ಫೇಸ್‌ಬುಕ್ ಅನ್ನು ಉಪಯುಕ್ತ ಮಾಹಿತಿಯ ಪ್ರಸಾರಕ್ಕೆ ಬಳಸುವ ಹಲವು ಪ್ರಯತ್ನಗಳು ನಡೆದಿವೆ
ಫೇಸ್‌ಬುಕ್ ಅನ್ನು ಉಪಯುಕ್ತ ಮಾಹಿತಿಯ ಪ್ರಸಾರಕ್ಕೆ ಬಳಸುವ ಹಲವು ಪ್ರಯತ್ನಗಳು ನಡೆದಿವೆImage by Gerd Altmann from Pixabay

ಕನ್ನಡದ ಇಜ್ಞಾನ: ಫೇಸ್‌ಬುಕ್‌ನಲ್ಲಿ ವಿಷಯ ವೈವಿಧ್ಯ

ಉಪಯುಕ್ತ ಮಾಹಿತಿ ಪ್ರಸಾರದ ಮಾಧ್ಯಮವಾಗಿ, ಅರ್ಥಪೂರ್ಣ ಚರ್ಚೆಗಳಿಗೆ ವೇದಿಕೆಯಾಗಿ ಫೇಸ್‌ಬುಕ್ ಅನ್ನು ಬಳಸಿಕೊಳ್ಳುವ ಹಲವು ಪ್ರಯತ್ನಗಳು ನಡೆದಿವೆ. ಅಂತಹ ಮೂರು ಪ್ರಯತ್ನಗಳ ಪರಿಚಯ ಇಲ್ಲಿದೆ.

ಫೇಸ್‌ಬುಕ್‌ನಿಂದಾಗಿ ಸಮಯ ವ್ಯರ್ಥವಾಗುತ್ತದೆ ಎಂದು ಅನೇಕರು ಹೇಳುತ್ತಾರೆ. ಆದರೆ ಅದೇ ಫೇಸ್‌ಬುಕ್ ಅನ್ನು ಉಪಯುಕ್ತ ಮಾಹಿತಿಯ ಪ್ರಸಾರಕ್ಕೆ ಬಳಸುವ ಹಲವು ಪ್ರಯತ್ನಗಳೂ ನಡೆದಿವೆ. ಇಂತಹ ಪ್ರಯತ್ನಗಳಲ್ಲಿ 'ಕನ್ನಡ ಸಂಪದ' ಫೇಸ್‌ಬುಕ್ ಸಮುದಾಯವೂ ಒಂದು. ಈವರೆಗೆ ಮೂವತ್ತು ಸಾವಿರಕ್ಕೂ ಹೆಚ್ಚು ಮಂದಿ ಮೆಚ್ಚಿರುವ ಈ ಸಮುದಾಯವನ್ನು ದುಬೈ ಕನ್ನಡಿಗ ತಿರು ಶ್ರೀಧರ ನಿರ್ವಹಿಸುತ್ತಿದ್ದಾರೆ. ಸಾಹಿತ್ಯ, ಸಂಗೀತ, ಚಲನಚಿತ್ರ, ರಂಗಭೂಮಿ, ಉದ್ದಿಮೆ, ವಿಜ್ಞಾನ-ತಂತ್ರಜ್ಞಾನ ಮುಂತಾದ ಹಲವು ಕ್ಷೇತ್ರಗಳ ಸಾಧಕರ ಪರಿಚಯಗಳು ಇಲ್ಲಿ ನಿರಂತರವಾಗಿ ಮೂಡಿಬರುತ್ತಿವೆ. ಈ ಪುಟಕ್ಕೆ ಪೂರಕವಾಗಿ ಸಂಸ್ಕೃತಿ ಸಲ್ಲಾಪ ಎಂಬ ಜಾಲತಾಣ ಕೂಡ ಕಾರ್ಯನಿರ್ವಹಿಸುತ್ತಿದೆ.

ಹೆಚ್ಚಿನ ವಿವರಗಳಿಗೆ: facebook.com/kannadasampada

ಕನ್ನಡ ಸಂಪದ ಇದೀಗ ತನ್ನ ಹತ್ತನೇ ವರ್ಷದ ಸಂಭ್ರಮವನ್ನು ಆಚರಿಸುತ್ತಿದೆ.
ಕನ್ನಡ ಸಂಪದ ಇದೀಗ ತನ್ನ ಹತ್ತನೇ ವರ್ಷದ ಸಂಭ್ರಮವನ್ನು ಆಚರಿಸುತ್ತಿದೆ.ಕನ್ನಡ ಸಂಪದ

ಕನ್ನಡ ಭಾಷೆ ಹಾಗೂ ಪದಸಂಪತ್ತನ್ನು ಕುರಿತ ಹಲವು ಚರ್ಚೆಗಳಿಗೆ ವೇದಿಕೆಯಾಗಿರುವುದು 'ಪದಾರ್ಥ ಚಿಂತಾಮಣಿ' ಸಮುದಾಯ. ನಾವು ಬಳಸುವ ಶಬ್ದಗಳ ವ್ಯುತ್ಪತ್ತಿ, ಹೊಸ ಪದಗಳ ಅರ್ಥ, ಅನ್ಯಭಾಷೆಗಳ ಪದಗಳಿಗೆ ಕನ್ನಡದ ಪರ್ಯಾಯಗಳು - ಹೀಗೆ ಈ ಸಮುದಾಯದಲ್ಲಿ ಅನೇಕ ವಿಷಯಗಳ ಬಗ್ಗೆ ವಿಚಾರ ವಿನಿಮಯ ನಡೆಯುತ್ತದೆ. ವ್ಯಾಕರಣಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೂ ನಾವಿಲ್ಲಿ ಉತ್ತರ ಹುಡುಕಿಕೊಳ್ಳಬಹುದು. ಆನ್‌ಲೈನ್ ಮಾತ್ರವಲ್ಲದೆ ಆಫ್‌ಲೈನ್ ಜಗತ್ತಿನಲ್ಲೂ ಸಕ್ರಿಯವಾಗಿರುವ ಈ ಸಮುದಾಯ ಕಳೆದ ಕೆಲ ವರ್ಷಗಳಿಂದ 'ಪದಕಮ್ಮಟ' ಎಂಬ ವಾರ್ಷಿಕ ಸಮ್ಮೇಳನವನ್ನು ನಡೆಸಿಕೊಂಡು ಬಂದಿದೆ.

ಹೆಚ್ಚಿನ ವಿವರಗಳಿಗೆ: facebook.com/groups/padarthachintamani

ಯಾವುದೇ ವಿಷಯಕ್ಕೆ ಸಂಬಂಧಿಸಿದ ಜ್ಞಾನ ನಮ್ಮ ಭಾಷೆಯಲ್ಲೇ ದೊರಕುವಂತಿರಬೇಕು ಎನ್ನುವುದು ಆಗಿಂದಾಗ್ಗೆ ಕೇಳಸಿಗುವ ಆಶಯ. ಈ ಆಶಯವನ್ನು ಈಡೇರಿಸುವ ನಿಟ್ಟಿನಲ್ಲಿ ಅನೇಕ ಪ್ರಯತ್ನಗಳು ನಡೆಯುತ್ತಿವೆ. ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನ ಮಾಹಿತಿ ಹೆಚ್ಚಿನ ಪ್ರಮಾಣದಲ್ಲಿ ಸಿಗುವಂತಾಗಬೇಕು ಎನ್ನುವ ಉದ್ದೇಶದಿಂದ 'ಕುತೂಹಲಿ' ಎಂಬ ಹೊಸ ಪ್ರಯತ್ನ ಶುರುವಾಗಿದೆ. ಕೇಂದ್ರ ಸರಕಾರದ ವಿಜ್ಞಾನ ಪ್ರಸಾರ್ ನೇತೃತ್ವದಲ್ಲಿ ಪ್ರಾರಂಭವಾಗಿರುವ ಈ ಸಮುದಾಯ ವಿಜ್ಞಾನ ಸಂವಹನದ ಸುತ್ತಮುತ್ತ ಹಲವು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಿದೆ. 'ಕುತೂಹಲಿ' ಎಂಬ ಸುದ್ದಿಪತ್ರದ ಪ್ರಕಟಣೆಯೂ ಇದರಲ್ಲಿ ಸೇರಿದೆ.

ಹೆಚ್ಚಿನ ವಿವರಗಳಿಗೆ: facebook.com/kutuhali

ಕಮೆಂಟ್ ಮಾಡಿ, ಮಾಹಿತಿ ಹಂಚಿಕೊಳ್ಳಿ!
ಫೇಸ್‌ಬುಕ್‌ನಲ್ಲಿ ಕನ್ನಡದ ಕೆಲಸ ಇನ್ನೂ ಹಲವಾರು ಪುಟ ಹಾಗೂ ಸಮುದಾಯಗಳಲ್ಲಿ ನಡೆಯುತ್ತಿದೆ. ಅಂತಹ ಪುಟ-ಸಮುದಾಯಗಳ ಪೈಕಿ ನಿಮಗಿಷ್ಟವಾದವು ಯಾವುವು? ಕಮೆಂಟ್ ಮಾಡಿ, ಮಾಹಿತಿ ಹಂಚಿಕೊಳ್ಳಿ!

Related Stories

No stories found.
logo
ಇಜ್ಞಾನ Ejnana
www.ejnana.com