ಜೆನೆಟಿಕ್ ರೂಪಾಂತರ ಹೊಂದಿದ ಇ-ಕೋಲೈ ಈಗಾಗಲೇ ನಮಗೆ ಇನ್ಸುಲಿನ್, ಗ್ರೋಥ್ ಹಾರ್ಮೋನ್ ಮೊದಲಾದ ಜೀವರಕ್ಷಕ ಸಂಯುಕ್ತಗಳನ್ನು ಸೃಷ್ಟಿ ಮಾಡಿಕೊಡುತ್ತಿದೆ.
ಜೆನೆಟಿಕ್ ರೂಪಾಂತರ ಹೊಂದಿದ ಇ-ಕೋಲೈ ಈಗಾಗಲೇ ನಮಗೆ ಇನ್ಸುಲಿನ್, ಗ್ರೋಥ್ ಹಾರ್ಮೋನ್ ಮೊದಲಾದ ಜೀವರಕ್ಷಕ ಸಂಯುಕ್ತಗಳನ್ನು ಸೃಷ್ಟಿ ಮಾಡಿಕೊಡುತ್ತಿದೆ. Image by Arek Socha from Pixabay

ಕಾರ್ಬನ್-ಡೈ-ಆಕ್ಸೈಡ್ ನುಂಗುವ ಬ್ಯಾಕ್ಟೀರಿಯಾ!

ಅನೇಕ ಪ್ರಯೋಗಗಳಲ್ಲಿ ಬಳಕೆಯಾಗುವ ಇ-ಕೋಲೈ ಬ್ಯಾಕ್ಟೀರಿಯಾ ಜೆನೆಟಿಕ್ ತಂತ್ರಜ್ಞಾನಿಗಳಿಗೆ ಅಚ್ಚುಮೆಚ್ಚು

ಎಸ್-ಚೇ-ರಿ-ಷಿ-ಯಾ ಕೋಲೈ ಎಂಬ ನಾಲಿಗೆಗೆ ಕಸರತ್ತು ಕೊಡುವ ಹೆಸರಿನ ಬ್ಯಾಕ್ಟೀರಿಯಾಇದೆ. ಸುಲಭದಲ್ಲಿ ಇದನ್ನು ಇ-ಕೋಲೈಎನ್ನುತ್ತಾರೆ. ಪುರಾತನ ಕಾಲದಿಂದ ಮಾನವನ ಕರುಳಿಗೂ, ಈ ಬ್ಯಾಕ್ಟೀರಿಯಾಗೂ ಬಿಡಿಸಲಾಗದ ನಂಟು. ಅನೇಕ ಪ್ರಬೇಧಗಳಲ್ಲಿ ಕಾಣುವ ಇ-ಕೋಲೈ ಬ್ಯಾಕ್ಟೀರಿಯಾ ಮಾನವರಲ್ಲಿ ಕರುಳು ಬೇನೆ ಕಾಯಿಲೆ ತರುವುದಕ್ಕೆ ಹೆಸರುವಾಸಿ. ಆ ಕಾಯಿಲೆಯನ್ನು ವಿವರವಾಗಿ ಅಧ್ಯಯನ ಮಾಡುವ ನಿಟ್ಟಿನಲ್ಲಿ ಇ-ಕೋಲೈ ಬಗ್ಗೆ ಕೂಡ ತುಂಬಾ ವಿವರವಾಗಿ, ಅದರ ಅತ್ಯಂತ ಸೋಜಿಗದ ಸೂಕ್ಷ್ಮಗಳನ್ನೂ ವಿಜ್ಞಾನಿಗಳು ಅರಿತರು.ಒಂದು ರೀತಿಯಲ್ಲಿ ಇ-ಕೋಲೈ ಬ್ಯಾಕ್ಟೀರಿಯಾ ವಿಜ್ಞಾನಿಗಳ ಜೊತೆ ಗಾಢ ಸ್ನೇಹ ಬೆಳೆಸಿಕೊಂಡಿದೆ! ಒಂದು ಇ-ಕೋಲೈ ಬ್ಯಾಕ್ಟೀರಿಯಾ 20 ನಿಮಿಷಗಳಲ್ಲಿ ವಿದಳನಗೊಂಡು ಎರಡು ಆಗುತ್ತವೆ. ಅಂದರೆ,ಸಾಕಷ್ಟು ಆಹಾರ, ಸ್ಥಳ, ಉಷ್ಣತೆಗಳು ದೊರೆತರೆ ಒಂದೇ ಒಂದು ಇ-ಕೋಲೈ ಬ್ಯಾಕ್ಟೀರಿಯಾ ಕೇವಲ 4 ತಾಸುಗಳಲ್ಲಿ 1024 ಆಗುತ್ತದೆ. ಹೀಗೆಯೇ ಮುಂದುವರೆದರೆ 24 ತಾಸುಗಳಲ್ಲಿ ಭೂಮಿಯ ಮೇಲಿರುವ ಎಲ್ಲಾ ಮನುಷ್ಯರ ಸಂಖ್ಯೆಗಿಂತ ಇದರ ಸಂಖ್ಯೆ ಹೆಚ್ಚಾಗಿರುತ್ತದೆ! ಈ ತೀಕ್ಷ್ಣ ವೇಗದ ಕಾರಣದಿಂದ ಅನೇಕ ಪ್ರಯೋಗಗಳಲ್ಲಿ ಇ-ಕೋಲೈ ಬ್ಯಾಕ್ಟೀರಿಯಾ ಬಳಕೆ ಆಗುತ್ತದೆ. ಜೆನೆಟಿಕ್ ತಂತ್ರಜ್ಞಾನಿಗಳಿಗಂತೂ ಇದು ಬಹಳ ಅಚ್ಚುಮೆಚ್ಚು. ವಿಜ್ಞಾನಿಗಳ ಕೈವಾಡದಿಂದ ವಿಧವಿಧವಾದ ಜೆನೆಟಿಕ್ ರೂಪಾಂತರ ಹೊಂದಿದ ಇ-ಕೋಲೈಗಳು ಈಗಾಗಲೇ ನಮಗೆ ಇನ್ಸುಲಿನ್, ಗ್ರೋಥ್ ಹಾರ್ಮೋನ್ ಮೊದಲಾದ ಜೀವರಕ್ಷಕ ಸಂಯುಕ್ತಗಳನ್ನು ಸೃಷ್ಟಿ ಮಾಡಿಕೊಡುತ್ತಿದೆ. ಪ್ರಪಂಚದ ಕೋಟ್ಯಾಂತರ ಮಧುಮೇಹಿಗಳು ಇ-ಕೋಲೈ ನೆರವಿನಿಂದ ತಮ್ಮ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವಂತಾಗಿದೆ.

Image by PublicDomainPictures from Pixabay

ಕಳೆದ ವಾರವಷ್ಟೇ ಇಸ್ರೇಲಿನ ವೀಝ್ಮನ್ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಸೀದಾ ಕಾರ್ಬನ್-ಡೈ-ಆಕ್ಸೈಡ್ ಭಕ್ಷಿಸುವ ಇ-ಕೋಲೈ ಪ್ರಬೇಧವನ್ನು ಸಫಲವಾಗಿ ಸೃಷ್ಟಿಸಿದ ಸುದ್ಧಿ ತಿಳಿಸಿದ್ದಾರೆ.ಇದೊಂದು ಮಹತ್ವದ ವೈಜ್ಞಾನಿಕ ಬೆಳವಣಿಗೆ.ಈ ಮಹತ್ವವನ್ನು ತಿಳಿಯಲು ಮೊದಲು ಕೆಲವು ಮೂಲಭೂತ ಅಂಶಗಳ ಕಡೆಗೆ ಗಮನ ನೀಡಬೇಕು.

ಜೀವಿಗಳಲ್ಲಿ ಎರಡು ಪ್ರಬೇಧ – ಮೊದಲನೆಯದು, ಆರ್ಗಾನಿಕ್ ಸಂಯುಕ್ತಗಳ ಜೊತೆ ಆಕ್ಸಿಜನ್ ಸೇವಿಸಿ ಕಾರ್ಬನ್-ಡೈ-ಆಕ್ಸೈಡ್ ಹೊರಹಾಕುವ ಜೀವಿಗಳು. ಮನುಷ್ಯನಿಂದ ಹಿಡಿದು ಸರಿಸುಮಾರು ಎಲ್ಲಾ ಪ್ರಾಣಿಗಳೂ ಹೀಗೆಯೇ ಮಾಡುತ್ತವೆ. ಎರಡನೆಯ ಪ್ರಬೇಧವೆಂದರೆವಾತಾವರಣದ ಕಾರ್ಬನ್-ಡೈ-ಆಕ್ಸೈಡ್ ಅನ್ನು ಹೀರಿಕೊಂಡು ಆರ್ಗಾನಿಕ್ ಸಂಯುಕ್ತಗಳನ್ನು ತಯಾರು ಮಾಡುವ ಜೀವಿಗಳು. ಬಹುತೇಕ ಮರಗಳು, ಹಲವಾರು ಬಗೆಯ ಪಾಚಿಗಳು, ನೀಲಿ-ಬ್ಯಾಕ್ಟೀರಿಯಾಗಳು ಈ ಕೆಲಸ ಮಾಡುತ್ತವೆ. ಈಗಂತೂ ನಮ್ಮ ಉದ್ಯಮೀಕರಣ, ಜೀವನಶೈಲಿ, ಕಾರ್ಖಾನೆಗಳ ಅಭಿವೃದ್ಧಿಯಿಂದ ಜಗತ್ತಿನ ವಾತಾವರಣಲ್ಲಿ ಕಾರ್ಬನ್-ಡೈ-ಆಕ್ಸೈಡ್ ಅಂಶ ಏರುತ್ತಲೇ ಇದೆ. ಹಸಿರು-ಮನೆ ಗಾಳಿಯಾದ ಇದು ವಾತಾವರಣದ ತಾಪಮಾನವನ್ನೂ, ವಾಯುಮಾಲಿನ್ಯವನ್ನೂ ಹೆಚ್ಚಿಸುತ್ತದೆ. ಮಾಲಿನ್ಯ ನಿಯಂತ್ರಣಗೊಳ್ಳಬೇಕು ಎಂದಾದರೆ ಒಂದೆಡೆ ಕಾರ್ಬನ್-ಡೈ-ಆಕ್ಸೈಡ್ ಉತ್ಪಾದನೆ ತಗ್ಗಿಸಬೇಕು; ಮತ್ತೊಂದೆಡೆ ನಿರಂತರವಾಗಿ ವಾತಾವರಣಕ್ಕೆ ಸೇರುತ್ತಲೇ ಇರುವ ಕಾರ್ಬನ್-ಡೈ-ಆಕ್ಸೈಡ್ ಅನ್ನು ಹೀರಿಕೊಳ್ಳುವ ವಿಧಾನಗಳನ್ನು ಹೆಚ್ಚಿಸಬೇಕು. ಅದಕ್ಕಾಗಿಯೇ,“ಮರಗಳನ್ನು ಬೆಳೆಸಬೇಕು; ಕಾಡುಗಳನ್ನು ಕಡಿಯಬಾರದು” ಎಂಬ ಕೋರಿಕೆ. ಕೆಲವು ಪಾಚಿಗಳು, ನೀಲಿ-ಬ್ಯಾಕ್ಟೀರಿಯಾಗಳು ಕೂಡ ಈ ಕೆಲಸ ಸ್ವಲ್ಪ ಮಟ್ಟಿಗೆ ಮಾಡಬಲ್ಲವಾದರೂ ಸಾಮಾನ್ಯ ವಾತಾವರಣದಲ್ಲಿ ಅವು ನಮ್ಮ ಇಚ್ಛೆಗೆ ತಕ್ಕಂತೆ ಬೆಳೆಯಲಾರವು.

ಹೀಗಿರುವಾಗ ವಿಜ್ಞಾನಿಗಳು ಸುಮ್ಮನೆ ಇರಲಾಗುತ್ತದೆಯೇ?ವಾತಾವರಣದಲ್ಲಿ ಕಾರ್ಬನ್-ಡೈ-ಆಕ್ಸೈಡ್ ಕಡಿಮೆ ಆಗುವ ಸೂಚನೆಗಳಂತೂ ಸದ್ಯದ ವೈಜ್ಞಾನಿಕ ಕ್ರಾಂತಿಯ, ಕೊಳ್ಳುಬಾಕ ಸಂಸ್ಕೃತಿಯ ಯುಗದಲ್ಲಿ ಇಲ್ಲ! ಹೀಗಾಗಿ ವಾತಾವರಣದ ಕಾರ್ಬನ್-ಡೈ-ಆಕ್ಸೈಡ್ ಅನ್ನು ಹೀರಿಕೊಳ್ಳಬಲ್ಲ ಬೇರೆ ಬೇರೆ ವಿಧಾನಗಳನ್ನು ಪತ್ತೆ ಮಾಡಲೇಬೇಕು. ಇದನ್ನು ಸಾಧಿಸಲು ವಿಜ್ಞಾನಿಗಳು ಮೊರೆ ಹೋದದ್ದು ತಮ್ಮ ಹಳೆಯ ಗೆಳೆಯ ಇ-ಕೋಲೈಗೆ. ಕ್ಷಿಪ್ರವಾಗಿ ಬೆಳೆಯುವ ಇ-ಕೋಲೈ ಒಂದು ವೇಳೆ ಕಾರ್ಬನ್-ಡೈ-ಆಕ್ಸೈಡ್ ಅನ್ನೇ ಆಹಾರವಾಗಿ ಉಣಲು ಆರಂಭಿಸಿದರೆ? ಆಗ ವಾತಾವರಣದ ಕಾರ್ಬನ್-ಡೈ-ಆಕ್ಸೈಡ್ ಪ್ರಮಾಣವೂ ಕಡಿಮೆ ಆಗುತ್ತದೆ; ಜೊತೆಗೆ ಇ-ಕೋಲೈ ತಾನು ನುಂಗಿದ ಕಾರ್ಬನ್-ಡೈ-ಆಕ್ಸೈಡ್ ನಿಂದ ಬೇರೆ ಉಪಯುಕ್ತ ಕಾರ್ಬಾನಿಕ್ ಸಂಯುಕ್ತವನ್ನೂ ತಯಾರಿಸುತ್ತದೆ ಎಂದು ವಿಜ್ಞಾನಿಗಳ ಲೆಕ್ಕಾಚಾರ. ಸುಮಾರು ಮೂರು ವರ್ಷಗಳ ಹಿಂದೆಯೇ ಇ-ಕೋಲೈಗೆ ಕಾರ್ಬನ್-ಡೈ-ಆಕ್ಸೈಡ್ ಉಣಿಸಿ ಸಕ್ಕರೆ ತಯಾರಿಸಲು ವಿಫಲ ಪ್ರಯತ್ನ ಮಾಡಿದ್ದ ವಿಜ್ಞಾನಿಗಳು ಈ ಬಾರಿ “ನಾವು ಸುಮ್ಮನೆ ಕಾರ್ಬನ್-ಡೈ-ಆಕ್ಸೈಡ್ ಉಣಿಸುತ್ತೇವೆ; ಅದನ್ನು ಹೇಗೆ ಬೇಕೋ ನಿಭಾಯಿಸು” ಎಂಬಂತೆ ಬ್ಯಾಕ್ಟೀರಿಯಾದ ಮನ ಒಲಿಸಿದರು!

ಇ-ಕೋಲೈಗೆ ಕಾರ್ಬನ್-ಡೈ-ಆಕ್ಸೈಡ್ ಉಣಿಸುವುದು ಸುಲಭದ ತುತ್ತೇನೂ ಆಗಿರಲಿಲ್ಲ! ನಾವು ಹೇಳಿದಂತೆಲ್ಲಾ ಕೇಳಲು ಇ-ಕೋಲೈ ನಮ್ಮ ಅಂಕೆಯಲ್ಲಿ ಇರುವ ಜೀವಿಯಲ್ಲ.ಅದು ಕೂಡ ನಮ್ಮಂತೆಯೇ ಸಕ್ಕರೆ ತಿಂದು ಕಾರ್ಬನ್-ಡೈ-ಆಕ್ಸೈಡ್ ಹೊರಹಾಕುವ ಪ್ರಬೇಧಕ್ಕೆ ಸೇರಿದ ಜೀವಿ.ಜೊತೆಗೆ,ಇ-ಕೋಲೈನಲ್ಲಿ ಕಾರ್ಬನ್-ಡೈ-ಆಕ್ಸೈಡ್ ಹೀರಿಕೊಲ್ಲಬಲ್ಲ ಯಾವ ನೈಸರ್ಗಿಕ ಶಕ್ತಿಯೂ ಇಲ್ಲ. ಅದಕ್ಕೇ ವಿಜ್ಞಾನಿಗಳು ಮೊದಲು ಜೆನೆಟಿಕ್ ತಂತ್ರಜ್ಞಾನದ ಮೂಲಕ ಎರಡು ಜೀನ್ ಗಳನ್ನು ಇ-ಕೋಲೈ ಒಳಗೆ ಸೇರಿಸಿದರು. ಈ ಜೀನ್ ಗಳು ಕಾರ್ಬನ್-ಡೈ-ಆಕ್ಸೈಡ್ ಅನ್ನು ಸಂಸ್ಕರಿಸಬಲ್ಲ ಕಿಣ್ವಗಳನ್ನು ಇ-ಕೋಲೈಗೆ ನೀಡಿದವು.

ಎರಡು ಹೆಚ್ಚಿನ ಕಿಣ್ವಗಳು ದೊರೆತ ಮಾತ್ರಕ್ಕೆ ಇ-ಕೋಲೈಯೇನೂ ಸರಾಗವಾಗಿ ಕಾರ್ಬನ್-ಡೈ-ಆಕ್ಸೈಡ್ ನುಂಗಲು ಆರಂಭಿಸಲಿಲ್ಲ. ವಿಜ್ಞಾನಿಗಳು ಈ ಹೊಸ ಜೀನ್ ಅಳವಡಿಸಿದ ಇ-ಕೋಲೈಗಳಿಗೆ ಅಲ್ಪಪ್ರಮಾಣದಲ್ಲಿ ಸಕ್ಕರೆಯನ್ನೂ ಉಣಿಸಿ, ಅದರ ಜೊತೆಗೆ ಕಾರ್ಬನ್-ಡೈ-ಆಕ್ಸೈಡ್ ಅನ್ನೂ ಸೇರಿಸುತ್ತಿದ್ದರು. ವಾತಾವರಣದಲ್ಲಿ ಸಾಮಾನ್ಯವಾಗಿ ಸಿಗುವ ಕಾರ್ಬನ್-ಡೈ-ಆಕ್ಸೈಡ್ ಪ್ರಮಾಣಕ್ಕಿಂತ ಸುಮಾರು 250 ಪಟ್ಟು ಹೆಚ್ಚು ಸಾಂದ್ರತೆಯಲ್ಲಿ ಕಾರ್ಬನ್-ಡೈ-ಆಕ್ಸೈಡ್ ಅನ್ನು ಇ-ಕೋಲೈಗೆ ನೀಡಿದಾಗ ಸ್ವಲ್ಪ ಬದಲಾವಣೆ ಕಂಡಿತು. ಅಂತಹ ಇ-ಕೋಲೈಗಳು ತಮ್ಮೊಳಗೇ ಮತ್ತಷ್ಟು ಜೆನೆಟಿಕ್ ವ್ಯತ್ಯಾಸಗಳನ್ನು ನಿರ್ಮಿಸಿಕೊಂಡು ಸ್ವಲ್ಪ ಸ್ವಲ್ಪವಾಗಿ ಕಾರ್ಬನ್-ಡೈ-ಆಕ್ಸೈಡ್ ಹೀರಿಕೊಳ್ಳಲು ಆರಂಭಿಸಿದವು. ಸುಮಾರು 200 ದಿನಗಳ ಸತತ ಪ್ರಯತ್ನದ ನಂತರ ಅವಕ್ಕೆ ನೀಡುತ್ತಿದ್ದ ಸಕ್ಕರೆ ಪ್ರಮಾಣವನ್ನು ಇಳಿಸುತ್ತಾ ಕೊನೆಗೆ ಸಂಪೂರ್ಣವಾಗಿ ನಿಲ್ಲಿಸಲಾಯಿತು.ಆ ಹಂತದಲ್ಲಿ ಕೇವಲ ಕಾರ್ಬನ್-ಡೈ-ಆಕ್ಸೈಡ್ ಮಾತ್ರ ಬಳಸಿಕೊಂಡು ಜೀವಿಸಬಲ್ಲ ಇ-ಕೋಲೈ ಪ್ರಬೇಧ ತಯಾರಾಯಿತು. ಅದನ್ನು ಇನ್ನೂ 300 ದಿನಗಳ ಕಾಲ ಪೋಷಿಸಿದ ಮೇಲೆ ಈ ವಿಶಿಷ್ಟ ಪ್ರಬೇಧದ ಇ-ಕೋಲೈಗಳು ನಿಧಾನವಾಗಿ ವಿದಳನಗೊಳ್ಳಲು ಆರಂಭಿಸಿದವು. ಅಂದರೆ, ಸುಮಾರು ಎರಡು ವರ್ಷಗಳ ಕಠಿಣ ಪ್ರಯತ್ನದ ನಂತರ ಕೇವಲ ಕಾರ್ಬನ್-ಡೈ-ಆಕ್ಸೈಡ್ ಅನ್ನು ನುಂಗಿ ಬೆಳೆಯಬಲ್ಲ ಇ-ಕೋಲೈ ಸೃಷ್ಟಿಸಲು ಸಾಧ್ಯವಾಯಿತು.

ಆದರೆ,ಕಾರ್ಬನ್-ಡೈ-ಆಕ್ಸೈಡ್ ತಿಂದು ಇವು ಇನ್ನೇನನ್ನು ಕೊಡುತ್ತವೆ? ವಿಜ್ಞಾನಿಗಳು ಚಕಿತರಾಗುವಂತೆ ಇವು ಕಾರ್ಬನ್-ಡೈ-ಆಕ್ಸೈಡ್ ಅನ್ನು ಜೀರ್ಣಿಸಿಕೊಂಡು ಮತ್ತೆ ಕಾರ್ಬನ್-ಡೈ-ಆಕ್ಸೈಡ್ ಅನ್ನೇ ಉತ್ಪತ್ತಿ ಮಾಡಿದವು! ಆದರೆ,ಅದರಿಂದ ನಿರಾಶರಾಗುವ ಅಗತ್ಯವಿಲ್ಲ.ಈ ಹಂತದಲ್ಲಿ ಇ-ಕೋಲೈಗಳಿಗೆ ಕಾರ್ಬನ್-ಡೈ-ಆಕ್ಸೈಡ್ ಅನ್ನು ಉಣಿಸಿದ್ದೇ ಬಹಳ ಮಹತ್ವದ ಸಾಧನೆ. ಹೀಗೆ ಜೀರ್ಣಿಸಿಕೊಂಡ ಕಾರ್ಬನ್-ಡೈ-ಆಕ್ಸೈಡ್ ನಿಂದ ನಿಧಾನವಾಗಿ ಬೇರೆ ಆರ್ಗಾನಿಕ್ ಸಂಯುಕ್ತವನ್ನುತಯಾರಿಸಲು ಅವನ್ನು ಮಾರ್ಪಾಡು ಮಾಡಬಹುದು ಎಂಬ ಖಚಿತ ವಿಶ್ವಾಸ ವಿಜ್ಞಾನಿಗಳಿಗಿದೆ.

ಅಂದರೆ ಇನ್ನು ಮುಂದೆ ನಾವು ಕಾರ್ಬನ್-ಡೈ-ಆಕ್ಸೈಡ್ ಮಾಲಿನ್ಯದ ಬಗ್ಗೆ ತಲೆ ಕೆಡಿಸಿಕೊಳ್ಳದೇ ಸರಭರ ಕಾರುಗಳನ್ನು ಹತ್ತಿ ಹೊಗೆ ಉಗುಳಬಹುದೇ?ಆ ಮಾಲಿನ್ಯವನ್ನೆಲ್ಲಾ ಹೀರಿ ಇ-ಕೋಲೈಗಳು ಪಿಜ್ಜಾ ತಯಾರಿಸುತ್ತವೆಯೇ?! ಇನ್ನೂ ಇಲ್ಲ.ಈಗ ವಾತಾವರಣದಲ್ಲಿ ಇರುವ ಕಾರ್ಬನ್-ಡೈ-ಆಕ್ಸೈಡ್ ಪ್ರಮಾಣ ಶೇಕಡಾ 0.041 ಮಾತ್ರ. ಆದರೆ ವಿಜ್ಞಾನಿಗಳು ಈ ಪ್ರಯೋಗದಲ್ಲಿ ನೀಡಿದ್ದು ಶೇಕಡಾ 10ಪ್ರಮಾಣದ ಕಾರ್ಬನ್-ಡೈ-ಆಕ್ಸೈಡ್. ಇದು ಸಾಮಾನ್ಯ ಮಟ್ಟಕ್ಕಿಂತ 250 ಪಟ್ಟು ಹೆಚ್ಚು. ಅಷ್ಟು ಮಟ್ಟದ ಕಾರ್ಬನ್-ಡೈ-ಆಕ್ಸೈಡ್ ವಾತಾವರಣದಲ್ಲಿ ಬರಲು ನೈಸರ್ಗಿಕವಾಗಿ ಸಾಧ್ಯವೇ ಇಲ್ಲ. ಅಷ್ಟೊಂದು ಹೆಚ್ಚಿನ ಸಾಂದ್ರತೆಯ ಕಾರ್ಬನ್-ಡೈ-ಆಕ್ಸೈಡ್ ನೀಡಿದರೂ ಈ ವಿಶಿಷ್ಟ ಪ್ರಬೇಧದ ಇ-ಕೋಲೈ ವಿದಳನ ಆಗುವುದಕ್ಕೆ 18 ಗಂಟೆ ಕಾಲ ತೆಗೆದುಕೊಳ್ಳುತ್ತಿದೆ.ಅಂದರೆ, ಸದ್ಯಕ್ಕೆ ಕಾರ್ಬನ್-ಡೈ-ಆಕ್ಸೈಡ್ ತಲೆನೋವನ್ನು ಇ-ಕೋಲೈ ಪಾಲಿಗೆ ವರ್ಗಾಯಿಸಲು ಸಾಧ್ಯವಿಲ್ಲ ಎಂದಾಯಿತು. ನಾವೇ ಮರ ಬೆಳೆಸಿ ನಮ್ಮನ್ನು ಕಾಪಾಡಿಕೊಳ್ಳಬೇಕು!

ಹೀಗೆ ಕಾರ್ಬನ್-ಡೈ-ಆಕ್ಸೈಡ್ ನುಂಗಿ ಬಾಳುವ ಇ-ಕೋಲೈ ತನ್ನೊಳಗೆ ಯಾವ್ಯಾವ ಜೆನೆಟಿಕ್ ಬದಲಾವಣೆ ಮಾಡಿಕೊಂಡಿದೆ ಎಂದು ವಿಜ್ಞಾನಿಗಳು ನೋಡಿದ್ದಾರೆ. ಅವರಿಗೆ ಒಟ್ಟು 11 ಬೇರೆ ಮಾದರಿಯ ಹೊಸ ಜೀನ್ ಗಳು ಗೋಚರವಾಗಿವೆ. ಈ ಜೀನ್ ಗಳನ್ನೇ ಕೀಲಿಯಾಗಿ ಹಿಡಿದು ಇಂತಹ ಇ-ಕೋಲೈಗಳನ್ನು ಮತ್ತೂ ಕಾರ್ಯಕುಶಲಿಯನ್ನಾಗಿ ಮಾಡುವ ಹುನ್ನಾರ ವಿಜ್ಞಾನಿಗಳದ್ದು.

ಆಕ್ಸಿಜನ್ ಮತ್ತು ಕಾರ್ಬಾನಿಕ್ ಸಂಯುಕ್ತ ನುಂಗಿ ಬದುಕುವ ಒಂದು ಜೀವಿಪ್ರಬೇಧವನ್ನು ಕಾರ್ಬನ್-ಡೈ-ಆಕ್ಸೈಡ್ ತಿಂದು ಬದುಕುವಂತೆ ಮಾಡಿದ ಈ ಪ್ರಯೋಗ ಜೀವವಿಜ್ಞಾನದ ಒಂದು ಮೈಲುಗಲ್ಲು.ಭವಿಷ್ಯದಲ್ಲಿ ಇವು ಗಾಳಿಯಲ್ಲಿನ ಕಾರ್ಬನ್-ಡೈ-ಆಕ್ಸೈಡ್ ನುಂಗಿ ಚಪಾತಿ-ಪಲ್ಯ ತಯಾರಿಸಿಕೊಟ್ಟರೆ ಮತ್ತಿನ್ನೇನು ಬೇಕು? ಬೆಚ್ಚನ ಮನೆ, ವೆಚ್ಚಕ್ಕೆ ಹೊನ್ನು, ಊಟಕ್ಕೆ ಇ-ಕೋಲೈ ಇಟ್ಟುಕೊಂಡು ಸರ್ವಜ್ಞ ಹೇಳುವಂತೆ ಸ್ವರ್ಗಕ್ಕೆ ಕಿಚ್ಚು ಹಚ್ಚಬಹುದು!

ಡಿಸೆಂಬರ್‍ ೭, ೨೦೧೯ರ ವಿಶ್ವವಾಣಿಯಲ್ಲಿ ಪ್ರಕಟವಾದ ಲೇಖನ

Related Stories

No stories found.
logo
ಇಜ್ಞಾನ Ejnana
www.ejnana.com