ಕೋವಿಡ್-೧೯ ಹೆಸರನ್ನು ಬಳಸಿಕೊಂಡು ಸೈಬರ್ ಅಪರಾಧಗಳನ್ನು ಎಸಗುವ ಪ್ರವೃತ್ತಿ ಹೆಚ್ಚುತ್ತಿದೆ
ಕೋವಿಡ್-೧೯ ಹೆಸರನ್ನು ಬಳಸಿಕೊಂಡು ಸೈಬರ್ ಅಪರಾಧಗಳನ್ನು ಎಸಗುವ ಪ್ರವೃತ್ತಿ ಹೆಚ್ಚುತ್ತಿದೆImage by Pete Linforth from Pixabay

ಕೊರೊನಾ ಕಾಲದಲ್ಲಿ ಸೈಬರ್ ಸುರಕ್ಷತೆಯ ಚಿಂತೆ

ಕೋವಿಡ್-೧೯ ಹೆಸರನ್ನು ಬಳಸಿಕೊಂಡು ಸೈಬರ್ ಅಪರಾಧಗಳನ್ನು ಎಸಗುವ ಪ್ರವೃತ್ತಿ ಹೆಚ್ಚುತ್ತಿದ್ದು ಆ ಬಗ್ಗೆ ಎಲ್ಲರೂ ಎಚ್ಚರವಹಿಸುವಂತೆ ಜಾಗತಿಕ ಪೊಲೀಸ್ ಸಂಸ್ಥೆ ಇಂಟರ್‌ಪೋಲ್ ಕರೆನೀಡಿದೆ

ಸೈಬರ್ ಲೋಕ ಅಸಂಖ್ಯ ಅವಕಾಶಗಳ ತವರು. ತೊಂದರೆಕೊಡಲೆಂದೇ ತಯಾರಾದ ವ್ಯವಸ್ಥೆಗಳಿಂದ ಇಲ್ಲಿ ನಮಗೆ ಅಪಾಯವಾಗುವ ಸಾಧ್ಯತೆಯೂ ಉಂಟು. ಹೊಸಹೊಸ ಅವಕಾಶಗಳು ಸೃಷ್ಟಿಯಾಗುವಂತೆ ಇಲ್ಲಿ ಹೊಸ ಅಪಾಯಗಳೂ ಆಗಿಂದಾಗ್ಗೆ ಕಾಣಿಸಿಕೊಳ್ಳುತ್ತವೆ. ಬಾಹ್ಯ ಜಗತ್ತಿನಲ್ಲಿ ಹೊಸ ಸಂಗತಿಗಳು ಸುದ್ದಿಯಾದಾಗ ಇಲ್ಲಿನ ದುಷ್ಕರ್ಮಿಗಳೂ ಅದರ ಲಾಭ ಪಡೆದುಕೊಳ್ಳಲು ಪ್ರಯತ್ನಿಸುತ್ತಾರೆ.

ಕೋವಿಡ್-೧೯ ಜಾಗತಿಕ ಸೋಂಕು ಈ ವರ್ತನೆಯ ಇತ್ತೀಚಿನ ಉದಾಹರಣೆ. ಜಗತ್ತಿನಾದ್ಯಂತ ಭೀತಿ ಮೂಡಿಸಿರುವ ಈ ರೋಗದ ಹೆಸರನ್ನು ಬಳಸಿಕೊಂಡು ಸೈಬರ್ ಅಪರಾಧಗಳನ್ನು ಎಸಗುವ ಪ್ರವೃತ್ತಿ ಇದೀಗ ಹೆಚ್ಚುತ್ತಿದ್ದು ಆ ಬಗ್ಗೆ ಎಲ್ಲರೂ ಎಚ್ಚರವಹಿಸುವಂತೆ ಜಾಗತಿಕ ಪೊಲೀಸ್ ಸಂಸ್ಥೆ ಇಂಟರ್‌ಪೋಲ್ ಕರೆನೀಡಿದೆ.

ಸದ್ಯದ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಸೈಬರ್ ಅಪರಾಧಿಗಳು ಕಂಪ್ಯೂಟರ್ ವ್ಯವಸ್ಥೆಗಳ ಮೇಲೆ ದಾಳಿ ನಡೆಸುತ್ತಿರುವ ಸುದ್ದಿಗಳು ಈಗಾಗಲೇ ಕೇಳಿಬರುತ್ತಿವೆ. ಕೋವಿಡ್-೧೯ ಅಥವಾ ಕೊರೊನಾವೈರಸ್ ಹೆಸರಿರುವ ಜಾಲತಾಣಗಳು ಹಾಗೂ ಈ ವಿಷಯದ ಸಂದೇಶಗಳನ್ನು ಅವರು ಕುತಂತ್ರಾಂಶಗಳನ್ನು ಹರಡಲು, ಖಾಸಗಿ ಮಾಹಿತಿಯನ್ನು ಕದಿಯಲು ಬಳಸುತ್ತಿದ್ದಾರೆ. ಕಂಪ್ಯೂಟರುಗಳನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು, ಅಲ್ಲಿನ ಮಾಹಿತಿಯ ಗೂಢ ಲಿಪಿಕರಣ (ಎನ್‌ಕ್ರಿಪ್ಷನ್) ಮಾಡಿ, ಅದನ್ನು ಸರಿಪಡಿಸಲು ಹಣ ಕೇಳುವ ಪ್ರಸಂಗಗಳೂ ವರದಿಯಾಗಿವೆ.

ಇಂತಹ ಸನ್ನಿವೇಶಗಳಿಂದ ಪಾರಾಗಲು ನಮ್ಮ ಮಾಹಿತಿಯನ್ನು ಆಗಿಂದಾಗ್ಗೆ ಬ್ಯಾಕಪ್ ಮಾಡಿಕೊಳ್ಳುವುದು, ಅಪರಿಚಿತ ತಾಣಗಳಿಂದ ಏನನ್ನೂ ಡೌನ್‌ಲೋಡ್ ಮಾಡದಿರುವುದು, ಖಾಸಗಿ ಮಾಹಿತಿಯನ್ನು ಎಲ್ಲೆಂದರಲ್ಲಿ ಹಂಚಿಕೊಳ್ಳದಿರುವುದು, ಆಂಟಿವೈರಸ್ ತಂತ್ರಾಂಶಗಳನ್ನು ಆಗಿಂದಾಗ್ಗೆ ಅಪ್‌ಡೇಟ್ ಮಾಡಿಕೊಳ್ಳುವುದು, ಸದೃಢ ಪಾಸ್‌ವರ್ಡ್‌ಗಳನ್ನು ಬಳಸುವುದೇ ಮುಂತಾದ ಕ್ರಮಗಳು ನೆರವಾಗಬಲ್ಲವು. ಈಚೆಗೆ ವರ್ಕ್ ಫ್ರಮ್ ಹೋಮ್ ಅಭ್ಯಾಸ ಹೆಚ್ಚಿರುವುದರಿಂದ ಮನೆಯ ಕಂಪ್ಯೂಟರ್ ಜಾಲದ ಸುರಕ್ಷತೆಯ ಬಗೆಗೂ ನಾವೆಲ್ಲ ಹೆಚ್ಚಿನ ಕಾಳಜಿ ವಹಿಸಬೇಕಿದೆ.

ಸೈಬರ್ ಸುರಕ್ಷತೆ ಕಾಪಾಡಿಕೊಳ್ಳಲು ನಾವು ಅನುಸರಿಸಬೇಕಾದ ಕ್ರಮಗಳ ಚೆಕ್‌ಲಿಸ್ಟ್ ಅನ್ನು ಇಂಟರ್‌ಪೋಲ್ ಪ್ರಕಟಿಸಿರುವ ಈ ಮಾಹಿತಿಚಿತ್ರದಲ್ಲಿ (ಇನ್‌ಫೋಗ್ರಾಫಿಕ್) ನೋಡಬಹುದು.
ಸೈಬರ್ ಸುರಕ್ಷತೆ ಕಾಪಾಡಿಕೊಳ್ಳಲು ನಾವು ಅನುಸರಿಸಬೇಕಾದ ಕ್ರಮಗಳ ಚೆಕ್‌ಲಿಸ್ಟ್ ಅನ್ನು ಇಂಟರ್‌ಪೋಲ್ ಪ್ರಕಟಿಸಿರುವ ಈ ಮಾಹಿತಿಚಿತ್ರದಲ್ಲಿ (ಇನ್‌ಫೋಗ್ರಾಫಿಕ್) ನೋಡಬಹುದು.www.interpol.int

ಸುರಕ್ಷತೆ ಕಾಪಾಡಿಕೊಳ್ಳಲು ನಾವೇನು ಮಾಡಬಹುದು?

  • ಯಾರಾದರೂ ನಮ್ಮ ನಮ್ಮ ಕಂಪ್ಯೂಟರನ್ನು ಹ್ಯಾಕ್ ಮಾಡಿ ಅಲ್ಲಿರುವ ಮಾಹಿತಿಯನ್ನೆಲ್ಲ ಗೂಢಲಿಪಿಯನ್ನಾಗಿ ಪರಿವರ್ತಿಸಿದರೆ (ಎನ್‍ಕ್ರಿಪ್ಟ್ ಮಾಡಿಟ್ಟರೆ) ನಮ್ಮ ಕಡತಗಳನ್ನು ನಾವೇ ತೆರೆಯಲು ಸಾಧ್ಯವಾಗದಂತಹ ಪರಿಸ್ಥಿತಿ ಸೃಷ್ಟಿಯಾಗಬಹುದು. ಹೀಗೆ ಮಾಡುವ ದುಷ್ಕರ್ಮಿಗಳು ನಮ್ಮ ಕಡತಗಳನ್ನು ಮತ್ತೆ ಮೂಲಸ್ಥಿತಿಗೆ ತರಲು ಹಣದ ಬೇಡಿಕೆ ಇಡುತ್ತಾರೆ. ಈ ಪರಿಸ್ಥಿತಿ ತಪ್ಪಿಸಲು ನಮ್ಮ ಕಡತಗಳನ್ನು ಕಾಲಕಾಲಕ್ಕೆ ಬ್ಯಾಕಪ್ ಮಾಡಿಡುವುದು ಒಳ್ಳೆಯದು.

  • ಕಚೇರಿಗಳಿಗೆ ಹೋಲಿಸಿದಾಗ ನಾವು ಮನೆಗಳಲ್ಲಿ ಸೈಬರ್ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಕಡಿಮೆ. ಇದರ ಲಾಭ ಪಡೆಯುವ ದುಷ್ಕರ್ಮಿಗಳು ಕುತಂತ್ರಾಂಶಗಳನ್ನು ಹರಡುವುದು ಸಾಧ್ಯ. ಇದನ್ನು ತಪ್ಪಿಸಲು ನಮ್ಮ ಕಂಪ್ಯೂಟರ್ ಹಾಗೂ ಮೊಬೈಲುಗಳಲ್ಲಿ ಆಂಟಿವೈರಸ್ ತಂತ್ರಾಂಶ ಅಳವಡಿಸಿಕೊಳ್ಳುವುದು, ಅದನ್ನು ಆಗಿಂದಾಗ್ಗೆ ಅಪ್‌ಡೇಟ್ ಮಾಡಿಕೊಳ್ಳುವುದು ಅಗತ್ಯ. ಮನೆಯ ವೈ-ಫೈ ಜಾಲವನ್ನು ಸದೃಢ ಪಾಸ್‌ವರ್ಡ್ ಬಳಸಿ ಕಾಪಾಡಿಕೊಳ್ಳುವುದೂ ಅನಿವಾರ್ಯ!

  • ಸುಲಭವಾಗಿ ಊಹಿಸಬಹುದಾದ ಪದಗಳನ್ನು ನಿಮ್ಮ ಪಾಸ್‌ವರ್ಡ್ ಮಾಡಿಕೊಳ್ಳಬೇಡಿ. ಬೇರೆಬೇರೆ ಬೀಗಗಳಿಗೆ ಬೇರೆಬೇರೆ ಕೀಲಿಕೈ ಇರುವಂತೆ ನಿಮ್ಮ ಬೇರೆಬೇರೆ ಅಕೌಂಟುಗಳಿಗೆ ಬೇರೆಬೇರೆ ಪಾಸ್‌ವರ್ಡುಗಳನ್ನು ಇಟ್ಟುಕೊಳ್ಳಿ. ಪಾಸ್‌ವರ್ಡನ್ನು ಆಗಾಗ್ಗೆ ಬದಲಿಸುತ್ತಿರುವುದು, ಸಾಧ್ಯವಾದಲ್ಲೆಲ್ಲ ಟೂ-ಫ್ಯಾಕ್ಟರ್ ಅಥೆಂಟಿಕೇಶನ್ (ಉದಾ: ಪಾಸ್‌ವರ್ಡ್ ಜೊತೆಯಲ್ಲಿ ಓಟಿಪಿ) ಬಳಸುವುದು ಕೂಡ ಒಳ್ಳೆಯ ಅಭ್ಯಾಸ. ನಿಮ್ಮ ಪಾಸ್‌ವರ್ಡ್ ಹಾಗೂ ಓಟಿಪಿಗಳನ್ನು ಯಾರಜೊತೆಗೂ ಹಂಚಿಕೊಳ್ಳಬೇಡಿ.

  • ನೀವು ಬಳಸುವ ತಂತ್ರಾಂಶಗಳನ್ನು ಕಾಲಕಾಲಕ್ಕೆ ಅಪ್‌ಡೇಟ್ ಮಾಡಿಕೊಳ್ಳಿ. ಅವುಗಳಲ್ಲಿ ಇರಬಹುದಾದ ಭದ್ರತಾ ಲೋಪಗಳಿಗೆ ತಜ್ಞರು ನೀಡಿದ ಪರಿಹಾರದ ಲಾಭ ಪಡೆದುಕೊಳ್ಳುವುದು ಇದರಿಂದಾಗಿ ಸಾಧ್ಯವಾಗುತ್ತದೆ. ಹಾಗೆಯೇ, ಮೊಬೈಲ್ ಆಪ್‌ಗಳನ್ನು ಪ್ಲೇ ಸ್ಟೋರಿನಿಂದ ಮಾತ್ರವೇ ಡೌನ್‌ಲೋಡ್ ಮಾಡಿಕೊಳ್ಳಿ. ಇತರ ಮೂಲಗಳಿಂದ ಪಡೆದ ಆಪ್‌ಗಳನ್ನು ನಿಮ್ಮ ಫೋನಿನಲ್ಲಿ ಇನ್‌ಸ್ಟಾಲ್ ಮಾಡಿಕೊಳ್ಳುವುದು ಕುತಂತ್ರಾಂಶಗಳಿಗೆ ಮುಕ್ತ ಆಹ್ವಾನ ನೀಡಿದಂತೆ!

  • ಸಮಾಜಜಾಲಗಳನ್ನು ಬಳಸುವಾಗ ಹುಷಾರಾಗಿರಿ. ಅಪರಿಚಿತರೊಡನೆ ಖಾಸಗಿ ಮಾಹಿತಿ ಹಂಚಿಕೊಳ್ಳಬೇಡಿ. ಹಾಗೆಯೇ, ನಕಲಿ ಪ್ರೊಫೈಲುಗಳ ಬಗ್ಗೆಯೂ ಎಚ್ಚರವಿರಲಿ. ನಿಮ್ಮ ಮಿತ್ರರ ಹೆಸರಿನಲ್ಲಿ ಅಸಹಜವೆನಿಸುವ ಕೋರಿಕೆ (ಫಾರಿನ್ನಿಗೆ ಬಂದಿದ್ದೆ, ಪರ್ಸ್ ಕಳೆದಿದೆ, ಹಣ ಬೇಕು ಇತ್ಯಾದಿ) ಬಂದರೆ ಅದರ ಸತ್ಯಾಸತ್ಯತೆ ಪರಿಶೀಲಿಸದೆ ಮುಂದುವರೆಯಬೇಡಿ. ನಿಮ್ಮದೇ ನಕಲಿ ಪ್ರೊಫೈಲ್ ಕಂಡುಬಂದರೆ ಅದರ ಬಗ್ಗೆ ಸಂಬಂಧಪಟ್ಟ ಸಂಸ್ಥೆಗೆ ದೂರುಕೊಡಿ.

  • ಸಂಶಯಾಸ್ಪದ ತಂತ್ರಾಂಶಗಳನ್ನು, ಜಾಲತಾಣಗಳನ್ನು ಯಾವ ಕಾರಣಕ್ಕೂ ಬಳಸಬೇಡಿ. ಮೊಬೈಲ್ ಆಪ್‌ಗಳು ಸರಿಯಾಗಿ ಕೆಲಸಮಾಡಬೇಕಾದರೆ ಅವಕ್ಕೆ ನಾವು ಹಲವು ಬಗೆಯ ಅನುಮತಿಗಳನ್ನು (ಪರ್ಮಿಶನ್) ನೀಡಬೇಕಾಗುತ್ತದೆ. ನೀವು ಬಳಸಲು ಹೊರಟಿರುವ ಆಪ್ ಏನೆಲ್ಲ ಅನುಮತಿ ಕೇಳುತ್ತಿದೆ ಎನ್ನುವುದನ್ನು ಸರಿಯಾಗಿ ಗಮನಿಸಿಕೊಳ್ಳಿ. ಅನಗತ್ಯವೆನಿಸುವ, ಸಂಶಯಕ್ಕೆ ಎಡೆಕೊಡುವ ಯಾವ ಅನುಮತಿಯನ್ನು ಕೇಳಿದರೂ ಅಂತಹ ಆಪ್ ಅನ್ನು ಬಳಸದಿರುವುದೇ ಒಳ್ಳೆಯದು.

  • ಅಪರಿಚಿತರಿಂದ ಬರುವ ಇಮೇಲ್ ಅಥವಾ ಮೆಸೇಜ್‌ಗಳನ್ನು ತೆರೆಯುವುದಾಗಲೀ ಅಲ್ಲಿರುವ ಕೊಂಡಿಗಳ ಮೇಲೆ ಕ್ಲಿಕ್ ಮಾಡುವುದಾಗಲೀ ಮಾಡಬೇಡಿ. ಸಂಸ್ಥೆಗಳ ಹೆಸರಿನಲ್ಲಿ ಸಂದೇಶ ಕಳಿಸುವ ಅಥವಾ ಕರೆಮಾಡುವವರ ಬಗ್ಗೆ ಸಂಶಯ ಬಂದರೆ ಆಯಾ ಸಂಸ್ಥೆಯ ಅಧಿಕೃತ ಗ್ರಾಹಕಸೇವೆಯನ್ನು ಸಂಪರ್ಕಿಸಿ. ನಕಲಿ ಜಾಲತಾಣಗಳ ಬಗ್ಗೆ ಎಚ್ಚರವಾಗಿರಿ, ಮತ್ತು ಅಂತಹ ತಾಣಗಳಲ್ಲಿ ಯಾವ ಮಾಹಿತಿಯನ್ನೂ ಹಂಚಿಕೊಳ್ಳಬೇಡಿ.

ವಿಜಯ ಕರ್ನಾಟಕ 'ಕೊರೊನಾಲಜಿ' ಸರಣಿಯಲ್ಲಿ ಪ್ರಕಟವಾದ ಲೇಖನವೊಂದರ ವಿಸ್ತೃತ ರೂಪ

Related Stories

No stories found.
logo
ಇಜ್ಞಾನ Ejnana
www.ejnana.com