ಭೂಮಿಯಿಂದಾಚೆ ವಿಕಾಸಹೊಂದಿರಬಹುದಾದ ಬುದ್ಧಿವಂತ ಜೀವಸಂಕುಲವನ್ನು 'ಎಕ್ಸ್‌ಟ್ರಾ ಟೆರೆಸ್ಟ್ರಿಯಲ್ ಇಂಟಲಿಜೆನ್ಸ್' ಎಂದು ಕರೆಯಲಾಗುತ್ತದೆ
ಭೂಮಿಯಿಂದಾಚೆ ವಿಕಾಸಹೊಂದಿರಬಹುದಾದ ಬುದ್ಧಿವಂತ ಜೀವಸಂಕುಲವನ್ನು 'ಎಕ್ಸ್‌ಟ್ರಾ ಟೆರೆಸ್ಟ್ರಿಯಲ್ ಇಂಟಲಿಜೆನ್ಸ್' ಎಂದು ಕರೆಯಲಾಗುತ್ತದೆ Image by Pawel86 from Pixabay
ಪ್ರಶ್ನೆ-ಉತ್ತರ

SETI ಅಂದರೆ ಏನು?

ಇಜ್ಞಾನ ತಂಡ
ವಿಜ್ಞಾನ-ತಂತ್ರಜ್ಞಾನದ ಲೇಖನಗಳು ಬಹಳ ಬೇಗ ಔಟ್‌ಡೇಟ್ ಆಗಿಬಿಡುತ್ತವೆ ಎಂಬ ಅಭಿಪ್ರಾಯ ಇದೆ. ಹಾಗೆಂದು ಹಳೆಯ ಲೇಖನಗಳನ್ನು ಗಮನಿಸದೆ ಇರಲು ಸಾಧ್ಯವೇ? ಹತ್ತು ವರ್ಷ ಅಥವಾ ಅದಕ್ಕಿಂತ ಹಿಂದೆ ಪ್ರಕಟವಾದ ಕನ್ನಡ ವಿಜ್ಞಾನ ಲೇಖನಗಳನ್ನು ಮರುಪ್ರಕಟಿಸುವ ಪ್ರಯತ್ನದ ಅಂಗವಾಗಿ ೨೦೦೪ರ ಈ ಲೇಖನ ಇಲ್ಲಿದೆ. ಇಜ್ಞಾನ ಸಂಪಾದಕ ಟಿ. ಜಿ. ಶ್ರೀನಿಧಿ ಬರೆದ ಈ ಲೇಖನ ಆ ವರ್ಷ ಡಿಸೆಂಬರ್ ೪ರಂದು ಪ್ರಜಾವಾಣಿಯಲ್ಲಿ ಪ್ರಕಟವಾಗಿತ್ತು.

ಭೂಮಿ - ನಮ್ಮ ಸೌರವ್ಯೂಹದಲ್ಲಿ ಜೀವನಕ್ಕೆ ಆಶ್ರಯ ನೀಡಿರುವ ಏಕೈಕ ಗ್ರಹ. ಅಥವಾ, ನಾವು ಹಾಗೆಂದು ತಿಳಿದುಕೊಂಡಿದ್ದೇವೆ. ಅನಂತವಾಗಿರುವ ಬ್ರಹ್ಮಾಂಡದಲ್ಲಿ ನಾವು ಒಬ್ಬಂಟಿಗರೆ? ಬಾಹ್ಯಾಕಾಶದಲ್ಲೆಲ್ಲೂ ಜೀವಿಗಳಿಲ್ಲವೆ? ದೂರದಲ್ಲೆಲ್ಲೋ ಇರುವ ಬೇರೊಂದು ಗ್ರಹದಲ್ಲಿಯೂ ನಮ್ಮ ಹಾಗೆಯೇ ಇರುವ ಜೀವಿಗಳು ವಿಕಾಸವಾಗಿರಬಾರದೇಕೆ? ಎಂಬ ಪ್ರಶ್ನೆಗಳು ನಮ್ಮನ್ನು ಕಾಡುತ್ತಿರುವುದಕ್ಕೂ ಇದೇ ಕಾರಣ.

ಬಾಹ್ಯಾಕಾಶದಲ್ಲಿ ಜೀವಿಗಳಿರಬಹುದೆ? ಎಂಬುದು ಮನುಕುಲದ ಇತಿಹಾಸದ ಅತ್ಯಂತ ಹಳೆಯ ಪ್ರಶ್ನೆಗಳಲ್ಲೊಂದು. ಮನುಷ್ಯ ಯೋಚಿಸಲು ಪ್ರಾರಂಭಿಸಿದ ತಕ್ಷಣದಲ್ಲೇ ಆತನ ಮನಸ್ಸಿನಲ್ಲಿ ಈ ಪ್ರಶ್ನೆ ಹುಟ್ಟಿಕೊಂಡಿರಬೇಕು ಎಂದರೂ ತಪ್ಪಾಗಲಾರದೇನೋ.

ಆದರೆ ಈ ಪ್ರಶ್ನೆಗೆ ಬಹುಕಾಲ ಯಾವ ಉತ್ತರವೂ ದೊರಕಲಿಲ್ಲ. ಆನಂತರ, ಬಾಹ್ಯಾಕಾಶ ವಿಜ್ಞಾನದ ಜನನವಾಗಿ ಅದು ಸಾಕಷ್ಟು ಅಭಿವೃದ್ಧಿಹೊಂದಿದ ಮೇಲೆ, ಈ ಪ್ರಶ್ನೆಯ ಉತ್ತರಕ್ಕಾಗಿ ಹುಡುಕಾಟ ತೀವ್ರಗೊಂಡಿತು.

ಆಗ ಹುಟ್ಟಿಕೊಂಡಿದ್ದೇ SETIಯ ಕಲ್ಪನೆ. ಇದು 'ಸರ್ಚ್ ಫಾರ್ ಎಕ್ಸ್‌ಟ್ರಾ ಟೆರೆಸ್ಟ್ರಿಯಲ್ ಇಂಟೆಲಿಜೆನ್ಸ್' ಎನ್ನುವುದರ ಹ್ರಸ್ವರೂಪ.

'ಇಟಿ' ಅಂದರೆ 'ಎಕ್ಸ್‌ಟ್ರಾ ಟೆರೆಸ್ಟ್ರಿಯಲ್'. ಹಾಗೆಂದರೆ 'ಭೂಮ್ಯತೀತ' ಅಥವಾ 'ಭೂಮಿಯಿಂದ ಆಚೆ ಇರುವ' ಎಂದು ಅರ್ಥ. ಭೂಮಿಯಿಂದಾಚೆ ಯಾವುದೋ ಅಜ್ಞಾತ ಗ್ರಹದಲ್ಲಿ ವಿಕಾಸಹೊಂದಿರಬಹುದಾದ ಬುದ್ಧಿವಂತ ಜೀವಸಂಕುಲವನ್ನು 'ಎಕ್ಸ್‌ಟ್ರಾ ಟೆರೆಸ್ಟ್ರಿಯಲ್ ಇಂಟಲಿಜೆನ್ಸ್' ಎಂದು ಕರೆಯಲಾಗುತ್ತದೆ. ಹೀಗಾಗಿಯೇ ಅನ್ಯಗ್ರಹ ಜೀವಿಗಳಿಗಾಗಿ (ಹಾಗೂ ಅವರ ಬುದ್ಧಿವಂತಿಕೆಗಾಗಿ) ನಡೆದಿರುವ ಹುಡುಕಾಟಕ್ಕೆ 'ಸರ್ಚ್ ಫಾರ್ ಎಕ್ಸ್‌ಟ್ರಾ ಟೆರೆಸ್ಟ್ರಿಯಲ್ ಇಂಟೆಲಿಜೆನ್ಸ್' ಅಥವಾ SETI ಎಂದು ಹೆಸರಿಡಲಾಗಿದೆ.

ಅನ್ಯಗ್ರಹಜೀವಿಗಳಿಗಾಗಿ ಹುಡುಕಾಟ ಕೈಗೊಳ್ಳಬೇಕಾದರೆ ಅವರು ಇದ್ದಾರೋ ಇಲ್ಲವೋ ಎಂಬ ಬಗೆಗೆ ಕೊಂಚವಾದರೂ ಮಾಹಿತಿ ಇರಬೇಕು. ಹೀಗಾಗಿಯೇ ವಿಜ್ಞಾನಿಗಳು ಅನ್ಯಗ್ರಹ ಜೀವಿಗಳ ಅಸ್ತಿತ್ವಕ್ಕೆ ಪೂರಕವಾಗಿ ಮಾಹಿತಿ ಸಂಗ್ರಹಿಸುವಲ್ಲಿ ನಿರತರಾಗಿದ್ದಾರೆ. ಬ್ರಹ್ಮಾಂಡದಲ್ಲಿರುವ ಒಟ್ಟು ನಕ್ಷತ್ರಗಳಲ್ಲಿ ಕನಿಷ್ಟವೆಂದರೂ ಶೇ. ೫ರಷ್ಟರ ಸುತ್ತ ಸುತ್ತುತ್ತಿರುವ ಗ್ರಹಗಳಲ್ಲಿ ಜೀವವಿಕಾಸವಾಗಿರುವ ಸಾಧ್ಯತೆಗಳಿವೆ ಎಂದು ಕೆಲ ವಿಜ್ಞಾನಿಗಳು ಹೇಳುತ್ತಾರೆ.

ನಮ್ಮ ಮನೆಗಳಲ್ಲಿ ಎಲ್ಲೆಲ್ಲೋ ಇಟ್ಟ ಪೆನ್ನು-ಪುಸ್ತಕ-ಕನ್ನಡಕಗಳೇ ಹುಡುಕಿದಾಗ ಸಿಗುವುದು ಕಷ್ಟ. ಅಂದಮೇಲೆ ಈ ಬ್ರಹ್ಮಾಂಡದ ಮೂಲೆಯಲ್ಲೆಲ್ಲೋ ಇರಬಹುದುದಾದ, ಗುರುತು-ಪರಿಚಯ ಯಾವುದೂ ಇಲ್ಲದ ಜೀವಿಗಳನ್ನು ಪತ್ತೆಮಾಡುವುದು ಇನ್ನೆಷ್ಟು ಕಷ್ಟವಾಗಬಹುದು ನೀವೇ ಯೋಚಿಸಿ. ದೂರವಾಣಿ ತೆಗೆದುಕೊಂಡು ಹಲೋ ಅಂದರೆ ಉತ್ತರಿಸಲು ಯಾವ ಅನ್ಯಗ್ರಹಜೀವಿಯೂ ಕಾದುಕುಳಿತಿರುವುದಿಲ್ಲವಷ್ಟೆ! ಇದರಿಂದಾಗಿಯೇ ವಿಜ್ಞಾನಿಗಳು ಅನ್ಯಗ್ರಹಜೀವಿಗಳ ಹುಡುಕಾಟ ನಡೆಸಲು ಅನೇಕ ಅತ್ಯಾಧುನಿಕ ವಿಧಾನಗಳನ್ನು ಆವಿಷ್ಕರಿಸಿದ್ದಾರೆ.

ಇತರ ಗ್ರಹಗಳಲ್ಲಿ 'ಇರಬಹುದಾದ' ಜೀವಿಗಳು 'ಕಳುಹಿಸಿರಬಹುದಾದ' ಸಂದೇಶಗಳನ್ನು ಪತ್ತೆಮಾಡುವುದು ಅವರ ಪ್ರಾತಿನಿಧ್ಯಗಳ ಪಟ್ಟಿಯ ಅಗ್ರಪಂಕ್ತಿಯಲ್ಲಿರುವ ವಿಷಯ. ಅನ್ಯಗ್ರಹಜೀವಿಗಳು ಕಳುಹಿಸಬಹುದಾದ ಸಂದೇಶ ರೇಡಿಯೋ ತರಂಗಗಳ ರೂಪದಲ್ಲಿರುವ ಸಾಧ್ಯತೆಯೇ ಮಿಕ್ಕೆಲ್ಲದಕ್ಕಿಂತ ಹೆಚ್ಚು; ಅರ್ಥಪೂರ್ಣ ಮಾಹಿತಿಯನ್ನು ಅಪಾರ ದೂರ ಹೊತ್ತೊಯ್ಯುವ ಶಕ್ತಿ ಈ ತರಂಗಗಳಲ್ಲಿ ಹೆಚ್ಚಿರುತ್ತದೆ. ಹೀಗಾಗಿ ವಿಜ್ಞಾನಿಗಳು ವಿವಿಧ ತರಂಗಾಂತರಗಳಿಗೆ ಸ್ಪಂದಿಸುವ ರೇಡಿಯೋ ಟೆಲಿಸ್ಕೋಪ್‌ಗಳನ್ನು ಬಳಸಿ ಅನ್ಯಗ್ರಹಜೀವಿಗಳ ಸಂದೇಶಗಳನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ.

ಡಿಸೆಂಬರ್ ೪, ೨೦೦೪ರ ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನದ ಸಂಪಾದಿತ ರೂಪ