ಮಾಸ್ಕನ್ನು ಧರಿಸುವುದು ವಾಸ್ತವವಾಗಿ ಬಲು ಪರಿಣಾಮಕಾರಿ ಕ್ರಮವಷ್ಟೆ ಅಲ್ಲ, ಬಹುಶಃ ನಾವೆಲ್ಲರೂ ಪಾಲಿಸಲೇಬೇಕಾದ ಅತ್ಯಾವಶ್ಯಕ ಕ್ರಮ.
ಮಾಸ್ಕನ್ನು ಧರಿಸುವುದು ವಾಸ್ತವವಾಗಿ ಬಲು ಪರಿಣಾಮಕಾರಿ ಕ್ರಮವಷ್ಟೆ ಅಲ್ಲ, ಬಹುಶಃ ನಾವೆಲ್ಲರೂ ಪಾಲಿಸಲೇಬೇಕಾದ ಅತ್ಯಾವಶ್ಯಕ ಕ್ರಮ. Image by Anastasia Gepp from Pixabay

ಕೋವಿಡ್-‌೧೯ ವೈರಸ್ಸು ಗಾಳಿಯಲ್ಲಿ ಹರಡುವುದೇ?

ಕೋವಿಡ್-೧೯ಕ್ಕೆ ಸಂಬಂಧಿಸಿದಂತೆ ಚರ್ಚೆಗೊಳಪಟ್ಟ ಇತ್ತೀಚಿನ ಸಂಗತಿ ಎಂದರೆ ಈ ವೈರಸ್ಸಿನ ಸೋಂಕು ಗಾಳಿಯಿಂದ ಹರಡುತ್ತದೆಯೋ ಎನ್ನುವುದು. ಈ ಪ್ರಶ್ನೆಗೆ ಸುಪ್ರಸಿದ್ಧ ವಿಜ್ಞಾನಿ ಡಾ. ಶೇಖರ್‌ ಸಿ. ಮಾಂಡೆಯವರು ನೀಡಿರುವ ಉತ್ತರ ಇಲ್ಲಿದೆ.

ಕೋವಿಡ್‌ ಸಾಂಕ್ರಾಮಿಕವಾಗಲು ಆರಂಭಿಸಿ ಆರು ತಿಂಗಳುಗಳು ಕಳೆಯುತ್ತಲಿವೆ. ಸಾರ್ಸ್-ಕೋ೨ ವೈರಸ್ಸು ಹರಡುವ ಬಗ್ಗೆ ಹೊಸ, ಹೊಸ ಸಂಗತಿಗಳು ಹೊರಬರುತ್ತಿವೆ. ಕೆಲವು ಇನ್ನೂ ಚರ್ಚಾಸ್ಪದ. ಇಂತಹ ಚರ್ಚೆಗೊಳಪಟ್ಟ ಇತ್ತೀಚಿನ ಸಂಗತಿ ಎಂದರೆ ಈ ವೈರಸ್ಸಿನ ಸೋಂಕು ಗಾಳಿಯಿಂದ ಹರಡುತ್ತದೆಯೋ ಎನ್ನುವುದು. ನಮಗೆ ಸದ್ಯಕ್ಕೆ ಇರುವ ಅರಿವಿನ ಹಿನ್ನೆಲೆಯಲ್ಲಿ ಈ ಪ್ರಶ್ನೆಗೆ ಉತ್ತರಿಸಲು ಪ್ರಯತ್ನಿಸಿದ್ದೇನೆ.

ಈ ಸೋಂಕು ಪ್ರಮಖವಾಗಿ ಉಸಿರಾಟದ ಅಂಗಗಳ ಮೂಲಕ ಆಗುತ್ತದೆ ಎನ್ನುವುದನ್ನು ಎಲ್ಲರೂ ಒಪ್ಪುತ್ತಾರೆ. ಉಸಿರಾಟದಿಂದ, ಅಥವಾ ಮೂಗು ಮತ್ತು ಬಾಯನ್ನು ಮುಟ್ಟಿಕೊಳ್ಳುವುದರಿಂದ ಹಾಗೂ ಬಹುಶಃ ಕಣ್ಣನ್ನು ಮುಟ್ಟಿಕೊಳ್ಳುವುದರಿಂದಲೂ ಸೋಂಕು ಹರಡಬಹುದು. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ವ್ಯಕ್ತಿಯಿಂದ ವ್ಯಕ್ತಿಗೆ ನೇರ ಸಂಪರ್ಕದಿಂದಷ್ಟೆ ಈ ಸೋಂಕು ಹರಡುತ್ತದೆ. ವಿಶ್ವಸಂಸ್ಥೆಯ ಈ ನಿಲುವಿಗೆ ಮೂಲ, ಸೋಂಕಿರುವ ವ್ಯಕ್ತಿ ಸೀನಿದಾಗ, ಇಲ್ಲವೇ ಕೆಮ್ಮಿದಾಗ ದೊಡ್ಡದಾದ ಸೋಂಕುಹನಿಗಳು ಹೊರಬೀಳುತ್ತವೆ ಎನ್ನುವುದು. ಇವನ್ನು ವ್ಯಕ್ತಿಯ ಸಮೀಪದಲ್ಲಿರುವವರು ಉಸಿರಾಡಿದಾಗ ಸೋಂಕಿಸಕೊಳ್ಳಬಹುದು. ಅಥವಾ ಈ ದೊಡ್ಡ ಹನಿಗಳು ಬಿದ್ದಂತಹ ಮೇಲ್ಮೈಗಳನ್ನು ಮುಟ್ಟುವ ಜನರು ಅನಂತರ ಕೈಗಳನ್ನು ತೊಳೆದುಕೊಳ್ಳದೆಯೇ ಕಣ್ಣು, ಮೂಗು ಅಥವಾ ಬಾಯಿಯನ್ನು ಮುಟ್ಟಿಕೊಂಡಾಗ ಸೋಂಕು ಹರಡುವ ಸಾಧ್ಯತೆಗಳಿವೆ. ಹೀಗಾಗಿ ಪ್ರಪಂಚದಾದ್ಯಂತ ಆಗಾಗ್ಗೆ ಪ್ರಕಟಿಸಿದ ನಿರ್ದೇಶಗಳೆಲ್ಲವೂ ವ್ಯಕ್ತಿ- ವ್ಯಕ್ತಿಗಳ ನಡುವೆ ಅಂತರವನ್ನು ಕಾಯ್ದುಕೊಳ್ಳುವ ಬಗ್ಗೆ ಹಾಗೂ ಆಗಾಗ್ಗೆ ಸಾಬೂನಿನಿಂದ ಕೈ ತೊಳೆಯುವ ಬಗ್ಗೆ ಒತ್ತು ಕೊಡುತ್ತವೆ. ಈ ದೊಡ್ಡ ಹನಿಗಳು ಬಲು ದೂರ ಸಿಡಿಯುವುದಿಲ್ಲ. ಬೇಗನೆ ಕೆಳಗೆ ನೆಲೆಸುತ್ತವೆ. ಹೀಗಾಗಿ ಸೋಂಕಿರುವ ವ್ಯಕ್ತಿಯಿಂದ ಒಂದು ಮೀಟರು ದೂರವನ್ನು ಕಾಯ್ದುಕೊಳ್ಳುವುದು ರೋಗವನ್ನು ಸೋಂಕಿಸಿಕೊಳ್ಳುವ ಸಾಧ್ಯತೆಯನ್ನಯ ತಗ್ಗಿಸಬಹುದು. ಈ ದೂರವನ್ನೇ ವಿಶ್ವ ಆರೋಗ್ಯ ಸಂಸ್ಥೆ ವ್ಯಕ್ತಿ-ವ್ಯಕ್ತಿಗಳ ನಡುವಣ ಸಂಪರ್ಕ ಎಂದು ಪರಿಗಣಿಸಿದೆ.

ಅಮೆರಿಕೆ ರೋಗ ನಿಯಂತ್ರಣ ಹಾಗೂ ನಿರೋಧ ಕೇಂದ್ರ ಇದೇ ಮೇ ೨೦, ೨೦೨೦ರಂದು ನೀಡಿದ ಸ್ಪಷ್ಟನೆಯಲ್ಲಿ, “ಕೋವಿಡ್‌ ೧೯ ಹರಡುವ ಪ್ರಾಥಮಿಕ ಹಾಗೂ ಬಲು ಪ್ರಮುಖ ವಿಧಾನವೆಂದರೆ ವ್ಯಕ್ತಿ-ವ್ಯಕ್ತಿಗಳ ನಡುವಣ ನಿಕಟ ಸಂಪರ್ಕ. ಕೋವಿಡ್-‌೧೯ರ ಬಗ್ಗೆ ಪ್ರಯೋಗಾಲಯಗಳಲ್ಲಿ ನಡೆದಿರುವ ಅಧ್ಯಯನಗಳ ಪ್ರಕಾರ ನಮಗೆ ಪರಿಚಿತವಿರುವ ಇದೇ ರೀತಿಯ ಶ್ವಾಸಸಂಬಂಧೀ ರೋಗಗಳ ಬಗೆಗಿನ ಮಾಹಿತಿಯ ಪ್ರಕಾರ ವೈರಸ್ಸು ನೆಲೆಸಿರುವ ವಸ್ತು ಇಲ್ಲವೇ ಮೇಲ್ಮೈಯನ್ನು ಮುಟ್ಟುವುದರಿಂದ ಹಾಗೂ ತದನಂತರ ತಮ್ಮ ಬಾಯಿ, ಮೂಗು ಮತ್ತು ಪ್ರಾಯಶಃ ಕಣ್ಣುಗಳನ್ನು ಮುಟ್ಟಿಕೊಳ್ಳುವುದರಿಂದ ಯಾವುದೇ ವ್ಯಕ್ತಿಗೆ ಕೋವಿಡ್‌ -೧೯ ಸೋಂಕುವ ಸಾಧ್ಯತೆಗಳಿವೆ.. ಆದರೆ ಇದೊಂದೇ ವೈರಸ್ಸು ಹರಡುವ ಪ್ರಮುಖ ಮಾರ್ಗವಲ್ಲ." ಎಂದು ಹೇಳಿತತ್ತು. ಇದರ ಪ್ರಕಾರ ವಸ್ತುಗಳನ್ನು ಮುಟ್ಟುವುದಷ್ಟೆ ಸೋಂಕು ಹತ್ತಿಸಿಕೊಳ್ಳುವ ಪ್ರಮುಖ ಮಾರ್ಗವಲ್ಲ ಎಂದು ಸೂಚಿಸಿತ್ತು. ಹೀಗೆ ಒಂದೆಡೆ ಸೋಂಕಿತ ವಸ್ತುಗಳು ಹಾಗೂ ಮೇಲ್ಮೈ ಸೋಂಕಿನ ಆಕರವಿರಬಹುದೋ ಎನ್ನುವ ಚರ್ಚೆ ನಡೆಯುವಾಗಲೂ, ಉಸಿರಾಟದ ಮೂಲಕವೇ ಸೋಂಕು ಹತ್ತುತ್ತದೆ ಎನ್ನುವುದು ತಿಳಿದಿತ್ತು.

ಕೆಮ್ಮಿದಾಗ ಇಲ್ಲವೇ ಸೀನಿದಾಗ ಗಾಳಿಗೆ ಹನಿಗಳು ಹಾರುತ್ತವೆ ಎನ್ನುವುದು ಗೊತ್ತಿರುವ ವಿಯ. ಈ ಹನಿಗಳು ಸಾಮಾನ್ಯವಾಗಿ ೦.೫-೦.೧೨µm ಗಾತ್ರವಿರುತ್ತವೆ. ಒಂದು µm ಎಂದರೆ ಒಂದು ಮಿಮೀನ ಸಾವಿರದಲ್ಲೊಂದು ಅಂಶ1. ಹನಿಗಳ ಗಾತ್ರ ೫ರಿಂದ ಹತ್ತು ಮೈಕ್ರೊಮೀಟರು ಇದ್ದರೆ ಅವನ್ನು ಶ್ವಾಸರೂಪದ ಹನಿಗಳು ಎಂದು ವಿಶ್ವ ಆರೋಗ್ಯ ಸಂಸ್ಥೆ ಪರಿಗಣಿಸುತ್ತದೆ. ಐದು ಮೈಕ್ರೊಮೀಟರಿಗಿಂತಲೂ ಕಡಿಮೆ ಗಾತ್ರದ ಹನಿಗಳನ್ನು “ಹನಿಬೀಜ” ಗಳೆಂದು ಹೇಳಲಾಗುತ್ತದೆ. ಉಸಿರಾಟದ ಸೋಂಕು ಹರಡುವ ರೀತಿಯನ್ನು ಅರಿತುಕೊಳ್ಳಬೇಕೆಂದರೆ ಇದನ್ನು ಅಥ ಮಾಡಿಕೊಳ್ಳಬೇಕಾದದ್ದು ಮುಖ್ಯವಾಗುತ್ತದೆ.

ಸೀನಿದಾಗ ಅಂದಾಜು ೪೦,೦೦೦ ಶ್ವಾಸರೂಪದ ಹನಿಗಳು ಉತ್ಪತ್ತಿಯಾಗುತ್ತವೆ. ಐದು ನಿಮಿಷಗಳವರೆಗೆ ಕೆಮ್ಮಿದಾಗ ಇನ್ನೂ ಸಣ್ಣನೆಯ ಸುಮಾರು ಮೂರು ಸಾವಿರ ಹನಿಗಳು ಹುಟ್ಟುತ್ತವೆ. ಉಸಿರಾಡುವಾಗ ಯಾರಾದರೂ ಈ ಹನಿಗಳನ್ನು ಚೆಲ್ಲಿದಾಗ ಅವುಗಳೊಳಗೆ ಉಸಿರಾಟದ ಸೋಂಕನ್ನುಂಟು ಮಾಡುವಂತಹ ಕ್ಷಯರೋಗದ ಬ್ಯಾಕ್ಟೀರಿಯಾ ಮೈಕೊಬ್ಯಾಕ್ಟೀರಿಯಂ ಟ್ಯುಬರ್ಕುಲೋಸಿಸ್, ಇನ್‌ಫ್ಲುಯೆಂಜಾ ವೈರಸ್ಸು, ಸಾರ್ಸ್-ಕೋ೧ ಮುಂತಾದ ರೋಗಕಾರಕಗಳನ್ನು ಹೊತ್ತು ಬರುತ್ತವೆ.

ಹನಿಗಳು ದೊಡ್ಡದಾಗಿದ್ದರೆ ಕೂಡಲೇ ಅಲ್ಲಿರುವ ವಸ್ತುಗಳ ಮೇಲೆ ನೆಲೆಯಾಗಿಬಿಡುತ್ತವೆ. ಅದೇ ಇನ್ನೂ ಸಣ್ಣದಾದ ಹನಿಬೀಜಗಳು ಗಾಳಿಯಲ್ಲಿಯೇ ಇನ್ನಷ್ಟು ಕಾಲ ತೇಲಾಡುತ್ತಿರುತ್ತವೆ. ಸೋಂಕು ಇರುವ ವ್ಯಕ್ತಿ ಸೀನಿದಾಗಲೋ, ಕೆಮ್ಮಿದಾಗಲೋ, ಮಾತನಾಡಿದಾಗಲೋ, ಹಾಡಿದಾಗಲೋ ಹುಟ್ಟುದ ದೊಡ್ಡ ಹನಿಗಳು ಹೀಗಾಗಿ ಬಲು ದೂರ ಸಾಗುವುದಿಲ್ಲ. ಅವು ತಕ್ಷಣವೇ ಕೆಳಗೆ ಬಿದ್ದು ನೆಲೆಸಿಬಿಡುತ್ತವೆ. ಆದರೆ ಸಣ್ಣ ಹನಿಗಳು ಗಾಳಿಯಲ್ಲಿ ಸಾಕಷ್ಟು ಹೊತ್ತು ತೇಲಾಡುತ್ತಿರಬಹುದು.

ವಿಶ್ವ ಆರೋಗ್ಯ ಸಂಸ್ಥೆ ಈ ಮೊದಲು ಸೂಚಿಸಿದ್ದಂತಹ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೇ ಮೊದಲಾದ ಕ್ರಮಗಳು ಈ ಸಾರ್ಸ್‌-ಕೋವ್-‌೨ ವೈರಸ್ಸಿನ ಸೋಂಕು ಪ್ರಧಾನವಾಗಿ ವಿವಿಧ ಮೇಲ್ಮೈ ಮೇಲೆ ನೆಲೆಯಾಗುವ ದೊಡ್ಡ ಹನಿಗಳ ಮೂಲಕ ಆಗುತ್ತದೆ ಎನ್ನುವ ಅರಿವಿನ ಫಲವಾಗಿತ್ತು. ಆದರೆ ನಾವು ಸಾಧಾರಣವಾಗಿ ಮಾತನಾಡುವಾಗಲೂ ಹನಿಬೀಜಗಳನ್ನು ಉದುರುತ್ತವೆ. ಇವು ಬಲು ದೀರ್ಘ ಕಾಲ ಗಾಳಿಯಲ್ಲಿಯೇ ತೇಲಾಡುತ್ತಿರುತ್ತವೆ ಎನ್ನುವ ವಿಷಯ ನಾಲ್ಕುಗೋಡೆಗಳೊಳಗಿನ ಪರಿಸರದಲ್ಲಿ ಈ ಸೋಂಕು ಹರಡುವ ಬಗ್ಗೆ ಎಚ್ಚರದಿಂದಿರಬೇಕು ಎನ್ನುತ್ತದೆ.

ಇನ್ನೊಂದೆಡೆ ನಮ್ಮ ಬಾಯಿಯಲ್ಲಿರುವ ಜೊಲ್ಲಿನ ಪ್ರತಿ ಮಿಲಿಮೀಟರಿನಲ್ಲಿ ಸುಮಾರು ಹತ್ತು ಲಕ್ಷ ವೈರಸ್ಸುಗಳಷ್ಟೆ ಇರುತ್ತವೆ ಎನ್ನುವುದು ಸ್ವಲ್ಪ ಸಂತಸ ತರುವ ವಿಷಯ. ಹೀಗಾಗಿ ಹತ್ತು ಮೈಕ್ರೊಮೀಟರು ಗಾತ್ರದ ಒಂದು ಹನಿಯೊಳಗೆ ವೈರಸ್ಸು ಇರಬಹುದಾದ ಸಾಧ್ಯತೆ ಅಂದಾಜು ೦.೩೭% ಇರುತ್ತದಷ್ಟೆ. ಹನಿಗಳ ಗಾತ್ರ ೦.೧ ಮೈಕ್ರೊಮೀಟರಿಗಿಂತ ಕಡಿಮೆ ಇದ್ದಾಗ ಈ ಸಾಧ್ಯತೆ ೦.೦೧%ನಷ್ಟು ಕಡಿಮೆ ಆಗುತ್ತದೆ. ಇದರ ಅರ್ಥ ಇಷ್ಟೆ. ಒಬ್ಬ ಮನುಷ್ಯ ಮಾತನಾಡುವಾಗ ಅಂದಾಜು ೩೦೦೦ ಹನಿಗಳ ಉಸಿರು ಬಿಡುತ್ತದೆ ಎಂದರೂ ಅದರಲ್ಲಿ ಹತ್ತು ಹನಿಗಳಲ್ಲಿಯಷ್ಟೆ ವೈರಸ್ಸನ್ನು ಹೊತ್ತಿರಬಹುದು. ಅದೇ ಆ ವ್ಯಕ್ತಿ ಸೀಣಿದಾಗ ಹುಟ್ಟುವ ಹನಿಗಳಲ್ಲಿ ವೈರಸ್ಸನ್ನು ಹೊತ್ತಿರಬಹುದಾದ ಹನಿಗಳ ಸಂಖ್ಯೆ ಇನ್ನೂ ಸ್ವಲ್ಪ ಜಾಸ್ತಿ, ಅಂದರೆ ಅಂದಾಜು ನೂರು ಇರಬಹುದು. ಈ ಹನಿಗಳು ಗಾಳಿಯಲ್ಲಿ ಬಲು ಬೇಗನೆ ಆರಿಯೂ ಹೋಗುತ್ತವೆ. ಅದರಲ್ಲೂ ಒಣ ಹವೆ ಇರುವ ಪ್ರದೇಶದಲ್ಲಿ ಇವು ಇನ್ನೂ ಬೇಗನೆ ಒಣಗುತ್ತವೆಯಾದ್ದರಿಂದ ಇವುಗಳ ಗಾತ್ರ ಇನ್ನೂ ಕುಗ್ಗುತ್ತದೆ. ಇದು ಈ ಹನಿಗಳು ಗಾಳಿಯಲ್ಲಿ ತೇಲಾಡುತ್ತ ಇರುವ ಸಾಧ್ಯತೆಗಳನ್ನು ಹೆಚ್ಚಿಸುತ್ತವೆ ಎನ್ನಬಹುದು.

ನಮ್ಮ ಎಂದಿನ ಉಸಿರಾಟದ ಸಂದರ್ಭಗಳಲ್ಲಿ ಸೋಂಕು ಇರುವ ವ್ಯಕ್ತಿಯಿಂದ ಹೊರಸುರಿದ ಹನಿಗಳು ನಮ್ಮ ಉಸಿರಾಟದ ಅಂಗಗಳಲ್ಲಿ ನೆಲೆಯಾಗಬಹುದು. ಹೀಗೆ ಅವು ಇದುವರೆವಿಗೂ ಸೋಂಕು ಬಾರದಿದ್ದವನಿಗೂ ಅಪಾಯವನ್ನು ತಂದೊಡ್ಡಬಲ್ಲುವು.3 ಮುಕ್ತವಾದ, ತೆರೆದ ಪ್ರದೇಶಗಳಲ್ಲಿ ಗಾಳಿಯಲ್ಲಿರುವ ಈ ಸಣ್ಣ ಹನಿಗಳು ಬಲು ಬೇಗನೆ ಹರಡಿ ಹೋಗುತ್ತವೆ. ಹೀಗಾಗಿ ವೈರಸ್ಸು ಇರುವಂತಹ ಹನಿಗಳ ಸಾಂದ್ರತೆ ತೆರೆದ ಪ್ರದೇಶಗಳಲ್ಲಿ ಬಲು ಕಡಿಮೆ. ಅಲ್ಲದೇ, ಇತ್ತೀಚಿನ ಪುರಾವೆಗಳ ಪ್ರಕಾರ ಬಿಸಿಲಿನಲ್ಲಿ ಹನಿಗಳಲ್ಲಿ ಇರುವ ವೈರಸ್ಸು ನಿಶ್ಶಕ್ತವಾಗಿಬಿಡುತ್ತವೆ.4 ಹಾಗಿದ್ದರೂ, ಸರಿಯಾದ ವಾತಾಯನ ವ್ಯವಸ್ಥೆ ಇಲ್ಲದ, ಗಾಳಿಆಡದಂತಹ ಸ್ಥಳಗಳಲ್ಲಿ ವೈರಸ್ಸು ಹೊತ್ತ ಹನಿಗಳ ಸಂಖ್ಯೆ ಇಲ್ಲಿಗಿಂತಲೂ ಹೆಚ್ಚಿರಬಹುದು.

ಈ ಎಲ್ಲ ಹೊಸ ಪುರಾವೆಗಳು ಮತ್ತು ತರ್ಕಗಳು ಸಾರ್ಸ್-ಕೋವಿ೨ ಸೋಂಕು ಗಾಳಿಯಿಂದಲೂ ಹರಡಬಹುದು ಎನ್ನುವ ಸಾಧ್ಯತೆಯನ್ನು ಸೂಚಿಸುತ್ತವೆ. ಹಾಗಿದ್ದರೆ ಇಂತಹ ಗಾಳಿಯಲ್ಲಿ ಹರಡುವ ಸೋಂಕಿನಿಂದ ನಮ್ಮನ್ನು ರಕ್ಷಿಸಿಕೊಳ್ಳುವುದು ಹೇಗೆ? ಇದಕ್ಕೆ ಉತ್ತರ ಬಹಳ ಸರಳ. ಜನಜಂಗುಳಿಗಳಿಂದ ದೂರವಿರಿ. ಕಛೇರಿ, ಮನೆ ಮುಂತಾದ ಗೋಡೆಗಳೊಳಗಿನ ಜಾಗಗಳು ಚೆನ್ನಾಗಿ ಗಾಳಿಯಾಡುವಂತಿರಲಿ, ಹಾಗೂ ಬಲು ಮುಖ್ಯವಾಗಿ, ಇಂತಹ ಪ್ರದೇಶಗಳಲ್ಲಿಯೂ ಮಾಸ್ಕನ್ನು ಧರಿಸಿಯೇ ಇರಿ.

ಆದ್ದರಿಂದ ಝಾಂಗ್‌ ಮತ್ತು ಸಂಗಡಿಗರು3 ಹೀಗೆ ವಿಶ್ಲೇಷಿಸಿದ್ದಾರೆ. “ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕುಗಳನ್ನು ಧರಿಸುವುದು ವ್ಯಕ್ತಿಯಿಂದ ವ್ಯಕ್ತಿಗೆ ಸೋಂಕು ಹರಡುವುದನ್ನು ತಡೆಯುವ ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ. ಈ ಅಗ್ಗದ ಕ್ರಮದ ಜೊತೆಗೇ, ವ್ಯಾಪಕವಾಗಿ ಸೋಂಕು ಪರೀಕ್ಷೆಯನ್ನು ನಡೆಸುವುದು, ಕ್ವಾರಂಟೈನು, ಸೋಂಕು ಸಂಪರ್ಕದಲ್ಲಿರುವವರನ್ನು ಪತ್ತೆ ಮಾಡುವುದು ಈ ಕೋವಿಡ್-‌೧೯ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ, ಲಸಿಕೆಗಳು ದೊರೆಯುವ ಮುನ್ನ ಅದನ್ನು ತಡೆಯುವ ಮಾರ್ಗಗಳಾಗಿವೆ.” ಮಾಸ್ಕನ್ನು ಧರಿಸುವುದು ವಾಸ್ತವವಾಗಿ ಬಲು ಪರಿಣಾಮಕಾರಿ ಕ್ರಮವಷ್ಟೆ ಅಲ್ಲ, ಬಹುಶಃ ನಾವೆಲ್ಲರೂ ಪಾಲಿಸಲೇಬೇಕಾದ ಅತ್ಯಾವಶ್ಯಕ ಕ್ರಮ.

ಉಲ್ಲೇಖಗಳು:

  1. Natural Ventilation for Infection Control in Health-Care Settings. Eds: Atkinson, et al. Geneva: World Health Organization; 2009.

  2. The airborne lifetime of small speech droplets and their potential importance in SARS-CoV-2 transmission. Stadnytski et al. Proc. Natl Acad Sci, USA (2020) 117, 11875-11877.

  3. Identifying airborne transmission as the dominant route for the spread of COVID-19. Zhang et al. Proc. Natl. Acad. Sci, USA (2020) 117, 14857-14863.

  4. Simulated Sunlight rapidly inactivated SARS-CoV-2 on surfaces. Ratnesar-Shumate et al. The J. Infect, Dis. (2020) 222, 214-222.

ಲೇಖಕರು ಸುಪ್ರಸಿದ್ಧ ವಿಜ್ಞಾನಿಗಳು ಹಾಗೂ ಮಹಾನಿರ್ದೇಶಕ, ಸಿಎಸ್‌ಐಆರ್‌ ಮತ್ತು ಕಾರ್ಯದರ್ಶಿ, ಡಿಎಸ್‌ಐಆರ್, ಭಾರತ ಸರಕಾರ

ಇಂಗ್ಲೀಷಿನಿಂದ ಕನ್ನಡಕ್ಕೆ: ಕೊಳ್ಳೇಗಾಲ ಶರ್ಮ

Related Stories

No stories found.
logo
ಇಜ್ಞಾನ Ejnana
www.ejnana.com