ಎಐ ಕಾಲದಲ್ಲೂ ಮಿಂಚುವ ರೇಡಿಯೋ
Image by Igor Ovsyannykov from Pixabay

ಎಐ ಕಾಲದಲ್ಲೂ ಮಿಂಚುವ ರೇಡಿಯೋ

ಫೆಬ್ರುವರಿ ೧೩ ವಿಶ್ವ ರೇಡಿಯೋ ದಿನ
Published on

ವಿಜ್ಞಾನ-ತಂತ್ರಜ್ಞಾನ ಕ್ಷೇತ್ರ ಪ್ರತಿದಿನವೂ ಬದಲಾಗುತ್ತಲೇ ಇರುತ್ತದೆ. ಹಾಗಿದ್ದರೂ ಕೆಲ ಆವಿಷ್ಕಾರಗಳು ಮಾತ್ರ ಸುದೀರ್ಘಕಾಲ ನಮ್ಮೊಡನೆ ಉಳಿದುಕೊಳ್ಳುತ್ತವೆ, ಅಚ್ಚರಿಗೆ ಕಾರಣವಾಗುತ್ತವೆ. ಹೀಗೆ ಹೆಚ್ಚು ಬದಲಾಗದೆ ಉಳಿದಿರುವುದು, ಇನ್ನೂ ಬೆಳೆಯುತ್ತಿರುವುದು ರೇಡಿಯೋ ಮಾಧ್ಯಮದ ಸಾಧನೆ.

ಮನುಕುಲಕ್ಕೆ ಮಾಹಿತಿ, ಮನರಂಜನೆ ಹಾಗೂ ಶಿಕ್ಷಣ ನೀಡುವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿಕೊಂಡು ಬಂದಿರುವುದು ರೇಡಿಯೋದ ಹೆಚ್ಚುಗಾರಿಕೆ. ಯಾವುದೇ ಭೇದಭಾವವಿಲ್ಲದೆ ಎಲ್ಲರನ್ನೂ ತಲುಪುವುದಕ್ಕೆ, ತುರ್ತುಸ್ಥಿತಿ ಹಾಗೂ ಪ್ರಕೃತಿವಿಕೋಪಗಳಂತಹ ಸನ್ನಿವೇಶಗಳಲ್ಲೂ ಸಂವಹನವನ್ನು ಸಾಧ್ಯವಾಗಿಸುವುದಕ್ಕೆ ರೇಡಿಯೋ ಇಂದಿಗೂ ವಿಶ್ವಾಸಾರ್ಹವಾದ ಆಯ್ಕೆ.

ಇಷ್ಟೆಲ್ಲ ಸಮೃದ್ಧವಾದ ಇತಿಹಾಸ, ಇಂದಿಗೂ ಉಳಿದಿರುವ ಪ್ರಸ್ತುತತೆ ಹಾಗೂ ಭರವಸೆಯ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ವಿಶ್ವಸಂಸ್ಥೆ ಪ್ರತಿವರ್ಷ ಫೆಬ್ರುವರಿ ೧೩ನೇ ತಾರೀಕನ್ನು ವಿಶ್ವ ರೇಡಿಯೋ ದಿನವೆಂದು ಗುರುತಿಸಿದೆ. ವಿಶ್ವಸಂಸ್ಥೆಯ ರೇಡಿಯೋ ವಾಹಿನಿ - ಯುಎನ್ ರೇಡಿಯೋ - ಪ್ರಾರಂಭವಾದ ದಿನದ ನೆನಪಿನಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ.

ಎಐ ಕಾಲದಲ್ಲೂ ಮಿಂಚುವ ರೇಡಿಯೋ
ವಿಶ್ವ ರೇಡಿಯೋ ದಿನ ವಿಶೇಷ: ರೇಡಿಯೋ ಎಂಬ ಅಚ್ಚರಿ!

ಸುದೀರ್ಘ ಕಾಲದವರೆಗೂ ಜನಪ್ರಿಯತೆ ಉಳಿಸಿಕೊಂಡು ಬಂದಿರುವ ರೇಡಿಯೋ ಮಾಧ್ಯಮ ಹಲವು ಸವಾಲುಗಳನ್ನೂ ಎದುರಿಸುತ್ತಿದೆ. ಡಿಜಿಟಲ್ ವೇದಿಕೆಗಳ ಜೊತೆ ಸ್ಪರ್ಧಿಸಬೇಕಾದ ಅನಿವಾರ್ಯತೆಯಿಂದ ಪ್ರಾರಂಭಿಸಿ ವಾಹಿನಿಗಳನ್ನು ಲಾಭದಾಯಕವಾಗಿ ನಡೆಸಿಕೊಂಡು ಹೋಗುವಲ್ಲಿನ ಕಷ್ಟಗಳವರೆಗೆ ಅನೇಕ ಸವಾಲುಗಳನ್ನು ಅದು ಎದುರಿಸುತ್ತಿದೆ.

ಈ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸುವ ಹಲವು ಪ್ರಯತ್ನಗಳು ಈಗಾಗಲೇ ನಡೆದಿರುವುದು ಗಮನಾರ್ಹ. ದೊಡ್ಡ ವ್ಯಾಪ್ತಿಯ ರೇಡಿಯೋ ವಾಹಿನಿಗಳ ಜೊತೆಯಲ್ಲಿ ಸ್ಥಳೀಯ ಮಟ್ಟದ ಸಮುದಾಯ ಬಾನುಲಿ ಕೇಂದ್ರಗಳನ್ನೂ ಪ್ರೋತ್ಸಾಹಿಸುವುದು ಇಂತಹ ಪ್ರಯತ್ನಗಳಲ್ಲೊಂದು. ಸೀಮಿತ ಭೌಗೋಳಿಕ ವ್ಯಾಪ್ತಿಯ ಇಂತಹ ಕೇಂದ್ರಗಳು ಸ್ಥಳೀಯ ವಿಷಯಗಳಿಗೆ ಹೆಚ್ಚು ಪ್ರಾಮುಖ್ಯ ಕೊಡುವುದು ಮಾತ್ರವಲ್ಲದೆ, ಸ್ಥಳೀಯ ಭಾಷೆಯ ಕಾರ್ಯಕ್ರಮಗಳನ್ನೇ ಪ್ರಸಾರ ಮಾಡುವ ಮೂಲಕ ಜನರನ್ನು ಹೆಚ್ಚು ಸಮರ್ಥವಾಗಿಯೂ ತಲುಪುತ್ತವೆ.

ಡಿಜಿಟಲ್ ವೇದಿಕೆಗಳನ್ನು ಪ್ರತಿಸ್ಪರ್ಧಿಗಳಂತೆ ಪರಿಗಣಿಸುವ ಬದಲು ಅವನ್ನು ರೇಡಿಯೋ ಮಾಧ್ಯಮಕ್ಕೆ ಪೂರಕವಾಗಿ ಬಳಸಿಕೊಳ್ಳುವುದು ಇನ್ನೊಂದು ಪ್ರಯತ್ನ. ಈ ಪೈಕಿ ಸಾಂಪ್ರದಾಯಿಕ ರೇಡಿಯೋ ವಾಹಿನಿಗಳ ಪ್ರಸಾರವನ್ನು ಅಂತರಜಾಲದ ಮೂಲಕವೂ ಲಭ್ಯವಾಗಿಸುವ ವ್ಯವಸ್ಥೆ ಈಗಾಗಲೇ ವ್ಯಾಪಕವಾಗಿ ಬಳಕೆಯಾಗುತ್ತಿದೆ. ಇದೇರೀತಿ ಅಂತರಜಾಲದಲ್ಲಿ ಮಾತ್ರವೇ ಅಸ್ತಿತ್ವದಲ್ಲಿರುವ ಇಂಟರ್‌ನೆಟ್ ರೇಡಿಯೋ ವಾಹಿನಿಗಳೂ ಇವೆ.

ಆಧುನಿಕ ಜಗತ್ತಿನ ಇತರೆಲ್ಲ ಕ್ಷೇತ್ರಗಳಂತೆ ಎಐ ತಂತ್ರಜ್ಞಾನ ರೇಡಿಯೋ ಮಾಧ್ಯಮದಲ್ಲೂ ಬದಲಾವಣೆ ತರುತ್ತಿದೆ. ಜನಪ್ರಿಯವಾಗಿರುವ ಹಾಡುಗಳನ್ನು ಹಾಕುವುದು, ವಿರಾಮದಲ್ಲಿ ಟ್ರಾಫಿಕ್ ಸ್ಥಿತಿಗತಿಯ ಬಗ್ಗೆ - ಹೊಸ ಸುದ್ದಿಗಳ ಬಗ್ಗೆ ಮಾಹಿತಿ ಕೊಡುವುದು - ಮುಂತಾದ ಕೆಲಸಗಳನ್ನೆಲ್ಲ ಈ ತಂತ್ರಜ್ಞಾನ ಮಾಡಬಲ್ಲದು ಎನ್ನುವುದನ್ನು ಪ್ರಾಯೋಗಿಕವಾಗಿ ತೋರಿಸಲಾಗಿದೆ. ತಂತ್ರಜ್ಞಾನ ಇನ್ನಷ್ಟು ಮುಂದುವರಿದಂತೆ, ಪ್ರತಿಯೊಬ್ಬರಿಗೂ ಯಾವ ಕಾರ್ಯಕ್ರಮ ಇಷ್ಟವೆನ್ನುವುದನ್ನು ಅರಿತುಕೊಂಡು ಅದನ್ನೇ ಕೇಳಿಸುವ ವ್ಯವಸ್ಥೆಗಳೂ ಸಿದ್ಧವಾಗುವ ನಿರೀಕ್ಷೆಯೂ ಇದೆ.

logo
ಇಜ್ಞಾನ Ejnana
www.ejnana.com