ನೆಟ್‌ಉಪವಾಸ!
ಬಹುಪಾಲು ಊಟ-ತಿಂಡಿಗೆ ಸಂಬಂಧಿಸಿದಂತೆಯೇ ಪ್ರಸ್ತಾಪವಾಗುವ ಉಪವಾಸಕ್ಕೆ ಡಿಜಿಟಲ್ ಜಗತ್ತಿನಲ್ಲಿ ಏನು ಕೆಲಸ?Image by Gerd Altmann from Pixabay

ನೆಟ್‌ಉಪವಾಸ!

ಭೌತಿಕ ಜಗತ್ತಿನಲ್ಲಿ ಜನಪ್ರಿಯವಾಗಿರುವ ಉಪವಾಸದ ಪರಿಕಲ್ಪನೆ ಇದೀಗ ಡಿಜಿಟಲ್ ಜಗತ್ತಿನಲ್ಲೂ ಸದ್ದುಮಾಡುತ್ತಿದೆ

ಉಪವಾಸದ ಬಗ್ಗೆ ನಮಗೆಲ್ಲ ಚೆನ್ನಾಗಿ ಗೊತ್ತು. ಅದು ಆರೋಗ್ಯಕ್ಕೆ ಒಳ್ಳೆಯದೆಂದು ಹಿರಿಯರು ಹೇಳುವುದನ್ನು ನಾವು ಕೇಳಿದ್ದೇವೆ. ಆರೋಗ್ಯದ ಹಲವು ಸಮಸ್ಯೆಗಳಿಗೆ ಉಪವಾಸವೇ ಮದ್ದು ಎಂಬ ಸಲಹೆ ಒಂದಲ್ಲ ಒಂದು ಸಂದರ್ಭದಲ್ಲಿ ನಮ್ಮಲ್ಲಿ ಅನೇಕರಿಗೆ ಸಿಕ್ಕಿದೆ. ನಿರ್ದಿಷ್ಟ ದಿನಗಳಂದು ಉಪವಾಸ ಮಾಡುವ ಗೆಳೆಯರ - ಸಂಬಂಧಿಕರ ಬಗ್ಗೆಯೂ ನಮಗೆ ಗೊತ್ತಿದೆ.

ಫಿಸಿಕಲ್, ಅಂದರೆ ಭೌತಿಕ ಜಗತ್ತಿನಲ್ಲಿ ಇಷ್ಟೆಲ್ಲ ಜನಪ್ರಿಯವಾಗಿರುವ ಉಪವಾಸದ ಈ ಪರಿಕಲ್ಪನೆ ಇದೀಗ ಡಿಜಿಟಲ್ ಜಗತ್ತಿನಲ್ಲೂ ಸದ್ದುಮಾಡುತ್ತಿದೆ ಎನ್ನುವುದು ವಿಶೇಷ.

ಬಹುಪಾಲು ಊಟ-ತಿಂಡಿಗೆ ಸಂಬಂಧಿಸಿದಂತೆಯೇ ಪ್ರಸ್ತಾಪವಾಗುವ ಉಪವಾಸಕ್ಕೆ ಡಿಜಿಟಲ್ ಜಗತ್ತಿನಲ್ಲಿ ಏನು ಕೆಲಸ? ಉತ್ತರ ಬಹು ಸರಳ.

ಆಹಾರ ಸೇವನೆಯನ್ನು ನಿಯಂತ್ರಿಸುವ ಮೂಲಕ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಭೌತಿಕ ಜಗತ್ತಿನ ಉಪವಾಸದ ಉದ್ದೇಶ. ಡಿಜಿಟಲ್ ಜಗತ್ತಿನಲ್ಲಿ ನಾವು ಬಿಟ್-ಬೈಟ್‌ಗಳನ್ನು ಬೈಟ್ ಮಾಡಿ ನುಂಗುವುದಿಲ್ಲ, ನಿಜ. ಆದರೆ ಅಲ್ಲಿನ ನೂರೆಂಟು ಚಟುವಟಿಕೆಗಳು ನಮ್ಮ ಕಣ್ಣಿನ ಮೇಲೆ, ಮನಸ್ಸಿನ ಮೇಲೆ ಬಹಳ ಗಾಢವಾದ ಪರಿಣಾಮ ಬೀರುತ್ತವೆ. ಮೊಬೈಲಿನಂತಹ ಸಾಧನಗಳನ್ನೂ ಅಂತರಜಾಲ ಸಂಪರ್ಕವನ್ನೂ ಬಳಸಿಕೊಂಡು ನಾವು ಸುದೀರ್ಘ ಅವಧಿಯವರೆಗೆ ಡಿಜಿಟಲ್ ಜಗತ್ತಿನ ಆಗುಹೋಗುಗಳಲ್ಲಿ ಮುಳುಹೋಗಿರುತ್ತೇವಲ್ಲ, ಆ ಅವಧಿಯನ್ನು ಕೊಂಚವಾದರೂ ಕಡಿಮೆಮಾಡಿಕೊಂಡರೆ ನಮ್ಮ ಮಾನಸಿಕ ಆರೋಗ್ಯ ಗಣನೀಯವಾಗಿ ಸುಧಾರಿಸಬಲ್ಲದು ಎನ್ನುವುದು ಡಿಜಿಟಲ್ ಜಗತ್ತಿನ ಉಪವಾಸದ ಹಿಂದಿರುವ ಆಶಯ. ಅಷ್ಟೇ ಅಲ್ಲ, ಬೆಳಕು ಸೂಸುವ ಪರದೆಗಳಿಂದ ದೂರವಿರುವುದು ನಮ್ಮ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು, ಉತ್ತಮವಾಗಿ ನಿದ್ರಿಸುವುದಕ್ಕೂ ಸಹಕಾರಿ!

ದಿನಕ್ಕೆ ಅಥವಾ ವಾರಕ್ಕೆ ಇಂತಿಷ್ಟು ಸಮಯವೆಂದು ನಿಗದಿಪಡಿಸಿಕೊಂಡು ಆ ಅವಧಿಯಲ್ಲಿ ಯಾವುದೇ ವಿಧದ ಪರದೆಯಿಂದ ದೂರವಿರುವುದು, ಅಂತರಜಾಲ ಸಂಪರ್ಕವನ್ನು ಬಳಸದಿರುವುದು ಒಳ್ಳೆಯದು ಎಂದು ಇಂಟರ್‌ನೆಟ್ ಉಪವಾಸ - ಸರಳವಾಗಿ 'ನೆಟ್‌ಉಪವಾಸ'ದ ಪ್ರತಿಪಾದಕರು ಹೇಳುತ್ತಾರೆ. ಸಮಾಜಜಾಲಗಳಲ್ಲಿ ಸುಮ್ಮನೆ ಕಾಲಕಳೆಯುವುದು, ಗೇಮ್‌ಗಳಲ್ಲಿ ಗಂಟೆಗಟ್ಟಲೆ ಮುಳುಗಿರುವುದು, ಒಂದಾದ ಮೇಲೆ ಒಂದರಂತೆ ವೀಡಿಯೋಗಳನ್ನು ನೋಡುತ್ತಲೇ ಇರುವುದು ('ಬಿಂಜ್ ವಾಚಿಂಗ್') ಮುಂತಾದ ಅಭ್ಯಾಸಗಳನ್ನೆಲ್ಲ ತಪ್ಪಿಸಲು ಇದು ಅತ್ಯುತ್ತಮ ಮಾರ್ಗ ಎಂದು ಅವರು ಹೇಳುತ್ತಾರೆ. ಅಷ್ಟೇ ಅಲ್ಲ, ನಮ್ಮ ಒಟ್ಟಾರೆ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳುವುದಕ್ಕೂ ಇದು ನೆರವಾಗಬಲ್ಲದು.

ತಂತ್ರಜ್ಞಾನ ಬಳಕೆಯನ್ನು ವ್ಯಸನವನ್ನಾಗಿಸಿಕೊಂಡ ಜನರನ್ನು ಮತ್ತೆ ಸಾಮಾನ್ಯ ಸ್ಥಿತಿಗೆ ತರುವ ಉದ್ದೇಶದಿಂದ ನೆಟ್ಉಪವಾಸವನ್ನು ಜಪಾನ್ ದೇಶದಲ್ಲಿ ಪರಿಚಯಿಸಲಾಗಿತ್ತಂತೆ. ಇದೀಗ ಭಾರತವೂ ಸೇರಿದಂತೆ ಜಗತ್ತಿನ ಹಲವೆಡೆಗಳಲ್ಲಿ ನೆಟ್‌ಉಪವಾಸದ ಈ ಪರಿಕಲ್ಪನೆ ಜನಪ್ರಿಯತೆ ಪಡೆದುಕೊಂಡಿರುವುದು ವಿಶೇಷ. ಚಿಕ್ಕಮಕ್ಕಳಿಂದ ದೊಡ್ಡವರವರೆಗೆ ಎಲ್ಲ ವಯಸ್ಸಿನ ಎಲ್ಲ ಹಿನ್ನೆಲೆಗಳ ಜನರೂ ಈ ಬಗೆಯ ಉಪವಾಸ ಮಾಡುತ್ತಿರುವವರ ಪಟ್ಟಿಯಲ್ಲಿದ್ದಾರೆ. ಇದಕ್ಕೆ ಹೆಚ್ಚಿನ ಪ್ರಚಾರ ನೀಡುವ ಉದ್ದೇಶದಿಂದ ಹಲವು ಆಂದೋಲನಗಳೂ ರೂಪುಗೊಂಡಿವೆ. ಪ್ರತಿ ಭಾನುವಾರ ಮೊಬೈಲ್-ಟ್ಯಾಬ್ಲೆಟ್-ಕಂಪ್ಯೂಟರ್ ಮುಂತಾದ ಪರದೆಗಳಿಂದ ದೂರವಿರುವುದನ್ನು ಉತ್ತೇಜಿಸುವ 'ಸ್ಕ್ರೀನ್ ಫ್ರೀ ಸಂಡೇ' ಇಂತಹ ಆಂದೋಲನಗಳಿಗೆ ಒಂದು ಉದಾಹರಣೆ.

ನೆಟ್ ಉಪವಾಸಕ್ಕೆ ವಿಜ್ಞಾನದ ಹಿನ್ನೆಲೆ ನೀಡುವ ಪ್ರಯತ್ನಗಳೂ ನಡೆದಿವೆ. 'ಡೋಪಮೈನ್ ಫಾಸ್ಟಿಂಗ್' ಎನ್ನುವುದು ಇಂತಹ ಪ್ರಯತ್ನಗಳಲ್ಲೊಂದು.

ಡೋಪಮೈನ್ ಎನ್ನುವುದು ನಮ್ಮ ಮೆದುಳಿನಲ್ಲಿ ನೈಸರ್ಗಿಕವಾಗಿ ಉತ್ಪತ್ತಿಯಾಗುವ ರಾಸಾಯನಿಕ. ನಿರ್ದಿಷ್ಟ ಕೆಲಸಗಳನ್ನು ಮಾಡಿದಾಗ ನಮಗೆ ಸಂತೋಷದ ಅನುಭವಾಗುವುದಕ್ಕೆ ಈ ರಾಸಾಯನಿಕ ಕಾರಣ ಎಂದು ಹೇಳಲಾಗುತ್ತದೆ. ಅಚ್ಚುಮೆಚ್ಚಿನ ಆಹಾರ, ಇಷ್ಟವಾದ ಕಂಪ್ಯೂಟರ್ ಗೇಮ್‌ಗಳೆಲ್ಲ ನಮಗೆ ಖುಷಿಕೊಡುವುದರ ಹಿಂದೆ ಈ ರಾಸಾಯನಿಕದ ಕೈವಾಡ ಇರುತ್ತದಂತೆ.

ಕಂಪ್ಯೂಟರ್ ಗೇಮ್ ಆಡಿದಾಗ, ಸಮಾಜಜಾಲಗಳಲ್ಲಿ ಕಾಲಕಳೆದಾಗ - ಸಮಯ ವ್ಯರ್ಥವಾಗುತ್ತಿದೆಯೆಂದು ಗೊತ್ತಿದ್ದರೂ - ನಮಗೆ ಖುಷಿಯಾಗುವುದಾದರೆ, ಆ ಖುಷಿಯಿಂದ ಉದ್ದೇಶಪೂರ್ವಕವಾಗಿಯೇ ದೂರವಿದ್ದು ಬೇರೆ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸುವುದು ಡೋಪಮೈನ್ ಫಾಸ್ಟಿಂಗ್‌ನ ಉದ್ದೇಶ. ಇದನ್ನು ವರ್ಜನೆಯ (abstinence) ಕಾಲಾವಧಿ ಅಥವಾ ವಿಷದ ಅಂಶವನ್ನು ತೆಗೆದುಹಾಕುವ (detoxification, ಸರಳವಾಗಿ 'detox') ಪ್ರಕ್ರಿಯೆ ಎಂದೂ ಗುರುತಿಸಲಾಗುತ್ತದೆ.

ಹೆಸರು ಯಾವುದೇ ಇರಲಿ, ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವನ್ನೂ ಕಾಪಾಡಿಕೊಳ್ಳುವುದು ಅತ್ಯಗತ್ಯ ಎಂದು ತಜ್ಞರು ಹೇಳುತ್ತಾರೆ. ನೆಟ್ಉಪವಾಸದಿಂದ ಇದು ಸಾಧ್ಯವಾಗುವುದಾದರೆ, ಅದನ್ನೂ ಮಾಡಿ ನೋಡಿಬಿಡೋಣ ಎಂದು ನಾವೂ ಹೇಳಬಹುದೇನೋ!

ಡಿಸೆಂಬರ್ ೪, ೨೦೧೯ರ ವಿಜಯವಾಣಿಯಲ್ಲಿ ಪ್ರಕಟವಾದ ಬರಹ

ಬಹುಪಾಲು ಊಟ-ತಿಂಡಿಗೆ ಸಂಬಂಧಿಸಿದಂತೆಯೇ ಪ್ರಸ್ತಾಪವಾಗುವ ಉಪವಾಸಕ್ಕೆ ಡಿಜಿಟಲ್ ಜಗತ್ತಿನಲ್ಲಿ ಏನು ಕೆಲಸ?
ನಿಮ್ಮ ದಿನದಲ್ಲಿ ಸ್ಕ್ರೀನ್ ಟೈಮ್ ಎಷ್ಟು?

Related Stories

No stories found.
ಇಜ್ಞಾನ Ejnana
www.ejnana.com