ನೂರೆಂಟು ಬಗೆಯ ಸಂಗತಿಗಳು ಒಬ್ಬರಿಂದೊಬ್ಬರಿಗೆ ಹರಡುತ್ತ ಅಂತರಜಾಲದಲ್ಲಿ ವೈರಲ್ ಆಗಬಲ್ಲವು
ನೂರೆಂಟು ಬಗೆಯ ಸಂಗತಿಗಳು ಒಬ್ಬರಿಂದೊಬ್ಬರಿಗೆ ಹರಡುತ್ತ ಅಂತರಜಾಲದಲ್ಲಿ ವೈರಲ್ ಆಗಬಲ್ಲವುImage by Gordon Johnson from Pixabay

'ವೈರಲ್ ಆಗುವುದು' ಎಂದರೇನು?

ಮೈಸೂರು ಪಾಕ್ ಜೋಕು ವೈರಲ್ ಆಯಿತು ಎನ್ನುತ್ತಿದ್ದಾರಲ್ಲ, ಹಾಗೆಂದರೇನು?

ವೈರಸ್ಸುಗಳಿವೆಯಲ್ಲ, ಜೀವಜಗತ್ತಿನವು, ಒಂದೆಡೆಯಿಂದ ಇನ್ನೊಂದೆಡೆಗೆ ಕ್ಷಿಪ್ರವಾಗಿ ಸಾಗುವಲ್ಲಿ ಅವನ್ನು ಬಿಟ್ಟರಿಲ್ಲ. ಸೊಳ್ಳೆಗಳ ಮೂಲಕವೋ ನೀರು-ಗಾಳಿಯ ಮೂಲಕವೋ ಅವು ಹರಡುತ್ತಲೇ ಹೋಗುತ್ತವೆ, ಅದೆಷ್ಟೋ ಜನರಿಗೆ ರೋಗಗಳನ್ನು ಅಂಟಿಸುತ್ತವೆ.

ಡಿಜಿಟಲ್ ಜಗತ್ತಿನ ವೈರಸ್ಸುಗಳೂ ಜೀವಜಗತ್ತಿನ ವೈರಸ್ಸುಗಳಂತೆಯೇ. ಒಂದೆಡೆಯಿಂದ ಇನ್ನೊಂದೆಡೆಗೆ ಸಾಗುತ್ತ ಸಿಕ್ಕ ಕಂಪ್ಯೂಟರು - ಸ್ಮಾರ್ಟ್‌ಫೋನುಗಳಿಗೆಲ್ಲ ತೊಂದರೆಕೊಡುವುದೇ ಅವುಗಳ ಕೆಲಸ.

ಈ ವೈರಸ್ಸುಗಳು ಹರಡುವ ರೀತಿಯಿದೆಯಲ್ಲ, ಅದನ್ನೇ ಅನುಕರಿಸುವ ಇನ್ನೊಂದು ವಿದ್ಯಮಾನವೂ ಈಚೆಗೆ ಹೆಸರುಮಾಡುತ್ತಿದೆ. ಅಂತರಜಾಲದ ಮಾಧ್ಯಮ ಬಳಸಿ - ಜಾಹೀರಾತಿನ ದುಬಾರಿ ವೆಚ್ಚವಿಲ್ಲದೆಯೇ - ಅಪಾರ ಪ್ರಚಾರ ಗಿಟ್ಟಿಸಿಕೊಳ್ಳುವ ಸಂಗತಿಗಳು ಬಳಸುವ ತಂತ್ರದ ಹೆಸರೂ 'ವೈರಲ್' ಎಂದೇ.

ಜನರ ಮನಸ್ಸನ್ನು ತಟ್ಟುವ ಭಾವನಾತ್ಮಕ ವಿಷಯಗಳಿಂದ ಪ್ರಾರಂಭಿಸಿ ವಿವಿಧ ಉತ್ಪನ್ನಗಳ ಜಾಹೀರಾತಿನವರೆಗೆ ಅನೇಕ ಸಂಗತಿಗಳು ಅಂತರಜಾಲದಲ್ಲಿ ಒಬ್ಬರಿಂದೊಬ್ಬರಿಗೆ ಹರಡುತ್ತ ವೈರಲ್ ಆಗಬಲ್ಲವು. ಜೋಕುಗಳು, ಸುಳ್ಳು ಸುದ್ದಿಗಳು, ಅವಹೇಳನಕಾರಿ ಸಂದೇಶಗಳು, ಕಡೆಗೆ ಸಮಾಜವಿರೋಧಿ ವಿಷಯಗಳೂ ವೈರಲ್ ಆಗುವುದುಂಟು.

ಫೇಸ್‌ಬುಕ್-ಟ್ವಿಟ್ಟರಿನಂತಹ ಸಮಾಜಜಾಲಗಳ ಅಗಾಧ ವ್ಯಾಪ್ತಿಯಿಂದಾಗಿ ಬಹುತೇಕ ಯಾವುದೇ ಖರ್ಚಿಲ್ಲದೆ ಭಾರೀ ಪ್ರಚಾರ ಪಡೆದುಕೊಳ್ಳುವುದು ಈ ಸಂಗತಿಗಳಿಗೆ ಸಾಧ್ಯವಾಗುತ್ತದೆ. ಲೈಕು-ಶೇರುಗಳ ಮೂಲಕ, ಸಂದೇಶಗಳಲ್ಲಿ ನಿರ್ದಿಷ್ಟ ಹ್ಯಾಶ್‌ಟ್ಯಾಗ್‌ಗಳನ್ನು ಬಳಸುವ ಮೂಲಕ ಈ ವೈರಲ್ ವಿದ್ಯಮಾನ ನಡೆಯುತ್ತದೆ.

ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಈ ವಿದ್ಯಮಾನದ ಬಳಕೆ ಅದೆಷ್ಟು ಹೆಚ್ಚಿದೆಯೆಂದರೆ ಅಲ್ಲಿ 'ವೈರಲ್ ಮಾರ್ಕೆಟಿಂಗ್' ಎಂಬ ಪ್ರತ್ಯೇಕ ಕ್ಷೇತ್ರವೇ ಇದೆ.

ಜುಲೈ ೧೯, ೨೦೧೬ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

Related Stories

No stories found.
logo
ಇಜ್ಞಾನ Ejnana
www.ejnana.com