ತಮ್ಮ ದೇಹದ ರಚನೆ ಹಾಗೂ ಬಣ್ಣದ ಸಹಾಯ ಪಡೆಯುವ ಜೀವಿಗಳು, ತಮ್ಮ ಸುತ್ತಲಿನ ಪರಿಸರದೊಂದಿಗೆ ಬೆರೆತುಹೋಗುವ ತಂತ್ರಗಾರಿಕೆಯನ್ನೇ ಛದ್ಮ (camouflage) ಎಂದು ಕರೆಯುತ್ತಾರೆ.
ತಮ್ಮ ದೇಹದ ರಚನೆ ಹಾಗೂ ಬಣ್ಣದ ಸಹಾಯ ಪಡೆಯುವ ಜೀವಿಗಳು, ತಮ್ಮ ಸುತ್ತಲಿನ ಪರಿಸರದೊಂದಿಗೆ ಬೆರೆತುಹೋಗುವ ತಂತ್ರಗಾರಿಕೆಯನ್ನೇ ಛದ್ಮ (camouflage) ಎಂದು ಕರೆಯುತ್ತಾರೆ.Image by Kevinsphotos from Pixabay

ಬಣ್ಣಗಳ ಲೋಕದಲ್ಲಿ ಕಣ್ಣುಮುಚ್ಚಾಲೆ ಆಟ

ಯಂತ್ರಗಳೂ ಬುದ್ಧಿವಂತರಾಗುತ್ತಿರುವ ಈ ಕಾಲದಲ್ಲಿ ಪರಿಸರಕ್ಕೆ ತಕ್ಕಂತೆ ತಮ್ಮ ಬಣ್ಣವನ್ನು ಬದಲಿಸಿಕೊಳ್ಳುವ ಬುದ್ಧಿವಂತಿಕೆಯನ್ನು ಬಟ್ಟೆಗಳಿಗೇ ನೀಡುವುದು ಸಾಧ್ಯವಿಲ್ಲವೇ?

ನನ್ನ ಬಾಲ್ಯದಲ್ಲಿ ನಾವು ಇದ್ದದ್ದು ಕೊಡಗಿನ ಶ್ರೀಮಂಗಲ ಎಂಬ ಊರಿನಲ್ಲಿ. ತಿಂಗಳುಗಟ್ಟಲೆ ಮಳೆ, ಸುತ್ತಲೂ ಹಸಿರು, ಕ್ರಿಮಿಕೀಟ ಪ್ರಾಣಿಪಕ್ಷಿಗಳೆಲ್ಲ ನಮ್ಮ ಅಂದಿನ ಜೀವನದ ಅವಿಭಾಜ್ಯ ಅಂಗಗಳಾಗಿದ್ದವು. ಆಟವಾಡಲು, ಓದಿಕೊಳ್ಳಲು ಶಾಲೆಯ ಗೆಳೆಯರ ಒಡನಾಟ ದೊರಕುತ್ತಿದ್ದ ಹಾಗೆ ಮನೆಯ ಸುತ್ತಲಿನ ಗಿಡಮರಗಳಲ್ಲಿ ಬಗೆಬಗೆಯ ಕೀಟಗಳೂ ಪಕ್ಷಿಗಳೂ ಕೆಲವೊಮ್ಮೆ ಹಾವುಗಳೂ ನಮ್ಮನ್ನು ಎದುರುಗೊಳ್ಳುತ್ತಿದ್ದವು.

ನಾವು ಗೆಳೆಯರೆಲ್ಲ ಕೂಡಿ ಕಣ್ಣುಮುಚ್ಚಾಲೆ ಆಟ ಆಡಿದ್ದು ಕಡಿಮೆಯೇ ಎನ್ನಬೇಕು. ಆದರೆ ನಮ್ಮ ಸುತ್ತಲೂ ಇದ್ದ ಇನ್ನಿತರ ಜೀವಿಗಳು ತಮ್ಮ ಕಣ್ಣುಮುಚ್ಚಾಲೆ ಆಟದಲ್ಲಿ ನಮ್ಮನ್ನು ಸೇರಿಸಿಕೊಂಡುಬಿಡುತ್ತಿದ್ದವು. ಇದೇಕೋ ಈ ಕಡ್ಡಿ ಅಲುಗಾಡುತ್ತಿದೆಯಲ್ಲ ಎಂದು ನೋಡಿದರೆ ಅದೊಂದು ಕೀಟ ಆಗಿರುತ್ತಿತ್ತು, ಪಕ್ಕದ ಮನೆಯ ಸೀಬೆಮರದಲ್ಲಿ ಯಾವುದೋ ಹೊಸ ಬಳ್ಳಿ ಕಾಣಿಸುತ್ತಿದೆ ಎಂದುಕೊಂಡರೆ ಅಲ್ಲಿ ಹಸಿರು ಹಾವು ಇರುತ್ತಿತ್ತು. ಮೈಸೂರಿನ ದಾರಿಯಲ್ಲಿ ಸಿಗುತ್ತಿದ್ದ ನಾಗರಹೊಳೆ ಕಾಡಿನಲ್ಲೂ ಅಷ್ಟೇ: ದೂರದಲ್ಲಿ ನಿಂತ ಕಾಡುಹಂದಿಯನ್ನು ನಮ್ಮಕ್ಕನಿಗೆ ತೋರಿಸಿದರೆ ಅವಳಿಗೆ ಅದು ಕಾಣುತ್ತಲೇ ಇರಲಿಲ್ಲ; ಸುಳ್ಳು ಹೇಳಿದೆನೆಂಬ ಆರೋಪ ಮಾತ್ರ ನನ್ನ ಮೇಲೆ ಬರುತ್ತಿತ್ತು!

ಹೀಗೆ ಕಣ್ಣುಮುಚ್ಚಾಲೆಯಾಡುವ ಅನೇಕ ಜೀವಿಗಳನ್ನು ನಾವು ನಮ್ಮ ಸುತ್ತಮುತ್ತ ನೋಡಬಹುದು. ತಮ್ಮ ದೇಹದ ರಚನೆ ಹಾಗೂ ಬಣ್ಣದ ಸಹಾಯ ಪಡೆಯುವ ಜೀವಿಗಳು, ತಮ್ಮ ಸುತ್ತಲಿನ ಪರಿಸರದೊಂದಿಗೆ ಬೆರೆತುಹೋಗುವ ಈ ತಂತ್ರಗಾರಿಕೆಯನ್ನೇ ಛದ್ಮ (camouflage) ಎಂದು ಕರೆಯುತ್ತಾರೆ. ತಾವು ಎಲ್ಲಿದ್ದೇವೆ, ಎಲ್ಲಿಗೆ ಹೋಗುತ್ತಿದ್ದೇವೆ ಎನ್ನುವುದು ಬೇರೆಯವರಿಗೆ ಸುಲಭಕ್ಕೆ ಗೊತ್ತಾಗದಂತೆ ನೋಡಿಕೊಳ್ಳುವುದು ಈ ತಂತ್ರಗಾರಿಕೆಯ ಉದ್ದೇಶ. ಮರೆಯಲ್ಲಿ ಹೊಂಚುಹಾಕಿ ಬೇಟೆ ಸಂಪಾದಿಸಲು ಬೇಟೆಗಾರರಿಗೆ (predator) ಇದು ಸಹಾಯ ಮಾಡಿದರೆ, ಬೇಟೆಗಾರರಿಗೆ ಕಾಣಿಸದಂತೆ ಅವಿತುಕೊಳ್ಳಲು ಇದು ಬೇಟೆಗಳಿಗೂ (prey) ನೆರವಾಗುತ್ತದೆ. ಕೆಲವು ಚಿಟ್ಟೆಗಳ ರೆಕ್ಕೆ ಅಥವಾ ಕಂಬಳಿಹುಳುಗಳ ಮುಖದ ಭಾಗದಲ್ಲಿರುವ ದೊಡ್ಡ ಕಣ್ಣಿನಂತಹ ವಿನ್ಯಾಸಗಳು ಬೇಟೆಗಾರರನ್ನೇ ಹೆದರಿಸಬಲ್ಲವು!

ಕೊಳದ ಬಕ, ಅಂದರೆ ಪಾಂಡ್ ಹೆರಾನ್ ಪಕ್ಷಿ ನಮ್ಮ ಪಕ್ಕದಲ್ಲೇ ಬಕಧ್ಯಾನದಲ್ಲಿದ್ದರೂ ತನ್ನ ಮಬ್ಬು ಬಣ್ಣದಿಂದಾಗಿ ಅದು ನಮಗೆ ಸುಲಭಕ್ಕೆ ಕಾಣಿಸುವುದಿಲ್ಲ. ಕಡ್ಡಿಯಂತೆ ಅಥವಾ ಎಲೆಯಂತೆ ಕಾಣುವ ಕೀಟಗಳು ತಮ್ಮ ದೈಹಿಕ ಸ್ವರೂಪದಿಂದಲೇ ತಮ್ಮ ಶತ್ರುಗಳ ಕಣ್ಣಿಗೆ ಮಣ್ಣೆರೆಚಲು ಪ್ರಯತ್ನಿಸುತ್ತವೆ. ನಮಗೆಲ್ಲ ಚೆನ್ನಾಗಿ ಪರಿಚಯವಿರುವ ಗೋಸುಂಬೆ ಸುತ್ತಲಿನ ಪರಿಸರದೊಂದಿಗೆ ಬೆರೆಯಲು ತನ್ನ ಮೈಬಣ್ಣವನ್ನೇ ಬದಲಿಸಿಕೊಳ್ಳುತ್ತದೆ. ಆರ್ಕ್ಟಿಕ್ ನರಿಯ ತುಪ್ಪುಳ ಆಯಾ ಋತುವಿಗೆ ಹೆಚ್ಚು ಸೂಕ್ತವಾದ ಬಣ್ಣವನ್ನು (ಚಳಿಗಾಲದಲ್ಲಿ ಬಿಳಿ, ಬೇಸಿಗೆಯಲ್ಲಿ ಕಂದು) ತಳೆಯುತ್ತದೆ. ಹುಲಿಯ ಪಟ್ಟೆ, ಚಿರತೆಯ ಚುಕ್ಕೆಗಳು ತಮ್ಮ ಬೇಟೆಗಳಿಗೆ ಕಾಣದಂತೆ ಅಡಗಿಕೊಳ್ಳಲು ಅವುಗಳಿಗೆ ನೆರವಾಗುತ್ತವೆ. ಜೀಬ್ರಾ‌ ಮೈಮೇಲಿನ ಪಟ್ಟೆಗಳು ಅವುಗಳ ಬೇಟೆಗಾರರನ್ನು ಮಾತ್ರವಲ್ಲದೆ ಕಾಟಕೊಡುವ ಕೀಟಗಳನ್ನೂ ಗೊಂದಲಕ್ಕೀಡುಮಾಡುತ್ತವೆಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ.

ಬಹುತೇಕ ಛದ್ಮವೇಷಗಳು ಆಯಾ ಜೀವಿಯ ಸುತ್ತಲ ಪರಿಸರದಿಂದಲೇ ಪ್ರೇರಿತವಾಗಿರುತ್ತವೆ. ಇದರಿಂದಲೇ ಪ್ರೇರಣೆ ಪಡೆದು, ಪರಿಸರವನ್ನು ಅನುಕರಿಸುವ ಪ್ರಯತ್ನಗಳನ್ನು ಮನುಷ್ಯರೂ ಮಾಡುತ್ತಾರೆ. ಕಾಡಿನಲ್ಲಿ ಕೆಲಸಮಾಡುವವರು ಅಲ್ಲಿನ ಪರಿಸರಕ್ಕೆ ಸೂಕ್ತ ಬಣ್ಣದ ಬಟ್ಟೆಗಳನ್ನು ಧರಿಸುವುದು, ಅಲ್ಲಿ ಅಂತಹವೇ ಬಣ್ಣದ ವಾಹನಗಳನ್ನು ಬಳಸುವುದು, ವನ್ಯಜೀವಿ ಛಾಯಾಗ್ರಾಹಕರು ತಮ್ಮ ಸುತ್ತಲ ಪರಿಸರಕ್ಕೆ ಹೋಲುವ ಮರೆ ಕಟ್ಟಿಕೊಳ್ಳುವುದು, ಸೈನಿಕರು ತಮ್ಮ ಕಾರ್ಯಕ್ಷೇತ್ರಕ್ಕೆ ಹೊಂದಿಕೊಳ್ಳುವ ಸಮವಸ್ತ್ರ ಹಾಗೂ 'ಗಿಲಿ ಸೂಟ್‌'ಗಳನ್ನು (ghillie suit) ಧರಿಸುವುದು - ಇವೆಲ್ಲವೂ ಅದರ ಉದಾಹರಣೆಗಳು. ಸೈನಿಕ ಸಮವಸ್ತ್ರಗಳನ್ನು ಹೋಲುವ ವರ್ಣ-ವಿನ್ಯಾಸದ 'ಕ್ಯಾಮೋ' ಉಡುಪುಗಳನ್ನು ತೊಡುವುದು ಬಹಳ ವರ್ಷಗಳಿಂದ ಚಾಲ್ತಿಯಲ್ಲಿರುವ ಫ್ಯಾಶನ್. ಮನುಷ್ಯರ ಮತ್ತು ವಾಹನಗಳ ಮಾತು ಹಾಗಿರಲಿ, ನಿಂತಲ್ಲೇ ನಿಂತಿರುವ ಮೊಬೈಲ್ ಟವರ್‌ಗಳಿಗೂ ಸುತ್ತಮುತ್ತಲ ಮರಗಳಂತೆ ಕಾಣುವ ವೇಷ ತೊಡಿಸಲಾಗುತ್ತಿದೆ.

ಜೀವಜಗತ್ತಿನ ಛದ್ಮವೇಷಗಳು ಆಯಾ ಜೀವಿಯ ಪರಿಸರ ಹಾಗೂ ಜೀವನಶೈಲಿಗೆ ತಕ್ಕಂತೆ ವಿಕಾಸವಾಗಿರುವುದನ್ನು ನಾವು ನೋಡಬಹುದು. ಧ್ರುವಪ್ರದೇಶದ ಮಂಜುಗಡ್ಡೆಗಳ ನಡುವೆ ವಾಸಿಸುವ ಹಿಮಕರಡಿಯ ತುಪ್ಪುಳ ಬಿಳಿಯ ಬಣ್ಣದ್ದು. ಹಾಗೆಯೇ, ಆಫ್ರಿಕಾದ ಹುಲ್ಲುಗಾವಲುಗಳಲ್ಲಿ ವಾಸಿಸುವ ಸಿಂಹಗಳ ಮೈಬಣ್ಣ ಅಲ್ಲಿಗೆ ಸರಿಯಾಗಿ ಹೊಂದಿಕೊಳ್ಳುವಂತೆಯೇ ಇರುತ್ತದೆ. ಆದರೆ ಇವೆಲ್ಲ ಆಯಾ ಜೀವಿಯ ನೈಸರ್ಗಿಕ ಪರಿಸರದಲ್ಲಿ ಮಾತ್ರವೇ ಹೆಚ್ಚು ಪರಿಣಾಮಕಾರಿಯಾಗಿ ಕೆಲಸಮಾಡುತ್ತವೆ.

ಮನುಷ್ಯರ ವಿಷಯ ಬೇರೆ. ನಮ್ಮ ಛದ್ಮವೇಷಗಳೆಲ್ಲ ಕೃತಕವೇ ಆದ್ದರಿಂದ ನಿರ್ದಿಷ್ಟ ಪರಿಸರಕ್ಕೆ ಸರಿಹೊಂದುವಂತೆ ನಾವೇ ನಮ್ಮ ವೇಷವನ್ನು ಸಿದ್ಧಪಡಿಸಿಕೊಳ್ಳಬೇಕು. ಸೈನಿಕರ ಸಮವಸ್ತ್ರವನ್ನೇ ನೋಡಿ, ಅರಣ್ಯಪ್ರದೇಶಗಳಲ್ಲಿರುವವರೂ ಹಿಮಬೀಳುವ ಪ್ರದೇಶಗಳಲ್ಲಿ ನಿಯೋಜಿತರಾದವರೂ ಬೇರೆಬೇರೆ ವರ್ಣ-ವಿನ್ಯಾಸಗಳ ಸಮವಸ್ತ್ರ ಧರಿಸುತ್ತಾರೆ. ಮರಳುಗಾಡಿನಲ್ಲಿ ಕೆಲಸಮಾಡುವವರಿಗೆ ಮಬ್ಬು ಬಣ್ಣಗಳ ಸಮವಸ್ತ್ರವೇ ಬೇಕು. ಹಾಗಲ್ಲದೆ ಅವರೇನಾದರೂ ಅರಣ್ಯಪ್ರದೇಶದಲ್ಲಿ ತೊಡಬಹುದಾದ ಹಸಿರು ಸಮವಸ್ತ್ರ ಧರಿಸಿದರೆ ಅದು ಅವರಿಗೆ ಅಪಾಯ ತಂದೊಡ್ಡಬಹುದು. ಅರಣ್ಯಪ್ರದೇಶಗಳಲ್ಲಿ ಕಾರ್ಯಾಚರಣೆಗೆಂದು ವಿನ್ಯಾಸಗೊಳಿಸಿದ ಸಮವಸ್ತ್ರವನ್ನು ಅಫಘಾನಿಸ್ತಾನದ ಒಣ ವಾತಾವರಣದಲ್ಲಿ ಸೇವೆಸಲ್ಲಿಸುವ ಯೋಧರಿಗಾಗಿ ಖರೀದಿಸಿದ ಘಟನೆ ತೀವ್ರ ಟೀಕೆಗೆ ಗುರಿಯಾಗಿದ್ದು ಈ ಹಿನ್ನೆಲೆಯಲ್ಲೇ.

ಈ ಪರಿಸ್ಥಿತಿಯನ್ನು ಬದಲಿಸುವುದು ಹೇಗೆ? ಯಂತ್ರಗಳೂ ಬುದ್ಧಿವಂತರಾಗುತ್ತಿರುವ ಈ ಕಾಲದಲ್ಲಿ ಪರಿಸರಕ್ಕೆ ತಕ್ಕಂತೆ ತಮ್ಮ ಬಣ್ಣವನ್ನು ಬದಲಿಸಿಕೊಳ್ಳುವ ಬುದ್ಧಿವಂತಿಕೆಯನ್ನು ಬಟ್ಟೆಗಳಿಗೇ ನೀಡುವುದು ಸಾಧ್ಯವಿಲ್ಲವೇ?

ಕೃತಕ ಛದ್ಮ (artificial camouflage) ಕುರಿತು ಸಂಶೋಧನೆಯಲ್ಲಿ ತೊಡಗಿರುವ ವಿಜ್ಞಾನಿಗಳು ಈ ಪ್ರಶ್ನೆಗೆ ಉತ್ತರ ಹುಡುಕುತ್ತಿದ್ದಾರೆ. ಬಣ್ಣವನ್ನು ಬದಲಿಸಿಕೊಳ್ಳಬಲ್ಲ ಗೋಸುಂಬೆ, ಆಕ್ಟೋಪಸ್ ಮುಂತಾದ ಜೀವಿಗಳನ್ನು ಅನುಕರಿಸಿ, ತನ್ನ ಪರಿಸರಕ್ಕೆ ತಕ್ಕಂತೆ ವರ್ಣ-ವಿನ್ಯಾಸ ಬದಲಿಸಿಕೊಳ್ಳುವ ಸಾಮರ್ಥ್ಯವಿರುವ ವಸ್ತುಗಳನ್ನು ರೂಪಿಸುವುದು ಅವರ ಉದ್ದೇಶ. ಬಣ್ಣ ಬದಲಿಸಿಕೊಳ್ಳುವ ಸಾಮರ್ಥ್ಯವಿರುವ ವಸ್ತುಗಳ ತಯಾರಿಕೆಗಾಗಿ ಈ ಹಿಂದೆ ಹಲವು ಪ್ರಯತ್ನಗಳು ನಡೆದಿದ್ದು, ಕೆಲ ಪ್ರಯತ್ನಗಳು ತಕ್ಕಮಟ್ಟಿಗೆ ಯಶಸ್ಸನ್ನೂ ಕಂಡಿದ್ದವು. ಬಣ್ಣ ಬದಲಿಸಿಕೊಳ್ಳಬಲ್ಲ ಸಾಮರ್ಥ್ಯವಿದ್ದ ಬಟ್ಟೆಯನ್ನು ಅಮೆರಿಕಾದ ಸೆಂಟ್ರಲ್ ಫ್ಲೋರಿಡಾ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ರೂಪಿಸಿದ್ದು ೨೦೧೮ರಲ್ಲೇ ಸುದ್ದಿಯಾಗಿತ್ತು. ಈ ಬಟ್ಟೆಯ ಬಣ್ಣ ಏನಿರಬೇಕು ಎನ್ನುವುದನ್ನು ಬಳಕೆದಾರರು ತಮ್ಮ ಸ್ಮಾರ್ಟ್‌ಫೋನಿನ ಆಪ್ ಮೂಲಕವೇ ನಿಯಂತ್ರಿಸಬಹುದಾಗಿತ್ತಂತೆ.

ಇಂತಹದೇ ಇನ್ನೊಂದು ಪ್ರಯತ್ನದಲ್ಲಿ ದಕ್ಷಿಣ ಕೊರಿಯಾದ ಸಂಶೋಧಕರು ಇತ್ತೀಚೆಗೆ (ಆಗಸ್ಟ್ ೨೦೨೧) ಮಹತ್ವದ ಮುನ್ನಡೆ ಸಾಧಿಸಿದ್ದಾರೆ. ಸುತ್ತಲಿನ ಪರಿಸರಕ್ಕೆ ತಕ್ಕಹಾಗೆ ತನ್ನ ಮೈಬಣ್ಣವನ್ನು ಕ್ಷಣಾರ್ಧದಲ್ಲಿ ಬದಲಿಸಿಕೊಳ್ಳುವ ರೋಬೋ-ಗೋಸುಂಬೆಯೊಂದನ್ನು ರೂಪಿಸಿ ತೋರಿಸಿರುವುದು ಅವರ ಸಾಧನೆ. ಸೋಲ್ ರಾಷ್ಟ್ರೀಯ ವಿಶ್ವವಿದ್ಯಾನಿಲಯದ ತಂಡ ರೂಪಿಸಿರುವ ಈ ರೋಬೋ-ಗೋಸುಂಬೆಯಲ್ಲಿ ಬಣ್ಣ ಗ್ರಹಿಸುವ ಸಂವೇದಕಗಳಿದ್ದು ಅವು ಸುತ್ತಲಿನ ಪರಿಸರದ ಪ್ರಮುಖ ಬಣ್ಣಗಳನ್ನು ಗುರುತಿಸುತ್ತವೆ. ರೋಬೋ-ಗೋಸುಂಬೆಗೆ ಹೊದಿಸಿರುವ ಬಟ್ಟೆಯನ್ನು ಅದರಲ್ಲಿರುವ ಪುಟಾಣಿ ಹೀಟರುಗಳು ಗುರುತಿಸಿದ ಬಣ್ಣಕ್ಕೆ ಅನುಗುಣವಾಗಿ ಬಿಸಿ ಅಥವಾ ತಣ್ಣಗೆ ಮಾಡುತ್ತವೆ, ಮತ್ತು ಆ ಬಟ್ಟೆಯ ಥರ್ಮೋಕ್ರೋಮಿಕ್ (ತಾಪಮಾನಕ್ಕೆ ಅನುಗುಣವಾಗಿ ಬಣ್ಣ ಬದಲಿಸುವ) ಗುಣದಿಂದಾಗಿ ಅದರ ಬಣ್ಣ ಬದಲಾಗುತ್ತದೆ. ಬಟ್ಟೆ ಒಂದೇ ಬಣ್ಣದ್ದಾಗಿರಬೇಕು ಎಂದೇನೂ ಇಲ್ಲ, ಅದರ ಮೈಮೇಲೆ ವಿವಿಧ ವಿನ್ಯಾಸಗಳನ್ನೂ ಮೂಡಿಸುವುದು ಸಾಧ್ಯವಂತೆ.

ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದ ಅನೇಕ ಬೆಳವಣಿಗೆಗಳ ಹಾಗೆ ಕೃತಕ ಛದ್ಮಕ್ಕೆ ಸಂಬಂಧಪಟ್ಟ ಸಂಶೋಧನೆಗಳು ಪ್ರಾರಂಭವಾಗಿದ್ದೂ ಸೈನ್ಯದ ಬಳಕೆಯ ಉದ್ದೇಶದಿಂದ. ಆದರೆ ಇದಕ್ಕೆ ಬೇರೆ ಉಪಯೋಗಗಳೂ ಇರುವುದು ಸಾಧ್ಯ. ಬಣ್ಣ ಬದಲಿಸುವ ಸಾಮರ್ಥ್ಯವಿರುವ ಬಟ್ಟೆಯಲ್ಲಿ ಶರ್ಟು ಹೊಲಿಸಿಕೊಂಡರೆ ಅದನ್ನು ಯಾವ ಬಣ್ಣದ ಪ್ಯಾಂಟಿನ ಜೊತೆಯಾದರೂ ಧರಿಸಬಹುದಲ್ಲ! ಅಷ್ಟೇ ಏಕೆ, ರೋಬೋ-ಗೋಸುಂಬೆಗೆ ಹೊದಿಸಿದಂತಹುದೇ ವಸ್ತುವನ್ನು ನಮ್ಮ ಕಾರಿಗೂ ಹೊದಿಸಿದರೆ ಕಾರಿನ ಬಣ್ಣವೂ ನಮ್ಮ ಶರ್ಟಿಗೆ ಮ್ಯಾಚಿಂಗ್ ಆಗಿರುವಂತೆ ನೋಡಿಕೊಳ್ಳಬಹುದು.

ಅಂದಹಾಗೆ ಶತ್ರುಗಳ ಕಣ್ಣಿಗೆ ಮಣ್ಣೆರಚಲು ವಿವಿಧ ತಂತ್ರಗಾರಿಕೆಗಳನ್ನು ಬಳಸುವುದು ಭೌತಿಕ ಜಗತ್ತಿಗೆ ಮಾತ್ರ ಸೀಮಿತವೇನಲ್ಲ. ಡಿಜಿಟಲ್ ಜಗತ್ತಿನಲ್ಲೂ ಅಸ್ತಿತ್ವದಲ್ಲಿರುವ ಈ ಪರಿಕಲ್ಪನೆ, ಮಾಹಿತಿ ಸುರಕ್ಷತೆಯ ಕ್ಷೇತ್ರದಲ್ಲಿ ಡಿಸೆಪ್ಷನ್ ತಂತ್ರಜ್ಞಾನವೆಂಬ ಹೆಸರಿನಲ್ಲಿ ಬಳಕೆಯಾಗುತ್ತದೆ.

ಮಾಹಿತಿ ಸುರಕ್ಷತೆಯ ಕ್ರಮಗಳನ್ನು ನೂರಕ್ಕೆ ನೂರರಷ್ಟು ಪರಿಣಾಮಕಾರಿಯಾಗಿ ಅಳವಡಿಸುವುದು ಕಷ್ಟ. ಮಾಹಿತಿಯ ಮಾಲೀಕರು ಚಾಪೆಯ ಕೆಳಗೆ ತೂರಿದರೆ ಅದನ್ನು ಕದಿಯಬಯಸುವ ಖದೀಮರು ರಂಗೋಲಿಯ ಕೆಳಗೆ ತೂರುವುದಕ್ಕೇ ಪ್ರಯತ್ನಿಸುತ್ತಾರೆ. ಇಂತಹ ಸನ್ನಿವೇಶದಲ್ಲಿ, ನಿರ್ದಿಷ್ಟ ಕಂಪ್ಯೂಟರ್ ಜಾಲವೊಂದಕ್ಕೆ ಖದೀಮರು ಲಗ್ಗೆಹಾಕಿದಾಗ, ನಕಲಿ ವ್ಯವಸ್ಥೆಗಳನ್ನು ಬಳಸಿ ಅವರ ದಿಕ್ಕುತಪ್ಪಿಸುವುದು ಹಾಗೂ ಆ ಮೂಲಕ ಸಂಭಾವ್ಯ ಹಾನಿಯನ್ನು ಸಾಧ್ಯವಾದಷ್ಟೂ ಕಡಿಮೆಮಾಡುವುದು ಡಿಸೆಪ್ಷನ್ ತಂತ್ರಜ್ಞಾನದ ಉದ್ದೇಶ.

ಈ ಉದ್ದೇಶಕ್ಕಾಗಿ ಅದು ಸಂಸ್ಥೆಯೊಂದರ ಕಂಪ್ಯೂಟರ್ ಜಾಲದುದ್ದಕ್ಕೂ ಹಲವು ನಕಲಿ ವ್ಯವಸ್ಥೆಗಳನ್ನು ರೂಪಿಸಿಡುತ್ತದೆ. ಈ ವ್ಯವಸ್ಥೆಗಳು ನೈಜವಾಗಿರುವಂತೆಯೇ ತೋರುವುದು ವಿಶೇಷ. ಜಾಲಕ್ಕೆ ಲಗ್ಗೆಹಾಕಿದ ಖದೀಮರು ತಮಗೆ ಬೇಕಾದ್ದು ಸಿಕ್ಕಿತು ಎಂದುಕೊಂಡು ಅಂತಹ ನಕಲಿ ವ್ಯವಸ್ಥೆಗಳನ್ನು ಪ್ರವೇಶಿಸಿದ ಕೂಡಲೇ ಈ ತಂತ್ರಜ್ಞಾನ ಜಾಲದ ಮಾಲೀಕರನ್ನು ಎಚ್ಚರಿಸುತ್ತದೆ. ಮುಂದೆ ಆಗಬಹುದಾದ ಹಾನಿಯ ನಿಯಂತ್ರಣಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಅವರಿಗೆ ಇದು ಅಗತ್ಯ ಮಾಹಿತಿ ಹಾಗೂ ಸಮಯಾವಕಾಶವನ್ನು ಒದಗಿಸುತ್ತದೆ. ಮಾಹಿತಿ ಸುರಕ್ಷತೆಗೆ ಹಿಂದೆಂದಿಗಿಂತ ಹೆಚ್ಚು ಪ್ರಾಮುಖ್ಯ ನೀಡಲಾಗುತ್ತಿರುವ ಹಿನ್ನೆಲೆಯಲ್ಲಿ ಇಂತಹ ತಂತ್ರಜ್ಞಾನಗಳ ಬಳಕೆ ಹೆಚ್ಚುತ್ತಿದ್ದು, ೨೦೨೬ರ ವೇಳೆಗೆ ಡಿಸೆಪ್ಷನ್ ತಂತ್ರಜ್ಞಾನದ ಜಾಗತಿಕ ಮಾರುಕಟ್ಟೆ ಮೌಲ್ಯ ೪.೨ ಶತಕೋಟಿ ಡಾಲರುಗಳಷ್ಟಾಗಬಹುದು ಎನ್ನುವುದು ಸದ್ಯದ ಅಂದಾಜು.

ಆಗಸ್ಟ್ ೨೪, ೨೦೨೧ರ ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಲೇಖನ, 'ಟೆಕ್ ನೋಟ' ಅಂಕಣದ ಎರಡನೆಯ ಬರಹ

'ಟೆಕ್ ನೋಟ' ಅಂಕಣದ ಎರಡನೆಯ ಬರಹ
'ಟೆಕ್ ನೋಟ' ಅಂಕಣದ ಎರಡನೆಯ ಬರಹವಿಜಯ ಕರ್ನಾಟಕ

Related Stories

No stories found.
logo
ಇಜ್ಞಾನ Ejnana
www.ejnana.com