ಸೇವಾಸಂಸ್ಥೆಯ ಜಾಲದ ವ್ಯಾಪ್ತಿಯೊಳಗಿದ್ದರೆ ಸಾಕು, ಮೊಬೈಲ್ ಬಳಸಿ ಬೇಕಾದವರಿಗೆ ಕರೆಮಾಡುವುದು ಸಾಧ್ಯ.
ಸೇವಾಸಂಸ್ಥೆಯ ಜಾಲದ ವ್ಯಾಪ್ತಿಯೊಳಗಿದ್ದರೆ ಸಾಕು, ಮೊಬೈಲ್ ಬಳಸಿ ಬೇಕಾದವರಿಗೆ ಕರೆಮಾಡುವುದು ಸಾಧ್ಯ.Image by Niek Verlaan from Pixabay

ಐಯುಸಿ ಎಂದರೇನು?

ಬೇರೆ ಮೊಬೈಲ್ ಸಂಸ್ಥೆಯ ಗ್ರಾಹಕರಿಗೆ ನಾವು ಕರೆಮಾಡಿದರೆ ಆ ಸಂಸ್ಥೆಗೆ ಏನು ಲಾಭ?

ನಮ್ಮ ಮೊಬೈಲು ಸೇವಾಸಂಸ್ಥೆಯ ಜಾಲದ ವ್ಯಾಪ್ತಿಯೊಳಗಿದ್ದರೆ ಸಾಕು, ನಾವು ಅದನ್ನು ಬಳಸಿ ನಮಗೆ ಬೇಕಾದವರಿಗೆ ಕರೆಮಾಡಬಹುದು. ಇದಕ್ಕೆ ಪ್ರತಿಯಾಗಿ ಆ ಸಂಸ್ಥೆ ನಮ್ಮಿಂದ ನಿಗದಿತ ಶುಲ್ಕವನ್ನು ಪಡೆದುಕೊಳ್ಳುತ್ತದೆ.

ನಾವು ಕರೆಮಾಡುತ್ತಿರುವುದು ನಮ್ಮದೇ ಸೇವಾಸಂಸ್ಥೆಯ ಇನ್ನೊಬ್ಬ ಗ್ರಾಹಕರಿಗಾದರೆ ಕೆಲಸ ಸುಲಭ. ನಮ್ಮ ಕರೆ ಮುಗಿಯುತ್ತಿದ್ದಂತೆ ನಿಗದಿತ ಶುಲ್ಕವನ್ನು ಜೇಬಿಗಿಳಿಸಿಕೊಳ್ಳುವ ಸೇವಾಸಂಸ್ಥೆ ಮುಂದಿನ ಕರೆಗಾಗಿ ಕಾಯಲು ಶುರುಮಾಡುತ್ತದೆ.

ಆದರೆ ನಾವು ಕರೆಮಾಡುತ್ತಿರುವುದು ಬೇರೆ ಸೇವಾಸಂಸ್ಥೆಯ ಗ್ರಾಹಕರಿಗಾದರೆ? ನಮ್ಮ ಕರೆಯನ್ನು ಪೂರ್ಣಗೊಳಿಸಲು ಆ ಸಂಸ್ಥೆಯ ಸಹಾಯ ಕೂಡ ಬೇಕಾಗುತ್ತದೆ. ನಮ್ಮ ಕರೆಯ ಸೂಚನೆ ಹಾಗೂ ಮಾತುಗಳು ನಮ್ಮ ಜಾಲದಿಂದ ಆ ಸಂಸ್ಥೆಯ ಜಾಲಕ್ಕೆ ವರ್ಗಾವಣೆಯಾಗಬೇಕಾಗುತ್ತದೆ, ಆ ಬದಿಯ ಮಾತುಗಳು ನಮ್ಮ ಜಾಲದ ಕಡೆಗೂ ಬರಬೇಕಾಗುತ್ತದೆ.

ನಮ್ಮ ಸಂಸ್ಥೆಗೇನೋ ನಾವು ದುಡ್ಡು ಕೊಡುತ್ತೇವೆ, ಸರಿ. ಆದರೆ ಇಷ್ಟೆಲ್ಲ ಸಹಾಯ ಮಾಡುವುದರಿಂದ ಆ ಬದಿಯ ಸಂಸ್ಥೆಗೆ ಏನು ಲಾಭ?

ಈ ಪ್ರಶ್ನೆಗೆ ಉತ್ತರವೇ ಐಯುಸಿ, ಅಂದರೆ ಇಂಟರ್‌ಕನೆಕ್ಟ್ ಯೂಸೇಜ್ ಚಾರ್ಜ್.

ನಿರ್ದಿಷ್ಟ ಮೊಬೈಲ್ ಸಂಸ್ಥೆಯ ಗ್ರಾಹಕರು ಬೇರೊಂದು ಸಂಸ್ಥೆಯ ಗ್ರಾಹಕರಿಗೆ ಹೊರಹೋಗುವ (ಔಟ್‌ಗೋಯಿಂಗ್) ಮೊಬೈಲ್ ಕರೆ ಮಾಡಿದಾಗ, ಕರೆ ಮಾಡಿದ ಗ್ರಾಹಕರ ಸಂಸ್ಥೆಯು ಎರಡನೇ ಸಂಸ್ಥೆಗೆ ನೀಡಬೇಕಾದ ಶುಲ್ಕ ಇದು. ಬೇರೆಬೇರೆ ಮೊಬೈಲ್ ಜಾಲಗಳ ನಡುವಿನ ಇಂತಹ ಕರೆಗಳನ್ನು ಮೊಬೈಲ್ ಆಫ್-ನೆಟ್ ಕರೆಗಳೆಂದು ಕರೆಯುತ್ತಾರೆ.

ನಮ್ಮ ದೇಶದ ಮೊಬೈಲ್ ಸಂಸ್ಥೆಗಳು ಪರಸ್ಪರರಿಗೆ ಪಾವತಿಸಬೇಕಾದ ಈ ಶುಲ್ಕದ ಪ್ರಮಾಣವನ್ನು ಭಾರತದ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟೆಲಿಕಾಮ್ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ - ಟ್ರಾಯ್) ನಿಗದಿಪಡಿಸುತ್ತದೆ. ಹಲವು ವರ್ಷಗಳಿಂದ ಗಮನಾರ್ಹವಾಗಿ ಕಡಿಮೆಯಾಗುತ್ತ ಬಂದಿರುವ ಈ ಶುಲ್ಕ ಸದ್ಯ ಪ್ರತಿ ನಿಮಿಷಕ್ಕೆ ೬ ಪೈಸೆಗಳಷ್ಟಿದೆ.

೨೦೧೭ರಲ್ಲಿ ಪ್ರಕಟಿಸಲಾದ ಟೆಲಿಕಮ್ಯೂನಿಕೇಶನ್ ಇಂಟರ್‌ಕನೆಕ್ಷನ್ ಯೂಸೇಜ್ ಚಾರ್ಜಸ್ (೧೩ನೇ ತಿದ್ದುಪಡಿ) ನಿಯಮಗಳ ಪ್ರಕಾರ ಮೊಬೈಲ್ ಕರೆಗಳಿಗಾಗಿನ ಐಯುಸಿಯನ್ನು ಜನವರಿ ೧, ೨೦೨೦ರಿಂದ ಅನ್ವಯವಾಗುವಂತೆ ಸಂಪೂರ್ಣವಾಗಿ ತೆಗೆದುಹಾಕಬೇಕೆಂದು ಟ್ರಾಯ್ ಉದ್ದೇಶಿಸಿದೆ.

Related Stories

No stories found.
logo
ಇಜ್ಞಾನ Ejnana
www.ejnana.com