ಈಗಿನ ಅಂತರಜಾಲದಲ್ಲಿ ನಾವು ದೃಶ್ಯ-ಧ್ವನಿಗಳನ್ನು ಪಡೆದುಕೊಳ್ಳುವಂತೆಯೇ, ಭವಿಷ್ಯದ ಅಂತರಜಾಲ ಸ್ಪರ್ಶ ಹಾಗೂ ವಾಸನೆಯಂತಹ ಅನುಭವಗಳನ್ನೂ ಕಟ್ಟಿಕೊಡಲಿದೆಯಂತೆ.
ಈಗಿನ ಅಂತರಜಾಲದಲ್ಲಿ ನಾವು ದೃಶ್ಯ-ಧ್ವನಿಗಳನ್ನು ಪಡೆದುಕೊಳ್ಳುವಂತೆಯೇ, ಭವಿಷ್ಯದ ಅಂತರಜಾಲ ಸ್ಪರ್ಶ ಹಾಗೂ ವಾಸನೆಯಂತಹ ಅನುಭವಗಳನ್ನೂ ಕಟ್ಟಿಕೊಡಲಿದೆಯಂತೆ.Image by ElasticComputeFarm from Pixabay

ಊಟ-ತಿಂಡಿಗೂ ತಂತ್ರಜ್ಞಾನದ ಸ್ಪರ್ಶ!

ತಂತ್ರಜ್ಞಾನದ ಸಹಾಯದಿಂದ ಏನೇನೆಲ್ಲ ಸಾಧ್ಯವಾಗುವ ಈ ಕಾಲದಲ್ಲಿ, ಒಂದು ಹೊಸ ತಿನಿಸಿನ ರುಚಿ ಹೇಗಿರುತ್ತದೆ ಎಂದು ತಿಳಿದುಕೊಳ್ಳಲು ಪ್ರಯಾಸ ಪಡಬೇಕೇ?

ನನ್ನ ಬಾಲ್ಯಕಾಲದ ಶ್ರೀಮಂಗಲದಲ್ಲಿ ನಮಗೆ ವಿಶೇಷ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಅವಕಾಶ ಸಿಗುತ್ತಿದ್ದದ್ದು ಅಪರೂಪ. ಹಾಗಾಗಿಯೇ ವರ್ಷಕ್ಕೊಮ್ಮೆ ಬರುತ್ತಿದ್ದ ಗಣಪತಿ ಹಬ್ಬವನ್ನೂ, ಶಾಲೆಯಲ್ಲಿ ಆಚರಿಸಲಾಗುತ್ತಿದ್ದ ಶಾರದಾಪೂಜೆಯನ್ನೂ ನಾವು ಬಹಳ ಕಾತರದಿಂದ ನಿರೀಕ್ಷಿಸುತ್ತಿದ್ದೆವು. ಆ ದಿನಗಳಲ್ಲಿ ಓದುವ ತಾಪತ್ರಯ ಇರುತ್ತಿರಲಿಲ್ಲ ಎನ್ನುವುದು ಒಂದು ಆಕರ್ಷಣೆಯಾದರೆ ಕಾರ್ಯಕ್ರಮದ ಕೊನೆಯಲ್ಲಿ ಸಿಗುತ್ತಿದ್ದ ಪ್ರಸಾದದ್ದು ಅದಕ್ಕೂ ಹೆಚ್ಚಿನದಾದ ಇನ್ನೊಂದು ಆಕರ್ಷಣೆ.

ಆಗ ಗಣಪತಿ ಹಬ್ಬವನ್ನು ಅಕ್ಕಪಕ್ಕದ ಮನೆಯವರೆಲ್ಲ ಒಟ್ಟಿಗೆ ಸೇರಿ ಆಚರಿಸುತ್ತಿದ್ದೆವು. ನಾನು-ನನ್ನ ಗೆಳೆಯರು ರಂಗನಾಥ ಮಾಸ್ತರರ ಮನೆಯಲ್ಲಿ ಪ್ರಸಾದಕ್ಕೆಂದು ಕಾದು ಕುಳಿತಿರುತ್ತಿದ್ದದ್ದು ನನಗಿನ್ನೂ ಚೆನ್ನಾಗಿ ನೆನಪಿದೆ. ಆ ಪ್ರಸಾದ ಪಡೆದುಕೊಳ್ಳಲೆಂದು ಯಾವುದೋ ಪತ್ರಿಕೆಯಿಂದ ಹರಿದ ಪುಟಗಳನ್ನು ನಮ್ಮ ಕೈಗೆ ಕೊಟ್ಟಿರುತ್ತಿದ್ದರು. ಪ್ರಸಾದ ನಮ್ಮ ಕೈಸೇರಲು ಬೇಕಿದ್ದ ಕೆಲ ನಿಮಿಷಗಳ ಅವಧಿಯಲ್ಲಿ ಈ ಹಾಳೆಗಳೇ ನಮಗೆ ಮನರಂಜನೆ ಒದಗಿಸುತ್ತಿದ್ದವು. ಯಾವುದೋ ಪುಟದಲ್ಲಿ ಹೊಸರುಚಿಯ ಚಿತ್ರ ಕಂಡುಬಿಟ್ಟರಂತೂ ಇದ್ದಕ್ಕಿದ್ದಂತೆ ಹಸಿವು ಜಾಸ್ತಿಯಾಗಿ ಪ್ರಸಾದ ಪಡೆಯುವ ಆತುರ ಹೆಚ್ಚಾಗಿಬಿಡುತ್ತಿತ್ತು.

ಹೆಚ್ಚಿನ ಹೋಟಲುಗಳು, ಹತ್ತಾರು ಟೀವಿ ಚಾನೆಲ್ಲುಗಳು, ಇಂಟರ್‌ನೆಟ್ಟು ಒಂದೂ ಇರದಿದ್ದ ಅಂದಿನ ಕಾಲದಲ್ಲಿ ಹೊಸರುಚಿಗಳು ನಮ್ಮನ್ನು ತಲುಪಲು ಇದ್ದ ಪ್ರಮುಖ ಮಾರ್ಗ ಅದೊಂದೇ. ಲೇಖಕರು ಬರೆದು ಸಂಪಾದಕರು ತಿದ್ದಿದ್ದಷ್ಟೇ ಅಂದಿನ ಹೊಸರುಚಿಯ ವಿವರ. ಜೊತೆಯಲ್ಲಿ, ಇದ್ದರೆ, ಒಂದು ಫೋಟೋ. ಆ ಫೋಟೋ ತೀರಾ ಆಕರ್ಷಕವಾಗಿದ್ದರೆ ಅದನ್ನು ಮಾಡಿಕೊಡುವಂತೆ ಅಮ್ಮನಿಗೆ ಅರ್ಜಿಸಲ್ಲಿಸುವ ಸಾಧ್ಯತೆಯೂ ಇರುತ್ತಿತ್ತು. ಬೇಕಾದ ವಸ್ತುಗಳು ನಮ್ಮೂರಿನಲ್ಲಿ ಸಿಗುತ್ತವೋ ಇಲ್ಲವೋ, ಬರೆದಿರುವ ವಿವರಣೆ ಅರ್ಥವಾಗುವಂತಿದೆಯೋ ಇಲ್ಲವೋ ಎಂದು ನೋಡಿಕೊಳ್ಳುವುದೆಲ್ಲ ಅಮ್ಮನ ತಲೆನೋವು!

ಪತ್ರಿಕೆಗಳಲ್ಲಿ ಈ ಬಗೆಯ ಹೊಸರುಚಿ ಈಗಲೂ ಅಲ್ಲಲ್ಲಿ ಪ್ರಕಟವಾಗುತ್ತದಾದರೂ ನವಮಾಧ್ಯಮಗಳಿಂದಾಗಿ ನಮಗೆ ಹೊಸರುಚಿಯ ಪರಿಚಯವಾಗುವ ವಿಧಾನ ಸಂಪೂರ್ಣವಾಗಿ ಬದಲಾಗಿದೆ. ಉದಾಹರಣೆಗೆ, ಹಲಸಿನಹಣ್ಣಿನ ಕಡುಬು ಮಾಡಲು ಕಲಿಸಿಕೊಡುವ ವೀಡಿಯೊದಲ್ಲಿ ನಾವು ಹಲಸಿನಹಣ್ಣನ್ನು ಮರದಿಂದ ಕಿತ್ತು ತರುವುದನ್ನು ನೋಡಬಹುದು, ಕೊನೆಯಲ್ಲಿ ಕಡುಬು ತಿಂದ ನಿರೂಪಕನೇನಾದರೂ 'ಆಹಾ' ಎಂದು ಉದ್ಗರಿಸಿದರೆ ಅದನ್ನೂ ಕೇಳಬಹುದು. ವಿವರಣೆ ಒಂದೇಬಾರಿಗೆ ಅರ್ಥವಾಗದಿದ್ದರೂ ಚಿಂತೆಯಿಲ್ಲ, ಬೇಕಾದಷ್ಟು ಸಲ ರೀವೈಂಡ್ ಮಾಡಿಕೊಳ್ಳಬಹುದು, ಅಲ್ಲೇ ಕೆಳಗಿರುವ ಕಾಮೆಂಟ್ಸ್ ವಿಭಾಗದಲ್ಲಿ ನಮ್ಮ ಪ್ರಶ್ನೆಗಳನ್ನೂ ಕೇಳಬಹುದು.

ಇಷ್ಟೆಲ್ಲ ಆದರೂ, ಕಡುಬಿನ ರುಚಿ ಹೇಗಿದೆ ಎಂದು ಅನುಭವಿಸಿ ನೋಡಬೇಕಾದರೆ ನಾವೇ ಅದನ್ನು ತಯಾರಿಸಿಕೊಳ್ಳಬೇಕು ಅಥವಾ ಬೇರೆ ಯಾರಿಗಾದರೂ ಅರ್ಜಿಸಲ್ಲಿಸಿ ಅವರ ಮರ್ಜಿ ಕಾಯಬೇಕು. ತಂತ್ರಜ್ಞಾನದ ಸಹಾಯದಿಂದ ಏನೇನೆಲ್ಲ ಸಾಧ್ಯವಾಗುವ ಈ ಕಾಲದಲ್ಲಿ, ಒಂದು ಹೊಸ ತಿನಿಸಿನ ರುಚಿ ಹೇಗಿರುತ್ತದೆ ಎಂದು ತಿಳಿದುಕೊಳ್ಳಲು ಇಷ್ಟೆಲ್ಲ ಪ್ರಯಾಸ ಏಕೆ?

ಈ ಪ್ರಯಾಸವನ್ನು ದೂರಮಾಡುವ ನಿಟ್ಟಿನಲ್ಲಿ ಕುತೂಹಲಕರ ಬೆಳವಣಿಗೆಯೊಂದು ಈಚೆಗೆ ಜಪಾನ್ ದೇಶದಲ್ಲಿ ನಡೆದಿದೆ. ಅಲ್ಲಿನ ವಿಶ್ವವಿದ್ಯಾನಿಲಯವೊಂದರ ಪ್ರೊಫೆಸರ್ ಹೋಮಿ ಮಿಯಾಶಿತ ಎನ್ನುವವರು ರೂಪಿಸಿರುವ 'ಟೇಸ್ಟ್ ದ ಟಿವಿ' ಎನ್ನುವ ಸಾಧನ, ಟೀವಿ ಪರದೆಯ ಮೇಲೆ ಕಾಣಿಸುವ ಆಹಾರದ ರುಚಿನೋಡುವುದನ್ನು ಸಾಧ್ಯವಾಗಿಸುತ್ತದಂತೆ.

ಹತ್ತು ವಿಭಿನ್ನ ಸ್ವಾದಗಳನ್ನು ಬೇರೆಬೇರೆ ಪ್ರಮಾಣಗಳಲ್ಲಿ ಮಿಶ್ರಮಾಡುವುದರ ಮೂಲಕ ಈ ಸಾಧನವು ನಿರ್ದಿಷ್ಟ ಆಹಾರದ ರುಚಿಯನ್ನು ಸೃಷ್ಟಿಸುತ್ತದೆ ಎಂದು ರಾಯ್ಟರ್ಸ್ ಸುದ್ದಿಸಂಸ್ಥೆ ವರದಿಮಾಡಿದೆ. ಅಂದಹಾಗೆ ಈ ಮಿಶ್ರಣವನ್ನು ಅದು ಟಿವಿ ಪರದೆಯ ಮೇಲೆ ಸಿಂಪಡಿಸಲಿದ್ದು, ರುಚಿ ನೋಡಬೇಕೆನ್ನುವವರು ಟಿವಿ ಪರದೆಯನ್ನು ನೆಕ್ಕಿದರೆ ಸಾಕಂತೆ!

ಕೋವಿಡ್-೧೯ರ ಈ ಕಾಲದಲ್ಲಿ, ಮನೆಯಲ್ಲಿ ಕುಳಿತೇ ಬೇರೆಬೇರೆ ತಿನಿಸುಗಳ ರುಚಿನೋಡುವುದನ್ನು ನಮ್ಮ ಸಾಧನ ಸಾಧ್ಯವಾಗಿಸಲಿದೆ ಎಂದು ಪ್ರೊಫೆಸರ್ ಮಿಯಾಶಿತ ಹೇಳಿದ್ದಾರೆ. ಸದ್ಯಕ್ಕೆ ಟಿವಿ ಪರದೆಯನ್ನು ನೆಕ್ಕುವುದು ಅಷ್ಟೇನೂ ಆಪ್ಯಾಯಮಾನವೆನಿಸುವ ಅನುಭವ ಎನಿಸದಿದ್ದರೂ, ಈ ಸಾಧನದಲ್ಲಿ ಬಳಸಲಾಗಿರುವ ತಂತ್ರಜ್ಞಾನ ಮುಂದೆ ಹಲವು ವಿಧಗಳಲ್ಲಿ ಉಪಯುಕ್ತವೆನಿಸಬಹುದು ಎನ್ನುವುದು ಅವರ ಅನಿಸಿಕೆ.

ಹಾಡು, ವೀಡಿಯೊಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವಂತೆ ನಮ್ಮಿಷ್ಟದ ಸ್ವಾದಗಳನ್ನೂ ಡೌನ್‌ಲೋಡ್ ಮಾಡಿಟ್ಟುಕೊಂಡು ಬೇಕಾದಾಗ ರುಚಿನೋಡುವುದನ್ನು ಇದು ಸಾಧ್ಯವಾಗಿಸಬಹುದು. ಹಾಗೆಯೇ, ಬ್ರೆಡ್ಡಿಗೆ ಯಾವಾಗಲೂ ಒಂದೇ ಬಗೆಯ ಜಾಮನ್ನೋ ಸಾಸನ್ನೋ ಹಚ್ಚಿಕೊಳ್ಳುವ ಬದಲು, ಪ್ರತಿ ಬಾರಿಯೂ ಹೊಸದೊಂದು ರುಚಿಯನ್ನು ಪ್ರಿಂಟ್ ಮಾಡಿಕೊಳ್ಳುವುದೂ ಸಾಧ್ಯವಾಗಬಹುದು.

ಆಹಾರವನ್ನು ಪ್ರಿಂಟ್ ಮಾಡಿಕೊಳ್ಳುವುದೇ ಆದರೆ ಅದು ಕೇವಲ ಬ್ರೆಡ್ಡಿಗೆ ಮಾತ್ರವೇ ಏಕೆ ಸೀಮಿತವಾಗಬೇಕು? ಬೇಕಾದ ಹೊಸರುಚಿಯ ಪಾಕವಿಧಾನವನ್ನು ಮನೆಯ ಪ್ರಿಂಟರಿನಲ್ಲಿ ಮುದ್ರಿಸಿಕೊಂಡಂತೆ ಆ ಹೊಸರುಚಿಯನ್ನೇ ಮುದ್ರಿಸಿಕೊಳ್ಳುವುದು ಸಾಧ್ಯವಿಲ್ಲವೇ? ಮೂರು ಆಯಾಮದ ವಸ್ತುಗಳನ್ನು ಮುದ್ರಿಸಿಕೊಡುವ ಥ್ರೀಡಿ ಪ್ರಿಂಟಿಂಗ್ ತಂತ್ರಜ್ಞಾನ ಈ ಪ್ರಶ್ನೆಗೆ ಉತ್ತರ ಹೇಳುವ ಪ್ರಯತ್ನದಲ್ಲಿದೆ.

ಯಂತ್ರಗಳ ಬಿಡಿಭಾಗಗಳನ್ನು, ಪ್ರಯೋಗ ಮಾದರಿಗಳನ್ನು (ಪ್ರೋಟೋಟೈಪ್) ಕ್ಷಿಪ್ರವಾಗಿ ತಯಾರಿಸಿಕೊಳ್ಳಲು ಥ್ರೀಡಿ-ಪ್ರಿಂಟರುಗಳನ್ನು ಬಳಸುವ ಅಭ್ಯಾಸ ಉದ್ಯಮ ಕ್ಷೇತ್ರದಲ್ಲಿ ಈಗಾಗಲೇ ವ್ಯಾಪಕವಾಗಿದೆ. ಒಂದು ಅಥವಾ ಹೆಚ್ಚಿನ ಕಚ್ಚಾವಸ್ತುಗಳನ್ನು ನಮ್ಮ ಅಗತ್ಯಕ್ಕೆ ತಕ್ಕಂತೆ ಜೋಡಿಸಿ ಹೊಸ ವಸ್ತುಗಳನ್ನು ರೂಪಿಸುವ ಅಡಿಟಿವ್ ಮ್ಯಾನುಫ್ಯಾಕ್ಚರಿಂಗ್ ವಿಧಾನವನ್ನು ಈ ಪ್ರಿಂಟರುಗಳು ಬಳಸುತ್ತವೆ.

ಪ್ಲಾಸ್ಟಿಕ್ಕನ್ನೋ ಬೇರೊಂದು ಕಚ್ಚಾವಸ್ತುವನ್ನೋ ಬಳಸುವಂತೆಯೇ ಈ ಪ್ರಿಂಟರಿನಲ್ಲಿ ಬೇರೆಬೇರೆ ಆಹಾರ ಪದಾರ್ಥಗಳನ್ನು ಬಳಸಲು ಸಾಧ್ಯವಿಲ್ಲವೇ? ಈ ಪ್ರಶ್ನೆಗೆ ಉತ್ತರ ಹುಡುಕಲು ಹೊರಟಿರುವ ಸಂಸ್ಥೆಗಳು ಹಲವು ಪ್ರಯೋಗಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿವೆ. ತಮಗೆ ಬೇಕಾದ ಆಹಾರವನ್ನು ಯಾರು ಯಾವಾಗ ಎಲ್ಲಿ ಬೇಕಾದರೂ "ಮುದ್ರಿಸಿಕೊಳ್ಳುವುದನ್ನು" ಸಾಧ್ಯವಾಗಿಸುವುದು ಇಂತಹ ಪ್ರಯೋಗಗಳ ಉದ್ದೇಶ.

ನಾಸಾ ನೆರವಿನಿಂದ ಕಾರ್ಯಪ್ರವೃತ್ತವಾದ ಅಮೆರಿಕಾದ ಸಂಸ್ಥೆಯೊಂದು ರುಚಿಕರ ಪಿಜ್ಜಾಗಳನ್ನು ಮುದ್ರಿಸಿಕೊಡಬಲ್ಲ ಯಂತ್ರವನ್ನು ರೂಪಿಸಿದ್ದು ಈಗ ಕೆಲ ವರ್ಷಗಳ ಹಿಂದೆಯೇ ಸುದ್ದಿಯಾಗಿತ್ತು. ಇನ್ನಿತರ ಕೆಲ ಬೇಕರಿ ಉತ್ಪನ್ನಗಳನ್ನು ಮುದ್ರಿಸಿಕೊಡಬಲ್ಲ ಯಂತ್ರಗಳೂ ಅದರ ಬೆನ್ನಲ್ಲೇ ತಯಾರಾಗಿದ್ದವು. ಈಗ, ಥ್ರೀಡಿ ಪ್ರಿಂಟಿಂಗ್ ತಂತ್ರಜ್ಞಾನ ಬಳಸಿ ಗ್ರಾಹಕರ ಇಚ್ಛೆಗೆ ತಕ್ಕಂತೆ ಸಸ್ಯಾಹಾರಿ ಬರ್ಗರ್‌‍ಗಳನ್ನು ಸಿದ್ಧಪಡಿಸಿಕೊಡುವ ಯಂತ್ರವೊಂದನ್ನು ಇಸ್ರೇಲಿನ ಸೇವರ್‌ಈಟ್ ಎಂಬ ಫುಡ್-ಟೆಕ್ ಸಂಸ್ಥೆ ರೂಪಿಸಿದೆಯಂತೆ.

ಮನೆಯ ಕಲರ್ ಪ್ರಿಂಟರಿನಲ್ಲಿ ಬೇರೆಬೇರೆ ಬಣ್ಣದ ಇಂಕುಗಳು ಇರುವಂತೆ ಈ ಪ್ರಿಂಟರು ಎಣ್ಣೆ ಮತ್ತಿತರ ಕಚ್ಚಾಪದಾರ್ಥಗಳನ್ನು ಶೇಖರಿಸಿಟ್ಟಿಕೊಂಡಿರುತ್ತದೆ. ಗ್ರಾಹಕರು ತಮ್ಮ ಆಯ್ಕೆಯ ಬರ್ಗರ್ ಹೇಗಿರಬೇಕೆಂದು ಸೂಚಿಸಿದರೆ, ಅದು ಸುಮಾರು ಐದಾರು ನಿಮಿಷಗಳಲ್ಲಿ ಬಿಸಿಬಿಸಿ ಬರ್ಗರ್ ಅನ್ನು ಸಿದ್ಧಪಡಿಸಿಕೊಡಲಿದೆ. ಪಿಜ್ಜಾ-ಬರ್ಗರ್‌ಗಳೆಲ್ಲ ಸಾಧ್ಯವೆಂದಮೇಲೆ ಇಂತಹ ಪ್ರಿಂಟರುಗಳು ಮಸಾಲೆ ದೋಸೆ - ಮೈಸೂರುಪಾಕುಗಳನ್ನೂ ಮುದ್ರಿಸಿಕೊಡಬಲ್ಲವು. ಆದರೆ ಅದಕ್ಕೆ ಇನ್ನೂ ಕೊಂಚ ಸಮಯ ಬೇಕಾಗಬಹುದು, ಅಷ್ಟೇ.

ಹೀಗೆ ಹೊಸರುಚಿಯನ್ನು ಸವಿಯಲು ಹೊಸ ಪ್ರಿಂಟರ್ ತಂದಿಟ್ಟುಕೊಂಡು ಸಂಭಾಳಿಸುವುದು, ಟಿವಿ ಪರದೆಯನ್ನು ನೆಕ್ಕುವುದೆಲ್ಲ ಅತಿಯಾಯಿತು ಎನ್ನುವಿರಾ? ಡಿಜಿಟಲ್ ಮಾಧ್ಯಮದ ಮೂಲಕ ವಾಸನೆಯನ್ನಷ್ಟೇ ಪಸರಿಸುವ ನಿಟ್ಟಿನಲ್ಲೂ ಅನೇಕ ಪ್ರಯತ್ನಗಳು ನಡೆದಿವೆ. ಆನ್‌ಲೈನ್ ಮಾಧ್ಯಮದಲ್ಲಿ ವೀಡಿಯೊ ವೀಕ್ಷಿಸುವಾಗ, ಜಾಲತಾಣಗಳನ್ನು ನೋಡುವಾಗ ಅಥವಾ ಆಟ ಆಡುವಾಗ ನಾವು ಬಳಸುವ ಸಾಧನದಿಂದ ಅದಕ್ಕೆ ಪೂರಕವಾದ ವಾಸನೆಗಳು ಹೊರಹೊಮ್ಮುವಂತೆ ಮಾಡಲು 'ಡಿಜಿಟಲ್ ಸೆಂಟ್ ಟೆಕ್ನಾಲಜಿ' ಎಂಬ ತಂತ್ರಜ್ಞಾನವೇ ಅಭಿವೃದ್ಧಿಗೊಳ್ಳುತ್ತಿದೆ. ನಾವು ನೋಡುತ್ತಿರುವ ವೀಡಿಯೊದಲ್ಲಿ ಯಾರೋ ಮಸಾಲೆ ದೋಸೆ ಮಾಡುತ್ತಿದ್ದರೆ ಆ ಕ್ಷಣದಲ್ಲೇ ಬಿಸಿಬಿಸಿ ದೋಸೆಯ ವಾಸನೆ ನಮ್ಮನ್ನೂ ತಲುಪುವಂತೆ ಮಾಡುವುದು ಈ ತಂತ್ರಜ್ಞಾನದ ಸಹಾಯದಿಂದ - ಸೈದ್ಧಾಂತಿಕವಾಗಿ - ಸಾಧ್ಯ.

'ಟೇಸ್ಟ್ ದ ಟಿವಿ' ಉದಾಹರಣೆಯಂತೆ ಇಲ್ಲೂ ವಿಶೇಷ ಸಾಧನವೊಂದರ ಮೂಲಕ ವಾಸನೆಯ ಮರುಸೃಷ್ಟಿಯನ್ನು ಸಾಧ್ಯವಾಗಿಸಲಾಗುತ್ತದೆ. ಈಚಿನ ವರ್ಷಗಳಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿಕೊಳ್ಳುತ್ತಿರುವ ವರ್ಚುಯಲ್ ರಿಯಾಲಿಟಿ ಹಾಗೂ ಆಗ್ಮೆಂಟೆಡ್ ರಿಯಾಲಿಟಿ ತಂತ್ರಜ್ಞಾನಗಳ ಜೊತೆಯಲ್ಲಿ ಈ ಸಾಧ್ಯತೆಯನ್ನು ಬಳಸಿಕೊಳ್ಳುವ ಪ್ರಯತ್ನಗಳು ಇದೀಗ ಸಾಗಿವೆ. ಗೇಮಿಂಗ್‌ ಹೊರತಾದ ಉದ್ದೇಶಗಳಿಗೂ ಈ ತಂತ್ರಜ್ಞಾನ ಹೇಗೆ ನೆರವಾಗಬಹುದು ಎನ್ನುವುದನ್ನು ವಿಜ್ಞಾನಿಗಳು ಅನ್ವೇಷಿಸುತ್ತಿದ್ದಾರೆ.

ಇಂತಹ ಪ್ರಯತ್ನಗಳೆಲ್ಲ ಮುಂದುವರಿದು ಮುಂದೊಂದು ದಿನ ಅಂತರಜಾಲದ ಸ್ವರೂಪವೇ ಸಂಪೂರ್ಣವಾಗಿ ಬದಲಾಗಬಹುದು ಎನ್ನುವುದು ಸದ್ಯದ ನಿರೀಕ್ಷೆ. ಈಗಿನ ಅಂತರಜಾಲದಲ್ಲಿ ನಾವು ದೃಶ್ಯ ಹಾಗೂ ಧ್ವನಿಗಳನ್ನು ಪಡೆದುಕೊಳ್ಳುವಂತೆಯೇ, ಭವಿಷ್ಯದ ಅಂತರಜಾಲದ ಅನುಭವ ಸ್ಪರ್ಶ ಹಾಗೂ ವಾಸನೆಯಂತಹ ಹೆಚ್ಚುವರಿ ಅನುಭವಗಳನ್ನೂ ಕಟ್ಟಿಕೊಡಲಿದೆಯಂತೆ. 'ಇಂಟರ್‌ನೆಟ್ ಆಫ್ ಸೆನ್ಸಸ್' ಎನ್ನುವುದು ಈ ಪರಿಕಲ್ಪನೆಗೆ ಇಡಲಾಗಿರುವ ಹೆಸರು. ಈ ಹೊಸ ರೂಪದ ಅಂತರಜಾಲದಲ್ಲಿ, ಅತ್ಯಾಧುನಿಕ ತಂತ್ರಜ್ಞಾನಗಳ ಸಹಾಯದಿಂದ ಭೌತಿಕ ಜಗತ್ತಿನಂತಹುದೇ ಅನುಭವಗಳನ್ನು ಡಿಜಿಟಲ್ ಜಗತ್ತಿನಲ್ಲೂ ಪಡೆದುಕೊಳ್ಳುವುದು ಸಾಧ್ಯವಾಗುವ ನಿರೀಕ್ಷೆಯಿದೆ. ಬೇರೆಲ್ಲೋ ಇರುವ ವಸ್ತುವಿಶೇಷಗಳೂ ಇಲ್ಲೇ ನಮ್ಮ ಎದುರಿನಲ್ಲೋ ಪಕ್ಕದಲ್ಲೋ ಇರುವಂತಹ ಸಂಪೂರ್ಣ ಅನುಭವವನ್ನು ಇದು ಕಟ್ಟಿಕೊಡುವುದು ಸಾಧ್ಯ - ಹೊಸರುಚಿಯ ವೀಡಿಯೊದಲ್ಲಿ ಕಡುಬಿಗೆಂದು ಕಿತ್ತುತಂದ ಹಲಸಿನಹಣ್ಣನ್ನು ಇಲ್ಲಿಯೇ ಕುಳಿತು ಮುಟ್ಟಿನೋಡಿದ ಹಾಗೆ!

ಅಂತೂ, ಪತ್ರಿಕೆಯ ಪುಟದಲ್ಲಿ ಹೊಸ ತಿನಿಸಿನ ಚಿತ್ರ ನೋಡಿ ಅದರ ರುಚಿ ಹೇಗಿರಬಹುದೆಂದು ಊಹಿಸಿಕೊಳ್ಳುತ್ತಿದ್ದ ಕಾಲದಿಂದ ಹೊರಟ ನಾವು, ಆ ತಿನಿಸಿನ ವಾಸನೆ-ರುಚಿ ಎಲ್ಲವನ್ನೂ ಅಂತರಜಾಲದ ಮೂಲಕವೇ ತಿಳಿದುಕೊಳ್ಳಲು ಸಾಧ್ಯವಾಗುವ ಕಾಲದತ್ತ ಸಾಗುತ್ತಿದ್ದೇವೆ. ಹಳೆಯ ಆ ಕಾಲವೇ ಚೆನ್ನಾಗಿತ್ತೋ, ಬರಲಿರುವ ಈ ಕಾಲ ಹೆಚ್ಚು ಚೆನ್ನಾಗಿರಲಿದೆಯೋ ಎನ್ನುವುದನ್ನು - ಯಾವ ತಂತ್ರಜ್ಞಾನವನ್ನೂ ಅವಲಂಬಿಸದೆ - ತೀರ್ಮಾನಿಸಿಕೊಳ್ಳುವ ಸ್ವಾತಂತ್ರ್ಯ, ಸದ್ಯಕ್ಕಂತೂ, ನಮ್ಮಲ್ಲೇ ಇರುವುದು ಸಂತೋಷದ ಸಂಗತಿ.

ಜನವರಿ ೧೧, ೨೦೨೨ರ ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಲೇಖನ, 'ಟೆಕ್ ನೋಟ' ಅಂಕಣದ ಹನ್ನೊಂದನೆಯ ಬರಹ

'ಟೆಕ್ ನೋಟ' ಅಂಕಣದ ಹನ್ನೊಂದನೆಯ ಬರಹ
'ಟೆಕ್ ನೋಟ' ಅಂಕಣದ ಹನ್ನೊಂದನೆಯ ಬರಹವಿಜಯ ಕರ್ನಾಟಕ

Related Stories

No stories found.
logo
ಇಜ್ಞಾನ Ejnana
www.ejnana.com