ನಮ್ಮಲ್ಲಿ ಅನ್ಯಗ್ರಹವಾಸಿಗಳ ಬಗ್ಗೆ ಇರುವ ಕಲ್ಪನೆಗಳು ಸುಂದರವೇನಲ್ಲ
ನಮ್ಮಲ್ಲಿ ಅನ್ಯಗ್ರಹವಾಸಿಗಳ ಬಗ್ಗೆ ಇರುವ ಕಲ್ಪನೆಗಳು ಸುಂದರವೇನಲ್ಲ
ವೈವಿಧ್ಯ

ಅನ್ಯಗ್ರಹ ಜೀವಿಗಳು ಹೇಗಿರಬಹುದು?

ಮಂಗಳನಿಂದಲೋ, ಶುಕ್ರನಿಂದಲೋ ಜೀವಿಗಳು ಭೂಮಿಗೆ ಬಂದು ಇಳಿದರೆ?

ಕೊಳ್ಳೇಗಾಲ ಶರ್ಮ

ಮಂಗಳನಿಂದಲೋ, ಶುಕ್ರನಿಂದಲೋ ಜೀವಿಗಳು ಭೂಮಿಗೆ ಬಂದು ಇಳಿದರೆ ಏನಪ್ಪಾ ಅನ್ನುವ ಆತಂಕ ಇಂದು ನಿನ್ನೆಯದಲ್ಲ. ಸುಮಾರು ೧೨೦ ವರ್ಷಗಳ ಹಿಂದೆ ಸುಪ್ರಸಿದ್ಧ ಆಂಗ್ಲ ಲೇಖಕ ಹೆಚ್. ಜಿ. ವೆಲ್ಸ್ 'ದಿ ವಾರ್ ಆಫ್ ದಿ ವರ್ಲ್ಡ್ಸ್' (ಲೋಕಗಳ ಕದನ) ಎನ್ನುವ ಪುಸ್ತಕವನ್ನು ಬರೆದಿದ್ದ. ಫ್ರೆಂಚರು ಮತ್ತು ಆಂಗ್ಲರ ನಡುವಿನ ಯುದ್ಧಗಳ ವಿಡಂಬನೆಯಾಗಿದ್ದ ಈ ಕಥೆಯಲ್ಲಿ ಮಂಗಳಗ್ರಹವಾಸಿಗಳು ಇಂಗ್ಲೆಂಡಿನ ಮೇಲೆ ಆಕ್ರಮಣ ಮಾಡಿದರೆಂದಿತ್ತು. ಇದೇ ಕಥೆಯನ್ನು ಕೆಲವು ದಶಕಗಳ ಅನಂತರ ಅಮೆರಿಕದ ರೇಡಿಯೋ ಒಂದು ನಾಟಕವನ್ನಾಗಿ ಪ್ರಸಾರ ಮಾಡಿದಾಗ, ಆಗಷ್ಟೆ ಎರಡನೇ ಮಹಾಯುದ್ಧದ ಬಿಸಿಯನ್ನು ಕಂಡಿದ್ದ ಅಮೆರಿಕನ್ನರು, ನಾಟಕವನ್ನೇ ನಿಜವೆಂದು ತಿಳಿದು ಬೆಚ್ಚಿ ಬಿದ್ದಿದ್ದು ಚರಿತ್ರೆ. ಒಟ್ಟಾರೆ ಅನ್ಯಗ್ರಹವಾಸಿಗಳು ಎಂದರೆ ಬೆಚ್ಚುವ ಬೆದರುವವರೇ ಜಾಸ್ತಿ. ನಮ್ಮಲ್ಲೂ ಅನ್ಯಗ್ರಹವಾಸಿಗಳ ಬಗ್ಗೆ ಇರುವ ಕಲ್ಪನೆಗಳು ಸುಂದರವೇನಲ್ಲ! ನಾಗಲೋಕ, ನರಕಲೋಕ ಎಂದೆಲ್ಲ ಹೇಳುವ ವಿಚಿತ್ರ ವಿಶ್ವದ ಜೀವಿಗಳು ಅತ್ತ ಮಾನವರೂ ಅಲ್ಲದ, ಇತ್ತ ಪ್ರಾಣಿಗಳೂ ಅಲ್ಲದ ರೂಪಗಳು.

ಯಾವುದೋ ಜೀವಿಯ ತಳಿಗುಣವನ್ನು ಇನ್ಯಾವುದೋ ಜೀವಿಗೆ ತಳುಕಿಸುವಷ್ಟು ಜೀವವಿಜ್ಞಾನದ ಅರಿವನ್ನು ಪಡೆದಿರುವ ಇಂದಿನ ದಿನಗಳಲ್ಲಿಯೂ, ಅನ್ಯಗ್ರಹಜೀವಿಗಳ ಬಗ್ಗೆ ಇದೇ ಬಗೆಯ ಕಲ್ಪನೆಗಳೇ ಚಾಲ್ತಿಯಲ್ಲಿವೆ ಎನ್ನುವುದು ವಿಚಿತ್ರವಾದರೂ ಸತ್ಯ. ಕೆಲವು ಕಥೆಗಳಲ್ಲಿಯಂತೂ ಹುಳುಗಳಂತೆ ಕಾಣುವ ದೈತ್ಯ ಜೀವಿಗಳು ಭೂಮಿಯನ್ನು ದಂಡೆತ್ತಿ ಬರುವಂತೆ ತೋರಿಸಲಾಗುತ್ತದೆ. ಇನ್ನು ಕೆಲವು ಕಲ್ಪನೆಗಳಲ್ಲಿ ಅನ್ಯಗ್ರಹಜೀವಿಗೆ ಇರುವ ಅದ್ಭುತ ಶಕ್ತಿ, ಸಾಮರ್ಥ್ಯಗಳು ಬೆರಗುಗೊಳಿಸುತ್ತವೆ. ಉದಾಹರಣೆಗೆ, ಹೃತಿಕ್ ರೋಷನ್ ನಟಿಸಿದ 'ಕ್ರಿಷ್' ಚಿತ್ರದಲ್ಲಿ ಅನುವಂಶೀಯವಾಗಿ ಪೆದ್ದನಾಗಿರುವ ಹೃತಿಕ್ ರೋಷನ್ ಅನ್ಯಗ್ರಹಜೀವಿಯೊಂದರ ಜೊತೆಗೆ ಗೆಳೆತನ ಬೆಳೆಸುತ್ತಾನೆ. ಆ ಜೀವಿ ಅವನಿಗೆ ಅತಿಮಾನುಷ ಶಕ್ತಿಯನ್ನು ತುಂಬುತ್ತದೆ. ಇದೇ ಕಥೆಯನ್ನು ಮುಂದುವರೆಸಿದ 'ಕ್ರಿಷ್ ೨' ನಲ್ಲಿ ಅತಿ ಮಾನುಷ ಶಕ್ತಿಯ ಕ್ರಿಷ್ ನ ಮಗನಿಗೂ ಆ ಶಕ್ತಿ ಬಂದಿರುತ್ತದೆ. ಇವೆಲ್ಲ ನಿಜವೇ? ಹೀಗಾಗಬಹುದೇ?

ಎಡ್ವರ್ಡ್ ಆಸ್ಬಾರ್ನ್ ವಿಲ್ಸನ್ ರ ತರ್ಕಗಳು ಹೀಗಿವೆ. ಈ ತರ್ಕಗಳು ಕೇವಲ ಊಹೆಗಳಲ್ಲ. ಇವು ಭೂಮಿಯ ಮೇಲೆ ನಾವು ವಿಕಾಸವಾಗಿರುವುದರ ಹಿನ್ನೆಲೆಯಿಂದ ಹುಟ್ಟಿದ ಅರಿವು ಎನ್ನುತ್ತಾರೆ ವಿಲ್ಸನ್. ಅದು ಹೀಗೆ. ಇಂದು ನಾವು ಹೀಗೆ ನಾಗರೀಕರಾಗಿ, ಎಲ್ಲ ಜೀವಿಗಳನ್ನೂ ಆಳುವ ಶಕ್ತಿಯುಳ್ಳ ಪ್ರಾಣಿಗಳಾಗಿ ಬೆಳೆಯುವುದಕ್ಕೆ ಒಂದು ಪ್ರಮುಖ ಕಾರಣವಿದೆ. ಅದು ನಮ್ಮ ಬುದ್ಧಿವಂತಿಕೆ. ಈ ಬುದ್ಧಿವಂತಿಕೆಯನ್ನು ಕೊಡಮಾಡಿದ ದೊಡ್ಡ ಮಿದುಳು ಇದ್ದಕ್ಕಿದ್ದ ಹಾಗೆ ಬಂದ ವರವಲ್ಲ. ಲಕ್ಷಾಂತರ ವರ್ಷಗಳ ಸುದೀರ್ಘ ಅವಧಿಯಲ್ಲಿ ಕ್ರಮೇಣ ಉಂಟಾದ ಬದಲಾವಣೆಗಳ ಫಲ. ವಿಕಾಸದ ಪರಿಣಾಮ. ನೋಡಿದ್ದರಿಂದ, ಓದಿದ್ದರಿಂದ ಕಲಿಯುವ ಬುದ್ಧಿವಂತಿಕೆ, ಕಲಿತದ್ದನ್ನು ಬಳಕೆಗೆ ತರುವ ತಂತ್ರಗಾರಿಕೆ ಇರುವುದರಿಂದಲೇ ನಾವು ನಮಗಿಂತಲೂ ಶಕ್ತಿಯುತವಾದ ಪ್ರಾಣಿಗಳನ್ನೂ ಪಳಗಿಸಿ ಬದುಕಲು ಸಾಧ್ಯವಾಗಿದ್ದು. ಬದುಕುವುದು ಎಂದರೆ ಹಾಗೆ ಹೀಗಲ್ಲ. ಬೇರಾವುದೇ ಜೀವಿಯನ್ನೂ ಮೀರಿಸಿದ ಸಂಖ್ಯೆಯಲ್ಲಿ ನಾವು ಬೆಳೆದಿದ್ದೇವೆ. ಜೀವವಿಜ್ಞಾನಿಗಳ ಲೆಕ್ಕದಲ್ಲಿ ಇದು ಸುತ್ತಲಿನ ಬದಲಾವಣೆಗಳಿಗೆ ಹೊಂದಿಕೊಳ್ಳುವ ನಮ್ಮ ಗುಣದ ಫಲಶ್ರುತಿ. ಭೂಮಿಯ ಮೇಲೆ ಇರುವ ಕೋಟ್ಯಂತರ ಜೀವಿಗಳಲ್ಲಿ ಇಷ್ಟು ಹೊಂದಾಣಿಕೆ ಇರುವ ಮತ್ತೊಂದು ಜೀವಿಯಿಲ್ಲ.

ತನ್ನ ಬುದ್ಧಿಯ ಬಗ್ಗೆ ಮಾನವ ಚಿಂತಿಸುವಂತೆ ಬೇರಾವ ಪ್ರಾಣಿಯೂ ಚಿಂತಿಸುವುದಿಲ್ಲ. ಅಂತಹ ಸಾಮರ್ಥ್ಯ ಇರುವುದರಿಂದಲೇ ನಾವು ಬೇರೊಂದು ಗ್ರಹದಿಂದ ಜೀವಿಯೊಂದು ಬಂದು ಕಾಡಿದರೆ ಎಂದು ಆತಂಕ ಪಡುತ್ತೇವೆ. ಅನ್ಯಗ್ರಹದಿಂದ ಬರುವ ಯಾವುದೇ ಜೀವಿಯೂ ಹೀಗೆ ಆತಂಕಿತನಾಗುವಷ್ಟು ಬುದ್ಧಿವಂತರೇ ಆಗಿರಬೇಕು. ಜೊತೆಗೆ ಅವು ನೆಲಜೀವಿಗಳಾಗಿರಬೇಕು. ಯಾವುದೋ ಜಲಜೀವಿ ಆಗಿರಲು ಸಾಧ್ಯವಿಲ್ಲ ಎನ್ನುತ್ತಾರೆ ವಿಲ್ಸನ್. ಜಲಜೀವಿಗಳಲ್ಲೂ ಬುದ್ಧಿವಂತ ಪ್ರಾಣಿಗಳಿಲ್ಲದಿಲ್ಲ. ಉದಾಹರಣೆಗೆ, ತಿಮಿಂಗಿಲಗಳು ಹಾಗೂ ಡಾಲ್ಫಿನ್ ಗಳು. ಆದರೆ ಇವು ಹಿಂದೊಮ್ಮೆ ನೆಲಜೀವಿಯಾಗಿದ್ದ ಪೂರ್ವಜರಿಂದ ವಿಕಾಸವಾಗಿ ನೀರಿಗೆ ಮರಳಿದಂಥವು. ಹಾಗೆಯೇ, ಮನುಷ್ಯನಷ್ಟೇ ಅದ್ಭುತ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುವ ಇತರೆ ಪ್ರಾಣಿಗಳೆಂದರೆ ಇರುವೆ, ದುಂಬಿ, ಜೇನ್ನೊಣಗಳಂತಹ ಕೀಟಗಳು. ಇವುಗಳೂ ನೆಲಜೀವಿಗಳಷ್ಟೆ!

ಹಾಗಿದ್ದರೆ ಕೀಟಗಳಂತಹ ದೈತ್ಯಜೀವಿಗಳು ಇರಬಹುದಲ್ಲ? ಹಿಂದೆ ಡೈನೋಸಾರುಗಳು ಇದ್ದುವಲ್ಲ? ಅದೇ ರೀತಿಯಲ್ಲಿ ದೈತ್ಯ ಕೀಟಗಳು ಅಲ್ಲೆಲ್ಲೋ ವಿಕಾಸವಾಗಿರಬಹುದಲ್ಲ ಎಂದು ನೀವು ಕೇಳಬಹುದು. ಆದರೆ ಅಂತಹ ಆಕಾರವಿದ್ದರೂ ಅವು ನಿಜವಾದ ಕೀಟಗಳಂತಿರಲಿಕ್ಕಿಲ್ಲ. ಏಕೆಂದರೆ ಕೀಟಗಳಲ್ಲಿನ ರಕ್ತ, ಶ್ವಾಸಕೋಶಗಳ ವ್ಯವಸ್ಥೆ ಹೆಚ್ಚೆಂದರೆ ಒಂದು ಅಡಿಯಷ್ಟು ದೈತ್ಯ ಕೀಟವನ್ನು ಸಂಭಾಳಿಸಬಹುದು. ಅದಕ್ಕಿಂತಲೂ ದೊಡ್ಡ ದೇಹವಾದರೆ ರಕ್ತ ಪರಿಚಲನೆ, ಶುದ್ಧೀಕರಣ, ಉಸಿರಾಟವೆಲ್ಲವೂ ಬದಲಾಗಬೇಕಾಗುತ್ತದೆ. ಅರವತ್ತು ಕೋಟಿಗೂ ಮಿಗಿಲಾದ ಅವಧಿಯಲ್ಲಿ ಈ ಭೂಮಿಯ ಮೇಲೆ ಹುಟ್ಟಿದ ಕೀಟಗಳಲ್ಲಿ ಆರಡಿಯೆತ್ತರವಿರಲಿ, ಒಂದಡಿಯಷ್ಟು ದೊಡ್ಡ ಕೀಟವು ವಿಕಾಸವಾಗಿದ್ದುದಕ್ಕೂ ಪುರಾವೆಗಳಿಲ್ಲ.

ದೊಡ್ಡದು ಬೇಡ. ಅತಿ ಸೂಕ್ಷ್ಮಕೀಟಗಳು ಇರಬಹುದಲ್ಲ? ಇವೆ. ಬ್ಯಾಕ್ಟೀರಿಯಾದಷ್ಟು ಸೂಕ್ಷ್ಮವಾದ ಕೀಟಗಳಿವೆ. ಆದರೆ ಅವು ಏಕಾಂಗಿ ಜೀವಿಗಳು. ನಮ್ಮಂತೆ ಸಮಾಜ ಜೀವಿಗಳಲ್ಲ. ಸಾಮಾಜಿಕ ನಡವಳಿಕೆ ಇರುವುದರಿಂದಲೇ ನಾವು ಸಹಕಾರ, ಸಹಯೋಗಗಳಿಂದ ನಮ್ಮೆಲ್ಲ ಕುಂದು ಕೊರತೆಗಳನ್ನೂ ಮೀರಿ ಬೆಳೆಯಲು ಸಾಧ್ಯವಾಗಿದೆ ಎನ್ನುತ್ತಾರೆ ವಿಲ್ಸನ್. ಕೀಟಗಳಲ್ಲಿಯೂ ಸಾಮಾಜಿಕ ನಡವಳಿಕೆ ಇರುವ ಇರುವೆ, ಗೆದ್ದಲು ಹಾಗೂ ಜೇನ್ನೊಣಗಳಂತಹವುಗಳ ಸಂಖ್ಯೆ ಉಳಿದೆಲ್ಲವುಗಳಿಗಿಂತಲೂ ಹೆಚ್ಚು. ಆದರೂ ಇವುಗಳಿಗೆ ನಮಗಿರುವಷ್ಟು ಹೊಂದಾಣಿಸಿಕೊಳ್ಳಬಲ್ಲ ಮಿದುಳಿಲ್ಲ. ಬೇರೊಂದು ಗ್ರಹಕ್ಕೆ ಹೋಗಿ ದಾಳಿ ನಡೆಸಬೇಕಾದರೆ ಪಂಗಡದಲ್ಲಿರುವವರೆಲ್ಲರ ಸಹಕಾರ, ಸಹಯೋಗ ಬೇಕು. ಇದಕ್ಕೆ ಒಳ್ಳೆಯ ಸಂವಹನ ಶಕ್ತಿಯೂ ಬೇಕು.

ಅನ್ಯಗ್ರಹಜೀವಿಗಳು ಕೂಡ ನಮ್ಮ ಹಾಗೆಯೇ. ದೊಡ್ಡ ತಲೆ ಇರಲೇ ಬೇಕು. ಏಕೆಂದರೆ ಅವುಗಳಿಗೂ ಮಿದುಳು ದೊಡ್ಡದಾಗಿರಲೇ ಬೇಕಲ್ಲ! ಹೀಗೆ ಒಂದೆಡೆ ಕೇಂದ್ರೀಕೃತವಾದ ಮಿದುಳು ಅವಶ್ಯಕ. ಎರಡನೆಯದಾಗಿ ಅವುಗಳ ತಲೆಯೂ ಸಾಕಷ್ಟು ಎತ್ತರದಲ್ಲಿ ಇರಬೇಕು. ಅದರಿಂದ ಶತ್ರುಗಳನ್ನು ಗಮನಿಸಲು ನೆರವಾಗುತ್ತದೆ. ನೆಲದಲ್ಲಿ ನಿಂತುಕೊಂಡೇ ಕಿಲೋಮೀಟರುಗಳಷ್ಟು ದೂರದಲ್ಲಿರುವ ವೈರಿಯನ್ನೂ ಕಾಣುವುದು ಇದರಿಂದ ಸಾಧ್ಯ. ಇಲ್ಲದಿದ್ದರೆ ಮಂಗಗಳಂತೆ ಮರವನ್ನೋ, ಹದ್ದುಗಳಂತೆ ಆಕಾಶವನ್ನೋ ಹುಡುಕಿಕೊಳ್ಳಬೇಕಷ್ಟೆ. ನಾಲ್ಕು ಕಾಲಿನ ಜೀವಿಯೋ? ನೂರು ಕಾಲೋ ಇರಬಹುದಲ್ಲ? ಎಂದರೂ ಸಾಧ್ಯವಿಲ್ಲ. ಅವುಗಳಲ್ಲಿ ನಡೆಯುವ ಸಂವಹನವೂ ಅಷ್ಟೆ. ಕ್ರಿಷ್ ನಲ್ಲಿ ಜಾದೂ ಕೇವಲ ಯೋಚನಾತರಂಗಗಳ ಮೂಲಕವೇ ಕ್ರಿಷ್ನ ಜೊತೆ ಮಾತನಾಡುತ್ತಾನೆ. ಆದರೆ ಇದು ಸಮಾಜ ಜೀವನಕ್ಕೆ ತಕ್ಕುದಲ್ಲ. ಸಮೀಪದಲ್ಲಿರುವವರ ಜೊತೆಗೆ ಸಮರ್ಪಕವಾಗಿ ಸಂವಹಿಸಬೇಕೆಂದರೆ ಶಬ್ದ, ನೋಟಗಳು ಮುಖ್ಯವಾಗುತ್ತವೆಯೇ ಹೊರತು ವಾಸನೆಯಲ್ಲ. ಚಿಂತನಾ ತರಂಗಗಳಲ್ಲ. ಆದ್ದರಿಂದ ಅವಕ್ಕೂ ನಮ್ಮಂತೆಯೇ ಕಣ್ಣುಗಳಿರಬೇಕು. ಕಿವಿಗಳಿರಬೇಕು. ಹೆಚ್ಚೆಂದರೆ ಏಳೂ ಬಣ್ಣಗಳನ್ನು ಕಾಣದೆ, ಕೀಟಗಳಂತೆ ಒಂದೆರಡು ಬಣ್ಣಗಳನ್ನಷ್ಟೆ ಅವು ಕಾಣಬಹುದು. ಅಥವಾ ನಾಯಿ ನರಿಗಳಂತೆ ಬೇರೊಂದು ಇನ್ನೂ ಸೂಕ್ಷ್ಮವಾದ ಶಬ್ದ ತರಂಗಗಳನ್ನು ಅವು ಕೇಳುತ್ತಿರಬಹುದು. ಏನಿದ್ದರೂ ಕಿವಿ, ಕಣ್ಣು ಇರಬೇಕಾದ್ದು ಅತ್ಯಗತ್ಯ.

ಕೊನೆಯದಾಗಿ. ಅವುಗಳ ಆಹಾರ? ನಾವು ವಿಕಾಸವಾಗಿದ್ದನ್ನು ಗಮನಿಸಿದರೆ, ಬೇರಾವುದೇ ಬುದ್ಧಿವಂತ ಜೀವಿಯ ಮಿದುಳು ಬೆಳೆಯಲೂ ನಮಗೆ ಬೇಕಾಗಿರುವಂತಹ ಪೋಷಕಾಂಶಗಳೇ ಬೇಕಾಗಬಹುದು. ಆದ್ದರಿಂದ ಅವುಗಳು ಕೂಡ ಮಾಂಸ ಮತ್ತು ಸಸ್ಯಾಹಾರಗಳೆರಡನ್ನೂ ಬಳಸುವ ಮಿಶ್ರಾಹಾರಿಗಳಾಗಿರಬಹುದು ಎನ್ನುತ್ತಾರೆ ವಿಲ್ಸನ್. ಸಮಾಜವೆಂದ ಮೇಲೆ ಮದುವೆಯೂ ಇರಬಹುದು. ಕುಟುಂಬವೂ ಇರಬಹುದು. ಆದರೆ ಅದಕ್ಕೆ ಆ ಜೀವಿ ನಮ್ಮಂತೆಯೇ ಎರಡು ಲಿಂಗಗಳ ಜೀವಿಯಾಗಿರಬೇಕಷ್ಟೆ. ಎರೆಹುಳುವಿನಲ್ಲಿ ಒಂದೇ ಜೀವಿಯಲ್ಲಿ ಎರಡೂ ಲಿಂಗಗಳಿವೆ, ದಾಸವಾಳದ ಹೂವಿನಲ್ಲಿರುವಂತೆ. ಅಂತಹ ದ್ವಿಲಿಂಗಿತನ ಸಾಮಾಜಿಕ ನಡವಳಿಕೆ ಇರುವ ಜೀವಿಗಳಲ್ಲಿ ಕಾಣದಾದ್ದರಿಂದ ನಮ್ಮ ಅನ್ಯಗ್ರಹಜೀವಿಗಳಲ್ಲೂ ಗಂಡು-ಹೆಣ್ಣು ಎರಡೂ ಇರಬೇಕು.

ಇವೆಲ್ಲ ಸಾಧ್ಯವೇ? ಭೂಮಿಯ ಮೇಲೆ ವಿಕಾಸವಾದ ಜೀವಿಗಳನ್ನು ಗಮನಿಸಿ. ಸ್ತನಿಗಳು ವಿಕಾಸವಾಗಿ ಆರುಕೋಟಿ ವರ್ಷಗಳಾದ ಮೇಲೆ ಮಾನವರು ಕಾಣಿಸಿಕೊಂಡದ್ದು. ಅಂದರೆ ಭೂಮಿಯಲ್ಲಿ ಇರುವಂತೆ ಜೀವಾಧಾರ ಪರಿಸರದ ಎಲ್ಲ ಅಂಶಗಳೂ ಒಟ್ಟಿಗೆ ಸಂಭವಿಸುವುದು ಸಾಧ್ಯವಾದರೂ, ಬುದ್ಧಿವಂತ ಜೀವಿಯೊಂದು ವಿಕಾಸವಾಗಲು ಕೋಟ್ಯಂತರ ವರ್ಷಗಳು ಬೇಕು. ಅವು ನಮ್ಮಲ್ಲಿಗೆ ಬರಲೂ ಕೋಟ್ಯಂತರ ವರ್ಷಗಳು ಬೇಕು.

ಒಂದು ವೇಳೆ ಈ ಜೀವಿಗಳು ಭೂಮಿಗಿಳಿದವೆನ್ನಿ. ಏನಾಗಬಹುದು? ಎದುರಿಗೆ ಸಿಕ್ಕವರನ್ನೆಲ್ಲ ಕೊಲ್ಲುವುವೇ? ಸಹಕಾರ, ಸಹಜೀವನವಿರುವ ಜೀವಿಗಳು ಹೀಗೆ ಮಾಡುವುದು ಅಸಾಧ್ಯ ಎನ್ನುತ್ತಾರೆ ವಿಲ್ಸನ್. ಮತ್ತೆ? ಸುಪ್ರಸಿದ್ಧ ಕಥೆಗಾರ ಐಸಾಕ್ ಅಸಿಮೋವ್ ಬರೆದ ಕಥೆಯೊಂದರಲ್ಲಿ ಇದಕ್ಕೆ ಉತ್ತರವಿದೆ. ಹೀಗೆ ಭೂಮಿಗಿಳಿದ ಜೀವಿಗಳು ತಮ್ಮೆದುರಿಗೆ ಕಂಡವರಿಗೆ ‘ಕಿರುಬೆರಳೆತ್ತಿ’ ತೋರಿದುವಂತೆ, ಶಾಲೆಯಲ್ಲಿ ಮಕ್ಕಳು ಟೀಚರಿಗೆ ತೋರಿಸುವಂತೆ!

ಲೇಖಕರ ಟಿಪ್ಪಣಿ: ಈ ಲೇಖನದಲ್ಲಿ ಎರಡು ಅಂಶಗಳನ್ನು ತಿಳಿಸಿಲ್ಲ. ಮೊದಲನೆಯದು ಅನ್ಯಗ್ರಹ ಜೀವಿಗಳು ಬುದ್ಧಿವಂತವಾಗಿದ್ದರೆ ಅವು ಸೈಬರ್ ಮನುಷ್ಯರಾಗಿರಲಿಕ್ಕೆ ಸಾಧ್ಯವಿಲ್ಲ. ಹೆಚ್ಚೆಂದರೆ ಅವು ರೋಬೋ ಸೇವಕರನ್ನು ಅನ್ವೇಷಣೆಗೆ ಕಳಿಸಬಹುದು. ನಾವು ಚಂದ್ರ-ಮಂಗಳ ಗ್ರಹಗಳಿಗೆ ಶೋಧನೌಕೆಗಳನ್ನು ಕಳಿಸಿದ ಹಾಗೆ. ಆದರೆ ರೋಬೋಗಳನ್ನು ಅನ್ಯಗ್ರಹ ಜೀವಿಗಳೆನ್ನುವ ಹಾಗಿಲ್ಲವಲ್ಲ.

ಎರಡನೆಯದಾಗಿ ಅನ್ಯಗ್ರಹಜೀವಿಗಳೂ ತಮ್ಮ, ತಮ್ಮಲ್ಲಿ ಸಂವಹನೆಗೆ ಮಾತು ಮತ್ತು ನೋಟವನ್ನು ಬಳಸಲೇ ಬೇಕು. ಕೀಟಗಳಂತೆ ವಾಸನೆಯನ್ನು ಬಳಸಬಹುದಾದರೂ ಅದರ ವ್ಯಾಪ್ತಿ ಬಲು ಕಡಿಮೆಯಾದ್ದರಿಂದ ನೋಟ ಹಾಗೂ ಮಾತಿನಿಂದಲೇ ಸಂವಹನ ಹೆಚ್ಚು. ಮಾತು ಎಂದಾಗ ಅವುಗಳ ಸ್ವರ ಬೇರೆ ರೀತಿ ಇರಬಹುದು, ಭಾಷೆ ಬೇರೆ ಇರಬಹುದು. ಆದರೆ ಮಾತು ಇದ್ದೇ ಇರುತ್ತದೆ.

ಮತ್ತೊಂದು ವಿಷಯ. ಅವುಗಳ ಕೈ ಹಾಗೂ ಬೆರಳುಗಳು ಕೂಡ ನಮ್ಮ ಹಾಗೆಯೇ ಮೃದುವಾಗಿರಬೇಕು. ಇದು ಸಂವೇದನೆಗೆ ಬಲು ಮುಖ್ಯ. ಮೃದುವಾದದ್ದನ್ನೂ, ಕಠಿಣವಾದದ್ದನ್ನೂ ಗ್ರಹಿಸಲು ಮೃದುವಾದ ಬೆರಳುಗಳು ಅವಶ್ಯಕ. ಹಾಗೆಯೇ ನೂರಾರು ಕೈಗಳಿರುವ ಸಾಧ್ಯತೆಯೂ ಇಲ್ಲ ಎನ್ನುತ್ತಾರೆ ವಿಲ್ಸನ್.

ಒಟ್ಟಾರೆ ಸಹಕಾರಿ ಎನ್ನಿಸುವ ಮೃದು ಮನಸ್ಸು, ನೇವರಿಸುವಷ್ಟು ಮೃದುವಾದ ಸ್ಪರ್ಶ ಇವು ಅನ್ಯಗ್ರಹ ಜೀವಿಗಳಲ್ಲೂ ಇರಲೇಬೇಕು. ಅವು ಬುದ್ದಿವಂತ ಹಾಗೂ ನಮ್ಮಷ್ಟೆ ಸಾಹಸಿ ಜೀವಿಗಳಾಗಿದ್ದರೆ ಇವೆರಡೂ ಅವಶ್ಯಕ (ಆಕರ: Edward O. Wilson, The Meaning of Human Existence).

ಮೇ ೧೬, ೨೦೧೬ರ ಸಂಯುಕ್ತ ಕರ್ನಾಟಕದಲ್ಲಿ ಪ್ರಕಟವಾದ ಲೇಖನ

ಇಜ್ಞಾನ Ejnana
www.ejnana.com