ಮೊಬೈಲ್ ಕೈಲಿರುವಾಗ ಸಮಯ ಹೋದದ್ದೇ ಗೊತ್ತಾಗುವುದಿಲ್ಲ ಎನ್ನುವುದು ಅನೇಕರ ಸಮಸ್ಯೆ
ಮೊಬೈಲ್ ಕೈಲಿರುವಾಗ ಸಮಯ ಹೋದದ್ದೇ ಗೊತ್ತಾಗುವುದಿಲ್ಲ ಎನ್ನುವುದು ಅನೇಕರ ಸಮಸ್ಯೆPhoto by Absalom Robinson from Pexels

ನಿಮ್ಮ ದಿನದಲ್ಲಿ ಸ್ಕ್ರೀನ್ ಟೈಮ್ ಎಷ್ಟು?

ಊಟ, ನಿದ್ದೆಗಳ ಹಾಗೆ ಸ್ಕ್ರೀನ್ ಟೈಮ್ ಕೂಡ ನಮ್ಮ ದಿನದ ಪ್ರಮುಖ ಭಾಗವೇ ಆಗಿಬಿಟ್ಟಿದೆ

ಒಂದು ಕಾಲವಿತ್ತು, ಸ್ಕ್ರೀನ್ ಎಂದರೆ ಆಗ ನೆನಪಿಗೆ ಬರುತ್ತಿದ್ದದ್ದು ಎರಡೇ - ಒಂದು ಹಿರಿತೆರೆ (ಸಿನಿಮಾ), ಇನ್ನೊಂದು ಕಿರಿತೆರೆ (ಟೀವಿ). ದಿನಕ್ಕೆ ಒಂದೆರಡು ಗಂಟೆ ಟೀವಿ, ಥಿಯೇಟರಿನಲ್ಲಿ ಅಪರೂಪಕ್ಕೊಂದು ಸಿನಿಮಾ ನೋಡಿದರೆ ಸ್ಕ್ರೀನ್ ಸಹವಾಸ ಬಹುಪಾಲು ಮುಗಿದುಹೋಗುತ್ತಿತ್ತು.

ಆದರೆ ಈಗ ಹಾಗಿಲ್ಲ. ಹಿರಿಯ ಕಿರಿಯ ತೆರೆಗಳ ಜೊತೆಗೆ ಕಂಪ್ಯೂಟರು, ಟ್ಯಾಬ್ಲೆಟ್ಟು, ಮೊಬೈಲು, ಸ್ಮಾರ್ಟ್ ವಾಚು ಮುಂತಾದ ಇನ್ನೂ ಹಲವು ಕಿರಿಕಿರಿಯ ತೆರೆಗಳು ಸೇರಿಕೊಂಡುಬಿಟ್ಟಿವೆ. ಸುಮ್ಮನೆ ಸೇರಿಕೊಂಡಿರುವುದಷ್ಟೇ ಅಲ್ಲ, ನಮ್ಮ ದಿನದ ಬಹುಪಾಲನ್ನು ಅವು ಕಬಳಿಸುತ್ತಲೂ ಇವೆ.

ಟೀವಿ, ಕಂಪ್ಯೂಟರು, ಮೊಬೈಲು ಮುಂತಾದ ಯಾವುದೇ ಪರದೆಯ ಮುಂದೆ ನಾವು ಕಳೆಯುವ ಸಮಯವನ್ನು ಸ್ಕ್ರೀನ್ ಟೈಮ್ ಎಂದು ಕರೆಯುತ್ತಾರೆ. ಊಟ, ನಿದ್ದೆ, ವ್ಯಾಯಾಮ, ಪ್ರಯಾಣ ಮುಂತಾದವುಗಳ ಹಾಗೇ ಈ ಸ್ಕ್ರೀನ್ ಟೈಮ್ ಕೂಡ ಈಚೆಗೆ ನಮ್ಮ ದಿನದ ಬಹುಮುಖ್ಯ ಭಾಗವಾಗಿ ಬೆಳೆದಿದೆ.

ಇಂತಹ ಹಲವಾರು ವಿದ್ಯುನ್ಮಾನ ಉಪಕರಣಗಳ ಜೊತೆಗೆ ಸಮಯ ಕಳೆಯುವುದು ತಪ್ಪೇನೂ ಅಲ್ಲ. ಅವುಗಳ ಒಡನಾಟ ನಮಗೆ ಹೊಸ ವಿಷಯಗಳನ್ನು ತಿಳಿಸಿಕೊಡಬಲ್ಲದು, ನಮ್ಮ ಹಲವು ಕೆಲಸಗಳನ್ನು ಸುಲಭ ಮಾಡಬಲ್ಲದು, ಮನರಂಜನೆಯನ್ನೂ ನೀಡಬಲ್ಲದು.

ಆದರೆ ಈ ಸ್ಕ್ರೀನ್ ಟೈಮ್ ಎಷ್ಟು ಜಾಸ್ತಿಯಾಗಿದೆ ಎಂದರೆ ಅದು ನಮ್ಮ ಇತರ ಚಟುವಟಿಕೆಗಳ ಮೇಲೆ ಪ್ರಭಾವ ಬೀರಲು ಪ್ರಾರಂಭಿಸಿದೆ. ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ಮೊಬೈಲು, ಆಫೀಸಿನಲ್ಲಿ ಎಂಟು ಗಂಟೆ ಕಂಪ್ಯೂಟರು, ಮನೆಗೆ ಬಂದಮೇಲೆ ಕೊಂಚಹೊತ್ತು ಟೀವಿ - ಹೀಗೆ ನಮ್ಮ ದಿನದ ಬಹುಪಾಲನ್ನು ಸ್ಕ್ರೀನುಗಳೇ ಆಕ್ರಮಿಸಿಕೊಳ್ಳುತ್ತಿವೆ. ಪುಟ್ಟ ಮಕ್ಕಳಿಂದ ಅಜ್ಜಿ ತಾತಂದಿರವರೆಗೆ ಎಲ್ಲರೂ ಒಂದಲ್ಲ ಒಂದು ಪರದೆಯಲ್ಲಿ ಮಗ್ನರಾಗಿರುವುದನ್ನು ನಾವು ನೋಡುತ್ತಿದ್ದೇವೆ.

ಸಮಸ್ಯೆಯಾಗಿರುವುದು ಅದೇ. ಹೆಚ್ಚುತ್ತಿರುವ ಸ್ಕ್ರೀನ್ ಟೈಮ್‌ನಿಂದಾಗಿ ಸಮಸ್ಯೆಗಳೂ ಹೆಚ್ಚುತ್ತಿವೆ. ಬಹಳ ಹೊತ್ತು ಒಂದೇಕಡೆ ಕುಳಿತಿರುವುದರಿಂದ ದೈಹಿಕ ಚಟುವಟಿಕೆ ಕಡಿಮೆಯಾಗುತ್ತಿದೆ. ಬೆಳಕುಸೂಸುವ ಪರದೆಗಳನ್ನು ಒಂದೇಸಮನೆ ದಿಟ್ಟಿಸಿ ನೋಡುವುದರಿಂದ ಕಣ್ಣಿನ ತೊಂದರೆಗಳು ಕಾಣಿಸಿಕೊಳ್ಳುತ್ತಿವೆ, ನಿದ್ರಾಹೀನತೆ ಹೆಚ್ಚುತ್ತಿದೆ. ಕಂಪ್ಯೂಟರು - ಮೊಬೈಲುಗಳ ಭರಾಟೆಯಲ್ಲಿ ಸಾಕಷ್ಟು ಸಮಯ ವ್ಯರ್ಥವಾಗುತ್ತಿದೆ. ಅಷ್ಟೇ ಅಲ್ಲ, ನಮ್ಮ ಸಾಮಾಜಿಕ ಸಂಪರ್ಕಗಳೂ ತಪ್ಪಿಹೋಗುತ್ತಿವೆ. ಸಮಾಜಜಾಲಗಳ ಗೀಳು ಹೆಚ್ಚಾಗಿ ಮಾನಸಿಕ ಸಮಸ್ಯೆಗಳೂ ಕಾಣಿಸಿಕೊಳ್ಳುತ್ತಿವೆ.

ನಮ್ಮ ಸ್ಕ್ರೀನ್ ಟೈಮ್ ಮೇಲೆ ನಿಯಂತ್ರಣ ಬೇಕೇಬೇಕು ಎನ್ನುವ ಕೂಗಿಗೆ ಕಾರಣವಾಗಿರುವುದು ಇದೇ ಅಂಶ. ದೈಹಿಕ - ಮಾನಸಿಕ ಸಮಸ್ಯೆಗಳ ನಿವಾರಣೆಗೆ ಇದೇ ಅತ್ಯಂತ ಸುಲಭ ಹಾಗೂ ಪರಿಣಾಮಕಾರಿಯಾದ ಮಾರ್ಗ ಎಂದು ತಜ್ಞರು ಹೇಳುತ್ತಾರೆ. ಅದರಲ್ಲೂ ವಿಶೇಷವಾಗಿ ಚಿಕ್ಕಮಕ್ಕಳು ಹಾಗೂ ಯುವಜನತೆ ಈ ನಿಯಂತ್ರಣವನ್ನು ಸಾಧಿಸದಿದ್ದರೆ ಅವರ ಬೆಳವಣಿಗೆ ಹಾಗೂ ವಿದ್ಯಾಭ್ಯಾಸದ ಮೇಲೆ ಪ್ರತಿಕೂಲ ಪರಿಣಾಮವಾಗುವುದು ಖಂಡಿತ ಎನ್ನುವುದು ಅವರ ಅನಿಸಿಕೆ.

ಬಹುತೇಕ ಸಂದರ್ಭಗಳಲ್ಲಿ ಚಿಕ್ಕ ಮಕ್ಕಳಿಗೆ ಸ್ಕ್ರೀನ್ ಟೈಮ್ ಅಭ್ಯಾಸ ಮಾಡಿಸುವುದು ಅವರ ಪೋಷಕರೇ. ಏನಾದರೂ ಉಪಾಯ ಮಾಡಿ ಅದನ್ನು ಕಡಿಮೆ ಮಾಡಬೇಕಾದ್ದೂ ಪೋಷಕರದೇ ಕರ್ತವ್ಯ. ಮೊಬೈಲ್ ಬದಲು ಪುಸ್ತಕ, ಆಟಿಕೆ ಹೀಗೆ ಏನಾದರೂ ಪರ್ಯಾಯ ಹುಡುಕಿಕೊಟ್ಟು ಅವರು ಮಕ್ಕಳನ್ನು ಸಮಾಧಾನ ಮಾಡಬೇಕಾಗುತ್ತದೆ. ಊಟ ಮಾಡಲು ಮೊಬೈಲ್ ಬೇಕು, ನಿದ್ದೆ ಮಾಡಿಸಲು ಮೊಬೈಲ್ ಬೇಕು ಎನ್ನುವುದೆಲ್ಲ ತಪ್ಪು ಎಂದೂ ತಿಳಿದುಕೊಳ್ಳಬೇಕಾಗುತ್ತದೆ.

ದೊಡ್ಡವರದ್ದೇ ಸಮಸ್ಯೆ. ಕಾಲೇಜು ವಿದ್ಯಾರ್ಥಿಗಳಿರಲಿ, ಕಚೇರಿ ಉದ್ಯೋಗಿಗಳಿರಲಿ, ಹಿರಿಯ ನಾಗರಿಕರೇ ಇರಲಿ, ಸ್ಕ್ರೀನ್ ಟೈಮ್ ಮೇಲೆ ಸ್ವಯಂನಿಯಂತ್ರಣ ಸಾಧಿಸಲೇಬೇಕಾದ್ದು ಇಂದಿನ ಅತಿದೊಡ್ಡ ಅಗತ್ಯ. ಕಾಲೇಜಿನ ಓದು-ಬರಹಕ್ಕೋ ಕಚೇರಿ ಕೆಲಸಕ್ಕೋ ಇನ್ನಾವುದೇ ಅಗತ್ಯ ಕೆಲಸಕ್ಕೋ ಬಿಟ್ಟಂತೆ ಪರದೆಗಳ - ಅದರಲ್ಲೂ ಮೊಬೈಲ್ ಪರದೆಯ - ಮುಂದೆ ನಾವು ಎಷ್ಟು ಸಮಯ ಕಳೆಯುತ್ತಿದ್ದೇವೆ ಎನ್ನುವುದನ್ನು ನಾವೇ ಮನಗಂಡು ಅದನ್ನು ಕಡಿಮೆಮಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ.

ಇದು ತುಂಬಾ ಕಷ್ಟ, ಮೊಬೈಲ್ ಕೈಲಿರುವಾಗ ಸಮಯ ಹೋದದ್ದೇ ಗೊತ್ತಾಗುವುದಿಲ್ಲ ಎನ್ನುವವರು ಬೇಕಾದಷ್ಟು ಜನರಿದ್ದಾರೆ. ಇಂಥವರೆಲ್ಲ ತಮ್ಮ ಸ್ಕ್ರೀನ್ ಟೈಮ್ ನಿಯಂತ್ರಿಸಿಕೊಳ್ಳಲು ಅದೇ ಮೊಬೈಲಿನ ಸಹಾಯ ಪಡೆದುಕೊಳ್ಳಬಹುದು.

ಹೌದು, ಮೊಬೈಲ್ ಫೋನಿನ ವಿವಿಧ ಆಪ್‌ಗಳಲ್ಲಿ ನಾವು ಎಷ್ಟು ಸಮಯ ಕಳೆಯುತ್ತಿದ್ದೇವೆ ಎಂದು ತಿಳಿಸುವ ಅನೇಕ ಆಪ್‌ಗಳು ಇಂದು ಲಭ್ಯವಿವೆ. ಆಂಡ್ರಾಯ್ಡ್, ಐಓಎಸ್ ಎರಡರಲ್ಲೂ ಲಭ್ಯವಿರುವ 'ಮೊಮೆಂಟ್'ನಂತಹ ಆಪ್‌ಗಳು ನಮ್ಮ ಮೊಬೈಲ್ ಬಳಕೆ ಕುರಿತು ಮಾಹಿತಿ ಕಲೆಹಾಕಿ ನಮ್ಮನ್ನು ಎಚ್ಚರಿಸುವ ಕೆಲಸ ಮಾಡಬಲ್ಲವು.

ಪ್ರತ್ಯೇಕ ಆಪ್‌ಗಳಷ್ಟೇ ಏಕೆ, ಫೇಸ್‌ಬುಕ್‌ನಂತಹ ಹಲವು ಜನಪ್ರಿಯ ಆಪ್‌ಗಳಲ್ಲೂ ಈ ಸೌಲಭ್ಯವನ್ನು ಇದೀಗ ಸೇರಿಸಲಾಗಿದೆ. 'ಸೆಟಿಂಗ್ಸ್ ಆಂಡ್ ಪ್ರೈವಸಿ' ಅಡಿಯಲ್ಲಿ 'ಯುವರ್ ಟೈಮ್ ಆನ್ ಫೇಸ್‌ಬುಕ್' ಕ್ಲಿಕ್ ಮಾಡಿದರೆ ನಾವು ಪ್ರತಿದಿನವೂ ಫೇಸ್‌ಬುಕ್‌ನಲ್ಲಿ ಎಷ್ಟು ಹೊತ್ತು ಕಳೆಯುತ್ತಿದ್ದೇವೆ ಎಂದು ತಿಳಿದುಕೊಳ್ಳಬಹುದು. ಅಷ್ಟೇ ಅಲ್ಲ, ನಿರ್ದಿಷ್ಟ ಕಾಲಾವಧಿಯ (ಉದಾ: ದಿನಕ್ಕೆ ೩೦ ನಿಮಿಷ) ನಂತರ ಆ ಕುರಿತ ಸೂಚನೆಯೊಂದು ನಮ್ಮನ್ನು ಎಚ್ಚರಿಸುವಂತೆಯೂ ವ್ಯವಸ್ಥೆ ಮಾಡಿಕೊಳ್ಳಬಹುದು.

ಅಷ್ಟೇ ಅಲ್ಲ, ಮೊಬೈಲಿನ ಕಾರ್ಯಾಚರಣ ವ್ಯವಸ್ಥೆಯಲ್ಲೇ ಈ ಸವಲತ್ತನ್ನು ನೀಡುವ ಪ್ರಯತ್ನ ಕೂಡ ನಡೆದಿದೆ. ಐಓಎಸ್‌ನಲ್ಲಿ ಈ ವ್ಯವಸ್ಥೆ ಈಗಾಗಲೇ ಲಭ್ಯವಿದ್ದರೆ ಆಂಡ್ರಾಯ್ಡ್‌ನ ಹೊಸ ಆವೃತ್ತಿಯಲ್ಲಿ ನಮ್ಮ ಮೊಬೈಲ್ ಬಳಕೆಯ ಮೇಲೆ ನಿಗಾ ಇಡುವ ವಿಶೇಷ ಆಯ್ಕೆಗಳನ್ನು ನೀಡಲಾಗುತ್ತಿದೆ.

ಇದನ್ನೆಲ್ಲ ಬಳಸುವ, ಸ್ಕ್ರೀನ್ ಟೈಮ್ ಕಡಿಮೆಮಾಡಿ ಪರದೆಯ ಆಚೀಚೆಯೂ ಕಣ್ಣಾಡಿಸುವ, ಚಟುವಟಿಕೆಯ ಬದುಕು ನಡೆಸುವ ನಿರ್ಧಾರವನ್ನು ಮಾತ್ರ - ಇನ್ನೂ - ನಾವೇ ಮಾಡಬೇಕಿದೆ!

ಜನವರಿ ೧೬, ೨೦೧೯ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

Related Stories

No stories found.
logo
ಇಜ್ಞಾನ Ejnana
www.ejnana.com