ಪಿಪಿಇ ಅಂದರೇನು?
ಶಂಕಿತರನ್ನು ಪರೀಕ್ಷಿಸುವವರು, ಸೋಂಕಿತರ ಆರೈಕೆ ಮಾಡುವವರು ಹೆಚ್ಚಿನ ಸುರಕ್ಷತೆ ಒದಗಿಸುವ ಸಾಧನ ಸಾಮಗ್ರಿಗಳನ್ನು ಬಳಸಬೇಕಾಗುತ್ತದೆ

ಪಿಪಿಇ ಅಂದರೇನು?

ವಿಜಯ ಕರ್ನಾಟಕ 'ಕೊರೊನಾಲಜಿ' ಅಂಕಣದಲ್ಲಿ ಪ್ರಕಟವಾದ ಬರಹ

ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯುವುದು ಎಲ್ಲರೂ ಸೇರಿ ಮಾಡಬೇಕಾದ ಕೆಲಸ. ಇಲ್ಲಿ ಒಬ್ಬೊಬ್ಬರಿಗೆ ಒಂದೊಂದು ಜವಾಬ್ದಾರಿ ಇರುತ್ತದೆ. ಜನಸಾಮಾನ್ಯರು ಮನೆಯಲ್ಲೇ ಉಳಿಯುವ ಮೂಲಕ ತಮ್ಮ ಜವಾಬ್ದಾರಿ ನಿಭಾಯಿಸಿದರೆ ಆರೋಗ್ಯಸೇವೆ ನೀಡುತ್ತಿರುವವರು ರೋಗವನ್ನು ಮುಖಾಮುಖಿ ಎದುರಿಸುತ್ತಾರೆ. ಜವಾಬ್ದಾರಿಗಳು ಬೇರೆಯಾದಂತೆ ಅದನ್ನು ನಿಭಾಯಿಸುವವರು ಅನುಸರಿಸಬೇಕಾದ ಸುರಕ್ಷತಾ ಕ್ರಮಗಳೂ ಬೇರೆಬೇರೆಯಾಗಿರುತ್ತವೆ.

ಕೋವಿಡ್-೧೯ರಂತಹ ರೋಗಗಳಿಂದ ಪಾರಾಗಲು ಜನಸಾಮಾನ್ಯರು ಆಗಿಂದಾಗ್ಗೆ ಕೈತೊಳೆಯುವುದು, ಹೊರಗೆ ಹೋಗುವಾಗ ಮಾಸ್ಕ್ ಧರಿಸುವುದು ಸರಿ. ಆದರೆ ಶಂಕಿತರನ್ನು ಪರೀಕ್ಷಿಸುವವರಿಗೆ, ಸೋಂಕಿತರ ಆರೈಕೆ ಮಾಡುವವರಿಗೆ ಇಷ್ಟೇ ಸುರಕ್ಷತಾ ಕ್ರಮಗಳು ಸಾಕಾಗುವುದಿಲ್ಲ. ಆ ಕೆಲಸಗಳಲ್ಲಿರುವವರಿಗೆ ಇತರರಿಂದ ಸೋಂಕು ತಗಲುವ ಸಾಧ್ಯತೆ ಹೆಚ್ಚಿರುವುದರಿಂದ ಅವರು ಹೆಚ್ಚಿನ ಸುರಕ್ಷತೆ ಒದಗಿಸುವ ಸಾಧನ ಸಾಮಗ್ರಿಗಳನ್ನು ಬಳಸಬೇಕಾಗುತ್ತದೆ. 'ಪರ್ಸನಲ್ ಪ್ರೊಟೆಕ್ಟಿವ್ ಎಕ್ವಿಪ್‌ಮೆಂಟ್' (PPE) ಎಂದು ಕರೆಯುವುದು ಇವನ್ನೇ.

ಕೈಗವಸುಗಳು (ಗ್ಲವ್ಸ್), ಮುಖಗವಸು (ಮಾಸ್ಕ್), ನಿಲುವಂಗಿ (ಗೌನ್) - ಇವು ಪರ್ಸನಲ್ ಪ್ರೊಟೆಕ್ಟಿವ್ ಎಕ್ವಿಪ್‌ಮೆಂಟ್‌ನ ಪ್ರಾಥಮಿಕ ಅಂಗಗಳು. ರೋಗದ ತೀವ್ರತೆ ಹೆಚ್ಚಾದಷ್ಟೂ ಇದಕ್ಕೆ ಹೆಚ್ಚಿನ ಪರಿಕರಗಳು ಸೇರುವುದು ಸಾಧ್ಯ. ಕೋವಿಡ್-೧೯ ಸಂದರ್ಭದಲ್ಲಿ ಬಳಕೆಯಾಗುತ್ತಿರುವ ಮುಖದ ರಕ್ಷಾಕವಚಗಳು (ಫೇಸ್ ಶೀಲ್ಡ್), ಗಂಟಲು ದ್ರವದ ಮಾದರಿಯನ್ನು ಸುರಕ್ಷಿತವಾಗಿ ಸಂಗ್ರಹಿಸಲು ಬಳಸಲಾಗುತ್ತಿರುವ ರಕ್ಷಣಾ ಕೊಠಡಿಗಳು (ಸ್ಯಾಂಪ್ಲಿಂಗ್ ಚೇಂಬರ್) ಕೂಡ ಇದರದ್ದೇ ಉದಾಹರಣೆಗಳು.

ವೈದ್ಯಕೀಯ ಸೇವೆ ನೀಡುವವರ ಆರೋಗ್ಯ ಕಾಪಾಡಲು ಬಳಕೆಯಾಗುವ ಇಂತಹ ಸಾಧನ ಸಾಮಗ್ರಿಗಳನ್ನು ಕ್ಷಿಪ್ರವಾಗಿ, ಕಡಿಮೆ ಖರ್ಚಿನಲ್ಲಿ ತಯಾರಿಸುವ ಹಲವು ಪ್ರಯತ್ನಗಳು ನಮ್ಮ ದೇಶದಲ್ಲಿ ನಡೆದಿವೆ. ಇಂತಹುದೇ ಪ್ರಯತ್ನದಲ್ಲಿ ಕೇಂದ್ರ ಸರಕಾರದ NIPERನಂತಹ ಹಲವು ಸಂಸ್ಥೆಗಳು ಥ್ರೀಡಿ ಪ್ರಿಂಟಿಂಗ್ ತಂತ್ರಜ್ಞಾನ ಬಳಸಿ ಕಡಿಮೆ ವೆಚ್ಚದ ಫೇಸ್ ಶೀಲ್ಡ್‌ಗಳನ್ನು ರೂಪಿಸಿವೆ.

ಸೌಜನ್ಯ: ವಿಜಯ ಕರ್ನಾಟಕ

Related Stories

No stories found.
ಇಜ್ಞಾನ Ejnana
www.ejnana.com