ಮಕ್ಕಳಿಗೆ ಕೋವಿಡ್-19: ಹೆದರಿಕೆ ಏಕೆ? ಅಂಜಿಕೆ ಬೇಕೆ?
“ಕೋವಿಡ್ ಕಾಯಿಲೆಯ ಮೂರನೆಯ ಅಲೆ ಬರುತ್ತದಂತೆ. ಅದು ಚಿಕ್ಕ ಮಕ್ಕಳಿಗೆ ಅಪಾಯಕಾರಿಯಂತೆ” ಎನ್ನುವ ಮಾತುಗಳನ್ನು ಕೇಳಿದ್ದೇವೆ. ಈ ಮಾತುಗಳ ವಾಸ್ತವ ಏನು?
ಎರಡನೆಯ ಅಲೆಯ ವೇಳೆ ಸಾಕಷ್ಟು ಮಕ್ಕಳು ಕೂಡ ಕಾಯಿಲೆಗೆ ಒಳಗಾದರು. ಅಂದರೆ, ಕೋವಿಡ್ ವೈರಸ್ ಗೆ ಯಾವುದೋ ಒಂದು ಮಿತಿಯ ವಯಸ್ಸಿನವರನ್ನೇ ಕಾಡಬೇಕು ಎಂಬ ಕಟ್ಟುನಿಟ್ಟು ಇರಲಿಲ್ಲ. ಮಕ್ಕಳ ವಿಷಯದಲ್ಲಿ ಜನರು ಗಾಬರಿಗೊಳ್ಳುವುದು ಸಹಜ. ಕಳೆದ ಮೇ ತಿಂಗಳ 22 ರಂದು ಭಾರತೀಯ ಶಿಶುವೈದ್ಯ ಅಕಾಡೆಮಿ ಈ ವಿಷಯವಾಗಿ ಸ್ಪಷ್ಟನೆ ನೀಡಿತು. ಅದರ ರೀತ್ಯಾ, ಮೂರನೆಯ ಅಲೆ ಬರುವ ಸಾಧ್ಯತೆ ಇದೆಯಾದರೂ, ಅದು ಬರಲೇಬೇಕೆಂದೇನೂ ಇಲ್ಲ. ಬಂದರೂ ನಿರ್ದಿಷ್ಟವಾಗಿ ಯಾವಾಗ ಬರಬಹುದು ಎಂಬ ಅಂದಾಜೂ ಇಲ್ಲ. ಹೀಗಾಗಿ “ಇಂತಹ ತಿಂಗಳ, ಇಂತಹ ತಾರೀಖಿಗೆ ಮೂರನೆಯ ಅಲೆ ಬರುತ್ತದೆ” ಎಂಬ ಮಾತುಗಳನ್ನು ಪರಿಗಣಿಸುವ ಅಗತ್ಯ ಇಲ್ಲ.
ಅಂಕಿ-ಅಂಶಗಳನ್ನು ನೋಡಿದರೆ, ಮೊದಲ ಅಲೆಯಲ್ಲಿ ವೃದ್ಧರು ಹೆಚ್ಚು ತೊಂದರೆಗೆ ಒಳಗಾದರು. ಎರಡನೆಯ ಅಲೆಯಲ್ಲಿ ನಡುವಯಸ್ಸಿನವರ ಸಂಖ್ಯೆ ಹೆಚ್ಚಿತ್ತು. ಹೀಗೆಯೇ ಮುಂದುವರೆದು ಮುಂದಿನ ಅಲೆಯಲ್ಲಿ ಮಕ್ಕಳಿಗೆ ಹೆಚ್ಚು ತೊಂದರೆ ಆಗಬಹುದು ಎಂಬ ಅಂದಾಜನ್ನು ಕೆಲವರು ಮಾಡಿದ್ದಾರೆ. ಆದರೆ, ಲಭ್ಯ ಮಾಹಿತಿಯನ್ನು ಸೂಕ್ಷ್ಮವಾಗಿ ನೋಡಿದರೆ, ಎರಡನೆಯ ಅಲೆಯ ವೇಳೆ ಕೋವಿಡ್ ತಗುಲಿದ 10-17 ವರ್ಷ ವಯಸ್ಸಿನ ಮಕ್ಕಳ ಪ್ರತಿಶತ ಸಂಖ್ಯೆ ಸರಿಸುಮಾರು ಮಧ್ಯವಯಸ್ಕರ ಶೇಕಡಾ ಸಂಖ್ಯೆಯಷ್ಟೇ ಇತ್ತು. ಆದರೆ, ಮಕ್ಕಳಲ್ಲಿ ಹೆಚ್ಚಿನವರಿಗೆ ಕಾಯಿಲೆ ವಿಷಮ ಹಂತಕ್ಕೆ ಹೋಗಲಿಲ್ಲ. ಅವರಿಗೆ ಆಸ್ಪತ್ರೆಯ ಅಗತ್ಯ ಬಂದದ್ದೂ ಕಡಿಮೆ. ಸಣ್ಣ ವಯಸ್ಸಿನ ಮಕ್ಕಳಲ್ಲಿ ವೈರಸ್ ಅನ್ನು ಶರೀರದಲ್ಲಿ ಹಿಡಿದಿಡುವ ವಿಶಿಷ್ಟ ಗ್ರಾಹಿಗಳು ಕಡಿಮೆ ಇರುತ್ತವೆ. ಅಂತಹವರಲ್ಲಿ ವೈರಸ್ ಹೊಕ್ಕರೂ, ಅದು ಅಂಟಿಕೊಳ್ಳಲು ಗ್ರಾಹಿಗಳು ದೊರಕದೇ ಹಾಗೆಯೇ ನಶಿಸಬಹುದು. ಶೇಕಡಾ 90 ಮಕ್ಕಳಲ್ಲಿ ಕೋವಿಡ್ ಕಾಯಿಲೆ ತೀವ್ರವಾಗುವ ಸಂಭವ ಇರುವುದಿಲ್ಲ. ಉಳಿದ 10 ಪ್ರತಿಶತ ಮಕ್ಕಳ ಬಗ್ಗೆ ತಜ್ಞರು ಎಚ್ಚರ ವಹಿಸಬೇಕಾಗುತ್ತದೆ. ಆದ್ದರಿಂದ ಪೋಷಕರು ವಿನಾಕಾರಣ ಗಾಬರಿಯಾಗುವ ಅಗತ್ಯವಿಲ್ಲ. ಈ ಲೆಕ್ಕಾಚಾರದಲ್ಲಿ ಮೂರನೆಯ ಅಲೆ ಬಂದರೂ ಅದು ಮಕ್ಕಳಿಗೆ ಘಾತಕವಾಗುವ ಸಾಧ್ಯತೆಗಳು ಗೌಣ.
ಮಕ್ಕಳಿಗೆ ಕೋವಿಡ್ ಕಾಯಿಲೆ ತೀವ್ರವಾಗಿ ಬರುವ ಸಾಧ್ಯತೆಗಳೇ ಇಲ್ಲವೇ? ಸಾಧ್ಯತೆಗಳು ಇವೆ; ಆದರೆ ಅದು ವಯಸ್ಕರಷ್ಟು ಪ್ರಮಾಣದಲ್ಲಿ ಇರುವುದಿಲ್ಲ. ಕೋವಿಡ್ ಕಾಯಿಲೆ ಮಕ್ಕಳಲ್ಲಿ ನ್ಯೂಮೋನಿಯಾ ಹಂತ ತಲುಪುವ ಸಾಧ್ಯತೆ ಕಡಿಮೆ. ಬಹಳಷ್ಟು ಮಕ್ಕಳು ಯಾವುದೇ ಸಮಸ್ಯೆ ಇಲ್ಲದೆ ಗುಣಮುಖರಾಗುತ್ತಾರೆ. ಆದರೆ, ಈ ರೀತಿ ಗುಣವಾದ ಮಕ್ಕಳ ಪೈಕಿ ಕೆಲವರಿಗೆ 2 ರಿಂದ 6 ವಾರಗಳಲ್ಲಿ ತೀವ್ರವಾದ ಅಲರ್ಜಿ ಮಾದರಿಯ ಪ್ರತಿಕ್ರಿಯೆ ಕಾಣಬಹುದು. ಈ ರೀತಿ ಆಗುವ ಸಂಭವ 1,00,000 ಮಕ್ಕಳ ಪೈಕಿ ಸುಮಾರು 12 ಮಂದಿಗೆ ಮಾತ್ರ. ಅಂತಹವರನ್ನೂ ಆರಂಭದ ಹಂತದಲ್ಲೇ ಗುರುತಿಸಿ ಚಿಕಿತ್ಸೆ ಮಾಡಿದರೆ ಸಂಪೂರ್ಣವಾಗಿ ಗುಣವಾಗುತ್ತದೆ.
ಮಕ್ಕಳಲ್ಲಿ ಕೋವಿಡ್ ಕಾಯಿಲೆ ಬಂದರೆ ಅಂಜಬೇಕಿಲ್ಲ. ಕೋವಿಡ್ ಆರಂಭವಾದಾಗಿನಿಂದ ಅದರ ಬಗ್ಗೆ ಸಾಕಷ್ಟು ಸಂಶೋಧನೆ ಆಗಿದೆ; ಕಾಯಿಲೆಯ ಲಕ್ಷಣಗಳ ಬಗ್ಗೆ ಖಚಿತ ಮಾಹಿತಿಯಿದೆ. ಬಹುತೇಕ ಮಕ್ಕಳಲ್ಲಿ ಕಾಯಿಲೆ ಸೌಮ್ಯವಾದ ಲಕ್ಷಣಗಳನ್ನು ಮಾತ್ರ ತೋರುತ್ತದೆ. ವೈದ್ಯರ ನಿರ್ದೇಶನಗಳನ್ನು ಪಾಲಿಸುತ್ತಾ, ಸ್ವಲ್ಪ ನಿಗಾ ವಹಿಸಿ, ಮನೆಯಲ್ಲೇ ಚಿಕಿತ್ಸೆ ಮಾಡಬಹುದು. ಇದರ ಜೊತೆಗೆ, ದೇಶದಾದ್ಯಂತ ಆಸ್ಪತ್ರೆಗಳು ಮಕ್ಕಳ ಕೋವಿಡ್ ಚಿಕಿತ್ಸೆಗೆ ಸಜ್ಜಾಗುತ್ತಿವೆ.
ಮಕ್ಕಳಲ್ಲಿ ಕೋವಿಡ್ ಕಾಯಿಲೆಯ ಬಗ್ಗೆ ಅರಿವು ಮೂಡಿಸಲು ಕೇವಲ ಮಾತನಾಡಿ ಪ್ರಯೋಜನವಿಲ್ಲ. ಮಕ್ಕಳು ತಮ್ಮ ಮನೆಯ ಹಿರಿಯರನ್ನು ನೋಡಿ ಕಲಿಯುತ್ತಾರೆ. ಮನೆಯ ಎಲ್ಲಾ ಹಿರಿಯರೂ ತಮ್ಮ ನಡವಳಿಕೆಗಳಿಂದ ಮಕ್ಕಳಿಗೆ ಮಾದರಿಯಾಗಬೇಕು. ಮಾಸ್ಕ್ ಧರಿಸುವುದು, ಸ್ವಚ್ಛತೆ ಕಾಪಾಡುವುದು, ಕೈ ತೊಳೆಯುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಲಸಿಕೆ ತೆಗೆದುಕೊಳ್ಳುವುದು – ಇವೆಲ್ಲವನ್ನೂ ಮನೆಯ ಹಿರಿಯರು ಕಟ್ಟುನಿಟ್ಟಾಗಿ ಪಾಲಿಸಿ, ಅದರ ಬಗ್ಗೆ ಮಕ್ಕಳಿಗೆ ತಿಳಿಹೇಳಬೇಕು.
ಮಕ್ಕಳಲ್ಲಿ ತೀವ್ರ ಕೋವಿಡ್ ಪ್ರಮಾಣ ಕಡಿಮೆ ಇದ್ದರೂ, ಯಾವ ಮಗುವಿಗೆ ಕಾಯಿಲೆ ತೀವ್ರವಾಗಬಹುದು ಎಂಬ ನಿಖರ ಮಾಹಿತಿ ಇಲ್ಲ. ಹೀಗಾಗಿ, ಪ್ರತಿಯೊಂದು ಮಗುವಿಗೂ ಲಸಿಕೆ ಕೊಡಿಸುವುದು ಮುಖ್ಯ. ಮಕ್ಕಳಲ್ಲಿ ನೀಡಬಹುದಾದ ಲಸಿಕೆಗಳ ಬಗ್ಗೆ ಸಂಶೋಧನೆ ತೀವ್ರಗತಿಯಲ್ಲಿ ನಡೆಯುತ್ತಿದೆ. ಒಮ್ಮೆ ಸ್ಪಷ್ಟ ನಿರ್ದೇಶನಗಳು ದೊರೆತ ಕೂಡಲೇ ಇದು ತ್ವರಿತವಾಗಿ ಕಾರ್ಯೋನ್ಮುಖವಾಗುತ್ತದೆ. ಅಲ್ಲಿಯವರೆಗೆ ಮಕ್ಕಳನ್ನು ಕೋವಿಡ್ ಬಾರದಂತೆ ಕಾಪಾಡುವುದು ಮುಖ್ಯ. ಮಕ್ಕಳಲ್ಲಿ ಕೋವಿಡ್ ಬಗ್ಗೆ ಆತಂಕ ಬೇಕಿಲ್ಲ; ಆದರೆ ಎಚ್ಚರ ಖಂಡಿತಾ ಇರಲಿ.