COVID-19ಗೆ ಕಾರಣವಾಗಿರುವ ವೈರಸ್ ಜೊತೆ ಹೋರಾಡಲು ಶರೀರದ ರಕ್ಷಕ ವ್ಯವಸ್ಥೆ ಸಾಮಾನ್ಯಕ್ಕಿಂತ ಹೆಚ್ಚು ಕಾಲ ತೆಗೆದುಕೊಳ್ಳುತ್ತದೆ
COVID-19ಗೆ ಕಾರಣವಾಗಿರುವ ವೈರಸ್ ಜೊತೆ ಹೋರಾಡಲು ಶರೀರದ ರಕ್ಷಕ ವ್ಯವಸ್ಥೆ ಸಾಮಾನ್ಯಕ್ಕಿಂತ ಹೆಚ್ಚು ಕಾಲ ತೆಗೆದುಕೊಳ್ಳುತ್ತದೆImage by Gerd Altmann from Pixabay

COVID-19 ಹರಡುವುದು ಹೇಗೆ?

COVID-19 ಹರಡುವುದು ಹೇಗೆ? ಈ ಕಾಯಿಲೆ ಹರಡುವಿಕೆಯ ನಾಲ್ಕು ಹಂತಗಳು ಯಾವುವು?

COVID-19 ಮೂಲತಃ ಮನುಷ್ಯರ ಶ್ವಾಸಕೋಶ/ಶ್ವಾಸಮಾರ್ಗದ ಕಾಯಿಲೆ. COVID-19 ಉಂಟುಮಾಡುವ ರೋಗಾಣು ಯಾವುದಾದರೂ ರೀತಿಯಲ್ಲಿ ಶ್ವಾಸಮಾರ್ಗವನ್ನು ತಲುಪಿದರೆ ಕಡೆಗೆ ಶ್ವಾಸಕೋಶಗಳನ್ನು ಮುಟ್ಟಬಹುದು.

ಇದಕ್ಕೆ ಎರಡು ವಿಧಗಳಿವೆ:

COVID-19 ಪೀಡಿತ ವ್ಯಕ್ತಿ ಒಂದು ವೇಳೆ ಇತರರ ಮೇಲೆ ನೇರವಾಗಿ ಸೀನಿದರೆ/ಕೆಮ್ಮಿದರೆ ರೋಗಿಯ ಸ್ರವಿಕೆಗಳು ನೇರವಾಗಿ ಇತರರ ಶ್ವಾಸಮಾರ್ಗದ ಮೇಲೆ ಬಿದ್ದು ಶ್ವಾಸಕೋಶಗಳನ್ನು ತಲುಪಬಹುದು. ರೋಗಿಯು ಕೆಮ್ಮುವಾಗ ಅಥವಾ ಸೀನುವಾಗ ತನ್ನ ಅಂಗೈಗಳನ್ನು ಅಡ್ಡಹಿಡಿದರೆ COVID-19 ಅವರ ಅಂಗೈಗಳಲ್ಲಿ ಉಳಿಯುತ್ತವೆ. ಅಂತಹವರು ಕೈ ತೊಳೆಯದೆ ಮತ್ತೊಬ್ಬರನ್ನು ಮುಟ್ಟಿದರೆ COVID-19 ವರ್ಗಾವಣೆ ಆಗುತ್ತದೆ.

COVID-19 ಪೀಡಿತ ವ್ಯಕ್ತಿಯ ಶ್ವಾಸಮಾರ್ಗದ ಸ್ರವಿಕೆಗಳು ಬೇರೆ ವಸ್ತುಗಳ ಮೇಲೆ ಬಿದ್ದು, ಅಲ್ಲೇ ಕೆಲಗಂಟೆಗಳ ಕಾಲ ಉಳಿಯುತ್ತವೆ. ಬೇರೆ ಯಾರಾದರೂ ಅಂತಹ ವಸ್ತುಗಳನ್ನು ಮುಟ್ಟಿದರೆ ಅವರ ಚರ್ಮಕ್ಕೆ COVID-19 ಹತ್ತಿಕೊಳ್ಳಬಹುದು. ಅಂತಹವರು ತಂತಮ್ಮ ಶ್ವಾಸಮಾರ್ಗಗಳನ್ನು ಮುಟ್ಟಿದರೆ, COVID-19 ಅವರವರ ಶ್ವಾಸಕೋಶಗಳನ್ನು ತಲುಪಬಹುದು. ಅಥವಾ, ಚರ್ಮಕ್ಕೆ COVID-19 ಹತ್ತಿಸಿಕೊಂಡ ವ್ಯಕ್ತಿ ಮತ್ತೊಬ್ಬರನ್ನು ಸೋಕುವ ಮೂಲಕ ಅದನ್ನು ವರ್ಗಾಯಿಸಬಹುದು.

ಶ್ವಾಸಮಾರ್ಗಗಳು ಯಾವುವು?

ಮೂಗಿನಿಂದ ಆರಂಭವಾಗುವ ಉಸಿರಾಟದ ನಳಿಕೆ ಶ್ವಾಸಕೋಶಗಳನ್ನು ತಲುಪುತ್ತದೆ. ಕಣ್ಣುಗಳಿಂದ ಎರಡು ಸಣ್ಣ ನಳಿಕೆಗಳು ಮೂಗಿನ ಬದಿಗಳನ್ನು ಸೇರುತ್ತವೆ. ಗಂಟಲಿನ ಹಂತದಲ್ಲಿ ಬಾಯಿ ಮತ್ತು ಮೂಗಿನ ದ್ವಾರಗಳು ಒಂದನ್ನೊಂದು ಸೇರಿ ಮತ್ತೆ ಪ್ರತ್ಯೇಕವಾಗುತ್ತವೆ. ಹೀಗಾಗಿ, ಕಣ್ಣು, ಮೂಗು ಮತ್ತು ಬಾಯಿನ ಮೂಲಕ COVID-19 ಶ್ವಾಸಕೋಶಗಳನ್ನು ತಲುಪಬಹುದು. ಎಷ್ಟೋ ಬಾರಿ ನಮಗೇ ತಿಳಿಯದಂತೆ ಅಂಗೈಗಳಿಂದ ಕಣ್ಣು, ಮೂಗು, ಬಾಯಿಗಳನ್ನು ಸೋಕುತ್ತಿರುತ್ತೇವೆ. ಹಾಗಾಗಿ ನಮ್ಮ ಅರಿವಿಗೇ ಬಾರದಂತೆ COVID-19 ಶ್ವಾಸಕೋಶಗಳನ್ನು ಸೇರುವ ಸಾಧ್ಯತೆಗಳಿವೆ.

COVID-19 ಕಾಯಿಲೆ ಹರಡುವಿಕೆಯ ನಾಲ್ಕು ಹಂತಗಳು ಯಾವುವು?

ಮೊದಲನೆಯ ಹಂತ: ಸಾಂಕ್ರಾಮಿಕ ಕಾಯಿಲೆ ಹೊರದೇಶದಿಂದ ಹೊಸದಾಗಿ ಕೆಲವು ರೋಗಿಗಳ ಮೂಲಕ ಬರುತ್ತದೆ. ಈ ಹಂತದಲ್ಲೇ ಅದರ ನಿಯಂತ್ರಣ ಮಾಡುವುದು ಅತ್ಯಂತ ಸೂಕ್ತ ವಿಧಾನ. ಆದರೆ, ಬಹಳಷ್ಟು ದೇಶಗಳು ಈ ಹಂತವನ್ನು ಮೊದಲಿನಲ್ಲೇ ಗುರುತಿಸುವುದಿಲ್ಲ.

ಎರಡನೆಯ ಹಂತ: ರೋಗಪೀಡಿತರ ಆಸುಪಾಸಿನಲ್ಲಿ ಒಬ್ಬರಿಂದೊಬ್ಬರಿಗೆ ರೋಗ ಹರಡುತ್ತಾ ಹೋಗುತ್ತದೆ. ಈ ಹರಡುವಿಕೆಯನ್ನು ಈ ಹಂತದಲ್ಲೇ ನಿಯಂತ್ರಣ ಮಾಡುವುದು ಅತ್ಯಂತ ಸೂಕ್ತ. ರೋಗಿಗಳ ಪರೀಕ್ಷೆ/ಪ್ರತ್ಯೇಕಿಸುವಿಕೆ, ಸಾಮಾಜಿಕ ಅಂತರ – ಇವೆಲ್ಲಾ ಈ ಹಂತದಲ್ಲಿ ಬಹಳ ಫಲಕಾರಿ. ನಮ್ಮ ದೇಶ ಸದ್ಯಕ್ಕೆ ಅನುಭವಿಸುತ್ತಿರುವುದು ಈ ಹಂತವನ್ನೇ.

ಮೂರನೆಯ ಹಂತ: ರೋಗಿಗಳ ಸಂಖ್ಯೆ ಕ್ರಮೇಣ ಹೆಚ್ಚಾಗುತ್ತಾ ರೋಗ ಸಮುದಾಯದಲ್ಲಿ ಶೀಘ್ರವಾಗಿ ಹರಡುತ್ತದೆ. ಆ ಹಂತದಲ್ಲಿ ರೋಗಕಾರಕ ಸೂಕ್ಷ್ಮಜೀವಿ ಎಲ್ಲಿಂದ ಎಲ್ಲಿಗೆ ಹರಡುತ್ತಿದೆ ಎಂಬ ನಿಖರತೆಯಿಲ್ಲ. ರೋಗಿಗಳು ಹೆಚ್ಚಾದಂತೆ ಆರೋಗ್ಯ ವ್ಯವಸ್ಥೆಯ ಮೇಲಿನ ಒತ್ತಡ ಹೆಚ್ಚುತ್ತಾ ಹೋಗುತ್ತದೆ. ಸಾಮಾಜಿಕ ತಲ್ಲಣಗಳು ದೇಶದ ಪರಿಸ್ಥಿತಿಯನ್ನು ಬಿಗಡಾಯಿಸುತ್ತವೆ. ಸದ್ಯಕ್ಕೆ ಇಟಲಿ, ಸ್ಪೇನ್ ಮುಂತಾದ ಯುರೋಪಿಯನ್ ದೇಶಗಳು ಈ ಹಂತದಲ್ಲಿವೆ.

ನಾಲ್ಕನೆಯ ಹಂತ: ರೋಗ ದೇಶವ್ಯಾಪಿಯಾಗುತ್ತದೆ. ದೇಶದ ಬಹುತೇಕ ಮಂದಿಗೆ ಸೋಂಕು ತಗುಲಿದಾಗ ಯಾರು ಯಾವ ಕ್ಷಣದಲ್ಲಿ ಅಪಾಯಕ್ಕೆ ಈಡಾಗುತ್ತಾರೆ ಎಂಬುದನ್ನು ತಿಳಿಯಲಾಗದು. ಇದು ನಿಯಂತ್ರಣವನ್ನು ಕೈ ಮೀರಿದ ಪರಿಸ್ಥಿತಿ.

ಇವೆಲ್ಲದರಿಂದ ಕೆಲವು ವಿಷಯಗಳು ಸ್ಪಷ್ಟವಾದವು. COVID-19 ನೇರವಾಗಿ ರೋಗಿಯಿಂದ ಮಾತ್ರ ಹರಡಬೇಕು ಎಂದೇನಿಲ್ಲ. ರೋಗಿಯ ಶ್ವಾಸಸ್ರವಿಕೆಗಳಿಂದ ಮಲಿನವಾಗಿರುವ ಯಾವುದೇ ವಸ್ತುಗಳ ಮೂಲಕ ಪರೋಕ್ಷವಾಗಿ ಯಾರಿಗೆ ಬೇಕಾದರೂ ಹರಡಬಹುದು. ಈ “ರೋಗಿ-ಸ್ರವಿಕೆ-ಮುಟ್ಟುವಿಕೆ-ವರ್ಗಾವಣೆ-ಸೋಂಕು-ಮತ್ತೊಬ್ಬ ರೋಗಿ” ಎನ್ನುವ ಚಕ್ರವನ್ನು ಮುರಿಯಬೇಕು. ಅದನ್ನು ಎಷ್ಟು ಬೇಗ, ಎಷ್ಟು ಪರಿಣಾಮಕಾರಿಯಾಗಿ ಮಾಡುತ್ತೇವೆ ಎನ್ನುವುದು ರೋಗದ ನಿಯಂತ್ರಣದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

Related Stories

No stories found.
logo
ಇಜ್ಞಾನ Ejnana
www.ejnana.com