ವೆಬ್ ಪುಟಗಳನ್ನು, ಮೊಬೈಲ್ ಆಪ್ ಗಳನ್ನು ಅಭಿವೃದ್ಧಿಪಡಿಸುವ ಕೆಲಸದಲ್ಲಿ ಯುಎಕ್ಸ್ ಡಿಸೈನ್ ಪಾತ್ರ ಪ್ರಮುಖವಾದದ್ದು
ವೆಬ್ ಪುಟಗಳನ್ನು, ಮೊಬೈಲ್ ಆಪ್ ಗಳನ್ನು ಅಭಿವೃದ್ಧಿಪಡಿಸುವ ಕೆಲಸದಲ್ಲಿ ಯುಎಕ್ಸ್ ಡಿಸೈನ್ ಪಾತ್ರ ಪ್ರಮುಖವಾದದ್ದುImage by mohamed Hassan from Pixabay

ಯುಎಕ್ಸ್ ಡಿಸೈನ್ ಅಂದರೆ ಏನು?

ಭಿನ್ನರಾಶಿಯನ್ನು ನಿಮ್ಮ ಶಿಕ್ಷಕರು ಕಲಿಸಿದ್ದು ಹೇಗೆ? ಗೀಟಿನ ಮೇಲೊಂದು ಅಂಕಿ, ಕೆಳಗೊಂದು ಅಂಕಿ ಬರೆದು ನಾಲ್ಕನೆಯ ಮೂರು ಎಂದೋ...? ಅಥವಾ, ವೃತ್ತಾಕಾರದ ದೋಸೆಯ ನಾಲ್ಕು ಸಮ ತುಂಡುಗಳಲ್ಲಿ, ಮೂರು ತುಂಡುಗಳು ಎಂದೋ...?

ಇತ್ತೀಚೆಗೆ ಬಹಳ ಪ್ರಚಲಿತದಲ್ಲಿರುವ ಪದ ‘User Experience Design’. ನಿಜವಾಗಿಯೂ ಇದೊಂದು ಹೊಸ ಕಲ್ಪನೆಯೇ?

ಖಂಡಿತಾ ಇಲ್ಲ! ಒಂದು ಉದಾಹರಣೆಯನ್ನು ನೋಡೋಣ. ಎಲ್ಲರಿಗೂ ಪರಿಚಿತವಾಗಿರುವ User Experience Designer ಎಂದರೆ ಶಿಕ್ಷಕರು! ಹೇಗೆ ಎನ್ನುತ್ತೀರಾ?

ನೀವು ಭಿನ್ನರಾಶಿ (fractions) ಕಲಿತದ್ದು ನೆನಪಿದೆಯೇ? ಆಗ ತಾನೇ ಕೂಡು-ಕಳೆಯುವುದನ್ನು ಕಲಿತು, ಮುಂದಡಿ ಇಡುತ್ತಿದ್ದ ನಿಮಗೆ, ಭಿನ್ನರಾಶಿಯನ್ನು ನಿಮ್ಮ ಶಿಕ್ಷಕರು ಕಲಿಸಿದ್ದು ಹೇಗೆ? ಗೀಟಿನ ಮೇಲೊಂದು ಅಂಕಿ, ಕೆಳಗೊಂದು ಅಂಕಿ ಬರೆದು ನಾಲ್ಕನೆಯ ಮೂರು ಎಂದೋ...? (3/4) ಅಥವಾ, ವೃತ್ತಾಕಾರದ ದೋಸೆಯ ನಾಲ್ಕು ಸಮ ತುಂಡುಗಳಲ್ಲಿ, ಮೂರು ತುಂಡುಗಳು ಎಂದೋ...? ಖಂಡಿತವಾಗಿಯೂ ದೋಸೆ (ಅಥವಾ ಕೇಕ್) ಮೂಲಕವೇ! ಗೀಟಿನ ಮೇಲೆ ಕೆಳಗೆ, ನೀರಸವಾಗಿ ಕಾಣುವ ಭಿನ್ನರಾಶಿಯನ್ನು, ನಿಮಗೆ ಪರಿಚಿತವಾದ ದೋಸೆ ಕೇಕುಗಳ ಮುಲಕ ಪ್ರಸ್ತುತಪಡಿಸಿ, ನಿಮ್ಮ ಶಿಕ್ಷಕರು ಕಲಿಕೆಗೆ ಲವಲವಿಕೆಯನ್ನು ತಂದರು.

ಹೀಗೆ ಬಳಕೆದಾರರ ಗ್ರಹಣ ಶಕ್ತಿಯ ಮಟ್ಟಕ್ಕೆ ಇಳಿದು, ಯಾವುದೇ ಸನ್ನಿವೇಶವನ್ನು ಅವರ ದೃಷ್ಟಿಕೋನದಲ್ಲಿ ನೋಡುವ ವಿಧಾನವೇ User Research. ಒಂದು ಉತ್ಪನ್ನ ಅಥವಾ ಸೇವೆಯನ್ನು ವಿನ್ಯಾಸ ಮಾಡುವಾಗ, ಬಳಕೆದಾರರ ಮನಸ್ಥಿತಿ, ಅಗತ್ಯ, ಅನುಕೂಲ, ಅನನುಕೂಲಗಳನ್ನು ಅರ್ಥ ಮಾಡಿಕೊಂಡು, ಬಳಕೆದಾರ ಸುತ್ತ ಕೇಂದ್ರೀಕೃತವಾದ ವಿನ್ಯಾಸವನ್ನು ರೂಪಿಸುವ ಕ್ರಿಯೆಯೇ User Experience Design. ಇದನ್ನು ಕನ್ನಡದಲ್ಲಿ ‘ಅನುಭೂತಿ ವಿನ್ಯಾಸ’ ಎನ್ನಬಹುದೇನೋ.

ಮೇಲೆ ನೋಡಿದಂತೆ, ಬಹುಪಾಲು ಕ್ಷೇತ್ರಗಳಲ್ಲಿ ಅನುಭೂತಿ ವಿನ್ಯಾಸದ ಪಾತ್ರ ಇದ್ದೇ ಇದೆ. ಡಿಜಿಟಲ್ ಜಗತ್ತಿನಲ್ಲಿ ಇದು ಇನ್ನೂ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಂಡಿದೆ. ಕಂಪ್ಯೂಟರುಗಳಲ್ಲಿ ಮೊದಲು ಮೌಸ್ ಆಗಲಿ, ವಿಂಡೋಗಳಾಗಲಿ ಇರಲಿಲ್ಲ. ಆಗ ಕೀಬೋರ್ಡಿನಲ್ಲಿ ಆದೇಶಗಳನ್ನು (ಕಮ್ಯಾಂಡ್) ಟೈಪ್ ಮಾಡಿಯೇ ಕಂಪ್ಯೂಟರ್ ಜೊತೆ ವ್ಯವಹರಿಸಬೇಕಿತ್ತು.

ಇಂತಹ ಆದೇಶಗಳನ್ನು ನೆನಪಿಟ್ಟುಕೊಂಡು ಬಳಸುವುದು ಸಾಮಾನ್ಯ ಬಳಕೆದಾರರಿಗೆ ಸುಲಭವಾಗಿರಲಿಲ್ಲ. ಹೀಗಾಗಿಯೇ, ಅಂತಹ ಬಳಕೆದಾರರ ಅಗತ್ಯಗಳನ್ನು ಅರಿತು, ಕ್ಲಿಷ್ಟ ಕಮ್ಯಾಂಡುಗಳನ್ನು ಮೌಸ್ ಕ್ಲಿಕ್ ಗಳ ಹಿಂದೆ ಅಡಗಿಸಲಾಯಿತು.

ಪ್ರತಿಯೊಂದು ಮೌಸ್ ಕ್ಲಿಕ್ ಕೂಡ ಹಲವು ಅದೇಶಗಳಾಗಿ ಕಂಪ್ಯೂಟರನ್ನು ತಲುಪುತ್ತದೆ. ಬಳಕೆದಾರರು ಅಂತಹ ಅದೇಶಗಳನ್ನೆಲ್ಲ ನೆನಪಿಟ್ಟುಕೊಳ್ಳುವ ಅಗತ್ಯ ಇಲ್ಲದ್ದರಿಂದ ಆ ಕುರಿತು ತಲೆ ಕೆಡಿಸಿಕೊಳ್ಳದೆಯೇ ಕಂಪ್ಯೂಟರ್ ಬಳಸುವುದು ಸಾಧ್ಯ. ಅದೇಶಗಳನ್ನು ನೆನಪಿಟ್ಟುಕೊಳ್ಳುವುದೂ ಬೇಡ, ಕೀಬೋರ್ಡಿನಲ್ಲಿ ಅದನ್ನೆಲ್ಲ ಟೈಪ್ ಮಾಡುವುದೂ ಬೇಡ! ಇದು, ಅನುಭೂತಿ ವಿನ್ಯಾಸದ ಅನುಕೂಲ.

ವೆಬ್ ಪುಟಗಳನ್ನು, ಮೊಬೈಲ್ ಆಪ್ ಗಳನ್ನು ಅಭಿವೃದ್ಧಿಪಡಿಸುವ ಕೆಲಸದಲ್ಲೂ ಅನುಭೂತಿ ವಿನ್ಯಾಸದ ಪಾತ್ರ ಪ್ರಮುಖವಾದದ್ದು. ಮೊಬೈಲ್ ಪರದೆಯ ಮೇಲೆ ಲಭ್ಯವಿರುವ ಸೀಮಿತ ಸ್ಥಳಾವಕಾಶವನ್ನು ಪರಿಣಾಮಕಾರಿಯಾಗಿ ಬಳಸುವುದು ಹೇಗೆ, ಅಲ್ಲಿ ನೀಡುವ ಆಯ್ಕೆಗಳನ್ನು ಬಳಕೆದಾರ ಸ್ನೇಹಿಯಾಗಿರುವಂತೆ ನೋಡಿಕೊಳ್ಳುವುದು ಹೇಗೆ, ಅತ್ಯಂತ ಕಡಿಮೆ ಕ್ಲಿಕ್ ಗಳಲ್ಲಿ ಕೆಲಸ ಸಾಧನೆಯಾಗುವಂತೆ ಮಾಡುವುದು ಹೇಗೆ ಎನ್ನುವುದನ್ನೆಲ್ಲ ಅನುಭೂತಿ ವಿನ್ಯಾಸದ ಪರಿಕಲ್ಪನೆಗಳು ನಿರ್ದೇಶಿಸುತ್ತವೆ.

ಬಳಸಲು ಸುಲಭವಿದ್ದು, ಬಳಕೆದಾರನಿಗೆ ಆ ಕ್ಷಣದಲ್ಲಿ ಪ್ರಸ್ತುತ ಎನಿಸುವಂತಹ ವಿನ್ಯಾಸಗಳು ಹೆಚ್ಚಿನ ಯಶಸ್ಸನ್ನು ಕಾಣುತ್ತವೆ ಎನ್ನುವುದು ಈ ಕ್ಷೇತ್ರದ ಮೂಲಮಂತ್ರ.

Related Stories

No stories found.
logo
ಇಜ್ಞಾನ Ejnana
www.ejnana.com