ಯಾವುದೋ ವಿಷಯದ ಬಗೆಗಿನ ಅಜ್ಞಾನ, ಮನುಷ್ಯನಲ್ಲಿ ಅಪರಿಮಿತವಾದ ಆತ್ಮವಿಶ್ವಾಸವನ್ನು ಹುಟ್ಟಿಸಬಲ್ಲದು
ಯಾವುದೋ ವಿಷಯದ ಬಗೆಗಿನ ಅಜ್ಞಾನ, ಮನುಷ್ಯನಲ್ಲಿ ಅಪರಿಮಿತವಾದ ಆತ್ಮವಿಶ್ವಾಸವನ್ನು ಹುಟ್ಟಿಸಬಲ್ಲದುImage by www_slon_pics from Pixabay

ಡನ್ನಿಂಗ್-ಕ್ರೂಗರ್ ಪರಿಣಾಮ ಅಂದರೇನು?

ತಮಗೆ ಗೊತ್ತಿಲ್ಲದ ವಿಷಯಗಳ ಬಗೆಗೂ ಅತೀವ ಆತ್ಮವಿಶ್ವಾಸದಿಂದ ಮಾತನಾಡುವ ಜನರನ್ನು ನೀವು ನೋಡಿರಬಹುದು. ಇದು ಸಾಧ್ಯವಾಗುವುದು ಹೇಗೆ? ಹಿನ್ನೆಲೆ ಇಲ್ಲಿದೆ!

'ಅಲ್ಪಜ್ಞಾನಿ - ಮಹಾಗರ್ವಿ' ಎಂಬ ನಾಣ್ನುಡಿಯನ್ನು ನಾವು ದೈನಂದಿನ ಜೀವನದಲ್ಲಿ ಬಳಸುತ್ತೇವೆ. ಅದು ಸತ್ಯವೂ ಹೌದು. ಒಬ್ಬ ವ್ಯಕ್ತಿ ಯಾವುದೋ ಒಂದು ವಿಷಯದ ಕುರಿತು, ಅತ್ಯಂತ ಆತ್ಮವಿಶ್ವಾಸದಿಂದ, ಅಧಿಕಾರಯುತವಾಗಿ ಮಾತನಾಡುತ್ತಿದ್ದಾನೆ ಅಥವಾ ವಾದಿಸುತ್ತಿದ್ದಾನೆಂದರೆ, ಆತನಿಗೆ ಆ ವಿಷಯದ ಬಗ್ಗೆ ಅಪಾರವಾದ ಜ್ಞಾನವಿರಲೇಬೇಕೆಂದಿಲ್ಲ; ಆತನಿಗಿರುವ ಅಪಾರವಾದ ಅಜ್ಞಾನವೂ ಇದಕ್ಕೆ ಕಾರಣವಾಗಿರಬಹುದು.

ಮನುಷ್ಯರಲ್ಲಿ ಕಂಡುಬರುವ ಈ ಬಗೆಯ ದೋಷಯುಕ್ತ ಯೋಚನಾಪ್ರಕ್ರಿಯೆಯನ್ನು ಅಧ್ಯಯನ ಮಾಡಿದ ಮೊದಲಿಗರು ಡೇವಿಡ್ ಡನ್ನಿಂಗ್ ಮತ್ತು ಜಸ್ಟಿನ್ ಕ್ರೂಗರ್ ಎಂಬ ಇಬ್ಬರು ಮನಃಶಾಸ್ತ್ರಜ್ಞರು. ಹೀಗಾಗಿ, ಈ ವಿದ್ಯಮಾನಕ್ಕೆ ಡನ್ನಿಂಗ್-ಕ್ರೂಗರ್ ಪರಿಣಾಮ (Dunning–Kruger effect) ಎಂದೇ ಹೆಸರು ಬಂದಿದೆ. ಇದು ಕೇವಲ ಮಾತನಾಡುವುದು ಅಥವಾ ವಾದ ಮಾಡುವುದಕ್ಕಷ್ಟೇ ಸೀಮಿತವಲ್ಲ; ಅಜ್ಞಾನದಿಂದ ಕೂಡಿದ್ದರೂ, ಮಾಡುತ್ತಿರುವುದು ಅಸಂಬದ್ಧವನ್ನೇ ಆದರೂ, ಆತ್ಮವಿಶ್ವಾಸದಿಂದ ಕೆಲಸ ಮಾಡುವುದು ಕೂಡ ಇದರ ಪರಿಮಿತಿಯಲ್ಲೇ ಬರುತ್ತದೆ.

1995ರಲ್ಲಿ, ಮಾಕ್ ಆರ್ಥರ್ ಎಂಬಾತ ಹಾಡಹಗಲೇ ಬ್ಯಾಂಕ್ ದರೋಡೆಗೆ ಬಂದಿದ್ದ. ಆತ ಮುಖಕ್ಕೆ ಮುಸುಕನ್ನೇನೂ ಧರಿಸಿರಲಿಲ್ಲ. ಪರಿವೀಕ್ಷಣಾ ಕ್ಯಾಮರಾಗಳಲ್ಲಿ ತನ್ನ ಮುಖ ಕಾಣುತ್ತದೆ, ಅದನ್ನು ಉಪಯೋಗಿಸಿಕೊಂಡು ಪೋಲೀಸರು ತನ್ನನ್ನು ಸೆರೆಹಿಡಿಯಬಹುದೆಂಬ ಹೆದರಿಕೆಯೂ ಆತನಿಗಿರಲಿಲ್ಲ. ಅಷ್ಟೇ ಅಲ್ಲ, ದರೋಡೆ ಮುಗಿದು ಬ್ಯಾಂಕಿನಿಂದ ಹೊರಬೀಳುವಾಗ ಆತ ಕ್ಯಾಮರಾಗಳ ಕಡೆ ಮುಖವೆತ್ತಿ ಮುಗುಳ್ನಗೆಯನ್ನೂ ಬೀರಿದ್ದ. ಕೆಲವೇ ತಾಸುಗಳಲ್ಲಿ ಪೋಲೀಸರು ಅವನನ್ನು ಬಂಧಿಸಿದಾಗ, ಆತ ಸಖೇದಾಶ್ಚರ್ಯದಿಂದ ಹೇಳಿದ್ದು, "ಇದು ಹೇಗೆ ಸಾಧ್ಯ? ನಾನು ನಿಂಬೆರಸವನ್ನು ಮುಖಕ್ಕೆ ಹಚ್ಚಿಕೊಂಡಿದ್ದೆ!"

ಆತ, ನಿಂಬೆರಸವನ್ನು ಮುಖಕ್ಕೆ ಹಚ್ಚಿಕೊಂಡರೆ, ಕ್ಯಾಮರಾಗಳ ದೃಶ್ಯಾವಳಿಗಳಲ್ಲಿ ಮುಖ ಅದೃಶ್ಯವಾಗುತ್ತದೆ ಎಂದು ಬಲವಾಗಿ ನಂಬಿದ್ದ. ಈ ಅಜ್ಞಾನವೇ ಆತನಲ್ಲಿ ಕ್ಯಾಮರಾಗಳಿಗೆ ಮುಖತೋರಿಸಿ ನಗುಬೀರುವ ಆತ್ಮವಿಶ್ವಾಸವನ್ನು ತಂದುಕೊಟ್ಟಿತ್ತು. ಈ ಘಟನೆ, ಡೇವಿಡ್ ಡನ್ನಿಂಗ್ ಮತ್ತವರ ವಿದ್ಯಾರ್ಥಿ ಜಸ್ಟಿನ್ ಕ್ರೂಗರ್ ಅವರ ಗಮನ ಸೆಳೆಯಿತು. ಮನುಷ್ಯರ ಆಲೋಚನಾಶಕ್ತಿಯಲ್ಲಿರುವ ದೌರ್ಬಲ್ಯವೊಂದರ ಮೇಲೆ ಬೆಳಕು ಚೆಲ್ಲಿತು.

ಡನ್ನಿಂಗ್-ಕ್ರೂಗರ್ ಪರಿಣಾಮವನ್ನು ಈ ಕೆಳಗಿನ ಚಿತ್ರ ಪರಿಣಾಮಕಾರಿಯಾಗಿ ವಿವರಿಸುತ್ತದೆ. ಯಾವುದೋ ವಿಷಯದ ಬಗೆಗಿನ ಅಜ್ಞಾನ, ಮನುಷ್ಯನಲ್ಲಿ ಅಪರಿಮಿತವಾದ ಆತ್ಮವಿಶ್ವಾಸವನ್ನು ಹುಟ್ಟಿಸಬಲ್ಲದು. ಆದರೆ, ಆ ವಿಷಯದ ಕುರಿತಾದ ಅರಿವು ಸರಿಯಾಗಿ ಮೂಡುತ್ತ ಹೋದಂತೆ, ಆತ್ಮವಿಶ್ವಾಸ ತಗ್ಗುತ್ತ ಬರುತ್ತದೆ; ಅರಿವು ಹೆಚ್ಚುತ್ತ ಹೋದಂತೆ, ತಗ್ಗಿದ ಆತ್ಮವಿಶ್ವಾಸ ಹೆಚ್ಚುತ್ತ ಹೋಗುತ್ತದೆ. ಆದರೂ, ಮೊದಲಿನ ಅಜ್ಞಾನದ ಸ್ಥಿತಿಯಲ್ಲಿದ್ದಷ್ಟು ಆತ್ಮವಿಶ್ವಾಸ ಬರುವುದಿಲ್ಲವೆಂದೇ ಹೇಳಬಹುದು.

ಡನ್ನಿಂಗ್-ಕ್ರೂಗರ್ ಪರಿಣಾಮ
ಡನ್ನಿಂಗ್-ಕ್ರೂಗರ್ ಪರಿಣಾಮejnana.com
ಇಜ್ಞಾನಕ್ಕೆ ನೀವೂ ಬರೆಯಬಹುದು!
ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ವಿಷಯಗಳನ್ನು ಪರಿಚಯಿಸುವ ಲೇಖನಗಳನ್ನು ನೀವೂ ಬರೆಯಬಹುದು. ಯಾವ ವಿಷಯದ ಬಗ್ಗೆ ಬರೆಯಲು ಇಷ್ಟಪಡುತ್ತೀರಿ ಎನ್ನುವುದನ್ನು, ನಿಮ್ಮ ಬರಹದ ಒಂದು ಮಾದರಿಯೊಡನೆ ejnana.trust@gmail.comಗೆ ಕಳಿಸಿಕೊಡಿ. ಲೇಖನಗಳನ್ನು ಪ್ರಕಟಿಸುವ ಹಾಗೂ ಅಗತ್ಯವೆನಿಸಿದ ಬದಲಾವಣೆಗಳನ್ನು ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಸಂಪಾದಕ ಮಂಡಲಿ ಕಾಯ್ದಿರಿಸಿಕೊಂಡಿದೆ.

Related Stories

No stories found.
logo
ಇಜ್ಞಾನ Ejnana
www.ejnana.com