ಓದಿ+ನೋಡಿ: ಎನ್‌ಕ್ರಿಪ್‌ಶನ್ ಅಂದರೇನು?

ಅಂತರಜಾಲದಲ್ಲಿ ಹರಿದಾಡುವ ನಮ್ಮ ಮಾಹಿತಿ ಬೇರೆಯವರ ಕೈಗೆ ಸಿಗದ ಹಾಗೆ ಜೋಪಾನ ಮಾಡಿಕೊಳ್ಳುವುದು ಹೇಗೆ?

ಕಂಪ್ಯೂಟರನ್ನೋ ಸ್ಮಾರ್ಟ್‌ಫೋನನ್ನೋ ಬಳಸುವಾಗ ಮಾಹಿತಿಯನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಕಳಿಸುವುದು ಬಹಳ ಸಾಮಾನ್ಯ. ಮೆಸೇಜ್ ಅಥವಾ ಇಮೇಲ್ ಕಳಿಸುವುದು, ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವುದು, ಆನ್‌ಲೈನ್ ಅಂಗಡಿಯಲ್ಲಿ ಏನನ್ನಾದರೂ ಕೊಳ್ಳುವುದು, ನೆಟ್‌ಬ್ಯಾಂಕಿಂಗ್ ಸೌಲಭ್ಯ ಬಳಸುವುದು - ಇಂತಹ ಎಲ್ಲ ಕೆಲಸಗಳಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಮಾಹಿತಿಯ ವರ್ಗಾವಣೆ ಆಗುತ್ತಲೇ ಇರುತ್ತದೆ.

ಇಂತಹ ಪ್ರತಿಯೊಂದು ಉದಾಹರಣೆಯಲ್ಲೂ ನಾವು ಕಳಿಸುವ ಮಾಹಿತಿ ನಿರ್ದಿಷ್ಟವಾಗಿ ಇಂಥವರಿಗೇ ತಲುಪಬೇಕು. ಯಾರಿಗೆ ಮೆಸೇಜ್ ಕಳಿಸುತ್ತೇವೋ ಅದನ್ನು ಅವರು ಮಾತ್ರ ನೋಡಬೇಕು, ಬ್ಯಾಂಕ್ ಖಾತೆಯ ವಿವರಗಳು ನಮ್ಮ ಬ್ಯಾಂಕಿಗೆ ಮಾತ್ರ ತಿಳಿಯಬೇಕು, ಸೋಶಿಯಲ್ ಮೀಡಿಯಾದಲ್ಲಿ ಬರೆದದ್ದು ನಮ್ಮ ಗೆಳೆಯರಿಗೆ ಮಾತ್ರ ಕಾಣಿಸಬೇಕು - ಹೀಗೆ. ಇದರ ಹೊರತಾಗಿ ಆ ಮಾಹಿತಿ ಬೇರೆ ಯಾರಿಗೆ ಸಿಕ್ಕರೂ ಅದು ದುರುಪಯೋಗ ಆಗುವ ಸಾಧ್ಯತೆ ಇರುತ್ತದೆ.

ಬೇರೆಯವರ ಕೈಗೆ ಸಿಗದ ಹಾಗೆ ಈ ಮಾಹಿತಿಯನ್ನೆಲ್ಲ ಜೋಪಾನ ಮಾಡಿಕೊಳ್ಳುವುದು ಹೇಗೆ? ಹಳೆಯ ಸಂಗತಿಯೊಂದನ್ನು ಇಲ್ಲಿ ನೆನಪಿಸಿಕೊಂಡು ಆಮೇಲೆ ಮುಂದಕ್ಕೆ ಹೋಗೋಣ.

ಚಿಕ್ಕವರಾಗಿದ್ದಾಗ ನಾವೆಲ್ಲ ನಮ್ಮದೇ ಆದ ಭಾಷೆಗಳನ್ನು ರೂಪಿಸಿಕೊಂಡು ಬಳಸುತ್ತಿದ್ವಿ. "ನಿನಗೆ ಚಾಕ್ಲೇಟು ಬೇಕಾ" ಅಂತ ಕೇಳುವ ಬದಲು "ಪಿನಗೆ ಪಾಕ್ಲೇಟು ಪೇಕಾ" ಅನ್ನುವುದು ಪ ಭಾಷೆ. ನಮ್ಮ ಮಾತು ನಮ್ಮನ್ನು ಬಿಟ್ಟು ಬೇರೆಯವರಿಗೆ ಅರ್ಥ ಆಗುತ್ತಿಲ್ಲ ಎನ್ನುವುದೇ ನಮಗೆ ಖುಷಿ.

ಸಾಮಾನ್ಯ ಪಠ್ಯದಲ್ಲಿ ಕೆಲವು ಅಕ್ಷರಗಳನ್ನು ಮಾತ್ರ ಬದಲಿಸಿ, ಅದು ಬೇರೆಯವರಿಗೆ ಅರ್ಥವಾಗದಂತೆ ಮಾಡುವುದು ಈ ಪ್ರಯತ್ನದ ಉದ್ದೇಶ. ಪ ಭಾಷೆಯ ಬಗ್ಗೆ ಗೊತ್ತಿಲ್ಲದವರಿಗೆ ಈ ಹೊಸ ರೂಪ ಸುಲಭಕ್ಕೆ ಅರ್ಥವಾಗುವುದಿಲ್ಲ.

ನಾವು ಕಂಪ್ಯೂಟರ್ ಅಥವಾ ಸ್ಮಾರ್ಟ್‌ಫೋನ್‌ನಲ್ಲಿ ಕಳಿಸುವ ಮಾಹಿತಿಯನ್ನು ಜೋಪಾನ ಮಾಡಿಕೊಳ್ಳುವುದಕ್ಕೂ ಇಂಥದ್ದೇ ತಂತ್ರವನ್ನು ಬಳಸಬಹುದು. ಆ ಮಾಹಿತಿಯನ್ನು ಬೇರೆಯ ರೂಪಕ್ಕೆ ಬದಲಿಸಿಬಿಟ್ಟರೆ ಅದರಲ್ಲಿ ಏನಿದೆ ಎನ್ನುವುದು ಯಾರಿಗೂ ಗೊತ್ತಾಗುವುದಿಲ್ಲ. ಹೀಗೆ ಮಾಡುವುದಕ್ಕೆ ಎನ್‌ಕ್ರಿಪ್‌ಶನ್ ಎಂದು ಹೆಸರು.

ಮಾಹಿತಿಯನ್ನು ಬದಲಾಯಿಸುವುದು ಅಂದರೇನು? ಪ ಭಾಷೆಯಲ್ಲಿ ಮಾಡಿದ ಹಾಗೆ ಒಂದು ಅಕ್ಷರ ಬದಲಾಯಿಸಿಬಿಟ್ಟರೆ ಸಾಕಾ?

ಖಂಡಿತಾ ಸಾಕಾಗುವುದಿಲ್ಲ. ಏಕೆಂದರೆ ಅಂತರಜಾಲದ ಲೋಕದಲ್ಲಿ ನಮ್ಮ ಮಾಹಿತಿಯನ್ನು ಕದಿಯಲು, ದುರುಪಯೋಗಪಡಿಸಿಕೊಳ್ಳಲು ಬೇಕಾದಷ್ಟು ಜನ ಕಾಯುತ್ತಿರುತ್ತಾರೆ. ನಾವು ನಮ್ಮ ಮಾಹಿತಿಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳದಿದ್ದರೆ ಅವರು ಅದನ್ನು ಸುಲಭವಾಗಿ ಕದ್ದುಬಿಡುತ್ತಾರೆ.

ಹಾಗಾದರೆ ನಾವು ಏನು ಮಾಡಬೇಕು? ಎನ್‌ಕ್ರಿಪ್‌ಶನ್ ಮಾಡುವಾಗ ನಮ್ಮ ಮಾಹಿತಿಯನ್ನು ಎಷ್ಟರಮಟ್ಟಿಗೆ ಬದಲಾಯಿಸಬೇಕು ಅಂದರೆ ಮೂಲತಃ ಅದರಲ್ಲಿ ಏನಿತ್ತು ಅನ್ನುವುದು ಯಾರಿಗೂ ಸುಲಭಕ್ಕೆ ಗೊತ್ತಾಗಬಾರದು.

ಎನ್‌ಕ್ರಿಪ್‌ಶನ್ ಮಾಡುವುದು ಹೇಗೆ ಎಂದು ತಿಳಿಸುವ ವಿಧಾನಕ್ಕೆ ಎನ್‌ಕ್ರಿಪ್‌ಶನ್ ಆಲ್ಗಾರಿದಮ್ ಎಂದು ಹೆಸರು. ಅದು ನಮ್ಮ ಮಾಹಿತಿಯನ್ನು ಹೇಗೆ ಬದಲಾಯಿಸಬೇಕು ಅನ್ನುವುದನ್ನು ಎನ್‌ಕ್ರಿಪ್‌ಶನ್ ಕೀ ಹೇಳುತ್ತದೆ. ಬೀಗಕ್ಕೆ ಕೀಲಿ ಇರುತ್ತದಲ್ಲ, ಇದೂ ಹಾಗೆಯೇ.

ಪ ಭಾಷೆಯ ಉದಾಹರಣೆಯನ್ನೇ ತೆಗೆದುಕೊಂಡರೆ "ಪ್ರತಿ ಪದದ ಮೊದಲನೇ ಅಕ್ಷರವನ್ನು ಪ ಎಂದು ಬದಲಿಸು" ಎನ್ನುವುದು ಅದರ ಎನ್‌ಕ್ರಿಪ್‌ಶನ್ ಕೀ. ಇದು ತುಂಬಾ ಸರಳವಾಯಿತು ಅಂದರೆ ಎನ್‌ಕ್ರಿಪ್‌ಶನ್ ಕೀಯನ್ನು ಇನ್ನಷ್ಟು ಉದ್ದ ಮಾಡಿಕೊಳ್ಳಬಹುದು - ಮೊದಲನೆ ಅಕ್ಷರವನ್ನು ಪ ಎಂದು ಬದಲಿಸು, ಎರಡನೇ ಅಕ್ಷರವನ್ನು ಟ ಎಂದು ಬದಲಿಸು, ಮೂರನೇ ಅಕ್ಷರವನ್ನು ಕ ಎಂದು ಬದಲಿಸು ಅಂತೆಲ್ಲ ಕಂಪ್ಯೂಟರಿಗೆ ಹೇಳಬಹುದು.

ಕಂಪ್ಯೂಟರು ನಮ್ಮಹಾಗೆ ಅಕ್ಷರಗಳಲ್ಲಿ ವ್ಯವಹರಿಸುವುದಿಲ್ಲ. ಅದಕ್ಕೆ ಗೊತ್ತಿರುವುದೇನಿದ್ದರೂ ಬಿಟ್‌ಗಳು ಮತ್ತು ಬೈಟ್‌ಗಳು. ಎನ್‌ಕ್ರಿಪ್‌ಶನ್ ಮಾಡುವಾಗ ನಮ್ಮ ಮಾಹಿತಿಯನ್ನೂ ಅದು ಬಿಟ್‍ಗಳ ರೂಪಕ್ಕೆ ಬದಲಿಸಿಕೊಳ್ಳುತ್ತದೆ. ಮಾಹಿತಿಯ ಯಾವ ಬಿಟ್ ಅನ್ನು ಹೇಗೆ ಬದಲಿಸಬೇಕು ಎಂದು ತಿಳಿಸುವ ಎನ್‌ಕ್ರಿಪ್‌ಶನ್ ಕೀ‌ ಕೂಡ ಬಿಟ್‌ಗಳ ಲೆಕ್ಕದಲ್ಲೇ ಇರುತ್ತದೆ.

ಇಂತಹ ಕೀ ಎಷ್ಟು ಉದ್ದವಿದೆ ಎನ್ನುವುದನ್ನೂ ಬಿಟ್‌ಗಳ ಲೆಕ್ಕದಲ್ಲಿ ಅಳೆಯುತ್ತಾರೆ. ೬೪ ಬಿಟ್ ಎನ್‌ಕ್ರಿಪ್‌ಶನ್, ೧೨೮ ಬಿಟ್ ಎನ್‌ಕ್ರಿಪ್‌ಶನ್, ೨೫೬ ಬಿಟ್ ಎನ್‌ಕ್ರಿಪ್‌ಶನ್ ಎಂದೆಲ್ಲ ಹೇಳುವಾಗ ಅಲ್ಲಿರುವ ಬಿಟ್‌ಗಳ ಸಂಖ್ಯೆ ಈ ಉದ್ದವನ್ನೇ ಸೂಚಿಸುತ್ತದೆ. ಹೀಗೆ ಎನ್‌ಕ್ರಿಪ್‌ಶನ್ ಕೀ ಉದ್ದ ಜಾಸ್ತಿಯಾದಷ್ಟೂ ಅದು ಬದಲಾಯಿಸಿ ಕೊಡುವ ಮಾಹಿತಿಯನ್ನು ಬೇರೆಯವರು ಅರ್ಥಮಾಡಿಕೊಳ್ಳುವುದು ಕಷ್ಟವಾಗುತ್ತದೆ.

ಇದು ಹೇಗೆ ಎಂದು ತಿಳಿಯಲು ಸೂಟ್‌ಕೇಸಿನ ನಂಬರ್ ಲಾಕ್ ಒಳ್ಳೆಯ ಉದಾಹರಣೆ. ಮೂರು ಅಂಕಿಯ ಲಾಕ್ ಇದೆ ಎಂದುಕೊಂಡರೆ ಗರಿಷ್ಟ ೧೦೦೦ ಪ್ರಯತ್ನಗಳಲ್ಲಿ ಯಾರು ಬೇಕಾದರೂ ಆ ಬೀಗವನ್ನು ತೆಗೆದುಬಿಡಬಹುದು. ಬೀಗಕ್ಕೆ ಇನ್ನೊಂದು ಅಂಕಿ ಸೇರಿಸಿದರೆ? ಬೇಕಾದ ಪ್ರಯತ್ನಗಳ ಸಂಖ್ಯೆ ೧೦,೦೦೦ಕ್ಕೆ ತಲುಪುತ್ತದೆ. ೬೪ ಅಥವಾ ೧೨೮ ಅಂಕಿಯ ಬೀಗ ಇದ್ದರೆ ಅದನ್ನು ತೆಗೆಯಲು ಎಷ್ಟು ಕಷ್ಟ ಆಗಬಹುದು ಎಂದು ನೀವೇ ಲೆಕ್ಕ ಹಾಕಿ, ಹೆಚ್ಚು ಉದ್ದನೆಯ ಎನ್‌ಕ್ರಿಪ್‌ಶನ್ ಕೀ ಯಾಕೆ ಉಪಯುಕ್ತ ಎನ್ನುವುದು ನಿಮಗೇ ಅರ್ಥವಾಗುತ್ತದೆ.

ಮಾಹಿತಿ ಸುರಕ್ಷಿತವಾಗಿರಬೇಕು, ಸರಿ. ಅದರ ಮೂಲರೂಪ ಏನು ಎಂದು ಪತ್ತೆಹಚ್ಚುವುದು ಇಷ್ಟೆಲ್ಲ ಕಷ್ಟವಾದರೆ ಹೇಗೆ? ನಾವು ಯಾರಿಗೆ ಮೆಸೇಜು ಕಳಿಸಿರುತ್ತೇವೋ ಅವರಿಗಾದರೂ ಅದರಲ್ಲಿ ಏನಿದೆ ಅಂತ ಗೊತ್ತಾಗಬೇಕಲ್ಲ!

ಡೀಕ್ರಿಪ್‌ಶನ್ ಎನ್ನುವ ಇನ್ನೊಂದು ಪ್ರಕ್ರಿಯೆ ಇದಕ್ಕೆ ಸಹಾಯಮಾಡುತ್ತದೆ. ಎನ್‌ಕ್ರಿಪ್‌ಶನ್ ಸಹಾಯದಿಂದ ಯಾವ ಮಾಹಿತಿ ಬೇರೆ ರೂಪಕ್ಕೆ ಬದಲಾಗಿರುತ್ತೋ ಅದನ್ನು ಮತ್ತೆ ಮೂಲರೂಪಕ್ಕೆ ತರುವುದು ಇದರ ಕೆಲಸ. ನಾವು ಮಾಹಿತಿಯನ್ನು ಯಾರಿಗೆ ಕಳಿಸಿರುತ್ತೇವೋ ಅವರ ಹತ್ತಿರ ಇರುವ ಡೀಕ್ರಿಪ್‌ಶನ್ ಕೀ, ಇದನ್ನು ಸಾಧ್ಯವಾಗಿಸುತ್ತದೆ.

ಅರೆ, ನನ್ನ ಹತ್ತಿರ ಎನ್‌ಕ್ರಿಪ್‌ಶನ್ ಕೀಯೂ ಇಲ್ಲ ಡೀಕ್ರಿಪ್‌ಶನ್ ಕೀಯೂ ಇಲ್ಲ ಅಂತ ಯೋಚನೆ ಮಾಡಬೇಡಿ. ಮಾಹಿತಿ ವರ್ಗಾವಣೆಯ ಸಮಯದಲ್ಲಿ ಅದರ ಸುರಕ್ಷತೆಯನ್ನು ಆಯಾ ತಂತ್ರಾಂಶ ಅಥವಾ ಜಾಲತಾಣವೇ ನೋಡಿಕೊಳ್ಳುತ್ತದೆ. ಹೀಗಾಗಿ ಈ ಕೀಗಳೆಲ್ಲ ಅವುಗಳದೇ ತಲೆನೋವು.

ನಾವು ಬಳಸುವ ತಂತ್ರಾಂಶಗಳು, ಜಾಲತಾಣಗಳು ಎಷ್ಟರಮಟ್ಟಿಗೆ ಸುರಕ್ಷಿತವಾಗಿವೆ ಎಂದು ತಿಳಿದುಕೊಳ್ಳುವುದು ಮಾತ್ರ ನಮ್ಮದೇ ಜವಾಬ್ದಾರಿ. ಜಾಲತಾಣದ ವಿಳಾಸದಲ್ಲಿ http ಬದಲು https ಇದ್ದರೆ ಆ ತಾಣದ ಜೊತೆ ನಮ್ಮ ಸಂವಹನ ಹೆಚ್ಚು ಸುರಕ್ಷಿತವಾಗಿರುತ್ತದೆ. ಅದೇರೀತಿ ನಮ್ಮ ಮೆಸೇಜಿಂಗ್ ಆಪ್‌ನಲ್ಲಿ ಸಂದೇಶಗಳ ಎನ್‌ಕ್ರಿಪ್‌ಶನ್ ಆಗುತ್ತಿದ್ದರೆ ಅವು ಬೇರೆಯವರ ಕೈಸೇರುವ ಸಾಧ್ಯತೆ ಕಡಿಮೆ. ಮೊಬೈಲಿನಲ್ಲಿ ಉಳಿಸಿಡುತ್ತೇವಲ್ಲ ಮಾಹಿತಿ, ಅದರ ಎನ್‌ಕ್ರಿಪ್‌ಶನ್ ಎನ್‌ಕ್ರಿಪ್‌ಶನ್ ಕೂಡ ಸಾಧ್ಯ.ಇದನ್ನೆಲ್ಲ ತಿಳಿದುಕೊಂಡು, ನಮ್ಮ ಕಂಪ್ಯೂಟರ್ ಹಾಗೂ ಸ್ಮಾರ್ಟ್‌ಫೋನುಗಳನ್ನೂ ಸುರಕ್ಷಿತವಾಗಿ ಇಟ್ಟುಕೊಂಡರೆ ನಮ್ಮ ವ್ಯವಹಾರಗಳ ಸುರಕ್ಷತೆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯ ಬರುವುದಿಲ್ಲ.

ವೀಡಿಯೊ ಸೌಜನ್ಯ: ಸಂವಾದ

Related Stories

No stories found.
logo
ಇಜ್ಞಾನ Ejnana
www.ejnana.com