ವಿಶ್ವಸಂಸ್ಥೆಯ ರೇಡಿಯೋ ವಾಹಿನಿ ಪ್ರಾರಂಭವಾದ ದಿನದ ನೆನಪಿಗೆ ಫೆಬ್ರುವರಿ ೧೩ನ್ನು ವಿಶ್ವ ರೇಡಿಯೋ ದಿನ ಎಂದು ಗುರುತಿಸಲಾಗಿದೆ
ವಿಶ್ವಸಂಸ್ಥೆಯ ರೇಡಿಯೋ ವಾಹಿನಿ ಪ್ರಾರಂಭವಾದ ದಿನದ ನೆನಪಿಗೆ ಫೆಬ್ರುವರಿ ೧೩ನ್ನು ವಿಶ್ವ ರೇಡಿಯೋ ದಿನ ಎಂದು ಗುರುತಿಸಲಾಗಿದೆImage by Samuel Morazan from Pixabay

ವಿಶ್ವ ರೇಡಿಯೋ ದಿನ ವಿಶೇಷ: ರೇಡಿಯೋ ಎಂಬ ಅಚ್ಚರಿ!

ವಿಶ್ವಸಂಸ್ಥೆ ಪ್ರಕಟಿಸಿರುವ ಮಾಹಿತಿಯ ಪ್ರಕಾರ, ಜಾಗತಿಕ ಮಟ್ಟದಲ್ಲಿ ಅತ್ಯಂತ ವ್ಯಾಪಕವಾಗಿ ಬಳಕೆಯಾಗುವ ಮಾಧ್ಯಮವೆಂದರೆ ಅದು ರೇಡಿಯೋ
Published on

ಜನಪ್ರಿಯ ಸಂವಹನ ಮಾಧ್ಯಮ ಎಂದತಕ್ಷಣ ನಮಗೆ ಸಾಮಾಜಿಕ ಮಾಧ್ಯಮ, ಅಂದರೆ ಸೋಶಿಯಲ್ ಮೀಡಿಯಾ ನೆನಪಿಗೆ ಬರುತ್ತೆ. ಅದರ ಜನಪ್ರಿಯತೆ ಅಷ್ಟು ದೊಡ್ಡ ಪ್ರಮಾಣದಲ್ಲಿದೆ. ಆದರೆ, ವಿಶ್ವಸಂಸ್ಥೆ ಪ್ರಕಟಿಸಿರುವ ಮಾಹಿತಿಯ ಪ್ರಕಾರ, ಜಾಗತಿಕ ಮಟ್ಟದಲ್ಲಿ ಅತ್ಯಂತ ವ್ಯಾಪಕವಾಗಿ ಬಳಕೆಯಾಗುವ ಮಾಧ್ಯಮವೆಂದರೆ ಅದು ರೇಡಿಯೋ.

ಫೆಬ್ರುವರಿ ೧೩ನೇ ದಿನಾಂಕವನ್ನು ವಿಶ್ವ ರೇಡಿಯೋ ದಿನ ಎಂದು ಘೋಷಿಸಿರುವುದು ಕೂಡ ವಿಶ್ವಸಂಸ್ಥೆಯೇ. ೨೦೧೨ರಿಂದ ಈ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ವಿಶ್ವಸಂಸ್ಥೆಯ ರೇಡಿಯೋ ವಾಹಿನಿ - ಯುಎನ್ ರೇಡಿಯೋ - ೧೯೪೬ರಲ್ಲಿ ಇದೇ ದಿನ ಪ್ರಾರಂಭವಾಗಿತ್ತು. ಆ ದಿನದ ನೆನಪಿಗೋಸ್ಕರ ಫೆಬ್ರುವರಿ ೧೩ನ್ನು ವಿಶ್ವ ರೇಡಿಯೋ ದಿನ ಎಂದು ಗುರುತಿಸಲಾಗಿದೆ.

ಸಂವಹನ ಮಾಧ್ಯಮವಾಗಿ ರೇಡಿಯೋದ ಮಹತ್ವವನ್ನು ಎಲ್ಲರಿಗೂ ತಿಳಿಸುವುದು ಈ ದಿನದ ಉದ್ದೇಶ. ಇದರ ಜೊತೆಗೆ ಪ್ರತಿ ವರ್ಷವೂ ಈ ದಿನಾಚರಣೆಗೆ ಒಂದೊಂದು ಕೇಂದ್ರ ವಿಷಯ ಅಥವಾ ಥೀಮ್ ಅನ್ನು ಗುರುತಿಸಿರುತ್ತಾರೆ. ಈ ವರ್ಷ (೨೦೨೨) 'ರೇಡಿಯೋ ಮತ್ತು ವಿಶ್ವಾಸ' (Radio and Trust) ಎಂಬ ಕೇಂದ್ರ ವಿಷಯದೊಡನೆ ರೇಡಿಯೋ ದಿನದ ಹನ್ನೊಂದನೇ ಆವೃತ್ತಿಯನ್ನು ಆಚರಿಸಲಾಗುತ್ತಿದೆ.

<div class="paragraphs"><p>ಈ ವರ್ಷ ರೇಡಿಯೋ ದಿನದ ಹನ್ನೊಂದನೇ ಆವೃತ್ತಿಯನ್ನು ಆಚರಿಸಲಾಗುತ್ತಿದೆ.</p></div>

ಈ ವರ್ಷ ರೇಡಿಯೋ ದಿನದ ಹನ್ನೊಂದನೇ ಆವೃತ್ತಿಯನ್ನು ಆಚರಿಸಲಾಗುತ್ತಿದೆ.

unesco.org

ರೇಡಿಯೋ ತರಂಗಗಳು (ರೇಡಿಯೋ ವೇವ್ಸ್) ಒಂದು ಬಗೆಯ ವಿದ್ಯುತ್ಕಾಂತ ತರಂಗಗಳು. ಅಂದರೆ, ಇಲೆಕ್ಟ್ರೋಮ್ಯಾಗ್ನೆಟಿಕ್ ವೇವ್ಸ್. ಈ ತರಂಗಗಳನ್ನು ಬಳಸಿ ನಡೆಸುವ ಸಂವಹನವೇ ರೇಡಿಯೋ ಕಮ್ಯೂನಿಕೇಶನ್. ನಾವು ಕೇಳುವ ರೇಡಿಯೋ ಪ್ರಸಾರ ಈ ಬಗೆಯ ಸಂವಹನಕ್ಕೆ ಒಂದು ಉದಾಹರಣೆ. ಕಾರ್ಯಕ್ರಮದ ಧ್ವನಿ ರೇಡಿಯೋ ತರಂಗಗಳ ರೂಪದಲ್ಲಿ ಪ್ರಸಾರ ಕೇಂದ್ರದಲ್ಲಿರುವ ಟ್ರಾನ್ಸ್‌ಮಿಟರ್‌ನಿಂದ ಹೊರಡುತ್ತದೆ, ಮನೆಯಲ್ಲೋ ಕಾರಿನಲ್ಲೋ ಮೊಬೈಲಿನಲ್ಲೋ ನಮ್ಮ ಬಳಿ ಇರುವ ರೇಡಿಯೋ ಆ ತರಂಗಗಳನ್ನು ಗುರುತಿಸಿ ಕಾರ್ಯಕ್ರಮದ ಧ್ವನಿಯನ್ನು ನಮಗೆ ಕೇಳಿಸುತ್ತದೆ. ಇಲ್ಲಿ ಬಳಕೆಯಾಗುವ ತರಂಗಗಳ ಹಾಗೂ ತಂತ್ರಜ್ಞಾನದ ಹೆಸರೇ ಈ ವ್ಯವಸ್ಥೆಯ ಹಾಗೂ ಅದರಲ್ಲಿ ಬಳಕೆಯಾಗುವ ಸಾಧನದ ಹೆಸರೂ ಆಗಿಬಿಟ್ಟಿದೆ.

ಹೆಸರು ರೇಡಿಯೋ ತರಂಗ ಅಂತ ಇದ್ದರೂ ನಾವು ದಿನನಿತ್ಯ ಉಪಯೋಗಿಸುವ ಟೀವಿ, ಮೊಬೈಲ್ ಫೋನ್, ಬ್ಲೂಟೂತ್ ಇಯರ್‌ಫೋನ್, ವೈ-ಫೈ ಹಾಟ್‌ಸ್ಪಾಟ್ ಮುಂತಾದ ಅನೇಕ ಸಾಧನಗಳು ಕೂಡ ರೇಡಿಯೋ ತರಂಗಗಳನ್ನೇ ಬಳಸುತ್ತವೆ ಎನ್ನುವುದು ವಿಶೇಷ. ಈ ಎಲ್ಲ ಉಪಯೋಗಗಳಲ್ಲೂ ಬೇರೆಬೇರೆ ತರಂಗಾಂತರ, ಅಂದರೆ ಫ್ರೀಕ್ವೆನ್ಸಿಯ ರೇಡಿಯೋ ತರಂಗಗಳು ಬಳಕೆಯಾಗುತ್ತವೆ ಅಷ್ಟೇ.

ರೇಡಿಯೋ ಕಂಡುಹಿಡಿದದ್ದು ಮಾರ್ಕೋನಿ ಎನ್ನುವ ವಿಷಯವನ್ನು ನಾವು ಚಿಕ್ಕಂದಿನಿಂದ ಓದಿಕೊಂಡು, ಕೇಳಿಕೊಂಡು ಬಂದಿದ್ದೇವೆ. ಆದರೆ ಈ ವ್ಯವಸ್ಥೆ ರೂಪುಗೊಳ್ಳುವುದರ ಹಿಂದೆ ಅನೇಕ ವಿಜ್ಞಾನಿಗಳು ಕೆಲಸಮಾಡಿದ್ದಾರೆ. ರೇಡಿಯೋ ಪ್ರಸಾರದಲ್ಲಿ ನಿಸ್ತಂತು ಸಂವಹನದ ಪರಿಕಲ್ಪನೆ, ಅಂದರೆ ವೈರ್‌ಲೆಸ್ ಕಮ್ಯೂನಿಕೇಶನ್‌ ಬಳಕೆಯಾಗುತ್ತದಲ್ಲ, ಅದನ್ನು ಮೊತ್ತಮೊದಲ ಬಾರಿಗೆ ಸಾಧಿಸಿ ತೋರಿಸಿದ್ದು ನಮ್ಮ ದೇಶದ ವಿಜ್ಞಾನಿ ಜಗದೀಶಚಂದ್ರ ಬೋಸ್ ಅವರು. ಹಾಗೆಯೇ ಅಮೆರಿಕಾದ ನಿಕೋಲಾ ಟೆಸ್ಲಾ ಹಾಗೂ ರಷ್ಯಾದ ಅಲೆಗ್ಸಾಂಡರ್ ಪೋಪೋವ್ ಕೂಡ ರೇಡಿಯೋ ತರಂಗಗಳನ್ನು ಬಳಸಿ ಪ್ರಯೋಗಗಳನ್ನು ಮಾಡಿದ್ದರು. ಇಂತಹ ಹಲವಾರು ಸಂಶೋಧನೆಗಳ ಆಧಾರದ ಮೇಲೆ ಇನ್ನಷ್ಟು ಸುಧಾರಿತ ವ್ಯವಸ್ಥೆಯನ್ನು ರೂಪಿಸಿದ್ದು ಇಟಲಿ ದೇಶದ ಮಾರ್ಕೋನಿ.

ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಮಹತ್ವದ ಬೆಳವಣಿಗೆಗಳು ಅಂತ ನಾವು ಯಾವುದನ್ನು ಗುರುತಿಸುತ್ತೇವೋ, ಅಂತಹ ಕೆಲ ಘಟನೆಗಳು ರೇಡಿಯೋ ಮಾಧ್ಯಮವನ್ನೂ ದೊಡ್ಡ ಪ್ರಮಾಣದಲ್ಲಿ ಪ್ರಭಾವಿಸಿವೆ. ಟ್ರಾನ್ಸಿಸ್ಟರಿನ ಆವಿಷ್ಕಾರ ಇಂತಹ ಘಟನೆಗಳಿಗೆ ಒಂದು ಉದಾಹರಣೆ. ಹಿಂದಿನ ಕಾಲದ ಕಂಪ್ಯೂಟರುಗಳು ಹಾಗೂ ರೇಡಿಯೋಗಳು ವ್ಯಾಕ್ಯೂಮ್ ಟ್ಯೂಬ್ ಅಥವಾ ವಾಲ್ವ್‌ ಎಂಬ ಭಾಗ, ಅಂದರೆ ಕಾಂಪೊನೆಂಟ್‌ಗಳನ್ನು ಬಳಸುತ್ತಿದ್ದವು. ಇವು ಗಾತ್ರದಲ್ಲಿ ದೊಡ್ಡದಾಗಿದ್ದವು, ಜಾಸ್ತಿ ವಿದ್ಯುತ್ ಬಳಸುತ್ತಿದ್ದವು, ಬೇಗ ಹಾಳಾಗುತ್ತಲೂ ಇದ್ದವು. ಇವುಗಳ ಬದಲು ಬಳಸಬಹುದಾದ, ಹೆಚ್ಚು ಕಾರ್ಯಕ್ಷಮತೆ ಇರುವ ಟ್ರಾನ್ಸಿಸ್ಟರ್ ಎನ್ನುವ ಭಾಗದ ಆವಿಷ್ಕಾರ ಆದಾಗ ರೇಡಿಯೋ ಸೇರಿದಂತೆ ಎಲ್ಲ ವಿದ್ಯುನ್ಮಾನ ಸಾಧನಗಳ ಗಾತ್ರ ದಿಢೀರನೆ ಕಡಿಮೆಯಾಯಿತು, ಅವುಗಳ ಕಾರ್ಯಕ್ಷಮತೆ ಜಾಸ್ತಿಯಾಯಿತು. ರೇಡಿಯೋ ಕಮ್ಯೂನಿಕೇಶನ್ ತಂತ್ರಜ್ಞಾನ ಬಳಸುವ ಪ್ರಸಾರ ವ್ಯವಸ್ಥೆಗೆ ರೇಡಿಯೋ ಅಂತಲೇ ಹೆಸರಾದ ಹಾಗೆ ಟ್ರಾನ್ಸಿಸ್ಟರ್ ಬಳಸುವ ರೇಡಿಯೋಗಳಿಗೆ ಟ್ರಾನ್ಸಿಸ್ಟರ್ ಎನ್ನುವ ಹೆಸರೇ ಬಂದುಬಿಟ್ಟಿದ್ದು ಈ ಸಂದರ್ಭದಲ್ಲಿ.

ಟ್ರಾನ್ಸಿಸ್ಟರ್ ಬಳಸುವ ರೇಡಿಯೋಗಳಿಗೆ ಟ್ರಾನ್ಸಿಸ್ಟರ್ ಎನ್ನುವ ಹೆಸರೇ ಬಂದುಬಿಟ್ಟಿತು
ಟ್ರಾನ್ಸಿಸ್ಟರ್ ಬಳಸುವ ರೇಡಿಯೋಗಳಿಗೆ ಟ್ರಾನ್ಸಿಸ್ಟರ್ ಎನ್ನುವ ಹೆಸರೇ ಬಂದುಬಿಟ್ಟಿತುImage by Igor Ovsyannykov from Pixabay

ರೇಡಿಯೋ ಪ್ರಸಾರದಲ್ಲಿ ರೇಡಿಯೋ ತರಂಗಗಳು ಬಳಕೆಯಾಗುತ್ತವೆ, ಸರಿ. ಆದರೆ ಆ ತರಂಗಗಳು ಹೇಗೆ ಬಳಕೆಯಾಗುತ್ತವೆ ಎನ್ನುವುದರ ಆಧಾರದ ಮೇಲೆ ಆ ಪ್ರಸಾರ ಯಾವ ರೀತಿಯದ್ದು ಎಂದು ಗುರುತಿಸಬಹುದು. ತರಂಗಗಳ ಪಾರ ಅಂತ ಹೇಳುತ್ತಾರಲ್ಲ, ಆಂಪ್ಲಿಟ್ಯೂಡ್, ಅದನ್ನು ಹೆಚ್ಚು-ಕಡಿಮೆ ಮಾಡುವ ಮೂಲಕ ಮಾಹಿತಿಯನ್ನು ಪ್ರಸಾರ ಮಾಡುವ ವಿಧಾನ ಆಂಪ್ಲಿಟ್ಯೂಡ್ ಮಾಡ್ಯುಲೇಶನ್ ಅಥವಾ ಎಎಂ. ಮೀಡಿಯಂ ವೇವ್ ಅಥವಾ ಎಂಡಬ್ಲ್ಯೂ ಎಂದು ಗುರುತಿಸುವ ಪ್ರಸಾರ ಇದರದ್ದೇ ಒಂದು ವಿಧ. ಇದರ ಬದಲು ತರಂಗಾಂತರ ಅಥವಾ ಫ್ರೀಕ್ವೆನ್ಸಿಯನ್ನು ಬದಲಿಸುವ ಮೂಲಕ ಮಾಹಿತಿ ಪ್ರಸಾರ ಮಾಡುವುದು ಫ್ರೀಕ್ವೆನ್ಸಿ ಮಾಡ್ಯುಲೇಶನ್. ನಮಗೆಲ್ಲ ಗೊತ್ತೇ ಇರುವ ಹಾಗೆ ಎಫ್‌ಎಂನಲ್ಲಿ ಧ್ವನಿಯ ಗುಣಮಟ್ಟ ಬಹಳ ಚೆನ್ನಾಗಿರುತ್ತೆ. ಪ್ರಸಾರ ಎಷ್ಟು ದೂರದವರೆಗೆ ತಲುಪಬಲ್ಲದು ಅಂತ ನೋಡಿದರೆ ಎಎಂ ಪ್ರಸಾರದ ವ್ಯಾಪ್ತಿ ಎಫ್‌ಎಂಗಿಂತ ಜಾಸ್ತಿ.

ಸರಕಾರ ಹಾಗೂ ಖಾಸಗಿ ಒಡೆತನದ ವಾಹಿನಿಗಳ ಜೊತೆಗೆ ಸಮುದಾಯದ ನೆರವಿನಿಂದ ನಡೆಯುವ, ಸೀಮಿತ ಪ್ರಸಾರ ವ್ಯಾಪ್ತಿಯ ಕಮ್ಯೂನಿಟಿ ರೇಡಿಯೋ ಪ್ರಸಾರ ಕೇಂದ್ರಗಳೂ ವಿವಿಧೆಡೆಗಳಲ್ಲಿ ಕೆಲಸ ಮಾಡುತ್ತಿವೆ. ಇಂತಹ ಬಹುತೇಕ ರೇಡಿಯೋ ವಾಹಿನಿಗಳು ಅನಲಾಗ್ ತಂತ್ರಜ್ಞಾನವನ್ನು ಬಳಸುತ್ತವೆ ಮತ್ತು ಧ್ವನಿರೂಪದ ಮಾಹಿತಿಯನ್ನು ಪ್ರಸಾರ ಮಾಡುತ್ತದೆ.

ಈಗ ಎಲ್ಲವೂ ಡಿಜಿಟಲ್ ಆಗುತ್ತಿದೆಯಲ್ಲ, ಹಾಗಾಗಿ ಅನಲಾಗ್ ರೇಡಿಯೋ ಪ್ರಸಾರದ ಜೊತೆ ಒಂದಷ್ಟು ಡಿಜಿಟಲ್ ಮಾಹಿತಿಯನ್ನೂ - ಉದಾಹರಣೆಗೆ ನೀವು ಕೇಳುತ್ತಿರುವ ವಾಹಿನಿಯ ಹೆಸರೇನು, ಈಗ ಪ್ರಸಾರ ಆಗುತ್ತಿರುವ ಹಾಡು ಯಾವ ಚಿತ್ರದ್ದು ಇತ್ಯಾದಿ - ಪ್ರಸಾರ ಮಾಡುವ ಪ್ರಯತ್ನ ರೇಡಿಯೋ ಡೇಟಾ ಸಿಸ್ಟಂ ಅಥವಾ ಆರ್‌ಡಿಎಸ್ ಎನ್ನುವ ವ್ಯವಸ್ಥೆಯ ಮೂಲಕ ಆಗಿದೆ. ಮೊಬೈಲ್ ಫೋನ್ ಅಥವಾ ಕಾರಿನ ಮನರಂಜನಾ ವ್ಯವಸ್ಥೆಯಲ್ಲಿ ರೇಡಿಯೋ ಕೇಳಿದರೆ ಈ ಮಾಹಿತಿಯನ್ನು ನಾವು ಪರದೆಯ ಮೇಲೆ ನೋಡುವುದು ಸಾಧ್ಯವಾಗುತ್ತದೆ.

ಇಷ್ಟಕ್ಕೇ ಸೀಮಿತವಾಗುವ ಬದಲು ಹಲವಾರು ಕಡೆ ರೇಡಿಯೋ ಪ್ರಸಾರಕ್ಕೆ ಸಂಪೂರ್ಣವಾಗಿ ಡಿಜಿಟಲ್ ತಂತ್ರಜ್ಞಾನವನ್ನೇ ಬಳಸಲಾಗುತ್ತಿದೆ. ಡಿಜಿಟಲ್ ಆಡಿಯೋ ಬ್ರಾಡ್‌ಕಾಸ್ಟಿಂಗ್, ಸಂಕ್ಷಿಪ್ತವಾಗಿ ಡಿಎಬಿ, ಎನ್ನುವುದು ಈ ತಂತ್ರಜ್ಞಾನದ ಹೆಸರು. ಹೈ-ಡೆಫನಿಶನ್, ಅಂದರೆ ಎಚ್‌ಡಿ ಟೀವಿ ಇದ್ದಹಾಗೆ ಇದು ಎಚ್‌ಡಿ ರೇಡಿಯೋ. ಈ ತಂತ್ರಜ್ಞಾನ ಬಳಸಿ ಪ್ರಸಾರ ಮಾಡುವ ಕಾರ್ಯಕ್ರಮಗಳನ್ನು ಕೇಳುವುದಕ್ಕೆ ಪ್ರತ್ಯೇಕವಾದ, ಡಿಜಿಟಲ್ ತಂತ್ರಜ್ಞಾನ ಬೆಂಬಲಿಸುವ ರೇಡಿಯೋ ಅನ್ನು ಬಳಸಬೇಕಾಗುತ್ತದೆ.

ನೂರೆಂಟು ಬಗೆಯ ಸೇವೆಗಳು ಅಂತರಜಾಲ, ಅಂದರೆ ಇಂಟರ್‌ನೆಟ್ ಮೂಲಕ ಸಿಗುವುದು ಈಗ ಸಾಮಾನ್ಯ. ರೇಡಿಯೋ ಪ್ರಸಾರ ಕೂಡ ಅದಕ್ಕೆ ಹೊರತಲ್ಲ. ಅನೇಕ ರೇಡಿಯೋ ವಾಹಿನಿಗಳು ತಮ್ಮ ಕಾರ್ಯಕ್ರಮಗಳನ್ನು ಅಂತರಜಾಲದ ಮೂಲಕ ಪ್ರಸಾರ ಮಾಡುತ್ತವೆ. ರೇಡಿಯೋ ವಾಹಿನಿಗಳ ಮೊಬೈಲ್ ಆಪ್‌ಗಳೂ ಇವೆ. ಅಂತರಜಾಲದಲ್ಲಿ ಮಾತ್ರವೇ ಪ್ರಸಾರವಾಗುವ ಇಂಟರ್‌ನೆಟ್ ರೇಡಿಯೋ ವಾಹಿನಿಗಳೂ ಇವೆ - ಅವನ್ನು ಬ್ರಾಡ್‌ಕಾಸ್ಟ್ ಅನ್ನುವುದಕ್ಕಿಂತ ವೆಬ್‌ಕಾಸ್ಟ್ ಅಂತಲೇ ಹೆಚ್ಚಾಗಿ ಗುರುತಿಸಲಾಗುತ್ತದೆ. ಧ್ವನಿರೂಪದ ಮಾಹಿತಿ ಇಷ್ಟೆಲ್ಲ ಜನಪ್ರಿಯವಾಗಿದೆಯಲ್ಲ, ಅಂತಹ ಮಾಹಿತಿಯನ್ನು ಪ್ರಕಟಿಸಿ ಅಂತರಜಾಲದ ಮೂಲಕ ಹಂಚಿಕೊಳ್ಳುವ ಪಾಡ್‌ಕಾಸ್ಟ್ ವ್ಯವಸ್ಥೆ ಕೂಡ ಸಾಕಷ್ಟು ಜನಪ್ರಿಯವಾಗಿದೆ. ನಮ್ಮ ಫೋನಿನಲ್ಲಿ, ನಮ್ಮ ಜೇಬಿನಲ್ಲಿ ಇರುವ ನಮ್ಮದೇ ರೇಡಿಯೋ ಅದು!

ಫೆಬ್ರುವರಿ ೧೩, ೨೦೨೦ರಂದು ವಿಶ್ವ ರೇಡಿಯೋ ದಿನ ಸಂದರ್ಭದಲ್ಲಿ ಬೆಂಗಳೂರು ಆಕಾಶವಾಣಿಯ ಎಫ್‌ಎಂ ರೈನ್‌ಬೋ ವಾಹಿನಿಯಲ್ಲಿ ನಡೆಸಿದ ಮಾತುಕತೆಯ ಸಾರಾಂಶ; ಫೆಬ್ರುವರಿ ೧೩, ೨೦೨೨ರಂದು ಅಪ್‌ಡೇಟ್ ಮಾಡಲಾಗಿದೆ.

"More than ever, we need this universal humanist medium, vector of freedom. Without radio, the right to information and freedom of expression and, with them, fundamental freedoms would be weakened, as would cultural diversity, since community radio stations are the voices of the voiceless."
Audrey Azoulay, Director-General of UNESCO, on the occasion of World Radio Day
logo
ಇಜ್ಞಾನ Ejnana
www.ejnana.com