ನಮಗರಿವಿಲ್ಲದ ಸಾವಿರಾರು ಅದ್ಭುತಗಳಿಗೂ ಈ ಸೂಕ್ಷ್ಮಾಣುಗಳೇ ಕಾರಣ
ನಮಗರಿವಿಲ್ಲದ ಸಾವಿರಾರು ಅದ್ಭುತಗಳಿಗೂ ಈ ಸೂಕ್ಷ್ಮಾಣುಗಳೇ ಕಾರಣ Abstract vector created by macrovector - www.freepik.com
ವೈವಿಧ್ಯ

ನಮ್ಮ ಖರ್ಚಿನಲ್ಲಿ ಇವರ ಪ್ರವಾಸ

ಕ್ಷಮಾ ವಿ. ಭಾನುಪ್ರಕಾಶ್

ರಜೆ ಸೀಸನ್ ಬಂತು. ಪ್ರವಾಸದ ಕಾಲ. ಎಲ್ರೂ ಒಂದೇ ರೀತಿ ಒಂದೇ ಕಡೆ ಟ್ರಿಪ್ ಹೋಗೋಕಾಗತ್ಯೇ? ಪ್ರತಿಯೊಬ್ಬರದ್ದೂ ಅವರ ಆಸೆಗೆ, ಆಸಕ್ತಿಗೆ ಹಾಗೂ ಜೇಬಿನ-ಪರ್ಸಿನ ಸೈಝಿಗೆ ಹೊಂದುವಂಥಾ ಪ್ರವಾಸದ ಸ್ಥಳ ಹಾಗೂ ಅದೇ ಆಧಾರದ ಮೇಲೆ ಸೈಕಲ್ಲೋ, ಬೈಕೋ, ಕಾರೋ, ರೈಲೋ, ವಿಮಾನವೋ, ಹಡಗೋ ನಿರ್ಧಾರ ಅಲ್ವಾ? ಆದ್ರೆ, ನಾವೆಲ್ಲೇ ಹೋಗ್ಲಿ, ನಮಗೆ ಸ್ವಲ್ಪ ವಿವೇಚನೆ ಕಡಿಮೆ ಇದ್ರೂ ಸಾಕು, ನಮ್ಮ ಹೆಜ್ಜೆಗುರುತನ್ನ ಅಂದ್ರೆ ಪ್ಲಾಸ್ಟಿಕ್ ತ್ಯಾಜ್ಯವನ್ನ ಹೋದಲ್ಲಿ ಬಿಟ್ಟು ಬರ್ತೀವಿ. ಇದು ಕಣ್ಣಿಗೆ ಕಾಣೋ ತ್ಯಾಜ್ಯವಾದ್ರೆ, ಕಣ್ಣಿಗೆ ಕಾಣದ್ದು ಮತ್ತೊಂದಿದೆ; ಅದ್ಯಾವ್ದು ಗೊತ್ತಾ? ಅವೇ ಮೈಕ್ರೋಬ್ಸ್ ಅಥವಾ ಸೂಕ್ಷ್ಮಾಣುಜೀವಿಗಳು!

ನಮ್ಮ ದೇಹದ ಒಳಗೆ ಮತ್ತು ಹೊರಗೆ ಬರಿಗಣ್ಣಿಗೆ ಕಾಣದ ಕೋಟ್ಯಾಂತರ ಜೀವಿಗಳಿರತ್ವೆ. ನಾವು ಹೋದಲ್ಲಿ ಬಂದಲ್ಲೆಲ್ಲಾ ನಮ್ಮ ಉಸಿರಾಟದ ಮೂಲಕ, ಕೆಮ್ಮು ಸೀನು ಇತ್ಯಾದಿಯ ಮೂಲಕ , ನಮ್ಮ ಚರ್ಮದ ಸತ್ತಕೋಶಗಳ ಮೂಲಕ ಪರಿಸರಕ್ಕೆ ನಮ್ಮ ಸೂಕ್ಷ್ಮಾಣುಜೀವಿಗಳ ಕೊಡುಗೆ ಕೊಡ್ತಾ ಇರ್‍ತೀವಿ. ಹೊಸ ಜೀವಕೋಶಗಳಿಗೆ ಜಾಗಮಾಡಿಕೊಡುವ ಸಲುವಾಗಿ, ನಮ್ಮ ಚರ್ಮದ ಸತ್ತ ಕೋಶಗಳು ದಿನೇ ದಿನೇ ಉದುರ್‍ತಾನೇ ಇರತ್ವೆ; ಕಿಟಕಿ ಬಾಗಿಲು ಹಾಕಿದ ಮನೆಯಲ್ಲಿ ಧೂಳು ಹೇಗೆ ಬಂತು ಎಂದು ಯೋಚಿಸುವಾಗ ಇದನ್ನು ನೆನಪಿಸಿಕೊಳ್ಳಬೇಕು ಅಂತ ಈಗ ಗೊತ್ತಾಯ್ತಾ?!

ಪ್ರತಿ ಮನುಷ್ಯನೂ ಒಂದು ವರ್ಷದಲ್ಲಿ ಹೀಗೆ ಉದುರಿಸೋ ಸತ್ತ ಚರ್ಮಕೋಶಗಳು ಎಷ್ಟು ಗೊತ್ತಾ? ಬರೋಬ್ಬರಿ ೩.೫ ಕೆ.ಜಿ! ಹೀಗೆ ಕೇಜಿಗಟ್ಲೆ ನಿರ್ಜೀವಕೋಶಗಳನ್ನು ಉದುರಿಸುತ್ತೀವಿ ಅಂದ್ರೆ, ಅವಕ್ಕಿಂತಾ ಪುಟ್ಟದಾಗಿರೋ ಸೂಕ್ಷ್ಮಾಣುಗಳು ನಮ್ಮ ಒಳ-ಹೊರಗೆ ಎಷ್ಟು ಓಡಾಡಿರಬಹುದು ಊಹಿಸಿನೋಡಿ. ಇಂತಹ ಸೂಕ್ಷ್ಮಾಣುಗಳು ನಮ್ಮ ಮನೆ, ಆಫೀಸು, ಶಾಲೆ, ಆಸ್ಪತ್ರೆ, ಮಾಲ್ ಮಾತ್ರವಲ್ಲದೇ ನಾವು ಪ್ರಯಾಣ ಮಾಡುವ ಬಸ್ಸು, ಕಾರು, ರೈಲು, ಆಟೋ - ಹೀಗೆ ಎಲ್ಲೆಲ್ಲೂ ಇರತ್ವೆ.

ಅಂದ್ರೆ ಭೂಮಿ ಮೇಲೆ ಈ ಪುಟಾಣಿ ಸೂಕ್ಷ್ಮಾಣುಜೀವಿಗಳ ಸಹವಾಸ ಇಲ್ದಿರೋ ಜಾಗವೇ ಇಲ್ಲಾ ಅಂದುಕೊಂಡ್ರೇನೋ! ಅಯ್ಯೋ, ಬರೀ ಭೂಮಿ ಮೇಲ್ಯಾಕೆ, ಆಕಾಶಕ್ಕೂ, ಬಾಹ್ಯಾಕಾಶಕ್ಕೂ ಇವು ಲಗ್ಗೆ ಇಟ್ಟಿವೆ ಕಣ್ರೀ!

ನೀವೇನಾದ್ರೂ ಬಸ್ಸು, ರೈಲು ಅಂದ್ರೆ, ಇಸ್ಸಿ, ಗಲೀಜು ಎಂದು ವಿಮಾನದಲ್ಲೇ ಪ್ರಯಾಣ ಮಾಡೋವ್ರಾದ್ರಂತೂ ಇದನ್ನ ಗಮನವಿಟ್ಟು ಓದಿ; ವಿಮಾನದಲ್ಲಿ ಹಲವಾರು ಸಾವಿರ ಬಗೆಯ ಬ್ಯಾಕ್ಟೀರಿಯಾ, ವೈರಸ್ ಇದ್ದೇ ಇರತ್ವೆ ಎಂದು ಸಂಶೋಧನೆಗಳು ಸಾಬೀತು ಪಡಿಸಿವೆ. ನಾವು ಕೂರೋ ಸೀಟು, ಹಾಕಿಕೊಳ್ಳೋ ಸೀಟ್‌ಬೆಲ್ಟ್, ಗಗನಸಖಿ ನಗುನಗುತ್ತಾ ನಮ್ಮ ಮುಂದೆ ಹಿಡಿವ ಟ್ರೇಯಿಂದ ಮೊದಲ್ಗೊಂಡು ಕಿಟಕಿ, ಬಾಗಿಲು, ಶೌಚಾಲಯದ ಒಳಹೊರಗೆ, ಅಷ್ಟೇ ಯಾಕೆ ಭೂಮಿಯಿಂದ ೩೦,೦೦೦ ಅಡಿ ಎತ್ತರದಲ್ಲಿ ಹಾರುವ ವಿಮಾನದ ಒಳಗಿನ ಗಾಳೀಲಿ ಕೂಡ, ಈ ಸೂಕ್ಷ್ಮಾಣುಗಳ ವಿಲಾಸ ಎಡಬಿಡದೇ ಸಾಗಿರತ್ತೆ.

ಹಾಗಂತ ವಿಮಾನದವ್ರ ಮೇಲೆ ಸಿಟ್ಟಾಗಬೇಡಿ. ಪಾಪ, ಇದ್ರಲ್ಲಿ ಅವ್ರದ್ದೇನೂ ತಪ್ಪಿಲ್ಲಾರೀ! ನಾವೇ ನಮ್ಮ ದಿರಿಸು, ಲಗೇಜು, ನೀರಿನ ಬಾಟ್ಲಿ ಇತ್ಯಾದಿಯ ಮೇಲೆ ಈ ಬರಿಗಣ್ಣಿಗೆ ಕಾಣದ ಜೀವಿಗಳನ್ನ ಕೂರಿಸಿಕೊಂಡು ಖರ್ಚಿಲ್ಲದ ಪ್ರವಾಸ ಮಾಡಿಸ್ತಾ ಇರ್ತೀವಿ. ನಾವು ಹೋದಲ್ಲೆಲ್ಲಾ ಈ ಅನ್ಯಜೀವಿಗಳೂ ನಮ್ಮೊಂದಿಗೆ ಬರತ್ವೆ, ಅಷ್ಟೇ!

ಇದು ವಿಮಾನ ಮಾತ್ರವಲ್ಲ, ಅಂತರಿಕ್ಷಕ್ಕೂ ಒಪ್ಪುವ ಮಾತು. ಗಗನಯಾತ್ರಿಗಳು ಎಷ್ಟೆಲ್ಲಾ ತಯಾರಿ ಮಾಡಿದ್ರೂ, ತಮ್ಮ ದೇಹದ ಒಳ ಹೊರಗನ್ನು, ತಮ್ಮ ಗಗನನೌಕೆಯ ಪ್ರತಿ ಇಂಚನ್ನೂ ಸೂಕ್ಷ್ಮಾಣು ರಹಿತ ಮಾಡೋಕೆ ಸಾಧ್ಯವೇ ಇಲ್ಲ; ಹಾಗಾಗಿ ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಈಗಾಗಲೇ ಸಾವಿರಾರು ಬಗೆಯ ಸೂಕ್ಷ್ಮಾಣುಜೀವಿಗಳು ಬದುಕುತ್ತಿವೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಈ ಸೂಕ್ಷ್ಮಾಣುಗಳು ಅಲ್ಲಿರುವ ಗಗನಯಾತ್ರಿಗಳ ದೇಹದ ಸೂಕ್ಷ್ಮಾಣುಗಳೇ ಎಂಬುದೂ ಕೂಡ ಸಾಬೀತಾಗಿದೆ. ಹೀಗೆ ಎಲ್ಲೆಲೂ ಇರುವ ಈ ಪುಟಾಣಿ ಜೀವಿಗಳಿಲ್ಲದ ಸ್ವಚ್ಛ ಪರಿಸರದಲ್ಲಿ ಇರ್ತೀವಿ ಅನ್ನೋ ಭ್ರಮೆ ಬೇಡ!

ನಿಜಾರ್ಥದಲ್ಲಿ, ಇವುಗಳಿಲ್ಲದೇ ನಾವು ಬದುಕಿರಲೂ ಸಾಧ್ಯವಿಲ್ಲ; ನಾವು ಸೇವಿಸೋ ಇಡ್ಲಿ, ದೋಸೆ, ಮೊಸರಿನಿಂದ ಮೊದಲ್ಗೊಂಡು ಮೊದಲ ಮಳೆ ಬಂದಾಗ ಮಣ್ಣಿಂದ ಹೊರಡೋ ಘಮ, ಗೊಬ್ಬರವಿಲ್ಲದೇ ಬೆಳೆದು ನಳನಳಿಸೋ ಗಿಡಮರಗಳು - ಇವೆಲ್ಲಕ್ಕೂ, ಮತ್ತು ನಮಗರಿವಿಲ್ಲದ ಸಾವಿರಾರು ಅದ್ಭುತಗಳಿಗೂ ಈ ಸೂಕ್ಷ್ಮಾಣುಗಳು ಕಾರಣ. ಕಾಯಿಲೆ ಬರಿಸುವ ಸೂಕ್ಷ್ಮಾಣುಗಳು ಕೆಲವಾದರೇ, ನಮ್ಮ ಜೀವನಕ್ಕೆ, ಜೀವಿತಕ್ಕೇ ಬೇಕೇಬೇಕಾದ ಪ್ರಕ್ರಿಯೆಗಳ ಭಾಗವಾಗಿ ನಮಗೆ ಅತ್ಯಾವಶ್ಯಕವಾಗಿರುವ ಸೂಕ್ಷ್ಮಾಣುಗಳ ಸಂಖ್ಯೆಯೇ ದೊಡ್ಡದಿದೆ. ಮುಂದಿನ ಬಾರಿ ವಿಮಾನದಲ್ಲಿ ಪ್ರಯಾಣಿಸುವಾಗಲೋ, ಮೊಸರನ್ನು ಚಪ್ಪರಿಸುವಾಗಲೋ ಸೂಕ್ಷ್ಮಾಣುಗಳು ನೆನಪಾದರೆ, ತಲೆಕೆಡಿಸಿಕೊಳ್ಳದೇ, ಇವಕ್ಕೊಂದು ಥ್ಯಾಂಕ್ಸ್ ಹೇಳಿಬಿಡಿ!