ಯಾವುದೇ ಘಟಕ ತನ್ನ ಚಟುವಟಿಕೆಗಳ ಪರಿಣಾಮವಾಗಿ ಉತ್ಪಾದಿಸುವ ಕಾರ್ಬನ್ ಡೈಆಕ್ಸೈಡ್‌ನ ಒಟ್ಟು ಪ್ರಮಾಣವೇ ಆ ಘಟಕದ 'ಕಾರ್ಬನ್ ಫುಟ್‌‌ಪ್ರಿಂಟ್'
ಯಾವುದೇ ಘಟಕ ತನ್ನ ಚಟುವಟಿಕೆಗಳ ಪರಿಣಾಮವಾಗಿ ಉತ್ಪಾದಿಸುವ ಕಾರ್ಬನ್ ಡೈಆಕ್ಸೈಡ್‌ನ ಒಟ್ಟು ಪ್ರಮಾಣವೇ ಆ ಘಟಕದ 'ಕಾರ್ಬನ್ ಫುಟ್‌‌ಪ್ರಿಂಟ್'Image by Gerd Altmann from Pixabay

ಮಾಹಿತಿ ತಂತ್ರಜ್ಞಾನ ಮತ್ತು ಮಾಲಿನ್ಯ

ಲಾಕ್‌ಡೌನ್‌ನಿಂದಾಗಿ ಪರಿಸರಮಾಲಿನ್ಯ ಗಣನೀಯವಾಗಿ ಕಡಿಮೆಯಾಗಿರುವುದರ ಬಗ್ಗೆ ಸಾಕಷ್ಟು ಒಳ್ಳೆಯ ಸುದ್ದಿಗಳನ್ನು ಕೇಳುತ್ತಿದ್ದೇವೆ. ಆದರೆ ಮಾಲಿನ್ಯಕ್ಕೆ ಕಾರಣವಾಗುವುದು ಕಾರ್ಖಾನೆಗಳು - ವಾಹನಗಳು ಮಾತ್ರವೇ ಅಲ್ಲ!

ಉದ್ದಿಮೆಗಳಿಂದ ಉಂಟಾಗುವ ವಾಯುಮಾಲಿನ್ಯ ಎಂದತಕ್ಷಣ ಹೊಗೆಯುಗುಳುವ ಕಾರ್ಖಾನೆಗಳು ನಮಗೆ ನೆನಪಾಗುತ್ತವೆ. ವಿವಿಧ ವಸ್ತುಗಳ ತಯಾರಿಕೆಗೆ ಬಳಕೆಯಾಗುವ ಯಂತ್ರಗಳು, ಅವನ್ನು ಸಾಗಿಸುವ ವಾಹನಗಳು ಇಂಧನ ಉರಿಸಿ ಹೊಗೆ ಬಿಡುತ್ತವೆ ಎನ್ನುವುದು ನಮಗೆ ಗೊತ್ತು.

ಯಾವುದೇ ವ್ಯಕ್ತಿ ಅಥವಾ ಕಟ್ಟಡ, ಸಂಸ್ಥೆ, ದೇಶ ಮುಂತಾದ ಯಾವುದೇ ಘಟಕ ತನ್ನ ಚಟುವಟಿಕೆಗಳ ಪರಿಣಾಮವಾಗಿ ಉತ್ಪಾದಿಸುವ ಕಾರ್ಬನ್ ಡೈಆಕ್ಸೈಡ್‌ನ ಒಟ್ಟು ಪ್ರಮಾಣವನ್ನು ಆ ವ್ಯಕ್ತಿ ಅಥವಾ ಘಟಕದ 'ಕಾರ್ಬನ್ ಫುಟ್‌‌ಪ್ರಿಂಟ್' ಎಂದು ಕರೆಯುತ್ತಾರೆ. ವಿಮಾನದಲ್ಲಿ ಕುಳಿತು ಬೆಂಗಳೂರಿನಿಂದ ದೆಹಲಿಗೆ ಹೋದರೆ, ನಮ್ಮೊಬ್ಬರಿಂದಲೇ ಸುಮಾರು ೧೫೦ ಕೆಜಿಯಷ್ಟು ಕಾರ್ಬನ್ ಡೈಆಕ್ಸೈಡ್‌ ವಾತಾವರಣಕ್ಕೆ ಸೇರುತ್ತದೆ ಎಂದು ಲೆಕ್ಕಾಚಾರಗಳು ತಿಳಿಸುತ್ತವೆ. ಅದು ನಮ್ಮ ಪ್ರಯಾಣದ ಕಾರ್ಬನ್ ಫುಟ್‌ಪ್ರಿಂಟ್.

ವಿಮಾನವಿರಲಿ, ಆಟೋ ಇರಲಿ, ನಮ್ಮ ಪ್ರಯಾಣದಿಂದ ಕಾರ್ಬನ್ ಡೈಆಕ್ಸೈಡ್‌ ಉತ್ಪಾದನೆಯಾಗುತ್ತದೆ ಎನ್ನುವುದನ್ನು ಅರ್ಥಮಾಡಿಕೊಳ್ಳುವುದು ಸುಲಭ. ಪ್ರಯಾಣದಲ್ಲಿ ನಾವು ಕೊಂಡೊಯ್ಯುವ ವಸ್ತುಗಳ ತಯಾರಿಕೆಯೂ ಒಂದಷ್ಟು ಕಾರ್ಬನ್ ಡೈಆಕ್ಸೈಡ್‌ ಅನ್ನು ವಾತಾವರಣಕ್ಕೆ ಸೇರಿಸಿರುತ್ತದೆ.

ಇಷ್ಟೆಲ್ಲ ಸುಲಭಕ್ಕೆ ಅರ್ಥವಾಗದ ಸುದ್ದಿಯೊಂದು ಈಚೆಗೆ ಕೇಳಿಬಂದಿತ್ತು. ೨೦೩೦ರ ವೇಳೆಗೆ ತಾನು 'ಕಾರ್ಬನ್ ನೆಗೆಟಿವ್' ಆಗುವುದಾಗಿ ಮೈಕ್ರೋಸಾಫ್ಟ್ ಸಂಸ್ಥೆ ಘೋಷಿಸಿದೆ ಎನ್ನುವುದೇ ಆ ಸುದ್ದಿ. ಆ ವೇಳೆಗೆ ತಾನು ವಾತಾವರಣಕ್ಕೆ ಸೇರಿಸುವ ಕಾರ್ಬನ್ ಡೈಆಕ್ಸೈಡ್‌‌ಗಿಂತ ಹೆಚ್ಚಿನ ಪ್ರಮಾಣವನ್ನು ವಾತಾವರಣದಿಂದ ತೆಗೆಯುತ್ತೇನೆ ಎನ್ನುವುದು ಈ ಘೋಷಣೆಯ ಹೂರಣ. ಸೇರಿಸಿದಷ್ಟೇ ಕಾರ್ಬನ್ ಡೈಆಕ್ಸೈಡ್‌ ಹೊರತೆಗೆದಿದ್ದರೆ ಅದು 'ಕಾರ್ಬನ್ ನ್ಯೂಟ್ರಲ್' ಆಗಿರುತ್ತಿತ್ತು. ನೆಗೆಟಿವ್ ಆಗುವುದರಲ್ಲಿ ನ್ಯೂಟ್ರಲ್ ಆಗುವುದಕ್ಕಿಂತ ಹೆಚ್ಚುಗಾರಿಕೆ ಇದೆ.

ಭೌತಿಕ ವಸ್ತುಗಳನ್ನೆಲ್ಲ ಡಿಜಿಟಲ್ ರೂಪಕ್ಕೆ ತಂದು, ನಮ್ಮ ಕೆಲಸಗಳನ್ನೆಲ್ಲ ಕುಳಿತಲ್ಲೇ ಮಾಡಿಕೊಳ್ಳುವುದನ್ನು ಸಾಧ್ಯವಾಗಿಸಿರುವುದು ಮಾಹಿತಿ ತಂತ್ರಜ್ಞಾನ. ಈ ಕ್ಷೇತ್ರದ ಮುಂಚೂಣಿಯಲ್ಲಿರುವ ಸಂಸ್ಥೆಗೆ ವಾಯುಮಾಲಿನ್ಯದ ಚಿಂತೆ ಏಕೆ? ಟೈಪ್ ಮಾಡಿ ಕಡತಗಳನ್ನು ಉಳಿಸುವಾಗ, ಅದನ್ನು ಸ್ನೇಹಿತರಿಗೆ ಇಮೇಲ್ ಮಾಡುವಾಗ ನಮ್ಮ ಕಂಪ್ಯೂಟರಿನಿಂದ ಹೊಗೆಯೇನೂ ಬರುವುದಿಲ್ಲವಲ್ಲ!

ಇದು ಮೇಲ್ನೋಟಕ್ಕೆ ಕಾಣಿಸುವಷ್ಟು ಸುಲಭವಲ್ಲ. ಯಾವುದೇ ಚಟುವಟಿಕೆ, ತಾನು ನಡೆಯುವ ಜಾಗದಲ್ಲಷ್ಟೇ ಅಲ್ಲದೆ ಬೇರೆಡೆಗಳಲ್ಲೂ ಕಾರ್ಬನ್ ಡೈಆಕ್ಸೈಡ್‌ ಉತ್ಪಾದನೆಗೆ ಮತ್ತು ವಾಯುಮಾಲಿನ್ಯಕ್ಕೆ ಕಾರಣವಾಗಬಲ್ಲದು.

ಅದು ಹೇಗೆ? ಟೈಪ್ ಮಾಡಿ ಇಮೇಲ್ ಕಳಿಸುವ ಉದಾಹರಣೆಯನ್ನೇ ನೋಡೋಣ. ಈ ಕೆಲಸಕ್ಕೆ ನಾವು ಕಂಪ್ಯೂಟರನ್ನು ಬಳಸುತ್ತೇವೆ ಎಂದುಕೊಂಡರೆ, ಅದು ಕೆಲಸಮಾಡಲು ವಿದ್ಯುತ್ ಬೇಕು. ಇಮೇಲ್ ಕಳಿಸುವುದು ಸಾಧ್ಯವಾಗಬೇಕೆಂದರೆ ಅಂತರಜಾಲ ಸಂಪರ್ಕ ಇರಬೇಕು, ಅದು ಕೆಲಸಮಾಡುವುದಕ್ಕೂ ವಿದ್ಯುತ್ ಬೇಕು. ನಾವು ಕಳಿಸಿದ ಇಮೇಲ್ ನಮ್ಮ ಸ್ನೇಹಿತರಿಗೆ ತಲುಪುವ ಮುನ್ನ ಒಂದಷ್ಟು ದೂರ ಪ್ರಯಾಣಿಸುತ್ತದಲ್ಲ, ಆ ಪ್ರಯಾಣದ ಪ್ರತಿ ಹಂತದಲ್ಲಿ - ಆ ಸಂದೇಶ ಉಳಿದುಕೊಳ್ಳುವ ಪ್ರತಿ ಯಂತ್ರದಲ್ಲಿ ವಿದ್ಯುತ್ ಬಳಕೆ ಅನಿವಾರ್ಯ. ನಮಗೆ ಮತ್ತು ನಮ್ಮ ಸ್ನೇಹಿತರಿಗೆ ಬೇಕಾದ ತಕ್ಷಣ ಸಿಗುವಂತೆ ಇಮೇಲ್ ಸಂದೇಶವನ್ನು ಉಳಿಸಿಟ್ಟುಕೊಳ್ಳುವ ಡೇಟಾ ಸೆಂಟರ್‌ಗಳೆಂಬ ಕೇಂದ್ರಗಳೂ ಭಾರೀ ಪ್ರಮಾಣದ ವಿದ್ಯುತ್ತನ್ನು ಕಬಳಿಸುತ್ತವೆ. ಕೆಲಸದ ಮಾತು ಹಾಗಿರಲಿ, ಅಲ್ಲಿರುವ ಯಂತ್ರಗಳನ್ನು ತಣ್ಣಗಿಡಲಿಕ್ಕೇ ದೊಡ್ಡ ಪ್ರಮಾಣದ ವಿದ್ಯುತ್ ಬೇಕಾಗುತ್ತದೆ!

ಇಷ್ಟೆಲ್ಲ ವಿದ್ಯುತ್ ಎಲ್ಲಿಂದ ಬರುತ್ತದೆ? ಕಲ್ಲಿದ್ದಲು ಉರಿಸುವ ಸ್ಥಾವರದಿಂದ ಬಂದರೆ ಅದು ಅಗಾಧ ಪ್ರಮಾಣದ ಕಾರ್ಬನ್ ಡೈಆಕ್ಸೈಡನ್ನು ವಾತಾವರಣಕ್ಕೆ ಸೇರಿಸುತ್ತಿರುತ್ತದೆ. ಪವರ್ ಕಟ್ ಆದಾಗಲೂ ನಮ್ಮ ಟವರ್ ಮೂಲಕ ಮೊಬೈಲ್ ಇಂಟರ್‌ನೆಟ್ ಸಿಗುವಂತೆ ನೋಡಿಕೊಳ್ಳುವ ಡೀಸೆಲ್ ಜನರೇಟರ್, ವಿದ್ಯುತ್ತಿನ ಜೊತೆಗೆ ಕಾರ್ಬನ್ ಡೈಆಕ್ಸೈಡನ್ನೂ ಉತ್ಪಾದಿಸುತ್ತದೆ.

ಪ್ರತ್ಯೇಕ ಉದಾಹರಣೆಗಳಾಗಿ ಇವೆಲ್ಲ ಸಣ್ಣವು ಎನ್ನಿಸಬಹುದು, ಆದರೆ ಮಾಹಿತಿ ತಂತ್ರಜ್ಞಾನದ ಜಗತ್ತಿನಲ್ಲಿ ನಡೆಯುವ ಅಷ್ಟೂ ಕೆಲಸಗಳನ್ನು ನೋಡಿದರೆ ಈ ಕ್ಷೇತ್ರದ ಕಾರ್ಬನ್ ಫುಟ್‌ಪ್ರಿಂಟ್ ಎಷ್ಟು ದೊಡ್ಡದೆನ್ನುವುದು ನಮ್ಮ ಗಮನಕ್ಕೆ ಬರುತ್ತದೆ. ಬೆಂಗಳೂರಿನ ಐಟಿ ಕಂಪನಿ ಉದ್ಯೋಗಿಗಳನ್ನು ಓಡಾಡಿಸುವ ನೂರಾರು ಬಸ್ಸುಗಳಿಂದ ಪ್ರಾರಂಭಿಸಿ, ದೂರದ ಹಳ್ಳಿಯಲ್ಲಿ ಯೂಟ್ಯೂಬ್ ವೀಡಿಯೊ ತೋರಿಸುವ ಮೊಬೈಲಿನವರೆಗೆ ಪ್ರತಿಯೊಂದೂ ಈ ಹೆಜ್ಜೆಯ ಗುರುತನ್ನು ಇನ್ನಷ್ಟು ದೊಡ್ಡದಾಗಿಸುತ್ತದೆ.

ಇದು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಸಂಸ್ಥೆಗಳಿಗೂ ತಿಳಿದಿದೆ. ಮೈಕ್ರೋಸಾಫ್ಟ್ ಸಂಸ್ಥೆ ಕಾರ್ಬನ್ ನೆಗೆಟಿವ್ ಆಗಹೊರಟಿರುವುದರ ಹಿನ್ನೆಲೆಯಲ್ಲಿ, ೨೦೪೦ರ ವೇಳೆಗೆ ಕಾರ್ಬನ್ ನ್ಯೂಟ್ರಲ್ ಆಗುವುದಾಗಿ ಅಮೆಜಾನ್ ಹೇಳಿಕೊಂಡಿರುವ ಹಿನ್ನೆಲೆಯಲ್ಲಿ ಇರುವುದು ಇದೇ ಅರಿವು.

ಅರಿವು ಮೂಡಿರುವುದು ಒಳ್ಳೆಯದು. ಆದರೆ ಇಷ್ಟೆಲ್ಲ ಮಾಲಿನ್ಯವನ್ನು ಕಡಿಮೆಮಾಡುವುದು, ಈಗಾಗಲೇ ವಾತಾವರಣ ಸೇರಿರುವ ಕಾರ್ಬನ್ ಡೈ ಆಕ್ಸೈಡನ್ನು ಹೊರತೆಗೆಯುವುದು ಹೇಗೆ?

ವಿಶ್ವದೆಲ್ಲೆಡೆ ನಡೆದಿರುವ ಹಲವು ಕಾರ್ಯಕ್ರಮಗಳು ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಪ್ರಯತ್ನಿಸುತ್ತಿವೆ. ಕಾರ್ಬನ್ ಡೈ ಆಕ್ಸೈಡನ್ನು ವಾತಾವರಣದಿಂದ ಹೀರಿಕೊಳ್ಳಲು ಮರಗಳನ್ನು ಬೆಳೆಸುವುದರಿಂದ ಪ್ರಾರಂಭಿಸಿ ಇದಕ್ಕಾಗಿ ಹೊಸದೇ ಆದ ತಂತ್ರಜ್ಞಾನಗಳನ್ನು ರೂಪಿಸುವವರೆಗೆ ಇಂತಹ ಕಾರ್ಯಕ್ರಮಗಳ ವ್ಯಾಪ್ತಿ ವಿಸ್ತರಿಸಿಕೊಂಡಿರುವುದು ವಿಶೇಷ. ಮರಗಳೆಲ್ಲ ಬೆಳೆದು ತಮ್ಮ ಪೂರ್ಣ ಸಾಮರ್ಥ್ಯ ತಲುಪುವವರೆಗೆ ಸಾಕಷ್ಟು ಸಮಯ ಬೇಕಾಗುತ್ತದಲ್ಲ, ಅಲ್ಲಿಯವರೆಗೂ ವಾತಾವರಣದಿಂದ ಕಾರ್ಬನ್ ಡೈ ಆಕ್ಸೈಡ್ ಅನ್ನು ಹೊರತೆಗೆಯಲು ನೆರವಾಗುವ ಹೊಸ ತಂತ್ರಜ್ಞಾನಗಳ ಅನ್ವೇಷಣೆ ಈಗಾಗಲೇ ಪ್ರಾರಂಭವಾಗಿದೆ.

ಇನ್ನು ವಿದ್ಯುತ್ ಉತ್ಪಾದನೆಯಲ್ಲಿ ಕಲ್ಲಿದ್ದಲಿನಂತಹ ಪಳೆಯುಳಿಕೆ ಇಂಧನಗಳ ಬದಲು ಸೌರಶಕ್ತಿ - ಪವನಶಕ್ತಿಯಂತಹ ನವೀಕರಿಸಬಹುದಾದ ಸಂಪನ್ಮೂಲಗಳನ್ನು ಹೆಚ್ಚುಹೆಚ್ಚಾಗಿ ಬಳಸಲು ಉತ್ತೇಜನ ನೀಡಲಾಗುತ್ತಿದೆ. ಈ ಬಗ್ಗೆ ಇನ್ನೂ ತಲೆಕೆಡಿಸಿಕೊಂಡಿಲ್ಲದ ತಂತ್ರಜ್ಞಾನ ಸಂಸ್ಥೆಗಳು ಕೂಡ ಸ್ವಚ್ಛ ಇಂಧನಗಳನ್ನೇ ಬಳಸಬೇಕೆಂದು ಪರಿಸರ ಸಂರಕ್ಷಣಾ ಸಂಸ್ಥೆಗಳು ಒತ್ತಡ ಹೇರುತ್ತಿವೆ.

ಅಷ್ಟೇ ಅಲ್ಲ, ಐಟಿ ಸಂಸ್ಥೆಗಳು ರೂಪಿಸುವ ತಂತ್ರಾಂಶ-ಯಂತ್ರಾಂಶಗಳನ್ನು ಇನ್ನಷ್ಟು ಸಮರ್ಥವನ್ನಾಗಿಸುವ ಮೂಲಕ ಅವು ಬಳಸುವ ವಿದ್ಯುತ್ತಿನ ಪ್ರಮಾಣವನ್ನು ಕಡಿಮೆ ಮಾಡುವ ಪ್ರಯತ್ನಗಳು ಇದೀಗ ಜಾರಿಯಲ್ಲಿವೆ. ವಿದ್ಯುತ್ತನ್ನು ಅಪಾರ ಪ್ರಮಾಣದಲ್ಲಿ ಬಳಸುವ ಡೇಟಾಸೆಂಟರುಗಳಲ್ಲೂ ವಿದ್ಯುತ್ ಬಳಕೆ ಕಡಿಮೆ ಮಾಡಲು ಸಂಸ್ಥೆಗಳು ಪ್ರಯತ್ನಿಸುತ್ತಿವೆ. ಉದ್ಯೋಗಿಗಳ ಪ್ರಯಾಣ, ಕಚೇರಿ ನಿರ್ವಹಣೆ ಮುಂತಾದ - ಮೇಲ್ನೋಟಕ್ಕೆ ಸಣ್ಣದರಂತೆ ಕಾಣುವ - ಚಟುವಟಿಕೆಗಳಲ್ಲೂ ಮಾಲಿನ್ಯವನ್ನು ತಗ್ಗಿಸಿ ಕಾರ್ಬನ್ ಫುಟ್‌ಪ್ರಿಂಟ್ ಕಡಿಮೆಮಾಡುವ ಪ್ರಯತ್ನ ನಡೆದಿದೆ. ಲಾಕ್‌ಡೌನ್ ಪರಿಣಾಮವಾಗಿ ವ್ಯಾಪಕವಾಗಿ ಬೆಳೆದಿರುವ ವರ್ಕ್ ಫ್ರಮ್ ಹೋಮ್ ಅಭ್ಯಾಸವೂ ಈ ನಿಟ್ಟಿನಲ್ಲಿ ತನ್ನ ಕೊಡುಗೆ ನೀಡುತ್ತಿದೆ.

ಇವೆಲ್ಲದರ ಜೊತೆಗೆ ಬಳಕೆದಾರರಾದ ನಾವೂ ನಮ್ಮ ಚಟುವಟಿಕೆಗಳನ್ನು ಗಮನಿಸಿಕೊಂಡು ನಮ್ಮ ಕಾರ್ಬನ್ ಫುಟ್‌ಪ್ರಿಂಟನ್ನೂ ಕಡಿಮೆಮಾಡಿಕೊಳ್ಳಬೇಕಾದ್ದು ಇಂದಿನ ಅಗತ್ಯವಾಗಿದೆ. ಅದನ್ನು ಸಾಧ್ಯವಾಗಿಸಲು ನಾವು ಏನೆಲ್ಲ ಮಾಡಬಹುದು ಎಂದು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕಿದೆ.

ಜನವರಿ ೨೨, ೨೦೨೦ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನದ ಸಂಪಾದಿತ ರೂಪ

ಯಾವುದೇ ಘಟಕ ತನ್ನ ಚಟುವಟಿಕೆಗಳ ಪರಿಣಾಮವಾಗಿ ಉತ್ಪಾದಿಸುವ ಕಾರ್ಬನ್ ಡೈಆಕ್ಸೈಡ್‌ನ ಒಟ್ಟು ಪ್ರಮಾಣವೇ ಆ ಘಟಕದ 'ಕಾರ್ಬನ್ ಫುಟ್‌‌ಪ್ರಿಂಟ್'
ಪರಿಸರ ರಕ್ಷಣೆ ಮತ್ತು ದತ್ತಾಂಶದ ವಿಜ್ಞಾನ

Related Stories

No stories found.
logo
ಇಜ್ಞಾನ Ejnana
www.ejnana.com