'ಟೆಕ್ ಲೋಕದ ಹತ್ತು ಹೊಸ ಮುಖಗಳು' ಕೃತಿಯ ಒಂದು ನೂರು ಪ್ರತಿಗಳನ್ನು ಈ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸಲಾಗುವುದು
'ಟೆಕ್ ಲೋಕದ ಹತ್ತು ಹೊಸ ಮುಖಗಳು' ಕೃತಿಯ ಒಂದು ನೂರು ಪ್ರತಿಗಳನ್ನು ಈ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸಲಾಗುವುದು|ejnana.com
ಸುದ್ದಿ

ಸೆ. ೧೪ರಂದು ವಿಜಯಪುರದಲ್ಲಿ ಇಜ್ಞಾನ

ಮೊಬೈಲ್ ಹಾಗೂ ಮಾಹಿತಿ ತಂತ್ರಜ್ಞಾನ ಕುರಿತ ಉಪನ್ಯಾಸ, ವಿದ್ಯಾರ್ಥಿಗಳಿಗೆ ಟೆಕ್ ಪುಸ್ತಕ ಕೊಡುಗೆ

ಇಜ್ಞಾನ ತಂಡ

ವಿಜ್ಞಾನ-ತಂತ್ರಜ್ಞಾನದ ವಿಷಯಗಳನ್ನು ಜನರಿಗೆ ಸರಳವಾಗಿ ತಲುಪಿಸುವ ಪ್ರಯತ್ನದಲ್ಲಿ ತೊಡಗಿರುವ ಬೆಂಗಳೂರಿನ ಇಜ್ಞಾನ ಟ್ರಸ್ಟ್ ಸಹಯೋಗದಲ್ಲಿ ಇದೇ ಸೆ. ೧೪ರಂದು ವಿಜಯಪುರದಲ್ಲಿ ಎರಡು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಸರಸ ಸಂವಹನ‌ ಸಂಘಟನೆ, ವಿಜಯಪುರ ಘಟಕ ಹಾಗೂ ಸರ್ ಸಿ ವಿ ರಾಮನ್ ವಿಜ್ಞಾನ ಸಂಘ, ಬಾಲಕರ ಸರಕಾರಿ ಪ.ಪೂ ಕಾಲೇಜಿನ ಪ್ರೌಢಶಾಲಾ ಘಟಕದ ಸಂಯುಕ್ತ ಆಶ್ರಯದಲ್ಲಿ ಸೆ. ೧೪ ಶನಿವಾರ ಸಂಜೆ 'ಅಂಗೈ ಮೇಲಿನ ಜಗತ್ತು: ಮೊಬೈಲ್ ಫೋನ್ ಸಾಧ್ಯತೆಗಳು ಮತ್ತು ಸದ್ಬಳಕೆ' ಎಂಬ ವಿಷಯದ ಕುರಿತು ಉಪನ್ಯಾಸ ಏರ್ಪಡಿಸಲಾಗಿದ್ದು ಇಜ್ಞಾನ ಟ್ರಸ್ಟ್ ಕಾರ್ಯದರ್ಶಿ, ಲೇಖಕ-ಅಂಕಣಕಾರ ಟಿ. ಜಿ. ಶ್ರೀನಿಧಿ ಉಪನ್ಯಾಸ ನೀಡಲಿದ್ದಾರೆ. ಈ ಕಾರ್ಯಕ್ರಮ ಗಾಂಧಿಚೌಕದಲ್ಲಿರುವ ಬಾಲಕರ ಸರಕಾರಿ ಪ.ಪೂ.ಕಾಲೇಜಿನ ಆವರಣದಲ್ಲಿ ಸಂಜೆ ೪:೩೦ಕ್ಕೆ ಪ್ರಾರಂಭವಾಗಲಿದೆ. ಕಾಖಂಡಕಿ ಗುರುದೇವ ಆಶ್ರಮದ ಶ್ರೀ ಸಂದೀಪ ಮಹೋದಯ, ಇಜ್ಞಾನ ಟ್ರಸ್ಟ್ ಖಜಾಂಚಿ ಎನ್. ಜಿ. ಚೇತನ್ ಹಾಗೂ ಲೇಖಕ-ಅಧ್ಯಾಪಕ ನಾರಾಯಣ ಬಾಬಾನಗರ ಉಪಸ್ಥಿತರಿರಲಿದ್ದಾರೆ.

ಅದೇ ದಿನ ಬೆಳಿಗ್ಗೆ ಬಾಲಕರ ಸರಕಾರಿ ಪ.ಪೂ ಕಾಲೇಜಿನ ಪ್ರೌಢಶಾಲಾ ಘಟಕದ ವಿದ್ಯಾರ್ಥಿಗಳೊಡನೆ 'ಎಲ್ಲೆಲ್ಲೂ ಐಟಿ, ಎಲ್ಲದರಲ್ಲೂ ಐಟಿ: ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಹೊಸ ಬೆಳವಣಿಗೆಗಳ ಪರಿಚಯ' ಎಂಬ ವಿಷಯದ ಕುರಿತು ಟಿ. ಜಿ. ಶ್ರೀನಿಧಿ ವಿಚಾರವಿನಿಮಯ ನಡೆಸಲಿದ್ದಾರೆ. ಈ ಕಾರ್ಯಕ್ರಮದ ಅಂಗವಾಗಿ ಇಜ್ಞಾನ ಟ್ರಸ್ಟ್ ಪ್ರಕಟಿಸಿರುವ 'ಟೆಕ್ ಲೋಕದ ಹತ್ತು ಹೊಸ ಮುಖಗಳು' ಕೃತಿಯ ಒಂದು ನೂರು ಪ್ರತಿಗಳನ್ನು ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸಲಾಗುವುದು. ಪುಸ್ತಕದಲ್ಲಿರುವ ವಿಷಯಗಳ ಕುರಿತು ನಂತರದ ದಿನಗಳಲ್ಲಿ ವಿದ್ಯಾರ್ಥಿಗಳಿಗಾಗಿ ಸ್ಪರ್ಧೆ ಆಯೋಜಿಸುವ ಉದ್ದೇಶವೂ ಇದ್ದು, ವಿಜೇತರಿಗೆ ಇಜ್ಞಾನ ಟ್ರಸ್ಟ್ ವತಿಯಿಂದ ಬಹುಮಾನ ನೀಡಲಾಗುವುದು.

ವಿಜ್ಞಾನ-ತಂತ್ರಜ್ಞಾನ ವಿಷಯಗಳಿಗೆ ಮೀಸಲಾದ 'ಇಜ್ಞಾನ ಡಾಟ್ ಕಾಮ್' (www.ejnana.com) ಕನ್ನಡ ಜಾಲತಾಣವನ್ನು ಇಜ್ಞಾನ ಟ್ರಸ್ಟ್ ನಡೆಸುತ್ತಿದ್ದು, ೨೦೦೭ರಿಂದ ಸಕ್ರಿಯವಾಗಿರುವ ಈ ತಾಣದಲ್ಲಿ ಈವರೆಗೆ ನೂರಾರು ಬರಹಗಳು ಪ್ರಕಟವಾಗಿವೆ. ೨೦೧೭ರ ಇಂಡಿಯನ್ ಬ್ಲಾಗರ್ ಅವಾರ್ಡ್ಸ್‌ನಲ್ಲಿ ಇಜ್ಞಾನ ಜಾಲತಾಣಕ್ಕೆ ಅತ್ಯುತ್ತಮ ಕನ್ನಡ ಬ್ಲಾಗ್ ಎಂಬ ಗೌರವ ದೊರೆತಿದೆ. ಇಜ್ಞಾನ ಸಂಪಾದಕ ಟಿ. ಜಿ. ಶ್ರೀನಿಧಿ ೨೦೧೮ರ ವರ್ಷಾಂತ್ಯದಲ್ಲಿ ವಿಜಯ ಕರ್ನಾಟಕ ದಿನಪತ್ರಿಕೆ ಪ್ರಕಟಿಸಿದ 'ಯುವ ಹವಾ: ಟಾಪ್ ೧೦ ಕನ್ನಡಿಗರು' ಪಟ್ಟಿಯಲ್ಲೂ ಸ್ಥಾನ ಪಡೆದಿದ್ದಾರೆ.

ಇಜ್ಞಾನ Ejnana
www.ejnana.com