿದ್ಯುತ್ ಫಲಕಗಳ ಮೇಲೆ ಧೂಳು ಸೇರಿದರೆ ಅವುಗಳ ಕ್ಷಮತೆ ಕಡಿಮೆಯಾಗುವುದರಿಂದ ಇಷ್ಟೆಲ್ಲ ಘಟಕಗಳಲ್ಲಿ ಅಳವಡಿಸಲಾಗಿರುವ ಫಲಕಗಳನ್ನು ಶುಚಿಯಾಗಿರಿಸುವುದು ದೊಡ್ಡ ಸವಾಲೇ ಸರಿ. ಈ ಸಮಸ್ಯೆಯನ್ನು ನಿವಾರಿಸಬಲ್ಲ ಪರಿಹಾರವೊಂದನ್ನು ಜೋಧಪುರ ಐಐಟಿಯ ತಜ್ಞರು ರೂಪಿಸಿದ್ದಾರೆ. ಅವರು ತಯಾರಿಸಿರುವ ಲೇಪನ ತಂತ್ರಜ್ಞಾನವನ್ನು ಬಳಸಿದರೆ ಸೌರವಿದ್ಯುತ್ ಫಲಕಗಳನ್ನು ಬಹಳ ಸುಲಭವಾಗಿ, ಅತ್ಯಂತ ಕಡಿಮೆ ನೀರನ್ನು ಬಳಸಿ ಶುಚಿಗೊಳಿಸುವುದು ಸಾಧ್ಯವಾಗಲಿದೆಯಂತೆ. ಆ ಮೂಲಕ ಸೌರವಿದ್ಯುತ್ ಫಲಕಗಳ ಕಾರ್ಯಕ್ಷಮತೆ ಹೆಚ್ಚುವಂತೆ ಹಾಗೂ ಅವು ದೀರ್ಘಕಾಲ ಬಾಳಿಕೆ ಬರುವಂತೆಯೂ ಮಾಡಬಹುದು ಎನ್ನಲಾಗಿದೆ.

ಜನವರಿ ೨೦೨೩ರ ಕುತೂಹಲಿಯಲ್ಲಿ ಪ್ರಕಟವಾದ ಲೇಖನ

Related Stories

No stories found.
logo
ಇಜ್ಞಾನ Ejnana
www.ejnana.com