ಓದಿ+ನೋಡಿ: 5G ಅಂದರೆ ಏನು?

ಈಗ ಎಲ್ಲ ಕಡೆಯಲ್ಲೂ ಸುದ್ದಿಯಲ್ಲಿರುವ 5G ಅಂದರೆ ಏನು? ಅದರಿಂದ ಏನು ಉಪಯೋಗ? ವೀಡಿಯೊ ನೋಡಿ, ಲೇಖನ ಓದಿ!

ಮೊಬೈಲ್ ಜಗತ್ತಿನಲ್ಲಿ ಯಾವಾಗಲೂ ಬದಲಾವಣೆಗಳದ್ದೇ ಸುದ್ದಿ. ಇಲ್ಲಿ ನಿನ್ನೆಯ ತಂತ್ರಜ್ಞಾನ ನಾಳೆಯ ಹೊತ್ತಿಗಾಗಲೇ ಹಳೆಯದಾಗಿರುತ್ತದೆ. ನಮ್ಮ ಮೊಬೈಲ್ ಬಳಕೆಯ ಅನುಭವವನ್ನೇ ನೋಡಿ, 2G ಬಳಸಲು ಶುರುಮಾಡಿ ಸ್ವಲ್ಪ ಸಮಯ ಆಗುತ್ತಿದ್ದಂತೆಯೇ 3G ತಂತ್ರಜ್ಞಾನ ಬಂತು. ಅದು ಅಭ್ಯಾಸವಾಗುವಷ್ಟರಲ್ಲಿ 4G ಬಂತು. ಈಗ ಎಲ್ಲ ಕಡೆಯಲ್ಲೂ 5G ಸುದ್ದಿಯಲ್ಲಿದೆ. ಇಷ್ಟಕ್ಕೂ ಈ 5G ಎಂದರೇನು? ಅದರಿಂದ ಏನು ಉಪಯೋಗ? ಇದೇ ಈ ಸಂಚಿಕೆಯ ವಿಷಯ.

G ಅಂದರೆ ಏನು?

ಮಾರ್ಟಿನ್ ಕೂಪರ್ ಎಂಬ ತಂತ್ರಜ್ಞ ಪ್ರಪಂಚದ ಮೊತ್ತಮೊದಲ ಮೊಬೈಲ್ ಕರೆ ಮಾಡಿ ಮಾತನಾಡಿದ್ದು 1973ರ ಏಪ್ರಿಲ್ 3ರಂದು. ಅಂದಿನಿಂದ ಇಂದಿನವರೆಗೆ ಈ ತಂತ್ರಜ್ಞಾನದಲ್ಲಿ ಆಗಿರುವ ಬದಲಾವಣೆಗಳನ್ನು ಹಲವು ತಲೆಮಾರುಗಳನ್ನಾಗಿ ('ಜನರೇಶನ್') ವಿಂಗಡಿಸಲಾಗಿದೆ. 2G, 3G ಇತ್ಯಾದಿ ಹೆಸರುಗಳಲ್ಲಿ ಕಾಣಸಿಗುವ 'G' ಎಂಬ ಅಕ್ಷರ ಪ್ರತಿನಿಧಿಸುವುದು ಇದನ್ನೇ.

ಮೊದಮೊದಲು ರೂಪುಗೊಂಡ ಮೊಬೈಲ್ ಫೋನುಗಳು ಅನಲಾಗ್ ತಂತ್ರಜ್ಞಾನವನ್ನು ಬಳಸುತ್ತಿದ್ದವು. ದೂರವಾಣಿ ಕರೆಗಳನ್ನು ಮಾಡಲಷ್ಟೆ ನೆರವಾಗುತ್ತಿದ್ದ ಆ ತಂತ್ರಜ್ಞಾನವನ್ನು ಮೊಬೈಲ್ ದೂರವಾಣಿಯ ಮೊದಲ ತಲೆಮಾರು (1G) ಎಂದು ಕರೆಯುತ್ತಾರೆ. ಆನಂತರ ಬಂದ 2G ತಂತ್ರಜ್ಞಾನ ಮೊಬೈಲ್ ಬಳಸಿ ದೂರವಾಣಿ ಕರೆ ಮಾಡುವುದರ (ವಾಯ್ಸ್) ಜೊತೆಗೆ ದತ್ತಾಂಶದ (ಡೇಟಾ) ವರ್ಗಾವಣೆಯನ್ನೂ ಸಾಧ್ಯವಾಗಿಸಿತು. ಮೂರನೆಯ ತಲೆಮಾರಿನ ತಂತ್ರಜ್ಞಾನ (3G) ಬಂದಾಗಲಂತೂ ಹಿಂದೆಂದಿಗಿಂತ ಹೆಚ್ಚು ಪ್ರಮಾಣದ ದತ್ತಾಂಶವನ್ನು ಹಿಂದೆಂದಿಗಿಂತ ಹೆಚ್ಚು ವೇಗದಲ್ಲಿ ವಿನಿಮಯ ಮಾಡಿಕೊಳ್ಳುವುದು ಸಾಧ್ಯವಾಯಿತು. ಇದರ ನಂತರ ಬಂದಿದ್ದು 4G. ಅಂತರಜಾಲ ಸಂಪರ್ಕದ ವೇಗವನ್ನು ಇನ್ನಷ್ಟು ಹೆಚ್ಚಿಸಿದ್ದಲ್ಲದೆ, ಧ್ವನಿರೂಪದ ಕರೆಗಳು ಹಾಗೂ ಅಂತರಜಾಲ ಸಂಪರ್ಕ ಬಳಸುವ ಸೇವೆಗಳನ್ನು ಒಟ್ಟಿಗೆಯೇ ನಿರ್ವಹಿಸುವ ಸಾಧ್ಯತೆಯನ್ನು ತೋರಿಸಿಕೊಟ್ಟಿದ್ದು ಈ ತಂತ್ರಜ್ಞಾನ.

ಇದಕ್ಕೂ ಮುಂದಿನ ಹಂತವೇ 5G. ಸದ್ಯ ಭಾರೀ ಎನ್ನಿಸುತ್ತಿರುವ, ಹಲವು ಎಂಬಿಪಿಎಸ್‌ಗಳಲ್ಲಿರುವ ಮೊಬೈಲ್ ಅಂತರಜಾಲ ಸಂಪರ್ಕದ ವೇಗವನ್ನು ಈ ತಂತ್ರಜ್ಞಾನ ಹಲವಾರು ಪಟ್ಟು ಹೆಚ್ಚಿಸಿ ಜಿಬಿಪಿಎಸ್ (ಗಿಗಾಬಿಟ್ಸ್ ಪರ್ ಸೆಕೆಂಡ್) ಮಟ್ಟಕ್ಕೆ ಕೊಂಡೊಯ್ಯಲಿದೆ ಎಂದು ತಜ್ಞರು ಹೇಳುತ್ತಾರೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ಲೌಡ್ ತಂತ್ರಜ್ಞಾನ ತಂದಂಥದ್ದೇ ಕ್ರಾಂತಿಕಾರಕ ಬದಲಾವಣೆಯನ್ನು ಮೊಬೈಲ್ ಜಗತ್ತಿನಲ್ಲಿ 5G ತಂತ್ರಜ್ಞಾನ ತರಲಿದೆ ಎನ್ನುವುದು ಅವರ ನಿರೀಕ್ಷೆ.

5G ವೈಶಿಷ್ಟ್ಯ ಏನು?

ಅಂತರಜಾಲ ಸಂಪರ್ಕದ ವೇಗ ಎಂಬಿಪಿಎಸ್ ಮಟ್ಟದಿಂದ ಜಿಬಿಪಿಎಸ್ ಮಟ್ಟಕ್ಕೆ ತಲುಪಿದರೆ ಎಚ್‌ಡಿ ಚಲನಚಿತ್ರದಂತಹ ಭಾರೀ ಕಡತಗಳನ್ನೂ ಕೆಲವೇ ಸೆಕೆಂಡುಗಳಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ವೇಗದ ಹೋಲಿಕೆಯಲ್ಲಿ ಲೆಕ್ಕ ಹಾಕಿದರೆ, 3G ವೇಗದಲ್ಲಿ ಹಲವು ಗಂಟೆಗಳು, 4G ವೇಗದಲ್ಲಿ ಹಲವು ನಿಮಿಷಗಳು ಬೇಕಾಗುವ ಡೌನ್‌ಲೋಡ್‌ಗೆ 5G ಸಂಪರ್ಕದಲ್ಲಿ ಕೇವಲ ಕೆಲವೇ ಸೆಕೆಂಡುಗಳು ಸಾಕಾಗುತ್ತವೆ!

ಇಷ್ಟೆಲ್ಲ ಹೆಚ್ಚಿನ ವೇಗದ ಸಂಪರ್ಕದ ಮೂಲಕ ಛಾಯಾವಾಸ್ತವ (ವರ್ಚುಯಲ್ ರಿಯಾಲಿಟಿ, ವಿಆರ್) ಹಾಗೂ ಅತಿರಿಕ್ತ ವಾಸ್ತವದಂತಹ (ಆಗ್ಮೆಂಟೆಡ್ ರಿಯಾಲಿಟಿ, ಎಆರ್) ತಂತ್ರಜ್ಞಾನಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಳಸಬಹುದು, ನಮ್ಮ ಕಣ್ಣೆದುರಿಗೆ ಮಾಯಾಲೋಕವನ್ನೇ ತೆರೆದಿಡಬಹುದು. ಅಷ್ಟೇ ಅಲ್ಲ, ವಾಹನಗಳ ಚಾಲನೆಯನ್ನೂ ಶಸ್ತ್ರಚಿಕಿತ್ಸೆಯಂತಹ ಕ್ಲಿಷ್ಟ ಪ್ರಕ್ರಿಯೆಗಳನ್ನೂ ಅಂತರಜಾಲದ ಮೂಲಕವೇ ನಿರ್ವಹಿಸುವುದನ್ನು ಕೂಡ ಇದು ಪ್ರಾಯೋಗಿಕವಾಗಿ ಸಾಧ್ಯವಾಗಿಸಲಿದೆ.

ಹಾಗೆಂದು 5Gಯ ವೈಶಿಷ್ಟ್ಯ ಹೆಚ್ಚಿನ ವೇಗ ಮಾತ್ರವೇ ಅಲ್ಲ. ಅತಿವೇಗದ ಸಂಪರ್ಕ ಒದಗಿಸುವ ಜೊತೆಗೆ ಆ ಸಂಪರ್ಕ ಅಡಚಣೆಗಳಿಲ್ಲದೆ ಅತ್ಯಂತ ಸಮರ್ಥವಾಗಿ ಕಾರ್ಯನಿರ್ವಹಿಸುವಂತೆಯೂ ಈ ತಂತ್ರಜ್ಞಾನ ನೋಡಿಕೊಳ್ಳಲಿದೆ. ಹೆಚ್ಚಿನ ಜನಸಂದಣಿಯಿರುವ ಜಾಗಗಳಲ್ಲಿ - ಚಲಿಸುವ ವಾಹನಗಳಲ್ಲಿ ಕೂಡ ಉತ್ತಮ ಗುಣಮಟ್ಟದ ಸಂಪರ್ಕ ಪಡೆದುಕೊಳ್ಳುವುದು ಇದರಿಂದಾಗಿ ಸಾಧ್ಯವಾಗಲಿದೆ. ಅಂತರಜಾಲ ಸಂಪರ್ಕ ಎಂದಮೇಲೆ ಎರಡು ಕಡೆಗಳ ನಡುವೆ ಸಂವಹನ ನಡೆಯಬೇಕಲ್ಲ, ಆ ಸಂವಹನದಲ್ಲಿ ಹೆಚ್ಚಿನ ವಿಳಂಬ (ಲೇಟೆನ್ಸಿ) ಇಲ್ಲದಂತೆಯೂ ಈ ತಂತ್ರಜ್ಞಾನ ನಿಗಾವಹಿಸಲಿದೆ. ವಿಳಂಬ ರಹಿತ ಸಂಪರ್ಕಗಳ ಮೂಲಕ ಅಂತರಜಾಲದ ಬಳಕೆ ಇನ್ನಷ್ಟು ಸುಲಭ ಹಾಗೂ ಸರಾಗವಾಗಲಿದೆ!

ಐಓಟಿ ಪರಿಕಲ್ಪನೆಗೆ ಅದ್ಭುತ ಕೊಡುಗೆ

ನಿತ್ಯದ ಬಳಕೆಯ ವಸ್ತುಗಳನ್ನೂ ಅಂತರಜಾಲದ ವ್ಯಾಪ್ತಿಗೆ ತಂದು ಅವುಗಳೊಡನೆ ಮಾಹಿತಿ ವಿನಿಮಯ ಸಾಧ್ಯವಾಗಿಸುವ ಪರಿಕಲ್ಪನೆಯೇ ಇಂಟರ್‌ನೆಟ್ ಆಫ್ ಥಿಂಗ್ಸ್ (ಐಓಟಿ) ಅಥವಾ ವಸ್ತುಗಳ ಅಂತರಜಾಲ. ನಮ್ಮ ಪರಿಚಯದ ಅಂತರಜಾಲದಲ್ಲಿ ಹೇಗೆ ಲ್ಯಾಪ್‌ಟಾಪ್-ಡೆಸ್ಕ್‌ಟಾಪುಗಳು, ಸರ್ವರುಗಳು, ಮೊಬೈಲ್-ಟ್ಯಾಬ್ಲೆಟ್ಟುಗಳು ಒಂದಕ್ಕೊಂದು ಸಂಪರ್ಕಿತವಾಗಿವೆಯೋ ಹಾಗೆ ವಸ್ತುಗಳ ಈ ಅಂತರಜಾಲದಲ್ಲಿ ನಾವು ಕಲ್ಪಿಸಿಕೊಳ್ಳಬಹುದಾದ ಯಾವುದೇ ಸಾಧನ ಜಾಲದ ಸಂಪರ್ಕ ಪಡೆದುಕೊಳ್ಳಬಲ್ಲದು.

ವಸ್ತುಗಳ ಅಂತರಜಾಲದ ಪರಿಕಲ್ಪನೆ ಬೆಳೆದಂತೆ ಅಡುಗೆಮನೆಯ ಫ್ರಿಜ್ಜಿನಿಂದ ಕಾರ್ಖಾನೆಯ ಯಂತ್ರದವರೆಗೆ ಅಸಂಖ್ಯ ಸಣ್ಣ-ದೊಡ್ಡ ಸಾಧನಗಳು ಅಂತರಜಾಲದ ಸಂಪರ್ಕಕ್ಕೆ ಬರುವುದು ಸಾಧ್ಯವಾಗುತ್ತಿದೆ. ಇವಕ್ಕೆಲ್ಲ ಬೇಕಾಗುವ ಅಗಾಧ ಸಾಮರ್ಥ್ಯದ ಸಂಪರ್ಕ ಕೂಡ ೫ಜಿ ತಂತ್ರಜ್ಞಾನದಿಂದಾಗಿ ಲಭ್ಯವಾಗಲಿದೆ. ಭಾರೀ ಸಂಖ್ಯೆಯ ಯಂತ್ರಗಳನ್ನು ಏಕಕಾಲದಲ್ಲಿ ನಿಯಂತ್ರಿಸುವುದು, ಅವು ರವಾನಿಸುವ ದತ್ತಾಂಶವನ್ನು ಸಂಗ್ರಹಿಸಿ ಸಂಸ್ಕರಿಸುವುದು, ರಸ್ತೆಯಲ್ಲಿರುವ ವಾಹನಗಳು ಪರಸ್ಪರ ಮಾತನಾಡಿಕೊಳ್ಳುವುದು, ಬೃಹತ್ ಕಾರ್ಖಾನೆಗಳ ಕ್ಷಣಕ್ಷಣದ ಸ್ಥಿತಿಗತಿಯನ್ನು ಆಯಾ ಕ್ಷಣದಲ್ಲೇ ತಿಳಿದುಕೊಳ್ಳುವುದು - ಇಂಥದ್ದೆಲ್ಲ ೫ಜಿ ತಂತ್ರಜ್ಞಾನದಿಂದಾಗಿ ಸಾಧ್ಯವಾಗುವ ನಿರೀಕ್ಷೆಯಿದೆ.

5G ಬರುವುದು ಯಾವಾಗ?

ಮೊಬೈಲ್ ಹಾಗೂ ಅಂತರಜಾಲ ತಂತ್ರಜ್ಞಾನಗಳಲ್ಲಿ ಮುಂಚೂಣಿಯಲ್ಲಿರುವ ದಕ್ಷಿಣ ಕೊರಿಯಾದಲ್ಲಿ 5G ಸಂಪರ್ಕಗಳನ್ನು ಈಗಾಗಲೇ ನೀಡಲಾಗುತ್ತಿದೆ. ಇದೇ ಸಾಲಿನಲ್ಲಿರುವ ಎಸ್ಟೋನಿಯಾ, ಜಪಾನ್, ಅಮೆರಿಕಾ, ಚೀನಾ ಮುಂತಾದ ದೇಶಗಳಲ್ಲೂ 5G ತಂತ್ರಜ್ಞಾನವನ್ನು ಪರಿಚಯಿಸುವ ಕೆಲಸ ವಿವಿಧ ಹಂತಗಳಲ್ಲಿದೆ. ನಮ್ಮ ದೇಶದಲ್ಲೂ ಈ ನಿಟ್ಟಿನಲ್ಲಿ ಕೆಲಸ ಶುರುವಾಗಿದೆ. ದೆಹಲಿಯಲ್ಲಿ ನಡೆದ 2019ರ ಇಂಡಿಯಾ ಮೊಬೈಲ್ ಕಾಂಗ್ರೆಸ್ ಸಂದರ್ಭದಲ್ಲಿ 5G ಸಂಪರ್ಕದ ಸಾರ್ವಜನಿಕ ಪ್ರಾತ್ಯಕ್ಷಿಕೆ ಕೂಡ ನಡೆದಿತ್ತು.

ಈಗಿನ ಫೋನಿನಲ್ಲೇ 5G ಬಳಸಬಹುದೇ?

ಇದು ತಂತ್ರಜ್ಞಾನ ಅಳವಡಿಕೆಯ ವಿಷಯವಾದರೆ, ಇನ್ನೊಂದು ಕಡೆ 5G ಬಳಕೆಗೆ ಬೇಕಾದ ಸಿದ್ಧತೆಗಳೂ ಶುರುವಾಗಿವೆ. 3G-4G ಸಂಪರ್ಕಗಳು ಬಂದಾಗ ಆದ ಹಾಗೆಯೇ, 5G ತಂತ್ರಜ್ಞಾನವನ್ನು ಬೆಂಬಲಿಸುವ ಮೊಬೈಲುಗಳಿಂದ ಮಾತ್ರ ಅದರ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳುವುದು ಸಾಧ್ಯ. ಹೀಗಾಗಿ 5G ಬೆಂಬಲವಿರುವ ಅನೇಕ ಮಾದರಿಯ ಫೋನುಗಳೂ ಇದೀಗ ಸಿದ್ಧವಾಗುತ್ತಿವೆ. ಇಷ್ಟೆಲ್ಲ ಸಾಧ್ಯತೆಗಳನ್ನು ನಮ್ಮ ಮುಂದೆ ತೆರೆದಿಡುವ ಈ ತಂತ್ರಜ್ಞಾನವನ್ನು ನಾವು ಹೇಗೆ ಮತ್ತು ಏನಕ್ಕಾಗಿ ಬಳಸಿಕೊಳ್ಳುತ್ತೇವೆ ಎನ್ನುವುದನ್ನು ಮಾತ್ರ ನಾವಿನ್ನೂ ಕಾದು ನೋಡಬೇಕಿದೆ.

ನವೆಂಬರ್ ೨೫, ೨೦೧೯ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನದ ಸಂಪಾದಿತ ರೂಪ

ವೀಡಿಯೊ ಸೌಜನ್ಯ: ಸಂವಾದ

Related Stories

No stories found.
logo
ಇಜ್ಞಾನ Ejnana
www.ejnana.com