ಪಾಸ್‌ವರ್ಡ್‌ ಇರುವುದು ನಮ್ಮ ಸುರಕ್ಷತೆಗಾಗಿಯೇ ಆದರೂ ಬೇಕಾದ ಸಮಯದಲ್ಲಿ ಮರೆತುಹೋಗುವುದಕ್ಕೂ ಅದು ಹೆಸರುವಾಸಿ!
ಪಾಸ್‌ವರ್ಡ್‌ ಇರುವುದು ನಮ್ಮ ಸುರಕ್ಷತೆಗಾಗಿಯೇ ಆದರೂ ಬೇಕಾದ ಸಮಯದಲ್ಲಿ ಮರೆತುಹೋಗುವುದಕ್ಕೂ ಅದು ಹೆಸರುವಾಸಿ!Image by Christoph Meinersmann from Pixabay

ಪಾಸ್‌ವರ್ಡ್ ಬಳಕೆ ಶುರುವಾಗಿದ್ದು ಹೇಗೆ?

ಪಾಸ್‌ವರ್ಡ್‌ ಇರುವುದು ನಮ್ಮ ಸುರಕ್ಷತೆಗಾಗಿಯೇ ಆದರೂ ಬೇಕಾದ ಸಮಯದಲ್ಲಿ ಮರೆತುಹೋಗುವುದಕ್ಕೆ, ಲಾಕ್ ಆಗಿಬಿಡುವುದಕ್ಕೆ, ಬೇರೆಯವರ ಕೈಗೆ ಸಿಕ್ಕಿ ನಮಗೆ ತೊಂದರೆಕೊಡುವುದಕ್ಕೂ ಅದು ಹೆಸರುವಾಸಿ. ಈ ಪಾಸ್‌ವರ್ಡ್ ಬಳಕೆ ಶುರುಮಾಡಿದ್ದು ಯಾರು ಗೊತ್ತಾ?

ನಮ್ಮಲ್ಲಿ ಬಹಳಷ್ಟು ಜನ ಸ್ಮಾರ್ಟ್‌ಫೋನ್, ಕಂಪ್ಯೂಟರ್ ಮುಂತಾದವನ್ನು ಬಳಸುತ್ತೇವೆ. ಅವನ್ನು ಬಳಸಿ ನಮ್ಮ ಅನೇಕ ಕೆಲಸಗಳನ್ನು ಮಾಡಿಕೊಳ್ಳುತ್ತೇವೆ. ಬೇರೇನೂ ಕೆಲಸ ಇಲ್ಲದಿದ್ದಾಗ ಟೈಮ್ ಪಾಸ್ ಮಾಡುವುದಕ್ಕೂ ಅವನ್ನೇ ಬಳಸುತ್ತೇವೆ.

ಬಳಕೆಯ ಉದ್ದೇಶ ಯಾವುದೇ ಇರಲಿ, ನಾವೆಲ್ಲ ಈ ಸಾಧನಗಳನ್ನು ಹೆಚ್ಚೂಕಡಿಮೆ ಒಂದೇ ವಿಧದಲ್ಲಿ ಬಳಸುತ್ತೇವೆ. ಹಾಗೆ ಬಳಸುವಾಗ ನಮಗೆ ಎದುರಾಗುವ ತೊಂದರೆಗಳೂ ಬಹುತೇಕ ಒಂದೇ ತೆರನಾದವು.

ಇಂತಹ ತೊಂದರೆಗಳನ್ನೆಲ್ಲ ಒಂದು ಪಟ್ಟಿಮಾಡಲು ಕುಳಿತರೆ ಅದರಲ್ಲಿ ಪ್ರಮುಖ ಸ್ಥಾನ ಪಡೆಯುವ ಹೆಸರು ಪಾಸ್‌ವರ್ಡ್‌ನದು. ಇದು ಇರುವುದು ನಮ್ಮ ಸುರಕ್ಷತೆಗಾಗಿಯೇ ಆದರೂ ಬೇಕಾದ ಸಮಯದಲ್ಲಿ ಮರೆತುಹೋಗುವುದಕ್ಕೆ, ತಪ್ಪಾಗಿ ಬರೆದೆವೆಂದು ಲಾಕ್ ಆಗಿಬಿಡುವುದಕ್ಕೆ, ಬೇರೆಯವರ ಕೈಗೆ ಸಿಕ್ಕಿ ನಾವು ಫಜೀತಿಪಡುವಂತೆ ಮಾಡುವುದಕ್ಕೂ ಹೆಸರುವಾಸಿಯಾಗಿದೆ.

ಹೀಗೆಲ್ಲ ಆದಾಗ ಈ ಪಾಸ್‌ವರ್ಡ್ ಅನ್ನುವುದನ್ನು ಅದ್ಯಾರು ಕಂಡುಹಿಡಿದರಪ್ಪ ಎಂದು ನಾವೆಲ್ಲ ಬೈದುಕೊಳ್ಳುವುದೂ ಉಂಟು.

ಈ ಪ್ರಶ್ನೆಗೆ ಉತ್ತರ ಹುಡುಕಲು ನಾವು ಸುಮಾರು ಅರ್ಧಶತಮಾನಕ್ಕೂ ಹಿಂದೆ, ಅಂದರೆ ೧೯೬೦ರ ದಶಕಕ್ಕೆ, ಹೋಗಬೇಕಾಗುತ್ತದೆ. ಮಾಹಿತಿ ತಂತ್ರಜ್ಞಾನದಲ್ಲಿ ಹಲವು ಬೆಳವಣಿಗೆಗಳಾಗುತ್ತಿದ್ದ ಆ ಸಮಯದಲ್ಲಿ ವಿಶ್ವದ ಹಲವೆಡೆ ವಿಭಿನ್ನ ಪ್ರಯೋಗಗಳು ನಡೆಯುತ್ತಿದ್ದವು.

ಅಂತಹ ಪ್ರಯೋಗಗಳು ನಡೆದಿದ್ದ ಸಂಸ್ಥೆಗಳಲ್ಲಿ ಅಮೆರಿಕಾದ ಮೆಸಾಚುಸೆಟ್ಸ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಕೂಡ ಒಂದು. ೧೯೬೦ರ ದಶಕದಲ್ಲಿ ಅಲ್ಲಿ 'ಕಂಪ್ಯಾಟಿಬಲ್ ಟೈಮ್-ಶೇರಿಂಗ್ ಸಿಸ್ಟಮ್' (ಸಿಟಿಎಸ್‌ಎಸ್) ಎನ್ನುವ ವ್ಯವಸ್ಥೆಯನ್ನು ರೂಪಿಸುವ ಕೆಲಸ ನಡೆದಿತ್ತು. ಈ ಕೆಲಸದ ಮುಂದಾಳತ್ವ ವಹಿಸಿಕೊಂಡಿದ್ದವರು ಫರ್ನಾಂಡೋ ಕಾರ್ಬಾಟೋ ಎಂಬ ಕಂಪ್ಯೂಟರ್ ವಿಜ್ಞಾನಿ.

ಫರ್ನಾಂಡೋ ಕಾರ್ಬಾಟೋ (1926-2019)
ಫರ್ನಾಂಡೋ ಕಾರ್ಬಾಟೋ (1926-2019)Jason Dorfman, MIT CSAIL photographer / CC BY-SA (https://creativecommons.org/licenses/by-sa/3.0)

ಕಂಪ್ಯೂಟರುಗಳ ಬಳಕೆ ಸಾಕಷ್ಟು ದುಬಾರಿಯಾಗಿದ್ದ ಆ ಕಾಲದಲ್ಲಿ, ಇದ್ದ ಕೆಲವೇ ಕಂಪ್ಯೂಟರುಗಳನ್ನು ಸಾಧ್ಯವಾದಷ್ಟೂ ಹೆಚ್ಚು ಜನ ಬಳಸುವಂತೆ ಮಾಡುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿದ್ದವು. ಹೆಚ್ಚಿನ ಸಂಖ್ಯೆಯ ಮಾನಿಟರ್-ಕೀಬೋರ್ಡ್ ಇತ್ಯಾದಿಗಳನ್ನು ('ಟರ್ಮಿನಲ್') ಒಂದೇ ಕಂಪ್ಯೂಟರಿಗೆ ಜೋಡಿಸಿ, ಹೆಚ್ಚು ಜನರು ಆ ಕಂಪ್ಯೂಟರನ್ನು ಏಕಕಾಲದಲ್ಲಿ ಬಳಸುವಂತೆ ಮಾಡುವ 'ಟೈಮ್-ಶೇರಿಂಗ್ ಸಿಸ್ಟಮ್' ಅನ್ನು ವಿನ್ಯಾಸಗೊಳಿಸುವುದು ಇಂತಹ ಪ್ರಯತ್ನಗಳಲ್ಲೊಂದಾಗಿತ್ತು.

ಎಂಐಟಿಯಲ್ಲಿ ಫರ್ನಾಂಡೋ ಮತ್ತವರ ತಂಡ ನಿರ್ಮಿಸಿದ ಸಿಟಿಎಸ್ಎಸ್ ಕೂಡ ಇಂಥದ್ದೇ ಒಂದು ಟೈಮ್ ಶೇರಿಂಗ್ ವ್ಯವಸ್ಥೆಯಾಗಿತ್ತು. ಒಂದೇ ಕಂಪ್ಯೂಟರನ್ನು ಹೆಚ್ಚು ಸಂಖ್ಯೆಯ ಬಳಕೆದಾರರು ಏಕಕಾಲದಲ್ಲಿ ಬಳಸಲು, ತಮ್ಮ ಕೆಲಸಗಳನ್ನು ಮಾಡಿಕೊಳ್ಳಲು ಈ ವ್ಯವಸ್ಥೆ ಅನುವುಮಾಡಿಕೊಡುತ್ತಿತ್ತು.

ಇದನ್ನು ಬಳಕೆದಾರರಿಗೆ ತೆರೆದಿಡಲು ಹೊರಟ ವಿಜ್ಞಾನಿಗಳ ತಂಡಕ್ಕೆ ಒಂದು ಸವಾಲು ಎದುರಾಯಿತು: ಹೆಚ್ಚು ಜನರಿಗೆ ಕಂಪ್ಯೂಟರನ್ನು ತೆರೆದಿಡುವುದೇನೋ ಸರಿ, ಅವರೆಲ್ಲ ಉಳಿಸಿಡುವ ಕಡತಗಳು ಅವರವರಿಗೆ ಮಾತ್ರವೇ ಸಿಗುವಂತೆ ಮಾಡುವುದು ಹೇಗೆ?

ಇದನ್ನು ಸಾಧ್ಯವಾಗಿಸಲು ಅವರು ಮಾಡಿದ ಪ್ಲಾನು ಹೀಗಿತ್ತು: ಪ್ರತಿಯೊಬ್ಬ ಬಳಕೆದಾರನಿಗೆ ಅವನದೇ ಆದ ಗುಪ್ತ ಪದವೊಂದನ್ನು ಕೊಡುವುದು, ಮತ್ತು ಆ ಪದವನ್ನು ಹಾಕಿದರೆ ಮಾತ್ರ ಅವನ ಕಡತಗಳು ಕಾಣಿಸಿಕೊಳ್ಳುವಂತೆ ಮಾಡುವುದು. ಫರ್ನಾಂಡೋ ಮತ್ತವರ ತಂಡದವರು ಅಂದುಕೊಂಡ ಹಾಗೆ ಇದು ಸುಲಭವಾಗಿಯೂ ಇತ್ತು, ತಕ್ಕಮಟ್ಟಿಗೆ ಸುರಕ್ಷಿತವಾಗಿಯೂ ಇತ್ತು!

ನಮ್ಮ ಮಾಹಿತಿಯನ್ನು ಸುರಕ್ಷಿತವಾಗಿಡಲು, ನಮಗೆ ಮಾತ್ರ ತೋರಿಸಲು ಈ ದಿನವೂ ಬಳಕೆಯಾಗುತ್ತಿರುವ ಪಾಸ್‌ವರ್ಡ್ ಪರಿಕಲ್ಪನೆ ಹುಟ್ಟಿದ್ದು ಹೀಗೆ. ಐವತ್ತು ವರ್ಷಕ್ಕೂ ಹಿಂದೆ, ೧೯೬೧ನೇ ಇಸವಿಯಲ್ಲಿ, ಯಾವುದೋ ಒಂದು ನಿರ್ದಿಷ್ಟ ಅಗತ್ಯವನ್ನು ಪೂರೈಸಲು ಹುಟ್ಟಿಕೊಂಡ ಪರಿಕಲ್ಪನೆ ಇಷ್ಟೆಲ್ಲ ಸಮಯದ ನಂತರವೂ ನಮ್ಮೊಡನೆ ಉಳಿದಿರುವುದು, ಟೆಕ್ ಲೋಕದ ಮಟ್ಟಿಗಂತೂ, ಅಚ್ಚರಿಯೇ ಸರಿ!

ಇಷ್ಟೆಲ್ಲ ಸಮಯ ಉಳಿದುಬಂದಿದೆ ಎಂದಮಾತ್ರಕ್ಕೆ ಪಾಸ್‌ವರ್ಡ್‌ ಬಳಕೆಯ ಸ್ವರೂಪ ಬದಲಾಗಿಯೇ ಇಲ್ಲ ಎಂದೇನೂ ಅಲ್ಲ. ಮೊದಲಿಗೆ ಪಠ್ಯರೂಪದಲ್ಲಿ ಮಾತ್ರವೇ ಇದ್ದ ಪಾಸ್‌ವರ್ಡು ಇದೀಗ ವಿನ್ಯಾಸ (ಪ್ಯಾಟರ್ನ್), ಬೆರಳೊತ್ತು (ಫಿಂಗರ್‌ಪ್ರಿಂಟ್), ಚಹರೆ ಮುಂತಾದವನ್ನು ಗುರುತಿಸುವ ಮಟ್ಟಕ್ಕೂ ಬೆಳೆದಿರುವುದನ್ನು ನಾವೇ ನೋಡುತ್ತಿದ್ದೇವೆ.

ನಮ್ಮ ಪಾಸ್‌ವರ್ಡ್‌ ಯಾವುದೆಂದು ಅದನ್ನು ಬಳಸುವ ವ್ಯವಸ್ಥೆಗೆ ಗೊತ್ತಿರಬೇಕಲ್ಲ, ಅದಕ್ಕಾಗಿ ಪಾಸ್‌ವರ್ಡನ್ನು ಉಳಿಸಿಡುವ ವಿಧಾನದಲ್ಲೂ ಸಾಕಷ್ಟು ಬದಲಾವಣೆಗಳಾಗಿವೆ. ಇಂಥವರ ಪಾಸ್‌ವರ್ಡ್ ಇದು ಎಂದು ನೇರಾನೇರ ಉಳಿಸಿಡುವ ಬದಲು ಅದನ್ನು ಹೆಚ್ಚು ಸುರಕ್ಷಿತವಾಗಿ, ಗೂಢ ಲಿಪಿಕರಣಗೊಳಿಸಿ (ಎನ್‌ಕ್ರಿಪ್ಟ್) ಮಾಡಿಡುವ ಅಭ್ಯಾಸ ಬೆಳೆದು ಈಗಾಗಲೇ ಸಾಕಷ್ಟು ಸಮಯವಾಗಿದೆ. ಬೇರೆಯವರ ಪಾಸ್‌ವರ್ಡ್ ಕದಿಯಲು ಪ್ರಯತ್ನಿಸುವವರನ್ನು ದೂರವಿಡುವುದು ಇದರ ಉದ್ದೇಶ.

ಅಂದಹಾಗೆ ಮೊದಲ ಬಾರಿಗೆ ಪಾಸ್‌ವರ್ಡ್‌ಗಳನ್ನು ಕದ್ದಿದ್ದು ಯಾವಾಗ, ಎಲ್ಲಿ ನಿಮಗೆ ಗೊತ್ತೇ? ಆ ಘಟನೆ ನಡೆದದ್ದೂ ೧೯೬೦ರ ದಶಕದಲ್ಲೇ. ಪಾಸ್‌ವರ್ಡ್ ಪರಿಕಲ್ಪನೆ ಹುಟ್ಟಿತಲ್ಲ, ಅದೇ ಎಂಐಟಿಯಲ್ಲೇ. ಕಳುವಾದ ಪಾಸ್‌ವರ್ಡ್‌ಗಳು ಯಾವುವು ಅಂದಿರಾ? ಪಾಸ್‌ವರ್ಡನ್ನು ಮೊದಲು ಬಳಸಿದ ಸಿಟಿಎಸ್‌ಎಸ್ ವ್ಯವಸ್ಥೆಯದ್ದೇ!

ಅಕ್ಟೋಬರ್ ೧೬, ೨೦೧೯ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

Related Stories

No stories found.
logo
ಇಜ್ಞಾನ Ejnana
www.ejnana.com