ಕಂಪ್ಯೂಟರ್ ಪರಿಭಾಷೆಯಲ್ಲಿ 'ಕೆ' ಎನ್ನುವುದು ಸಾವಿರವನ್ನು ಸೂಚಿಸುತ್ತದೆ. ೨ಕೆ ಎಂದರೆ ಎರಡು ಸಾವಿರ. ಇಯರ್ ಟೂ ಥೌಸಂಡ್ ಎನ್ನುವುದರ ಸಂಕ್ಷೇಪವೇ ವೈಟೂಕೆ!
ಕಂಪ್ಯೂಟರ್ ಪರಿಭಾಷೆಯಲ್ಲಿ 'ಕೆ' ಎನ್ನುವುದು ಸಾವಿರವನ್ನು ಸೂಚಿಸುತ್ತದೆ. ೨ಕೆ ಎಂದರೆ ಎರಡು ಸಾವಿರ. ಇಯರ್ ಟೂ ಥೌಸಂಡ್ ಎನ್ನುವುದರ ಸಂಕ್ಷೇಪವೇ ವೈಟೂಕೆ!Image by Mediamodifier from Pixabay

ವೈಟೂಕೆ ನೆನಪಿಗೆ ಇಪ್ಪತ್ತು ವರ್ಷ!

ಇನ್ನು ೨೦ ದಿನಗಳಲ್ಲಿ ೨೦೨೦ರ ಆಗಮನ ಆಗುತ್ತಿದೆ. ೨೦ ವರ್ಷಗಳ ಹಿಂದೆ, ಇದೇ ಸಮಯದಲ್ಲಿ ಏನೆಲ್ಲ ನಡೆದಿತ್ತು?

ಕಳೆದ ತಿಂಗಳ ಪ್ರಾರಂಭದಲ್ಲೊಂದು ದಿನ, ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆಯ ಸರ್ವರುಗಳ ಕಾರ್ಯಾಚರಣೆಯಲ್ಲಿ ಯಾವುದೋ ಕಾರಣಕ್ಕೆ ಅಡಚಣೆಯಾಯಿತು. ಅಷ್ಟಾದದ್ದೇ ತಡ, ದೇಶದೆಲ್ಲೆಡೆಯ ವಿಮಾನ ನಿಲ್ದಾಣದ ಚೆಕಿನ್ ಕಟ್ಟೆಗಳಲ್ಲಿ ಸರತಿಯ ಸಾಲು ವಿಪರೀತ ಉದ್ದವಾಗಿ ಬೆಳೆಯಿತು, ನಿಗದಿತ ಸಮಯ ಮೀರಿ ಗಂಟೆಯಾದರೂ ವಿಮಾನ ನೆಲಬಿಟ್ಟು ಹಾರಲೇ ಇಲ್ಲ, ಮಾಧ್ಯಮಗಳಲ್ಲೆಲ್ಲ ಇದೊಂದು ದೊಡ್ಡ ಸುದ್ದಿಯೇ ಆಗಿಹೋಯಿತು.

ಕೆಲವೇ ಗಂಟೆಗಳಲ್ಲಿ ಈ ಗೊಂದಲವೆಲ್ಲ ಬಗೆಹರಿದರೂ, ಈ ಘಟನೆ ನಮಗೊಂದು ವಿಷಯವನ್ನು ನೆನಪಿಸಿತು. ನಮ್ಮ ದೈನಂದಿನ ಬದುಕಿನಲ್ಲಿ - ಗೊತ್ತಿದ್ದೋ ಗೊತ್ತಿಲ್ಲದೆಯೋ - ನಾವೆಲ್ಲ ಕಂಪ್ಯೂಟರುಗಳನ್ನು ಎಷ್ಟು ಗಾಢವಾಗಿ ಅವಲಂಬಿಸಿದ್ದೇವೆ ಎನ್ನುವುದೇ ಆ ವಿಷಯ.

ನಾವು ಇಷ್ಟೆಲ್ಲ ಗಾಢವಾಗಿ ಅವಲಂಬಿಸಿರುವ ಕಂಪ್ಯೂಟರುಗಳು ಕೆಲವೇ ಗಂಟೆಗಳ ಕಾಲ ಸರಿಯಾಗಿ ಕೆಲಸಮಾಡದಿದ್ದರೆ ಇಷ್ಟೆಲ್ಲ ಫಜೀತಿಯಾಗುತ್ತದೆ. ಇನ್ನು, ಯಾವತ್ತೋ ಒಂದು ದಿನ ಎದ್ದು ನೋಡಿದಾಗ, ಎಲ್ಲ ಕಂಪ್ಯೂಟರುಗಳೂ ಏಕಕಾಲಕ್ಕೆ ಕೈಕೊಟ್ಟಿದ್ದರೆ ನಮ್ಮ ಕತೆ?

ಹೊಸ ಸಹಸ್ರಮಾನ ಆರಂಭವಾಗುತ್ತಿದ್ದಂತೆಯೇ ಹೀಗೆ ಆಗಿಬಿಡಬಹುದು ಎಂಬ ಭೀತಿ ವಿಶ್ವದೆಲ್ಲೆಡೆ ವ್ಯಾಪಕವಾಗಿ ಹರಡಿತ್ತು. ಇಸವಿ ೨೦೦೦ದ ಜನವರಿ ೧ರಂದು ಕಾಣಿಸಿಕೊಳ್ಳಲಿದೆಯೆಂದು ಭಾವಿಸಲಾಗಿದ್ದ ಈ ಸನ್ನಿವೇಶವೇ 'ಇಯರ್ ೨೦೦೦' ಸಮಸ್ಯೆ. ಸಂಕ್ಷಿಪ್ತವಾಗಿ 'ವೈ೨ಕೆ' ಸಮಸ್ಯೆ ಎಂದು ಕರೆಯುತ್ತಿದ್ದದ್ದು ಇದನ್ನೇ.

ಇಸವಿಯ ಪ್ರಾರಂಭದ ಅಂಕಿ ಬದಲಾಗುವುದನ್ನು ನೋಡುವುದು ಎಲ್ಲರಿಗೂ ದೊರಕುವ ಅವಕಾಶವಲ್ಲ. ಇಂಥದ್ದೊಂದು ಸ್ಮರಣೀಯ ಅವಕಾಶವನ್ನು ಸಂಭ್ರಮಿಸುವ ಬದಲು ಅದರ ಬಗ್ಗೆ ಭೀತಿ ಉಂಟಾಗಿದ್ದು ಏಕೆ? ಅದೊಂದು ಕುತೂಹಲಕರ ಕತೆ.

ಈ ಕತೆ ಪ್ರಾರಂಭವಾಗುವುದು ಮಾಹಿತಿ ತಂತ್ರಜ್ಞಾನ ಕ್ಷೇತ್ರ ಬೆಳೆಯಲು ಶುರುವಾದ ಸಂದರ್ಭದಲ್ಲಿ. ಪ್ರಯೋಗಾಲಯಗಳಿಗೆ ಮಾತ್ರವೇ ಸೀಮಿತವಾಗಿದ್ದ ಕಂಪ್ಯೂಟರುಗಳು ಆಗಷ್ಟೇ ಬೇರೆಬೇರೆ ಕ್ಷೇತ್ರಗಳಿಗೂ ಕಾಲಿಡಲು ಶುರುಮಾಡಿದ್ದವು. ಬೇರೆಬೇರೆ ಉಪಯೋಗಗಳಿಗೆ ಬೇಕಾದ ತಂತ್ರಾಂಶಗಳೂ (ಸಾಫ್ಟ್‌ವೇರ್) ಸಿದ್ಧವಾಗುತ್ತಿದ್ದವು.

ತಂತ್ರಾಂಶ ಎಂದಮೇಲೆ ಅದು ಒಂದಷ್ಟು ದತ್ತಾಂಶವನ್ನು (ಡೇಟಾ) ನಿಭಾಯಿಸಬೇಕು, ಉಳಿಸಿಟ್ಟುಕೊಳ್ಳಲೂಬೇಕು. ಬಹಳಷ್ಟು ತಂತ್ರಾಂಶಗಳಲ್ಲಿ ಹೀಗೆ ಉಪಯೋಗಕ್ಕೆ ಬರುವ ದತ್ತಾಂಶಗಳ ಪೈಕಿ ದಿನಾಂಕಗಳಿಗೆ (ಡೇಟ್) ಮಹತ್ವದ ಸ್ಥಾನವಿದೆ.

ಯಾವುದೇ ದಿನಾಂಕದಲ್ಲಿ ಮೂರು ಭಾಗಗಳಿರುತ್ತವಲ್ಲ, ದಿನ - ತಿಂಗಳು - ವರ್ಷ, ಅದನ್ನು ಉಳಿಸಿಡಲು ಸಾಮಾನ್ಯವಾಗಿ ೮ ಅಂಕಿಗಳು ಬೇಕಾಗುತ್ತವೆ: ದಿನಕ್ಕೆ ಎರಡು, ತಿಂಗಳಿಗೆ ಎರಡು, ಹಾಗೂ ವರ್ಷಕ್ಕೆ ನಾಲ್ಕು. ವರ್ಷವನ್ನು ನಾಲ್ಕು ಅಂಕಿಗಳ ಬದಲು ಎರಡೇ ಅಂಕಿಗಳಲ್ಲಿ ಉಳಿಸಿಟ್ಟರೆ (ಉದಾ: ೧೯೮೩ರ ಬದಲು ೮೩) ಬೇಕಾಗುವ ಒಟ್ಟು ಶೇಖರಣಾ ಸಾಮರ್ಥ್ಯದಲ್ಲಿ ನಾಲ್ಕನೇ ಒಂದರಷ್ಟು ಉಳಿತಾಯವಾಗುತ್ತದೆ ಎಂದು ಕೆಲವು ತಜ್ಞರು ವಾದಿಸಿದರು. ಕಂಪ್ಯೂಟರಿನ ಶೇಖರಣಾ ಸಾಮರ್ಥ್ಯ ಬಹಳ ದುಬಾರಿಯಾಗಿದ್ದ ಆ ಕಾಲದಲ್ಲಿ ಈ ವಾದ ಅನೇಕರನ್ನು ಆಕರ್ಷಿಸಿತು.

ಇದರ ಪರಿಣಾಮವಾಗಿ, ಬಹಳಷ್ಟು ತಂತ್ರಾಂಶಗಳು ದಿನಾಂಕಗಳನ್ನು ಉಳಿಸಿಡುವಾಗ ವರ್ಷಕ್ಕೆ ಎರಡೇ ಅಂಕಿಗಳನ್ನು ಕೊಟ್ಟವು.

ಈ ಪರಿಪಾಠದಿಂದ ಮೊದಲಿಗೆ ಯಾವ ತೊಂದರೆಯೂ ಆಗಲಿಲ್ಲ. ಆದರೆ ೨೦೦೦ನೇ ಇಸವಿ ಸಮೀಪಿಸಿದಂತೆ ಕಂಪ್ಯೂಟರ್ ವಿಜ್ಞಾನಿಗಳನ್ನು ಒಂದು ಆತಂಕ ಕಾಡಲು ಶುರುಮಾಡಿತು: ೧೯೯೯ ಮುಗಿದ ನಂತರ ಶುರುವಾಗುವ ಹೊಸವರ್ಷ ೨೦೦೦ ಎಂದು ಕಂಪ್ಯೂಟರುಗಳಿಗೆ ಗೊತ್ತಾಗದಿದ್ದರೆ? ಅವೆಲ್ಲ ಹೊಸವರ್ಷವನ್ನು ೧೯೦೦ ಎಂದು ಭಾವಿಸಿಬಿಟ್ಟರೆ?

ಒಂದುವೇಳೆ ಹಾಗೇನಾದರೂ ಆದರೆ ಪರಿಣಾಮ ಗಂಭೀರವಾಗುತ್ತದೆ ಎನ್ನುವುದು ಅವರಿಗೆ ಗೊತ್ತಿತ್ತು. ಬ್ಯಾಂಕುಗಳ ಬಡ್ಡಿ ಲೆಕ್ಕಾಚಾರ, ವಿಮಾನಗಳ ವೇಳಾಪಟ್ಟಿ, ವಿದ್ಯುತ್ ಉತ್ಪಾದನಾ ಕೇಂದ್ರಗಳ ಸುರಕ್ಷತಾ ವ್ಯವಸ್ಥೆ ಸೇರಿದಂತೆ ಅದೆಷ್ಟೋ ಕೆಲಸಗಳಲ್ಲಿ ಇದು ಏರುಪೇರು ಉಂಟುಮಾಡುವ ಸಾಧ್ಯತೆ ಇತ್ತು.

ಈ ಸಂಭಾವ್ಯ ಸಮಸ್ಯೆಯನ್ನೇ ಅವರು 'ವೈಟೂಕೆ' ಸಮಸ್ಯೆಯೆಂದು ಗುರುತಿಸಿದರು. ಕಂಪ್ಯೂಟರ್ ಪರಿಭಾಷೆಯಲ್ಲಿ 'ಕೆ' ಎನ್ನುವುದು ಸಾವಿರವನ್ನು ಸೂಚಿಸುತ್ತದೆ. ಟೂಕೆ ಎಂದರೆ ಎರಡು ಸಾವಿರ. ಇಯರ್ ಟೂ ಥೌಸಂಡ್ ಎನ್ನುವುದರ ಸಂಕ್ಷೇಪವೇ ವೈಟೂಕೆ!

ವೈಟೂಕೆ ಸಮಸ್ಯೆ ಉಂಟಾಗುವ ಸಾಧ್ಯತೆ ಪ್ರಪಂಚದೆಲ್ಲೆಡೆ ಸಂಚಲನವನ್ನೇ ಸೃಷ್ಟಿಸಿತು. ತಂತ್ರಾಂಶಗಳನ್ನು ಸರಿಪಡಿಸುವ, ವರ್ಷಗಳನ್ನು ಎರಡರ ಬದಲು ನಾಲ್ಕು ಅಂಕಿಯಲ್ಲಿ ಉಳಿಸಿಡುವ ಕೆಲಸ ಭರದಿಂದ ಶುರುವಾಯಿತು. ಪ್ರತ್ಯೇಕ ಯಂತ್ರಾಂಶಗಳಲ್ಲಿ (ಹಾರ್ಡ್‌ವೇರ್) ಅಡಕವಾಗಿರಬಹುದಾದ ತಂತ್ರಾಂಶಗಳನ್ನು ಬದಲಿಸುವ ಕೆಲಸವನ್ನೂ ಅದರ ನಿರ್ಮಾತೃಗಳು ಪ್ರಾರಂಭಿಸಿದರು.

ಇದೆಲ್ಲದರ ಪರಿಣಾಮವಾಗಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದತ್ತ ಅಗಾಧ ಪ್ರಮಾಣದ ಹಣ ಹರಿದು ಬಂತು, ಲಕ್ಷಾಂತರ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾದವು. ಅದಾಗಲೇ ಬೆಳವಣಿಗೆಯ ಹಾದಿಯಲ್ಲಿದ್ದ ಭಾರತೀಯ ಐಟಿ ಉದ್ದಿಮೆಯ ಪಾಲಿಗಂತೂ ಈ ಸನ್ನಿವೇಶ ವೇಗವರ್ಧಕದಂತೆ ಒದಗಿಬಂತು. ಅಸಂಖ್ಯ ಭಾರತೀಯರಿಗೆ ಉದ್ಯೋಗಾವಕಾಶ ರೂಪಿಸಿಕೊಟ್ಟ ವೈಟೂಕೆ ಭೀತಿ, ಜಗತ್ತಿನೆದುರು ನಾವು ನಮ್ಮ ಸಾಮರ್ಥ್ಯವನ್ನು ಸಾಬೀತುಮಾಡುವುದಕ್ಕೂ ಪರೋಕ್ಷವಾಗಿ ನೆರವಾಯಿತು. ದಿನಾಂಕದ ಸಮಸ್ಯೆಯಿದ್ದ ತಂತ್ರಾಂಶಗಳನ್ನು ಕ್ಷಿಪ್ರವಾಗಿ ಬದಲಿಸುವಲ್ಲಿ, ಬದಲಾವಣೆಗಳನ್ನು ಪರೀಕ್ಷಿಸಿ ಎಲ್ಲವೂ ಸರಿಯಿದೆ ಎಂದು ಖಾತ್ರಿಪಡಿಸಿಕೊಳ್ಳುವಲ್ಲಿ ನಮ್ಮ ತಂತ್ರಜ್ಞರು ವಿದೇಶಿ ತಜ್ಞರ ಸಮಕ್ಕೂ ಕೆಲಸಮಾಡಿದರು.

ಇಷ್ಟೆಲ್ಲ ಆದಮೇಲೆ ಡಿಸೆಂಬರ್ ೩೧, ೧೯೯೯ರ ರಾತ್ರಿ ಏನೆಲ್ಲ ನಡೆಯಿತು? ಎಲ್ಲಾದರೂ ಅನಾಹುತಗಳಾದವೇ? ಊಹೂಂ. ಎಲ್ಲೋ ಒಂದೆರಡು ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿ ಇಡೀ ಕಂಪ್ಯೂಟರ್ ಪ್ರಪಂಚ ಸಂತೋಷವಾಗಿಯೇ ಹೊಸವರ್ಷವನ್ನು ಪ್ರವೇಶಿಸಿತು. ವೈಟೂಕೆ ಸಮಸ್ಯೆ ಬಗ್ಗೆ ಹೆದರಿಕೊಂಡಿದ್ದ ದೇಶಗಳ ಮಾತು ಹಾಗಿರಲಿ, ಆ ಬಗ್ಗೆ ಹೆಚ್ಚೇನೂ ತಲೆಕೆಡಿಸಿಕೊಂಡಿರದ ರಷ್ಯಾ, ಕೊರಿಯಾಗಳಲ್ಲೂ ಐಟಿ ವ್ಯವಸ್ಥೆಗಳು ಸರಿಯಾಗಿಯೇ ಇದ್ದವು.

ವೈಟೂಕೆ ಸಮಸ್ಯೆ ಒಂದು ಅಕಾರಣ ಭೀತಿಯಾಗಿತ್ತೋ, ಅಥವಾ ಮಾಡಿದ ಅಷ್ಟೆಲ್ಲ ಕೆಲಸ ನೈಜ ಸಮಸ್ಯೆಯನ್ನೇ ಬಗೆಹರಿಸಿತೋ - ಈ ಪ್ರಶ್ನೆ ಇನ್ನೂ ಹಾಗೆಯೇ ಉಳಿದಿದೆ. ಪದೇಪದೇ ಕೇಳಸಿಗುತ್ತಿದ್ದ ಪ್ರಳಯದ ಮುನ್ಸೂಚನೆಗಳ ಹೋಲಿಕೆಯಲ್ಲಿ ಆಗ ಸ್ವಲ್ಪ ಹೈಟೆಕ್ ಎನ್ನಿಸಿದ್ದ ಈ ಸಮಸ್ಯೆಯ ನೆನಪು ಕೂಡ, ಇಪ್ಪತ್ತು ವರ್ಷಗಳ ನಂತರವೂ, ಇನ್ನೂ ಹಸಿರಾಗಿಯೇ ಉಳಿದಿದೆ.

ಡಿಸೆಂಬರ್ ೨೦೧೯ರ ತುಷಾರದಲ್ಲಿ ಪ್ರಕಟವಾದ ಲೇಖನ

Related Stories

No stories found.
logo
ಇಜ್ಞಾನ Ejnana
www.ejnana.com