ಏಪ್ರಿಲ್ ತಿಂಗಳ ಮೊದಲ ದಿನವನ್ನು ಮೂರ್ಖರ ದಿನವೆಂದು ಗುರುತಿಸಿರುವುದು ಏಕೆ? ಈ ಪ್ರಶ್ನೆಗೆ ನಿಖರವಾದ ಉತ್ತರ ಗೂಗಲಿನಲ್ಲೂ ಸಿಗುವುದಿಲ್ಲ!
ಏಪ್ರಿಲ್ ತಿಂಗಳ ಮೊದಲ ದಿನವನ್ನು ಮೂರ್ಖರ ದಿನವೆಂದು ಗುರುತಿಸಿರುವುದು ಏಕೆ? ಈ ಪ್ರಶ್ನೆಗೆ ನಿಖರವಾದ ಉತ್ತರ ಗೂಗಲಿನಲ್ಲೂ ಸಿಗುವುದಿಲ್ಲ!Image by marian anbu juwan from Pixabay

ಹಳ್ಳಕ್ಕೆ ಬೀಳಿಸುವ ಹೈಟೆಕ್ ವಿಧಾನಗಳು

ಏಪ್ರಿಲ್ ಬಂತು ಎಂದಕೂಡಲೇ ಬೇಸಿಗೆಯ ಬಿಸಿ, ಮಾವಿನ ಹಣ್ಣಿನ ಸಿಹಿ ಮುಂತಾದವೆಲ್ಲ ನಮಗೆ ನೆನಪಾಗುತ್ತವೆ. ಅವೆಲ್ಲದರ ಜೊತೆಯಲ್ಲೇ ನೆನಪಾಗುವ ಇನ್ನೊಂದು ಸಂಗತಿ - ಮೂರ್ಖರ ದಿನ!

ಏಪ್ರಿಲ್ ತಿಂಗಳಿಗೆ ಹಲವಾರು ವೈಶಿಷ್ಟ್ಯಗಳಿವೆ. ಶಾಲಾ ದಿನಗಳಲ್ಲಿ ವಾರ್ಷಿಕ ಪರೀಕ್ಷೆಯ ಫಲಿತಾಂಶಗಳು ಪ್ರಕಟವಾಗುತ್ತಿದ್ದದ್ದು, ಬೇಸಿಗೆ ರಜೆ ಶುರುವಾಗುತ್ತಿದ್ದದ್ದು ಏಪ್ರಿಲ್‌ನಲ್ಲಿ. ಏಪ್ರಿಲ್ ಬಂತು ಎಂದಕೂಡಲೇ ಬೇಸಿಗೆಯ ಬಿಸಿ, ಮಾವಿನ ಹಣ್ಣಿನ ಸಿಹಿ ಮುಂತಾದವೆಲ್ಲ ನಮಗೆ ನೆನಪಾಗುತ್ತವೆ. ಅವೆಲ್ಲದರ ಜೊತೆಯಲ್ಲೇ ನೆನಪಾಗುವ ಇನ್ನೊಂದು ಸಂಗತಿ - ಏಪ್ರಿಲ್ ಒಂದು, ಮೂರ್ಖರ ದಿನ!

ಹಿಂದಿನ ವರ್ಷಗಳಲ್ಲಿ ಇತರರನ್ನು ಮೂರ್ಖರಾಗಿಸಲು ನಡೆಸಿದ ಪ್ರಯತ್ನಗಳನ್ನು ನೆನಪಿಸಿಕೊಳ್ಳುವುದು, ಈ ವರ್ಷ ಯಾರನ್ನು ಹೇಗೆ ಹಳ್ಳಕ್ಕೆ ಬೀಳಿಸಬಹುದೆಂದು ಪ್ಲಾನ್ ಮಾಡುವುದು, ಬೇರೆಯವರು ತೋಡಿಟ್ಟ ಹಳ್ಳಕ್ಕೆ ಬಿದ್ದು ನಾವೇ ಮೂರ್ಖರಾಗದಂತೆ ನೋಡಿಕೊಳ್ಳುವುದು - ಹೀಗೆ ಮೂರ್ಖರ ದಿನದ ಸನ್ನಿವೇಶ ನಮ್ಮ ತಲೆಗೆ ಸಾಕಷ್ಟು ಕೆಲಸ ಕೊಡುತ್ತದೆ.

ಹಿಂದಿನ ಕಾಲದಲ್ಲಿ ಮೂರ್ಖರ ದಿನದ ತಯಾರಿಯನ್ನೆಲ್ಲ ನಾವೇ ಮಾಡಬೇಕಿದ್ದು ಅನಿವಾರ್ಯವಾಗಿತ್ತು. ನಿನ್ನ ಅಂಗಿಯ ಮೇಲೆ ಕಾಗೆ ಹಿಕ್ಕೆ ಹಾಕಿದೆಯೆಂದು ಗೆಳೆಯನಿಗೆ ಹೇಳುವುದಿರಲಿ, ಬಹುಮಾನ ಕೊಡಲು ಮೇಷ್ಟರು ಕರೆಯುತ್ತಿದ್ದಾರೆಂದು ಸಹಪಾಠಿಯನ್ನು ನಂಬಿಸುವುದಿರಲಿ - ಎಲ್ಲವೂ ನಮ್ಮ ಸಾಮರ್ಥ್ಯದ ಮೇಲೆಯೇ ನಿಂತಿತ್ತು.

ನಮ್ಮ ಬದುಕಿನ ಮೇಲೆ ಮಾಹಿತಿ ತಂತ್ರಜ್ಞಾನದ ಪ್ರಭಾವ ಹೆಚ್ಚಿದಂತೆ, ಇತರೆಲ್ಲ ಕೆಲಸಗಳ ಹಾಗೆ ಬೇರೆಯವರನ್ನು ಫೂಲ್ ಮಾಡುವುದಕ್ಕೂ ಐಟಿ ಸವಲತ್ತುಗಳನ್ನು ಬಳಸುವುದು ಸಾಧ್ಯವಾಯಿತು. ಇಪ್ಪತ್ತು ವರ್ಷಗಳ ಹಿಂದೆ, ಕುಚೇಷ್ಟೆಯ ಇಮೇಲ್ ಸಂದೇಶಗಳನ್ನು ಕಳುಹಿಸಲು ನೆರವಾಗುತ್ತಿದ್ದ ತಾಣವೊಂದನ್ನು ಬಳಸಿಕೊಂಡು "ನಿಮ್ಮ ಮನೆಗೆ ಹೃತಿಕ್ ರೋಶನ್ ಬರ್ತಾರೆ" ಎಂದು ಆಪ್ತರೊಬ್ಬರನ್ನು ನಂಬಿಸಿದ್ದು, ಆಮೇಲೆ ಅವರಿಂದ ಬೈಸಿಕೊಂಡಿದ್ದು ಇಂದಿಗೂ ಚೆನ್ನಾಗಿ ನೆನಪಿನಲ್ಲಿದೆ!

ಏಪ್ರಿಲ್ ತಿಂಗಳ ಮೊದಲ ದಿನವನ್ನು ಮೂರ್ಖರ ದಿನವೆಂದು ಗುರುತಿಸಿರುವುದು ಏಕೆ? ಈ ಪ್ರಶ್ನೆಗೆ ನಿಖರವಾದ ಉತ್ತರ ಗೂಗಲಿನಲ್ಲೂ ಸಿಗುವುದಿಲ್ಲ! ಈಸ್ಟರ್ ಹಬ್ಬದಂದು ಹೊಸವರ್ಷ ಆಚರಿಸುವ ಬದಲು ಜನವರಿ ೧ರಂದೇ ಹೊಸವರ್ಷ ಪ್ರಾರಂಭವಾಗಬೇಕೆಂದು ತೀರ್ಮಾನವಾದ ಸಮಯದಲ್ಲಿ, ಫ್ರಾನ್ಸ್ ದೇಶದ ಅನೇಕರು ಆ ಬದಲಾವಣೆಯನ್ನು ಒಪ್ಪಿರಲಿಲ್ಲವಂತೆ. ಹಳೆಯ ಪದ್ಧತಿಯಂತೆ ಏಪ್ರಿಲಿನಲ್ಲೇ ಹೊಸವರ್ಷ ಆಚರಿಸುತ್ತಿದ್ದ ಆ ಜನರನ್ನು ಏಪ್ರಿಲ್ ಫೂಲ್‌ಗಳೆಂದು ಕರೆಯುವ ಅಭ್ಯಾಸ ಬೆಳೆಯಿತು ಎನ್ನುವುದು ಎನ್‌ಸೈಕ್ಲೋಪೀಡಿಯ ಬ್ರಿಟಾನಿಕಾ ಹೇಳುವ ಒಂದು ಕತೆ.

ಏಪ್ರಿಲ್ ಫೂಲ್ ಮಾಡಲು ನೆರವಾಗಿದ್ದಷ್ಟೇ ಅಲ್ಲ, ಮಾಹಿತಿ ತಂತ್ರಜ್ಞಾನ ಸಂಸ್ಥೆಗಳೇ ಜನರನ್ನು ಏಪ್ರಿಲ್ ಫೂಲ್ ಮಾಡಿದ ಉದಾಹರಣೆಗಳೂ ಬೇಕಾದಷ್ಟಿವೆ.

ಮಾಹಿತಿ ತಂತ್ರಜ್ಞಾನದ ಹೊಸ ಆವಿಷ್ಕಾರಗಳನ್ನು ಪರಿಚಯಿಸುವಲ್ಲಿ ಅಗ್ರಪಂಕ್ತಿಯ ಸಂಸ್ಥೆಗಳಲ್ಲೊಂದಾದ ಗೂಗಲ್, ಮೂರ್ಖರ ದಿನದ ಕುಚೇಷ್ಟೆಗಳನ್ನು ಮಾಡುವಲ್ಲೂ ಅನೇಕ ವರ್ಷಗಳ ಕಾಲ ಮುಂಚೂಣಿಯಲ್ಲಿತ್ತು (COVID-19 ಆತಂಕದ ನಡುವೆ ಗೂಗಲ್ ಕಳೆದ ಕೆಲ ವರ್ಷಗಳಲ್ಲಿ ಏಪ್ರಿಲ್ ೧ರ ಕುಚೇಷ್ಟೆಗಳನ್ನು ಮಾಡಿಲ್ಲ). ಆ ಸಂಸ್ಥೆಯ ಏಪ್ರಿಲ್ ಫೂಲ್ ಪ್ರಯತ್ನಗಳು ಎಷ್ಟು ವಿಭಿನ್ನವಾಗಿದ್ದವೆಂದರೆ ಮೂರ್ಖರ ದಿನದಂದು ಗೂಗಲ್ ಏನು ಮಾಡಬಹುದು ಎಂದು ಅನೇಕರು ಕಾತರದಿಂದ ಕಾಯುತ್ತಿದ್ದರು.

ನಮ್ಮ ಆಂಡ್ರಾಯ್ಡ್ ಫೋನಿಗೆ ಬೇಕಾದ ಆಪ್‌ಗಳನ್ನು ನಾವು ಪ್ಲೇ ಸ್ಟೋರಿನಿಂದ ಡೌನ್‌ಲೋಡ್ ಮಾಡಿಕೊಳ್ಳುತ್ತೇವಲ್ಲ, ಹಾಗೆ ನಮ್ಮ ಮನೆಯ ನಾಯಿ-ಬೆಕ್ಕುಗಳೂ ತಮಗಿಷ್ಟವಾದ ಆಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾದ ಸೌಲಭ್ಯ ಶುರುಮಾಡುತ್ತಿದ್ದೇವೆ ಎಂದು ಗೂಗಲ್ ಸಂಸ್ಥೆ ೨೦೧೮ರ ಏಪ್ರಿಲ್ ೧ರಂದು ಘೋಷಿಸಿತ್ತು. ಅಷ್ಟೇ ಅಲ್ಲ, ಸಾಕುಪ್ರಾಣಿಗಳು ಮೊಬೈಲಿನಲ್ಲೂ ಟ್ಯಾಬ್ಲೆಟ್ಟಿನಲ್ಲೂ ಆಟವಾಡುತ್ತಿರುವ ವೀಡಿಯೋ ಇರುವ ಜಾಹೀರಾತನ್ನೂ ಪ್ರಕಟಿಸಿತ್ತು.

ಗೂಗಲ್‌ನ ಈ ಅಭ್ಯಾಸ ಹೊಸದೇನಲ್ಲ. ನಮ್ಮ ಜಿಮೇಲ್ ಖಾತೆಗೆ ಬರುವ ಇಮೇಲ್ ಸಂದೇಶಗಳ ಪೈಕಿ ನಮಗೆ ಬೇಕಾದ್ದನ್ನು ಮುದ್ರಿಸಿ ಮನೆಗೆ ಕಳುಹಿಸುವ 'ಜಿಮೇಲ್ ಪೇಪರ್' ಎನ್ನುವ ಹೊಸ - ಕಾಲ್ಪನಿಕ - ಸೇವೆಯನ್ನು ಶುರುಮಾಡುವುದಾಗಿ ಅದು ೨೦೦೭ರಲ್ಲೇ ಘೋಷಿಸಿತ್ತು. ಅತಿವೇಗದ ಬ್ರಾಡ್‌ಬ್ಯಾಂಡ್ ಸೇವೆಯನ್ನು ಒದಗಿಸಲು ನಗರದ ಒಳಚರಂಡಿ ವ್ಯವಸ್ಥೆಯನ್ನು ಬಳಸಿಕೊಳ್ಳುವ 'ಗೂಗಲ್ ಟಾಯ್ಲೆಟ್ ಐಎಸ್‌ಪಿ', ಜನರನ್ನು ಆ ವರ್ಷ ಫೂಲ್ ಮಾಡಿದ ಇನ್ನೊಂದು ಕುಚೇಷ್ಟೆ. ನಾವು ಹುಡುಕುವ ಮಾಹಿತಿಯನ್ನು ಥಟ್ ಎಂದು ತಂದುಕೊಡಲು ನಾವು ತರಬೇತಿ ಪಡೆದ ಪಾರಿವಾಳಗಳನ್ನು ಬಳಸುತ್ತೇವೆ, ಮತ್ತು ಆ ತಂತ್ರಜ್ಞಾನವನ್ನು ಪಿಜನ್‌ರ್‍ಯಾಂಕ್™ ಎಂದು ಕರೆಯುತ್ತೇವೆ ಎಂದು ಗೂಗಲ್ ಸಂಸ್ಥೆ ೨೦೦೨ರಲ್ಲಿ ಕಾಗೆ ಹಾರಿಸಿದ್ದೂ ಉಂಟು!

ಅಂದಹಾಗೆ ಏಪ್ರಿಲ್ ಫೂಲ್ ಕುಚೇಷ್ಟೆಗಳಲ್ಲಿ ಬೇರೆ ಸಂಸ್ಥೆಗಳೇನೂ ಹಿಂದುಳಿದಿಲ್ಲ. ಇಷ್ಟವಾದ ಪುಸ್ತಕಗಳನ್ನು ಆನ್‌ಲೈನ್ ಅಂಗಡಿಗಳ ಮೂಲಕ ಮನೆಗೆ ತರಿಸಿಕೊಳ್ಳುವ ಹಾಗೇ ನಮ್ಮಿಷ್ಟದ ಲೇಖಕರನ್ನೂ ಮನೆಗೆ ಕರೆಸಿಕೊಳ್ಳುವ ಸೇವೆ ಶುರುಮಾಡಿರುವುದಾಗಿ ಅಮೆಜಾನ್ ಸಂಸ್ಥೆ ೨೦೧೮ರ ಮೂರ್ಖರ ದಿನದಂದು ವೀಡಿಯೋ ಜಾಹೀರಾತೊಂದನ್ನು ಹರಿಬಿಟ್ಟಿತ್ತು. ಚಾರ್ಜರ್ ಇಲ್ಲದಿದ್ದರೇನಂತೆ, ಮೊಬೈಲ್ ನೆಟ್ವರ್ಕ್ ಮೂಲಕವೇ ನಿಮ್ಮ ಮೊಬೈಲನ್ನು ಚಾರ್ಜ್ ಮಾಡಿಕೊಳ್ಳುವುದನ್ನು ನಮ್ಮ 'ಜಿಯೋ ಜ್ಯೂಸ್' ತಂತ್ರಜ್ಞಾನ ಸಾಧ್ಯವಾಗಿಸುತ್ತದೆ ಎಂದು ಅದೇ ವರ್ಷ ಜಿಯೋ ಸಂಸ್ಥೆ ಹೇಳಿತ್ತು. ಮೊಬೈಲ್ ಫೋನ್ ಹಾಗೂ ಟ್ಯಾಬ್ಲೆಟ್ ಕಂಪ್ಯೂಟರುಗಳನ್ನು ತಯಾರಿಸುವ ಶಿಯೋಮಿ, ಬಳಕೆದಾರರ ಆತ್ಮವಿಶ್ವಾಸವನ್ನು ಹೆಚ್ಚಿಸುವ ಕಾನ್ಫಿಬೂಸ್ಟ್ ಎಂಬ ಟ್ಯಾಬ್ಲೆಟ್ - ಅಂದರೆ ಮಾತ್ರೆಯನ್ನು - ತಯಾರಿಸಿರುವುದಾಗಿ ಕಳೆದ ವರ್ಷ, ೨೦೨೨ರ ಏಪ್ರಿಲ್ ೧ರಂದು ಘೋಷಿಸಿತ್ತು.

ಇಂತಹ ಕುಚೇಷ್ಟೆಗಳೆಲ್ಲ ಯಾವಾಗಲೂ ಸುಳ್ಳುಗಳೇ ಆಗಿದ್ದವೇ? ಹಾಗೇನೂ ಇಲ್ಲ, ತಂತ್ರಜ್ಞಾನ ಲೋಕದಲ್ಲಿ ಕೇಳಿಬಂದ ಏಪ್ರಿಲ್ ಫೂಲ್ ಸುಳ್ಳುಗಳು ಮುಂದೆ ನಿಜವಾಗಿ ಪರಿಣಮಿಸಿದ ಉದಾಹರಣೆಗಳೂ ಇವೆ. ಬೇಕಾದಾಗ ಬೇಕಾದ ಹಾಡು ಕೇಳಲು ನೆರವಾಗುತ್ತಿದ್ದ ಆಪಲ್ ಐಪಾಡ್‌ ಜನಪ್ರಿಯತೆ ಉತ್ತುಂಗದಲ್ಲಿದ್ದ ಸಮಯದಲ್ಲಿ, "ಐಪಾಡ್‌ ಜೊತೆ ಬಳಸಬಹುದಾದ ಮೊಬೈಲ್ ಫೋನ್ ಜೋಡಣೆಯೊಂದನ್ನು (ಆಡ್-ಆನ್) ಆಪಲ್ ಸಂಸ್ಥೆ ಬಿಡುಗಡೆಗೊಳಿಸಲಿದೆ" ಎಂಬ ಸುದ್ದಿಯೊಂದು ೨೦೦೪ರ ಮೂರ್ಖರ ದಿನದಂದು ಕಾಣಿಸಿಕೊಂಡಿತ್ತು. ಅಂದಿನ ಮಟ್ಟಿಗೆ ಏಪ್ರಿಲ್ ಫೂಲ್ ಮಾಡುವ ಪ್ರಯತ್ನವಾಗಿದ್ದ ಈ ವಿಷಯ, ಮುಂದೆ ಐಫೋನ್ ಬಿಡುಗಡೆಯಾದಾಗ ಬೇರೆಯದೇ ರೀತಿಯಲ್ಲಿ ನಿಜವಾಗಿಬಿಟ್ಟಿದ್ದು ಈಗ ಇತಿಹಾಸ.

ಮೂರ್ಖರ ದಿನದ ಆಸುಪಾಸಿನಲ್ಲಿ ಕೇಳಿಬಂದ ನಿಜವಾದ ಟೆಕ್ ಸುದ್ದಿಗಳು ಕೂಡ ಏಪ್ರಿಲ್ ಫೂಲ್ ಕುಚೇಷ್ಟೆಯಿರಬಹುದು ಎಂದು ಸಂದೇಹ ಮೂಡಿಸಿದ್ದುಂಟು. ಗೂಗಲ್ ಸಂಸ್ಥೆ ೨೦೦೪ರ ಏಪ್ರಿಲ್ ತಿಂಗಳಿನಲ್ಲಿ ತನ್ನ 'ಜಿಮೇಲ್' ವ್ಯವಸ್ಥೆಯನ್ನು ಘೋಷಿಸಿದಾಗ ಇತರ ಇಮೇಲ್ ಸೇವೆಗಳು ತೀರಾ ಪ್ರಾಥಮಿಕ ಸೌಲಭ್ಯಗಳನ್ನಷ್ಟೇ ಕೊಡುತ್ತಿದ್ದವು. ಅಂತಹ ಸನ್ನಿವೇಶದಲ್ಲಿ ಒಂದು ಜಿಬಿಯಷ್ಟು ಸಂಗ್ರಹಣಾ ಸಾಮರ್ಥ್ಯ ನೀಡುವುದಾಗಿ ಗೂಗಲ್ ಹೇಳಿದಾಗ ಬಹಳಷ್ಟು ಜನ ಇದು ಏಪ್ರಿಲ್ ಫೂಲ್ ಕುಚೇಷ್ಟೆಯೇ ಇರಬೇಕು ಎಂದು ಭಾವಿಸಿದ್ದರು!

logo
ಇಜ್ಞಾನ Ejnana
www.ejnana.com