ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ!
ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ!Image by Vektor Kunst from Pixabay

ಕರೋನಾವೈರಸ್ ನಿಯಂತ್ರಣ - ನಿಮ್ಮ ಸಹಾಯವಿಲ್ಲದೆ ಅಸಾಧ್ಯ!

ಕರೋನಾವೈರಸ್ ಕಾಯಿಲೆ ಹರಡದಂತೆ ನಾವೇನು ಮಾಡಬೇಕು? ಈ ಲೇಖನ ಓದಿ, ನಿಮ್ಮ ಆಪ್ತರಿಗೂ ಓದಿಸಿ, ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ!

“ಕರೋನಾ ರುದ್ರನರ್ತನ; ಕರೋನಾ ಹೆಮ್ಮಾರಿಯ ಕುಣಿತ; ಕರೋನಾ ರಕ್ಕಸನ ಆರ್ಭಟ” ಹೀಗೆಲ್ಲಾ ಪುಲ್ಲಿಂಗ-ಸ್ತ್ರೀಲಿಂಗ ವಿಶೇಷಣಗಳನ್ನು ಹೊತ್ತ ಸುದ್ಧಿಗಳು ಕರೋನಾವೈರಸ್ ಪ್ರಭಾವವನ್ನು ವಿವರಿಸುತ್ತಿವೆ. ಧೈರ್ಯಶಾಲಿಗಳನ್ನೂ ಕಂಗೆಡಿಸಬಲ್ಲ ಇಂತಹ ಮಾತುಗಳು ಅಳ್ಳೆದೆಯವರನ್ನು ಕರೋನವೈರಸ್ ಗಿಂತಲೂ ಮುಂಚೆಯೇ ಮುಗಿಸಿಬಿಡುವಷ್ಟು ಪ್ರಭಾವಶಾಲಿಯಾಗಿರುತ್ತವೆ. ಕರೋನಾವೈರಸ್ ಕಾಯಿಲೆಯ ನಿಯಂತ್ರಣಕ್ಕೆ ನಾವು ತೆಗೆದುಕೊಳ್ಳುತ್ತಿರುವ ಕ್ರಮಗಳು ಸಮಂಜಸವಾಗಿವೆಯೇ? ವೈಯಕ್ತಿಕ ನೆಲೆಗಟ್ಟಿನಲ್ಲಿ, ಸಮಷ್ಟಿಯ ಮಟ್ಟದಲ್ಲಿ ನಮ್ಮ ಕಾರ್ಯಸೂಚಿ ಹೇಗಿರಬೇಕು? ಈ ರೀತಿಯ ಪ್ರಾಯೋಗಿಕ ಪ್ರಶ್ನೆಗಳಿಗೆ ಉತ್ತರ ಹುಡುಕುವ ಮುನ್ನ ಕೆಲವು ವಿಷಯಗಳನ್ನು ಅರಿಯಬೇಕು.

ಸಾಂಕ್ರಾಮಿಕ ಕಾಯಿಲೆ ಎಂದರೇನು; ಅದು ಹೇಗೆ ಹರಡುತ್ತದೆ; ಅದನ್ನು ಹೇಗೆ ನಿಯಂತ್ರಿಸಬೇಕು?

ಒಂದು ವ್ಯಕ್ತಿಯಿಂದ ಮತ್ತೊಂದು ವ್ಯಕ್ತಿಗೆ ಹರಡುವಂತಹದ್ದು ಸಾಂಕ್ರಾಮಿಕ ಕಾಯಿಲೆ. ಕಾಲರಾ ರೋಗದ ಉದಾಹರಣೆ ಗಮನಿಸೋಣ. ಕಾಲರಾ ಎನ್ನುವ ಬ್ಯಾಕ್ಟೀರಿಯಾ ಬಾಯಿನ ಮೂಲಕ ಶರೀರಕ್ಕೆ ಸೇರಿ ಕರುಳನ್ನು ವ್ಯಾಪಿಸುತ್ತದೆ. ಅಂದರೆ, ಮಲಿನವಾದ ತಿಂಡಿ/ಪಾನೀಯಗಳ ಸೇವನೆಯಿಂದ ಕಾಲರಾ ಬ್ಯಾಕ್ಟೀರಿಯಾಗಳು ಶರೀರವನ್ನು ಸೇರಿ, ಅತಿಸಾರ ಭೇದಿ ಉಂಟುಮಾಡಿ ಆ ಮೂಲಕ ಶರೀರದಿಂದ ಹೊರಬರುತ್ತವೆ. ಈ ಭೇದಿಯಲ್ಲಿನ ಕಾಲರಾ ಬ್ಯಾಕ್ಟೀರಿಯಾಗಳು ತಿಂಡಿ/ಪಾನೀಯಗಳ ಸಂಪರ್ಕಕ್ಕೆ ಬಂದು ಮತ್ತೊಂದು ವ್ಯಕ್ತಿಯ ಶರೀರವನ್ನು ಸೇರಿದರೆ ಅವರಿಗೂ ಕಾಲರಾ ತಗಲುತ್ತದೆ. ಈ ಚಕ್ರವನ್ನು ಮುರಿಯಲು ಮೂರು ದಾರಿಗಳಿವೆ. ಒಂದು – ಕಾಯಿಲೆ ಬರುವುದಕ್ಕೆ ಮುನ್ನವೇ ಲಸಿಕೆಗಳನ್ನು ನೀಡಿ ಕಾಲರಾ ಬ್ಯಾಕ್ಟೀರಿಯಾಗಳನ್ನು ನಿಯಂತ್ರಿಸಬಲ್ಲ ಶಕ್ತಿಯನ್ನು ಶರೀರ ಪಡೆಯುವಂತೆ ಮಾಡಬೇಕು. ಅಂತಹ ವ್ಯಕ್ತಿಯ ದೇಹಕ್ಕೆ ಕಾಲರಾ ಬ್ಯಾಕ್ಟೀರಿಯಾಗಳು ಸೇರಿದರೂ, ಅವು ವೃದ್ಧಿಸಲಾರವು. ಹೀಗಾಗಿ, ಅಂತಹ ವ್ಯಕ್ತಿಗೆ ಕಾಯಿಲೆಯೂ ಬರುವುದಿಲ್ಲ; ಅವರಿಂದ ಕಾಯಿಲೆ ಮತ್ತೊಬ್ಬರಿಗೆ ಹರಡುವುದೂ ಇಲ್ಲ. ಎರಡು – ಕಾಲರಾ ಬಂದ ಕೂಡಲೇ ಅದಕ್ಕೆ ಚಿಕಿತ್ಸೆ ನೀಡಿ ಕಾಲರಾ ಬ್ಯಾಕ್ಟೀರಿಯಾಗಳು ಶರೀರದ ಒಳಗೆ ನಿರ್ನಾಮ/ನಿಷ್ಕ್ರಿಯ ಆಗುವಂತೆ ಮಾಡಬೇಕು. ಆಗ ಆಯಾ ವ್ಯಕ್ತಿಗೆ ಕಾಲರಾ ಕಾಯಿಲೆ ಪೀಡಿಸಿದರೂ, ಅವರಿಂದ ಮತ್ತೊಬ್ಬರಿಗೆ ಕಾಯಿಲೆ ಹರಡುವ ಸಾಧ್ಯತೆ ಬಹಳ ಕಡಿಮೆ ಆಗುತ್ತದೆ. ಮೂರು – ಈ ಕಾಯಿಲೆ ತಿನಿಸು/ಪಾನೀಯಗಳ ಮೂಲಕ ಹರಡುವುದರಿಂದ ಕಾಲರಾ ರೋಗಿಗಳ ಸಂಪರ್ಕಕ್ಕೆ ಬಂದ ತಿನಿಸು/ಪಾನೀಯಗಳನ್ನು ಇತರರು ಸೇವಿಸದಂತೆ ನೋಡಿಕೊಳ್ಳಬೇಕು. ಶುಚಿತ್ವ ಕಾಯ್ದುಕೊಳ್ಳದ ತಿಂಡಿ/ಪಾನೀಯಗಳನ್ನು ನಿಷೇಧಿಸಬೇಕು. ಯಾವುದೋ ತಿಳಿಯದ ಸ್ಥಳಗಳಲ್ಲಿ ತಿಂಡಿ/ಪಾನೀಯ ಸೇವನೆ ಮಾಡಬಾರದು. ಕಚ್ಚಾ ತಿನಿಸುಗಳನ್ನು ಚೆನ್ನಾಗಿ ತೊಳೆದು ಸೇವಿಸಬೇಕು. ನೀರನ್ನು ಕುದಿಸಿ ತಣ್ಣಗೆ ಮಾಡಿ ಕುಡಿಯಬೇಕು. ಹೆಚ್ಚಿನ ಜನಸಂದಣಿ ಇರುವಂತಹ ಸ್ಥಳಗಳಲ್ಲಿ ತಿಂಡಿ/ಪಾನೀಯ ಶುಚಿತ್ವದ ಬಗ್ಗೆ ಶಂಕೆ ಇದ್ದಲ್ಲಿ ಅಂತಹ ಸ್ಥಳಗಳಿಗೆ ಹೋಗಬಾರದು. ಇದನ್ನೆಲ್ಲಾ ಕಟ್ಟುನಿಟ್ಟಾಗಿ ಪಾಲಿಸಿದರೆ ಕಾಲರಾ ಹರಡುವಿಕೆ ನಿಯಂತ್ರಣಕ್ಕೆ ಬರುತ್ತದೆ. ಇದು ಬಹುಮಟ್ಟಿಗೆ ನಮೆಗೆಲ್ಲರಿಗೂ ತಿಳಿದಿರುವ ವಿಷಯ.

ಇದೇ ಮಾದರಿಯನ್ನು ಕರೋನಾವೈರಸ್ ಗೆ ಅನ್ವಯ ಮಾಡೋಣ. ಕರೋನಾವೈರಸ್ ಮನುಷ್ಯರಲ್ಲಿ ನ್ಯುಮೋನಿಯಾ ಉಂಟುಮಾಡುವ ಸಾಂಕ್ರಾಮಿಕ ವೈರಾಣು. ಅದು ಹರಡುವುದು ಶ್ವಾಸಕೋಶದ ಮಾರ್ಗವಾಗಿ ಹೊರಬರುವ ಸ್ರವಿಕೆಗಳಿಂದ. ಈ ಸ್ರವಿಕೆಗಳು ಮತ್ತೊಬ್ಬರ ಶ್ವಾಸಕೋಶದ ಮಾರ್ಗವನ್ನು ನೇರವಾಗಿ ತಲುಪಿದರೆ, ಅಥವಾ ಅಂತಹ ಸ್ರವಿಕಗಳು ಯಾವುದಾದರೂ ವಸ್ತುವಿನ ಮೇಲೆ ಬಿದ್ದು ಅದನ್ನು ಮತ್ತೊಬ್ಬರು ಮುಟ್ಟುವುದರ ಮೂಲಕ ಅವರ ಚರ್ಮದಿಂದ ಅವರವರ/ಇತರರ ಶ್ವಾಸಮಾರ್ಗವನ್ನು ತಲುಪಿದರೆ ಕರೋನಾವೈರಸ್ ಹರಡುತ್ತದೆ. ಸದ್ಯಕ್ಕೆ ಕರೋನಾವೈರಸ್ ಗೆ ಲಸಿಕೆಯಾಗಲೀ, ನಿಗದಿತ ಚಿಕಿತ್ಸೆಯಾಗಲೀ ಇಲ್ಲ. ಹಾಗಾಗಿ, ಕಾಯಿಲೆಯ ನಿಯಂತ್ರಣದ ಮೂರು ದಾರಿಗಳಲ್ಲಿ ಎರಡು ಇಲ್ಲಿ ಅನ್ವಯವಾಗುವುದಿಲ್ಲ. ಉಳಿದದ್ದು ಮೂರನೆಯ ಮಾರ್ಗ ಮಾತ್ರ. ಅಂದರೆ, ಕರೋನಾವೈರಸ್ ಹರಡುವಿಕೆಯನ್ನು ಸಫಲವಾಗಿ ತಡೆಗಟ್ಟಿದರೆ ನಾವು ಈ ಕದನ ಗೆದ್ದಂತೆಯೇ.

ಆದರೆ, ಇದನ್ನು ಸಾಧಿಸುವುದು ಹೇಗೆ?

ಕರೋನಾವೈರಸ್ ಕಾಯಿಲೆ ಇರುವ ವ್ಯಕ್ತಿ ತನ್ನ ಸಂಪರ್ಕಕ್ಕೆ ಬರುವ ಯಾರಿಗಾದರೂ ಕಾಯಿಲೆ ಹರಡಬಲ್ಲ. ಹೀಗಾಗಿ, ಕರೋನಾವೈರಸ್ ಕಾಯಿಲೆಯ ರೋಗಿಗೆ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಪೂರಕ ಚಿಕಿತ್ಸೆ ನೀಡಬೇಕು. ಆತನ ಸಂಪರ್ಕಕ್ಕೆ ಬರುವ ವೈದ್ಯರು, ದಾದಿಯರ ಸಂಖ್ಯೆ ಮಿತವಾಗಿರಬೇಕು. ಆತನಿಂದ ತಮಗೇ ರೋಗ ಹರಡದಂತೆ ವೈದ್ಯರು, ದಾದಿಯರು ಎಚ್ಚರ ವಹಿಸಬೇಕು. ಶರೀರದ ಸಾಮಾನ್ಯ ಕಾರ್ಯಗಳು ಏರುಪೇರಾಗದಂತೆ ಪೂರಕ ಸಹಾಯ ನೀಡಬೇಕು. ಕರೋನಾವೈರಸ್ ಸೋಂಕಿನಿಂದ ಉಂಟಾದ ರೋಗಲಕ್ಷಣಗಳಿಗೆ ತಕ್ಕ ಚಿಕಿತ್ಸೆ ನೀಡಬೇಕು. ರೋಗಿಯ ಶರೀರದ ರಕ್ಷಕ ವ್ಯವಸ್ಥೆ ಸೋಂಕನ್ನು ನಿಧಾನವಾಗಿ ನಿಯಂತ್ರಿಸುತ್ತಾ ಆತನ ದೇಹದಿಂದ ಕರೋನಾವೈರಸ್ ಅನ್ನು ತೆಗೆದು ಹಾಕುತ್ತದೆ. ಈ ಹಂತದಲ್ಲಿ ಆತ ಮತ್ತೊಬ್ಬರಿಗೆ ಸೋಂಕನ್ನು ವರ್ಗಾಯಿಸಲು ಸಾಧ್ಯವಿಲ್ಲ. ಆಗ ಆತನನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಬಹುದು.

ನಮ್ಮ ರಕ್ಷಣೆಯಷ್ಟೇ ಇತರರ ರಕ್ಷಣೆಯೂ ಮುಖ್ಯ!
ಎಲ್ಲರೂ ಸ್ವಯಂ-ನಿರ್ಬಂಧ ಹಾಕಿಕೊಂಡು ವೈರಾಣುವಿನ ಪ್ರಸಾರವನ್ನು ಕಡಿಮೆ ಮಾಡುವ ಪಣ ತೊಡಬೇಕು. ವೈಯಕ್ತಿಕ ಸ್ವಚ್ಛತೆಯನ್ನು ಪಾಲಿಸಬೇಕು. ಕರೋನಾವೈರಸ್ ನಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದು ಎಷ್ಟು ಮುಖ್ಯವೋ, ಇತರರ ರಕ್ಷಣೆಯೂ ಅಷ್ಟೇ ಮುಖ್ಯ ಎಂಬುದನ್ನು ಮಂತ್ರದಂತೆ ಪಾಲಿಸಬೇಕು.

ಕರೋನಾವೈರಸ್ ಕಾಯಿಲೆಗೆ ಪ್ರತ್ಯೇಕವಾದ ರೋಗಲಕ್ಷಣಗಳು ಇಲ್ಲ. ಇತರ ವೈರಸ್ ಕಾಯಿಲೆಗಳ ರೀತಿಯಲ್ಲೇ ಕೆಲವು ಸಾಮಾನ್ಯ ರೋಗಲಕ್ಷಣಗಳು ಕಾಣುತ್ತವೆ. ಹೀಗಾಗಿ ಶಂಕಿತ ರೋಗಿಗಳಲ್ಲಿ ಕರೋನಾವೈರಸ್ ಕಾಯಿಲೆ ಇರಲೂಬಹುದು; ಇಲ್ಲದೆಯೂ ಇರಬಹುದು. ಅಂತಹವರು ಈ ಮುನ್ನ ಕರೋನಾವೈರಸ್ ಸೋಂಕು ಉಳ್ಳ ಯಾವುದಾದರೂ ರೋಗಿಯ ಸಂಪರ್ಕಕ್ಕೆ ಬಂದಿದ್ದಾರೆಯೇ ಎಂದು ತಿಳಿಯಬೇಕು. ಅಂತಹ ಶಂಕಿತ ರೋಗಿಗಳನ್ನು ಪ್ರತ್ಯೇಕವಾಗಿ ಇಡಬೇಕು. ಅವರಿಗೆ ಕರೋನಾವೈರಸ್ ಸೋಂಕು ಇದೆಯೇ ಅಥವಾ ಇಲ್ಲವೇ ಎಂಬುದಕ್ಕೆ ಪರೀಕ್ಷೆ ಮಾಡಬೇಕು. ಕರೋನಾವೈರಸ್ ಸೋಂಕು ಇಲ್ಲ ಎಂಬ ಫಲಿತಾಂಶ ಬಂದರೆ ಅವರ ರೋಗಲಕ್ಷಣಗಳಿಗೆ ಸರಿಯಾದ ಚಿಕಿತ್ಸೆ ನೀಡಿ ಬಿಡುಗಡೆ ಮಾಡಬಹುದು. ಸೋಂಕು ಇದೆ ಎಂದಾದರೆ ಮೇಲೆ ಹೇಳಿದ ರೀತಿಯಲ್ಲಿ ಚಿಕಿತ್ಸೆ ನೀಡಬೇಕು.

ಕರೋನಾವೈರಸ್ ಕಾಯಿಲೆ ಉಳ್ಳ ರೋಗಿಗಳ ಸಂಪರ್ಕಕ್ಕೆ ಬಂದಿರಬಹುದಾದ, ಆದರೆ ಈವರೆಗೆ ಯಾವುದೇ ರೋಗಲಕ್ಷಣಗಳು ಕಾಣಿಸಿಲ್ಲದ ವ್ಯಕ್ತಿಗಳನ್ನು ಇತರರಿಂದ ಪ್ರತ್ಯೇಕಿಸಿ ಇಡಬೇಕು. ಅವರಿಗೆ ನಿರ್ದಿಷ್ಟ ಅವಧಿಯ ಒಳಗೆ ರೋಗಲಕ್ಷಣಗಳು ಕಾಣಿಸಿದರೆ ಕರೋನಾವೈರಸ್ ಶಂಕಿತರಿಗೆ ಮಾಡುವ ವಿಧಾನ ಅನುಸರಿಸಬೇಕು. ಯಾವುದೇ ರೋಗಲಕ್ಷಣಗಳು ಕಾಣಿಸದೇ ಹೋದಲ್ಲಿ ಅವಧಿಯ ನಂತರ ಅವರನ್ನು ಬಿಡುಗಡೆ ಮಾಡಬಹುದು.

ಸಾಮಾನ್ಯ ಜನತೆ ಏನು ಮಾಡಬೇಕು?

ಕರೋನಾವೈರಸ್ ಕಾಯಿಲೆಗೆ ಪ್ರತ್ಯೇಕವಾದ ರೋಗಲಕ್ಷಣಗಳು ಇಲ್ಲವಾದ ಕಾರಣ ರೋಗಿಗಳು ಯಾರು ಎಂಬುದನ್ನು ಮೇಲ್ನೋಟಕ್ಕೆ ಪತ್ತೆ ಹಚ್ಚುವುದು ಸಾಧ್ಯವಿಲ್ಲ. ಹೀಗಾಗಿ, ಎಷ್ಟು ಕಡಿಮೆ ಜನರ ಜೊತೆ ಸಂಪರ್ಕಕ್ಕೆ ಬಂದರೆ ಅಷ್ಟೂ ಒಳಿತು. ರೋಗಿಯ ಶರೀರದ ಮೇಲೆ ಸ್ರವಿಕೆಗಳು ಇರಬಹುದು. ಅದರಲ್ಲಿ ಕರೋನಾವೈರಸ್ ಇರಲೂ ಸಾಧ್ಯ. ಅವು ರೋಗಿಯ ಸಂಪರ್ಕಕ್ಕೆ ಬಂದ ಎಲ್ಲರಲ್ಲೂ ಹರಡಬಹುದು. ಆದ್ದರಿಂದ, ರೋಗಿಯಲ್ಲದವರೂ ಕೂಡ ತಾವು ಸಂಪರ್ಕಕ್ಕೆ ಬಂದ ರೋಗಿಯ ಸ್ರವಿಕೆಗಳಲ್ಲಿನ ವೈರಾಣುಗಳನ್ನು ತಮಗೇ ಅರಿವಿಲ್ಲದಂತೆ ಹೊತ್ತೊಯ್ಯುವ ಮೂಲಕ ರೋಗವನ್ನು ಹರಡಲು ಸಾಧ್ಯ. ಒಟ್ಟಾರೆ, ಇತರರ ಸಂಪರ್ಕವನ್ನು ಎಷ್ಟು ಕಡಿಮೆ ಇಟ್ಟುಕೊಂಡರೆ ಕರೋನಾವೈರಸ್ ತಗಲುವ ಸಾಧ್ಯತೆ ಅಷ್ಟೇ ಕಡಿಮೆ. ಇದನ್ನೇ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಎಂದು ವಿವರಿಸಲಾಗಿದೆ. ಕರೋನಾವೈರಸ್ ಹರಡುವಿಕೆಯನ್ನು ತಡೆಗಟ್ಟುವಲ್ಲಿ ಇದು ಬಹಳ ಉತ್ತಮ ವಿಧಾನ.

ಕರೋನಾವೈರಸ್ ದಾಳಿ ಎದುರಿಸಲು ಸಜ್ಜಾಗಿರುವ ದೇಶಗಳಲ್ಲಿ ಅದರಿಂದ ತೊಂದರೆಗೆ ಒಳಗಾಗುವವರ ಸಂಖ್ಯೆ ಬಹಳ ಕಡಿಮೆ ಇರುತ್ತದೆ. ಈ ಎಚ್ಚರಿಕೆಗಳನ್ನು ನಿರ್ಲಕ್ಷ್ಯ ಮಾಡುವವರ ಸಂಖ್ಯೆ ಹೆಚ್ಚಾದಷ್ಟೂ ಅಪಾಯ ಗಣನೀಯವಾಗಿ ಹೆಚ್ಚಾಗುತ್ತದೆ. ಈ ಕಾರಣಕ್ಕೇ ಎಲ್ಲರೂ ಸ್ವಯಂ-ನಿರ್ಬಂಧ ಹಾಕಿಕೊಂಡು ವೈರಾಣುವಿನ ಪ್ರಸಾರವನ್ನು ಕಡಿಮೆ ಮಾಡುವ ಪಣ ತೊಡಬೇಕು. ವೈಯಕ್ತಿಕ ಸ್ವಚ್ಛತೆಯನ್ನು ಪಾಲಿಸಬೇಕು. ನಮಗೆ ಅರಿವೇ ಇಲ್ಲದಂತೆ ನಮ್ಮ ಕೈಗಳನ್ನು ಏರಿರಬಹುದಾದ ಕರೋನಾವೈರಸ್ ಗಳನ್ನು ಆಗಾಗ ಸಾಬೂನಿನಿಂದ ಕೈ ತೊಳೆದುಕೊಳ್ಳುವುದರ ಮೂಲಕ ನಿವಾರಸಿಕೊಳ್ಳಬೇಕು. ಕೆಮ್ಮು ಅಥವಾ ಸೀನು ಬಂದರೆ ಅಂಗೈಗಳ ಬದಲಿಗೆ ಮೊಣಕೈಯನ್ನು ಬಾಯಿ-ಮೂಗಿಗೆ ಅಡ್ಡಲಾಗಿ ಹಿಡಿಯಬೇಕು. ಕಾರಣವಿಲ್ಲದೆ ಕೈಗಳನ್ನು ಶ್ವಾಸಮಾರ್ಗದ ಬಳಿ ಒಯ್ಯಬಾರದು. ಕರೋನಾವೈರಸ್ ನಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದು ಎಷ್ಟು ಮುಖ್ಯವೋ, ಇತರರ ರಕ್ಷಣೆಯೂ ಅಷ್ಟೇ ಮುಖ್ಯ ಎಂಬುದನ್ನು ಮಂತ್ರದಂತೆ ಪಾಲಿಸಬೇಕು. ಇವನ್ನೆಲ್ಲಾ ಸರಿಯಾಗಿ ಪಾಲಿಸಿದರೆ ಮುಖಗವಸುಗಳ ಬಳಕೆ ಸಾಮಾನ್ಯ ಜನರಿಗೆ ಕಡ್ಡಾಯವಲ್ಲ. ಕರೋನಾವೈರಸ್ ಗೆ ಒಡ್ಡಿಕೊಳ್ಳುವ ಅವರವರ ವೈಯಕ್ತಿಕ ಅಪಾಯಕ್ಕೆ ಅನುಗುಣವಾಗಿ ಮುಖಗವಸುಗಳನ್ನು ಯಾರ್ಯಾರು ಬಳಸಬೇಕೆಂದು ನಿಮ್ಮ ವೈದ್ಯರು ಸೂಚಿಸುತ್ತಾರೆ. ಈ ನಿರ್ದೇಶನಗಳು ವಿಶ್ವ ಆರೋಗ್ಯ ಸಂಸ್ಥೆಯ ಜಾಲತಾಣದಲ್ಲಿವೆ. ಅದನ್ನು ಪಾಲಿಸಿದರೆ ಸಾಕು.

ಹಿಂದೆಂದೂ ಕಾಣದಂತಹ ಎಚ್ಚರಿಕೆಯ ಕ್ರಮಗಳನ್ನು ನಮ್ಮ ದೇಶ ಇಂದು ಪಾಲಿಸುತ್ತಿದೆ. ಸರ್ಕಾರದ ಕಟ್ಟುನಿಟ್ಟಿನ ಕ್ರಮಕ್ಕೆ ಜಾಗತಿಕ ಮನ್ನಣೆ ದೊರೆತಿದೆ. ಇದು ಎಲ್ಲರೂ ಸೇರಿ ಗೆಲ್ಲಬೇಕಾದ ಹೋರಾಟ. ನಮ್ಮ ನಡುವಿನ ಭಿನ್ನಾಭಿಪ್ರಾಯಗಳು ಏನೇ ಇದ್ದರೂ ಅದನ್ನು ಬದಿಗೆ ಸರಿಸಿ ಸರ್ಕಾರದ ಕ್ರಮಗಳ ಜೊತೆ ಕೈಜೋಡಿಸಬೇಕಾದ ಸಂದರ್ಭ ಈಗಿದೆ. ಒಂದು ರಾಷ್ಟ್ರವಾಗಿ, ಒಂದು ವಿಶ್ವವಾಗಿ ನಮ್ಮ ಒಗ್ಗಟ್ಟನ್ನು ಓರೆ ಹಚ್ಚುವ ಈ ಸಂದರ್ಭವನ್ನು ನಾವೆಲ್ಲರೂ ಒಮ್ಮತದಿಂದ ಜಯಿಸಬೇಕು. ಕರೋನಾವೈರಸ್ ಅನ್ನು ಗೆದ್ದ ನಂತರ ಮತ್ತೆ ಜಗಳ ಆಡುವುದಕ್ಕೆ ಸಾಕಷ್ಟು ಸಮಯ ದೊರೆಯಲಿದೆ!

ಮಾರ್ಚ್ ೨೧, ೨೦೨೦ರ ಹೊಸ ದಿಗಂತದಲ್ಲಿ ಪ್ರಕಟವಾದ ಲೇಖನದ ಸಂಪಾದಿತ ರೂಪ

Related Stories

No stories found.
logo
ಇಜ್ಞಾನ Ejnana
www.ejnana.com