ಸಮಾಜಜಾಲ ಎಂದತಕ್ಷಣ ನಮಗೆ ನೆನಪಾಗುವುದು ಫೇಸ್‌ಬುಕ್
ಸಮಾಜಜಾಲ ಎಂದತಕ್ಷಣ ನಮಗೆ ನೆನಪಾಗುವುದು ಫೇಸ್‌ಬುಕ್ Image by Gerd Altmann from Pixabay
ವೈವಿಧ್ಯ

ಹ್ಯಾಪಿ ಬರ್ತ್‌ಡೇ, ಫೇಸ್‌ಬುಕ್!

ಇಜ್ಞಾನ ತಂಡ

ಸಮಾಜಜಾಲ, ಅಂದರೆ ಸೋಶಿಯಲ್ ನೆಟ್‌ವರ್ಕ್ ಎಂದತಕ್ಷಣ ನಮಗೆ ನೆನಪಾಗುವುದು ಫೇಸ್‌ಬುಕ್. ಈ ತಾಣದ ಜನಪ್ರಿಯತೆ ಎಷ್ಟು ಅಗಾಧವೆಂದರೆ ೨.೪೫ ಬಿಲಿಯನ್ ಬಳಕೆದಾರರು ಅದನ್ನು ಉಪಯೋಗಿಸುತ್ತಿದ್ದಾರೆ. ಈ ಸಂಖ್ಯೆ ಚೀನಾ ಮತ್ತು ಭಾರತದ ಜನಸಂಖ್ಯೆಗಳ ಒಟ್ಟು ಮೊತ್ತಕ್ಕಿಂತ ಸ್ವಲ್ಪವೇ ಕಡಿಮೆ, ಅಷ್ಟೇ!

ಈ ತಾಣ ಶುರುವಾಗಿದ್ದು ೨೦೦೪ರ ಫೆಬ್ರುವರಿ ೪ರಂದು. ಆಗ ಹಾರ್ವರ್ಡ್ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಮಾರ್ಕ್ ಜ಼ುಕರ್‌ಬರ್ಗ್, ತನ್ನ ಗೆಳೆಯರಾದ ಎಡ್ವರ್ಡೋ ಸವೆರಿನ್, ಆಂಡ್ರ್ಯೂ ಮೆಕ್‌ಕಲ್ಲಮ್, ಡಸ್ಟಿನ್ ಮಾಸ್ಕೋವಿಟ್ಸ್ ಮತ್ತು ಕ್ರಿಸ್ ಹ್ಯೂಸ್ ಜೊತೆಗೂಡಿ ಪ್ರಾರಂಭಿಸಿದ ಈ ತಾಣದ ಹೆಸರು ಮೊದಲಿಗೆ 'ದ ಫೇಸ್‌ಬುಕ್' ಎಂದಿತ್ತು. ವಿಶೇಷವಾಗಿ ಕಾಲೇಜು ವಿದ್ಯಾರ್ಥಿಗಳಿಗೆಂದೇ ರೂಪಿಸಲಾಗಿದ್ದ ಈ ತಾಣ ಇತರರಿಗೂ ತೆರೆದುಕೊಂಡಿದ್ದು ಸ್ವಲ್ಪ ಸಮಯದ ನಂತರವಷ್ಟೇ.

ಬಳಕೆದಾರರ ನಡುವೆ ಬಹಳ ಜನಪ್ರಿಯತೆ ಗಳಿಸಿಕೊಂಡಿರುವ ಫೇಸ್‌ಬುಕ್, ಪ್ರಾರಂಭದಿಂದಲೂ ವಿವಾದಗಳಲ್ಲಿ ಸಿಲುಕಿಕೊಳ್ಳುತ್ತಲೇ ಬಂದಿದೆ. ಬೇರೆ ವಿಷಯಗಳೆಲ್ಲ ಹಾಗಿರಲಿ, ಫೇಸ್‌ಬುಕ್ ಪರಿಕಲ್ಪನೆಯೇ ಇತರರಿಂದ ಕದ್ದಿದ್ದು ಎಂಬ ಆರೋಪ ಕೂಡ ಜುಕರ್‌ಬರ್ಗ್ ವಿರುದ್ಧ ಕೇಳಿಬಂದಿತ್ತು. ಈ ಗಲಾಟೆ 'ದ ಸೋಶಿಯಲ್ ನೆಟ್‌ವರ್ಕ್' ಎಂಬ ಚಲನಚಿತ್ರಕ್ಕೆ ಪ್ರೇರಣೆಯಾಗಿದ್ದು, ಆ ಚಲನಚಿತ್ರ ಸುದ್ದಿಮಾಡಿದ್ದೆಲ್ಲ ಈಗ ಇತಿಹಾಸ.

ಫೇಸ್‌ಬುಕ್‌ನಂತೆಯೇ ಅಗಾಧ ಜನಪ್ರಿಯತೆ ಗಳಿಸಿಕೊಂಡಿರುವ ಇನ್‌ಸ್ಟಾಗ್ರಾಮ್, ವಾಟ್ಸ್‌ಆಪ್‌ ಮಾತ್ರವಲ್ಲದೆ ವರ್ಚುಯಲ್ ರಿಯಾಲಿಟಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಆಕ್ಯುಲಸ್ ಸಂಸ್ಥೆ ಕೂಡ ಫೇಸ್‌ಬುಕ್‌ನ ಒಡೆತನದಲ್ಲಿದೆ. ಬಿಟ್‌ಕಾಯಿನ್‌ನಂತೆ ತನ್ನದೇ ಆದ 'ಲಿಬ್ರಾ' ಎಂಬ ವರ್ಚುಯಲ್ ಕರೆನ್ಸಿ ರೂಪಿಸುವುದಾಗಿ ಹೇಳಿಕೊಂಡಿದ್ದ ಫೇಸ್‌ಬುಕ್‌ನ ಯೋಜನೆ ಪಾಲುದಾರರ ಹಿಂಜರಿಕೆಯಿಂದಾಗಿ ಸದ್ಯ ಅತಂತ್ರವಾಗಿದೆ. ಕಡಿಮೆ ಅವಧಿಯಲ್ಲೇ ಅಪಾರ ಜನಪ್ರಿಯತೆ ಗಳಿಸಿಕೊಂಡಿರುವ ಟಿಕ್‌ಟಾಕ್ ಆಪ್‌ ಜೊತೆ ಪರಿಣಾಮಕಾರಿಯಾಗಿ ಸ್ಪರ್ಧಿಸುವುದು ಅದರ ಸದ್ಯದ ಚಿಂತೆ ಇದ್ದಂತಿದೆ.