COVID-19ಗೆ ಕಾರಣವಾಗಿರುವ ವೈರಸ್ ಜೊತೆ ಹೋರಾಡಲು ಶರೀರದ ರಕ್ಷಕ ವ್ಯವಸ್ಥೆ ಸಾಮಾನ್ಯಕ್ಕಿಂತ ಹೆಚ್ಚು ಕಾಲ ತೆಗೆದುಕೊಳ್ಳುತ್ತದೆ
COVID-19ಗೆ ಕಾರಣವಾಗಿರುವ ವೈರಸ್ ಜೊತೆ ಹೋರಾಡಲು ಶರೀರದ ರಕ್ಷಕ ವ್ಯವಸ್ಥೆ ಸಾಮಾನ್ಯಕ್ಕಿಂತ ಹೆಚ್ಚು ಕಾಲ ತೆಗೆದುಕೊಳ್ಳುತ್ತದೆImage by Gerd Altmann from Pixabay

COVID-19 ಎಷ್ಟು ಅಪಾಯಕಾರಿ?

COVID-19 ಎಷ್ಟು ಮಾರಕ? ಸರಕಾರ ಏಕೆ ಇಷ್ಟೊಂದು ಜಾಗ್ರತೆ ವಹಿಸುತ್ತಿದೆ?

COVID-19 ಕುರಿತಾಗಿ ಹಲವರಿಗೆ ತಪ್ಪು ತಿಳುವಳಿಕೆಗಳಿವೆ. ಸರಕಾರ ಸಮರೋಪಾದಿಯಲ್ಲಿ ಕ್ರಮಗಳನ್ನು ಕೈಗೊಳ್ಳುವುದನ್ನು ನೋಡಿದಾಗ ಇನ್ನಷ್ಟು ಪುಕಾರುಗಳು ಹರಡುತ್ತವೆ. COVID-19 ಎಷ್ಟು ಮಾರಕ? ಸರಕಾರ ಏಕೆ ಇಷ್ಟೊಂದು ಜಾಗ್ರತೆ ವಹಿಸುತ್ತಿದೆ? ಈ ಕುರಿತ ವಿವರಗಳು ಇಲ್ಲಿವೆ.

COVID-19 ಬಹಳ ಅಪಾಯಕಾರಿ ಕಾಯಿಲೆಯೇ?

ದೇಶದಲ್ಲಿ ಹರಡಿರುವ ಅತ್ಯಂತ ದೊಡ್ಡ ಆತಂಕಗಳಲ್ಲಿ ಇದೂ ಒಂದು. ಆದರೆ, ಈ ಆತಂಕ ನಿರಾಧಾರ. ಯಾವುದೇ ವೈರಸ್ ಕಾಯಿಲೆಯನ್ನಾಗಲೀ ನಿಯಂತ್ರಿಸಬಲ್ಲ ಶಕ್ತಿ ನಮ್ಮ ಶರೀರದಲ್ಲಿನ ರಕ್ಷಕ ವ್ಯವಸ್ಥೆಗೆ ಇರುತ್ತದೆ. ಆದರೆ COVID-19ರ ಜೆನೆಟಿಕ್ ರಚನೆ ಮಾರ್ಪಾಡಾಗಿರುವುದರಿಂದ ಅದನ್ನು ನಿಗ್ರಹಿಸಲು ಸ್ವಲ್ಪ ಅಧಿಕ ಕಾಲ ಹಿಡಿಯುತ್ತದೆ. ರಕ್ಷಕ ವ್ಯವಸ್ಥೆ ಸಮರ್ಥವಾಗಿರುವ ಬಹುತೇಕ ಮಂದಿಯಲ್ಲಿ COVID-19 ಹೆಚ್ಚು ಅಪಾಯವನ್ನು ಮಾಡದೇ ತಣಿಯುತ್ತದೆ. ಆದರೆ, ಈ ರಕ್ಷಕ ವ್ಯವಸ್ಥೆ ಕುಂಠಿತವಾಗಿದ್ದರೆ COVID-19 ಶ್ವಾಸಕೋಶಗಳನ್ನು ತಲುಪಿ ತೀವ್ರ ನ್ಯುಮೋನಿಯಾ ಉಂಟುಮಾಡುತ್ತದೆ. ಅಂತಹವರನ್ನು ಆಸ್ಪತ್ರೆಯಲ್ಲಿ ದಾಖಲು ಮಾಡಬೇಕು. ಪರಿಸ್ಥಿತಿ ಹದಗೆಟ್ಟರೆ ತೀವ್ರ ನಿಗಾ ಘಟಕಗಳಲ್ಲಿ ಚಿಕಿತ್ಸೆಗೆ ಒಳಪಡಿಸಬೇಕು. ವಿಶ್ವ ಆರೋಗ್ಯ ಸಂಸ್ಥೆ ಗಮನಿಸಿರುವಂತೆ ನೂರು ಮಂದಿದೆ COVID-19 ಸೋಂಕು ತಗುಲಿದರೆ ಸುಮಾರು 85 ಮಂದಿಗೆ ಆಸ್ಪತ್ರೆಯ ಆವಶ್ಯಕತೆ ಇರುವುದಿಲ್ಲ. ಉಳಿದ 15 ಮಂದಿಗೆ ಆಸ್ಪತ್ರೆ ಚಿಕಿತ್ಸೆ ಬೇಕಾಗಬಹುದು. ಆದರೆ, ತೀವ್ರ ನಿಗಾ ಘಟಕದ ಚಿಕಿತ್ಸೆ ಬೇಕಾಗುವುದು ಕೇವಲ ನೂರರಲ್ಲಿ 4-5 ಮಂದಿಗೆ ಮಾತ್ರ. ಹೀಗಾಗಿ, COVID-19 ಭೀಕರ ಕಾಯಿಲೆಯೂ ಅಲ್ಲ; ಅದರಿಂದ ಎಲ್ಲರಿಗೂ ಮರಣ ಖಚಿತ ಎಂದೂ ಅಲ್ಲ.

ಅಪಾಯಕಾರಿಯಲ್ಲ ಎಂದ ಮೇಲೆ ಸರಕಾರ ಇಷ್ಟೊಂದು ಕಟ್ಟುನಿಟ್ಟು ಏಕೆ ಮಾಡುತ್ತಿದೆ?

ಸರ್ಕಾರದ ಕಾರ್ಯಸೂಚಿ ಮತ್ತು ಕ್ರಮಗಳು ಅತ್ಯಂತ ಸೂಕ್ತವಾಗಿವೆ. COVID-19 ರ ಅಪಾಯ ಅಧಿಕವಾಗಿರುವವರ ಸಂಖ್ಯೆ ನಮ್ಮ ದೇಶದಲ್ಲಿ ನೂರಕ್ಕೆ ಸುಮಾರು 8 ಮಂದಿ. ಅಂದರೆ, 130 ಕೋಟಿ ಜನಸಂಖ್ಯೆಯಲ್ಲಿ ಸುಮಾರು 10-11 ಕೋಟಿ ಮಂದಿ ಅಪಾಯದ ಸಾಧ್ಯತೆಯಲ್ಲಿದ್ದಾರೆ. ಆದರೆ, ನಮ್ಮ ದೇಶದಲ್ಲಿ ಇರುವ ಆಸ್ಪತ್ರೆಗಳಲ್ಲಿ ಅಷ್ಟೊಂದು ಮಂದಿಗೆ ಚಿಕಿತ್ಸೆ ನೀಡುವ ಸಾಮರ್ಥ್ಯವಿಲ್ಲ. ಜೊತೆಗೆ, ನಮ್ಮಲ್ಲಿ ತೀವ್ರ ನಿಗಾ ಘಟಕಗಳು ತೀರಾ ಕಡಿಮೆ. COVID-19 ಮಾದರಿಯ ಸಾಂಕ್ರಾಮಿಕ ಕಾಯಿಲೆ ಎಷ್ಟು ತೀವ್ರ ಸ್ವರೂಪದ್ದು ಎನ್ನುವುದಕ್ಕಿಂತ ಅದು ಎಷ್ಟು ಜನರನ್ನು ಒಮ್ಮೆಲೇ ಬಾಧಿಸಬಹುದು ಎಂಬ ಲೆಕ್ಕಾಚಾರ ಬಹಳ ಮುಖ್ಯ. ಎಲ್ಲಿಯವರೆಗೆ ಒಟ್ಟು ರೋಗಿಗಳ ಸಂಖ್ಯೆ ಆಸ್ಪತ್ರೆಯ ಸಾಮರ್ಥ್ಯಕ್ಕಿಂತ ಕಡಿಮೆ ಇರುತ್ತದೋ, ಅಲ್ಲಿಯವರೆಗೆ COVID-19 ಕಾಯಿಲೆ ನಿಯಂತ್ರಣದಲ್ಲಿದೆ ಎಂದು ಅರ್ಥ. ಅಂದರೆ, COVID-19 ರೋಗದ ಹರಡುವಿಕೆಯನ್ನು ಸಾಧ್ಯವಾದಷ್ಟೂ ನಿಧಾನ ಮಾಡಿದರೆ ಮಾತ್ರ ಯಾವೊಂದು ಸಮಯದಲ್ಲೂ ಎಲ್ಲಾ COVID-19 ರೋಗಿಗಳಿಗೂ ಚಿಕಿತ್ಸೆ ನೀಡಬಹುದು. COVID-19 ಕಾಯಿಲೆಯ ಹರಡುವಿಕೆಯ ಸ್ವರೂಪ ಗಮನಿಸಿದರೆ ಸರಕಾರದ ಕಟ್ಟುನಿಟ್ಟಿನ ಕ್ರಮ ಎಷ್ಟು ಸಮಂಜಸ ಎಂಬುದು ತಿಳಿಯುತ್ತದೆ.

ಒಂದು ವೇಳೆ ನಿಯಂತ್ರಣ ಇಲ್ಲವಾದರೆ ಏನಾಗುತ್ತದೆ?

ಇಟಲಿ ಮುಂದುವರೆದ ದೇಶ. ಅಲ್ಲಿನ ಆರೋಗ್ಯ ವ್ಯವಸ್ಥೆ ಬಹಳ ಸಮರ್ಥವಾದದ್ದು. ಇಟಲಿ ದೇಶದ ಆಸ್ಪತ್ರೆಗಳ ತೀವ್ರ ನಿಗಾ ಘಟಕಗಳು ಪ್ರಪಂಚದಲ್ಲೇ ಪ್ರಸಿದ್ಧಿ ಪಡೆದಿವೆ. ಅಲ್ಲಿನ ಸೋಂಕು ಕಾಯಿಲೆ ವಿಶೇಷಜ್ಞರು ಜಗತ್ತಿನ ಹೆಸರುವಾಸಿ ವೈದ್ಯರುಗಳ ಪಟ್ಟಿಯಲ್ಲಿ ಇದ್ದಾರೆ. ಯಾವುದೇ ಕಾಯಿಲೆಯನ್ನಾದರೂ ಚಿಕಿತ್ಸೆ ನೀಡಿ ಮಣಿಸಬಲ್ಲ ಸಾಮರ್ಥ್ಯ ಇಟಲಿ ದೇಶದ ಆಸ್ಪತ್ರೆಗಳಿಗೆ ಇದೆ. ಇಷ್ಟಾದರೂ ಇಂದು COVID-19 ಇಟಲಿ ದೇಶವನ್ನು ವಿಪರೀತ ಕಂಗೆಡಿಸಿದೆ. ಅದಕ್ಕೆ ಕಾರಣ ಅವರ ಆರೋಗ್ಯ ವ್ಯವಸ್ಥೆಯ ಅಸಾಮರ್ಥ್ಯವಲ್ಲ; ಅಲ್ಲಿ ನಿಯಂತ್ರಣವಿಲ್ಲದೆ ಹಬ್ಬಿದ COVID-19 ಸೋಂಕು. ಕಟ್ಟುನಿಟ್ಟಿನ ನಿಯಂತ್ರಣ ಪಾಲಿಸದ ಕಾರಣ ಅನತಿಕಾಲದಲ್ಲಿ COVID-19 ಕಾಯಿಲೆ ವೇಗವಾಗಿ ಹಬ್ಬಿದ್ದರಿಂದ ಒಮ್ಮೆಗೇ ಸಾವಿರಾರು ಮಂದಿ ರೋಗಿಗಳು ಆಸ್ಪತ್ರೆಗೆ ದಾಖಲಾಗುವಂತಾಯಿತು. ನೂರು ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಗೆ ಒಮ್ಮೆಲೇ ಸಾವಿರ ಮಂದಿ ರೋಗಿಗಳು ಚಿಕಿತ್ಸೆಗೆ ಬಂದಂತಾಯಿತು. ಅತ್ಯಂತ ವ್ಯವಸ್ಥಿತ ಸೌಲಭ್ಯಗಳಿದ್ದ ಇಟಲಿಯ ಆಸ್ಪತ್ರೆಗಳಲ್ಲಿ ಅವುಗಳ ಸಾಮರ್ಥ್ಯದ ಹತ್ತಾರು ಪಟ್ಟು ಹೆಚ್ಚು ಸಂಖ್ಯೆಯ ರೋಗಿಗಳನ್ನು ಒಮ್ಮೆಗೇ ಚಿಕಿತ್ಸೆ ಮಾಡುವಷ್ಟು ಅನುಕೂಲವಿಲ್ಲದೇ ಇಡೀ ಆರೋಗ್ಯ ವ್ಯವಸ್ಥೆ ಕುಸಿಯಿತು. ಅಂದರೆ, ಸಮಸ್ಯೆ ದೇಶದ ಆರೋಗ್ಯ ವ್ಯವಸ್ಥೆ ಎಷ್ಟು ಮುಂದುವರೆದಿದೆ ಎನ್ನುವುದಲ್ಲ; COVID-19 ಹರಡುವಿಕೆಯನ್ನು ಎಷ್ಟು ಕಟ್ಟುನಿಟ್ಟಿನ ನಿಯಂತ್ರಣದಲ್ಲಿ ಇಡಬೇಕು ಎನ್ನುವುದು.

'Flattening the curve' ನಕ್ಷೆ
'Flattening the curve' ನಕ್ಷೆEsther Kim@k_thosandCarl T. Bergstrom@CT_Bergstrom / CC BY (https://creativecommons.org/licenses/by/2.0)

ನಕ್ಷೆಯಲ್ಲಿ ತೋರಿಸಿರುವಂತೆ, ಎತ್ತರದ ಕಮಾನು ಕಡಿಮೆ ಕಾಲದಲ್ಲಿ ಆರೋಗ್ಯ ವ್ಯವಸ್ಥೆಯ ಸಾಮರ್ಥ್ಯವನ್ನು ಮೀರಿ ವೇಗವಾಗಿ ಹರಡುವ ಕಾಯಿಲೆಯನ್ನು ಸೂಚಿಸಿದೆ. ಇಟಲಿ ದೇಶದ ಪರಿಸ್ಥಿತಿ ಹೀಗಿದೆ. ಅದಕ್ಕೆ ಪ್ರತಿಯಾಗಿ ಕಡಿಮೆ ಎತ್ತರದ ಎರಡನೆಯ ಕಮಾನು ಕಟ್ಟುನಿಟ್ಟಿನ ನಿಯಂತ್ರಣಗಳ ದೆಸೆಯಿಂದ ಕಾಯಿಲೆ ಹೇಗೆ ನಿಧಾನವಾಗಿ ಹರಡುತ್ತದೆ ಎಂದು ತೋರುತ್ತದೆ. ಹೀಗಾಗಿ ಒಟ್ಟಾರೆ ಪರಿಸ್ಥಿತಿ ಆರೋಗ್ಯ ವ್ಯವಸ್ಥೆಯ ಸಾಮರ್ಥ್ಯದ ಒಳಗೇ ಉಳಿಯುತ್ತದೆ. ನಾವು ಲಾಕ್-ಡೌನ್ ನಂತಹ ನಿಯಂತ್ರಣಗಳ ಮೂಲಕ ಸಾಧಿಸಬೇಕಾದ್ದು ಇದನ್ನೇ. ಯಾವುದೇ ಕಾರಣಕ್ಕೂ ನಾವು ಎತ್ತರದ ಕಮಾನಿನ ರೀತಿಯಲ್ಲಿ ಮುಂದುವರೆಯುವಂತಿಲ್ಲ. ಅದಕ್ಕಾಗಿಯೇ ನಮ್ಮ ದೇಶದಲ್ಲಿ ಕಟ್ಟುನಿಟ್ಟಿನ ನಿಯಂತ್ರಣ ಸಫಲವಾಗುವುದು ನಮ್ಮ ಉಳಿವಿನ ದೃಷ್ಟಿಯಿಂದ ಬಹಳ ಮುಖ್ಯ.

Related Stories

No stories found.
logo
ಇಜ್ಞಾನ Ejnana
www.ejnana.com