ಬೆಂಗಳೂರಿಗೆ ಭಾರತದ ಸಿಲಿಕಾನ್ ಕಣಿವೆ ಎಂಬ ಹೆಸರು ಬರಲು ಕಾರಣ, ಇಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳು
ಬೆಂಗಳೂರಿಗೆ ಭಾರತದ ಸಿಲಿಕಾನ್ ಕಣಿವೆ ಎಂಬ ಹೆಸರು ಬರಲು ಕಾರಣ, ಇಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳುImage by Lukas Bieri from Pixabay

ಬೆಂಗಳೂರಿನ ಐಟಿ ಪ್ರಪಂಚ: ಹೇಗಿರಬಹುದು ಮುಂದಿನ ದಶಕ?

ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಭವಿಷ್ಯ ಹೇಗಿರಲಿದೆ ಎನ್ನುವುದು ಬೆಂಗಳೂರಿನಿಂದಲೇ ನಿರ್ಧಾರವಾಗುವ ದಿನಗಳು ಬರಲಿವೆ ಎನ್ನುವುದು ತಜ್ಞರ ಆಶಯ

ಅಮೆರಿಕಾದ ಕ್ಯಾಲಿಫೋರ್ನಿಯ ರಾಜ್ಯದಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ಬೇ ಏರಿಯಾ ಎಂಬುದೊಂದು ಪ್ರದೇಶವಿದೆ. ಇದರ ದಕ್ಷಿಣದ ತುದಿಯಲ್ಲಿರುವುದೇ ಸಿಲಿಕಾನ್ ಕಣಿವೆ. ಸಿಲಿಕಾನ್ ಎನ್ನುವುದೊಂದು ಮೂಲವಸ್ತು. ಮರಳಿನಲ್ಲಿ ಇದು ಯಥೇಚ್ಛವಾಗಿರುತ್ತದೆ. ಆದರೆ ಸಿಲಿಕಾನ್ ಕಣಿವೆಯ ಹೆಸರಿಗೆ ಕಾರಣ ಅಲ್ಲಿ ಮರಳು ಜಾಸ್ತಿ ಎನ್ನುವುದಲ್ಲ!

ಇಂದು ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿರುವ ಮೊಬೈಲ್, ಕಂಪ್ಯೂಟರ್ ಮುಂತಾದ ವಿದ್ಯುನ್ಮಾನ ಉಪಕರಣಗಳಲ್ಲಿ ಸಿಲಿಕಾನ್ ಹಾಗೂ ಅದರ ಸಂಯುಕ್ತಗಳು ವ್ಯಾಪಕವಾಗಿ ಬಳಕೆಯಾಗುತ್ತವೆ. ಈ ವಿದ್ಯುನ್ಮಾನ ಉಪಕರಣಗಳ ಸೃಷ್ಟಿ ಹಾಗೂ ಬಳಕೆಯ ಸುತ್ತ - ಅಂದರೆ ಮಾಹಿತಿ ತಂತ್ರಜ್ಞಾನ (ಐಟಿ) ಕ್ಷೇತ್ರದಲ್ಲಿ - ಹೆಚ್ಚುಹೆಚ್ಚು ಕೆಲಸ ನಡೆಯುವ ಸ್ಥಳವೇ ಸಿಲಿಕಾನ್ ಕಣಿವೆ. ಎಚ್‌ಪಿ, ಇಂಟೆಲ್, ಗೂಗಲ್, ಫೇಸ್‌ಬುಕ್, ಟ್ವಿಟರ್ - ಹೀಗೆ ಐಟಿ ಕ್ಷೇತ್ರದ ಅನೇಕ ದಿಗ್ಗಜ ಸಂಸ್ಥೆಗಳು ಒಂದಲ್ಲ ಒಂದು ರೀತಿಯಲ್ಲಿ ಸಿಲಿಕಾನ್ ಕಣಿವೆಯೊಡನೆ ಸಂಬಂಧ ಇಟ್ಟುಕೊಂಡಿವೆ. ಆ ಕ್ಷೇತ್ರದಲ್ಲಿ ಗಮನಾರ್ಹ ಬದಲಾವಣೆ ತಂದಿರುವ ಹಲವು ಹೊಸ ಕಲ್ಪನೆಗಳಿಗೆ, ಸಾಧನೆಗಳಿಗೆ ಈ ಕಣಿವೆಯೇ ತವರುಮನೆ.

ಭೂಮಿಯ ಒಟ್ಟು ಜನಸಂಖ್ಯೆ ೭೫೦ ಕೋಟಿಗೂ ಹೆಚ್ಚು. ಇದರಲ್ಲಿ ಮೂರನೇ ಎರಡು ಭಾಗದಷ್ಟು ಜನರ ಬಳಿ (ಅಂದಾಜು ೫೦೦ ಕೋಟಿ) ಮೊಬೈಲ್ ಫೋನ್ ಇದೆ. ಮೊಬೈಲ್ ಫೋನುಗಳ ಸಂಖ್ಯೆಯ ಸುಮಾರು ಅರ್ಧಭಾಗದಷ್ಟು (ಅಂದಾಜು ೨೦೦ ಕೋಟಿ) ಕಂಪ್ಯೂಟರುಗಳು ವಿಶ್ವದ ವಿವಿಧೆಡೆಗಳಲ್ಲಿ ಬಳಕೆಯಾಗುತ್ತಿವೆ. ಹೀಗಿರುವಾಗ ಇಡೀ ಭೂಮಿಗೆ ಒಂದೇ ಒಂದು ಸಿಲಿಕಾನ್ ಕಣಿವೆ ಎಲ್ಲಿ ಸಾಕಾಗುತ್ತದೆ?

ಹೀಗಾಗಿಯೇ ಬೇರೆಬೇರೆ ದೇಶಗಳಲ್ಲಿ ಅಲ್ಲಿನವೇ ಆದ ಸಿಲಿಕಾನ್ ಕಣಿವೆಗಳು ರೂಪುಗೊಂಡಿವೆ. ರಷ್ಯಾ, ಜರ್ಮನಿ, ಚೀನಾ ದೇಶಗಳಲ್ಲೆಲ್ಲ ಇರುವಂತೆ ನಮ್ಮ ದೇಶದಲ್ಲೂ ಸಿಲಿಕಾನ್ ಕಣಿವೆ ಇದೆ. ಮತ್ತು ಅದು ನಮ್ಮ ಬೆಂಗಳೂರಿನಲ್ಲೇ ಇದೆ!

ಭಾರತದ ಸಿಲಿಕಾನ್ ಕಣಿವೆ ಎಂಬ ಹೆಸರು ಬರಲು ಕಾರಣ, ಇಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳು. ಇದು ಹಲವು ದಶಕಗಳಿಂದಲೇ ಎಲ್ಲರಿಗೂ ತಿಳಿದಿರುವ ವಿಷಯ. ಬೆಂಗಳೂರನ್ನೇ ಕೇಂದ್ರವಾಗಿಟ್ಟುಕೊಂಡ ಇನ್‌ಫೋಸಿಸ್ - ವಿಪ್ರೋಗಳಿರಲಿ, ಐಬಿಎಂ - ಆಕ್ಸೆಂಚರ್‌ಗಳಂತಹ ಬಹುರಾಷ್ಟ್ರೀಯ ಸಂಸ್ಥೆಗಳೇ ಇರಲಿ, ಐಟಿ ಕ್ಷೇತ್ರದ ಅಆಇಈ ಗೊತ್ತಿಲ್ಲದವರೂ ಅವುಗಳ ಹೆಸರು ಕೇಳಿರುತ್ತಾರೆ.

ಅಮೆರಿಕಾದಂತೆ ನಮ್ಮೂರಿನಲ್ಲೂ ಸಿಲಿಕಾನ್ ಕಣಿವೆಯಿದೆ ಎಂದು ಹೇಳಿಕೊಂಡರೂ, ಬಹಳ ವರ್ಷಗಳ ಕಾಲ ನಮ್ಮ ಸಿಲಿಕಾನ್ ಕಣಿವೆಯಲ್ಲಿ ಹೆಚ್ಚು ಸಂಕೀರ್ಣವಾದ ಕೆಲಸಗಳು ನಡೆಯುತ್ತಿರಲಿಲ್ಲ. ಹೊಸ ಕಲ್ಪನೆಗಳು ಹುಟ್ಟಿ ಬೆಳೆದದ್ದೂ ಅಪರೂಪವೇ. ವಿದೇಶಗಳಿಗಿಂತ ಕಡಿಮೆ ವೆಚ್ಚದಲ್ಲಿ ನಾವು ಐಟಿ ಕೆಲಸ ಮಾಡಬಲ್ಲೆವು ಎನ್ನುವುದೊಂದೇ ಪ್ರಾರಂಭಿಕ ವರ್ಷಗಳಲ್ಲಿ ನಮ್ಮ ವ್ಯವಹಾರವನ್ನು ವೃದ್ಧಿಸಿದ ವಿಶಿಷ್ಟ ಅಂಶವಾಗಿತ್ತು.

ಮಾಹಿತಿ ತಂತ್ರಜ್ಞಾನ ಸಂಬಂಧಿತ ಕೆಲಸಗಳನ್ನು ಹೊರಗುತ್ತಿಗೆ ನೀಡುವ (ಔಟ್‌ಸೋರ್ಸಿಂಗ್) ಅಭ್ಯಾಸ ಪ್ರಾರಂಭವಾದ ಸಮಯದಲ್ಲಂತೂ ಈ ಕ್ಷೇತ್ರದ ಬಹುಪಾಲು ಕೆಲಸ ನಡೆಯುತ್ತಿದ್ದದ್ದು ನಮ್ಮ ದೇಶದಲ್ಲೇ. ತಮ್ಮ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವುದು, ಅವರ ಕೆಲಸಗಳನ್ನು ನಮ್ಮ ಸಂಸ್ಥೆಗಳಿಗೆ ವಹಿಸಿಕೊಡುವುದು, ತಮ್ಮ ಒಟ್ಟಾರೆ ವೆಚ್ಚವನ್ನು ಕಡಿಮೆಮಾಡಿಕೊಳ್ಳುವುದು ಬಹುಕಾಲದವರೆಗೂ ವಿದೇಶಿ ಸಂಸ್ಥೆಗಳ ಪರಿಪಾಠವಾಗಿತ್ತು. ಹೀಗೆ ಯಾರದಾದರೂ ಕೆಲಸ ಹೋದಾಗ 'ಅವರ ಕೆಲಸ ಬೆಂಗಳೂರಾಯಿತು' (ಬ್ಯಾಂಗಲೋರ್‌‍ಡ್) ಎಂದು ಹೇಳುವ ಅಭ್ಯಾಸವೂ ಬೆಳೆದುಬಿಟ್ಟಿತ್ತು.

ಆದರೆ ಈಗ, ಕೆಲವೇ ವರ್ಷಗಳ ಅವಧಿಯಲ್ಲಿ, ಪರಿಸ್ಥಿತಿ ಗಮನಾರ್ಹವಾಗಿ ಬದಲಾಗಿದೆ. ಭಾರತೀಯ ತಂತ್ರಜ್ಞರು ಹೇಳಿದ ಕೆಲಸವನ್ನು ಮಾತ್ರ ಮಾಡುವವರು ಎಂಬ ಅಭಿಪ್ರಾಯ ಬದಲಾಗಿ ಜಾಗತಿಕ ಮಟ್ಟದ ಹಲವು ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳು ಬೆಂಗಳೂರಿಗೆ ಬಂದಿದ್ದು ಈ ಬದಲಾವಣೆಯ ಪ್ರಮುಖ ಹಂತಗಳಲ್ಲೊಂದು. ಇದೇರೀತಿ ನಮ್ಮ ಕೆಲಸವೇನಿದ್ದರೂ ವಿದೇಶಿ ಗ್ರಾಹಕರಿಗೆ ಮಾತ್ರ ಎನ್ನುವ ಧೋರಣೆಯೂ ಬದಲಾಗಿ ಭಾರತೀಯ ಬಳಕೆದಾರರನ್ನೇ ಉದ್ದೇಶವಾಗಿಟ್ಟುಕೊಂಡ ಹಲವು ತಂತ್ರಾಂಶಗಳು, ತಂತ್ರಜ್ಞಾನಗಳು ಇದೀಗ ಬೆಂಗಳೂರಿನಲ್ಲಿ ಅಭಿವೃದ್ಧಿಯಾಗುತ್ತಿವೆ.

ಯಾವುದೋ ಬ್ಯಾಂಕಿಗೋ ಕಚೇರಿಗೋ ಬೇಕಾದ ತಂತ್ರಾಂಶಗಳ ಸೃಷ್ಟಿ - ನಿರ್ವಹಣೆಯ ಕೆಲಸಗಳಿಗೆ ಮಾತ್ರವೇ ಸೀಮಿತವಾಗದ ನಮ್ಮ ತಂತ್ರಜ್ಞರು ಇದೀಗ ಕೃಷಿ ತಂತ್ರಜ್ಞಾನ, ಆರೋಗ್ಯ ರಕ್ಷಣೆ, ಬಯೋಟೆಕ್ ಮುಂತಾದ ಹಲವು ಕ್ಷೇತ್ರಗಳಲ್ಲಿ ಕೆಲಸಮಾಡುತ್ತಿದ್ದಾರೆ. ತಂತ್ರಜ್ಞಾನದ ಸವಲತ್ತುಗಳನ್ನು ನಮ್ಮ ಭಾಷೆಗಳಿಗೆ ತಂದುಕೊಡುವ ಕೆಲಸಗಳೂ ಬೆಂಗಳೂರಿನಲ್ಲಿ ನಡೆದಿವೆ. ಇಂತಹ ಹಲವು ಉದ್ದೇಶಗಳಿಗೆ ಬಳಕೆಯಾಗುತ್ತಿರುವ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ವಿಷಯದಲ್ಲೂ ಬೆಂಗಳೂರು ಇಂದು ಮುಂಚೂಣಿಯಲ್ಲಿದೆ.

ತಂತ್ರಾಂಶ ಅಭಿವೃದ್ಧಿಯ ಜೊತೆಗೆ ಯಂತ್ರಾಂಶ ವಿನ್ಯಾಸದಲ್ಲೂ ನಮ್ಮ ಸಂಸ್ಥೆಗಳು ಹೆಸರುಮಾಡುತ್ತಿವೆ. ಸೆಮಿಕಂಡಕ್ಟರ್ ಚಿಪ್ ವಿನ್ಯಾಸ ಮತ್ತು ಸಂಶೋಧನೆ ಕ್ಷೇತ್ರದಲ್ಲಿ ಬೆಂಗಳೂರಿನ ಸಂಸ್ಥೆಗಳ ಸಾಧನೆ ಕಡಿಮೆಯೇನಲ್ಲ. ರೋಬೋಟಿಕ್ಸ್, ಆಟೋಮೇಷನ್, ಐ.ಓ.ಟಿ ಮೊದಲಾದ ಕ್ಷೇತ್ರಗಳಲ್ಲೂ ಬೆಂಗಳೂರಿನ ಸಂಸ್ಥೆಗಳು ಕಾರ್ಯನಿರತರಾಗಿವೆ.

ಮುಂದಿನ ದಿನಗಳಲ್ಲಿ ಈ ಬೆಳವಣಿಗೆಗೆ ಇನ್ನೂ ಹೆಚ್ಚಿನ ವೇಗ ದೊರಕಲಿದೆ ಎನ್ನುವುದು ತಜ್ಞರ ಅಂದಾಜು. ಸಾಂಪ್ರದಾಯಿಕವಾದ ಐಟಿ ಕೆಲಸಗಳು ಕಡಿಮೆಯಾದರೂ ಕೂಡ ಮಾಹಿತಿ ತಂತ್ರಜ್ಞಾನದ ಹೊಸ ಆಯಾಮಗಳನ್ನು ಬೆಳೆಸುವ ನಿಟ್ಟಿನಲ್ಲಿ ಬೆಂಗಳೂರಿನ ಕೊಡುಗೆ ಗಮನಾರ್ಹವಾಗಿರಲಿದೆ ಎಂದು ಅವರು ಹೇಳುತ್ತಾರೆ.

ಬೇರೆಯವರು ಹೇಳಿದ ಕೆಲಸ ಮಾಡುವುದಷ್ಟೇ ಅಲ್ಲ, ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಭವಿಷ್ಯ ಹೇಗಿರಲಿದೆ ಎನ್ನುವುದು ಬೆಂಗಳೂರಿನಿಂದಲೇ ನಿರ್ಧಾರವಾಗುವ ದಿನಗಳು ಬರಲಿವೆ ಎನ್ನುವುದು ಅವರ ಆಶಯ. ಹಾಗೆಯೇ ಆಗಲಿ, ಬೆಂಗಳೂರನ್ನು ಭಾರತದ ಸಿಲಿಕಾನ್ ಕಣಿವೆ ಎನ್ನುವ ಬದಲಿಗೆ ಸಿಲಿಕಾನ್ ವ್ಯಾಲಿಯನ್ನು ಅಮೆರಿಕಾದ ಬೆಂಗಳೂರು ಎಂದು ಕರೆಯುವ ದಿನ ಬರಲಿ ಎನ್ನುವುದು ನಮ್ಮದೂ ಹಾರೈಕೆ!

೨೦೨೦ರ ಮಲ್ಲಿಗೆ ಪಂಚಾಂಗದರ್ಶಿನಿಯಲ್ಲಿ ಪ್ರಕಟವಾಗಿರುವ ಲೇಖನ

ಬೆಂಗಳೂರಿಗೆ ಭಾರತದ ಸಿಲಿಕಾನ್ ಕಣಿವೆ ಎಂಬ ಹೆಸರು ಬರಲು ಕಾರಣ, ಇಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳು
ವೈಟೂಕೆ ನೆನಪಿಗೆ ಇಪ್ಪತ್ತು ವರ್ಷ!

Related Stories

No stories found.
logo
ಇಜ್ಞಾನ Ejnana
www.ejnana.com