'ಕನ್ನಡದಲ್ಲಿ ವಿಜ್ಞಾನ' ಕಾರ್ಯಾಗಾರವನ್ನು ಇದೇ ಶನಿವಾರ (ನವೆಂಬರ್ ೨೫, ೨೦೨೩) ಹಗರಿಬೊಮ್ಮನಹಳ್ಳಿಯಲ್ಲಿ ಆಯೋಜಿಸಲಾಗಿದ್ದು, ತಾಲ್ಲೂಕಿನ ಸುಮಾರು ಒಂದು ನೂರು ಶಿಕ್ಷಕರು ಪಾಲ್ಗೊಳ್ಳಲಿದ್ದಾರೆ.
'ಕನ್ನಡದಲ್ಲಿ ವಿಜ್ಞಾನ' ಕಾರ್ಯಾಗಾರವನ್ನು ಇದೇ ಶನಿವಾರ (ನವೆಂಬರ್ ೨೫, ೨೦೨೩) ಹಗರಿಬೊಮ್ಮನಹಳ್ಳಿಯಲ್ಲಿ ಆಯೋಜಿಸಲಾಗಿದ್ದು, ತಾಲ್ಲೂಕಿನ ಸುಮಾರು ಒಂದು ನೂರು ಶಿಕ್ಷಕರು ಪಾಲ್ಗೊಳ್ಳಲಿದ್ದಾರೆ.ejnana.com

ನ. ೨೫ರಂದು ಹಗರಿಬೊಮ್ಮನಹಳ್ಳಿಯಲ್ಲಿ 'ಕನ್ನಡದಲ್ಲಿ ವಿಜ್ಞಾನ' ಕಾರ್ಯಾಗಾರ

ಶಾಲಾ ಶಿಕ್ಷಣ ಇಲಾಖೆ ಹಾಗೂ ಇಜ್ಞಾನ ಟ್ರಸ್ಟ್ ಸಹಯೋಗದಲ್ಲಿ ಆಯೋಜನೆ

ಕನ್ನಡದಲ್ಲಿ ವಿಜ್ಞಾನ ಸಂವಹನ ಕೈಗೊಳ್ಳುವ ನಿಟ್ಟಿನಲ್ಲಿ ಶಾಲಾ ಶಿಕ್ಷಕರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ 'ಕನ್ನಡದಲ್ಲಿ ವಿಜ್ಞಾನ' ಕಾರ್ಯಾಗಾರವನ್ನು ಇದೇ ಶನಿವಾರ (ನವೆಂಬರ್ ೨೫, ೨೦೨೩) ಹಗರಿಬೊಮ್ಮನಹಳ್ಳಿಯಲ್ಲಿ ಆಯೋಜಿಸಲಾಗಿದೆ. ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಶಾಲಾ ಶಿಕ್ಷಣ ಇಲಾಖೆ ಹಾಗೂ ಬೆಂಗಳೂರಿನ ಇಜ್ಞಾನ ಟ್ರಸ್ಟ್ ಸಹಯೋಗದಲ್ಲಿ ಈ ಕಾರ್ಯಾಗಾರವನ್ನು ಆಯೋಜಿಸಲಾಗಿದ್ದು, ತಾಲ್ಲೂಕಿನ ವಿವಿಧ ಶಾಲೆಗಳ ಸುಮಾರು ಒಂದು ನೂರು ಶಿಕ್ಷಕರು ಪಾಲ್ಗೊಳ್ಳಲಿದ್ದಾರೆ.

ಸಾಮಾನ್ಯ ಜನರ ನಡುವೆ ವಿಜ್ಞಾನ-ತಂತ್ರಜ್ಞಾನಗಳನ್ನು ಜನಪ್ರಿಯಗೊಳಿಸುವುದು ೨೦೧೬ರಲ್ಲಿ ಸ್ಥಾಪನೆಯಾದ ಇಜ್ಞಾನ ಟ್ರಸ್ಟ್‌ನ ಉದ್ದೇಶವಾಗಿದೆ. ವಿಜ್ಞಾನ ಲೇಖನ ಹಾಗೂ ಪುಸ್ತಕಗಳ ಪ್ರಕಟಣೆ, ವಿಚಾರಸಂಕಿರಣಗಳ ಆಯೋಜನೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಇಜ್ಞಾನ ಟ್ರಸ್ಟ್‌ ಆಯೋಜಿಸುತ್ತಾ ಬಂದಿದ್ದು, 'ಕನ್ನಡದಲ್ಲಿ ವಿಜ್ಞಾನ' ಕಾರ್ಯಾಗಾರ ಆ ನಿಟ್ಟಿನಲ್ಲಿ ಇನ್ನೊಂದು ಮಹತ್ವದ ಹೆಜ್ಜೆಯಾಗಿದೆ. "ವಿಜ್ಞಾನ-ತಂತ್ರಜ್ಞಾನಗಳು ನಮ್ಮ ಬದುಕಿನಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ಈ ಸಂದರ್ಭದಲ್ಲಿ ಅವುಗಳ ಬಗ್ಗೆ ಎಲ್ಲರಲ್ಲೂ ಅರಿವು ಮೂಡಿಸುವುದು ಅತ್ಯಗತ್ಯವಾಗಿದೆ. ಶಿಕ್ಷಕರು ಈ ಕೆಲಸದಲ್ಲಿ ತೊಡಗಿಕೊಂಡರೆ ಅದು ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಅವರ ಪೋಷಕರಿಗೆ ಹಾಗೂ ಒಟ್ಟಾರೆಯಾಗಿ ಸಮಾಜಕ್ಕೂ ಉಪಕಾರವಾಗುತ್ತದೆ. ಈ ಆಶಯದೊಡನೆ ನಾವು ಈ ಕಾರ್ಯಾಗಾರವನ್ನು ಆಯೋಜಿಸುತ್ತಿದ್ದೇವೆ," ಎಂದು ಇಜ್ಞಾನ ಟ್ರಸ್ಟ್‌ನ ಎನ್. ಜಿ. ಚೇತನ್ ತಿಳಿಸಿದ್ದಾರೆ.

"ವಿಜ್ಞಾನದ ಬಗ್ಗೆ, ಭಾಷೆಯ ಬಗ್ಗೆ ತಿಳಿದುಕೊಳ್ಳಬೇಕಾದರೆ ಮಕ್ಕಳು ಹೆಚ್ಚುಹೆಚ್ಚಾಗಿ ಓದುವುದನ್ನೂ ಅಭ್ಯಾಸ ಮಾಡಿಕೊಳ್ಳಬೇಕು. ಅದಕ್ಕೆ ನೆರವಾಗುವ ಉದ್ದೇಶದಿಂದ ನಾವು ಹಲವು ವರ್ಷಗಳಿಂದ 'ಕಲಿಕೆಗೆ ಕೊಡುಗೆ' ಎನ್ನುವ ಕಾರ್ಯಕ್ರಮ ನಡೆಸುತ್ತಿದ್ದೇವೆ. ಶಾಲೆಯ ಮಕ್ಕಳಿಗೆ, ಗ್ರಂಥಾಲಯಗಳಿಗೆ ಸಾವಿರಾರು ಪುಸ್ತಕಗಳನ್ನು ವಿತರಿಸಿದ್ದೇವೆ. ಶನಿವಾರದ ಕಾರ್ಯಾಗಾರದ ಸಂದರ್ಭದಲ್ಲಿ ತಾಲ್ಲೂಕಿನ ೩೦ಕ್ಕೂ ಹೆಚ್ಚು ಶಾಲಾ ಗ್ರಂಥಾಲಯಗಳಿಗೆ ವಿಜ್ಞಾನ ಪುಸ್ತಕಗಳನ್ನು ವಿತರಿಸಲಾಗುವುದು," ಎಂದೂ ಅವರು ಹೇಳಿದ್ದಾರೆ.

ಶನಿವಾರದ ಕಾರ್ಯಾಗಾರ ಬೆಳಿಗ್ಗೆ ೧೦:೩೦ರಿಂದ ಸಂಜೆ ೫:೩೦ರವರೆಗೆ ಹಗರಿಬೊಮ್ಮನಹಳ್ಳಿಯ ಶಿವಾನಂದನಗರದಲ್ಲಿರುವ ಬೆಸ್ಟ್ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ನಡೆಯಲಿದೆ. ಹಿರಿಯ ಪತ್ರಕರ್ತ - ವಿಜ್ಞಾನ ಲೇಖಕ ಶ್ರೀ ನಾಗೇಶ ಹೆಗಡೆ, ಇಜ್ಞಾನ ತಂಡದ ಟಿ. ಜಿ. ಶ್ರೀನಿಧಿ ಹಾಗೂ ಜಿ. ಎಸ್. ಅಭಿಷೇಕ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ. ವಿಜ್ಞಾನ ಸಂವಹನದ ಮಹತ್ವ ಹಾಗೂ ಸಂವಹನ ತಂತ್ರಗಳನ್ನು ಕುರಿತ ಉಪನ್ಯಾಸಗಳು, ಸಂವಹನದಲ್ಲಿ ತಂತ್ರಜ್ಞಾನದ ಸವಲತ್ತುಗಳನ್ನು ಬಳಸಿಕೊಳ್ಳುವ ಕುರಿತ ಪ್ರಾತ್ಯಕ್ಷಿಕೆಗಳು, ಸಂಪನ್ಮೂಲ ವ್ಯಕ್ತಿಗಳೊಡನೆ ಪ್ರಶ್ನೋತ್ತರ ಸೇರಿದಂತೆ ಹಲವು ಚಟುವಟಿಕೆಗಳು ಕಾರ್ಯಾಗಾರದ ಅಂಗವಾಗಿ ನಡೆಯಲಿವೆ.

ಹಗರಿಬೊಮ್ಮನಹಳ್ಳಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಮೈಲೇಶ್ ಬೇವೂರು ಹಾಗೂ ಅವರ ತಂಡ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ಅವರೆಲ್ಲರ ನೆರವಿಗಾಗಿ ಇಜ್ಞಾನ ಟ್ರಸ್ಟ್ ಪದಾಧಿಕಾರಿಗಳು ತಮ್ಮ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. ಪರಿಕಲ್ಪನೆಯಿಂದ ಆಯೋಜನೆಯವರೆಗೂ ಈ ಕಾರ್ಯಕ್ರಮದ ಜೊತೆಯಲ್ಲಿರುವ ಡಾ. ಪರಮೇಶ್ವರಯ್ಯ ಸೊಪ್ಪಿಮಠರನ್ನೂ ಅವರು ವಿಶೇಷವಾಗಿ ಪ್ರಶಂಸಿಸಿದ್ದಾರೆ.  

logo
ಇಜ್ಞಾನ Ejnana
www.ejnana.com