ಬಿಟ್‌ಕಾಯಿನ್ ಎನ್ನುವುದು ಅಂತರಜಾಲ ಲೋಕದಲ್ಲಿ ಬಳಕೆಯಾಗುವ ವರ್ಚುಯಲ್ ಹಣ
ಬಿಟ್‌ಕಾಯಿನ್ ಎನ್ನುವುದು ಅಂತರಜಾಲ ಲೋಕದಲ್ಲಿ ಬಳಕೆಯಾಗುವ ವರ್ಚುಯಲ್ ಹಣImage by pattymalajak from Pixabay

ಬಿಟ್‌ಕಾಯಿನ್ ಎಂದರೇನು?

ನಾಣ್ಯ-ನೋಟುಗಳಾವುದೂ ಇಲ್ಲದ, ಕಂಪ್ಯೂಟರ್ ಪ್ರಪಂಚಕ್ಕೆ ಮಾತ್ರವೇ ಸೀಮಿತವಾದ ಈ ಹಣದ ಬಗ್ಗೆ ಇಷ್ಟೆಲ್ಲ ಕುತೂಹಲ ಏಕೆ?

ಬಿಟ್‌ಕಾಯಿನ್ ಎನ್ನುವುದು ಅಂತರಜಾಲ ಲೋಕದಲ್ಲಿ ಬಳಕೆಯಾಗುವ ವರ್ಚುಯಲ್ ಹಣ. ಭಾರತದಲ್ಲಿ ರೂಪಾಯಿ, ಅಮೆರಿಕಾದಲ್ಲಿ ಡಾಲರುಗಳೆಲ್ಲ ಇದ್ದ ಹಾಗೆ ಅಂತರಜಾಲದ ಹಣ ಇದು. ಅಂತರಜಾಲ ಹೇಗೆ ಮಿಥ್ಯಾಲೋಕವೋ ಅಲ್ಲಿ ಚಲಾವಣೆಯಾಗುವ ಈ 'ಬಿಟ್‌ಕಾಯಿನ್' ಕೂಡ ವರ್ಚುಯಲ್, ಅಂದರೆ ಕಣ್ಣಿಗೆ ಕಾಣದ, ಕರೆನ್ಸಿಯೇ.

ಮೂಲತಃ ನಾಣ್ಯ-ನೋಟುಗಳಾವುದೂ ಇಲ್ಲದ ಬಿಟ್‌ಕಾಯಿನ್ ಅಸ್ತಿತ್ವ ಕಂಪ್ಯೂಟರ್ ಪ್ರಪಂಚಕ್ಕೆ ಸೀಮಿತ. ನಾವೆಲ್ಲ ಪರ್ಸಿನಲ್ಲಿ ದುಡ್ಡು ಇಟ್ಟುಕೊಳ್ಳುತ್ತೇವಲ್ಲ, ಬಿಟ್‌ಕಾಯಿನ್‌ಗಳನ್ನು ಕಂಪ್ಯೂಟರಿನಲ್ಲಿರುವ ಡಿಜಿಟಲ್ ವ್ಯಾಲೆಟ್‌ಗಳಲ್ಲಷ್ಟೆ ಇಟ್ಟುಕೊಳ್ಳುವುದು ಸಾಧ್ಯ - ಶೇರುಗಳು ನಮ್ಮ ಕಣ್ಣಿಗೆ ಕಾಣದಂತೆ ಡಿಮ್ಯಾಟ್ ರೂಪದಲ್ಲಿರುತ್ತವಲ್ಲ, ಹಾಗೆ.

ಬಿಟ್‌ಕಾಯಿನ್ ವ್ಯವಸ್ಥೆ ಪರಿಚಯವಾದದ್ದು ೨೦೦೯ರಲ್ಲಿ. ಸಟೋಶಿ ನಕಾಮೋಟೋ ಎಂಬ ಹೆಸರಿನ ಅಜ್ಞಾತ ವ್ಯಕ್ತಿಯನ್ನು ಬಿಟ್‌ಕಾಯಿನ್ ಸೃಷ್ಟಿಕರ್ತ ಎಂದು ಗುರುತಿಸಲಾಗುತ್ತದೆ. ಆದರೆ ಅದು ಯಾರದ್ದಾದರೂ ನಿಜವಾದ ಹೆಸರೋ ಅಲ್ಲವೋ ಎನ್ನುವುದರ ಬಗ್ಗೆ ಸಾಕಷ್ಟು ಸಂದೇಹಗಳಿವೆ. ಅಷ್ಟೇ ಅಲ್ಲ, ಬಿಟ್‌ಕಾಯಿನ್ ಸೃಷ್ಟಿಯ ಹಿಂದೆ ದೊಡ್ಡದೊಂದು ತಂಡವೇ ಇರುವ ಸಂಶಯ ಕೂಡ ಇದೆ.

ಪ್ರತಿ ದೇಶದಲ್ಲೂ ಚಲಾವಣೆಯಲ್ಲಿರುವ ಕರೆನ್ಸಿಗಳಂತೆ ಬಿಟ್‌ಕಾಯಿನ್ ಅನ್ನು ಯಾವುದೇ ಬ್ಯಾಂಕ್ ಅಥವಾ ಸರಕಾರ ನಿಯಂತ್ರಿಸುವುದಿಲ್ಲ. ಹಾಗೆಂದಮಾತ್ರಕ್ಕೆ ಬಿಟ್‌ಕಾಯಿನ್ ಕರೆನ್ಸಿಯನ್ನು ಗೊತ್ತುಗುರಿಯಿಲ್ಲದಂತೆ ಚಲಾವಣೆಗೆ ತರಲಾಗುತ್ತದೆ ಎಂದೇನೂ ಇಲ್ಲ, ಪೂರೈಕೆ ಹೆಚ್ಚಾಗಿ ಹಣದುಬ್ಬರ ಉಂಟಾಗದಂತೆ ತಡೆಯಲು ಪ್ರತಿಬಾರಿಯೂ ನಿರ್ದಿಷ್ಟ ಪ್ರಮಾಣದ ಬಿಟ್‌ಕಾಯಿನ್‌ಗಳಷ್ಟೆ ಹೊಸದಾಗಿ ಚಲಾವಣೆಗೆ ಬರುತ್ತವೆ.

ಅದೇನೋ ಸರಿ, ಈ ಬಿಟ್‌ಕಾಯಿನ್ ಅನ್ನು ಸಂಪಾದಿಸುವುದು ಹೇಗೆ?

ಬಿಟ್‌ಕಾಯಿನ್ ಸಂಪಾದಿಸಬೇಕು ಎನ್ನುವವರು ತಮ್ಮ ಕಂಪ್ಯೂಟರುಗಳಲ್ಲಿ ಒಂದು ವಿಶೇಷ ತಂತ್ರಾಂಶವನ್ನು ಅನುಸ್ಥಾಪಿಸಿಕೊಳ್ಳಬೇಕು. ಅನೇಕ ಜನರು ಹೀಗೆ ಸೇರಿದಾಗ ದೊರಕುವ ಸಂಸ್ಕರಣಾ ಸಾಮರ್ಥ್ಯವನ್ನು ಬಳಸಿಕೊಂಡು ವಿಶ್ವದೆಲ್ಲೆಡೆಯ ಬಿಟ್‌ಕಾಯಿನ್ ಬಳಕೆದಾರರು ನಡೆಸುವ ವಹಿವಾಟನ್ನೆಲ್ಲ ಸಂಸ್ಕರಿಸುವ ಕೆಲಸ ನಡೆಯುತ್ತದೆ. ಈ ಪ್ರಕ್ರಿಯೆಯಲ್ಲಿ ಹಲವಾರು ಸಂಕೀರ್ಣ ಲೆಕ್ಕಾಚಾರಗಳನ್ನು ಕೈಗೊಳ್ಳಬೇಕಾದ್ದರಿಂದ ಅದು ಕ್ಲಿಷ್ಟವಷ್ಟೇ ಅಲ್ಲ, ನಿಧಾನವೂ ಹೌದು. ಈ ಪ್ರಕ್ರಿಯೆ ಮುಂದುವರೆಯುತ್ತ ಹೋದಂತೆ ಅದರಲ್ಲಿ ನೆರವಾದವರಿಗೆ ಬಿಟ್‌ಕಾಯಿನ್ ರೂಪದ ಹಣ ದೊರಕುತ್ತ ಹೋಗುತ್ತದೆ, ಆ ಮೂಲಕ ಚಲಾವಣೆಯಲ್ಲಿರುವ ಬಿಟ್‌ಕಾಯಿನ್‌ಗಳ ಪ್ರಮಾಣವೂ ಹೆಚ್ಚುತ್ತದೆ. ಚಲಾವಣೆಗೆ ಬರುವ ಬಿಟ್‌ಕಾಯಿನ್‌ಗಳ ಪ್ರಮಾಣ ಹೆಚ್ಚುತ್ತಿದ್ದಂತೆ ಬಳಕೆದಾರರಿಗೆ ಹೊಸದಾಗಿ ಸಿಗುವ ಬಿಟ್‌ಕಾಯಿನ್‌ಗಳ ಸಂಖ್ಯೆಯೂ ಕಡಿಮೆಯಾಗುತ್ತ ಹೋಗುತ್ತದೆ.

ಬಳ್ಳಾರಿಯಲ್ಲಿ ಮಣ್ಣು ಬಗೆಯುವ ಬದಲು ಕಂಪ್ಯೂಟರಿನಲ್ಲಿ ಬಿಟ್‌ಕಾಯಿನ್ ಕೂಡಿಸುವ ಈ ಪ್ರಕ್ರಿಯೆಗೂ 'ಮೈನಿಂಗ್' ಎಂದೇ ಹೆಸರು. ಬಿಟ್‌ಕಾಯಿನ್ ಗಣಿಗಾರಿಕೆಯ ಈ ಕೆಲಸ ಸಾಧಾರಣ ಕಂಪ್ಯೂಟರುಗಳ ಸಾಮರ್ಥ್ಯವನ್ನು ಮೀರಿ ಬೆಳೆದುಬಿಟ್ಟಿರುವುದರಿಂದ ಅದಕ್ಕೆಂದೇ 'ಮೈನರ್'ಗಳೆಂಬ ವಿಶೇಷ ಯಂತ್ರಾಂಶಗಳೂ ತಯಾರಾಗುತ್ತಿವೆ.

ಬೇರೆಲ್ಲ ಕರೆನ್ಸಿಗಳ ಮೌಲ್ಯ ಹೆಚ್ಚು-ಕಡಿಮೆ ಆಗುವಂತೆ ಬಿಟ್‌ಕಾಯಿನ್ ಮೌಲ್ಯದಲ್ಲೂ ಬದಲಾವಣೆಗಳು ಸಾಮಾನ್ಯ. ಜಾಲಲೋಕದಲ್ಲಿ ಈಗಾಗಲೇ ಸಕ್ರಿಯವಾಗಿರುವ ಹಲವು ವಿನಿಮಯ ಕೇಂದ್ರಗಳು ಬಿಟ್‌ಕಾಯಿನ್ ಕರೆನ್ಸಿಯನ್ನು ಇತರ ಕರೆನ್ಸಿಯೊಡನೆ ಹೋಲಿಸುವ ಕೆಲಸ ಮಾಡುತ್ತಿವೆ. ಒಂದು ಡಾಲರಿಗೆ ಇಷ್ಟು ರೂಪಾಯಿ ಎಂದಂತೆ ಒಂದು ಬಿಟ್ ಕಾಯಿನ್ ಇಷ್ಟು ಡಾಲರಿಗೋ ಪೌಂಡಿಗೋ ಸಮ ಎನ್ನುವಂತಹ ಮಾಹಿತಿ ಸದಾಕಾಲ ಸಿಗುತ್ತಲೇ ಇರುತ್ತದೆ. ಈ ಮಾಹಿತಿಯ ಆಧಾರದ ಮೇಲೆ ಹಲವೆಡೆ ಬಿಟ್‌ಕಾಯಿನ್‌ಗಳನ್ನು ಕೊಳ್ಳುವುದು, ಮಾರುವುದು, ಅವುಗಳನ್ನು ಬಳಸಿ ವ್ಯವಹರಿಸುವುದು ಸಾಧ್ಯ. ನಗದು-ಕಾರ್ಡುಗಳನ್ನೆಲ್ಲ ಸ್ವೀಕರಿಸಿದ ಹಾಗೆ ಹಲವಾರು ಸಂಸ್ಥೆಗಳು ಬಿಟ್‌ಕಾಯಿನ್ ರೂಪದ ಪಾವತಿಯನ್ನೂ ಅನುಮತಿಸುತ್ತವೆ. ಹಲವು ಕಡೆ ಬಿಟ್‌ಕಾಯಿನ್ ಬಳಸಿ ಶಾಪಿಂಗ್ ಕೂಡ ಮಾಡಬಹುದು.

ಬಿಟ್‌ಕಾಯಿನ್‌ಗಳು ಕಂಪ್ಯೂಟರಿನಲ್ಲಿ ಶೇಖರವಾಗಿರುತ್ತವೆ ಎಂದಾಕ್ಷಣ ಬೇರೆಲ್ಲ ಕಡತಗಳಂತೆ ಅವನ್ನೂ ಕಾಪಿ ಮಾಡಿಕೊಂಡು ಬಳಸಬಹುದೇ ಎನ್ನುವ ಪ್ರಶ್ನೆ ಮೂಡುವುದು ಸಹಜ. ಒಂದು ಬಿಟ್‌ಕಾಯಿನ್ ಮಾಹಿತಿಯನ್ನು ನಾಲ್ಕು ಜನ ಕಾಪಿಮಾಡಿಕೊಂಡು ಶಾಪಿಂಗ್ ಮಾಡಿಬಿಟ್ಟರೆ ಅದು ಖೋಟಾನೋಟು ಬಳಸಿದಂತೆಯೇ ತಾನೆ!

ಅಂತಹುದೊಂದು ಸಾಧ್ಯತೆಯನ್ನು ತಪ್ಪಿಸಲು ಅಗತ್ಯ ತಾಂತ್ರಿಕ ಮುನ್ನೆಚ್ಚರಿಕೆಯನ್ನು ಈ ವ್ಯವಸ್ಥೆ ಒಳಗೊಂಡಿದೆ. ಹಾಗಾಗಿಯೇ ಒಮ್ಮೆ ನಮ್ಮ ಬಿಟ್‌ಕಾಯಿನ್ ಅನ್ನು ಖರ್ಚುಮಾಡಿದೆವೆಂದರೆ ಆ ವ್ಯವಹಾರವನ್ನು ರದ್ದುಪಡಿಸುವುದು ಅಸಾಧ್ಯ. ಅಲ್ಲದೆ ಬಿಟ್‌ಕಾಯಿನ್ ಬಳಸಿ ನಡೆದ ವಹಿವಾಟಿನ ಬಗ್ಗೆ ಮಾಹಿತಿಯನ್ನು ಅಂತರಜಾಲದಲ್ಲಿ ಉಳಿಸಿಡಲಾಗುತ್ತದೆ; ಆದರೆ ಈ ವಹಿವಾಟು ನಡೆಸಿದವರು ಯಾರು ಎಂಬ ಮಾಹಿತಿ ಮಾತ್ರ ಎಲ್ಲೂ ಶೇಖರವಾಗುವುದಿಲ್ಲ. ಈ ಕಾರಣದಿಂದಾಗಿಯೇ ಬಿಟ್‌ಕಾಯಿನ್‌ಗಳನ್ನು ನಾಣ್ಯ-ನೋಟುಗಳಷ್ಟೇ ಜೋಪಾನವಾಗಿ ನೋಡಿಕೊಳ್ಳಬೇಕಾಗುತ್ತದೆ.

ಡಿಸೆಂಬರ್ ೨೨, ೨೦೧೩ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನದ ಸಂಪಾದಿತ ರೂಪ

ಬಿಟ್‌ಕಾಯಿನ್ ಎನ್ನುವುದು ಅಂತರಜಾಲ ಲೋಕದಲ್ಲಿ ಬಳಕೆಯಾಗುವ ವರ್ಚುಯಲ್ ಹಣ
ಬ್ಲಾಕ್‌ಚೈನ್ ಅಂದರೆ ಏನು?

Related Stories

No stories found.
logo
ಇಜ್ಞಾನ Ejnana
www.ejnana.com