ಕೊರೊನಾವೈರಸ್ – ಮಿಥ್ಯೆಗಳು ಮತ್ತು ಸತ್ಯಗಳು
ವೈರಸ್ ಅನ್ನು ನಿಯಂತ್ರಿಸಬಲ್ಲೆವು ಎಂಬ ವಿಶ್ವಾಸ ಇದೆಯಾದರೂ, ಅದಕ್ಕಿಂತ ವೇಗವಾಗಿ ಹರಡುತ್ತಿರುವ ವದಂತಿಗಳನ್ನು ಹೇಗೆ ತಡೆಯುವುದು?Image by Tumisu from Pixabay

ಕೊರೊನಾವೈರಸ್ – ಮಿಥ್ಯೆಗಳು ಮತ್ತು ಸತ್ಯಗಳು

ಕೊರೊನಾವೈರಸ್ ಪ್ಯಾಂಡೆಮಿಕ್ ಜೊತೆಯಲ್ಲಿ ಒಂದು ಬೃಹತ್ ಪ್ರಮಾಣದ 'ಇನ್‌ಫೋಡೆಮಿಕ್' ಸಂಭವಿಸುತ್ತಿದೆ ಎಂದು WHO ಹೇಳಿದೆ. ಭಾರೀ ಪ್ರಮಾಣದ ಮಾಹಿತಿ ವಿಪರೀತ ವೇಗವಾಗಿ ಹರಡುತ್ತಿರುವ ಈ ಸನ್ನಿವೇಶದಲ್ಲಿ ನಾವು ಎಚ್ಚರವಹಿಸುವುದು ಹೇಗೆ?
ಎಪಿಡೆಮಿಕ್ ಅಂದರೆ ಸಾಂಕ್ರಾಮಿಕ ರೋಗ ಅಥವಾ ಪಿಡುಗು, ಜನಸಮುದಾಯದಲ್ಲಿ ಒಟ್ಟಾಗಿ ಹರಡುವ ವ್ಯಾಧಿ. ಇಂತಹ ಯಾವುದೇ ರೋಗ ಸರ್ವವ್ಯಾಪಿಯಾಗಿ ದೇಶಾದ್ಯಂತ ಅಥವಾ ಪ್ರಪಂಚದಾದ್ಯಂತ ಹರಡಿದರೆ ಅದು ಪ್ಯಾಂಡೆಮಿಕ್ ಎಂಬ ಹೆಸರನ್ನು ಪಡೆದುಕೊಳ್ಳುತ್ತದೆ. ಕೊರೊನಾವೈರಸ್ ಹಾವಳಿಗೆ ಈಗ ಪ್ಯಾಂಡೆಮಿಕ್ ಎನ್ನುವ ಹೆಸರು ಸಿಕ್ಕಿದೆ. ಇದರ ಜೊತೆಯಲ್ಲೇ ಒಂದು ಬೃಹತ್ ಪ್ರಮಾಣದ 'ಇನ್‌ಫೋಡೆಮಿಕ್' ಸಂಭವಿಸುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಭಾರೀ ಪ್ರಮಾಣದಲ್ಲಿ ಸೃಷ್ಟಿಯಾಗುತ್ತಿರುವ ಮಾಹಿತಿ ಅದೇ ಪ್ರಮಾಣದಲ್ಲಿ, ವಿಪರೀತ ವೇಗವಾಗಿ ಪ್ರಪಂಚದಾದ್ಯಂತ ಹರಡುತ್ತಿರುವ ವಿಶಿಷ್ಟ-ವಿಚಿತ್ರ ಪ್ರಕ್ರಿಯೆ ಇದು. ಇಂತಹ ಸನ್ನಿವೇಶದಲ್ಲಿ ನಾವು ಎಚ್ಚರವಹಿಸುವುದು ಹೇಗೆ?

“ಸತ್ಯ ಕಾಲಿಗೆ ಚಪ್ಪಲಿ ಹಾಕಿಕೊಳ್ಳುವ ವೇಳೆಗೆ ಸುಳ್ಳು ಪ್ರಪಂಚವನ್ನು ಒಂದು ಬಾರಿ ಸುತ್ತಿ ಬಂದಿರುತ್ತದೆ” ಎಂಬ ಮಾತಿದೆ. ಸಾಮಾಜಿಕ ಜಾಲತಾಣಗಳು ಸಕ್ರಿಯವಾಗಿರುವ ಇಂದಿನ ವಿಶ್ವದಲ್ಲಿ ಸುಳ್ಳಿಗೆ ಮತ್ತಷ್ಟು ಬಲ ಬಂದಿದೆ ಎಂಬುದು ಖೇದದ ವಿಷಯ. ಪ್ರಸ್ತುತ ಪ್ರಪಂಚದ ನೆಮ್ಮದಿ ಕೆಡಿಸಿರುವ ಕೊರೊನಾವೈರಸ್ ವಿಷಯಕ್ಕೂ ಈ ಮಾತು ಅನ್ವಯ. “ವೈರಸ್ ಅನ್ನು ನಿಯಂತ್ರಿಸಬಲ್ಲೆವು ಎಂಬ ವಿಶ್ವಾಸ ಇದೆಯಾದರೂ, ಅದಕ್ಕಿಂತ ವೇಗವಾಗಿ ಹರಡುತ್ತಿರುವ ವದಂತಿಗಳನ್ನು ಹೇಗೆ ತಡೆಯುವುದು?” ಎಂದು ಕೆಲವು ತಜ್ಞರು ತಮ್ಮ ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ವಿಶ್ವ ಆರೋಗ್ಯ ಸಂಸ್ಥೆ ಈಗ ಕೊರೊನಾ ವೈರಸ್ ಕಾಯಿಲೆಯ ಜೊತೆಜೊತೆಗೆ ವದಂತಿಗಳನ್ನು ನಿಯಂತ್ರಿಸಲು ಕೂಡ ಅಗಾಧ ಶ್ರಮ ವಹಿಸುತ್ತಿದೆ.

ಮಿಥ್ಯೆಗಳು ಹರಡುವುದಕ್ಕೆ ಮೂರು ಕಾರಣಗಳು. ಮೊದಲನೆಯದು – ಅಧಿಕೃತ ಮಾಹಿತಿಯ ಕೊರತೆ. ಒಂದು ಜಾಗತಿಕ ಮಟ್ಟದ ಸಮಸ್ಯೆ ಎದುರಾದಾಗ ಅತ್ಯಂತ ಮುಖ್ಯ ಆವಶ್ಯಕತೆ ಆ ಸಮಸ್ಯೆಯ ನಿಯಂತ್ರಣ ಮತ್ತು ಪರಿಹಾರ. ಇದು ಸುಲಭದ ಮಾತಲ್ಲ. ಸಮಸ್ಯೆಯ ಬೇರಿನ ಆಳಕ್ಕೆ ಇಳಿಯದೇ ಹೋದರೆ ಉಪಯುಕ್ತ ಮಾಹಿತಿ ಲಭ್ಯವಾಗುವುದಿಲ್ಲ. ಈ ಪ್ರಕ್ರಿಯೆಗೆ ಕಾಲಾವಕಾಶ ಬೇಕು. ಸಮಸ್ಯೆಯನ್ನು ಒಂದು ಹಂತದವರೆಗೆ ಅರ್ಥ ಮಾಡಿಕೊಳ್ಳದೇ ಅದರ ಬಗ್ಗೆ ಸಾಮಾನ್ಯ ಜನರಿಗೆ ವಿವರಿಸಲು ಸಾಧ್ಯವಿಲ್ಲ. ಹೀಗಾಗಿ, ಅಧಿಕೃತ ಮಾಹಿತಿಗೆ ಸಮಯ ಹಿಡಿಯುತ್ತದೆ. ಆದರೆ, ಸುದ್ಧಿಗೆ ಹಾತೊರೆಯುವ ಜನರಿಗೆ ಇಷ್ಟು ತಾಳ್ಮೆ ಇರುವುದಿಲ್ಲ. ವಿಶ್ವ ಆರೋಗ್ಯ ಸಂಸ್ಥೆ ಒಂದು ವಿಷಯವನ್ನು ಜಗತ್ತಿಗೆ ತಿಳಿಸಿತು ಎಂದರೆ, ಆ ಪ್ರಕಟಣೆಯ ಹಿಂದೆ ಸಾವಿರಾರು ಜನಗಳ ನೂರಾರು ಗಂಟೆಗಳ ಶ್ರಮ ಇರುತ್ತದೆ. ಜೊತೆಗೆ, ಅದು ಸಂಶೋಧನೆಗಳ ಮೂಲದಿಂದ ಪಡೆದ, ಅನೇಕ ಬಾರಿ ಪರಿಷ್ಕರಿಸಿದ ಮೇಲೆ ಋಜುವಾತಾದ ಮಾಹಿತಿಯೇ ಆಗಿರುತ್ತದೆ. ಅದಕ್ಕೇ, ಸತ್ಯದ ಸಂಚಾರ ನಿಧಾನ. ಸತ್ಯವನ್ನು ಬಯಸುವವರು ತಾಳ್ಮೆ ವಹಿಸುವುದು ಮುಖ್ಯ.

ಎರಡನೆಯ ಕಾರಣ – ತಪ್ಪು ಮಾಹಿತಿಯ ಹರಡುವಿಕೆ. ಜನರು ಯಾವುದೇ ವಿಷಯವನ್ನೂ ತಮ್ಮ ಪೂರ್ವಗ್ರಹಗಳ ಅಚ್ಚಿನ ಎರಕದಲ್ಲಿಯೇ ನೋಡುತ್ತಾರೆ. ಯಾವುದೇ ದೇಶದ, ಜನಾಂಗದ, ಸಂಸ್ಕೃತಿಯ ಬಗ್ಗೆ ಇರುವ ಅರಿವಿನ ಮಿತಿಗಳು ವಾಸ್ತವವನ್ನು ಬಣ್ಣದ ಮಸೂರ ಉಳ್ಳ ಕನ್ನಡಕದ ಮೂಲಕ ನೋಡಿದಂತೆ ಬೇರೆಯೇ ಬಿಂಬವನ್ನು ಮೂಡಿಸುತ್ತವೆ. ಚೀನಾ ದೇಶದಲ್ಲಿ ಬಾವಲಿಗಳನ್ನು ಆಹಾರವಾಗಿ ಬಳಸುವುದರಿಂದ ಪ್ರಸ್ತುತ ಕೊರೊನಾವೈರಸ್ ಕಾಯಿಲೆ ಬಂದಿದೆ ಎಂದು ವಾದ ಮಾಡುವವರು, ಈ ರೀತಿಯ ಆಹಾರ ಸಂಸ್ಕೃತಿ ಅಲ್ಲಿ ಎಷ್ಟೋ ದಶಕಗಳಿಂದ ಇರಬಹುದು ಎಂಬ ಸತ್ಯವನ್ನು ಮರೆಯುತ್ತಾರೆ. ಜೊತೆಗೆ, ಯಾವುದೋ ದೇಶದಲ್ಲಿ ತೆಗೆದ ವಿಡಿಯೋ ಒಂದನ್ನು ಸಮೀಕರಿಸಿ ಮತ್ತಷ್ಟು ಗೊಂದಲಗಳನ್ನು ಸೃಷ್ಟಿಸುತ್ತಾರೆ. ಕೊರೊನಾವೈರಸ್ ಎಂಬುದು ಬಹಳ ಹಿಂದೆಯೇ ಪತ್ತೆ ಮಾಡಿದ್ದ ಒಂದು ಬಗೆಯ ವೈರಸ್. ಆ ವೈರಸ್ ನಲ್ಲಿ ಜೆನೆಟಿಕ್ ಬದಲಾವಣೆ ಆಗಿ ಈಗ ಅದರಲ್ಲೇ ಒಂದು ಹೊಸ ಪ್ರಭೇಧದ ವೈರಸ್ ನಿಸರ್ಗದಲ್ಲಿ ಸೃಷ್ಟಿಯಾಗಿದೆ. ವೈರಸ್ ಗಳಲ್ಲಿ ಈ ರೀತಿಯ ಜೆನೆಟಿಕ್ ಮಾರ್ಪಾಡುಗಳು ಸರ್ವೇಸಾಮಾನ್ಯ. ಹೀಗೆ ಮಾರ್ಪಾಡು ಹೊಂದಿದ ವೈರಸ್ ಗಳಲ್ಲಿ ಕೆಲವಕ್ಕೆ ಮನುಷ್ಯರಿಗೆ ಕಾಯಿಲೆ ತರುವ ಸಾಮರ್ಥ್ಯ ಇರಬಹುದು. ಈ ಪ್ರಕ್ರಿಯೆ ಶತಮಾನಗಳಿಂದ ನಡೆಯುತ್ತಲೇ ಇದೆ. ಈ ರೀತಿಯ ವಿಷಯಗಳನ್ನು ಅರೆಬರೆಯಾಗಿಯೋ ಅಥವಾ ತಿರುಚಿಯೋ ಹೇಳಿದರೆ ಆತಂಕ ಮೂಡುವುದು ಸಾಮಾನ್ಯ. ಸಾಲದ್ದಕ್ಕೆ, ಈ ವೈರಸ್ ನಿಂದ ಪಾರಾಗುವ ಹಲವಾರು ವಿಧಾನಗಳನ್ನು ಸೂಚಿಸುವ ಜನರು ಧಂಡಿಯಾಗಿ ಸಿಗುತ್ತದೆ. ಕೆಲವು ಬಾರಿ ಇಂತಹ ಮಂದಿ ಹೇಳಿದ ಅಪಾಯಕಾರಿ ಚಿಕಿತ್ಸೆ ಆರೋಗ್ಯಕರ ವ್ಯಕ್ತಿಯ ಜೀವಕ್ಕೆ ಎರವಾಗಬಹುದು.

ಮೂರನೆಯ ಕಾರಣ - ದುರುದ್ದೇಶಪೂರ್ವಕ ಮಾಹಿತಿ ಹರಡುವಿಕೆ. ಜಾಲತಾಣಗಳ ಪ್ರಾಬಲ್ಯದ ಇಂದಿನ ಜಗತ್ತಿನಲ್ಲಿ ಅಧಿಕೃತತೆಯ ಮುಖವಾಡ ಧರಿಸಿ ವದಂತಿಗಳನ್ನು ಹಬ್ಬಿಸುವ ಸುದ್ಧಿಕೇಂದ್ರಗಳಿಗೆ ಕೊರತೆಯೇ ಇಲ್ಲ. ರೋಚಕವಾಗಿ ಸುಳ್ಳು ಮಾಹಿತಿ ಉಣಬಡಿಸುವ ಇಂತಹ ಮೂಲಗಳು ವದಂತಿಪ್ರಿಯರಿಗೆ ಹಬ್ಬ! ತಪ್ಪು ಮಾಹಿತಿಯೊಂದು ರೆಕ್ಕೆ-ಪುಕ್ಕಗಳನ್ನು ಸೇರಿಸಿಕೊಳ್ಳುತ್ತಾ, ಎಲ್ಲೆಡೆ ಹರಡುತ್ತಾ ಹೋದಂತೆ ಅದು ದುರುದ್ದೇಶಪೂರ್ವಕವಾಗಿ ಬದಲಾಗಬಹುದು. ಇಲ್ಲವೇ, ಏಕಾಏಕಿ ಯಾರದ್ದೋ ಮಾನಹಾನಿಗೊಳಿಸಲು ಅಥವಾ ತಮ್ಮ ಹಳೆಯ ಕಕ್ಷೆ ಸಾಧಿಸಲು ಸಮಯಕ್ಕೆ ಕಾಯುತ್ತಿರುವವರ ದಂಡು ಇಂತಹ ನಾಜೂಕಿನ ಸಂದರ್ಭಗಳಲ್ಲಿ ದುರುದ್ದೇಶಪೂರ್ವಕ ಮಾಹಿತಿ ಹರಡುವುದು ಸಾಮಾನ್ಯ. ಪ್ರಸ್ತುತ ಕೊರೊನಾವೈರಸ್ ಕಾಯಿಲೆಯಲ್ಲೂ ಜೈವಿಕ ಸಮರದ ವದಂತಿ, ಮುಖ್ಯ-ಗವಜು ತಯಾರಿಸುವವರ ಹುನ್ನಾರ, ಲಸಿಕೆ ತಯಾರಿಕೆಯ ಕಂಪೆನಿಗಳ ಮಸಲತ್ತು, ರೋಗಿಗಳನ್ನು ಸರ್ಕಾರ ಸಾಯಿಸುತ್ತಿದೆ ಎಂಬ ಪಕ್ಕಾ ಸುಳ್ಳುಸುದ್ಧಿಗಳು ಈಗಲೂ ಸದ್ದು ಮಾಡುತ್ತಿವೆ. ಇದರ ಮಧ್ಯೆ ಧರ್ಮ-ಕರ್ಮಗಳನ್ನು ಎಳೆದು ತಂದು ಜನರ ನಡುವೆ ಅವಿಶ್ವಾಸ ಮೂಡಿಸುವ ಮೂರ್ಖರ ಹಾವಳಿ ಬೇರೆ!

ಆತಂಕಕ್ಕೆ ಒಳಗಾದ ಜನ ಏನನ್ನಾದರೂ ನಂಬುವ ಮನಸ್ಥಿತಿಯಲ್ಲಿರುವುದು ಸಹಜ. ಅಂತಹ ಆತಂಕವನ್ನು ಕಡಿಮೆ ಮಾಡುವ ಪ್ರಾಮಾಣಿಕ ಪ್ರಯತ್ನ ನಮ್ಮದಾಗಬೇಕು. ಈ ನಿಟ್ಟಿನಲ್ಲಿ ಮಾಧ್ಯಮಗಳ ಪಾತ್ರ ತುಂಬಾ ದೊಡ್ಡದು. ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಮಾಹಿತಿಗೆ ಸ್ವಯಂ ಕಡಿವಾಣ ಹಾಕಬೇಕು. ತಪ್ಪು ಮಾಹಿತಿಯನ್ನು ನಿರ್ದಾಕ್ಷಿಣ್ಯವಾಗಿ ಖಂಡಿಸಬೇಕು. ಎಷ್ಟೋ ಬಾರಿ ಕಾಯಿಲೆಗಿಂತ ಹೆಚ್ಚಾಗಿ ವದಂತಿಗಳಿಂದ, ನಿರಾಧಾರವಾದ ಭಯದಿಂದ ನೋಯುವವರೇ ಹೆಚ್ಚು. ಕಾಯಿಲೆಯ ನಿಯಂತ್ರಣಕ್ಕೆ ಇಂತಹ ವದಂತಿಗಳು ಬಹಳ ಅಪಾಯಕಾರಿ. ಸಮರ್ಥವಾದ ಹಲವಾರು ಪ್ರಯತ್ನಗಳು ಕೇವಲ ಸುಳ್ಳುಸುದ್ಧಿಗಳಿಂದ ವಿಫಲವಾದ ಅನೇಕ ಉದಾಹರಣೆಗಳಿವೆ.

ಪ್ರಸ್ತುತ ಕೊರೊನಾವೈರಸ್ ಕಾಯಿಲೆಯ ಬಗ್ಗೆ ಸತ್ಯಗಳನ್ನು ಪತ್ತೆ ಮಾಡುವುದು ಹೇಗೆ? ಕೆಲವು ಸರಳ ಮಾರ್ಗಗಳಿವೆ. ಸಾಮಾಜಿಕ ಜಾಲತಾಣಗಳಲ್ಲಿ ಬಂದ ಯಾವುದೇ ಸುದ್ಧಿಯನ್ನಾದರೂ ಆಧಾರವಿಲ್ಲದೇ ನಂಬಬಾರದು. ಅಂತಹ ಸುದ್ಧಿ ವಿನಾಶಕಾರಿ ಅನಿಸಿದರೆ ಅದನ್ನು ಯಾವ ಕಾರಣಕ್ಕೂ ಪಸರಿಸಬಾರದು. ಅದು ಆತಂಕಕ್ಕೆ ಕಾರಣವಾದರೆ ಕೂಡಲೇ ತಜ್ಞರನ್ನು ಕೇಳಿ ಅದರ ಬಗ್ಗೆ ವಿವರ ಪಡೆಯಬೇಕು. ಇಲ್ಲವೇ, ವಿಶ್ವಾಸಾರ್ಹ ಮೂಲಗಳಿಂದ ಆ ಸುದ್ಧಿಯ ಅಧಿಕೃತತೆಯನ್ನು ಪರಿಶೀಲಿಸಬೇಕು.

ಕೊರೊನಾವೈರಸ್ ಕಾಯಿಲೆಯ ಬಗ್ಗೆ ವಿಶ್ವಾಸಾರ್ಹ ಮೂಲಗಳು ಯಾವುವು? ಮೊದಲನೆಯದು: ವಿಶ್ವ ಆರೋಗ್ಯ ಸಂಸ್ಥೆ (World Health Organization). ಪ್ರತಿದಿನವೂ ಹಲವಾರು ಬಾರಿ ಈ ಕಾಯಿಲೆಯ ಬಗ್ಗೆ ಮಾಹಿತಿಯನ್ನು ವಿಶ್ವ ಆರೋಗ್ಯ ಸಂಸ್ಥೆ ತನ್ನ ಜಾಲತಾಣದಲ್ಲಿ ಬಿತ್ತರಿಸುತ್ತಿದೆ. ಜೊತೆಗೆ, ಸಂಸ್ಥೆಯ ತಜ್ಞರು ಹಲವಾರು ಸುದ್ಧಿಜಾಲಗಳ ಮೂಲಕ ವಿಡಿಯೋ ಸಂದೇಶಗಳನ್ನು ಕಾಲಕಾಲಕ್ಕೆ ರವಾನಿಸಿ ಜನರಿಗೆ ಅಧಿಕೃತ ಮಾಹಿತಿ ತಲುಪಲು ಸಹಾಯ ಮಾಡುತ್ತಿದ್ದಾರೆ. ಈ ರೀತಿಯಾಗಿ ಕಾಯಿಲೆಗೆ ಸಂಬಂಧಿಸಿದ ಅತ್ಯಂತ ನಿಖರ ಮತ್ತು ವಿಶ್ವಾಸಾರ್ಹ ಸುದ್ಧಿಗಳನ್ನು ಕ್ಷಿಪ್ರವಾಗಿ ಪ್ರಪಂಚಕ್ಕೆ ತಲುಪುವಂತೆ ಮಾಡಲಾಗಿದೆ. ಕೊರೊನಾವೈರಸ್ ಕಾಯಿಲೆಯ ಬಗ್ಗೆ ಯಾವುದೇ ಮಾಹಿತಿ ವಿಶ್ವ ಆರೋಗ್ಯ ಸಂಸ್ಥೆಯ ಜಾಲತಾಣದಲ್ಲಿ ಇಲ್ಲವೆಂದರೆ ಆ ಮಾಹಿತಿ ಸುಳ್ಳು ಎಂದೇ ಅರ್ಥ.

ಎರಡನೆಯದು: ಯುರೋಪ್ ಮತ್ತು ಅಮೆರಿಕಾ ದೇಶಗಳ “ಕಾಯಿಲೆ ಸಂಶೋಧನೆಯ ಸಂಸ್ಥೆಗಳು”. ಬಹಳ ಉನ್ನತ ಮಟ್ಟದ ಸಂಶೋಧನೆಗೆ ಜಾಗತಿಕ ಮಟ್ಟದಲ್ಲಿ ಹೆಸರಾಗಿರುವ ವೈದ್ಯಕೀಯ ಸಂಶೋಧನಾ ಸಂಸ್ಥೆಗಳು ಹಗಲು-ರಾತ್ರಿಗಳ ಪರಿವೆ ಇಲ್ಲದೇ ಈ ನಿಟ್ಟಿನಲ್ಲಿ ಜಾಗೃತವಾಗಿವೆ. ಜನರಿಗೆ ಪ್ರಯೋಜನ ಆಗಬಲ್ಲ ಯಾವುದೇ ಹೊಸ ಮಾಹಿತಿ ಕಂಡುಬಂದರೆ, ಈ ಸಂಸ್ಥೆಗಳು ವಿಶ್ವ ಆರೋಗ್ಯ ಸಂಸ್ಥೆಯ ಮೂಲಕ ಅದನ್ನು ಪ್ರಪಂಚಕ್ಕೆ ತಿಳಿಸುತ್ತವೆ. ಜೊತೆಗೆ, ಆ ಬಗ್ಗೆ ತಮಗೆ ಕಂಡುಬಂದ ಹೊಸ ಮಾಹಿತಿಯ ಸಮಗ್ರ ವಿವರಗಳನ್ನು ಸಾಮಾನ್ಯ ಜನರಿಗೆ ಅರ್ಥವಾಗುವ ಭಾಷೆಯಲ್ಲಿ ಪ್ರಕಟಗೊಳಿಸುತ್ತವೆ.

ವಿಶ್ವ ಆರೋಗ್ಯ ಸಂಸ್ಥೆ ಈ ಬಾರಿ ಒಂದು ಹೊಸ ಪ್ರಯತ್ನ ನಡೆಸಿದೆ. ಕೋಟಿಗಟ್ಟಲೆ ಸದಸ್ಯರಿರುವ ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಕೊರೊನಾವೈರಸ್ ಕಾಯಿಲೆಯ ಬಗ್ಗೆ ಯಾರಾದರೂ ಮಾಹಿತಿ ಹಾಕಿದರೆ, ಅಂತಹ ಮಾಹಿತಿಯ ಅಧಿಕೃತತೆಯನ್ನು ಕೂಡಲೇ ತನ್ನ ಜಾಲತಾಣದಲ್ಲಿ ಪರೀಕ್ಷಿಸಿ, ನಂತರ ಆಯಾ ಸಾಮಾಜಿಕ ಜಾಲತಾಣದಲ್ಲಿ ಬಿಂಬಿಸುವ ಹಾಗೆ ವ್ಯವಸ್ಥೆ ಮಾಡಿದೆ. ಪಿಂಟೆರೆಸ್ಟ್ ಎನ್ನುವ ಸಾಮಾಜಿಕ ಜಾಲತಾಣ ಇಂತಹ ಒಪ್ಪಂದದ ಮುಂಚೂಣಿಯಲ್ಲಿ ನಿಂತು ತನ್ನ ಬದ್ಧತೆಯನ್ನು ಸಾರಿದೆ. ಸಾಮಾಜಿಕ ಜವಾಬ್ದಾರಿ ಉಳ್ಳ ಪ್ರತಿಯೊಬ್ಬ ನಾಗರಿಕನೂ ಮಾಡಬೇಕಾದ ಅವಶ್ಯ ಕೆಲಸ ಇದು. ಜೊತೆಗೆ, ಫ್ಯಾಕ್ಟ್ ಚೆಕ್ ನಂತಹ ಹಲವಾರು ತಾಣಗಳು ಈ ಕುರಿತಾದ ಯಾವುದೇ ಮಾಹಿತಿಯ ಅಧಿಕೃತತೆಯ ಪರಿಶೀಲನೆಯ ಬಗ್ಗೆ ಸಕ್ರಿಯವಾಗಿವೆ.

ವದಂತಿಗಳನ್ನು ದೂರವಿಡುವುದು ಕೂಡ ಪ್ರಸ್ತುತ ವಿಷಮ ಪರಿಸ್ಥಿಯಲ್ಲಿ ನಾವು ಜಗತ್ತಿಗೆ ಸಲ್ಲಿಸಬಹುದಾದ ಪ್ರಾಮಾಣಿಕ ಸೇವೆ. ಆ ನಿಟ್ಟಿನಲ್ಲಿ ಎಲ್ಲರೂ ಜಾಗೃತರಾಗಿರುವುದು ಅವಶ್ಯಕ.

ಫೆಬ್ರುವರಿ ೧೯, ೨೦೨೦ರ ವಿಶ್ವವಾಣಿಯಲ್ಲಿ ಪ್ರಕಟವಾದ ಲೇಖನ

Related Stories

No stories found.
ಇಜ್ಞಾನ Ejnana
www.ejnana.com