೨೦೨೦ರ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ವಿಷಯ ಕೂಡ 'ವಿಜ್ಞಾನದಲ್ಲಿ ಮಹಿಳೆಯರು' ಎಂದೇ ಇತ್ತು
೨೦೨೦ರ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ವಿಷಯ ಕೂಡ 'ವಿಜ್ಞಾನದಲ್ಲಿ ಮಹಿಳೆಯರು' ಎಂದೇ ಇತ್ತುImage by mohamed Hassan from Pixabay

ಮಹಿಳಾದಿನ ವಿಶೇಷ: ಹನ್ನೊಂದು ಮಹಿಳಾಮಣಿ-ಮಾಲೆ!

ಈ ವರ್ಷ ರಾಷ್ಟ್ರೀಯ ವಿಜ್ಞಾನ ದಿನದಂದು, ದೇಶಾದ್ಯಂತ ಅನೇಕ ಸಂಸ್ಥೆಗಳಲ್ಲಿ ೧೧ ಹಿರಿಯ ಮಹಿಳಾ ವಿಜ್ಞಾನಿಗಳ ಹೆಸರಲ್ಲಿ ಮಹಿಳೆಯರಿಗಾಗಿಯೇ ಮೀಸಲಾದ ಅಧ್ಯಯನ ಪೀಠಗಳ ಸ್ಥಾಪನೆಯ ನಿರ್ಧಾರವನ್ನು ಪ್ರಕಟಿಸಲಾಗಿದೆ

ಈ ವರ್ಷದ ವಿಶೇಷ ಏನು ಅಂದ್ರೆ ಇದು ಲೀಪ್ ಇಯರ್ - ಅಧಿಕ ವರ್ಷ ಅಂತೀರಾ? ಈ ವರ್ಷ ಮತ್ತೊಂದು ವಿಶೇಷವಿದೆ! ಈ ವರ್ಷದ ಮಹಿಳಾ ದಿನಾಚರಣೆ ಮಾರ್ಚ್ ೮ರ ಬದಲು ಫೆಬ್ರವರಿ ೨೮ಕ್ಕೇ ಆಚರಿಸಲಾಗಿದೆ! ಅಂದು ರಾಷ್ಟ್ರೀಯ ವಿಜ್ಞಾನ ದಿನ ಅಂದುಕೊಂಡ್ರಾ? ನಿಮ್ಮ ಅನಿಸಿಕೆ ಸರಿಯಾಗಿಯೇ ಇದೆ. ಆದರೆ, ಈ ವರ್ಷ ರಾಷ್ಟ್ರೀಯ ವಿಜ್ಞಾನ ದಿನದಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಒಂದು ಪ್ರಮುಖ ನಿರ್ಧಾರ ಪ್ರಕಟವಾಯ್ತು. ದೇಶಾದ್ಯಂತ ಅನೇಕ ಸಂಸ್ಥೆಗಳಲ್ಲಿ ೧೧ ಹಿರಿಯ ಮಹಿಳಾ ವಿಜ್ಞಾನಿಗಳ ಹೆಸರಲ್ಲಿ ಮಹಿಳೆಯರಿಗಾಗಿಯೇ ಮೀಸಲಾದ ಅಧ್ಯಯನ ಪೀಠಗಳನ್ನು ಸ್ಥಾಪಿಸಲಾಯ್ತು. ಇದು ನಿಜಾರ್ಥದಲ್ಲಿ ಮಹಿಳೆಯರ ಸಾಧನೆಗಳ, ಮಹಿಳೆಯರ ಸಾಮರ್ಥ್ಯದ, ಮಹಿಳೆಯರ ವೈಶಿಷ್ಟ್ಯದ ಆಚರಣೆ. ಹಾಗಾಗಿ, ಮಹಿಳಾ ದಿನಕ್ಕಿಂತಲೂ ಮೊದಲೇ ಆಚರಣೆ ಪ್ರಾರಂಭವಾಗಿದೆ ಅಲ್ವೇ?

ಇತ್ತೀಚಿನ ವರ್ಷಗಳಲ್ಲಿ ಲಿಂಗಾಧಾರಿತ ತಾರತಮ್ಯ ಅತ್ಯಂತ ಕಡಿಮೆಯೆಂದೇ ಹೇಳಬಹುದು. ಹೆಣ್ಣು - ಗಂಡು ಇಬ್ಬರಿಗೂ ವಿದ್ಯಾಭ್ಯಾಸ ಹಾಗೂ ವೃತ್ತಿಯಲ್ಲಿ ಸಾಮಾಜಿಕ ಸಮಾನತೆ ಕಂಡುಬರುತ್ತಿದೆ. ಆದರೆ, ಈ ೧೧ ಮಹಿಳಾ ವಿಜ್ಞಾನಿಗಳು ತಮ್ಮ ವಿದ್ಯಾಭ್ಯಾಸದ ಕನಸನ್ನು ಸಾಕಾರಗೊಳಿಸಿಕೊಂಡಿದ್ದೇ ಮೊದಲ ಅಚ್ಚರಿ. ನಂತರ ಸ್ನಾತಕೋತ್ತರ ಪದವಿ ಪಡೆದು, ತಮ್ಮ ಕ್ಷೇತ್ರದಲ್ಲಿ ಹಿಂದೆಂದೂ ಕಾಣದ ಸಾಧನೆಮಾಡಿದ್ದು ಗಮನಿಸಿದರೆ ಪವಾಡಸದೃಶವೇ ಅನ್ನಿಸುತ್ತೆ! ಇಂತಹ ಸಾಧಕಿಯರ ಕಿರು ಪರಿಚಯ ಇಲ್ಲಿದೆ.

ಹನ್ನೊಂದು ಮಹಿಳಾಮಣಿಯರು: ಅಸೀಮಾ ಚಟರ್ಜಿ, ರಾಜೇಶ್ವರಿ ಚಟರ್ಜಿ, ಅರ್ಚನಾ ಶರ್ಮ, ಜಾನಕಿ ಅಮ್ಮಾಳ್, ಆನ್ನಾ ಮಣಿ, ಇರಾವತಿ ಕರ್ವೆ, ಪರಿಮಳಾ ರಾಮನ್, ಬಿಭಾ ಚೌಧರಿ, ಕದಂಬಿನಿ ಗಂಗೂಲಿ, ಕಮಲ್ ರಣದಿವೆ, ದರ್ಶನ್ ರಂಗನಾಥನ್
ಹನ್ನೊಂದು ಮಹಿಳಾಮಣಿಯರು: ಅಸೀಮಾ ಚಟರ್ಜಿ, ರಾಜೇಶ್ವರಿ ಚಟರ್ಜಿ, ಅರ್ಚನಾ ಶರ್ಮ, ಜಾನಕಿ ಅಮ್ಮಾಳ್, ಆನ್ನಾ ಮಣಿ, ಇರಾವತಿ ಕರ್ವೆ, ಪರಿಮಳಾ ರಾಮನ್, ಬಿಭಾ ಚೌಧರಿ, ಕದಂಬಿನಿ ಗಂಗೂಲಿ, ಕಮಲ್ ರಣದಿವೆ, ದರ್ಶನ್ ರಂಗನಾಥನ್ಲೇಖಕರ ಸಂಗ್ರಹದಿಂದ

ಜಾನಕಿ ಅಮ್ಮಾಳ್

ಕೇರಳದ ತೆಲ್ಲಿಚೇರಿಯ ಮದ್ಯಮವರ್ಗದ ಕುಟುಂಬದಲ್ಲಿ ಜನಿಸಿದ ಜಾನಕಿಯವರು ತಮ್ಮ ಪದವಿಯವರೆಗಿನ ಶಿಕ್ಷಣವನ್ನು ದಕ್ಷಿಣಭಾರತದ ವಿವಿಧೆಡೆ ನಡೆಸಿ, ನಂತರ ಮಿಶಿಗನ್ ವಿಶ್ವವಿದ್ಯಾಲಯದಲ್ಲಿ ತಮಗೆ ಅತ್ಯಂತ ಪ್ರಿಯವಾದ ವಿಷಯವಾದ ಸಸ್ಯವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಇವರು ಕೋಶವಿಜ್ಞಾನ (ಸೈಟಾಲಜಿ) ಅದರಲ್ಲೂ ತಳೀಯ ವಿಜ್ಞಾನದಲ್ಲಿ ಪರಿಣತಿವುಳ್ಳವರಾಗಿದ್ದು ಕಬ್ಬು, ಬದನೆಕಾಯಿಯಂತಹ ಸಸ್ಯಗಳಲ್ಲಿ ತಳೀಯ ಬದಲಾವಣೆಗಳನ್ನು ಮಾಡಿ ಸೈ ಎನಿಸಿಕೊಂಡಿದ್ದರು. ಇವರು ರಚಿಸಿದ ಕ್ರೋಮೋಸೋಮ್ ಅಟ್ಲಾಸ್ ಆಫ್ ಕಲ್ಟಿವೇಟೆಡ್ ಪ್ಲಾಂಟ್ಸ್ ಇಂದಿಗೂ ಸಸ್ಯವಿಜ್ಞಾನ - ತಳಿವಿಜ್ಞಾನದ ಭಗವದ್ಗೀತೆ ಎನಿಸಿಕೊಂಡಿದೆ.

ದರ್ಶನ್ ರಂಗನಾಥನ್

ದೆಹಲಿಯಲ್ಲಿ ಹುಟ್ಟಿ ಬೆಳೆದ ದರ್ಶನ್ ಅವರು ದೆಹಲಿ ವಿಶ್ವವಿದ್ಯಾಲಯದಿಂದ ರಸಾಯನವಿಜ್ಞಾನದಲ್ಲಿ ಪಿ.ಎಚ್ಡಿ ಪದವಿ ಪಡೆದರು. ಕಾನ್ಪುರದ ಐಐಟಿಯಲ್ಲಿ ತಮ್ಮ ಸಂಶೋಧನೆ ನಡೆಸಿದ ದರ್ಶನ್ ಅವರು, ಜೀವರಸಾಯನವಿಜ್ಞಾನಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ನೈಸರ್ಗಿಕವಾಗಿ ನಡೆಯುವ ಜೀವರಾಸಾಯನಿಕ ಕ್ರಿಯೆಗಳನ್ನು ಪ್ರಯೋಗಾಲಯದಲ್ಲಿ ಕೃತಕವಾಗಿ ವಿನ್ಯಾಸಗೊಳಿಸಿ ಸೃಷ್ಟಿಸುವಲ್ಲಿ ಇವರು ವಿಶೇಷ ಆಸಕ್ತಿಯುಳ್ಳವರಾಗಿದ್ದರು. 'ಪ್ರೋಟೀನ್ ಫೋಲ್ಡಿಂಗ್' - ಇದಕ್ಕೆ ಸಂಬಂಧಿತ ಅನೇಕ ನ್ಯಾನೋಶ್ರೇಣಿಯ ಘಟಕಗಳನ್ನು ಸಿದ್ಧಪಡಿಸುವಲ್ಲಿ ಇವರು ಪರಿಣಿತರಾಗಿದ್ದರು.

ಕದಂಬಿನಿ ಗಂಗೂಲಿ

ಭಾರತ ಕಂಡ ಮೊದಲ ವೈದ್ಯೆ ಇವರು. ಭಾರತವೇ ಏಕೆ ದಕ್ಷಿಣ ಏಷ್ಯಾ ಮತ್ತು ಆಗಿನ ಬ್ರಿಟೀಷ್ ಸಾಮ್ರಾಜ್ಯದಲ್ಲಿನ ಮೊದಲ ಇಬ್ಬರು ಮಹಿಳಾ ವೈದ್ಯರಲ್ಲಿ ಇವರೂ ಒಬ್ಬರು. ಆಧುನಿಕ ವೈದ್ಯಕೀಯ ವಿಜ್ಞಾನವನ್ನು ಅಭ್ಯಸಿಸಿದ ಕದಂಬಿನಿಯವರು ತಾವು ಹೋದಲ್ಲೆಲ್ಲಾ ಮಹಿಳೆ ಎಂಬ ಕಾರಣಕ್ಕೆ ತಾರತಮ್ಯ ಅನುಭವಿಸಿ, ಅದನ್ನು ಎದುರಿಸಿ ನಿಂತು ಗೆದ್ದುಬಂದವರು. ಇವರು ಪರಿಣಿತ ವೈದ್ಯೆಯಷ್ಟೇ ಅಲ್ಲದೇ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಸಕ್ರಿಯವಾಗಿ ಭಾಗವಹಿಸಿ, ನಂತರ ಬಂಗಾಳದ ವಿಭಜನೆಯ ಸಂದರ್ಭದಲ್ಲಿ ಮಹಿಳಾ ಗಣಿ ಕಾರ್ಮಿಕರ ಪರಿಸ್ಥತಿಯನ್ನು ಉತ್ತಮ ಪಡಿಸಲು ಅತ್ಯಂತ ಕಳಕಳಿಯಿಂದ ಹೋರಾಡಿದ ದಿಟ್ಟ ಮಹಿಳೆ.

ಆನ್ನಾ ಮಣಿ

ಕೇರಳದ ಮೇಲ್ವರ್ಗದ ಕ್ರಿಶ್ಚಿಯನ್ ತುಂಬುಕುಟುಂಬದಲ್ಲಿ ಜನಿಸಿದ ಆನ್ನಾ ಅವರು, ತಮ್ಮ ಕುಟುಂಬದ ಇಚ್ಛೆಗೆ ವಿರುದ್ಧವಾಗಿ, ಮದುವೆಗೆ ತಯಾರಾಗುವ ಬದಲು ವಿದ್ಯಾಭ್ಯಾಸಕ್ಕೆ ತಯಾರಾದರು. ಚಿಕ್ಕಂದಿನಲ್ಲೇ ಹುಟ್ಟುಹಬ್ಬಕ್ಕೆ ವಜ್ರದ ಓಲೆಯ ಬದಲಿಗೆ ಬ್ರಿಟಾನಿಕಾ ವಿಶ್ವಕೋಶ ಬೇಕೆಂದು ಹಟಹಿಡಿದ ಈ ವಿಜ್ಞಾನಾಸಕ್ತೆ, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಮತ್ತು ಲಂಡನ್‌ನ ಇಂಪೀರಿಯಲ್ ಕಾಲೇಜಿನಲ್ಲಿ ಭೌತವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಹವಾಮಾನವಿಜ್ಞಾನದಲ್ಲಿ ಆಸಕ್ತಿಯಿದ್ದ ಆನ್ನಾ ಅವರು ಆ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ನೂರಾರು ವೈಜ್ಞಾನಿಕ ಸಲಕರಣೆಗಳ ಪ್ರಮಾಣೀಕೃತ ಚಿತ್ರಗಳನ್ನು ರಚಿಸಿ, ಗಾಳಿಯ ಶಕ್ತಿ ಹಾಗೂ ಸೌರ ಶಕ್ತಿಯ ಮಾಪನ ಮಾಡುವುದು ಹೇಗೆ ಎಂಬುದನ್ನು ಅನೇಕ ಕಾರ್‍ಯಾಗಾರಗಳ ಮೂಲಕ ವಿಜ್ಞಾನಾಸಕ್ತರಿಗೆ ತಿಳಿಸಿದರು. ಅಷ್ಟೇ ಅಲ್ಲದೇ, ಓಝೋನ್ ಮಾಪನಕ್ಕಾಗಿ ವಿಶೇಷ ಉಪಕರಣವನ್ನೇ ವಿನ್ಯಾಸಗೊಳಿಸಿ ತಯಾರಿಸಿದರು.

ರಾಜೇಶ್ವರಿ ಚಟರ್ಜಿ

ದೇಶದ ಮೊಟ್ಟಮೊದಲ ಮಹಿಳಾ ಇಂಜಿನಿಯರ್ ಆದ ರಾಜೇಶ್ವರಿಯವರು ಹೆಮ್ಮೆಯ ಕನ್ನಡತಿ ಎಂಬುದು ಗೊತ್ತಿತ್ತೇ? ನಂಜನಗೂಡಿನಲ್ಲಿ ಹುಟ್ಟಿ ಬೆಳೆದ ರಾಜೇಶ್ವರಿಯವರು ಸೆಂಟ್ರಲ್ ಕಾಲೇಜಿನಲ್ಲಿ ಬಿಎಸ್‌ಸಿ ಮತ್ತು ಎಂಎಸ್‌ಸಿ ಪದವಿ ಪಡೆದು, ನಂತರ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಸಂಶೋಧನೆ ಮುಂದುವರೆಸಲು ಅರ್ಜಿ ಹಾಕಿದರು. ಮೊಟ್ಟಮೊದಲ ಮಹಿಳಾ ಅಭ್ಯರ್ಥಿಯ ಅರ್ಜಿ ನೋಡಿ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ದೊಡ್ಡ ಚರ್ಚೆಯೇ ನಡೆದು, ಅಂತೂ ಇಂತು ಇವರಿಗೆ ಅವಕಾಶ ದೊರಕಿತಂತೆ. ನಂತರ ಮಿಶಿಗನ್ ವಿಶ್ವವಿದ್ಯಾಲಯದಲ್ಲೂ ತಮ್ಮ ಅಧ್ಯಯನ ಮುಂದುವರೆಸಿದರು. ಒಬ್ಬ ಗಣಿತಜ್ಞೆ ಹಾಗೂ ಎಲೆಕ್ಟ್ರಿಕಲ್ ಇಂಜಿನಿಯರ್ ಆಗಿ ಇವರು ನೀಡಿದ ಕೊಡುಗೆ ಅಪಾರ. ಬಾಹ್ಯಾಕಾಶನೌಕೆ ಮತ್ತು ವಿಮಾನಗಳಲ್ಲಿ ಬಳಸುವ ಆಂಟೆನಾಗಳ ಬಗ್ಗೆ ಇವರ ಸಂಶೋಧನೆ ಬಹುಮುಖ್ಯವಾದದ್ದು. ಇವರು ಇವರ ಪತಿ ಸಿಸಿರ್ ಕುಮಾರ್ ಚಟರ್ಜಿಯವರೊಡನೆ ಮೊಟ್ಟಮೊದಲ ಮೈಕ್ರೋವೇವ್ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿದರು.

ಪರಿಮಳಾ ರಾಮನ್

ವಿಶ್ವವಿಖ್ಯಾತ ಗಣಿತಜ್ಞೆ ಪರಿಮಳಾ ಅವರು ತಮಿಳ್ನಾಡಿನಲ್ಲಿ ಹುಟ್ಟಿ ಬೆಳೆದು, ಮದರಾಸ್ ವಿಶ್ವವಿದ್ಯಾಲಯದಿಂದ ಎಂಎಸ್‌ಸಿ ಪದವಿ ಪಡೆದರು; ನಂತರ ಮುಂಬೈ ವಿಶ್ವವಿದ್ಯಾಲಯದಿಂದ ಗಣಿತದಲ್ಲಿ ಪಿ.ಎಚ್ಡಿ ಪದವಿ ಪಡೆದರು. ಬೀಜಗಣಿತದಲ್ಲಿ ಅಪಾರ ಸಂಶೋಧನೆ ನಡೆಸಿರುವ ಪರಿಮಳಾ ಅವರು ಅಟ್ಲಾಂಟಾದ ಎಮೊರಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೂ ಮೊದಲು ಮುಂಬೈಯಲ್ಲಿರುವ ಟಾಟಾ ಮೂಲಭೂತ ಸಂಶೋಧನಾ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸಿದ್ದಾರೆ. ಅನೇಕ ಬಾರಿ ತಮ್ಮ ಸಂಶೋಧನೆಗಳ ಮೂಲಕ, ಸಂಖ್ಯಾ ಸಿದ್ಧಾಂತ ಮತ್ತು ಬೀಜಗಣಿತ - ರೇಖಾಗಣಿತದ ಸಂಯೋಜನೆಯ ಪರಿಣಿತಿಯಿಂದ ಅಚ್ಚರಿದಾಯಕ ಫಲಿತಾಂಶಗಳನ್ನು ನೀಡಿ ಗಣಿತ ಲೋಕದ ದಿಗ್ಗಜರಲ್ಲೇ ವಿಸ್ಮಯ ಹುಟ್ಟಿಸಿದ್ದಾರೆ.

ಅರ್ಚನಾ ಶರ್ಮ

ಪುಣೆಯ ಶಿಕ್ಷಣತಜ್ಞರ ಕುಟುಂಬದಲ್ಲಿ ಜನಿಸಿದ ಅರ್ಚನಾ ಅವರು ತಮ್ಮ ಪ್ರಿಯವಾದ ವಿಷಯ ಸಸ್ಯವಿಜ್ಞಾನದಲ್ಲಿ ಎಂಎಸ್‌ಸಿ ಮತ್ತು ಡಿಎಸ್‌ಸಿ ಪದವಿಗಳನ್ನು ಕಲ್ಕತ್ತಾ ವಿಶ್ವವಿದ್ಯಾಲಯದಿಂದ ಪಡೆದರು. ಡಾಕ್ಟರ್ ಆಫ್ ಸೈನ್ಸ್ ಪದವಿಯನ್ನು ಪಡೆದ ಎರಡನೆಯ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆ ಇವರದ್ದು. ಸಸ್ಯವಿಜ್ಞಾನದಲ್ಲಿ, ಅದರಲ್ಲೂ ವಿಶೇಷವಾಗಿ ಹೂಬಿಡುವ ಗಿಡಗಳ ವರ್ಗೀಕರಣ, ಕೋಶವಿಭಜನೆಯಲ್ಲಿ ಬೀಜಾಣುವಿನ ವಿಭಜನೆಯ ಆರಂಭ, ನೀರಿನಲ್ಲಿ ಆರ್ಸೆನಿಕ್‌ನ ಪರಿಣಾಮ ಮುಂತಾದ ವಿಷಯಗಳ ಬಗ್ಗೆ ಆಳವಾದ ಅಧ್ಯಯನ ನಡೆಸಿ ಸಸ್ಯವಿಜ್ಞಾನ ಕ್ಷೇತ್ರಕ್ಕೆ ಪ್ರಮುಖ ಕೊಡುಗೆ ನೀಡಿದರು. ಭಾರತೀಯ ಕೋಶವಿಜ್ಞಾನದ ಪಿತಾಮಹ ಎನಿಸಿಕೊಂಡಿದ್ದ ಅರುಣ್ ಕುಮಾರ್ ಶರ್ಮ ಅವರನ್ನು ವಿವಾಹವಾದ ಅರ್ಚನಾ ಅವರು ವರ್ಣತಂತುಗಳಿಗೆ ಸಂಬಂಧಿಸಿದಂತೆ ವಿಜ್ಞಾನ ಕ್ಷೇತ್ರಕ್ಕೆ ನೀಡಿದ ಕೊಡುಗೆಯ ಗೌರವಾರ್ಥವಾಗಿ ಪದ್ಮಭೂಷಣ ಪ್ರಶಸ್ತಿಯೂ ಸೇರಿದಂತೆ ಅನೇಕ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.

ಅಸೀಮಾ ಚಟರ್ಜಿ

ಇಂಗಾಲಯುಕ್ತ ಪದಾರ್ಥಗಳ ಅಧ್ಯಯನಕ್ಕಾಗಿ ಇರುವ ರಸಾಯನವಿಜ್ಞಾನದ ಶಾಖೆಯಾದ ಕಾರ್ಬನಿಕ ರಸಾಯನವಿಜ್ಞಾನದಲ್ಲಿ ಅಸೀಮಾ ಅವರದ್ದು ವಿಶೇಷ ಪರಿಣಿತಿ. ಕಲ್ಕತ್ತಾದಲ್ಲಿ ಜನಿಸಿದ ಅಸೀಮಾ ಅವರು ಅಲ್ಲಿಯೇ ತಮ್ಮ ಶಾಲಾ ಶಿಕ್ಷಣವನ್ನು ಮುಗಿಸಿ, ಕಲ್ಕತ್ತಾ ವಿಶ್ವವಿದ್ಯಾಲಯದಿಂದ ರಸಾಯನವಿಜ್ಞಾನದಲ್ಲಿ ಆನರ್ಸ್ ಪದವಿ ಪಡೆದರು. ನಂತರ ಆರ್ಗ್ಯಾನಿಕ್ ಕೆಮಿಸ್ಟ್ರಿಯಲ್ಲಿ ಸಂಶೋಧನೆಯನ್ನು ಪ್ರಾರಂಭಿಸಿ, ಪಿ.ಎಚ್ಡಿ ಪದವಿ ಪಡೆದರು. ಭಾರತೀಯ ವಿಶ್ವವಿದ್ಯಾಲಯವೊಂದು ಮೊದಲ ಬಾರಿಗೆ ನೀಡಿದ ಡಾಕ್ಟರೇಟ್ ಪದವಿಯನ್ನು ಪಡೆದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಭಾರತೀಯ ಔಷಧೀಯ ಸಸ್ಯಗಳಿಂದ ಉತ್ಪಾದನೆ ಮಾಡಬಹುದಾದ ರಾಸಾಯನಿಕಗಳ ಬಗ್ಗೆ ಅಧ್ಯಯನ ನಡೆಸಿದ ಇವರು, ಮಲೇರಿಯಾ, ಅಪಸ್ಮಾರದಂತಹ ಅಪಾಯಕಾರಿ ರೋಗಗಳ ವಿರುದ್ಧ ಔಷಧಿ ತಯಾರಿಕೆಯಲ್ಲಿ ಪ್ರಮುಖ ಪಾತ್ರವಹಿಸಿದರು. ಸುಮಾರು ೫೦ ವರ್ಷಗಳ ಕಾಲ ಆಲ್ಕಲಾಯ್ಡ್‌ಗಳ ರಾಸಾಂiiನಿಕ ಮತ್ತು ಔಷಧೀಯ ಗುಣಗಳ ಬಗ್ಗೆ ಇವರು ನಡೆಸಿದ ಸಂಶೋಧನೆಯ ಕಾರಣದಿಂದಲೇ, ಇಂದು ಕೀಮೋಥೆರಪಿಯಲ್ಲಿ ಆಲ್ಕಲಾಯ್ಡ್ ಬಳಕೆ ನಡೆದಿದೆ ಮತ್ತು ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಲಕ್ಷಾಂತರ ಜನರು ಜಯದ ಮುಗುಳ್ನಗೆ ಬೀರಲು ಸಾಧ್ಯವಾಗುತ್ತಿದೆ.

ಇರಾವತಿ ಕರ್ವೆ

ಮಾನವಶಾಸ್ತ್ರವಿನ್ನೂ ಶೈಶವಾವಸ್ಥೆಯಲ್ಲಿರುವಾಗಲೇ ಅದರಲ್ಲಿ ಆಳವಾದ ಅಧ್ಯಯನ ಮಾಡಿದ ಮೊದಲ ಭಾರತೀಯ ಮಹಿಳೆಯೇ ಇರಾವತಿ ಕರ್ವೆಯವರು; ಮ್ಯಾನ್ಮಾರ್‌ನಲ್ಲಿ ಹುಟ್ಟಿ ಪುಣೆಯಲ್ಲಿ ವಿದ್ಯಾಭ್ಯಾಸ ಮಾಡಿದ ಇರಾವತಿಯವರು ತಮ್ಮ ಕುಟುಂಬದ ಪೂರ್ವಜರಾದ ಚಿತ್ಪಾವನ ಬ್ರಾಹ್ಮಣರ ಬಗ್ಗೆ ಸಂಶೋಧನೆ ಕೈಗೊಂಡು, ಮುಂಬಯಿ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದರು. ಜರ್ಮನಿಗೆ ತೆರಳಿ ಮಾನವಶಾಸ್ತ್ರ(ಈಗ ಮಾನವವಿಜ್ಞಾನ)ದಲ್ಲಿ ಡಾಕ್ಟರೇಟ್ ಪದವಿ ಪಡೆದ ಮೊದಲಿಗರು. ಭಾರತೀಯ ಮತ್ತು ಜರ್ಮನಿಯ ಸಂಸ್ಖೃತಿಯ ಹಿನ್ನೆಲೆಯಲ್ಲಿ ಪಳೆಯುಳಿಕೆಗಳ ಅಧ್ಯಯನ, ಮಾನವ ದೇಹದಲ್ಲಿನ ದ್ರವಗಳ ಅಧ್ಯಯನ ಮತ್ತು ದೇಶದ ಉದ್ದಗಲಕ್ಕೂ ಮಾನವನ ಶರೀರವಿಜ್ಞಾನದಲ್ಲಿರುವ ವ್ಯತ್ಯಾಸಗಳು - ಇವುಗಳ ಬಗ್ಗೆ ಅಧ್ಯಯನ ನಡೆಸಿ ಅನೇಕ ಸಿದ್ಧಾಂತಗಳನ್ನು ಪ್ರತಿಪಾದಿಸಿದರು ಮತ್ತು ಸಾಬೀತುಪಡಿಸಿದರು ಎಂಬುದು ಇವರು ವಿಜ್ಞಾನಕ್ಕೆ ನೀಡಿದ ಕೊಡುಗೆಗೆ ಹಿಡಿದ ಕನ್ನಡಿಯಾಗಿದೆ.

ಬಿಭಾ ಚೌಧರಿ

ಕಲ್ಕತ್ತಾದ ಕುವರಿ ಬಿಭಾ ಅವರು ತಮ್ಮ ನೆಚ್ಚಿನ ವಿಷಯವಾದ ಭೌತವಿಜ್ಞಾನದಲ್ಲಿ ಎಂಎಸ್‌ಸಿ ಮುಗಿಸಿದ ಏಕೈಕ ಭಾರತೀಯ ಮಹಿಳೆ ಎಂದು ೧೯೩೬ರಲ್ಲಿ ಮನೆಮಾತಾಗಿದ್ದರು! ವೈದ್ಯ ತಂದೆಯ ಮಗಳಾಗಿ ಮೊದಲಿನಿಂದಲೂ ವಿದ್ಯಾಭ್ಯಾಸದಲ್ಲಿ ಹೆಚ್ಚು ಆಸಕ್ತಿಯಿದ್ದ ಬಿಭಾ ಅವರು ಮ್ಯಾನ್‌ಚೆಸ್ಟರ್ ವಿಶ್ವವಿದ್ಯಾಲಯದಿಂದ ಪಿಎಚ್ಡಿ ಪದವಿ ಪಡೆದರು. ಕಾಸ್ಮಿಕ್ ತರಂಗಗಳ ಬಗ್ಗೆ ಅಧ್ಯಯನ ನಡೆಸಿದ್ದ ಇವರು, ದೇಬೇಂದ್ರ ಬೋಸ್ ಅವರೊಡನೆ ಸಂಶೋಧನೆ ನಡೆಸಿ 'ಬೊಸಾನ್'ಗಳ ಆವಿಷ್ಕಾರಕ್ಕೆ ಕಾರಣರಾದರು ಎಂಬುದು ಹಿಗ್ಗಿನ ವಿಷಯವೇ ಸರಿ. ಕೋಲಾರ್ ಚಿನ್ನದ ಗಣಿಗೆ ಸಂಬಂಧಿಸಿದಂತೆ ನಡೆಸಲಾದ ಸಂಶೋಧನೆಯಲ್ಲೂ ಇವರು ಪ್ರಮುಖ ಪಾತ್ರವಹಿಸಿದ್ದು, ನ್ಯೂಟ್ರಿನೋಗಳ ಆವಿಷ್ಕಾರದಲ್ಲೂ ಸಕ್ರಿಯವಾಗಿ ತಮ್ಮ ಕೊಡುಗೆ ನೀಡಿದ್ದಾರೆ. ಅಂತರಿಕ್ಷದಲ್ಲಿರುವ ಹಳದಿ ಕುಬ್ಜ ನಕ್ಷತ್ರ ಎಚ್‌ಡಿ ೮೬೦೮೧ಕ್ಕೆ ಇವರ ಗೌರವಾರ್ಥವಾಗಿ ಬಿಭಾ ಎಂದು ನಾಮಕರಣ ಮಾಡಲಾಗಿದೆ ಎಂಬುದು ಇವರ ವಿಜ್ಞಾನ ಕ್ಷೇತ್ರದ ಪಯಣಕ್ಕೊಂದು ಮುನ್ನುಡಿಯಷ್ಟೇ!

ಕಮಲ್ ರಣದಿವೆ

ಪುಣೆಯ ಜೀವವಿಜ್ಞಾನಿಯ ಮಗಳಾದ ಕಮಲ್, ಸಹಜವಾಗಿ ಜೀವವಿಜ್ಞಾನದಲ್ಲಿ ಆಸಕ್ತಿಯುಳ್ಳವರಾಗಿ ಬೆಳೆದರು. ಮುಂಬೈ ವಿಶ್ವವಿದ್ಯಾಲಯದಿಂದ ಜೀವವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದ ಕಮಲ್‌ಅವರು, ಬಾಲ್ಟಿಮೋರ್‌ನ ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದಲ್ಲಿ ತಮ್ಮ ಸಂಶೋಧನೆಯನ್ನು ಮುಂದುವರೆಸಿದರು. ಜೀವವಿಜ್ಞಾನಕ್ಕೆ ಅದರಲ್ಲೂ ಕ್ಯಾನ್ಸರ್ ಸಂಬಂಧೀ ಸಂಶೋಧನಾ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವ ಇವರು, ಮುಂಬೈಯಲ್ಲಿ ಭಾರತದ ಮೊದಲ ಅಂಗಾಂಶ ಕೃಷಿ ಪ್ರಯೋಗಾಲಯವನ್ನು ಸ್ಥಾಪಿಸಿದರು. ಕ್ಯಾನ್ಸರ್‌ಅನ್ನು ತಳೀಯ ನೆಲೆಗಟ್ಟಿನಲ್ಲಿ ಅರ್ಥೈಸಿಕೊಂಡು ಸ್ಥನ ಕ್ಯಾನ್ಸರ್, ಲ್ಯೂಕೇಮಿಯದಂತಹ ರೋಗಸ್ಥಿತಿಗಳಿಗೆ ಕಾರಣಗಳೇನು ಎಂಬುದನ್ನು ಕಂಡುಕೊಂಡರು. ಇದೇ ವಿಷಯವಾಗಿ ಅನೇಕ ಸಂಶೋಧನೆಗಳನ್ನು ಕೈಗೊಂಡು, ಯಶಸ್ವಿಯಾಗಿ ಕ್ಯಾನ್ಸರ್ ರೋಗವನ್ನು ಕಂಡುಹಿಡಿಯಲು ಬೇಕಾದ ಗುಣಲಕ್ಷಣಗಳ ಬಗ್ಗೆ ಹೊಸ ಹೊಳಹುಗಳನ್ನು ಜಗತ್ತಿಗೆ ನೀಡಿದರು; ಇದರ ಆಧಾರದ ಮೇಲೆ ಕ್ಯಾನ್ಸರ್ ಪತ್ತೆ ತ್ವರಿತವಾಗಿ ಆಗಲು ಸಾಧ್ಯವಾಯಿತು ಎಂಬುದನ್ನು ಜಗತ್ತು ಮರೆಯುವಂತಿಲ್ಲ.

ಇಂತಹ ಅನನ್ಯ ಮಹಿಳಾ ವಿಜ್ಞಾನಿಗಳ ಬಗ್ಗೆ ತಿಳಿದುಕೊಳ್ಳುತ್ತಾ ನಮಗರಿವಿಲ್ಲದಂತೆಯೇ ಅವರ ದಿಟ್ಟತನ, ಹಿಡಿದ ಕಾರ್ಯ ಸಂಪೂರ್ಣವಾಗುವವರೆಗೆ ಬಿಟ್ಟುಕೊಡದ ಛಲ, ಸಂಯಮ, ಇದ್ದ ಅವಕಾಶಗಳನ್ನು ಜಾಗರೂಕತೆಯಿಂದ ಬಳಸಿಕೊಂಡು ತಮ್ಮ ಕನಸನ್ನು ಸಾಕಾರಗೊಳಿಸಿಕೊಂಡಿದ್ದರ ಹಿಂದಿನ ಪ್ರಾಮಾಣಿಕ ಪ್ರಯತ್ನ - ಇವೆಲ್ಲ ಅದೆಷ್ಟು ಸ್ಫೂರ್ತಿ ತುಂಬುತ್ತದೆ ಅಲ್ಲವೇ? ಇವೆಲ್ಲವೂ ನಮ್ಮಲ್ಲೂ ಇದೆ. ಆದರೆ ನಮ್ಮಂತಹ ಮರಿಹುಳುಗಳು ಪೊರೆ ಹರಿದು ಚಿಟ್ಟೆಗಳಾಗಿ ಹೊರಬಂದು ಹಾರಬೇಕಷ್ಟೇ! ನಮ್ಮ ಕನಸುಗಳೂ ನನಸಾಗಬಲ್ಲವು ಎಂಬುದನ್ನು ನಾವು ಮನವರಿಕೆ ಮಾಡಿಕೊಳ್ಳುತ್ತಾ, ಹಿಂಜರಿಕೆಯನ್ನು ಹಿಮ್ಮೆಟ್ಟಿ, ನಮ್ಮ ಮಿತಿಗಳನ್ನು ದಾಟಿ, ಸತತ ಪ್ರಯತ್ನದಿಂದ ಗುರಿಯೆಡೆಗೆ ನಡೆದರೆ, ಆಗ ಅನುದಿನವೂ ಮಹಿಳಾದಿನವೇ, ಪ್ರತಿದಿನವೂ ಮಹಿಳೆಯ ಅನೂಹ್ಯ ಶಕ್ತಿಯ ಸಂಭ್ರಮಾಚರಣೆಯೇ!

Related Stories

No stories found.
logo
ಇಜ್ಞಾನ Ejnana
www.ejnana.com