ಓದಿ+ನೋಡಿ: ಆರ್‌ಪಿಎ ಎಂದರೇನು?

ಬೋರುಹೊಡೆಸುವ ಕೆಲಸಗಳನ್ನು ರೋಬಾಟ್‌ಗಳಿಗೆ ವಹಿಸಿಕೊಟ್ಟರೆ ಹೇಗೆ?

ನಿರ್ದಿಷ್ಟ ಕೆಲಸಗಳಿಗೆ ಸಿಬ್ಬಂದಿಯನ್ನು ನೇಮಿಸಿಕೊಳ್ಳುವುದು ಕಚೇರಿಗಳಲ್ಲಿ ಬಹುಕಾಲದಿಂದ ನಡೆದುಬಂದಿರುವ ಅಭ್ಯಾಸ. ಹೀಗೆ ನೇಮಕಗೊಂಡವರು ಒಂದಷ್ಟು ಕೆಲಸಗಳನ್ನು ಮಾಡಿಕೊಂಡು ಹೋಗುವ ಜವಾಬ್ದಾರಿ ವಹಿಸಿಕೊಳ್ಳುತ್ತಾರೆ.

ಹೀಗೆ ಉದ್ಯೋಗಿಗಳಿಗೆ ನೀಡಲಾಗುವ ಕೆಲಸಗಳಲ್ಲಿ ಅನೇಕ ವಿಧಗಳಿರುವುದು ಸಾಧ್ಯ. ಈ ಪೈಕಿ ಕೆಲವು ದೊಡ್ಡ ಮಟ್ಟದ ಪುನರಾವರ್ತನೆಯನ್ನು ಒಳಗೊಂಡಿರುತ್ತವೆ, ಹಾಗೂ ಉದ್ಯೋಗಿಗಳಲ್ಲಿ ಬೇಗನೆ ಬೇಸರವನ್ನೂ ಹುಟ್ಟಿಸುತ್ತವೆ. ಹೀಗೆ ಬೋರು ಹೊಡೆಸುವ ಕೆಲಸವನ್ನು ಪದೇಪದೇ ಮಾಡುವಾಗ ತಪ್ಪುಗಳಾಗುವ ಸಾಧ್ಯತೆಯೂ ಇರುತ್ತದೆ.

ಇಂತಹ ಕೆಲಸಗಳನ್ನು ಹೆಚ್ಚು ವೇಗವಾಗಿ, ಸಮರ್ಥವಾಗಿ ಹಾಗೂ ಉದ್ಯೋಗಿಗಳಿಗೆ ಬೋರು ಹೊಡೆಸದೆ ಮಾಡಿಸಿಕೊಳ್ಳುವುದು ಹೇಗೆ?

'ಆರ್‌ಪಿಎ' ಎಂಬ ಹೊಸ ಕ್ಷೇತ್ರದ ಹುಟ್ಟಿಗೆ ಕಾರಣವಾಗಿರುವುದು ಇದೇ ಪ್ರಶ್ನೆ. ಇದು 'ರೋಬಾಟಿಕ್ ಪ್ರಾಸೆಸ್ ಆಟೋಮೇಶನ್' ಎನ್ನುವುದರ ಹ್ರಸ್ವರೂಪ.

'ಪ್ರಾಸೆಸ್' ಅಂದರೆ ಪ್ರಕ್ರಿಯೆ. ಹೊಸ ಆದೇಶಗಳನ್ನು - ಬೆಲೆಪಟ್ಟಿಗಳನ್ನು ಕಂಪ್ಯೂಟರಿಗೆ ಸೇರಿಸುವುದು, ಇಮೇಲ್ ಸಂದೇಶಗಳನ್ನು ಓದಿ ಪೂರ್ವನಿರ್ಧಾರಿತ ಪ್ರತಿಕ್ರಿಯೆ ನೀಡುವುದು, ಐಟಿ ಸಮಸ್ಯೆಗಳಿಗೆ ಮೊದಲ ಹಂತದ (ಲೆವೆಲ್ ೧) ಪರಿಹಾರ ನೀಡುವುದು ಮುಂತಾದವೆಲ್ಲ ಪ್ರಾಸೆಸ್‌ನ ಉದಾಹರಣೆಗಳು. ಇಂತಹ ಯಾವುದೇ ಪ್ರಕ್ರಿಯೆಗಳನ್ನು ತಂತ್ರಜ್ಞಾನದ ಸಹಾಯದಿಂದ ಸ್ವಯಂಚಾಲಿತವನ್ನಾಗಿಸುವುದಕ್ಕೆ 'ಆಟೋಮೇಶನ್' ಎಂದು ಹೆಸರು.

ಕಚೇರಿಯಲ್ಲಿ ಬೋರುಹೊಡೆಸುವ ಪ್ರಕ್ರಿಯೆಗಳು ಸ್ವಯಂಚಾಲಿತವಾಗಿ ನಡೆಯುವಂತಾದರೆ ಒಳ್ಳೆಯದೇ. ಆದರೆ ಇಲ್ಲಿ ರೋಬಾಟ್‌ಗಳಿಗೇನು ಕೆಲಸ?

ರೋಬಾಟಿಕ್ ಪ್ರಾಸೆಸ್ ಆಟೋಮೇಶನ್‌ನ ವೈಶಿಷ್ಟ್ಯವಿರುವುದೇ ಇಲ್ಲಿ. ಕಚೇರಿಯ ಕೆಲಸಗಳು ಸ್ವಯಂಚಾಲಿತವಾಗಿ ನಡೆಯುವಂತೆ ಮಾಡಲು ಇದು ರೋಬಾಟ್‌ಗಳನ್ನು ಬಳಸುತ್ತದೆ.

ರೋಬಾಟ್ ಎಂದರೆ ಸಿನಿಮಾದಲ್ಲಿ - ಕಾರ್ಟೂನಿನಲ್ಲಿ ನೋಡಿದ ಯಂತ್ರಗಳು ನಮ್ಮ ನೆನಪಿಗೆ ಬರುತ್ತವಲ್ಲ, ಇಲ್ಲಿ ಬಳಕೆಯಾಗುವ ರೋಬಾಟ್‌ಗಳು ಆ ಬಗೆಯವಲ್ಲ. ಇಲ್ಲಿನ ರೋಬಾಟ್‌ಗಳೇನಿದ್ದರೂ ತಂತ್ರಾಂಶರೂಪಿಗಳು. ಅಂದರೆ, ಕಂಪ್ಯೂಟರಿನಲ್ಲಿರುವ ತಂತ್ರಾಂಶಗಳೇ - ಯಾವುದೇ ಬೇಸರ, ಆಯಾಸಗಳ ಸುಳಿವಿಲ್ಲದೆ - ಇಲ್ಲಿ ರೋಬಾಟ್‌ಗಳಂತೆ ಕೆಲಸಮಾಡುತ್ತವೆ!

ಪುನರಾವರ್ತನೆಯಾಗುವ ಯಾವುದೇ ಕೆಲಸವನ್ನು ನಿರ್ದಿಷ್ಟ ಹೆಜ್ಜೆಗಳಲ್ಲಿ ನಿರೂಪಿಸಿದರೆ ಆಯಿತು, ಈ ರೋಬಾಟ್‌ಗಳು ಆ ಹೆಜ್ಜೆಗಳನ್ನು ಚಾಚೂತಪ್ಪದೆ ಅನುಸರಿಸುತ್ತಾ ಹೋಗುತ್ತವೆ. ಈ ಹೆಜ್ಜೆಗಳು ಒಂದೇ ತಂತ್ರಾಂಶದಲ್ಲಿ ಇಲ್ಲದಿದ್ದರೂ ರೋಬಾಟ್‌ಗಳೇನು ಚಿಂತಿಸುವುದಿಲ್ಲ; ಮೊದಲ ಹೆಜ್ಜೆ ಇಮೇಲ್‌ ತಂತ್ರಾಂಶದಲ್ಲಿ, ಎರಡನೆಯದು ಇಆರ್‌ಪಿಯಲ್ಲಿ, ಮೂರನೆಯದು ಯಾವುದೋ ಜಾಲತಾಣದಲ್ಲಿ ಇದ್ದರೂ ಅವು ಯಾವುದೇ ಅಡೆತಡೆಗಳಿಲ್ಲದೆ ಸರಾಗವಾಗಿ ಕೆಲಸಮಾಡುತ್ತವೆ. ಇವುಗಳನ್ನು ದಿನದ ಇಪ್ಪತ್ತನಾಲ್ಕೂ ಗಂಟೆ, ವಾರದ ಏಳೂ ದಿನ ದುಡಿಸಿಕೊಳ್ಳುವುದು ಸಾಧ್ಯ.

ನಮ್ಮ ಕಚೇರಿಯ ಕೆಲಸಗಳನ್ನೂ ಆರ್‌ಪಿಎ ಮೂಲಕ ಸರಾಗವಾಗಿ ಮಾಡಿಕೊಳ್ಳಬೇಕು ಎನ್ನುವವರೇ ಅಂತಹ ವ್ಯವಸ್ಥೆಗಳನ್ನು ರೂಪಿಸಿಕೊಳ್ಳಲು ನೆರವಾಗುವ ತಂತ್ರಾಂಶ ವೇದಿಕೆಗಳೂ (ಸಾಫ್ಟ್‌ವೇರ್ ಪ್ಲಾಟ್‌ಫಾರ್ಮ್) ಇದೀಗ ಮಾರುಕಟ್ಟೆಯಲ್ಲಿವೆ. ಆಟೋಮೇಶನ್ ಎನಿವೇರ್, ಯುಐಪಾಥ್ ಮುಂತಾದವು ಇದಕ್ಕೆ ಉದಾಹರಣೆಗಳು.

ತಮ್ಮ ಕೆಲಸಗಳು ಕಡಿಮೆ ಖರ್ಚಿನಲ್ಲಿ ಹೆಚ್ಚು ವೇಗವಾಗಿ ನಡೆಯುವಂತೆ ಮಾಡಲು ವಿಶ್ವದೆಲ್ಲೆಡೆಯ ಸಂಸ್ಥೆಗಳು ಇದೀಗ ಆರ್‌ಪಿಎ ಮೊರೆಹೋಗುತ್ತಿವೆ. ಮುಂದಿನ ವರ್ಷದಲ್ಲಿ ಈ ತಂತ್ರಜ್ಞಾನದ ವ್ಯಾಪ್ತಿ ಇನ್ನಷ್ಟು ವಿಸ್ತಾರಗೊಳ್ಳುವ, ಆಟೋಮೇಶನ್ ಗುಣಮಟ್ಟದಲ್ಲಿ ಇನ್ನಷ್ಟು ಹೆಚ್ಚಳವಾಗುವ ನಿರೀಕ್ಷೆಯೂ ಇದೆ.

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಹಾಗೂ ನ್ಯಾಚುರಲ್ ಲ್ಯಾಂಗ್ವೆಜ್ ಪ್ರಾಸೆಸಿಂಗ್‌ನಂತಹ (ಎನ್‌ಎಲ್‌ಪಿ) ತಂತ್ರಜ್ಞಾನಗಳು ಈ ಕ್ಷೇತ್ರದಲ್ಲಿ ಹೊಸ ಬದಲಾವಣೆಗಳನ್ನು ತರಲಿವೆ ಎಂದು ತಜ್ಞರು ಹೇಳುತ್ತಾರೆ. ಆರ್‌ಪಿಎ ಬಳಕೆ ಇನ್ನಷ್ಟು ವ್ಯಾಪಕವಾಗಿ ಬೆಳೆದರೆ ಅದು ಮನುಷ್ಯರ ಉದ್ಯೋಗಾವಕಾಶಗಳನ್ನು ಕಿತ್ತುಕೊಳ್ಳುವುದಿಲ್ಲವೇ ಎನ್ನುವ ಪ್ರಶ್ನೆಗೂ ಅವರಲ್ಲಿ ಉತ್ತರವಿದೆ. ಪುನರಾವರ್ತನೆಯಾಗುವ, ಬೇಸರಹುಟ್ಟಿಸುವ ಜವಾಬ್ದಾರಿಗಳನ್ನು ಆರ್‌ಪಿಎಗೆ ವಹಿಸಿಕೊಡುವ ಉದ್ಯೋಗಿಗಳು ಇನ್ನಷ್ಟು ಒಳ್ಳೆಯ, ಆಸಕ್ತಿಕರ ಜವಾಬ್ದಾರಿಗಳನ್ನು ತೆಗೆದುಕೊಳ್ಳಬಹುದು ಎಂದು ಅವರು ಹೇಳುತ್ತಾರೆ. ಸದ್ಯ ಪ್ರಕ್ರಿಯೆಗಳನ್ನು ಆರ್‌ಪಿಎ ಮೂಲಕ ಸ್ವಯಂಚಾಲಿತವನ್ನಾಗಿಸುವ ಕೆಲಸವೇ ಸಾಕಷ್ಟು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದ್ದು, ಅನೇಕರಿಗೆ ಹೊಸ ಅವಕಾಶಗಳ ಬಾಗಿಲನ್ನು ತೆರೆದಿಟ್ಟಿದೆ.

ಡಿಸೆಂಬರ್ ೧೮, ೨೦೧೯ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

ವೀಡಿಯೊ ಸೌಜನ್ಯ: ಸಂವಾದ

Related Stories

No stories found.
logo
ಇಜ್ಞಾನ Ejnana
www.ejnana.com