ಶರೀರದಲ್ಲಿನ ಪ್ರಮುಖ ಅಂಗಗಳ ಪೈಕಿ ಅತ್ಯಂತ ಸರಳ ಅಂಗ ಹೃದಯ
ಶರೀರದಲ್ಲಿನ ಪ್ರಮುಖ ಅಂಗಗಳ ಪೈಕಿ ಅತ್ಯಂತ ಸರಳ ಅಂಗ ಹೃದಯ Image by Gerd Altmann from Pixabay
ಪ್ರಶ್ನೆ-ಉತ್ತರ

ಹೃದಯದ ಬಗ್ಗೆ ನಿಮಗೆಷ್ಟು ಗೊತ್ತು?

ಡಾ. ವಿ. ಎಸ್. ಕಿರಣ್

ಶರೀರದಲ್ಲಿನ ಪ್ರಮುಖ ಅಂಗಗಳ ಪೈಕಿ ಅತ್ಯಂತ ಸರಳ ಅಂಗ ಹೃದಯ. ಮಿದುಳು, ಯಕೃತ್, ಶ್ವಾಸಕೋಶ, ಮೂತ್ರಪಿಂಡಗಳಂತಹ ಇತರ ಪ್ರಮುಖ ಅಂಗಗಳು ಸಂಕೀರ್ಣ ರಾಸಾಯನಿಕ ಪ್ರಕ್ರಿಯೆಗಳ ಮೂಲಕ ಕೆಲಸ ಮಾಡುತ್ತವೆ. ಆದರೆ ಹೃದಯ ಹಾಗಲ್ಲ. ಅದು ಮುಖ್ಯವಾಗಿ ಕೆಲಸ ಮಾಡುವುದು ಯಾಂತ್ರಿಕ ಪಂಪ್ ಮಾದರಿಯಲ್ಲಿ. ಪಂಪ್ ಕೆಲಸ ಮಾಡಲು ಬೇಕಾದ ವಿದ್ಯುತ್ ಪೂರೈಕೆ ಕೂಡ ಹೃದಯದಲ್ಲೇ ಆಗುತ್ತದೆ.

ಸರಳವಾದರೂ ಹೃದಯದ ಕೆಲಸ ಅತ್ಯಂತ ಮಹತ್ವದ್ದು. ನಮ್ಮ ಶರೀರದ ಬಹುತೇಕ ಜೀವಕೋಶಗಳ ಕೆಲಸಕ್ಕೆ ಅಗತ್ಯವಾದ ಆಕ್ಸಿಜನ್ ಮತ್ತು ಪೋಷಕಾಂಶಗಳನ್ನು ರಕ್ತದ ಮೂಲಕ ಪೂರೈಸುವ ಪ್ರಮುಖ ಕ್ರಿಯೆಯನ್ನು ನಿರ್ವಹಿಸುವುದು ಹೃದಯ. ಅಂತೆಯೇ, ಜೀವಕೋಶಗಳು ಸೆಳೆದುಕೊಂಡ ಪೋಷಕಾಂಶ ಮತ್ತು ಆಕ್ಸಿಜನ್ ಅನ್ನು ರಕ್ತದಲ್ಲಿ ಮರುಪೂರಣ ಮಾಡಲು ನೆರವಾಗುವುದೂ ಹೃದಯವೇ. ಹೀಗೆ, ಹೃದಯದ್ದು ಗ್ರಾಹಕರಿಂದ ಹಣ ಸಂಗ್ರಹಿಸಿ ಇತರ ಗ್ರಾಹಕರಿಗೆ ನೀಡುವ ಬ್ಯಾಂಕಿನ ಕ್ಯಾಶಿಯರ್ ಕೆಲಸ!

ಕೆಲಸವಷ್ಟೇ ಅಲ್ಲ; ರಚನೆಯ ದೃಷ್ಟಿಯಿಂದಲೂ ಹೃದಯ ಬಹಳ ಸರಳ. ರಕ್ತ ಸಂಗ್ರಹಿಸುವ ಎರಡು ಕಕ್ಷೆಗಳು, ರಕ್ತವನ್ನು ಮುಂದಕ್ಕೆ ದೂಡುವ ಎರಡು ಪಂಪ್’ಗಳು, ಈ ಕಕ್ಷೆಗಳನ್ನು ಮತ್ತು ಪಂಪ್’ಗಳನ್ನು ಪ್ರತ್ಯೇಕವಾಗಿಸುವ ಎರಡು ಗೋಡೆಗಳು, ರಕ್ತಸಂಚಾರವನ್ನು ಏಕಮುಖವಾಗಿ ನಿರ್ವಹಿಸುವ ನಾಲ್ಕು ಕವಾಟಗಳು – ಇವು ಹೃದಯದ ಪ್ರಮುಖ ಭಾಗಗಳು. ಜೀವಕೋಶಗಳಿಗೆ ಆಕ್ಸಿಜನ್ ತಲುಪಿಸಿದ ನಂತರ ರಕ್ತದಲ್ಲಿ ಆಕ್ಸಿಜನ್ ಪ್ರಮಾಣ ಕಡಿಮೆ ಆಗುತ್ತದೆ. ಇಂತಹ ರಕ್ತ ಹೃದಯದ ಬಲಭಾಗಕ್ಕೆ ತಲುಪುತ್ತದೆ. ಅಲ್ಲಿಂದ ಈ ರಕ್ತವನ್ನು ಹೃದಯದ ಬಲಭಾಗದ ಪಂಪ್ ಶ್ವಾಸಕೋಶಗಳಿಗೆ ದೂಡುತ್ತದೆ. ಉಸಿರಿನಲ್ಲಿನ ಗಾಳಿಯ ಆಕ್ಸಿಜನ್ ಅಂಶ ಶ್ವಾಸಕೋಶಗಳಿಗೆ ತಲುಪಿ, ಈ ರಕ್ತಕ್ಕೆ ಆಕ್ಸಿಜನ್ ಮರುಪೂರಣ ಆಗುತ್ತದೆ. ಈಗ ಆಕ್ಸಿಜನ್ ಪ್ರಮಾಣ ಅಧಿಕವಾಗಿರುವ ರಕ್ತ ಹೃದಯದ ಎಡಭಾಗಕ್ಕೆ ಬರುತ್ತದೆ. ಅಲ್ಲಿಂದ ಪಂಪ್ ಆದ ರಕ್ತ ಶರೀರದ ಎಲ್ಲೆಡೆ ರಕ್ತನಾಳಗಳ ಮೂಲಕ ಹರಿದು ಜೀವಕೋಶಗಳಿಗೆ ಅಗತ್ಯವಾದ ಆಕ್ಸಿಜನ್ ಮತ್ತು ಪೋಷಕಾಂಶಗಳನ್ನು ತಲುಪಿಸುತ್ತದೆ. ಹೃದಯದ ಬಲಭಾಗದ ಪಂಪ್ ತನ್ನ ಪಕ್ಕದಲ್ಲೇ ಇರುವ ಶ್ವಾಸಕೋಶಗಳಿಗೆ ರಕ್ತ ಹರಿಸಿದರೆ, ಎಡಭಾಗದ ಪಂಪ್ ತಲೆಯ ಶಿಖರದಿಂದ ಕಾಲಿನ ತುದಿಯವರೆಗೆ ಎಲ್ಲೆಡೆ ರಕ್ತವನ್ನು ತಲುಪಿಸುತ್ತದೆ. ಹೀಗಾಗಿ, ಹೃದಯದ ಬಲಭಾಗದ ಪಂಪ್’ಗಿಂತ ಎಡಭಾಗದ ಪಂಪ್ ಸುಮಾರು ಐದಾರು ಪಟ್ಟು ಬಲಿಷ್ಠವಾದ ಸ್ನಾಯುಗಳನ್ನು ಹೊಂದಿದೆ.

ಹೃದಯದಲ್ಲಿನ ರಕ್ತ ಪರಿಚಲನೆ

ಶರೀರದ ಬಹುತೇಕ ಅಂಗಗಳು ಕೆಲಸ ಮಾಡಲು ಮಿದುಳಿನ ಸಂಕೇತಗಳು ಬೇಕು. ಆದರೆ, ಹೃದಯದ ದೈನಂದಿನ ಕೆಲಸಕ್ಕೆ ಇಂತಹ ಸಂಕೇತಗಳ ನಿರಂತರ ಅಗತ್ಯವಿಲ್ಲ. ಈ ದೃಷ್ಟಿಯಿಂದ ಹೃದಯ ಒಂದು ಮಿತಿಯಲ್ಲಿ ಸ್ವಯಂಚಾಲಿಕ ಅಂಗ! ಹೃದಯದ ನಿಯಮಿತ ಬಡಿತಕ್ಕೆ ವಿದ್ಯುದಾವೇಶ ಬೇಕು. ಹೃದಯದಲ್ಲಿನ ಕೆಲವು ವಿಶಿಷ್ಟ ಕೋಶಗಳು ವಿದ್ಯುತ್ ತಯಾರಿಸಿ, ಇಡೀ ಹೃದಯಕ್ಕೆ ಸರಬರಾಜು ಮಾಡುತ್ತವೆ.

ಹೃದಯದ ವಿದ್ಯುದಾವೇಶ

ಹೀಗಾಗಿ, ಹೃದಯ ಸಾಮಾನ್ಯ ಸ್ಥಿತಿಯಲ್ಲಿ ಸ್ವತಂತ್ರ ಅಂಗ. ಆದರೆ, ಇದರ ಹೆಚ್ಚುವರಿ ನಿರ್ವಹಣೆ ಮಿದುಳಿನದ್ದು. ಹೃದಯದ ಗತಿಯಲ್ಲಿ ಏರುಪೇರಿನ ಅಗತ್ಯ ಬಿದ್ದಾಗ ಮಿದುಳು ಸಂಕೇತಗಳನ್ನು ಕಳಿಸುತ್ತದೆ.

ಬ್ಯಾಂಕಿನ ಕ್ಯಾಶಿಯರ್ ದಿನವೂ ಲಕ್ಷಗಟ್ಟಲೇ ಹಣವನ್ನು ನಿರ್ವಹಿಸುತ್ತಿದ್ದರೂ ಅವರ ವೈಯಕ್ತಿಕ ಅಗತ್ಯಗಳಿಗೆ ಅದನ್ನು ಬಳಸುವಂತಿಲ್ಲ. ಬದಲಿಗೆ ಕ್ಯಾಶಿಯರ್ ತಮ್ಮ ಕೆಲಸಕ್ಕೆ ಸಂಬಳ ಪಡೆಯುತ್ತಾರೆ. ಹೀಗೆಯೇ, ಹೃದಯ ಇಡೀ ಶರೀರದ ಆಕ್ಸಿಜನ್ ಅಗತ್ಯ ಪೂರೈಸುವ ರಕ್ತವನ್ನು ಸರಬರಾಜು ಮಾಡಿದರೂ, ತನ್ನ ಸ್ವಂತ ಕೆಲಸಗಳ ನಿರ್ವಹಣೆಗೆ ಅದನ್ನು ಬಳಸಿಕೊಳ್ಳುವಂತಿಲ್ಲ. ಅದಕ್ಕೆ ಹೃದಯಕ್ಕೆ ರಕ್ತ ಸರಬರಾಜು ಮಾಡುವ ಪ್ರತ್ಯೇಕ ರಕ್ತನಾಳಗಳಿವೆ. ಹೃದಯದ ಮೇಲ್ಭಾಗದಿಂದ ಆರಂಭಿಸಿ ವ್ಯಾಪಿಸುವ, ಹೃದಯದ ಮೇಲಿಟ್ಟ ಕಿರೀಟದಂತೆ ಕಾಣುವ ಈ ರಕ್ತನಾಳಗಳಿಗೆ ಕರೊನರಿ ರಕ್ತನಾಳಗಳು ಎಂದು ಹೆಸರು.

ಕರೊನರಿ ರಕ್ತನಾಳಗಳು

ಅಂಕಿಗಳ ಹಿಂದೆ ಬಿದ್ದವರು “ಹೃದಯ ನಿಮಿಷಕ್ಕೆ ಇಷ್ಟೇ ಬಾರಿ ಬಡಿಯಬೇಕು” ಎನ್ನುವ ಫರ್ಮಾನು ಹೊರಡಿಸುತ್ತಾರೆ! ಆದರೆ, ಹೃದಯ ಕೆಲಸ ಮಾಡುವುದು ಅಗತ್ಯಕ್ಕೆ ತಕ್ಕಂತೆಯೇ ಹೊರತು, ಗಡಿಯಾರದ ಮುಳ್ಳಿನ ಮೇಲಲ್ಲ. ವ್ಯಾಯಾಮ ಮಾಡುವಾಗ, ಗಾಬರಿ / ಉದ್ವೇಗ ಕಾಡಿದಾಗ ಶರೀರಕ್ಕೆ ಹೆಚ್ಚಿನ ರಕ್ತದ ಅಗತ್ಯ ಬೀಳುತ್ತದೆ. ಆ ಸಂದರ್ಭದಲ್ಲಿ ಹೃದಯ ವೇಗವಾಗಿ ಬಡಿದು ದೇಹದ ಅಗತ್ಯವನ್ನು ಪೂರೈಸುತ್ತದೆ. ಶರೀರ ಮರಳಿ ಸಹಜ ಸ್ಥಿತಿಗೆ ಬಂದಾಗ ಹೃದಯದ ಬಡಿತ ಸಾಮಾನ್ಯ ಸ್ಥಿತಿಗೆ ಬರುತ್ತದೆ. ಅಂತೆಯೇ ಗಾಢನಿದ್ರೆಯಲ್ಲಿರುವಾಗ ದೇಹಕ್ಕೆ ಅಧಿಕ ರಕ್ತ ಬೇಕಿಲ್ಲ. ಅಂತಹ ವೇಳೆ ಹೃದಯ ಸಾಮಾನ್ಯಕ್ಕಿಂತ ಕಡಿಮೆ ವೇಗದಲ್ಲಿ ಬಡಿಯುತ್ತದೆ. ಎಚ್ಚರವಿರುವ ವೇಳೆ ವಿಶ್ರಾಂತಿಯ ಸಮಯದಲ್ಲಿ ಹೃದಯದ ಬಡಿತ ನಿಮಿಷಕ್ಕೆ 60-80 ಇರುತ್ತದೆ.