ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಘೋಷಿಸಿರುವಂತೆ ಭಾರತವು ೨೦೭೦ರ ವೇಳೆಗೆ ಭಾರತವು ಒಂದು ರಾಷ್ಟ್ರವಾಗಿ ಕಾರ್ಬನ್ ನ್ಯೂಟ್ರಲ್ ಆಗಲು ಹೊರಟಿದೆ
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಘೋಷಿಸಿರುವಂತೆ ಭಾರತವು ೨೦೭೦ರ ವೇಳೆಗೆ ಭಾರತವು ಒಂದು ರಾಷ್ಟ್ರವಾಗಿ ಕಾರ್ಬನ್ ನ್ಯೂಟ್ರಲ್ ಆಗಲು ಹೊರಟಿದೆImage by Gerd Altmann from Pixabay

'ಕಾರ್ಬನ್ ನ್ಯೂಟ್ರಲ್' ಅಂದರೆ ಏನು?

ಯಾವುದೇ ಘಟಕ ತನ್ನ ಚಟುವಟಿಕೆಗಳ ಪರಿಣಾಮವಾಗಿ ಉತ್ಪಾದಿಸುವ ಕಾರ್ಬನ್ ಡೈಆಕ್ಸೈಡ್‌ನ ಒಟ್ಟು ಪ್ರಮಾಣವನ್ನು ಅದರ 'ಕಾರ್ಬನ್ ಫುಟ್‌‌ಪ್ರಿಂಟ್' ಎಂದು ಕರೆಯುತ್ತಾರೆ.

ವಾಯುಮಾಲಿನ್ಯ ಎಂದತಕ್ಷಣ ಹೊಗೆಯುಗುಳುವ ಕಾರ್ಖಾನೆಗಳು ನಮಗೆ ನೆನಪಾಗುತ್ತವೆ. ವಿವಿಧ ವಸ್ತುಗಳ ತಯಾರಿಕೆಗೆ ಬಳಕೆಯಾಗುವ ಯಂತ್ರಗಳು, ಅವನ್ನು ಸಾಗಿಸುವ ವಾಹನಗಳು ಇಂಧನ ಉರಿಸಿ ಹೊಗೆ ಬಿಡುತ್ತವೆ ಎನ್ನುವುದು ನಮಗೆ ಗೊತ್ತು.

ಯಾವುದೇ ವ್ಯಕ್ತಿ ಅಥವಾ ಕಟ್ಟಡ, ಸಂಸ್ಥೆ, ದೇಶ ಮುಂತಾದ ಯಾವುದೇ ಘಟಕ ತನ್ನ ಚಟುವಟಿಕೆಗಳ ಪರಿಣಾಮವಾಗಿ ಉತ್ಪಾದಿಸುವ ಕಾರ್ಬನ್ ಡೈಆಕ್ಸೈಡ್‌ನ ಒಟ್ಟು ಪ್ರಮಾಣವನ್ನು ಆ ವ್ಯಕ್ತಿ ಅಥವಾ ಘಟಕದ 'ಕಾರ್ಬನ್ ಫುಟ್‌‌ಪ್ರಿಂಟ್' ಎಂದು ಕರೆಯುತ್ತಾರೆ. ವಿಮಾನದಲ್ಲಿ ಕುಳಿತು ಬೆಂಗಳೂರಿನಿಂದ ದೆಹಲಿಗೆ ಹೋದರೆ, ನಮ್ಮೊಬ್ಬರಿಂದಲೇ ಸುಮಾರು ೧೫೦ ಕೆಜಿಯಷ್ಟು ಕಾರ್ಬನ್ ಡೈಆಕ್ಸೈಡ್‌ ವಾತಾವರಣಕ್ಕೆ ಸೇರುತ್ತದೆ ಎಂದು ಲೆಕ್ಕಾಚಾರಗಳು ತಿಳಿಸುತ್ತವೆ. ಅದು ನಮ್ಮ ಪ್ರಯಾಣದ ಕಾರ್ಬನ್ ಫುಟ್‌ಪ್ರಿಂಟ್.

ವಿಮಾನವಿರಲಿ, ಆಟೋ ಇರಲಿ, ನಮ್ಮ ಪ್ರಯಾಣದಿಂದ ಕಾರ್ಬನ್ ಡೈಆಕ್ಸೈಡ್‌ ಉತ್ಪಾದನೆಯಾಗುತ್ತದೆ ಎನ್ನುವುದನ್ನು ಅರ್ಥಮಾಡಿಕೊಳ್ಳುವುದು ಸುಲಭ. ಪ್ರಯಾಣದಲ್ಲಿ ನಾವು ಕೊಂಡೊಯ್ಯುವ ವಸ್ತುಗಳ ತಯಾರಿಕೆಯೂ ಒಂದಷ್ಟು ಕಾರ್ಬನ್ ಡೈಆಕ್ಸೈಡ್‌ ಅನ್ನು ವಾತಾವರಣಕ್ಕೆ ಸೇರಿಸಿರುತ್ತದೆ.

ಇದೇ ರೀತಿ ನಾವು ನಡೆಸುವ ಎಲ್ಲ ಚಟುವಟಿಕೆಗಳೂ ನಮ್ಮ ಕಾರ್ಬನ್ ಫುಟ್‌ಪ್ರಿಂಟ್‌ಗೆ ತಮ್ಮ ಕೊಡುಗೆ ನೀಡುತ್ತವೆ. ನಮ್ಮ ಕಾರ್ಬನ್ ಫುಟ್‌ಪ್ರಿಂಟ್ ಅನ್ನು ಸಾಧ್ಯವಾದಷ್ಟೂ ಕಡಿಮೆ ಮಾಡಿಕೊಂಡರೆ ಮಾತ್ರ ನಮ್ಮ ಪರಿಸರ ಸುಸ್ಥಿತಿಯಲ್ಲಿರುವುದು ಸಾಧ್ಯ. ಮರಗಿಡಗಳು, ಪರಿಸರ ಸ್ನೇಹಿ ತಂತ್ರಜ್ಞಾನಗಳು, ಮಾಲಿನ್ಯ ಕಡಿಮೆಗೊಳಿಸುವ ಪ್ರಯತ್ನಗಳು ಇದರಲ್ಲಿ ನೆರವಾಗುತ್ತವೆ.

ನಾವು ಉತ್ಪಾದಿಸುವಷ್ಟೇ ಪ್ರಮಾಣದ ಕಾರ್ಬನ್ ಡೈಆಕ್ಸೈಡ್ ಅನ್ನು ವಾತಾವರಣದಿಂದ ಹೊರತೆಗೆಯದಿದ್ದರೆ ವಾತಾವರಣದಲ್ಲಿರುವ ಕಾರ್ಬನ್ ಡೈ ಆಕ್ಸೈಡ್ ಪ್ರಮಾಣ ಜಾಸ್ತಿಯಾಗುತ್ತಾ ಹೋಗುತ್ತದೆ. ಪರಿಸರದ ಆರೋಗ್ಯದ ದೃಷ್ಟಿಯಿಂದ ಇದು ಒಳ್ಳೆಯದಲ್ಲ. ಹಾಗಾಗಿಯೇ ಕಾರ್ಬನ್ ಡೈಆಕ್ಸೈಡ್ ಪ್ರಮಾಣವನ್ನು ಕಡಿಮೆಮಾಡುವ ಪ್ರಯತ್ನಗಳು ಜಗತ್ತಿನೆಲ್ಲೆಡೆ ನಡೆಯುತ್ತಿವೆ. ಕಾರ್ಬನ್ ಡೈ ಆಕ್ಸೈಡನ್ನು ವಾತಾವರಣದಿಂದ ಹೀರಿಕೊಳ್ಳಲು ಮರಗಳನ್ನು ಬೆಳೆಸುವುದರಿಂದ ಪ್ರಾರಂಭಿಸಿ ಇದಕ್ಕಾಗಿ ಹೊಸದೇ ಆದ ತಂತ್ರಜ್ಞಾನಗಳನ್ನು ರೂಪಿಸುವವರೆಗೆ ಇಂತಹ ಕಾರ್ಯಕ್ರಮಗಳ ವ್ಯಾಪ್ತಿ ವಿಸ್ತರಿಸಿಕೊಂಡಿರುವುದು ವಿಶೇಷ. ಕಲ್ಲಿದ್ದಲಿನಂತಹ ಪಳೆಯುಳಿಕೆ ಇಂಧನಗಳ ಬದಲು ಸೌರಶಕ್ತಿ - ಪವನಶಕ್ತಿಯಂತಹ ನವೀಕರಿಸಬಹುದಾದ ಸಂಪನ್ಮೂಲಗಳನ್ನು ಹೆಚ್ಚುಹೆಚ್ಚಾಗಿ ಬಳಸುವುದಕ್ಕೂ ಈ ಪ್ರಯತ್ನಗಳ ಅಂಗವಾಗಿ ಉತ್ತೇಜನ ನೀಡಲಾಗುತ್ತಿದೆ.

ಇಂತಹ ಪ್ರಯತ್ನಗಳ ಫಲವಾಗಿ ಯಾವುದೇ ಸಂಸ್ಥೆ ಅಥವಾ ದೇಶ ತಾನು ವಾತಾವರಣಕ್ಕೆ ಸೇರಿಸುವಷ್ಟೇ ಕಾರ್ಬನ್ ಡೈಆಕ್ಸೈಡ್‌‌ ಅನ್ನು ವಾತಾವರಣದಿಂದ ಹೊರತೆಗೆದರೆ ಆಗ ಅದು 'ಕಾರ್ಬನ್ ನ್ಯೂಟ್ರಲ್' ಎಂದು ಕರೆಸಿಕೊಳ್ಳುತ್ತದೆ. ಕಾರ್ಬನ್ ಫುಟ್‌ಪ್ರಿಂಟ್ ಅನ್ನು ಕಾರ್ಬನ್ನಿನ ಕಲೆ ಎಂದು ಕರೆಯುವುದಾದರೆ ಕಾರ್ಬನ್ ನ್ಯೂಟ್ರಲ್ ಸಂಸ್ಥೆ ಅಥವಾ ದೇಶ ಆ ಕಲೆಯನ್ನು ಉಳಿಸದಂತೆ ನೋಡಿಕೊಳ್ಳುತ್ತದೆ. ಈಚೆಗಷ್ಟೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಘೋಷಿಸಿರುವಂತೆ ಭಾರತವು ೨೦೭೦ರ ವೇಳೆಗೆ ಭಾರತವು ಒಂದು ರಾಷ್ಟ್ರವಾಗಿ ಕಾರ್ಬನ್ ನ್ಯೂಟ್ರಲ್ ಆಗಲು ಹೊರಟಿದೆ, ಅಂದರೆ ಕಾರ್ಬನ್ನಿನ ಕಲೆಯುಳಿಸದ ದೇಶವಾಗಲಿದೆ.

ಇದೇ ರೀತಿ ಯಾವುದಾದರೂ ಸಂಸ್ಥೆ ಅಥವಾ ದೇಶ ತಾನು ವಾತಾವರಣಕ್ಕೆ ಸೇರಿಸುವ ಕಾರ್ಬನ್ ಡೈಆಕ್ಸೈಡ್‌‌ಗಿಂತ ಹೆಚ್ಚಿನ ಪ್ರಮಾಣವನ್ನು ವಾತಾವರಣದಿಂದ ತೆಗೆಯುವುದು ಸಾಧ್ಯವಾದರೆ ಆಗ ಅದನ್ನು 'ಕಾರ್ಬನ್ ನೆಗೆಟಿವ್' ಎಂದು ಕರೆಯುತ್ತಾರೆ. ಇದು ಕಾರ್ಬನ್ ನ್ಯೂಟ್ರಲ್ ಆಗುವುದಕ್ಕಿಂತ ಹೆಚ್ಚುಗಾರಿಕೆಯ ವಿಷಯ. ಹೊಸದಾಗಿ ಯಾವುದೇ ಕಲೆ ಮಾಡದಿರುವುದಷ್ಟೇ ಅಲ್ಲ, ಈ ಹಿಂದೆ ತಾನು ಮಾಡಿದ ಕಲೆಯನ್ನೂ ಅಳಿಸುವ ಹಾಗೆ!

Related Stories

No stories found.
logo
ಇಜ್ಞಾನ Ejnana
www.ejnana.com