ರೋಗದ ವಿರುದ್ಧ ನಮ್ಮಲ್ಲಿ ರೋಗರಕ್ಷೆ (ಇಮ್ಯೂನಿಟಿ) ಬೆಳೆಸುವುದು ಲಸಿಕೆಯ ಕೆಲಸ
ರೋಗದ ವಿರುದ್ಧ ನಮ್ಮಲ್ಲಿ ರೋಗರಕ್ಷೆ (ಇಮ್ಯೂನಿಟಿ) ಬೆಳೆಸುವುದು ಲಸಿಕೆಯ ಕೆಲಸImage by Wilfried Pohnke from Pixabay

ಕೋವಿಡ್-19 ಲಸಿಕೆಗಳ ಸುತ್ತಮುತ್ತ

ಈಗ ಕೆಲ ದಿನಗಳಿಂದ ಎಲ್ಲೆಲ್ಲೂ ಕೋವಿಡ್ಲ ಸಿಕೆಗಳದ್ದೇ ಮಾತು. ಈ ಲಸಿಕೆಗಳ ಸಹಾಯದಿಂದ, 2021ರಲ್ಲಿ ಪ್ರಪಂಚ ಕೋವಿಡ್-19ರಿಂದ ಮುಕ್ತವಾದರೆ ಎಲ್ಲರ ಶ್ರಮ ಸಾರ್ಥಕವಾದಂತೆ!

ಲಸಿಕೆ (ವ್ಯಾಕ್ಸಿನ್) ಎಂಬ ಹೆಸರು ನಮಗೆ ಹೊಸದೇನಲ್ಲ. ಮಗು ಹುಟ್ಟಿದಾಗಿನಿಂದಲೇ ಅದಕ್ಕೆ ಕಾಲಕಾಲಕ್ಕೆ ಲಸಿಕೆಗಳನ್ನು ನೀಡುವುದೂ ನಮಗೆ ಗೊತ್ತು.

ನಿರ್ದಿಷ್ಟ ರೋಗದ ವಿರುದ್ಧ ನಮ್ಮಲ್ಲಿ ರೋಗರಕ್ಷೆ (ಇಮ್ಯೂನಿಟಿ) ಬೆಳೆಸುವುದು ಅದಕ್ಕಾಗಿ ನೀಡಲಾಗುವ ಲಸಿಕೆಯ ಕೆಲಸ. ಈಗ ಕೆಲ ದಿನಗಳಿಂದ ಎಲ್ಲೆಲ್ಲೂ ಕೋವಿಡ್-19 ಲಸಿಕೆಗಳದ್ದೇ ಮಾತು ನಡೆದಿದೆ. ಇಷ್ಟೆಲ್ಲ ಸುದ್ದಿಮಾಡಿರುವ ಈ ಲಸಿಕೆಗಳ ಬಗ್ಗೆ ಸ್ವಲ್ಪ ವಿವರವಾದ ಮಾಹಿತಿ ಇಲ್ಲಿದೆ.

ಅಸ್ಟ್ರಾ-ಝೆನಕ ಕಂಪನಿಯ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ChAdOx1-S- nCoV-19 ಲಸಿಕೆ:

ಕರೊನಾವೈರಸ್ ಮೇಲ್ಮೈನ ಮುಳ್ಳಿನಂತಹ ರಚನೆಗೆ ಕಾರಣವಾಗುವ ಜೆನೆಟಿಕ್ ಮಾಹಿತಿಯನ್ನು ಜೆನೆಟಿಕ್ ರೂಪಾಂತರ ತಂತ್ರಜ್ಞಾನವನ್ನು ಉಪಯೋಗಿಸಿ, ಚಿಂಪಾಂಜಿಗಳಲ್ಲಿ ಶೀತ ಉಂಟುಮಾಡುವ ಒಂದು ವೈರಸ್ಸಿಗೆ ಉಣಿಸಲಾಗಿದೆ. ಶರೀರದ ಜೀವಕೋಶಗಳನ್ನು ಸೇರಿದಾಗ, ಕರೊನಾವೈರಸ್ ಮೇಲ್ಮೈನ ಮಾದರಿಯ ಮುಳ್ಳುಗಳನ್ನು ಕೋಶಗಳ ಮೇಲೆ ಉತ್ಪಾದಿಸುವ ಈ ಲಸಿಕೆ ನಮ್ಮ ರಕ್ಷಕ ವ್ಯವಸ್ಥೆಯನ್ನು ಪ್ರಚೋದಿಸಿ ಕರೊನಾವೈರಸ್ ವಿರುದ್ಧ ಸೆಣಸಾಡುವ ಶಕ್ತಿಯನ್ನು ನೀಡುತ್ತದೆ. ಲಸಿಕೆ ಪಡೆದಿರುವವರಲ್ಲಿ ಕೋವಿಡ್-19 ಸೋಂಕು ತಗುಲಿದರೆ, ಸೋಂಕು ತೀವ್ರವಾಗುವ ಮುನ್ನವೇ ರಕ್ಷಕ ವ್ಯವಸ್ಥೆ ಅದನ್ನು ನಿಗ್ರಹಿಸುತ್ತದೆ. ಝಿಕಾ ವೈರಸ್ ನಿಯಂತ್ರಣದಲ್ಲಿ ಈ ತಂತ್ರಜ್ಞಾನ ಈಗಾಗಲೇ ಫಲಕಾರಿಯಾಗಿದೆ. ಈ ಲಸಿಕೆಯ ಪರಿಣಾಮ ಶೇಕಡಾ 90 ಎನ್ನಲಾಗಿದೆ. ಈಗಾಗಲೇ ಲಭ್ಯವಿರುವ ತಂತ್ರಜ್ಞಾನ ಬಳಸಿರುವುದರಿಂದ ಈ ಲಸಿಕೆಯ ಬೆಲೆ ಅಗ್ಗ. ಈಗಾಗಲೇ ಲಭ್ಯವಿರುವ ಇತರ ಲಸಿಕೆಗಳ ಶೇಖರಣೆಯ ವ್ಯವಸ್ಥೆಯೇ ಈ ಲಸಿಕೆಗೂ ಸಾಕು. ಹೀಗಾಗಿ, ವ್ಯವಸ್ಥೆಗೆ ಖರ್ಚು ಹೆಚ್ಚಾಗುವುದಿಲ್ಲ.

ಫೈಝರ್ ಕಂಪನಿಯ BioNTech ಲಸಿಕೆ ಮತ್ತು ಅಮೆರಿಕನ್ ಬಯೊಟೆಕ್ ಕಂಪನಿಯ ಮೊಡೆರ್ನ ಲಸಿಕೆಗಳು:

ಈ ಲಸಿಕೆಗಳು ಆರ್.ಎನ್.ಎ ಆಧಾರಿತ. ಕೋವಿಡ್-19 ಆರ್.ಎನ್.ಎ ಎಂಬ ಜೀವದ್ರವ್ಯದ ಸಹಾಯದಿಂದ ತನ್ನ ಪುನರುತ್ಪತ್ತಿ ಮಾಡುತ್ತದೆ. ಕೋವಿಡ್-19ರ ಆರ್.ಎನ್.ಎ ರಚನೆಯನ್ನು ಕೃತಕವಾಗಿ ಪ್ರಯೋಗಾಲಯಗಳಲ್ಲಿ ನಿರ್ಮಾಣ ಮಾಡಿ, ಜಿಡ್ಡಿನ ಪದರ ಉಳ್ಳ ನ್ಯಾನೋಕೋಶಗಳಲ್ಲಿ ಹುದುಗಿಸಿ ಲಸಿಕೆಗಳನ್ನು ತಯಾರಿಸುತ್ತಾರೆ. ಇದನ್ನು ನೀಡಿದರೆ, ಲಸಿಕೆಗಳು ಜೀವಕೋಶಗಳಲ್ಲಿ ಸೇರಿ, ತಮ್ಮ ಒಳಗಿನ ಆರ್.ಎನ್.ಎ ಅನ್ನು ಕೋಶಗಳ ಒಳಗೆ ಇಳಿಸಿ, ಆ ಕೋಶಗಳಲ್ಲಿ ಕರೊನಾವೈರಸ್ ಮೇಲ್ಮೈನಂತಹ ಮುಳ್ಳುಗಳನ್ನು ಉತ್ಪಾದಿಸುತ್ತದೆ. ಮೇಲ್ನೋಟಕ್ಕೆ ಇಂತಹ ಕೋಶಗಳು ರಕ್ಷಕ ವ್ಯವಸ್ಥೆಗೆ ಕೋವಿಡ್-19 ಕೋಶಗಳ ರೀತಿಯಲ್ಲಿಯೇ ಕಾಣುತ್ತವೆ. ಹೀಗಾಗಿ, ಅವನ್ನು ಹಣಿಯಲು ರಕ್ಷಕ ವ್ಯವಸ್ಥೆ ಸಾಮಗ್ರಿಯನ್ನು ಸಿದ್ಧಮಾಡಿಕೊಳ್ಳುತ್ತವೆ. ಈ ರೀತಿ, ನಮ್ಮ ಸ್ವಂತ ಕೋಶಗಳೇ ನಮ್ಮ ರಕ್ಷಕ ವ್ಯವಸ್ಥೆಯನ್ನು ಪೂರ್ವಸನ್ನದ್ಧಗೊಳಿಸುತ್ತವೆ. ಒಂದು ವೇಳೆ ಅಸಲೀ ಕೋವಿಡ್-19 ವೈರಸ್ ಶರೀರಕ್ಕೆ ನುಗ್ಗಿದರೆ, ಅದನ್ನು ಸನ್ನದ್ಧ ರಕ್ಷಕ ವ್ಯವಸ್ಥೆ ಕೂಡಲೇ ನಾಶ ಮಾಡುತ್ತವೆ. ಈ ಲಸಿಕೆ ಶೇಕಡಾ 90-95 ಪರಿಣಾಮಕಾರಿ. ಇದು ನೂತನವಾದ ಆಧುನಿಕ ತಂತ್ರಜ್ಞಾನವಾದ್ದರಿಂದ ಲಸಿಕೆಯ ಬೆಲೆ ಹೆಚ್ಚು. ಅಲ್ಲದೇ, ಈ ಲಸಿಕೆಯ ಶೇಖರಣೆಗೆ ಬಹಳ ಕಡಿಮೆ ತಾಪಮಾನ ಬೇಕು. ಸದ್ಯದ ಲಸಿಕೆ ಶೇಖರಣೆಯ ವ್ಯವಸ್ಥೆ ಈ ಲಸಿಕೆಗೆ ಸಾಕಾಗುವುದಿಲ್ಲ. ಒಂದು ವೇಳೆ ಇದನ್ನು ವ್ಯಾಪಕವಾಗಿ ಬಳಸಲು ನಿರ್ಧರಿಸಿದರೆ, ಮೊದಲು ನಮ್ಮ ಲಸಿಕೆ ಶೇಖರಣೆಯ ವ್ಯವಸ್ಥೆಯನ್ನು ಸಾಕಷ್ಟು ಮೇಲಿನ ದರ್ಜೆಗೆ ಏರಿಸಬೇಕು. ಹೀಗಾಗಿ, ಇವುಗಳ ಆಯ್ಕೆಯಿಂದ ವ್ಯಾಪಕ ಲಸಿಕಾಕರಣ ತಡವಾಗಬಹುದು.

ಭಾರತ್ ಬಯೊಟೆಕ್ ಲಸಿಕೆ:

ಕಾಯಿಲೆಕಾರಕ ವೈರಸ್ಸನ್ನು ನಿಷ್ಕ್ರಿಯಗೊಳಿಸಿ, ಅದರ ರೋಗಕಾರಕ ಸಾಮರ್ಥ್ಯವನ್ನು ತೆಗೆದುಹಾಕಿ ಬಳಸುವ ಪ್ರಕ್ರಿಯೆ ಈಗಾಗಲೇ ಚಾಲ್ತಿಯಲ್ಲಿದೆ. ರೆಬೀಸ್ ಕಾಯಿಲೆಗೆ ನೀಡುವ ಲಸಿಕೆ ಇದೆ ತಂತ್ರಜ್ಞಾನದ್ದು. ಇಂತಹ ಲಸಿಕೆಗಳಲ್ಲಿ ನಿಷ್ಕ್ರಿಯ ವೈರಸ್ ಇರುವುದರಿಂದ, ಇದು ಶರೀರದ ಒಳಗೆ ಬೆಳೆಯುವುದಿಲ್ಲ. ಹಾಗಾಗಿ, ಇವುಗಳು ಕಾಯಿಲೆ ತರಲಾರವು, ಆದರೆ, ಇವುಗಳ ಬಳಕೆಯಿಂದ ಶರೀರದಲ್ಲಿ ಕಾಯಿಲೆಯ ವಿರುದ್ಧ ನಿರೋಧಕ ಸಾಮರ್ಥ್ಯ ಚುರುಕಾಗುತ್ತದೆ. ರೆಬೀಸ್ ಕಾಯಿಲೆಯ ಲಸಿಕೆಯಂತೆಯೇ, ಕೋವಿಡ್-19 ಕಾಯಿಲೆಗೆ ಕೂಡ ಈ ಮಾದರಿಯ ಲಸಿಕೆಯನ್ನು ಭಾರತ್ ಬಯೊಟೆಕ್ ತಯಾರಿಸಿ ಪರೀಕ್ಷೆ ಮಾಡುತ್ತಿದೆ. ಈ ಲಸಿಕೆಗಳ ಅತೀ ದೊಡ್ಡ ಲಾಭ ಎಂದರೆ ಇವುಗಳ ಸರಳ ಸಂಗ್ರಹಣೆ; ಈಗ ನಮ್ಮಲ್ಲಿ ಇರುವ ವ್ಯವಸ್ಥೆಯೇ ಸಾಕು. ಈ ಪ್ರಭೇದದ ಲಸಿಕೆ ಕೋವಿಡ್-19 ವಿರುದ್ಧ ರಕ್ಷಣೆ ನೀಡುವುದರಲ್ಲಿ ಸಫಲವಾದರೆ ನಮ್ಮ ದೇಶಕ್ಕೆ ದೊಡ್ಡ ಅಸ್ತ್ರ ದೊರೆತಂತೆ ಆಗುತ್ತದೆ.

ಬಯಾಲಾಜಿಕಲ್-ಇ ಸಂಸ್ಥೆಯ ಲಸಿಕೆ:

ಬಯಾಲಾಜಿಕಲ್-ಇ ಎಂಬ ಭಾರತೀಯ ಸಂಸ್ಥೆ ವಿಭಿನ್ನ ತಂತ್ರಜ್ಞಾನದ ಬಳಸಿದೆ. ಕೋವಿಡ್-19 ವೈರಸ್ಸಿನಲ್ಲಿ ಒಂದು ಪ್ರೊಟೀನ್ ಗೋಡೆಯಿದೆ. ಆ ಗೋಡೆಯ ವೈರಸ್ ನ ಆರ್.ಎನ್.ಎ ಜೀವದ್ರವ್ಯ ಇರುತ್ತದೆ. ಪ್ರೊಟೀನ್ ಗೋಡೆಯ ಹೊರಭಾಗದಲ್ಲಿ ತೆಳ್ಳನೆಯ ಜಿಡ್ಡಿನ ಪದರವಿದೆ. ಆರ್.ಎನ್.ಎ ಧಾತು, ಪ್ರೊಟೀನ್ ಗೋಡೆ ಮತ್ತು ಜಿಡ್ಡಿನ ಪದರ ಸೇರಿ ಕೋವಿಡ್-19 ವೈರಸ್ ಆಗುತ್ತದೆ. ಪ್ರೊಟೀನ್ ಗೋಡೆಯಲ್ಲಿನ ಒಂದು ಅಂಶವನ್ನು ಪ್ರತ್ಯೇಕಿಸಿ, ಆ ಅಂಶ ರಕ್ಷಕ ವ್ಯವಸ್ಥೆಯನ್ನು ಯಾವ ಪ್ರಮಾಣದಲ್ಲಿ ಉದ್ದೀಪನಗೊಳಿಸುತ್ತದೆ ಎಂದು ಪರೀಕ್ಷಿಸಬಹುದು. ಇಂತಹ ಹಲವಾರು ತುಣುಕುಗಳನ್ನು ಪ್ರತ್ಯೇಕವಾಗಿ ಪರೀಕ್ಷಿಸಿದ ನಂತರ, ಕೋವಿಡ್-19 ವೈರಸ್ ನ ಯಾವ ಪ್ರೊಟೀನ್ ತುಣುಕು ರಕ್ಷಕ ವ್ಯವಸ್ಥೆಯನ್ನು ಅತ್ಯಂತ ಸಫಲವಾಗಿ ಕೆಲಸ ಮಾಡಿಸುತ್ತದೆ ಎಂದು ಅರಿಯಬಹುದು, ಈ ಸಫಲ ತುಣುಕನ್ನು ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿ, ಅದರ ನಿಷ್ಕೃಷ್ಟ ರಚನೆಯನ್ನು ತಿಳಿಯಬಹುದು. ಅದೇ ರಚನೆ ಉಳ್ಳ ಪ್ರೊಟೀನ್ ತುಣುಕನ್ನು ಜೆನೆಟಿಕ್ ತಂತ್ರಜ್ಞಾನದ ಮೂಲಕ ಸೂಕ್ಷ್ಮಾಣುಜೀವಿಗಳನ್ನು ಬಳಸಿ ಪ್ರಯೋಗಾಲಯದಲ್ಲಿ ದೊಡ್ಡ ಸಂಖ್ಯೆಯಲ್ಲಿ ತಯಾರಿಸಬಹುದು. ಹೀಗೆ ತಯಾರಿಸಿದ ಪ್ರೊಟೀನ್ ತುಣುಕನ್ನು ಬಳಸಿ ರೋಗನಿರೋಧಕ ಶಕ್ತಿ ಬೆಳಸಬಲ್ಲ ಲಸಿಕೆಯನ್ನು ತಯಾರಿಸಿ ನೀಡಿದರೆ, ಕೋವಿಡ್-19 ವೈರಸ್ ಸೋಂಕಿನ ವಿರುದ್ದ ಹೊಡೆದಾಡಲು ನಮ್ಮ ಶರೀರದ ರಕ್ಷಕ ವ್ಯವಸ್ಥೆ ಸನ್ನದ್ಧವಾಗುತ್ತದೆ. ಈ ರೀತಿಯ ತಂತ್ರಜ್ಞಾನ ಈಗಾಗಲೇ ಚಾಲ್ತಿಯಲ್ಲಿ ಇರುವುದರಿಂದ, ಇದನ್ನು ಬೃಹತ್ ಮಟ್ಟದಲ್ಲಿ ತಯಾರಿಕೆ ಮಾಡುವುದು ಸುಲಭ.

ಇತರ ಲಸಿಕೆಗಳು:

ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಕೋವಿಡ್-19 ಲಸಿಕೆಯಂತಹ ತಂತ್ರಜ್ಞಾನವನ್ನೇ ರಷ್ಯಾ ದೇಶದ ಸ್ಪುತ್ನಿಕ್ ಲಸಿಕೆ ಮತ್ತು ನಮ್ಮ ದೇಶದ ಸೀರಮ್ ಇನ್ಸ್ಟಿಟ್ಯೂಟ್ ನ ಕೋವಿಶೀಲ್ಡ್ ಲಸಿಕೆಗಳು ಬಳಸುತ್ತಿವೆ. ವ್ಯತ್ಯಾಸ ಎಂದರೆ, ರಷ್ಯಾದ ಲಸಿಕೆ ಈ ಕೆಲಸಕ್ಕೆ ಅಡೆನೊವೈರಸ್ ಎಂಬ ವೈರಸ್ಸನ್ನು ಅವಲಂಬಿಸಿದೆ; ಸೀರಮ್ ಸಂಸ್ಥೆ ಹೆಪಟೈಟಿಸ್-ಬಿ ಎಂಬ ಯಕೃತ್ತಿನ ಸೋಂಕು ಉಂಟುಮಾಡುವ ವೈರಸ್ ಕೋಶದ ಬೆಂಬಲ ಪಡೆದಿದೆ. ಇವೆಗಳೆಲ್ಲಾ ನಿಷ್ಕ್ರಿಯ ವೈರಸ್ಸುಗಳು ಆಗಿರುವುದರಿಂದ ಶರೀರದ ಒಳಗೆ ಸೇರಿದಾಗ ಇವು ಸಂಖ್ಯೆಯಲ್ಲಿ ವೃದ್ಧಿಸಲಾರವು. ತಲಾ ಲಸಿಕೆಯ ಡೋಸ್ ನಲ್ಲಿ ಎಷ್ಟು ಪ್ರಮಾಣದ ವೈರಸ್ ಇರುತ್ತದೋ, ಅಷ್ಟು ಮಾತ್ರ ಕೆಲಸ ಮಾಡಬಲ್ಲವು. ಇದಕ್ಕೆ ಪ್ರತಿಯಾಗಿ, ಇಸ್ರೇಲ್ ದೇಶದ ಬಯಲಾಜಿಕಲ್ ರಿಸರ್ಚ್ ಸಂಸ್ಥೆ ತಯಾರಿಸುತ್ತಿರುವ ಲಸಿಕೆಯಲ್ಲಿ ಇರುವ ವೈರಸ್ ಕೋಶಗಳು ಶರೀರದ ಒಳಗೆ ಸೇರಿದಾಗ ಇನ್ನೂ ಜೀವಂತ ಇರುತ್ತವೆ. ಇವು ತಂತಾವೇ ಸಂಖ್ಯೆಯಲ್ಲಿ ವೃದ್ಧಿಸಬಲ್ಲವು.

ಒಟ್ಟಿನಲ್ಲಿ, 2021ರಲ್ಲಿ ಪ್ರಪಂಚ ಕೋವಿಡ್-19 ಮುಕ್ತವಾದರೆ ಎಲ್ಲರ ಶ್ರಮ ಸಾರ್ಥಕವಾದಂತೆ!

Related Stories

No stories found.
logo
ಇಜ್ಞಾನ Ejnana
www.ejnana.com