ಈ ರೀತಿಯ ವೈರಸ್ ಕಾಯಿಲೆಗಳು ಪ್ರಪಂಚವನ್ನು ಆಗಾಗ ಕಂಗೆಡಿಸುತ್ತಲೇ ಇರುತ್ತವೆ
ಈ ರೀತಿಯ ವೈರಸ್ ಕಾಯಿಲೆಗಳು ಪ್ರಪಂಚವನ್ನು ಆಗಾಗ ಕಂಗೆಡಿಸುತ್ತಲೇ ಇರುತ್ತವೆImage by valelopardo from Pixabay

ಚೀನಾದಲ್ಲಿ ಕರೋನಾ ವೈರಸ್ ಭೀತಿ: ನಾವೂ ಹೆದರಬೇಕೇ?

ಈ ಕಾಯಿಲೆ ಬಗ್ಗೆ ನಮ್ಮ ನಿಗಾ ನಮಗೆ ಇರಲೇಬೇಕು!

ಬೀಜಿಂಗ್ ನಿಂದ ಸುಮಾರು 1100 ಕಿ ಮೀ ದೂರದಲ್ಲಿನ ವುಹಾನ್ ನಗರದಲ್ಲಿ ಈ ಬಾರಿ ಹೊಸವರ್ಷದ ಸಂಭ್ರಮಾಚರಣೆ ಜರುಗಲಿಲ್ಲ. ಸುಮಾರು ಒಂದು ಕೋಟಿ ಜನಸಂಖ್ಯೆಯ ಆ ನಗರದ ಪ್ರಸಿದ್ಧ ಮಾಂಸದ ಮಾರುಕಟ್ಟೆಯನ್ನು ಚೀನಾ ಸರಕಾರ ಆ ದಿನ ಹಠಾತ್ತನೆ ಬಂದ್ ಮಾಡಿತ್ತು. ಒಂದು ಸಾವಿರಕ್ಕೂ ಹೆಚ್ಚಿನ ಅಂಗಡಿಗಳು ಇರುವ ಆ ಮಾರುಕಟ್ಟೆಯ ಅಂಗಡಿ ಮಾಲೀಕರಿಗೂ ಈ ಬಗ್ಗೆ ಮಾಹಿತಿ ಇರಲಿಲ್ಲ.

ಹೀಗೆ ಮಾಡುವುದಕ್ಕೆ ಬಲವಾದ ಕಾರಣವಿತ್ತು. ವುಹಾನ್ ಆಸ್ಪತ್ರೆಯಲ್ಲಿ ಉಸಿರಾಟದ ಸೋಂಕಿನಿಂದ ಕಳೆದ ಡಿಸೆಂಬರ್ 12 ರಂದು ದಾಖಲಾಗಿದ್ದ ಒಬ್ಬ ರೋಗಿಗೆ ಒಂದು ಹೊಸ ಮಾದರಿಯ, ಪ್ರಪಂಚದಲ್ಲಿ ಇದುವರೆಗೂ ದಾಖಲಾಗದ ನ್ಯುಮೋನಿಯಾ ಕಾಯಿಲೆ ಇದೆ ಎಂದು ತಿಳಿದುಬಂದಿತ್ತು. 31 ನೆಯ ಡಿಸೆಂಬರ್ ವೇಳೆಗೆ ಸುಮಾರು 27 ಮಂದಿಗೆ ಅದೇ ಕಾಯಿಲೆ ಬಂದಿತ್ತು. ಅವರಲ್ಲಿ ಏಳು ರೋಗಿಗಳು ಪ್ರಾಣಾಪಾಯದ ಸ್ಥಿತಿಯಲ್ಲಿ ಇದ್ದರು. ಆ ವೇಳೆಗೆ ಪ್ರಾಥಮಿಕ ಮಾಹಿತಿ ಸಂಗ್ರಹ ಮಾಡಿದ್ದ ಅಲ್ಲಿನ ಸೋಂಕು-ರೋಗ ತಜ್ಞರು ಕಾಯಿಲೆಯ ಮೂಲ ವುಹಾನ್ ನಗರದ ಮಾಂಸದ ಮಾರುಕಟ್ಟೆ ಇರಬಹುದು ಎಂದು ಶಂಕಿಸಿದ್ದರು. ಆ ಕಾರಣಕ್ಕೆ ಸರಕಾರ ಕೂಡಲೇ ಕಾರ್ಯ ಪ್ರವೃತ್ತವಾಗಿತ್ತು.

ಅಲ್ಲಿ ಆದದ್ದಾದರೂ ಏನು? ಈ ಪ್ರಶ್ನೆಗೆ ಉತ್ತರ ಪಡೆಯಲು ಕೆಲವು ಮಹತ್ವದ ವಿಷಯಗಳನ್ನು ತಿಳಿಯಬೇಕು. ಈ ರೀತಿಯ ವೈರಸ್ ಕಾಯಿಲೆಗಳು ಪ್ರಪಂಚವನ್ನು ಆಗಾಗ ಕಂಗೆಡಿಸುತ್ತಲೇ ಇರುತ್ತವೆ. ಕಳೆದ ಕೆಲವು ವರ್ಷಗಳಲ್ಲಿ ಹಕ್ಕಿ ಜ್ವರ, ಹಂದಿ ಜ್ವರ, ಸಾರ್ಸ್, H1N1 ಮುಂತಾದ ಕಾಯಿಲೆಗಳು ಜನತೆಯ ನೆಮ್ಮದಿಯನ್ನು ಕದಡಿವೆ. ಪ್ರವಾಸೋದ್ಯಮವನ್ನೇ ಅವಲಂಬಿಸಿರುವ ದೇಶಗಳ ಆರ್ಥಿಕ ವ್ಯವಸ್ಥೆಯನ್ನೇ ಇವು ಬುಡಮೇಲು ಮಾಡಿದ್ದವು. 2002 ರಲ್ಲಿ ಹರಡಿದ್ದ ಸಾರ್ಸ್ ಕಾಯಿಲೆ ಕೂಡ ಚೀನಾ ದೇಶದಿಂದಲೇ ಆರಂಭವಾಗಿತ್ತು. ಆದರೆ ಅಲ್ಲಿನ ಸರಕಾರ ಆಗ ಆ ಕಾಯಿಲೆಯನ್ನು ಗಣನೀಯವಾಗಿ ಪರಿಗಣಿಸಲಿಲ್ಲ. ಇದರಿಂದ ಆ ಕಾಯಿಲೆ ಪ್ರಪಂಚದಲ್ಲೆಲ್ಲಾ ಹರಡಿ ಸುಮಾರು 700 ಮಂದಿ ಸಾವಿಗೀಡಾದರು. ಚೀನಾ ಸರ್ಕಾರದ ನಿರ್ಲಕ್ಷ್ಯವನ್ನು ವಿಶ್ವ ಆರೋಗ್ಯ ಸಂಸ್ಥೆ ಕಟುವಾಗಿ ನಿಂದಿಸಿತ್ತು. ಇದೇ ಕಾರಣಕ್ಕೆ ಚೀನಾ ಸರಕಾರ ಈಗ ಸಮರೋಪಾದಿಯಲ್ಲಿ ಸದ್ಯದ ಕಾಯಿಲೆಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದೆ.

2009 ರಲ್ಲಿ ಭಾರತವೂ ಸೇರಿದಂತೆ ಹಲವಾರು ದೇಶಗಳಲ್ಲಿ H1N1 ವೈರಲ್ ನ್ಯುಮೋನಿಯಾ ಕಾಯಿಲೆ ಹಬ್ಬಿತ್ತು. ಜನರು ಮಾಸ್ಕ್ ಗಳನ್ನು ಧರಿಸಿ ಓಡಾಡುತ್ತಿದ್ದರು. ಆಗಾಗ್ಗೆ ಹೀಗೇಕೆ ಆಗುತ್ತದೆ ಎಂದು ಅರಿಯಲು ಸೋಂಕು ತರುವ ವೈರಸ್ ಗಳ ಬಗ್ಗೆ ತಿಳಿಯಬೇಕು. ಜಗತ್ತಿನಲ್ಲಿ ಕಾಯಿಲೆ ತರಬಲ್ಲ ನೂರಾರು ಬಗೆಯ ವೈರಸ್ ಗಳು ಇವೆ. ಇವುಗಳಲ್ಲಿ ಬಹುತೇಕ ವೈರಸ್ ಗಳು ಹೆಚ್ಚು ಅಪಾಯ ಮಾಡುವುದಿಲ್ಲ. ಜೊತೆಗೆ, ಇಂತಹ ವೈರಸ್ ಕಾಯಿಲೆಗಳು ಆಗಾಗ ಬಂದು ಅವುಗಳ ವಿರುದ್ಧ ನಮ್ಮ ಶರೀರ ತಕ್ಕ ಮಟ್ಟಿಗೆ ರಕ್ಷಣೆಯನ್ನೂ ಪಡೆದುಕೊಂಡಿರುತ್ತದೆ. ಹೀಗಾಗಿ, ಇವುಗಳಿಂದ ಪ್ರಾಣಾಪಾಯ ಆಗುವಂತಹ ಸಂಭವ ತೀರಾ ಕಡಿಮೆ.

ಆದರೆ, ವೈರಸ್ ಗಳ ಆಂತರ್ಯದಲ್ಲಿ ಜೆನೆಟಿಕ್ ಬದಲಾವಣೆಗಳು ಆಗುತ್ತಲೇ ಇರುತ್ತವೆ. ಇದರಿಂದ ವೈರಸ್ ಮೇಲ್ಮೈ ಪ್ರೊಟೀನ್ ಗಳು ಬದಲಾಗುತ್ತವೆ. ಈ ಹೊಸ ಮಾದರಿಯ ಪ್ರೊಟೀನ್ ಗಳ ಕಾರಣದಿಂದ ನಮ್ಮ ಶರೀರದ ರಕ್ಷಣೆಯ ವ್ಯವಸ್ಥೆ ಅದನ್ನು ಹೊಸ ವೈರಸ್ ಎಂದೇ ಪರಿಗಣಿಸುತ್ತದೆ. ವೈರಸ್ ಗಳಲ್ಲಿ ಅಲ್ಪ-ಸ್ವಲ್ಪ ಬದಲಾವಣೆ ಆಗಿದ್ದರೆ ನಮ್ಮ ರಕ್ಷಣೆಯ ವ್ಯವಸ್ಥೆಗೆ ಹೆಚ್ಚು ತೊಂದರೆ ಆಗುವುದಿಲ್ಲ. ಈ ಸಣ್ಣ ಬದಲಾವಣೆಗಳನ್ನು ಅದು ಆರಾಮವಾಗಿ ನಿಭಾಯಿಸುತ್ತದೆ. ಆದರೆ, ಕೆಲವೊಮ್ಮೆ ವೈರಸ್ ಗಳ ಜೆನೆಟಿಕ್ ಬದಲಾವಣೆ ಬಹಳ ತೀವ್ರವಾಗಿ ಆಗುತ್ತವೆ. ಆಗ ಅದರ ಮೇಲ್ಮೈನ ಬಹುತೇಕ ಪ್ರೊಟೀನ್ ಗಳು ಬದಲಾಗುತ್ತವೆ. ನಮ್ಮ ರಕ್ಷಣೆಯ ವ್ಯವಸ್ಥೆಯ ಪಾಲಿಗೆ ಇದು ಹೊಚ್ಚ-ಹೊಸ ವೈರಸ್. ಇಂತಹ ಮಾರ್ಪಾಡು ಹೊಂದಿದ ವೈರಸ್ ಗಳ ವಿರುದ್ಧ ಶರೀರದಲ್ಲಿ ಯಾವುದೇ ಹಳೆಯ ರಕ್ಷಣೆ ಇರುವುದಿಲ್ಲ. ವೃದ್ಧಾಪ್ಯದಿಂದಲೋ, ಬೇರೆ ಕಾಯಿಲೆಗಳಿಂದಲೋ, ಕೆಲವು ಔಷಧಗಳ ಸೇವನೆಯಿಂದಲೋ ಶರೀರದ ರಕ್ಷಣೆಯ ವ್ಯವಸ್ಥೆಯ ಸಾಮರ್ಥ್ಯ ಕುಂದಿದ್ದರೆ, ಅಂತಹವರಲ್ಲಿ ಈ ಬದಲಾದ ವೈರಸ್ ತೀಕ್ಷ್ಣ ಕಾಯಿಲೆ ಉಂಟು ಮಾಡಿ ಪ್ರಾಣಾಪಾಯಕ್ಕೆ ಕಾರಣವಾಗಬಹುದು. ಅಪರೂಪಕ್ಕೆ ಆರೋಗ್ಯಕರ ವ್ಯಕ್ತಿಯಲ್ಲೂ ಈ ರೀತಿಯ ತೀಕ್ಷ್ಣ ಕಾಯಿಲೆ ಉಂಟಾಗುವ ಸಂಭವ ಇರುತ್ತದೆ.

ವೈರಸ್ ಗಳಲ್ಲಿ ಈ ರೀತಿಯ ಜೆನೆಟಿಕ್ ಮಾರ್ಪಾಡು ಎಷ್ಟೋ ಶತಮಾನಗಳಿಂದಲೇ ಆಗುತ್ತಿದೆ. ಆದರೆ, ಶತಮಾನಗಳ ಹಿಂದೆ ಜಗತ್ತು ಇಷ್ಟೊಂದು ಅಭಿವೃದ್ಧಿ ಹೊಂದಿರಲಿಲ್ಲ. ಜನರ ಪ್ರಯಾಣ ವಿರಳವಾಗಿತ್ತು. ಹೆಚ್ಚೆಂದರೆ ದಿನಕ್ಕೆ ಕೆಲವು ಮೈಲಿಗಳಷ್ಟು ಸಂಚಾರ ಮಾತ್ರ ಸಾಧ್ಯವಾಗುತ್ತಿತ್ತು. ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಸಂಚರಿಸುವ ಜನ ತೀರಾ ಕಡಿಮೆ ಇದ್ದರು. ಆದ್ದರಿಂದ, ಯಾವುದೇ ಒಂದು ಪ್ರದೇಶದಲ್ಲಿ ಈ ರೀತಿಯ ವೈರಸ್ ಸೋಂಕು ಉಂಟಾದರೆ, ಅದು ಬಾಧಿಸುತ್ತಿದ್ದ ಜನರ ಸಂಖ್ಯೆ ಮಿತಿಯಲ್ಲಿ ಇರುತ್ತಿತ್ತು. ಜೊತೆಗೆ, ಆಗಿನ ಕಾಲದಲ್ಲಿ ಜನರ ಆಯುಷ್ಯ ಕೂಡ ಕಡಿಮೆ ಇರುತ್ತಿತ್ತು. ಜನರು ಇಂತಹುದೇ ಕಾರಣದಿಂದ ಸಾಯುತ್ತಿದ್ದರು ಎಂದು ಪತ್ತೆ ಮಾಡಲೂ ಸಾಧ್ಯವಾಗುತ್ತಿರಲಿಲ್ಲ.

ಆದರೆ, ಈಗ ಕಾಲ ಬಹಳ ಬದಲಾಗಿದೆ. ಜನರ ಸರಾಸರಿ ಆಯಸ್ಸು ವೃದ್ಧಿಯಾಗಿದೆ. ಅದಕ್ಕೆ ತಕ್ಕಂತೆ ವೃದ್ಧಾಪ್ಯದಲ್ಲಿ ಬಾಧಿಸುವ ಕಾಯಿಲೆಗಳು ಹೆಚ್ಚಾಗಿವೆ; ಅಂತಹ ಬಹುತೇಕರಲ್ಲಿ ಶರೀರದ ರಕ್ಷಣಾ ವ್ಯವಸ್ಥೆಯ ಸಾಮರ್ಥ್ಯ ಕುಂಠಿತವಾಗಿದೆ. ಜೊತೆಗೆ, ವಿಮಾನ ಸಂಚಾರದ ನೆರವಿನಿಂದ ಪ್ರಪಂಚದ ಯಾವುದೇ ಮೂಲೆಗಾದರೂ 24 ತಾಸುಗಳ ಅವಧಿಯೊಳಗೆ ಸೇರಬಹುದಾಗಿದೆ. ಇದು ನಮಗಷ್ಟೇ ಅಲ್ಲ; ರೋಗಾಣುಜೀವಿಗಳಿಗೂ ಅನುಕೂಲವಾಗಿದೆ. ಬದಲಾದ ವೈರಸ್ ಕಾಯಿಲೆ ಹೊತ್ತ ವ್ಯಕ್ತಿ ವಿಮಾನ ಪ್ರಯಾಣ ಮಾಡಿ ಬೇರೆ ದೇಶ ತಲುಪಿದರೆ, ಕೂಡಲೇ ಆ ಮಾರ್ಪಾಡಿತ ವೈರಸ್ ಬೇರೆ ದೇಶಗಳ ಪ್ರಜೆಗಳನ್ನೂ ಆಕ್ರಮಣ ಮಾಡಬಹುದು. ಹೀಗಾಗಿ, ಕೆಲವೇ ದಿನಗಳಲ್ಲಿ ಯಾವುದೇ ಹೊಸ ಮಾದರಿಯ ಕಾಯಿಲೆ ಜಗತ್ತಿನ ಯಾವುದೇ ಮೂಲೆಗಾದರೂ ವ್ಯಾಪಿಸಬಹುದು. ಇದು ಬಹಳ ಅಪಾಯಕಾರಿ ವಿದ್ಯಮಾನ. ಅದಕ್ಕೇ , ಚೀನಾದ ವುಹಾನ್ ನಗರದಲ್ಲಿ ಕಂಡ ಹೊಸ ವೈರಸ್ ಇಡೀ ಜಗತ್ತನ್ನು ತುದಿಗಾಲಿನಲ್ಲಿ ನಿಲ್ಲಿಸುತ್ತದೆ.

ಈಗೇನು ಮಾಡಬಹುದು? ವಿಶ್ವ ಆರೋಗ್ಯ ಸಂಸ್ಥೆ ಈ ರೀತಿಯ ಬೆಳವಣಿಗೆಯನ್ನು ಸದಾ ಗಮನಿಸುತ್ತದೆ. ದೇಶ-ಭಾಷೆಗಳ ಭೇಧವಿಲ್ಲದೆ ವೈದ್ಯ ವಿಜ್ಞಾನಿಗಳು ಮಾರ್ಪಾಡು ಹೊಂದಿದ ವೈರಸ್ ಗಳನ್ನು ಉದ್ದಗಲಕ್ಕೂ ವಿವೇಚಿಸಿ ಅದರ ಜೆನೆಟಿಕ್ ನಕ್ಷೆಯನ್ನು ತಯಾರಿಸುತ್ತಾರೆ. ಈಗಾಗಲೇ ಸಿದ್ಧವಿರುವ ಹಲವಾರು ವೈರಸ್-ನಾಶಕ ಔಷಧಗಳ ಪೈಕಿ ಯಾವ ಔಷಧ ಅದರ ಚಿಕಿತ್ಸೆಗೆ ಸಮಂಜಸವಾಗಿ ಹೊಂದಬಲ್ಲದು ಎಂದು ಔಷಧ ತಜ್ಞರು ನಿರ್ಧರಿಸುತ್ತಾರೆ. ಮಾರ್ಪಾಡು ಹೊಂದಿದ ವೈರಸ್ ಉತ್ಪಾದಿಸುವ ಪ್ರೊಟೀನ್ ಗಳಿಗೆ ಪ್ರತಿಯಾಗಿ ಲಸಿಕೆಗಳನ್ನು ಉತ್ಪಾದಿಸುತ್ತಾರೆ. ವಿಶ್ವ ಆರೋಗ್ಯ ಸಂಸ್ಥೆ ಜಗತ್ತಿನ ಪ್ರತಿಯೊಂದು ದೇಶಕ್ಕೂ “ಈ ವೈರಸ್ ನಿಮ್ಮ ದೇಶದಲ್ಲಿ ಕಾಣಿಸಿಕೊಂಡರೆ ಅದನ್ನು ಹೇಗೆ ಪತ್ತೆ ಮಾಡಬೇಕು ಮತ್ತು ಅದು ಹರಡದಂತೆ ಹೇಗೆ ನಿಯಂತ್ರಿಸಬೇಕು?” ಎಂಬ ಮಾರ್ಗಸೂಚಿಯನ್ನು ನೀಡುತ್ತದೆ. ಎಲ್ಲಾ ವೈದ್ಯರಿಗೂ ಆ ಸಲಹೆಗಳು ತಲುಪುವಂತೆ ಪ್ರಮುಖ ವೈದ್ಯಕೀಯ ಜಾಲತಾಣಗಳಲ್ಲಿ ಪ್ರಕಟಿಸಲಾಗುತ್ತದೆ. ಜೊತೆಗೆ, ಪ್ರತಿಯೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಬಂದರು ಹಾಗೂ ಹೆದ್ದಾರಿ ಮಾರ್ಗಗಳಲ್ಲಿ ಸಂಚರಿಸುವ ಪ್ರಯಾಣಿಕರನ್ನು ಪರೀಕ್ಷೆ ಮಾಡಿ ದೇಶದೊಳಗೆ ಬಿಡಲಾಗುತ್ತದೆ. ಯಾರಿಗಾದರೂ ಇಂತಹ ರೋಗದ ಸೂಚನೆ ಇದ್ದಲ್ಲಿ, ಅಂತಹವರನ್ನು ಕೆಲದಿನಗಳ ಕಾಲ ಪರಿವೀಕ್ಷಣೆಗೆ ಒಳಪಡಿಸಿ, ಕೂಲಂಕಷವಾಗಿ ಪರೀಕ್ಷಿಸಿ, ಕಾಯಿಲೆ ಇಲ್ಲವೆಂದು ಖಾತ್ರಿಯಾದಾಗ ಮಾತ್ರ ದೇಶದೊಳಗೆ ಬಿಡಲಾಗುತ್ತದೆ. ಹೀಗೆ, ಸಾಧ್ಯವಾದಷ್ಟೂ ಮುನ್ನೆಚ್ಚರಿಕೆ ವಹಿಸಿ ಪರಿಸ್ಥಿತಿಯನ್ನು ನಿಭಾಯಿಸಲಾಗುತ್ತದೆ.

ಈಗ ಸದ್ಯದ ಆತಂಕಕ್ಕೆ ಕಾರಣವಾಗಿರುವ ವುಹಾನ್ ನ್ಯುಮೋನಿಯಾ ಕೂಡ ಇಂತಹುದೇ ಒಂದು ವೈರಸ್ ನ ಜೆನೆಟಿಕ್ ಮಾರ್ಪಾಡು ಎಂದು ಹೇಳಲಾಗಿದೆ. ಈ ಕಾಯಿಲೆಯ ಭರಾಟೆ ಸದ್ಯ ಚೀನಾದಲ್ಲಿ ಜಾಸ್ತಿಯಿದ್ದರೂ ಅದು ಬೇರೆ ದೇಶಗಳಿಗೂ ಹರಡುತ್ತಿರುವ ಸುದ್ದಿ ಇದೀಗ ಕೇಳಿಬರುತ್ತಿದೆ. ಹೀಗಾಗಿ, ನಮ್ಮ ನಿಗಾ ನಮಗೆ ಇರಲೇಬೇಕು. ಜ್ವರ, ಸುಸ್ತು, ಒಣ ಕೆಮ್ಮು, ಉಸಿರಾಟದ ಸಮಸ್ಯೆಗಳು ಕಂಡು ಬಂದರೆ ಕೂಡಲೇ ತಜ್ಞ ವೈದ್ಯರ ಸಲಹೆ ಪಡೆಯುವುದು ಸೂಕ್ತ. “ಇಡೀ ಜಗತ್ತು ಒಂದೇ ಮನೆ” ಎನ್ನುವ ಈ ಕಾಲದಲ್ಲಿ ಮನೆಯ ಎಲ್ಲಾ ಸದಸ್ಯರೂ ಜಾಗೃತರಾಗಿಯೇ ಇರಬೇಕು.

ಜನವರಿ ೧೮, ೨೦೨೦ರ ವಿಶ್ವವಾಣಿ ಹಾಗೂ 'ಜಾಣಸುದ್ದಿ' ಪಾಡ್‌ಕಾಸ್ಟ್‌ನಲ್ಲಿ ಪ್ರಕಟವಾದ ಬರಹದ ಸಂಪಾದಿತ ರೂಪ

Related Stories

No stories found.
logo
ಇಜ್ಞಾನ Ejnana
www.ejnana.com