ಬ್ಲಾಕ್‌ಚೈನ್ ಅಂದರೆ ಏನು?
ಬ್ಲಾಕ್‌ಚೈನ್ ಒಂದು ಲೆಕ್ಕದ ಪುಸ್ತಕ ಇದ್ದಹಾಗೆImage by Pete Linforth from Pixabay

ಬ್ಲಾಕ್‌ಚೈನ್ ಅಂದರೆ ಏನು?

ಬಿಟ್‌ಕಾಯಿನ್ ಭರಾಟೆ ಕಡಿಮೆಯಾಗುತ್ತಿರುವ ಸಮಯದಲ್ಲೇ ಅದರ ಹಿಂದಿರುವ ತಂತ್ರಜ್ಞಾನವೊಂದು ಮಾತ್ರ ಸದ್ದಿಲ್ಲದೆ ಮುನ್ನೆಲೆಗೆ ಬರುತ್ತಿದೆ

ವರ್ಷದ ಹಿಂದೆ ಬಿಟ್‌ಕಾಯಿನ್ ಎಂಬ ಹೆಸರು ಸುದ್ದಿಯಲ್ಲಿದ್ದದ್ದು ಅನೇಕರಿಗೆ ನೆನಪಿರಬಹುದು. ಸರ್ಕಾರಗಳ ಹಂಗಿಲ್ಲದ, ನಾಣ್ಯನೋಟುಗಳ ಗೊಡವೆಯಿಲ್ಲದ ಈ ವರ್ಚುಯಲ್ ಹಣ ಅದೆಷ್ಟೋ ಜನರನ್ನು ಭಾರೀ ಶ್ರೀಮಂತರನ್ನಾಗಿಸಿದ್ದೂ ನಿಜವೇ. ಆನಂತರದ ಅನಿಶ್ಚಿತತೆಯ ನಡುವೆ ಬಿಟ್‌ಕಾಯಿನ್ ಹಾಗೂ ಅಂತಹವೇ ಇನ್ನಷ್ಟು ಡಿಜಿಟಲ್ ಕರೆನ್ಸಿಗಳ ಭರಾಟೆ ಈಗ ಕೊಂಚ ಕಡಿಮೆಯಾಗಿದೆ. ಅವುಗಳ ನಿಯಂತ್ರಣಕ್ಕೆ ಸರ್ಕಾರಗಳೂ ಸಾಕಷ್ಟು ವಿಸ್ತೃತ ನಿಯಮ ನಿಬಂಧನೆಗಳನ್ನು ರೂಪಿಸಿವೆ.

ಈ ಎಲ್ಲ ಘಟನೆಗಳ ನಡುವೆ, ಬಿಟ್‌ಕಾಯಿನ್ ಮತ್ತಿತರ ಡಿಜಿಟಲ್ ಕರೆನ್ಸಿಗಳ ಹಿಂದಿರುವ ತಂತ್ರಜ್ಞಾನವೊಂದು ಮಾತ್ರ ಸದ್ದಿಲ್ಲದೆ ಮುನ್ನೆಲೆಗೆ ಬರುತ್ತಿದೆ, ಹಾಗೂ ತನ್ನ ವ್ಯಾಪ್ತಿಯನ್ನು ಹಣಕಾಸು ಕ್ಷೇತ್ರದಿಂದಾಚೆಗೂ ವಿಸ್ತರಿಸಿಕೊಳ್ಳುತ್ತಿದೆ. ಆ ತಂತ್ರಜ್ಞಾನದ ಹೆಸರೇ ಬ್ಲಾಕ್‌ಚೈನ್.

ಬ್ಲಾಕ್‌ಚೈನ್ ಒಂದು ಲೆಕ್ಕದ ಪುಸ್ತಕ ಇದ್ದಹಾಗೆ. ಬಿಟ್‌ಕಾಯಿನ್ ಉದಾಹರಣೆಯನ್ನೇ ತೆಗೆದುಕೊಂಡರೆ, ಯಾರು ಯಾವಾಗ ಯಾರಿಗೆ ಹಣ ಪಾವತಿಸಿದರು ಎನ್ನುವ ವಿವರವೆಲ್ಲ ಇದರಲ್ಲಿ ದಾಖಲಾಗಿರುತ್ತದೆ.

ಈ ಲೆಕ್ಕದ ಪುಸ್ತಕ ಸಾರ್ವಜನಿಕವಾದದ್ದು ಹಾಗೂ ಶಾಶ್ವತವಾದದ್ದು ಎನ್ನುವುದು ವಿಶೇಷ. ಇದರಲ್ಲಿರುವ ವಿವರಗಳು ಒಂದು ಸಂಸ್ಥೆಯಲ್ಲೋ ಅದರ ಕಂಪ್ಯೂಟರಿನಲ್ಲೋ ಮಾತ್ರವೇ ಇರದೆ ವಿಶ್ವದಾದ್ಯಂತ ಇರುವ ಸಾವಿರಾರು ಕಂಪ್ಯೂಟರುಗಳಲ್ಲಿ ಸಂಗ್ರಹವಾಗಿರುತ್ತದೆ (ಇಂತಹ ಕಂಪ್ಯೂಟರುಗಳನ್ನು 'ನೋಡ್'ಗಳೆಂದು ಕರೆಯುತ್ತಾರೆ). ಈ ಲೆಕ್ಕದ ಪುಸ್ತಕದಲ್ಲಿ ಹೊಸದಾದ ಅಸಲೀ ಲೆಕ್ಕಗಳನ್ನು ಬರೆದಿಡಬಹುದೇ ಹೊರತು ಸುಳ್ಳು ಲೆಕ್ಕ ಸೇರಿಸುವುದಾಗಲೀ ಒಮ್ಮೆ ಬರೆದಿಟ್ಟಿದ್ದನ್ನು ಬದಲಿಸುವುದಾಗಲೀ ಮಾಡುವಂತಿಲ್ಲ. ಅಲ್ಲದೆ ಈ ವ್ಯವಸ್ಥೆ ಯಾರೋ ಒಬ್ಬರ ಅಥವಾ ಒಂದು ಸಂಸ್ಥೆಯ ನಿಯಂತ್ರಣದಲ್ಲೂ ಇರುವುದಿಲ್ಲ. ಹೀಗಾಗಿ ಹಣಕಾಸು ವ್ಯವಹಾರದಂತಹ ಮಹತ್ವದ ವಿವರಗಳನ್ನು - ಬ್ಯಾಂಕ್‌ನಂತಹ ಮಧ್ಯವರ್ತಿಗಳ ಅಗತ್ಯ ಇಲ್ಲದೆಯೇ - ಉಳಿಸಿಡಲು ಬ್ಲಾಕ್‌ಚೈನ್ ಅತ್ಯಂತ ಸೂಕ್ತ.

ದತ್ತಾಂಶ ಖಂಡಗಳ (ಬ್ಲಾಕ್) ಸರಣಿ (ಚೈನ್) ಜೋಡಣೆಯಿಂದ ರೂಪುಗೊಂಡಿರುವುದರಿಂದ ಇದಕ್ಕೇ ಬ್ಲಾಕ್‌ಚೈನ್ ಎಂದು ಹೆಸರು. ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದ ವ್ಯವಹಾರಗಳ (ಟ್ರಾನ್ಸಾಕ್ಷನ್) ಕುರಿತ ದತ್ತಾಂಶವನ್ನು ಇಂತಹ ಪ್ರತಿಯೊಂದು ಖಂಡದಲ್ಲೂ ಉಳಿಸಿಡಲಾಗಿರುತ್ತದೆ. ಗೂಢಲಿಪಿವಿಜ್ಞಾನದ (ಕ್ರಿಪ್ಟೋಗ್ರಫಿ) ತಂತ್ರಗಳನ್ನು ಬಳಸುವ ಮೂಲಕ ಈ ಸರಣಿಯ ಭಾಗವಾದ ಖಂಡಗಳನ್ನು ಒಂದಕ್ಕೊಂದು ಜೋಡಿಸಲಾಗಿರುತ್ತದೆ.

ಉದಾಹರಣೆಗೆ ನೀವು ನಿಮ್ಮ ಗೆಳೆಯರಿಗೆ ಹಣ ಪಾವತಿ ಮಾಡಲು ಹೊರಟಿದ್ದೀರಿ ಎಂದುಕೊಳ್ಳೋಣ. ಬ್ಲಾಕ್‌ಚೈನ್ ಭಾಷೆಯಲ್ಲಿ ಇದು ಒಂದು ವ್ಯವಹಾರ (ಟ್ರಾನ್ಸಾಕ್ಷನ್). ಈ ವ್ಯವಹಾರ ಪ್ರಾರಂಭಿಸುವ ಮುನ್ನ ನಿಮ್ಮ ಖಾತೆಯಲ್ಲಿ ಹಣವಿದೆ ಎನ್ನುವುದನ್ನು ಹಿಂದಿನ ವ್ಯವಹಾರವೊಂದಕ್ಕೆ (ಉದಾ: ಕಚೇರಿಯಿಂದ ಸಂಬಳ ಬಂದಿದ್ದು) ಸಂಬಂಧ ಸೂಚಿಸುವ ಮೂಲಕ (ರೆಫರೆನ್ಸ್) ತೋರಿಸಬೇಕಾಗುತ್ತದೆ. ಇದರ ಜೊತೆಗೆ ನಿಮ್ಮ ಗೆಳೆಯರ ಖಾತೆಯ ವಿವರವನ್ನೂ ನಿಮ್ಮ ಗುರುತಿನ ದೃಢೀಕರಣವನ್ನೂ ಸೇರಿಸಿದ ನಂತರ ಆ ವ್ಯವಹಾರವನ್ನು ಬ್ಲಾಕ್‌ಚೈನ್ ವ್ಯವಸ್ಥೆಯಲ್ಲಿರುವ ಎಲ್ಲ ಕಂಪ್ಯೂಟರುಗಳಿಗೆ ('ನೋಡ್‌') ಕಳಿಸಲಾಗುತ್ತದೆ. ಆ ವ್ಯವಹಾರ ಬ್ಲಾಕ್‌ಚೈನ್‌ನ ನಿಯಮಗಳನ್ನೆಲ್ಲ ಸರಿಯಾಗಿ ಪಾಲಿಸಿದ್ದರೆ ನೋಡ್‌ಗಳು ಅದನ್ನು ಸ್ವೀಕರಿಸುತ್ತವೆ.

ಸ್ವೀಕೃತವಾದ ವ್ಯವಹಾರಗಳನ್ನು ಹೊಸದೊಂದು ಖಂಡಕ್ಕೆ (ಬ್ಲಾಕ್) ಸೇರಿಸುವ ಜವಾಬ್ದಾರಿಯನ್ನು ಕೆಲ ವಿಶಿಷ್ಟ ನೋಡ್‌ಗಳಿಗೆ ಕೊಟ್ಟಿರುತ್ತಾರೆ. ಇಂತಹ ನೋಡ್‌ಗಳಿಗೆ 'ಮೈನರ್'ಗಳೆಂದು ಹೆಸರು (ಮೈನರ್ = ಗಣಿ ಕೆಲಸಗಾರ). ವ್ಯವಹಾರದ ಬಗ್ಗೆ ಅಗತ್ಯ ದತ್ತಾಂಶವೆಲ್ಲ ಸಿದ್ಧವಾದ ನಂತರ ಇವು ಅದನ್ನು ಹೊಸ ಖಂಡಕ್ಕೆ ಸೇರಿಸಬಹುದೇ ಎಂದು ಲೆಕ್ಕಹಾಕಲು ಪ್ರಾರಂಭಿಸುತ್ತವೆ. ಈ ಲೆಕ್ಕಾಚಾರವನ್ನು ಮೊದಲು ಮುಗಿಸಿದ ಮೈನರ್, 'ನಾನ್ಸ್' ಎಂಬ ಸಂಖ್ಯೆಯನ್ನು ಪತ್ತೆಮಾಡುತ್ತದೆ. ಆನಂತರ ಆ ಖಂಡದಲ್ಲಿರುವ ದತ್ತಾಂಶದ ಜೊತೆ ಈ ಸಂಖ್ಯೆಯನ್ನು ಸೇರಿಸಿ, ಗೂಢಲಿಪೀಕರಣ (ಎನ್‌ಕ್ರಿಪ್ಟ್) ಮಾಡಿ, 'ಹ್ಯಾಶ್' ಎಂಬ ಅಕ್ಷರ ಪುಂಜವನ್ನು ರೂಪಿಸುತ್ತದೆ. ಈ ಹ್ಯಾಶ್ ಎನ್ನುವುದು ಪ್ರತಿ ಖಂಡವನ್ನೂ ಪ್ರತ್ಯೇಕವಾಗಿ ಗುರುತಿಸುವ ಬೆರಳೊತ್ತು (ಫಿಂಗರ್‌ಪ್ರಿಂಟ್) ಇದ್ದಹಾಗೆ.

ಲೆಕ್ಕಾಚಾರವನ್ನು ಮೊದಲು ಮುಗಿಸಿದ ಮೈನರ್, ತಾನು ರೂಪಿಸಿದ ಹ್ಯಾಶ್ ಅನ್ನು ಇನ್ನುಳಿದ ಮೈನರ್‌ಗಳಿಗೆ ಕಳುಹಿಸುತ್ತದೆ. ಅದನ್ನು ಹಾಗೂ ಅದರ ಹಿಂದಿನ ಖಂಡದ ಹ್ಯಾಶ್ ಅನ್ನು ಪರಿಶೀಲಿಸುವ ಮೈನರ್‌ಗಳು ಎಲ್ಲ ಸರಿಯಿದ್ದರೆ ಮಾತ್ರ ಅದನ್ನು ಬ್ಲಾಕ್‌ಚೈನ್‌ಗೆ ಸೇರಿಸಿಕೊಳ್ಳುತ್ತವೆ. ಈ ಪ್ರಕ್ರಿಯೆಗೆ 'ಪ್ರೂಫ್ ಆಫ್ ವರ್ಕ್' ಎಂದು ಹೆಸರು.

ಬ್ಲಾಕ್‌ಚೈನ್‌ನ ಯಾವುದೇ ಖಂಡದಲ್ಲಿರುವ ಮಾಹಿತಿಯನ್ನು ಯಾರಾದರೂ ಬದಲಾಯಿಸಿದರೆ ಅವರು ಅದರ ಹ್ಯಾಶ್ ಅನ್ನೂ ಬದಲಾಯಿಸಬೇಕಾಗುತ್ತದೆ. ಅಷ್ಟೇ ಅಲ್ಲ, ಅದರಲ್ಲಿ ಹಿಂದಿನ ಖಂಡದ ಹ್ಯಾಶ್ ಕೂಡ ಇರುವುದರಿಂದ ಅದನ್ನೂ ಬದಲಿಸಬೇಕಾಗುತ್ತದೆ. ಹೀಗೆ ಇಡೀ ಸರಣಿಯನ್ನೇ ಬದಲಾಯಿಸುತ್ತಾ ಹೋಗುವುದು, ಆ ಬದಲಾವಣೆಗಳಿಗೆ ಎಲ್ಲ ಮೈನರ್‌ಗಳಿಂದ ಅನುಮೋದನೆ ಪಡೆದುಕೊಳ್ಳುವುದು ಬಹುತೇಕ ಅಸಾಧ್ಯವೇ ಆದ್ದರಿಂದ ಬ್ಲಾಕ್‌ಚೈನ್ ವ್ಯವಸ್ಥೆಯಲ್ಲಿ ವಂಚನೆ ನಡೆಯುವ ಸಾಧ್ಯತೆ ಬಹಳ ಕಡಿಮೆ.

ಬ್ಲಾಕ್‌ಚೈನ್ ತಂತ್ರಜ್ಞಾನ ಮೊದಲಿಗೆ ಸುದ್ದಿಮಾಡಿದ್ದು ಬಿಟ್‌ಕಾಯಿನ್‌ನಿಂದಾಗಿ
ಬ್ಲಾಕ್‌ಚೈನ್ ತಂತ್ರಜ್ಞಾನ ಮೊದಲಿಗೆ ಸುದ್ದಿಮಾಡಿದ್ದು ಬಿಟ್‌ಕಾಯಿನ್‌ನಿಂದಾಗಿImage by pattymalajak from Pixabay

ಆದ್ದರಿಂದಲೇ ಹಣಕಾಸು ವ್ಯವಹಾರಗಳ ನಿರ್ವಹಣೆಯಲ್ಲಿ ಬ್ಲಾಕ್‌ಚೈನ್ ಭವಿಷ್ಯದ ಬಗ್ಗೆ ಸಾಕಷ್ಟು ನಿರೀಕ್ಷೆ ಸೃಷ್ಟಿಯಾಗಿದೆ. ಹಣಕಾಸು ವ್ಯವಹಾರಗಳಾಚೆಗೂ ಬ್ಲಾಕ್‌ಚೈನ್ ಬಳಸುವ ಸಾಧ್ಯತೆಗಳನ್ನು ಪರೀಕ್ಷಿಸಲಾಗುತ್ತಿದೆ. ಉದಾಹರಣೆಗೆ, ನಾವು ಬಳಸುವ ಆಹಾರ ಪದಾರ್ಥಗಳು ಎಲ್ಲಿಂದ ಬಂದಿವೆ, ಅವುಗಳನ್ನು ಬೆಳೆಸಲು ಸಾವಯವ ವಿಧಾನ ಬಳಸಿದ್ದಾರೋ ಇಲ್ಲವೋ ಎನ್ನುವುದನ್ನೆಲ್ಲ ಬ್ಲಾಕ್‌ಚೈನ್ ಬಳಸಿ ನಿಖರವಾಗಿ ತಿಳಿದುಕೊಳ್ಳಬಹುದು ಎನ್ನುವುದನ್ನು ಈಗಾಗಲೇ ಪ್ರಾಯೋಗಿಕವಾಗಿ ತೋರಿಸಲಾಗಿದೆ. ವಜ್ರದ ಗಣಿಗಾರಿಕೆ ಹಾಗೂ ವಿತರಣೆಯ ಸುತ್ತ ಇಂಥದ್ದೇ ಇನ್ನೊಂದು ವ್ಯವಸ್ಥೆ ರೂಪಿಸಿದರೆ, ಅಕ್ರಮ ಚಟುವಟಿಕೆಗಳನ್ನು ಬೆಂಬಲಿಸುವ ಗಣಿಗಳಿಂದ ಬಂದ ವಜ್ರವನ್ನು (ಬ್ಲಡ್ ಡೈಮಂಡ್) ಥಟ್ಟನೆ ಗುರುತಿಸುವುದು ಕೂಡ ಸಾಧ್ಯವಾಗಬಹುದು.

ಬದುಕಿನ ಹಲವು ಕ್ಷೇತ್ರಗಳಲ್ಲಿ ಬಳಕೆಯಾಗುವ ಒಪ್ಪಂದಗಳನ್ನು (ಕಾಂಟ್ರಾಕ್ಟ್) ಸ್ಮಾರ್ಟ್ ಆಗಿಸುವಲ್ಲೂ ಬ್ಲಾಕ್‌ಚೈನ್ ವ್ಯವಸ್ಥೆ ನೆರವಾಗಬಲ್ಲದು. ಉದಾಹರಣೆಗೆ, ಸಾಮಗ್ರಿಯ ಪೂರೈಕೆಯಾದ ಮೂವತ್ತು ದಿನಗಳಲ್ಲಿ ಹಣ ಪಾವತಿಸುವುದಾಗಿ ವಿತರಕ ಹಾಗೂ ಚಿಲ್ಲರೆ ಮಾರಾಟಗಾರ ನಡುವೆ ಒಪ್ಪಂದವಿದೆ ಎಂದುಕೊಳ್ಳೋಣ. ಸಾಮಗ್ರಿಯ ರವಾನೆ - ಸ್ವೀಕಾರ ಎರಡೂ ಸರಿಯಾಗಿ ಆಗಿದೆಯೇ, ಪೂರೈಕೆಯಾದ ಸಾಮಗ್ರಿಗೆ ಸರಕುಪಟ್ಟಿ (ಇನ್‌ವಾಯ್ಸ್) ಬಂದಿದೆಯೇ ಎನ್ನುವುದನ್ನೆಲ್ಲ ಗಮನಿಸಿ ಎಲ್ಲವೂ ಸರಿಯಿದ್ದಲ್ಲಿ ಮೂವತ್ತು ದಿನಗಳ ನಂತರ ವಿತರಕರಿಗೆ ತಂತಾನೇ ಹಣ ಪಾವತಿಯಾಗುವಂತೆ ಬ್ಲಾಕ್‌ಚೈನ್ ವ್ಯವಸ್ಥೆ ನೋಡಿಕೊಳ್ಳಬಲ್ಲದು.

ಇಷ್ಟೆಲ್ಲ ವೈವಿಧ್ಯಮಯ ಸಾಧ್ಯತೆಗಳಿಂದಾಗಿ ಸಾಕಷ್ಟು ಭರವಸೆ ಮೂಡಿಸಿದ್ದರೂ ಕೂಡ ಬ್ಲಾಕ್‌ಚೈನ್ ವ್ಯವಸ್ಥೆ ಇನ್ನೂ ವ್ಯಾಪಕವಾಗಿ ಬಳಕೆಯಾಗುತ್ತಿಲ್ಲ. ಆದರೆ ಈ ವ್ಯವಸ್ಥೆಯ ಬಳಕೆ ಮುಂದಿನ ದಿನಗಳಲ್ಲಿ ಹೆಚ್ಚಾಗಲಿದೆ ಎಂದು ತಜ್ಞರು ಹೇಳುತ್ತಾರೆ. ಗಾರ್ಟ್‌ನರ್ ಸಂಸ್ಥೆಯ ಅಂದಾಜಿನಂತೆ ೨೦೩೦ರ ವೇಳೆಗೆ ಬ್ಲಾಕ್‌ಚೈನ್ ವ್ಯವಸ್ಥೆಗಳ ಮೂಲಕ ೩ ಟ್ರಿಲಿಯನ್ ಡಾಲರುಗಳಿಗೂ ಹೆಚ್ಚು ಮೌಲ್ಯದ ವಹಿವಾಟು ನಡೆಯಲಿದೆಯಂತೆ. ಇದು ತಂತ್ರಜ್ಞಾನ ಕ್ಷೇತ್ರದಲ್ಲಿ ದೊಡ್ಡಪ್ರಮಾಣದ ಉದ್ಯೋಗ ಸೃಷ್ಟಿಗೂ ಕಾರಣವಾಗುವ ನಿರೀಕ್ಷೆಯಿದೆ.

ಜುಲೈ ೩, ೨೦೧೯ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

ಬ್ಲಾಕ್‌ಚೈನ್ ಒಂದು ಲೆಕ್ಕದ ಪುಸ್ತಕ ಇದ್ದಹಾಗೆ
ಬಿಟ್‌ಕಾಯಿನ್ ಎಂದರೇನು?
Whenever there is a discussion about cryptocurrency, there is a mention of blockchain. What is this blockchain? Read this article in Kannada to understand!

Related Stories

No stories found.
ಇಜ್ಞಾನ Ejnana
www.ejnana.com