ಡಿಸೆಂಬರ್ ೨೨ರಿಂದ ಅಂತಾರಾಷ್ಟ್ರೀಯ ವಿಜ್ಞಾನ ಹಬ್ಬ
ಕೇಂದ್ರ ಸರಕಾರದ ನೇತೃತ್ವದಲ್ಲಿ ೨೦೧೫ರಿಂದ ಆಯೋಜಿಸಲಾಗುತ್ತಿರುವ ಅಂತಾರಾಷ್ಟ್ರೀಯ ವಿಜ್ಞಾನ ಹಬ್ಬ 'ಇಂಡಿಯಾ ಇಂಟರ್‌ನ್ಯಾಶನಲ್ ಸೈನ್ಸ್ ಫೆಸ್ಟಿವಲ್'ನ (ಐಐಎಸ್‌ಎಫ್) ಈ ವರ್ಷ ಆನ್‌ಲೈನ್ ಆಗಿದ್ದು, ಇದೇ ಡಿಸೆಂಬರ್ ೨೨ರಿಂದ ೨೫ರವರೆಗೆ ನಡೆಯಲಿದೆ. 'ಸ್ವಾವಲಂಬಿ ಭಾರತ ಮತ್ತು ಜಾಗತಿಕ ಕಲ್ಯಾಣಕ್ಕಾಗಿ ವಿಜ್ಞಾನ' (Science for Self-Reliant India and Global Welfare) ಎನ್ನುವುದು ಈ ವರ್ಷದ ಕೇಂದ್ರ ವಿಷಯವಾಗಿರಲಿದೆ.
ಇಂಡಿಯಾ ಇಂಟರ್‌ನ್ಯಾಶನಲ್ ಸೈನ್ಸ್ ಫೆಸ್ಟಿವಲ್‌ನ ಈ ಹಿಂದಿನ ಆವೃತ್ತಿಗಳನ್ನು ನವದೆಹಲಿ (ಎರಡು ಬಾರಿ), ಚೆನ್ನೈ, ಲಖನೌ ಹಾಗೂ ಕೋಲ್ಕತ್ತಾಗಳಲ್ಲಿ ಆಯೋಜಿಸಲಾಗಿತ್ತು. ಈ ವರ್ಷದ ಆನ್‌ಲೈನ್ ಹಬ್ಬ, ಐಐಎಸ್‌ಎಫ್‌ನ ಆರನೇ ಆವೃತ್ತಿಯಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಭೂವಿಜ್ಞಾನ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಿಎಸ್‌ಐಆರ್ ಸೇರಿ ಭಾರತ ಸರಕಾರದ ಹಲವು ವಿಜ್ಞಾನ-ತಂತ್ರಜ್ಞಾನ ಸಂಸ್ಥೆಗಳು 'ವಿಜ್ಞಾನ ಭಾರತಿ'ಯೊಂದಿಗೆ ಸೇರಿ ಐಐಎಸ್‌ಎಫ್ ಅನ್ನು ಆಯೋಜಿಸುತ್ತಿವೆ. ಸಿಎಸ್‌ಐಆರ್-ನ್ಯಾಶನಲ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್, ಟೆಕ್ನಾಲಜಿ ಆಂಡ್ ಡೆವೆಲಪ್‌ಮೆಂಟ್ ಸ್ಟಡೀಸ್ (NISTADS) ಅನ್ನು ಈ ಆವೃತ್ತಿಯ ಸಂಘಟನಾ ಸಂಸ್ಥೆಯೆಂದು ಗುರುತಿಸಲಾಗಿದೆ.
ಈ ವರ್ಷದ ವಿಜ್ಞಾನ ಹಬ್ಬದ ಅಂಗವಾಗಿ ೯ ವಿಭಾಗಗಳಲ್ಲಿ ೪೧ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಭಾಷಣ - ವಿಚಾರ ಸಂಕಿರಣಗಳು ಮಾತ್ರವೇ ಅಲ್ಲದೆ ಪ್ರದರ್ಶನಗಳು, ಸ್ಪರ್ಧೆಗಳು ಕೂಡ ಈ ಕಾರ್ಯಕ್ರಮಗಳಲ್ಲಿ ಸೇರಿವೆ. ಈ ಪೈಕಿ ವಿದೇಶಿ ಮಂತ್ರಿಗಳು ಮತ್ತು ರಾಜತಾಂತ್ರಿಕರ ಸಮಾವೇಶ, ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರ ಸಮಾವೇಶ ಸೇರಿದಂತೆ ಕೆಲ ಕಾರ್ಯಕ್ರಮಗಳು ಆಹ್ವಾನಿತರಿಗೆ ಮಾತ್ರ ಮೀಸಲಾಗಿರುತ್ತವೆ. ಐಐಎಸ್ಎಫ್ 2020ರ ಅಂಗವಾಗಿ ಐದು ವಿಭಿನ್ನ ವಿಭಾಗಗಳಲ್ಲಿ ಗಿನ್ನೆಸ್ ವಿಶ್ವ ದಾಖಲೆಗಳನ್ನು ನಿರ್ಮಿಸುವ ಪ್ರಯತ್ನವೂ ನಡೆಯಲಿದೆ.
ಉಳಿದಂತೆ ಅಂತಾರಾಷ್ಟ್ರೀಯ ವಿಜ್ಞಾನ ಸಾಹಿತ್ಯ ಹಬ್ಬ 'ವಿಜ್ಞಾನಿಕ', ಅಂತಾರಾಷ್ಟ್ರೀಯ ವಿಜ್ಞಾನ ಚಲನಚಿತ್ರೋತ್ಸವ (ISFFI), ರಾಷ್ಟ್ರೀಯ ವಿಜ್ಞಾನ ಶಿಕ್ಷಕರ ಕಾಂಗ್ರೆಸ್ ಮುಂತಾದ ಎಲ್ಲ ಕಾರ್ಯಕ್ರಮಗಳೂ ಸಾರ್ವಜನಿಕರ ಪಾಲ್ಗೊಳ್ಳುವಿಕೆಗೆ ಮುಕ್ತವಾಗಿದ್ದು, ಆಸಕ್ತರು scienceindiafest.org ಜಾಲತಾಣದ ಮೂಲಕ ನೋಂದಾಯಿಸಿಕೊಳ್ಳಬಹುದಾಗಿದೆ. 'ವಿಜ್ಞಾನಿಕ'ದ ಅಂಗವಾಗಿ ರಾಷ್ಟ್ರಮಟ್ಟದ ಪ್ರಬಂಧ ಲೇಖನ ಹಾಗೂ ವಿಜ್ಞಾನ ಗೀತರಚನೆ ಸ್ಪರ್ಧೆಗಳನ್ನೂ ಆಯೋಜಿಸಲಾಗಿದೆ.
ಐಐಎಸ್ಎಫ್ 2020ರ ಅಂಗವಾಗಿ ಆಯೋಜಿಸಲಾಗಿರುವ ಕಾರ್ಯಕ್ರಮಗಳ ಸಂಪೂರ್ಣ ವಿವರವನ್ನು ಇಲ್ಲಿ ಪಡೆಯಬಹುದು.