ಕೀಟಾಣುಗಳ ಸಂಖ್ಯೆಯ ಹೋಲಿಕೆಯಲ್ಲಿ ಅನೇಕ ಮೊಬೈಲುಗಳು ಶೌಚಾಲಯದಷ್ಟೇ - ಅಥವಾ ಅದಕ್ಕಿಂತ ಹೆಚ್ಚು - ಕೊಳಕಾಗಿರುತ್ತವಂತೆ!
ಕೀಟಾಣುಗಳ ಸಂಖ್ಯೆಯ ಹೋಲಿಕೆಯಲ್ಲಿ ಅನೇಕ ಮೊಬೈಲುಗಳು ಶೌಚಾಲಯದಷ್ಟೇ - ಅಥವಾ ಅದಕ್ಕಿಂತ ಹೆಚ್ಚು - ಕೊಳಕಾಗಿರುತ್ತವಂತೆ!Image by Steve Buissinne from Pixabay

ನಿಮ್ಮ ಮೊಬೈಲಿನಲ್ಲಿ ಕೀಟಾಣು ಇದೆಯೇ?

ನಾವು ಎಲ್ಲಿಲ್ಲಿ ಹೋಗಿದ್ದೆವೋ ಅಲ್ಲಿ ಯಾವೆಲ್ಲ ಕೀಟಾಣುಗಳಿದ್ದವು ಎನ್ನುವುದನ್ನು ನಮ್ಮ ಮೊಬೈಲ್ ಫೋನ್ ನೆನಪಿಟ್ಟುಕೊಂಡಿರುತ್ತದೆ. ಬರಿಯ ನೆನಪಷ್ಟೇ ಅಲ್ಲ, ಆ ಕೀಟಾಣುಗಳನ್ನೂ ತನ್ನ ಜೊತೆಯಲ್ಲೇ ಇಟ್ಟುಕೊಂಡಿರುತ್ತದೆ!

ಮೊನ್ನೆ ಹೀಗೆಯೇ ಮಾತಾಡುವಾಗ "ಸೋಶಿಯಲ್ ನೆಟ್‌ವರ್ಕುಗಳನ್ನೆಲ್ಲ ನೋಡಲು ನನಗೆ ಸಮಯವೇ ಸಿಗುವುದಿಲ್ಲ" ಎಂದು ನನ್ನ ಮಿತ್ರನೊಬ್ಬ ಹೇಳಿದ. ಹೀಗಿದ್ದರೂ ಅವನ ಕಡೆಯಿಂದ ಅಪರೂಪಕ್ಕೊಮ್ಮೆ ಲೈಕು-ಕಮೆಂಟುಗಳು ಬರುವುದು ಹೇಗೆ ಎಂದು ಕುತೂಹಲ ವ್ಯಕ್ತಪಡಿಸಿದಾಗ ಅವನು ಅದರ ಹಿಂದಿನ ರಹಸ್ಯವನ್ನು ಬಹಿರಂಗಗೊಳಿಸಿದ: "ಒಂದೊಂದು ಸಲ ಬೆಳಿಗ್ಗೆ ಬಾತ್‌ರೂಮಿಗೆ ಹೋಗುವಾಗ ಮೊಬೈಲ್ ಹಿಡ್ಕೊಂಡೇ ಹೋಗ್ತೀನಿ!"

ಬಹಿರಂಗವಾಗಿ ಒಪ್ಪಿಕೊಳ್ಳಲು ಹಿಂಜರಿದರೂ ಇದು ಅನೇಕರು ಮಾಡುವ ಕೆಲಸ. ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ನಾವು ಎಲ್ಲಿ ಹೋದರೂ, ಏನು ಮಾಡುತ್ತಿದ್ದರೂ ಜೊತೆಯಲ್ಲಿ ಮೊಬೈಲ್ ಇಟ್ಟುಕೊಂಡಿರುವುದು ಬಹಳಷ್ಟು ಜನಕ್ಕೆ ಅಭ್ಯಾಸದಂತೆಯೇ ಆಗಿಬಿಟ್ಟಿದೆ.

ಹೀಗೆ ಎಲ್ಲಕಡೆಗೂ ಮೊಬೈಲ್ ಫೋನ್ ಕೊಂಡೊಯ್ಯುವುದರ ಒಂದು ಪರಿಣಾಮವನ್ನು ನಾವು ಈಗಾಗಲೇ ನೋಡಿದ್ದೇವೆ. ನಾವು ಯಾವ ದಿನ ಯಾವ ಹೊತ್ತಿನಲ್ಲಿ ಯಾವ ಊರಿಗೆ ಹೋಗಿದ್ದೆವು, ಯಾವ ಹೋಟಲಿನಲ್ಲಿ ತಿಂಡಿ ತಿಂದೆವು ಎನ್ನುವುದನ್ನೆಲ್ಲ ಗೂಗಲ್ ನಮಗಿಂತ ಚೆನ್ನಾಗಿ ನೆನಪಿಟ್ಟುಕೊಂಡಿರುತ್ತದೆ.

ಇದರ ಜೊತೆಗೆ ಇನ್ನೂ ಒಂದು ಪರಿಣಾಮ ಇದೆ ಎಂದು ಬೆಂಗಳೂರಿನ ವೈದ್ಯ ಡಾ. ವಿ. ಎಸ್. ಕಿರಣ್ ಹೇಳುತ್ತಾರೆ: ನಾವು ಎಲ್ಲಿಲ್ಲಿ ಹೋಗಿದ್ದೆವೋ ಅಲ್ಲಿ ಯಾವೆಲ್ಲ ಕೀಟಾಣುಗಳಿದ್ದವು ಎನ್ನುವುದನ್ನು ಕೂಡ ನಮ್ಮ ಮೊಬೈಲ್ ಫೋನ್ ನೆನಪಿಟ್ಟುಕೊಂಡಿರುತ್ತದೆ. ಬರಿಯ ನೆನಪಷ್ಟೇ ಅಲ್ಲ, ಆ ಕೀಟಾಣುಗಳನ್ನೂ ತನ್ನ ಜೊತೆಯಲ್ಲೇ ಇಟ್ಟುಕೊಂಡಿರುತ್ತದೆ!

ಇದರ ಅರ್ಥ ಇಷ್ಟೇ: ನಾವು ಸಾವಿರಾರು ರೂಪಾಯಿ ಕೊಟ್ಟು ಕೊಂಡಿರುವ, ಹೋದಕಡೆಗೆಲ್ಲ ಕೊಂಡೊಯ್ಯುವ ಹೈಟೆಕ್ ಮೊಬೈಲಿನ ಮೇಲ್ಮೈಯಲ್ಲಿ ಸದಾಕಾಲ ಸಾವಿರಾರು ಕೀಟಾಣುಗಳು ನೆಲೆಸಿರುತ್ತವೆ, ಮತ್ತು ಆ ಪೈಕಿ ಬಹಳಷ್ಟು ರೋಗಕಾರಕಗಳೂ ಆಗಿರುವ ಸಾಧ್ಯತೆ ಇರುತ್ತದೆ. ಹಲವು ಅಧ್ಯಯನಗಳ ಪ್ರಕಾರ, ಕೀಟಾಣುಗಳ ಸಂಖ್ಯೆಯ ಹೋಲಿಕೆಯಲ್ಲಿ ಅನೇಕ ಮೊಬೈಲುಗಳು ಶೌಚಾಲಯದಷ್ಟೇ - ಅಥವಾ ಅದಕ್ಕಿಂತ ಹೆಚ್ಚು - ಕೊಳಕಾಗಿರುತ್ತವಂತೆ!

ದಿನನಿತ್ಯ ಹಲವು ವಸ್ತುಗಳನ್ನು ಸ್ಪರ್ಶಿಸುವ ನಾವು ಆನಂತರ ಮೊಬೈಲನ್ನೂ ಮುಟ್ಟುವುದರಿಂದ ಆ ವಸ್ತುಗಳಲ್ಲಿ ಇದ್ದಿರಬಹುದಾದ ಕೀಟಾಣುಗಳು ಮೊಬೈಲಿನ ಮೇಲಕ್ಕೂ ಬರಬಹುದು ಎನ್ನುವುದು ತಜ್ಞರ ಅಭಿಪ್ರಾಯ. ಮೊಬೈಲನ್ನು ನಾವು ಮತ್ತೆಮತ್ತೆ ಸ್ಪರ್ಶಿಸುತ್ತಲೇ ಇರುವುದರಿಂದ, ಕರೆಮಾಡುವಾಗ ಮುಖದ ಸಮೀಪಕ್ಕೂ ಕೊಂಡೊಯ್ಯುವುದರಿಂದ, ಆ ಕೀಟಾಣುಗಳಿಂದ ಸೋಂಕು ತಗುಲುವ ಸಾಧ್ಯತೆಯಿರುತ್ತದೆ ಎಂದು ಅವರು ಹೇಳುತ್ತಾರೆ.

ನಮ್ಮ ಮೊಬೈಲು ಇಷ್ಟೆಲ್ಲ ಕೊಳಕಾಗುವುದು ಹೇಗೆ? ಅದಕ್ಕೆ ಹಲವು ಕಾರಣಗಳಿರಬಹುದು. ಬಾತ್‌ರೂಮಿನಲ್ಲಿ ಮೊಬೈಲ್ ಬಳಸುವುದು ಇಂತಹ ಕಾರಣಗಳಿಗೆ ಒಂದು ಉದಾಹರಣೆ ಮಾತ್ರ. ಆಹಾರ ಸೇವಿಸುವ ಸಮಯದಲ್ಲಿ ಮೊಬೈಲ್ ಬಳಸುವುದು ಕೂಡ ಇನ್ನೊಂದು ಕಾರಣ. ಆಹಾರದ ತುಣುಕುಗಳು ಮೊಬೈಲಿಗೆ ಅಂಟಿಕೊಂಡು ಕಾಲಕ್ರಮೇಣ ಕೀಟಾಣುಗಳ ಬೆಳವಣಿಗೆಗೆ ಕಾರಣವಾಗಬಲ್ಲವು. ಮೇಲೆ ಹೇಳಿದಂತೆ, ಸಾರ್ವಜನಿಕ ಸ್ಥಳಗಳಲ್ಲಿ ವಿವಿಧ ಮೇಲ್ಮೈಗಳನ್ನು ಮುಟ್ಟಿದ ಮೇಲೆ ಮೊಬೈಲನ್ನೂ ಸ್ಪರ್ಶಿಸುವುದರಿಂದ ಅಲ್ಲಿರಬಹುದಾದ ಕೀಟಾಣುಗಳು ಮೊಬೈಲ್ ಪರದೆಯ ಮೇಲಕ್ಕೆ ವರ್ಗಾವಣೆಯಾಗುವುದು ಕೂಡ ಸಾಧ್ಯ. ಅಂದಹಾಗೆ ಮೊಬೈಲಿನ ಪರದೆಯ (ಟಚ್‌ಸ್ಕ್ರೀನ್) ಜೊತೆಗೆ ಅದರ ಹೊರಕವಚ ಕೂಡ ಕೀಟಾಣುಗಳಿಗೆ ಆಶ್ರಯ ನೀಡಬಲ್ಲದು. ಮೊಬೈಲು ನಮ್ಮ ಕೈಯಿಂದ ಜಾರದಿರಲೆಂದು ನಯವಿಲ್ಲದ ಮೇಲ್ಮೈ ಇರುವ ಹೊರಕವಚಗಳನ್ನು ಬಳಸುತ್ತೇವಲ್ಲ, ಅಂತಹ ಕವಚಗಳಲ್ಲಿ ವಾಸಿಸುವ ಕೀಟಾಣುಗಳ ಸಂಖ್ಯೆಯೂ ಜಾಸ್ತಿ ಇರುತ್ತದಂತೆ!

ಕೈಯಲ್ಲಿನ ಕೀಟಾಣುಗಳನ್ನು ನಿವಾರಿಸಲು ಚೆನ್ನಾಗಿ ಕೈತೊಳೆದುಕೊಳ್ಳಬೇಕು ಎನ್ನುವುದು ನಮಗೆ ಚಿಕ್ಕಂದಿನಿಂದಲೇ ಗೊತ್ತು. ಕರೋನಾ ವೈರಸ್‌ನಂತಹ ಹೊಸ ಆತಂಕಗಳು ಎದುರಾದಾಗಲಂತೂ ಪದೇಪದೇ ಕೈತೊಳೆದುಕೊಳ್ಳುವಂತೆ ಎಲ್ಲರೂ ನೆನಪಿಸುತ್ತಿರುತ್ತಾರೆ. ಇದು ಕೀಟಾಣುಗಳನ್ನು ತೊಲಗಿಸುವ ಉತ್ತಮ ಮಾರ್ಗ ಎಂದು ಡಾಕ್ಟರರೂ ಒಪ್ಪುತ್ತಾರೆ. ಕರೋನಾ ವೈರಸ್‌ ಸೋಂಕಿನಿಂದ ಪಾರಾಗಲು ನಾವು ನಮ್ಮ ಕೈಯನ್ನು ಹೇಗೆ ಶುಚಿಯಾಗಿಟ್ಟುಕೊಳ್ಳಬೇಕು ಎನ್ನುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ, ಯುನಿಸೆಫ್ ಮುಂತಾದ ಜಾಗತಿಕ ಸಂಸ್ಥೆಗಳು ವಿವರವಾದ ನಿರ್ದೇಶನಗಳನ್ನೂ ಪ್ರಕಟಿಸಿವೆ.

ಆದರೆ ದಿನದ ಬಹುಸಮಯ ನಮ್ಮ ಜೊತೆಯಲ್ಲೇ ಇರುವ ಮೊಬೈಲ್ ಫೋನನ್ನು ಕೀಟಾಣು ಮುಕ್ತವಾಗಿಟ್ಟುಕೊಳ್ಳುವುದು ಹೇಗೆ? ಮೊಬೈಲಿನಲ್ಲಿರುವ ಮಾಹಿತಿಗೆ ವೈರಸ್ ಬಾರದಂತೆ ಆಂಟಿ‌ವೈರಸ್ ಹಾಕಿಟ್ಟುಕೊಳ್ಳುವುದೇನೋ ಸರಿ, ಅದರ ಭೌತಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಏನು ಮಾಡಬಹುದು?

ನಾವು ಎಲ್ಲಿಲ್ಲಿ ಹೋಗಿದ್ದೆವೋ ಅಲ್ಲಿ ಯಾವೆಲ್ಲ ಕೀಟಾಣುಗಳಿದ್ದವು ಎನ್ನುವುದನ್ನು ನಮ್ಮ ಮೊಬೈಲ್ ಫೋನ್ ನೆನಪಿಟ್ಟುಕೊಂಡಿರುತ್ತದೆ. ಬರಿಯ ನೆನಪಷ್ಟೇ ಅಲ್ಲ, ಆ ಕೀಟಾಣುಗಳನ್ನೂ ತನ್ನ ಜೊತೆಯಲ್ಲೇ ಇಟ್ಟುಕೊಂಡಿರುತ್ತದೆ!

ಡಾ. ವಿ. ಎಸ್. ಕಿರಣ್

ಶೌಚಾಲಯದಂತಹ ವಾತಾವರಣಗಳಲ್ಲಿ ಮೊಬೈಲನ್ನು ಬಳಸದಿರುವುದು ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ. ಅದೇ ರೀತಿ ಆಹಾರ ಸೇವಿಸುವಾಗ ಮೊಬೈಲ್ ಬಳಸುವುದು ಕೂಡ ತಪ್ಪು. ಮೊಬೈಲಿಗೆ ಅಂಟಿಕೊಂಡ ಆಹಾರ ಪದಾರ್ಥ ಕೀಟಾಣುಗಳಿಗೆ ಆಶ್ರಯಕೊಡುತ್ತದೆ ಎಂದಷ್ಟೇ ಅಲ್ಲ, ಮೊಬೈಲಿನ ಮೇಲ್ಮೈಯಲ್ಲಿರಬಹುದಾದ ರೋಗಕಾರಕ ಕೀಟಾಣುಗಳು ಆಹಾರದ ಜೊತೆ ನಮ್ಮ ದೇಹವನ್ನು ಸೇರಬಲ್ಲವು ಎನ್ನುವ ಕಾರಣವೂ ಇದರ ಹಿನ್ನೆಲೆಯಲ್ಲಿದೆ. ಕರೋನಾ ವೈರಸ್‌ನಂತಹ ಆತಂಕಗಳಿರುವಾಗ ಇತರರಿಂದ ದೂರವಿರುವ 'ಸೋಶಿಯಲ್ ಡಿಸ್ಟೆನ್ಸಿಂಗ್' ಪರಿಕಲ್ಪನೆಯನ್ನು ಮೊಬೈಲಿಗೂ ಅನ್ವಯಿಸಿ ಅದನ್ನು ಇತರರೊಡನೆ ಹಂಚಿಕೊಳ್ಳದೆ ಇರುವುದು ಒಳ್ಳೆಯದು. ಅಂದಹಾಗೆ ನಿಮ್ಮ ಕೈಯನ್ನು ಆಗಿಂದಾಗ್ಗೆ ತೊಳೆದುಕೊಳ್ಳುವ ಮೂಲಕವೂ ಮೊಬೈಲನ್ನು ಸ್ವಚ್ಛವಾಗಿಟ್ಟುಕೊಳ್ಳಬಹುದು - ಬಹುತೇಕ ಕೀಟಾಣುಗಳು ಅತ್ತ ಬರುವುದು ನಿಮ್ಮ ಕೈಯಿಂದಲೇ!

ಇದನ್ನೆಲ್ಲ ಪಾಲಿಸಿದ ನಂತರವೂ ನಮ್ಮ ಮೊಬೈಲು ಕೊಳಕಾಗಬಾರದು ಎಂದೇನೂ ಇಲ್ಲ. ಅದಕ್ಕಾಗಿಯೇ ಮೊಬೈಲಿನ ಮೇಲ್ಮೈಯನ್ನು ಆಗಿಂದಾಗ್ಗೆ ಶುಚಿಗೊಳಿಸುವುದು ಒಳ್ಳೆಯದು. ಶುಭ್ರವಾದ ಮೃದು ಬಟ್ಟೆಯಿಂದ ಒರೆಸುವುದಾದರೂ ಸರಿ, ಮೊಬೈಲ್ ಶುಚಿಗೊಳಿಸಲೆಂದೇ ದೊರಕುವ ದ್ರಾವಣಗಳನ್ನು ಅಲ್ಪಪ್ರಮಾಣದಲ್ಲಿ ಬಳಸಿ ಶುಚಿಮಾಡುವುದಾದರೂ ಸರಿ. ಆದರೆ ನೀವು ಬಳಸುವ ಯಾವುದೇ ದ್ರಾವಣ ಮೊಬೈಲಿಗೆ ಹಾನಿ ಮಾಡದಂತೆ ನೋಡಿಕೊಳ್ಳುವುದನ್ನು ಮಾತ್ರ ಮರೆಯಬೇಡಿ. ನಿಮ್ಮ ಮೊಬೈಲು ವಾಟರ್ ಪ್ರೂಫ್ ಅಲ್ಲದಿದ್ದರೆ ಒದ್ದೆ ಬಟ್ಟೆ ಬಳಸುವುದು ಖಂಡಿತಾ ಒಳ್ಳೆಯದಲ್ಲ.

ಮೊಬೈಲು ಈಗಾಗಲೇ ನೂರೆಂಟು ಕೆಲಸ ಮಾಡುತ್ತದೆ, ಶುಚಿಗೊಳಿಸುವ ಈ ಕೆಲಸವನ್ನೂ ಅದೇ ಮಾಡಿಕೊಳ್ಳಲು ಆಗುವುದಿಲ್ಲವೇ ಎನ್ನಬೇಡಿ. ಮೊಬೈಲಿನಲ್ಲೂ ಬಳಸಬಹುದಾದ ಸೂಕ್ಷ್ಮಜೀವಿ ನಿರೋಧಕ (ಆಂಟಿಮೈಕ್ರೋಬಿಯಲ್) ಪರದೆಗಳನ್ನು ವಿಜ್ಞಾನಿಗಳು ಈಗಾಗಲೇ ಅಭಿವೃದ್ಧಿಪಡಿಸಿದ್ದಾರೆ. ಆದರೆ ಅವುಗಳ ಕಾರ್ಯಕ್ಷಮತೆಯ ಬಗ್ಗೆ ಇನ್ನೂ ಪ್ರಶ್ನೆಗಳಿರುವುದರಿಂದ ಮೊಬೈಲ್ ನಿರ್ಮಾತೃಗಳು ಅಂತಹ ಪರದೆಗಳನ್ನು ಬಳಸುವ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸಿಲ್ಲ, ಅಷ್ಟೇ. ಈ ಕುರಿತು ಹೆಚ್ಚಿನ ಅಧ್ಯಯನ ನಡೆದು ಕೀಟಾಣುಗಳನ್ನು ಸ್ವತಃ ತಾವೇ ಒದ್ದೋಡಿಸುವ ಮೊಬೈಲುಗಳ ಸೃಷ್ಟಿಯಾಗುವವರೆಗೆ, ನಮ್ಮ ಮೊಬೈಲುಗಳನ್ನು ಶುಚಿಯಾಗಿಟ್ಟುಕೊಳ್ಳೋಣ!

ಮಾರ್ಚ್ ೧೮, ೨೦೨೦ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

Related Stories

No stories found.
logo
ಇಜ್ಞಾನ Ejnana
www.ejnana.com