ನೀರಿನ ಗುಣಮಟ್ಟವನ್ನು ಮುಖ್ಯವಾಗಿ ಮೂರು ಹಂತಗಳಲ್ಲಿ ಪರೀಕ್ಷಿಸಲಾಗುತ್ತದೆ
ನೀರಿನ ಗುಣಮಟ್ಟವನ್ನು ಮುಖ್ಯವಾಗಿ ಮೂರು ಹಂತಗಳಲ್ಲಿ ಪರೀಕ್ಷಿಸಲಾಗುತ್ತದೆImage by Martin Str from Pixabay

ವಿಶ್ವ ಜಲದಿನ ವಿಶೇಷ: ಕುಡಿಯುವ ನೀರಿನ ಗುಣಮಟ್ಟ ನಿರ್ಧಾರವಾಗುವುದು ಹೇಗೆ?

ಇಂದು ನೀರು ಕುಡಿಯುವ ಮುನ್ನ ಅದು ಕುಡಿಯಲು ಯೋಗ್ಯವೇ ಎಂದು ಯೋಚಿಸುವಂತೆ ಆಗಿದೆ. ಇದರ ಬದಲು ಕುಡಿಯುವ ನೀರಿನ ಗುಣಮಟ್ಟವನ್ನು ಯಾರಾದರೂ ನಿರ್ಧರಿಸಿ ಹೇಳುವಂತಿದ್ದರೆ ಎಷ್ಟು ಚೆನ್ನಾಗಿತ್ತು!

ಬಾವಿಗಳಲ್ಲಿ ನಿಂತ, ಹಳ್ಳ-ಕೊಳ್ಳಗಳಲ್ಲಿ ಹರಿಯುತ್ತಿದ್ದ ನೀರನ್ನು ಯಾವುದೇ ಆಲೋಚನೆ ಮಾಡದೆ ಕುಡಿಯುವ ಕಾಲವೊಂದಿತ್ತು. ಆದರೆ ಇಂದು ಬಣ್ಣವಿಲ್ಲದ, ವಾಸನೆರಹಿತ ಮತ್ತು ಬಗ್ಗಡ-ರಾಡಿಯಿಲ್ಲದ ನೀರನ್ನು ಕೊಟ್ಟರೂ ಆ ನೀರು ಕುಡಿಯಲು ಯೋಗ್ಯವೇ ಎಂದು ಯೋಚಿಸುವಂತೆ ಆಗಿದೆ. ಇದರ ಬದಲು ಕುಡಿಯುವ ನೀರಿನ ಗುಣಮಟ್ಟವನ್ನು ಯಾರಾದರೂ ನಿರ್ಧರಿಸಿ ಹೇಳುವಂತಿದ್ದರೆ ಎಷ್ಟು ಚೆನ್ನಾಗಿತ್ತು!

ಆದರೆ, ಕುಡಿಯುವ ನೀರಿನ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಸಾರ್ವತ್ರಿಕವಾಗಿ ಗುರುತಿಸಲ್ಪಟ್ಟ ಮತ್ತು ಅಂಗೀಕರಿಸಲ್ಪಟ್ಟ ಅಂತರಾಷ್ಟ್ರೀಯ ಮಾನದಂಡಗಳು ಇಲ್ಲ. ಪ್ರತಿಯೊಂದು ದೇಶವು ತನ್ನ ಪ್ರದೇಶದ ಪರಿಸರ, ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕತೆಯ ಅನುಗುಣವಾಗಿ ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಗಳನ್ನು ಅನುಸರಿಸಿ ಕುಡಿಯುವ ನೀರಿಗೆ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿವೆ. ನಮ್ಮ ದೇಶದಲ್ಲಿ ಸುರಕ್ಷಿತ ಕುಡಿಯುವ ನೀರಿನ ಗುಣಮಟ್ಟಕ್ಕಾಗಿ ಭಾರತೀಯ ರಾಷ್ಟ್ರೀಯ ಗುಣಮಟ್ಟ ಸಂಸ್ಥೆಯಾದ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್, 'ಭಾರತೀಯ ಮಾನದಂಡ, ಕುಡಿಯುವ ನೀರಿನ ವೈಶಿಷ್ಟ್ಯ' IS 10500: 2012 ಅನ್ನು ಅಳವಡಿಸಿಕೊಂಡಿದೆ.

ಈ ಮಾನದಂಡದಲ್ಲಿ ಭೌತಿಕ ಗುಣಮಟ್ಟದ ಘಟಕಗಳು, ರಸಾಯನಿಕ ಗುಣಮಟ್ಟದ ಘಟಕಗಳು, ವಿಷಕಾರಿ ವಸ್ತುಗಳಿಗೆ ಸಂಬಂಧಿಸಿದ ಘಟಕಗಳು, ವಿಕಿರಣಶೀಲ ವಸ್ತುಗಳಿಗೆ ಸಂಬಂಧಿಸಿದ ಘಟಕಗಳು, ಬಳಕೆಯಾಗಿ ಉಳಿದು ನೀರಿನಲ್ಲಿ ಸೇರಿರಬಹುದಾದ ಕೀಟನಾಶಕಗಳ ಮಿತಿ ಮತ್ತು ಬ್ಯಾಕ್ಟೀರಿಯಾ ಗುಣಮಟ್ಟಗಳಿಗೆ ಸಂಬಂಧಿಸಿದಂತೆ ಸುಮಾರು 65 ಘಟಕಗಳಿಗೆ ಸ್ವೀಕಾರಾರ್ಹ ಪರಿಮಿತಿ (Acceptable limit) ಹಾಗೂ ಗರಿಷ್ಟ ಪರಿಮಿತಿಗಳನ್ನು (Permissible limit) ನೀಡಲಾಗಿದೆ. ಈ ಎಲ್ಲ ಘಟಕಗಳನ್ನು ಅಳೆಯುವ ವಿಧಾನಗಳನ್ನು ಭಾರತೀಯ ಮಾನದಂಡಗಳಲ್ಲಿ (IS 3025 Part 1 to 65, IS 14194 Part 1 to 2 ಇತ್ಯಾದಿ) ಉಲ್ಲೇಖಿಸಲಾಗಿದೆ.

ಹಾಗಾದರೆ ಕುಡಿಯುವ ನೀರಿನಲ್ಲಿ ಏನೆಲ್ಲ ಇರಬೇಕು, ಎಷ್ಟೆಲ್ಲ ಇರಬೇಕು ಎನ್ನುವುದು ನಮ್ಮೆಲ್ಲರಿಗೂ ಕಾಡುವ ಪ್ರಶ್ನೆ ಅಲ್ಲವೇ? ಭಾರತೀಯ ಮಾನದಂಡ, ಕುಡಿಯುವ ನೀರಿನ ವೈಶಿಷ್ಟ್ಯ IS 10500: 2012 ರ ಪ್ರಕಾರ,

- ಕುಡಿಯುವ ನೀರಿನಲ್ಲಿರುವ ಯಾವುದೇ ನಿರ್ದಿಷ್ಟ ಘಟಕದ ಮೌಲ್ಯವು ಸ್ವೀಕಾರಾರ್ಹ ಪರಿಮಿತಿ (Acceptable limit)ಗಿಂತ ಹೆಚ್ಚು ಇದ್ದಲ್ಲಿ ಆ ನೀರು ಕುಡಿಯಲು ಯೋಗ್ಯವಲ್ಲ.

- ಈ ನೀರಿಗೆ ಪರ್ಯಾಯವಾಗಿ ನಮಗೆ ಬೇರೆ ಯಾವುದೇ ನೀರಿನ ಮೂಲ ಇಲ್ಲದ ಪಕ್ಷದಲ್ಲಿ ಸ್ವೀಕಾರಾರ್ಹ ಪರಿಮಿತಿಗಿಂತ (Acceptable limit) ಹೆಚ್ಚು ಮತ್ತು ಗರಿಷ್ಟ ಪರಿಮಿತಿಗಿಂತ (Permissible limit) ಕಡಿಮೆ ಮೌಲ್ಯವಿರುವ ನೀರು ಕುಡಿಯಲು ಸಹ್ಯವಾಗಿರುತ್ತದೆ.

- ನೀರಿನಲ್ಲಿರುವ ಯಾವುದೇ ನಿರ್ದಿಷ್ಟ ಘಟಕದ ಮೌಲ್ಯವು ಗರಿಷ್ಟ ಪರಿಮಿತಿಗಿಂತ (Permissible limit) ಹೆಚ್ಚಿದ್ದಲ್ಲಿ ಆ ನೀರು ಕುಡಿಯಲು ಯೋಗ್ಯವಲ್ಲ.

ಇದನ್ನೆಲ್ಲ ತಿಳಿಯಲು ನೀರಿನ ಗುಣಮಟ್ಟವನ್ನು ಮುಖ್ಯವಾಗಿ ಮೂರು ಹಂತಗಳಲ್ಲಿ ಪರೀಕ್ಷಿಸಲಾಗುತ್ತದೆ. ಮೊದಲನೆಯದು ಭೌತಿಕ ಗುಣಮಟ್ಟ: ಈ ಪರೀಕ್ಷೆಗಳು ಇಂದ್ರಿಯಗಳಿಂದ ಪತ್ತೆ ಹಚ್ಚಬಹುದಾದ ಗುಣಗಳನ್ನು ಸೂಚಿಸುತ್ತವೆ. ಭೌತಿಕ ಘಟಕಗಳೆಂದರೆ ಬಣ್ಣ (Colour), ರುಚಿ (Taste) ಮತ್ತು ವಾಸನೆ (Odour), ಮಡ್ಡಿ/ಕೆಸರು/ಗಬ್ಬಡ (Turbidity) ಮತ್ತು ಪಿಹೆಚ್ (pH).

ಎರಡನೆಯದು ರಾಸಾಯನಿಕ ಗುಣಮಟ್ಟ: ಈ ಪರೀಕ್ಷೆಗಳು ನೀರಿನಲ್ಲಿರುವ ಖನಿಜಾಂಶಗಳು, ಲವಣಾಂಶಗಳು ಹಾಗು ಸಾವಯವ ಪದಾರ್ಥಗಳ ಪ್ರಮಾಣವನ್ನು ಸೂಚಿಸುತ್ತವೆ. ನೀರಿನಲ್ಲಿ ಮುಖ್ಯವಾಗಿ ಕಂಡುಬರುವ ರಾಸಾಯನ ಘಟಕಗಳೆಂದರೆ ಕ್ಯಾಲ್ಸಿಯಂ, ಮೆಗ್ನೀಶಿಯಂ, ಸೋಡಿಯಂ, ಪೊಟಾಸಿಯಂ, ಕಬ್ಬಿಣ, ಬೈಕಾರ್ಬೊನೇಟ್, ಕಾರ್ಬೊನೇಟ್, ಕ್ಲೋರೈಡ್, ನೈಟ್ರೇಟ್, ಸಲ್ಫೇಟ್, ಗಡಸುತನ, ಪ್ಲೋರೈಡ್, ಟಿಡಿಎಸ್ (ನೀರಿನಲ್ಲಿ ಕರಗಿರುವ ಒಟ್ಟು ಲವಣಾಂಶಗಳ ಮೊತ್ತ) ಮತ್ತು ಕರಗಿದ ಸ್ಥಿತಿಯಲ್ಲಿರುವ ಅಲ್ಯೂಮಿನಿಯಂ, ಬೇರಿಯಂ, ಬೊರಾನ್, ತಾಮ್ರ, ಮ್ಯಾಂಗನೀಸ್, ಬೆಳ್ಳಿ, ಸತು ಲೋಹಗಳು. ಇವುಗಳ ಜೊತೆಗೆ ಕೈಗಾರಿಕೆಗಳಿಂದ, ಗಣಿಗಾರಿಕೆಯಿಂದ ಹಾನಿಕಾರಕ ಭಾರಲೋಹಗಳಾದ ಕ್ಯಾಡ್ಮಿಯಂ, ಸೀಸ, ಪಾದರಸ, ಮೊಲಬ್ಡಿನಂ, ನಿಕೆಲ್, ಅರ್ಸೆನಿಕ್, ಕ್ರೋಮಿಯಂ, ಸಯನೈಡ್, ಕ್ಲೋರೋಫಾರಂ, ಬ್ರೋಮೋಫಾರಂಗಳು ಹಾಗು ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಿರುವ ರಸಗೊಬ್ಬರಗಳು, ಕೀಟನಾಶಕಗಳು ಮಳೆ ನೀರಿನಲ್ಲಿ ಕರಗಿ, ಹರಿದು ತಗ್ಗಿನಲ್ಲಿ ಶೇಖರವಾಗಿ ಅಂತರ್ಜಲ ಸೇರಿರುವ ಸಾಧ್ಯತೆಯೂ ಇರುತ್ತದೆ. ಈ ಅಂಶಗಳು ಗರಿಷ್ಟ ಪರಿಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿರುವ ನೀರನ್ನು ಕುಡಿಯುವುದರಿಂದ ಮಾನವನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಆಗುತ್ತದೆ.

ಮೂರನೆಯದು ಬ್ಯಾಕ್ಟೀರಿಯ ಗುಣಮಟ್ಟ: ಈ ಪರೀಕ್ಷೆಗಳು ಬ್ಯಾಕ್ಟೀರಿಯಗಳ ಅಸ್ತಿತ್ವವನ್ನು ತೋರಿಸುತ್ತವೆ. ಭೂಜಲಮಟ್ಟ ಸಮೀಪವಿರುವೆಡೆ ಜೈವಿಕ ಕಶ್ಮಲಗಳು ಬ್ಯಾಕ್ಟೀರಿಯಗಳ ಸಹಿತ ಅಂತರ್ಜಲವನ್ನು ಸೇರುತ್ತಿವೆ. ಚರಂಡಿಗಳು, ನೀರು ನಿಲ್ಲುವ ಸ್ಥಳಗಳು ಅಥವಾ ತಿಪ್ಪೆ/ಸಗಣಿ ಗುಂಡಿಗಳಲ್ಲಿರುವ ರೋಗವಾಹಕಗಳು ಕೂಡ ಕಾಲಕ್ರಮೇಣ ಅಂತರ್ಜಲ ತಲುಪಬಲ್ಲವು. ಹೀಗೆ ಕುಡಿಯುವ ನೀರಿನಲ್ಲಿ ಮಾಲಿನ್ಯಕಾರಕಗಳಾಗಿ ಸೇರಿದ ಬ್ಯಾಕ್ಟೀರಿಯಗಳು, ವೈರಸ್‌ಗಳು, ಪರಾವಲಂಬಿಗಳು ಸಾಂಕ್ರಾಮಿಕ ರೋಗಗಳನ್ನು ಹರಡುತ್ತವೆ. ಭಾರತೀಯ ಮಾನದಂಡದ ಪ್ರಕಾರ ಕುಡಿಯುವ ನೀರಿನಲ್ಲಿ ಯಾವುದೇ ಬ್ಯಾಕ್ಟೀರಿಯಗಳು (E-Coli, Coliform) ಇರುವಂತಿಲ್ಲ.

ಈ ಮೂರು ಪರೀಕ್ಷೆಗಳಲ್ಲಿ ಎಲ್ಲ ಘಟಕಗಳ ಮೌಲ್ಯ ಸ್ವೀಕಾರಾರ್ಹ ಪರಿಮಿತಿಯೊಳಗೆ ಇದ್ದಲ್ಲಿ ಮಾತ್ರವೇ ನೀರು ಕುಡಿಯಲು ಯೋಗ್ಯವಾಗಿರುತ್ತದೆ. ನೀವು ಬಳಸುವ ನೀರು ಈ ಪರೀಕ್ಷೆಗಳಲ್ಲಿ ಪಾಸ್ ಆಗುತ್ತದೋ ಇಲ್ಲವೋ ಎಂದು ತಿಳಿದುಕೊಳ್ಳಲು ಸರ್ಕಾರದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ( Rural Water Supply and Sanitation Department) ಪ್ರಯೋಗಾಲಯಗಳನ್ನು, ಸಾರ್ವಜನಿಕ ಆರೋಗ್ಯ ಸಂಸ್ಥೆಯ (Public Health Institute) ಗುಣಮಟ್ಟ ಪ್ರಯೋಗಾಲಯಗಳನ್ನು, ಅಂತರ್ಜಲ ನಿರ್ದೇಶನಾಲಯವನ್ನು (Ground Water Directorate) ಹಾಗೂ ಖಾಸಗಿ ಸಂಸ್ಥೆಗಳ ನೀರಿನ ಗುಣಮಟ್ಟ ಪ್ರಯೋಗಾಲಯಗಳನ್ನು (Private Water Testing Laboratory) ಸಂಪರ್ಕಿಸಬಹುದು.

Related Stories

No stories found.
ಇಜ್ಞಾನ Ejnana
www.ejnana.com